Tag: english medium

  • ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಹೈದರಾಬಾದ್: 2022-23ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಪರಿಚಯಿಸಲು ಹಾಗೂ ಖಾಸಗಿ ಶಾಲೆಗಳು, ಜೂನಿಯರ್ ಮತ್ತು ಪದವಿ ಕಾಲೇಜುಗಳ ಶುಲ್ಕ ನಿಯಂತ್ರಿಸಲು ತೆಲಂಗಾಣ ಸರ್ಕಾರ ಸಂಪುಟ ನಿರ್ಧರಿಸಿದೆ.

    ಸೋಮವಾರ ಕರೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶಿಕ್ಷಣ ಸಚಿವೆ ಸುಬಿತಾ ಇಂದ್ರ ರೆಡ್ಡಿ ನೇತೃತ್ವದಲ್ಲಿ ಸಚಿವರ ಉಪಸಮಿತಿಯನ್ನು ಸಂಪುಟ ರಚಿಸಿದ್ದು, ಈ ವಿಷಯಗಳ ಕುರಿತು ಅಧ್ಯಯನ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

    ಸಭೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಲು 7,289 ಕೋಟಿ ವೆಚ್ಚದ `ಮನ ವೂರು ಮನ ಬಡಿ’ (ನಮ್ಮ ಊರು-ನಮ್ಮ ಶಾಲೆ) ಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

    ಬೋಧನಾ ಮಾಧ್ಯಮ ಇಂಗ್ಲಿಷ್‌ನಲ್ಲಿದ್ದರೆ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಸಿದ್ಧರಿದ್ದಾರೆ ಎಂದು ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಯುಪಿಯಲ್ಲಿ ಬಿಜೆಪಿ ಗೆದ್ರೆ, ಯೋಗಿ ಮತ್ತೊಮ್ಮೆ ಸಿಎಂ ಆದ್ರೆ ಸೃಷ್ಟಿಯಾಗಲಿದೆ ಹೊಸ ನಾಲ್ಕು ದಾಖಲೆಗಳು!

    ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ತರಬೇತಿ ನೀಡಲು, ಶಾಲೆಗಳ ಪರಿಸರವನ್ನು ಮಕ್ಕಳಿಗೆ ಆಕರ್ಷಕವಾಗಿಸಲು, ಆವರಣವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಲು, ಮಧ್ಯಾಹ್ನದ ಊಟವನ್ನು ಸುಧಾರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ.

  • ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

    ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

    1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

  • ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ಧಾರವಾಡ: ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಹಿತಿಗಳು ಮತ್ತು ಹೋರಾಟಗಾರರು ಧರಣಿ ನಡೆಸಿ ಆಕ್ರೋಶ ಹೋರಹಾಕಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು, ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಹರಿಹಾಯ್ದರು.

    ಕನ್ನಡ ಬೇಕು ಎನ್ನುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಕನ್ನಡ ಬೇಡ ಎನ್ನುವವರಿಗೆ ಇಲ್ಲಿ ಸ್ಥಳ ಇಲ್ಲ. ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರುತ್ತಾರೆ. ಯಾರಿಗೆ ಬೇಡವಾಗಿದೆಯೋ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡಿಗೆ ಹೋಗಲಿ. ಇನ್ನು ಕನ್ನಡ ತಾಯಿ ಬಗ್ಗೆ ನಾವು ಘೋಷಣೆ ಕೂಗುತ್ತೇವೆ. ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ ಸರ್ಕಾರದ ಇಂಗ್ಲೀಷ್ ಮಾಧ್ಯಮ ನೀತಿ ವಿರೋಧ ಮಾಡುತ್ತೇವೆ ಎಂದು ಕಿಡಿಕಾರಿದರು.

    ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಮಾತನಾಡಿ, ಇವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಈಗ ನಡೆದಿರುವುದನ್ನು ಬಿಟ್ಟು ಬಿಡಬೇಕು. ಕನ್ನಡ ಹಾಗೂ ಕರ್ನಾಟಕಕ್ಕಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಜನರ ಬಗ್ಗೆ ಕನಿಕರ ಇಲ್ಲ ಅನಿಸುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

  • ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    – ಸಿದ್ದರಾಮಯ್ಯ ಮೊಮ್ಮಕ್ಕಳು ಓದುತ್ತಿರೋದು ಇಂಗ್ಲಿಷ್ ಶಾಲೆಗಳಲ್ಲೇ

    ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಬೇಡ. ಕನ್ನಡವೇ ಮಾಧ್ಯಮ ಆಗಿರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾದ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭಾಮ, ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ `ಕನ್ನಡ ಮೇಷ್ಟ್ರು’ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮದ ಅಸಲಿಯತ್ತು ಇಲ್ಲಿದೆ.

    ಹೌದು. ಸಿದ್ದರಾಮಯ್ಯನವರ ಮೊಮ್ಮಕ್ಕಳು ಇಂಗ್ಲೀಷ್ ಶಾಲೆಗಳಲ್ಲೇ ಓದುತ್ತಿದ್ದಾರೆ. ಹಿರಿಯ ಮಗ ರಾಕೇಶ್ ಪುತ್ರ ಧವನ್ ಪುತ್ರ ಕೆನೆಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಈ ಶಾಲೆಯಲ್ಲಿ ವರ್ಷಕ್ಕೆ ಡೊನೇಶನ್ 5ರಿಂದ 6 ಲಕ್ಷ ರೂಪಾಯಿ ಇರುತ್ತದೆ. ಇನ್ನು ಸಿದ್ದರಾಮಯ್ಯರ ಎರಡನೇ ಮೊಮ್ಮಗಳು ತನ್ಮಯಾ ಕೂಡ ಇಂಗ್ಲೀಷ್ ಮೀಡಿಯಾಂನಲ್ಲೇ ಓದುತ್ತಿದ್ದು, ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ತನ್ಮಯಾ ವಿದ್ಯಾರ್ಥಿಯಾಗಿದ್ದಾರೆ.

    ಒಟ್ಟಿನಲ್ಲಿ ಸಿದ್ದರಾಮಯ್ಯನವರ ಮೊಮ್ಮಕ್ಕಳೆಲ್ಲಾ ಇಂಗ್ಲೀಷ್ ಮೀಡಿಯಂನಲ್ಲಿ ಓದಬಹುದು. ಬಡವರ ಮಕ್ಕಳಿಗೆ ಇಂಗ್ಲೀಷ್ ಮೀಡಿಯಂ ಬೇಡ್ವಾ..? ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಾಂನಲ್ಲಿ ಬಡವರ ಮಕ್ಕಳು ಓದಬಾರದಾ..? ನಿಮ್ಮ ಮೊಮ್ಮಕಳಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ ಎಂಬಂತಹ ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಮುಂದಿನ ವರ್ಷದಿಂದ 1 ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯಬೇಕು ಅನ್ನೋ ನಿಲುವಿಗೆ ಸಿದ್ದರಾಮಯ್ಯನವರು ಕಳೆದ ಒಂದು ವಾರದಿಂದ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿ, ಕರ್ನಾಟಕದಲ್ಲಿ ಕನ್ನಡವೇ ಅಂತಿಮ ಭಾಷೆಯಾಗಬೇಕು. ಭಾಷೆಯ ವಿಚಾರದಲ್ಲಿ ಸರ್ಕಾರಕ್ಕೆ ಆದ್ಯತೆ ಬೇಕು. ಹೀಗಾಗಿ ಈ ಶಾಲೆಗಳನ್ನು ತೆರೆಯದಂತೆ ನಾನು ಕುಮಾರಸ್ವಾಮಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು. ಸದನದಲ್ಲಿಯೂ ಕನ್ನಡ ವಿಚಾರವಾಗಿ ಎಲ್ಲರ ಕಾಲೆಳೆಯುವ ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಯಾಕೆ ಕಳುಹಿಸುತ್ತಾರೆ ಎಂಬ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv