Tag: england

  • ಮೊದಲ ಟೆಸ್ಟ್‌ಗೆ ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿ : ಗಂಗೂಲಿ

    ಮೊದಲ ಟೆಸ್ಟ್‌ಗೆ ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿ : ಗಂಗೂಲಿ

    ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಜೊತೆ ಕೆಎಲ್ ರಾಹುಲ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಯಬೇಕೆಂದು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

    ಸದ್ಯ ತಂಡದ ಆರಂಭಿಕರಾಗಿರುವ ಶಿಖರ್ ಧವನ್ ಏಕದಿನ ಮಾದರಿಗೆ ಹೆಚ್ಚು ಸೂಕ್ತವಾಗಿದ್ದು, ಟೆಸ್ಟ್ ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಈ ಹಿಂದಿನ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಹಾಗೂ ಇಂಗ್ಲೆಂಡ್ ವಿರುದ್ಧದ ಟೂರ್ನಿಗಳಲ್ಲಿ ಧವನ್ ಸಾಕಷ್ಟು ಹೆಣಗಾಡಿದ್ದಾರೆ. ಅದ್ದರಿಂದ ನಾನು ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಿಕರಾಗಿ ಮುರಳಿ ವಿಜಯ್, ಕೆಎಲ್ ರಾಹುಲ್ ಜೋಡಿಯನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

    ಶಿಖರ್ ಧವನ್ ತವರಿನಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸದ್ಯ ತಂಡದ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಗಂಗೂಲಿ ಹೇಳಿದರು.

    ಸದ್ಯ ಮಾಧ್ಯಮ ಕ್ರಮಾಂಕದಲ್ಲಿಯೂ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಚೇತೇಶ್ವರ ಪೂಜಾರ ಸ್ಥಾನದಲ್ಲಿ ರಾಹುಲ್‍ರನ್ನು ಕಣಕ್ಕೆ ಇಳಿಸಬೇಕೆಂಬ ಚರ್ಚೆ ಕ್ರಿಕೆಟ್ ವಿಮರ್ಶಕರಿಂದ ಕೇಳಿಬಂದಿದೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಶುಕ್ರವಾರ ತಮ್ಮ ಅಭಿಪ್ರಾಯ ಹಂಚಿಕೊಂಡ ಇಂಗ್ಲೆಂಡ್ ತಂಡದ ಮಾಜಿ ವೇಗಿ ಡ್ಯಾರೆನ್ ಗಫ್ ಇತ್ತೀಚಿನ ಪ್ರದರ್ಶನಗಳನ್ನು ಅವಲೋಕಿಸಿದರೆ ಪೂಜಾರ ಆಡುವ 11ರ ಬಳಗಕ್ಕೆ ಫಿಟ್ ಎಂದು ಕಾಣುತ್ತಿಲ್ಲ. ಈ ಸ್ಥಾನದಲ್ಲಿ ರಾಹುಲ್‍ಗೆ ಅವಕಾಶ ನೀಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, 50.34 ರ ಸರಾಸರಿ ಯಲ್ಲಿ 4,531 ರನ್ ಗಳಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ಭಾಗವಹಿಸಿದ್ದ ಕೌಟಿ ಚಾಂಪಿಯನ್ ಶಿಪ್ ನಲ್ಲಿ 14.33 ಸರಾಸರಿಯಲ್ಲಿ ಕೇವಲ 172 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

    ಕೆಎಲ್ ರಾಹುಲ್ ಎಸ್ಸೆಕ್ಸ್ ತಂಡ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 58 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಅಜೇಯ 36 ರನ್ ಗಳಿಸಿ ಭರವಸೆ ಮೂಡಿಸಿದ್ದರು.

     

  • ಕೊಹ್ಲಿ ಕುರಿತ ಎಸ್ಸೆಕ್ಸ್ ಟ್ವೀಟ್‍ಗೆ ತಿರುಗೇಟು ಕೊಟ್ಟ ಅಭಿಮಾನಿಗಳು

    ಕೊಹ್ಲಿ ಕುರಿತ ಎಸ್ಸೆಕ್ಸ್ ಟ್ವೀಟ್‍ಗೆ ತಿರುಗೇಟು ಕೊಟ್ಟ ಅಭಿಮಾನಿಗಳು

    ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಎಸ್ಸೆಕ್ಸ್ ತಂಡ ಮಾಡಿರುವ ಟ್ವೀಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಟ್ವೀಟ್ ಕಂಡ ಅಭಿಮಾನಿಗಳು ಖಡಕ್ ಉತ್ತರ ನೀಡಿ ತಿರುಗೇಟು ನೀಡಿದ್ದಾರೆ.

    ಅಂದಹಾಗೇ ಎಸ್ಸೆಕ್ಸ್ ತಂಡದ ವಿರುದ್ಧ ಟೀಂ ಇಂಡಿಯಾ ಆಡಿದ ಏಕೈಕ ಅಭ್ಯಾಸ ಪಂದ್ಯದಲ್ಲಿ ನಾಯಕ ಕೊಹ್ಲಿ ಅರ್ಧಶತಕ ಗಳಿಸಿದ್ದರು. ಈ ವಿಡಿಯೋವನ್ನು ಟ್ವೀಟ್ ಮಾಡಿದ ಎಸ್ಸೆಕ್ಸ್ ತಂಡ, ಈ ಆಟಗಾರ ಕ್ರಿಕೆಟ್‍ಗೆ ಕೆಟ್ಟವನಲ್ಲ ಎಂದು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿತ್ತು. ಸದ್ಯ ಈ ಟ್ವೀಟ್ ಟೀಂ ಇಂಡಿಯಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ಹಲವರು ಮರುಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

    ಇಡೀ ವಿಶ್ವಕ್ಕೆ ಕೊಹ್ಲಿ ರನ್ ಮಷೀನ್ ಎಂಬುದು ಗೊತ್ತು. ಆದರೆ ಇದು ಸದ್ಯ ನಿಮ್ಮ ಅರಿವಿಗೆ ಬಂದಿದೆ ಎಂದು ವ್ಯಂಗ್ಯವಾಡಿ ಯಾನ್ ಎಂಬವರು ಮರುಟ್ವೀಟ್ ಮಾಡಿದ್ದಾರೆ.

    https://twitter.com/Vishakha68899/status/1022114014866931713?

    ಕೊಹ್ಲಿ ನಿಮ್ಮ ಬಾಯಿ ಮುಚ್ಚಿಸಲು ಈ ಸರಣಿಯಲ್ಲಿ ಕಡಿಮೆ ಎಂದರೂ 3 ಶತಕಗಳನ್ನು ಸಿಡಿಸಲಿದ್ದಾರೆ ಎಂದು ಗೌರವ್ ಕಾಲ್ರಾ ಹೇಳಿದ್ದಾರೆ.

    ನಮ್ಮ ಕೈಯಲ್ಲಿ ವಿಶ್ವಕಪ್ ಇದೆ. ನಿಮ್ಮ ಕತೆ ಏನು? ಅಥವಾ ವಿಶ್ವಕಪ್ ಪಂದ್ಯಗಳಲ್ಲಿ ನೀವು ಸೋಲುವುದು ಖಚಿತ ಎಂದು ಪ್ರಾಣಾವ್ ತಮ್ಮ ಟ್ವೀಟ್‍ನಲ್ಲೇ ಕಿಡಿಕಾರಿದ್ದಾರೆ.

    ಎಸ್ಸೆಕ್ಸ್ ವಿರುದ್ಧ ಟೆಸ್ಟ್ ಅಭ್ಯಾಸ ಪಂದ್ಯ ಡ್ರಾ ಆಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ಉತ್ತಮ ಆರಂಭ ನೀಡಲು ಎಡವಿದ್ದು, ತಂಡದ ಚಿಂತೆಗೆ ಕಾರಣವಾಗಿದೆ. ಆರಂಭಿಕ ಆಟಗಾರ ಧವನ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ನಡುವೆ ಕನ್ನಡಿಗ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 58 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಅಜೇಯ 36 ರನ್ ಗಳಿಸಿ ಭರವಸೆ ಮೂಡಿಸಿದ್ದಾರೆ.

  • ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿಯ ಕುರಿತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಧೋನಿ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿನ್, ಯಾವುದೇ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಆತನೇ ನಿರ್ಣಯಕೈಗೊಳ್ಳಬೇಕು. ನಿರಂತರವಾಗಿ ತಂಡದ ಶಕ್ತಿಯಾಗಿದ್ದ ಆಟಗಾರನಿಗೆ ಆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ವಿರುತ್ತದೆ. ಅದ್ದರಿಂದ ಈ ನಿರ್ಧಾರವನ್ನು ಅವರಿಗೆ ಬಿಟ್ಟರೆ ಒಳ್ಳೆಯದು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಟಗಾರರ ಕೆಲವೇ ಪ್ರದರ್ಶನಗಳಿಂದ ಅವರ ಸಾಮರ್ಥ್ಯ ಕುರಿತು ಟೀಕೆ ಮಾಡುವುದು ಉತ್ತಮವಲ್ಲ. ಧೋನಿ ಹಲವು ಭಿನ್ನ ಸಮಯದಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗಿದ್ದರು. ಅವರು ತಮ್ಮ ಆಟವನ್ನು ವಿಮರ್ಶಿಸಿಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ಅದರಂತೆ ಅವರು ನಿವೃತ್ತಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲರು ಅವರು ನಿರ್ಣಯ ತೆಗೆದುಕೊಳ್ಳಲು ಬಿಡಬೇಕು ಎಂದರು.

    ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ನಿವೃತ್ತಿ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಅಲ್ಲದೇ ಭಾರತದ ಮಾಜಿ ಆಟಗಾರರಾದ ಸುನಿಲ್ ಗವಸ್ಕರ್ ಹಾಗೂ ಸೌರವ್ ಗಂಗೂಲಿ ಸಹ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಧೋನಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಸ್ಪಷ್ಟನೆ ನೀಡಿ, ಧೋನಿ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದ್ದರು.

  • ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಆರಂಭದಲ್ಲೇ ಟೀಂ ಇಂಡಿಯಾ ಪ್ರಮುಖ ವೇಗಿಗಳ ಸಮಸ್ಯೆ ಎದುರಿಸಿದ ಹೊರತಾಗಿಯೂ ತಂಡದ ಪೇಸರ್ ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

    ಟೀಂ ಇಂಡಿಯಾ ಉತ್ತಮ ವೇಗದ ಬೌಲರ್ ಗಳನ್ನು ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಸದ್ಯ ತಂಡದಲ್ಲಿ 8 ರಿಂದ 9 ವೇಗಿಗಳು ಇದ್ದು ಯಾವುದೇ ಸಂದರ್ಭದಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಸಾಮರ್ಥ್ಯ ಟೀಂ ಇಂಡಿಯಾ ಹೊಂದಿದೆ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಗಸ್ಟ್ 1 ರಿಂದ ಆರಂಭಗೊಳ್ಳಲಿದ್ದು, ಗಾಯದ ಸಮಸ್ಯೆಯಿಂದ ತಂಡದ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಇವರ ಹೊರತಾಗಿಯೂ ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅದ್ದರಿಂದ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶಗಳು ಹೆಚ್ಚಿದೆ ಎಂದು ಇಶಾಂತ್ ಅಭಿಪ್ರಾಯಪಟ್ಟಿದ್ದಾರೆ.

    ಇಂಗ್ಲೆಂಡ್ ಪಿಚ್ ಗಳು ಸಹ ವೇಗದ ಬೌಲಿಂಗ್ ಹೆಚ್ಚು ಸಹಕಾರ ನೀಡುವುದರಿಂದ ಬೌಲರ್ ಗಳು ಉತ್ತಮ ಸ್ಪೇಲ್ ನಡೆಸಲು ಸಾಧ್ಯ. ಆದರೆ ತವರು ನೆಲದಲ್ಲಿ ಹಾಗೂ ಇಂಗ್ಲೆಂಡ್ ನಲ್ಲಿ ಆಡಲು ಸಾಕಷ್ಟು ವ್ಯತ್ಯಾಸಗಳಿದೆ. ಅವುಗಳನ್ನು ಅರಿತು ಬೌಲ್ ಮಾಡಬೇಕಿದೆ ಎಂದು ಹೇಳಿದ್ದಾರೆ.

    ತಮ್ಮ ಬೌಲಿಂಗ್ ನಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ. ಈ ಹಿಂದೆ ತರಬೇತಿಯ ಅಗತ್ಯದ ಮಹತ್ವದ ಬಗ್ಗೆ ತಿಳಿದಿರಲಿಲ್ಲ. ಸದ್ಯ ಉತ್ತಮ ತರಬೇತಿ ಪಡೆಯುತ್ತಿದ್ದು, ತಮ್ಮ ಬೌಲಿಂಗ್ ಕೌಶಲ್ಯಗಳಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ.

  • ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು: ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಕುರಿತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ಆರೋಪದ ವರದಿಗಳನ್ನು ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅಲ್ಲಗೆಳೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಯುವಿ, ನಾನು ಎನ್‍ಸಿಎ ಕುರಿತ ಅನುಭವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಮಾರಕ ಕ್ಯಾನ್ಸರ್ ನಿಂದ ನಾನು ಹೊರ ಬರಲು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಸಹಕಾರ ನೀಡಿತ್ತು. ಬಿಸಿಸಿಐ ನಿರಂತರವಾಗಿ ಆಟಗಾರರ ಗಾಯದ ಸಮಸ್ಯೆಗಳನ್ನು ಬಹುಬೇಗ ನಿವಾರಿಸಲು ಕಾರ್ಯನಿರ್ವಹಿಸುತ್ತಿದ್ದು, ದೇಶದ ಉತ್ತಮ ತರಬೇತುದಾರರು ಹಾಗೂ ವೈದ್ಯರನ್ನು ನಿಯೋಜಿಸಿದೆ ಎಂದು ಬರೆದುಕೊಂಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಪ್ರವಾಸದ ವೇಳೆ ಟೀಂ ಇಂಡಿಯಾ ಪ್ರಮುಖ ವೇಗಿಗಳಾದ ಮಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಸಂಪೂರ್ಣ ಫಿಟ್ ಆಗದಿರುವ ಕಾರಣ ಈ ಚರ್ಚೆ ಆರಂಭವಾಗಿತ್ತು. ಶಮಿ ಮೊದಲು ಯೋಯೋ ಟೆಸ್ಟ್ ಎದುರಿಸಿದ ವೇಳೆ ಪಾಸ್ ಮಾಡಲು ವಿಫಲರಾಗಿದ್ದು, ಸದ್ಯ 2ನೇ ಬಾರಿ ಯೋಯೋ ಟೆಸ್ಟ್ ಎದುರಿಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಆರಂಭದ 3 ಟೆಸ್ಟ್ ಪಂದ್ಯಗಳಿಂದ ಹೊರ ನಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್‍ಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದು, ಈ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ. ಇನ್ನು ಕುಲ್ ದೀಪ್ ಯಾದವ್, ಆರ್ ಆಶ್ವಿನ್, ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.

  • ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಭುವನೇಶ್ವರ್ ಅಲಭ್ಯ

    ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಭುವನೇಶ್ವರ್ ಅಲಭ್ಯ

    ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಟೂರ್ನಿ ಸೋಲಿನ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

    ಆಗಸ್ಟ್ 1 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ 18 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು, ಇದರಲ್ಲಿ ಭುವನೇಶ್ವರ್ ಸಹ ಸ್ಥಾನ ಪಡೆದಿದ್ದರು. ಆದರೆ ಸದ್ಯ ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಕೊಳ್ಳದ ಕಾರಣ ಆರಂಭದ 3 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದ ವೇಳೆ ಭುವಿ ಬೆನ್ನು ನೋವು ಸಮಸ್ಯೆ ಒಳಗಾಗಿದ್ದರು. ಸದ್ಯ ಭುವಿ ಅವರ ಆರೋಗ್ಯ ಕುರಿತು ಬಿಸಿಸಿಐ ವೈದ್ಯರ ತಂಡ ನಿರ್ಣಯಕೈಗೊಳ್ಳಲಿದೆ. ಇನ್ನು ಪ್ರಾರಂಭದ ಪಂದ್ಯಗಳಿಗೆ ಭುವಿ ಅಲಭ್ಯರಾಗುವ ಕಾರಣ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಅಂತಿಮ 2 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಭುವನೇಶ್ವರ್ ಅವರ ಸ್ಥಾನದಲ್ಲಿ ರಿಷಭ್ ಪಂತ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬುಮ್ರಾ ಸಹ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಸದ್ಯ ಕುಲ್‍ದೀಪ್ ನಾಯರ್, ಕರುಣ್ ನಾಯರ್, ದಿನೇಶ್ ಕಾರ್ತಿಕರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಬಹು ನಿರೀಕ್ಷಿತ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಸರಣಿಗೆ ಆರಂಭದಿಂದಲೂ ಟೀಂ ಇಂಡಿಯಾ ಆಟಗಾರ ಗಾಯದ ಸಮಸ್ಯೆ ಎದುರಿಸುತ್ತಿದೆ.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಾಯಕನಾಗಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಮಂಗಳವಾರ ಲೀಡ್ಸ್‍ನಲ್ಲಿ ನಡೆದ ವಿರಾಟ್ ಕೊಹ್ಲಿಯ ಕಡಿಮೆ ಪಂದ್ಯಗಳಲ್ಲಿ 3,000 ರನ್ ಗಳ ಗಡಿತಲುಪಿದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ರನ್ ಗಳಿಸಿದ್ದಾಗ ಕೊಹ್ಲಿ ಈ ಸಾಧನೆ ನಿರ್ಮಿಸಿದರು.

    ವಿರಾಟ್ ಕೊಹ್ಲಿಯವರು ಒಟ್ಟಾರೆ 49 ಇನ್ನಿಂಗ್ಸ್ ನಲ್ಲಿ 3,000 ಗಡಿ ತಲುಪುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಮೊದಲು ಭಾರತದ ಮಾಜಿ ಕ್ಯಾಪ್ಟನ್ ಗಳಾದ ಮಹೇಂದ್ರ ಸಿಂಗ್ ಧೋನಿ 70 ಇನ್ನಿಂಗ್ಸ್ ಹಾಗೂ ಸೌರವ್ ಗಂಗೂಲಿ 74 ಇನ್ನಿಂಗ್ಸ್ ಆಡಿ ಈ ಸಾಧನೆಯನ್ನು ಮಾಡಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ರವರು 60 ಇನ್ನಿಂಗ್ಸ್ ಮೂಲಕ ಈ ಸಾಧನೆಯನ್ನು ಮಾಡಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಪಾಕಿಸ್ತಾನ ಮಿಸ್ಬಾ ಉಲ್ ಹಕ್ 83 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರೆ ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್ 84 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದ್ದರು.

    ಮಂಗಳವಾರದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಪಂದ್ಯವನ್ನು ಜಯಿಸಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 44.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 260 ರನ್ ಭಾರಿಸಿ ಪಂದ್ಯವನ್ನು ಗೆದ್ದುಕೊಂಡಿತು.

  • ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಲಂಡನ್: ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಲಾರ್ಡ್ಸ್ ಅಂಗಳದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತ ಪರ 300 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಜೋಸ್ ಬಟ್ಲರ್ ಕ್ಯಾಚ್ ಪಡೆಯುವ ಮೂಲ ಧೋನಿ ಸಾಧನೆ ಮಾಡಿದರು. ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 4 ನೇ ಆಟಗಾರ ಎನಿಸಿಕೊಂಡರು.

    ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ (417), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ (402), ಶ್ರೀಲಂಕಾದ ಕುಮಾರ ಸಂಗಕ್ಕರ (383), ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ (262) ಕ್ಯಾಚ್ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟಿ20 ಟೂರ್ನಿಯ ಪಂದ್ಯದ ವೇಳೆ 50 ಕ್ಯಾಚ್ ಪೂರ್ಣಗೊಳಿಸಿದ್ದರು. ಮೂಲಕ ಟಿ20 ನಾದರಿಯಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಅಲ್ಲದೇ ಟಿ20 ಮಾದರಿಯ ಇನ್ನಿಂಗ್ಸ್‍ವೊಂದರಲ್ಲಿ 5 ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದಿದ್ದಾರೆ.

    ಧೋನಿ ಇದುವರೆಗೂ ಆಡಿರುವ 320 ಏಕದಿನ ಪಂದ್ಯಗಳಲ್ಲಿ 107 ಸ್ಟಪ್ ಮಾಡಿದ್ದು, ಇದರಲ್ಲೂ ದಾಖಲೆ ಬರೆದಿದ್ದಾರೆ. ಅಲ್ಲದೇ ಏಕದಿನ ಮಾದರಿಯಲ್ಲಿ ಇದುವರೆಗೂ 407 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿ ಭಾರತದ ಮೊದಲ, ವಿಶ್ವದ 4ನೇ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಜಯಗಳಿಸಿತ್ತು.

  • ಕುಲ್‍ದೀಪ್ ಯಾದವ್ ವಿಶ್ವದಾಖಲೆ ಪ್ರದರ್ಶನ – ಟೆಸ್ಟ್ ತಂಡದಲ್ಲೂ ಸ್ಥಾನ?

    ಕುಲ್‍ದೀಪ್ ಯಾದವ್ ವಿಶ್ವದಾಖಲೆ ಪ್ರದರ್ಶನ – ಟೆಸ್ಟ್ ತಂಡದಲ್ಲೂ ಸ್ಥಾನ?

    ನಾಟಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್‍ದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದು, ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಬೌಲರ್ ಎಂಬ ವಿಶ್ವದಾಖಲೆಯನ್ನು ಬರೆದಿದ್ದಾರೆ.

    ಈ ಹಿಂದೆ ಆಸ್ಟ್ರೇಲಿಯಾದ ಬ್ರಾಡ್ ಹಾಗ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 32 ರನ್ ನೀಡಿ 5 ವಿಕೆಟ್ ಪಡೆದಿದ್ದು ಇದೂವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

    ಸದ್ಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕುಲ್ ದೀಪ್ ಯಾದವ್ ತೋರಿದ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ನಾಯಕ ಕೊಹ್ಲಿ, ಮುಂದಿನ ಟೆಸ್ಟ್ ಟೂರ್ನಿಯಲ್ಲಿ ಸ್ಥಾನ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಟೆಸ್ಟ್ ಟೂರ್ನಿಗೆ ಅಂತಿಮ ತಂಡವನ್ನು ಈ ವಾರಂತ್ಯದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸುವ ಸಾಧ್ಯತೆ ಇದೆ.

    ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಿಸಿರುವ ಟೀಂ ಇಂಡಿಯಾ ಸರಣಿ ಗೆಲ್ಲುವ ವಿಶ್ವಾಸ ಮೂಡಿಸಿದೆ. ಇನ್ನು 21 ನೇ ಏಕದಿನ ಪಂದ್ಯವನ್ನು ಆಡಿದ ಕುಲ್‍ದೀಪ್ ಯಾದವ್ ಈ ಹಿಂದಿನ ತಮ್ಮ ಸಾಧನೆಯನ್ನು ಉತ್ತಮ (23 ರನ್ ಗೆ 4 ವಿಕೆಟ್) ಪಡಿಸಿಕೊಂಡಿದ್ದಾರೆ.

    ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಇಂಗ್ಲೆಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಕಬಳಿಸಿದ ಮೊದಲ ಎಡಗೈ ಬೌಲರ್ ಎಂಬ ಹೆಗ್ಗಳಿಕೆ ಕುಲ್ ದೀಪ್ ಯಾದವ್ ಪಡೆದಿದ್ದು, ಟೀಂ ಇಂಡಿಯಾ ಪರ 6 ವಿಕೆಟ್ ಕಿತ್ತ ನಾಲ್ಕನೇ ಬೌಲರ್ ಆಗಿದ್ದಾರೆ.

    ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 137 ರನ್ ( 15 ಬೌಂಡರಿ, 4 ಸಿಕ್ಸರ್) ಸಿಡಿಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆಟಗಾರ ಏಕದಿನ ಮಾದರಿಯಲ್ಲಿ ಗಳಿಸಿದ ಗರಿಷ್ಠ ರನ್ ಎಂಬ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ 107 ರನ್ ಗಳಿಸಿದ್ದರು. ಅಲ್ಲದೇ ಶರ್ಮಾ ಇದುವರೆಗೂ 18 ಶತಕಗಳನ್ನು ಗಳಿಸಿದ್ದು, ಅದರಲ್ಲಿ 16 ಆರಂಭಿಕರಾಗಿಯೇ ಕಣಕ್ಕಿಳಿದು ಶತಕ ಗಳಿಸಿದ್ದಾರೆ.

    ವಿಶೇಷವಾಗಿ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 167 ರನ್ ಜೊತೆಯಾಟ ನೀಡಿದ್ದು, ಈ ಮೂಲಕ ರೋಹಿತ್ ಜೋಡಿ 14 ಬಾರಿ 100 ಪ್ಲಸ್ ರನ್ ಜೊತೆಯಾಟ ನೀಡಿದ ಆಟಗಾರರು ಎನಿಸಿಕೊಂಡಿದ್ದಾರೆ. ಈ ಹಿಂದೆ ಟೀ ಇಂಡಿಯಾ ಪರ ಸಚಿನ್ ಹಾಗೂ ಸೌರವ್ ಗಂಗೂಲಿ 26 ಬಾರಿ 100 ಪ್ಲಸ್ ಜೊತೆಯಾಟ ನೀಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಬೇನ್ ಸ್ಟೋಕ್ಸ್ 102 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದು ಕಳೆದ 13 ವರ್ಷಗಳಲ್ಲಿ ಇಂಗ್ಲೆಂಡ್ ಪರ ದಾಖಲಾದ ನಿಧಾನಗತಿಯ ಅರ್ಧ ಶತಕ ಎನಿಸಿಕೊಂಡಿದೆ.