Tag: england

  • ಕೊಹ್ಲಿ ನಡೆ ತಪ್ಪೆಂದ ಇಂಗ್ಲೆಂಡ್ ಮಾಜಿ ಆಟಗಾರ

    ಕೊಹ್ಲಿ ನಡೆ ತಪ್ಪೆಂದ ಇಂಗ್ಲೆಂಡ್ ಮಾಜಿ ಆಟಗಾರ

    ಲಂಡನ್: ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಘೋಷಣೆ ಕೂಗಿದ್ದ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಕೊಹ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಕೊಹ್ಲಿ ಅವರ ಈ ವರ್ತನೆ ತಪ್ಪೆಂದು ಇಂಗ್ಲೆಂಡ್ ಮಾಜಿ ಆಟಗಾರ ನಿಕ್ ಕಾಂಪ್ಟನ್ ಅಭಿಪ್ರಾಯ ಪಟ್ಟಿದ್ದಾರೆ.

    ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳನ್ನು ತಡೆಯುವಂತಹ ಯಾವುದೇ ಹಕ್ಕು ಇಲ್ಲ. ವಾರ್ನರ್, ಸ್ಮಿತ್ ತಪ್ಪು ಮಾಡಿದ್ದಾರೆ. ಆದ್ದರಿಂದಲೇ ಅಭಿಮಾನಿಗಳು ಆ ರೀತಿ ಹೇಳಿದ್ದಾರೆ ಎಂದು ಕೊಹ್ಲಿ ವಿರುದ್ಧ ಹೇಳಿಕೆ ನೀಡಿದ್ದಾರೆ.

    ಒಂದೆಡೆ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ನಡೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ ನಿಕ್ ಹೇಳಿಕೆ ಮಾತ್ರ ವಿಭಿನ್ನವಾಗಿತ್ತು. ನಿಕ್ ಈ ಹೇಳಿಕೆಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅದರಲ್ಲೂ ಟೀಂ ಇಂಡಿಯಾ ಅಭಿಮಾನಿಗಳು ಕೊಹ್ಲಿ ನಡೆಗೆ ಸಾಥ್ ನೀಡಿದ್ದರು. ಇದನ್ನು ಮನಗಂಡ ನಿಕ್ ಟ್ವಿಟ್ಟರ್ ನಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ.

    ಕೊಹ್ಲಿ ಬಗ್ಗೆ ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಇತರರಿಗೆ ನೋವುಂಟು ಮಾಡುವುದು ನನ್ನ ಹೇಳಿಕೆಯ ಉದ್ದೇಶವಲ್ಲ. ಕ್ರಿಕೆಟ್ ಆಟವನ್ನು ಆನಂದಿಸೋಣ, ಅಭಿಮಾನಿಗಳ ಯೋಚನೆಗೆ ಇದನ್ನು ಬಿಡೋಣ. ಅವರ ಅಭಿಪ್ರಾಯಗಳನ್ನು ನಾನು ಮೆಚ್ಚುತ್ತೇನೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.

    ಟೀಂ ಇಂಡಿಯಾ ಆಸ್ಟ್ರೇಲಿಯಾ ಪಂದ್ಯದ ವೇಳೆ ಸ್ಮಿತ್ ಅವರನ್ನು ಭಾರತೀಯ ಅಭಿಮಾನಿಗಳು ‘ಚೀಟರ್.. ಚೀಟರ್’ ಎಂದು ಕರೆದು ಕಾಲೆಳೆದಿದ್ದರು. ಮೈದಾನದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ ಅಭಿಮಾನಿಗಳ ಘೋಷಣೆ ಕೇಳಿ, ಆ ರೀತಿ ಕರೆಯದಂತೆ ತಿಳಿ ಹೇಳಿ ಚಪ್ಪಾಳೆ ತಟ್ಟುವಂತೆ ಕೈಸನ್ನೆ ಮಾಡಿದ್ದರು. ಈ ವೇಳೆ ಕೊಹ್ಲಿ ಅವರನ್ನು ಸ್ಮಿತ್ ಅಭಿನಂದಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ, ಕೊಹ್ಲಿ ನಡೆಗೆ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು.

  • ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಬೆಂಗಳೂರು: ಟಿ 20 ಕ್ರಿಕೆಟ್‍ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆಗೈದ ಯುವರಾಜ್ ಸಿಂಗ್ ಇಂದು ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತರಾಗಿದ್ದಾರೆ.

    ಯುವಿ ಆಲ್‍ರೌಂಡರ್ ಬ್ಯಾಟ್ಸ್ ಮನ್ ಎನ್ನುವುದು ಮೊದಲೇ ದೃಢಪಟ್ಟಿತ್ತು. ಆದರೆ ಅವರನ್ನು ಕೆರಳಿಸಿದರೆ ಆಗುವ ಫಲಿತಾಂಶ ಏನು ಎನ್ನುವುದು ಗೊತ್ತಾಗಿದ್ದು 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ.

    ಫ್ಲಿಂಟಾಫ್ ಎಸೆದ 18ನೇ ಓವರಿನಲ್ಲಿ ಯುವಿ 4 ಮತ್ತು 5ನೇ ಎಸೆತದಲ್ಲಿ ಬೌಂಡರಿ ಹೊಡೆದಿದ್ದರು. ಈ ಓವರ್ ಕೊನೆಯ ಎಸೆತದಲ್ಲಿ ಒಂದು ರನ್ ಓಡಿದ್ದರು. ಈ ಸಂದರ್ಭದಲ್ಲಿ ಫ್ಲಿಂಟಾಫ್ ಯುವರಾಜ್ ಬಳಿ ಬಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಯುವರಾಜ್ ಸಿಟ್ಟಾಗಿ ಅಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡಿದ್ದಾರೆ.

    https://www.youtube.com/watch?v=alwKupWlO8g

    19ನೇ ಓವರ್ ಎಸೆಯಲು ಬಂದಿದ್ದು ಸ್ಟುವರ್ಟ್ ಬ್ರಾಡ್. ಮೊದಲೇ ಸಿಟ್ಟಿನಲ್ಲಿದ್ದ ಯುವಿ ಮೊದಲ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. ನಂತರ ಸತತ ಎರಡು ಎಸೆತವನ್ನು ಸಿಕ್ಸರ್‍ಗೆ ಅಟ್ಟಿ ಹ್ಯಾಟ್ರಿಕ್ ಸಾಧನೆ ಮಾಡಿದರು. 4ನೇ ಎಸೆತ ಆಫ್ ಸೈಡ್ ಫುಲ್ ಟಾಸ್ ಬಂದರೂ ಯುವಿ ಅದನ್ನು ಸಿಕ್ಸ್ ಆಗಿ ಪರಿವರ್ತಿಸಿದರು. 5ನೇ ಎಸೆತಕ್ಕೂ ಮುನ್ನ ಬ್ರಾಡ್ ಮತ್ತು ನಾಯಕ ಕಾಲಿಂಗ್‍ವುಡ್ ಚರ್ಚೆ ನಡೆಸಿದರು. ಆದರೆ ಈ ಚರ್ಚೆ ಯಾವುದೇ ಫಲಕಾರಿಯಾಗಲಿಲ್ಲ. 5ನೇ ಎಸೆತವೂ ಸಿಕ್ಸ್‍ಗೆ ಹೋಯಿತು. 5ನೇ ಎಸೆತ ಸ್ಟೇಡಿಯಂ ಹೋಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಮುಖದ ಮೇಲೆ ಬೆರಳನ್ನು ಇಟ್ಟರು. ಕೊನೆಗೆ 6ನೇ ಎಸೆತದಲ್ಲೂ ಯುವರಾಜ್ ಸಿಕ್ಸರ್ ಹೊಡೆಯುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದರು.

    ಈ ಓವರಿಗೂ ಮುನ್ನ ಯುವರಾಜ್ 6 ಎಸೆತದಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಗಳಿಸಿದ್ದರೆ, 19 ಓವರ್ ಮುಕ್ತಾಯಕ್ಕೆ ಯುವರಾಜ್ 12 ಎಸೆತದಲ್ಲಿ 50 ರನ್ ಚಚ್ಚಿ ಟಿ 20 ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದರು. 18 ಓವರ್ ವೇಳೆ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದ ಭಾರತದ ಸ್ಕೋರ್ 19 ಓವರ್ ಮುಕ್ತಾಯಕ್ಕೆ 207 ರನ್ ಗಳಿಸಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್‍ನಲ್ಲೂ ಯುವರಾಜ್ ಸಿಕ್ಸ್ ಸಿಡಿಸಿ 58 ರನ್(16 ಎಸೆತ, 3 ಬೌಂಡರಿ, 7 ಸಿಕ್ಸರ್, 362.50 ಸ್ಟ್ರೈಕ್ ರೇಟ್) ಗಳಿಸಿ ಔಟಾದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

    ಫ್ಲಿಂಟಾಫ್ ಜೊತೆ ಜಗಳ ಯಾಕಾಯ್ತು ಎನ್ನುವುದನ್ನು ಯುವರಾಜ್ ಸಿಂಗ್ 2016 ರಲ್ಲಿ ಬಹಿರಂಗ ಪಡಿಸಿದ್ದರು. 18ನೇ ಓವರ್ ಬಳಿಕ ನನ್ನ ಬಳಿ ಬಂದ ಫ್ಲಿಂಟಾಫ್, F ***ing ರೆಡಿಕ್ಯೂಲಸ್ ಶಾಟ್ ಎಂದು ಹೇಳಿದರು. ಅದಕ್ಕೆ ನಾನು F*** ಯೂ ಎಂದೆ. ನನ್ನ ಉತ್ತರಕ್ಕೆ ಫ್ಲಿಂಟಾಫ್ ಏನು ಹೇಳಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ, ನಾನು ಏನು ಹೇಳಿದ್ದು ಏನು ಅನ್ನೋದು ಗೊತ್ತಾಯ್ತು ಅಲ್ಲವೇ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಫ್ಲಿಂಟಾಫ್ ನಾನು ನಿನ್ನ ಗಂಟಲು ಕತ್ತರಿಸುತ್ತೇನೆ ಎಂದು ತಿರುಗೇಟು ನೀಡಿದರು. ಈ ಮಾತು ನನಗೆ ಸಿಟ್ಟು ತರಿಸಿತ್ತು. ಕೂಡಲೇ ನಾನು, ಈ ಬ್ಯಾಟ್ ನನ್ನ ಕೈಯಲ್ಲಿದೆ. ಈ ಬ್ಯಾಟ್ ಮೂಲಕವೇ ಹೊಡೆಯುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ ಎಂದು ಹಳೆಯ ಘಟನೆಯನ್ನು ರಿವೀಲ್ ಮಾಡಿದ್ದರು.

     

  • ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ – ಕ್ರಿಸ್‍ಗೇಲ್ ವಿಶ್ವದಾಖಲೆ

    ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ – ಕ್ರಿಸ್‍ಗೇಲ್ ವಿಶ್ವದಾಖಲೆ

    ನಾಟಿಂಗ್‍ಹ್ಯಾಮ್: ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ, ವಿಶ್ವಕಪ್‍ನಲ್ಲೂ ಸೋಲಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಪಂದ್ಯದಲ್ಲಿ 105 ರನ್ ಗಳಿಗೆ ಪಾಕ್ ತಂಡವನ್ನು ಕಟ್ಟಿಹಾಕಿದ್ದ ವಿಂಡೀಸ್ 13.4 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್ ಗಳ ಭರ್ಜರಿ ಜಯ ಪಡೆದಿದೆ.

    ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಕೆರೇಬಿಯನ್ ಬೌಲಿಂಗ್ ದಾಳಿಗೆ ಸಿಲುಕಿ 21.4 ಓವರ್ ಗಳಲ್ಲಿ 105 ರನ್ ಗಳಿಸಿ ಸರ್ವಪತನವಾಯಿತು. ಪಾಕ್ ಪರ ಆರಂಭಿಕ ಫಖರ್ ಜಮನ್ ಮತ್ತು ಬಾಬರ್ ಅಜಮ್ ತಲಾ 22 ರನ್ ಕಳಿಸಿದ್ದು ಬಿಟ್ಟರೆ ಅನುಭವಿಗಳಾದ ನಾಯಕ ಸರ್ಫರಾಜ್ ಮತ್ತು ಮೊಹಮ್ಮದ್ ಹಫೀಜ್ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಬಂದ ರಿಯಾಜ್ 2 ಸಿಕ್ಸರ್ ಸಿಡಿಸಿ 18 ರನ್‍ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಪಾಕ್ ವಿಶ್ವಕಪ್ ಕ್ರಿಕೆಟ್‍ನಲ್ಲಿ 2ನೇ ಅತಿ ಕಡಿಮೆ ರನ್ ಗಳಿಸಿ ಆಲೌಟ್ ಆಯ್ತು. 1992 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಗೆ ಅಲೌಟ್ ಆಗಿರುವುದು ಪಾಕ್ ಕನಿಷ್ಠ ರನ್ ಮೊತ್ತವಾಗಿದೆ.

    106 ರನ್ ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಪಂದ್ಯದಲ್ಲಿ ವಿಂಡೀಸ್ ಪರ 50 ರನ್ (34 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಕ್ರಿಸ್ ಗೇಲ್ ಅಂತರಾಷ್ಟ್ರಿಯ ಕ್ರಿಕೆಟಿನಲ್ಲಿ 19 ಸಾವಿರ ರನ್ ಪೂರ್ಣಗೊಳಸಿದ ಹೆಗ್ಗಳಿಕೆ ಪಡೆದರು. ಅಲ್ಲದೇ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಎಂಬ ದಾಖಲೆ ಬರೆದರು.

    39 ವರ್ಷದ ಗೇಲ್ ಈ ಪಂದ್ಯ ಸೇರಿ ಒಟ್ಟು 40 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 37 ಸಿಕ್ಸರ್ ಗಳಿಸಿದ ಎಬಿಡಿ 2ನೇ ಸ್ಥಾನ, 31 ಸಿಕ್ಸರ್ ಸಿಡಿಸಿರುವ ಪಾಟಿಂಗ್ 3ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಒಶೇನ್ ಥಾಮಸ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹೋಲ್ಡರ್ 3 ವಿಕೆಟ್, ರಸೇಲ್ 2 ಹಾಗೂ ಶೆಲ್ಡನ್ ಕಾಟ್ರೆಲ್ 1 ವಿಕೆಟ್ ಪಡೆದು ಪಾಕಿಸ್ತಾನದ ದಿಡೀರ್ ಸೋಲಿಗೆ ಕಾರಣರಾದರು.

    ಪಾಕ್ ಟ್ರೋಲ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ. ವಿಶ್ವಕಪ್‍ನಂತಹ ದೊಡ್ಡ ಟೂರ್ನಿಗಳಲ್ಲಿ ತಮ್ಮ ತಂಡ ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಕಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ನವದೆಹಲಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನು ಭೇಟಿ ಮಾಡಲು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    2019ರ ವಿಶ್ವಕಪ್‍ಗೆಂದು ಇಂಗ್ಲೆಂಡ್‍ಗೆ ತೆರಳಿರುವ 10 ತಂಡಗಳ ನಾಯಕರನ್ನು ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಯುವರಾಜ ಹ್ಯಾರಿ ಅವರು ಭೇಟಿ ಮಾಡಿ ಶುಭಕೋರಿದ್ದಾರೆ. ಈ ಸಮಾರಂಭದಲ್ಲಿ ಇಂಗ್ಲೆಂಡ್‍ನ ಹಲವು ರಾಜ ಮನೆತನದವರು ನಾಯಕರನ್ನು ಭೇಟಿಯಾಗಿ ಶುಭಕೋರಿದ್ದಾರೆ.

    ಈ ಸಮಾರಂಭಕ್ಕೆ ಎಲ್ಲಾ ತಂಡದ ನಾಯಕರುಗಳು ಸೂಟ್‍ಗಳನ್ನು ಧರಿಸಿ ರಾಣಿಯನ್ನು ಭೇಟಿಯಾದರೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸರ್ಫರಾಜ್ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಸಲ್ವಾರ್ ಕಮೀಜ್‍ನ್ನು ಧರಿಸಿ ಅದರ ಮೇಲೆ ತಮ್ಮ ತಂಡದ ಹಸಿರು ಬಣ್ಣದ ಕೋಟನ್ನು ಧರಿಸಿ ಸಮಾರಂಭಕ್ಕೆ ಬಂದಿದ್ದಾರೆ.

    ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದ್ದು ಸರ್ಫರಾಜ್ ಅಹ್ಮದ್‍ರನ್ನು ಟೀಕಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ಕೆನೆಡಿಯಾನ್ ಬರಹಗಾರ ಟರೆಕ್ ಫತಾಹ್ ಪೈಜಾಮಾ ಧರಿಸಿ ಬಂದಿದ್ದಾರೆ. ಸದ್ಯ ಅವರು ಲುಂಗಿ, ಬನ್ಯನ್, ಟೋಪಿ ಧರಿಸಿ ಬಂದಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಸರ್ಫರಾಜ್ ಅಹ್ಮದ್ ನಾಯಕನಾಗಿರುವ ಪಾಕಿಸ್ತಾನ ತಂಡ ವಿಶ್ವಕಪ್‍ನ ಮೊದಲ ಪಂದ್ಯವನ್ನು ಇಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

  • ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ಸಾಧನೆಗೈದ ತಾಹೀರ್

    ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ಸಾಧನೆಗೈದ ತಾಹೀರ್

    ಲಂಡನ್: 2019 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭವಾಗಿದ್ದು, ಆರಂಭದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ತಂಡದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅಪರೂಪದ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಚ್ಚರಿ ಎಂಬಂತೆ ಆಫ್ರಿಕಾ ಪರ ಮೊದಲ ಓವರನ್ನು ಇಮ್ರಾನ್ ತಹೀರ್ ಎಸೆದರು. ಆ ಮೂಲಕ ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್ ಬೌಲ್ ಮಾಡಿದ ಸ್ಪಿನ್ನರ್ ಎಂಬ ಹೆಗ್ಗಳಿಕೆಯನ್ನ ತಹೀರ್ ಪಡೆದರು.

    40 ವರ್ಷ ವಯಸ್ಸಿನ ಇಮ್ರಾನ್ ತಹೀರ್ ತಮ್ಮ ಸ್ಮರಣೀಯ ಪಂದ್ಯದ ಮೊದಲ ಓವರಿನ 2ನೇ ಎಸೆತದಲ್ಲೇ ಜಾನಿ ಬೇರ್ ಸ್ಟೋ ವಿಕೆಟ್ ಪಡೆದು ಗೋಲ್ಡನ್ ಡಕ್‍ಔಟ್ ಮಾಡಿದರು. ಅಲ್ಲದೇ ಮೊದಲ ಓವರಿನಲ್ಲಿ ಕೇವಲ 1 ರನ್ ನೀಡಿದರು. ಪಂದ್ಯದಲ್ಲಿ 10 ಓವರ್ ಸ್ಪೆಲ್ ಪೂರ್ಣಗೊಳಿಸಿದ ಇಮ್ರಾನ್ ತಹೀರ್ 6.10 ಎಕಾನಮಿಯಲ್ಲಿ 2 ವಿಕೆಟ್ ಪಡೆದು 61 ರನ್ ನೀಡಿದರು.

    ಇಂಗ್ಲೆಂಡ್‍ನ ಪಿಚ್‍ಗಳು ಬ್ಯಾಟಿಂಗ್‍ಗೆ ಫೇವರಿಟ್ ಆಗಿದ್ದು, ಆದರೆ ಸದ್ಯ ಪಂದ್ಯ ನಡೆಯುತ್ತಿರುವ ಕೆನ್ನಿಂಗ್ಟನ್ ಓವೆಲ್ ಪಿಚ್‍ನಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ನಡೆದ 2 ಅಭ್ಯಾಸ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಕನಿಷ್ಠ ಮೊತ್ತ ದಾಖಲಿಸಿದೆ. ಆದರೆ ಆತಿಥೇಯ ಇಂಗ್ಲೆಂಡ್ ತಂಡ ಮಾತ್ರ ಜೇಸನ್ ರಾಯ್‍ರ 54 ರನ್, ಜೋ ರೂಟ್‍ರ 51 ರನ್, ನಾಯಕ ಮಾರ್ಗನ್ 57 ರನ್ ಹಾಗೂ ಬೆನ್ ಸ್ಟೋಕ್ಸ್ ರ 89 ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 311 ರನ್ ಕಲೆ ಹಾಕಿದೆ.

  • ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು ಒಂದು ವಾರ ಬಾಕಿ ಇರುವ ಸಂದರ್ಭದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದು, ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 500 ರನ್ ಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

    ಈ ಹಿಂದೆ 1996ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕೀನ್ಯಾ ಎದುರು 398 ರನ್ ಗಳಿಸಿ ದಾಖಲೆ ಬರೆದಿತ್ತು. ಆ ಸಂದರ್ಭದಲ್ಲಿ ಈ ದಾಖಲೆಯನ್ನು ಮುರಿಯುವುದು ಅಸಾಧ್ಯ ಎಂದೇ ಹಲವರು ಭಾವಿಸಿದ್ದರು. ಆದರೆ 2005 ರಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ 434, 438 ರನ್ ಸಿಡಿಸಿ ಈ ಹಿಂದಿನ ದಾಖಲೆಗಳನ್ನು ಮುರಿದುಹಾಕಿತ್ತು.

    ಇತ್ತೀಚೆಗೆ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 400 ಪ್ಲಸ್ ರನ್ ಗಳಿಸಿತ್ತು. ಪರಿಣಾಮ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಅತೀ ಹೆಚ್ಚು ರನ್ ಗಳಿಸುವ ಪಂದ್ಯಗಳಿಗೆ ಸಾಕ್ಷಿಯಾಗಬಹುದು. ಏಕದಿನ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್‍ಗೆ 500 ರನ್ ಗಳಿಸುವ ಅವಕಾಶ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಒತ್ತಡವನ್ನು ನಿಭಾಯಿಸುವುದು ಪ್ರಮುಖ ಅಂಶವಾಗಲಿದ್ದು, ತಂಡದ ಆಟಗಾರರು ಒತ್ತಡಕ್ಕೆ ಸಿಲುಕಿದರೆ 260 ರಿಂದ 270 ರನ್ ಗಳಿಸುವುದು ಕಷ್ಟಸಾಧ್ಯವಾಗಲಿದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ 370 ರಿಂದ 380 ರನ್ ಗುರಿ ಬೆನ್ನಟ್ಟುವ ಸಂದರ್ಭಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಪರಿಣಾಮ ಪಂದ್ಯದ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸುವುದು ಅತಿ ಮುಖ್ಯ ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ ಅತೀ ಹೆಚ್ಚು ರನ್ ಗಳಿಸಿದ ತಂಡದ ಸ್ಥಾನವನ್ನು ಪಡೆದುಕೊ0ಡಿದ್ದು, ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ 481 ರನ್ ಸಿಡಿಸಿತ್ತು.

  • ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಪೂಮಾ ಕಂಪನಿ ಚಿನ್ನದ ಬಣ್ಣದ ವಿಶೇಷ ಶೂ ವಿನ್ಯಾಸ ಮಾಡಿದೆ.

    ಪೂಮಾ ಕಂಪನಿಯವರು ವಿಶ್ವಕಪ್‍ಗೆಂದೇ ಮೊದಲ ಬಾರಿಗೆ ಈ ಬೂಟ್‍ನ್ನು ವಿನ್ಯಾಸ ಮಾಡಿದ್ದು, ಚಿನ್ನ ಮತ್ತು ಬಿಳಿ ಬಣ್ಣದಿಂದ ತುಂಬ ಆಕರ್ಷಣೀಯವಾಗಿ ಕಾಣುವಂತೆ ಈ ಬೂಟ್‍ಗಳನ್ನು ತಯಾರಿಸಲಾಗಿದೆ.

    ಭಾರತ ಮತ್ತು ವಿಶ್ವದಲ್ಲಿ ಈ ವಿನ್ಯಾಸದ ಕೇವಲ 150 ಶೂಗಳನ್ನು ಮಾತ್ರ ತಯಾರಿಸಲಾಗಿದೆ. ಇದರ ಬಗ್ಗೆ ಟ್ವಿಟ್ಟರ್‍ ನಲ್ಲಿ ಪ್ರತಿಕ್ರಿಯಿಸಿರುವ ಕೊಹ್ಲಿ ಈ ಬೂಟ್‍ನ್ನು ವಿಶ್ವಕಪ್‍ನಲ್ಲಿ ಧರಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

    “ನನ್ನ ವಿಶ್ವಕಪ್‍ಗಾಗಿ ನನ್ನ ಬೂಟ್‍ಗಳು ತಯಾರಾಗಿದೆ. ಚಿನ್ನದ ಹಾಗೂ ಬಿಳಿ ಬಣ್ಣದ ಪೂಮಾ ಒನ್8 ಗೋಲ್ಡ್ ಸ್ಪೈಕ್ ಕಲೆಕ್ಟರ್ಸ್ ಎಡಿಶನ್‍ನನ್ನು ನಾನು ನಿಮಗೆ ತೋರಿಸಲು ಉತ್ಸುಕನಾಗಿದ್ದೇನೆ. ಈ ಸೀಮಿತ ಅವೃತ್ತಿಯ ಜೋಡಿಗಳನ್ನು ಪೂಮಾದವರು ತಯಾರಿಸಿದ್ದಾರೆ. ಬನ್ನಿ ಒಟ್ಟಾಗಿ ಇತಿಹಾಸ ಸೃಷ್ಟಿಸೋಣ” ಎಂದು ಬರೆದುಕೊಂಡಿದ್ದಾರೆ.

    ಇದೇ ತಿಂಗಳ 30 ರಂದು ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ಅರಂಭವಾಗಲಿದ್ದು ಕೊಹ್ಲಿ ನಾಯಕತ್ವದ ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

  • ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನವದೆಹಲಿ: 2019ರ ವಿಶ್ವಕಪ್ ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಇಂದು ರಾತ್ರಿ ವಿಶ್ವಕಪ್‍ಗೆಂದು ಭಾರತ ತಂಡ ಇಂಗ್ಲೆಂಡ್‍ಗೆ ತೆರಳಲಿದ್ದು, ಇದಕ್ಕೂ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಇಲ್ಲಿಯವರೆಗೂ ಅಡಿದ ಮೂರು ವಿಶ್ವಕಪ್‍ನಲ್ಲಿ ಈ ಬಾರಿ ವಿಶ್ವಕಪ್ ತುಂಬ ಸವಾಲಿನಿಂದ ಕೂಡಿದೆ ಎಂದರು.

    “ಇದು ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಐಸಿಸಿ ಟೂರ್ನಿಗಳಲ್ಲಿ ಪಿಚ್‍ಗಳು ಉತ್ತಮವಾಗಿರುತ್ತವೆ. ವಿಶ್ವಪಕ್ ವೇಳೆಯ ಪಿಚ್‍ಗಳಿಗೂ ಮತ್ತು ನಾವು ಸಮಾನ್ಯವಾಗಿ ಆಡುವ ಏಕದಿನ ಪಂದ್ಯಗಳ ಪಿಚ್‍ಗಳಿಗೂ ತುಂಬಾ ವ್ಯತ್ಯಾಸವಿರುತ್ತದೆ. ಇಂಗ್ಲೆಂಡ್‍ನಲ್ಲಿರುವ ಪಿಚ್‍ಗಳು ಹೈ ಸ್ಕೋರಿಂಗ್ ಪಂದ್ಯಗಳಿಗೆ ಹೆಚ್ಚು ಅನುಕೂಲವಾಗಿವೆ. ಆದರೆ ಕೆಲ ತಂಡಗಳು 260ರಿಂದ 270 ರನ್‍ಗಳಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿವೆ ಎಂದು ಹೇಳಿದರು.

    ಮೇ 30 ರಿಂದ ವಿಶ್ವಕಪ್ ಅರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಅಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ. ನಂತರ ಆಸ್ಟ್ರೇಲಿಯಾ(ಜೂ.9), ನ್ಯೂಜಿಲೆಂಡ್(ಜೂ.13), ಪಾಕಿಸ್ತಾನ(ಜೂ.16), ಅಪ್ಘಾನಿಸ್ತಾನ(ಜೂ.22), ವೆಸ್ಟ್ ಇಂಡೀಸ್(ಜೂ.27), ಇಂಗ್ಲೆಂಡ್(ಜೂ.30), ಬಾಂಗ್ಲಾದೇಶ(ಜು.2), ಶ್ರೀಲಂಕಾ(ಜು.6) ವಿರುದ್ಧ ಆಡಲಿದೆ.

    ಭಾರತದ ತಂಡದ ಹರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಶಿಖರ್ ಧವನ್, ಎಂಎಸ್ ಧೋನಿ, ಕೆಎಲ್ ರಾಹುಲ್ ಮತ್ತು ಬೌಲರ್‍ ಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಉತ್ತಮವಾದ ಫಾರ್ಮ್‍ನಲ್ಲಿ ಇರುವುದರಿಂದ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

  • ಕ್ಯಾನ್ಸರ್ ನಿಂದ 2 ವರ್ಷದ ಮಗಳನ್ನು ಕಳೆದುಕೊಂಡ ಪಾಕ್ ಕ್ರಿಕೆಟಿಗ

    ಕ್ಯಾನ್ಸರ್ ನಿಂದ 2 ವರ್ಷದ ಮಗಳನ್ನು ಕಳೆದುಕೊಂಡ ಪಾಕ್ ಕ್ರಿಕೆಟಿಗ

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಆಸೀಫ್ ಅಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ 2 ವರ್ಷದ ಮಗಳನ್ನು ಕಳೆದುಕೊಂಡಿದ್ದಾರೆ.

    4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಸೀಫ್ ಪುತ್ರಿ ನೂರ್ ಫಾತಿಮಾ ಅಮೆರಿಕ ಆಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಪರಿಣಾಮ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆಸೀಫ್ ತವರಿಗೆ ಮರಳಿದ್ದಾರೆ.

    ಈ ಕುರಿತು ಇಸ್ಲಾಮಾಬಾದ್ ಯುನೈಟ್ ಕ್ರಿಕೆಟ್ ತಂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ದುಃಖವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಬರೆದುಕೊಂಡಿದೆ.

    ತಮ್ಮ ಪುತ್ರಿಗೆ ಕ್ಯಾನ್ಸರ್ ಇರು ವಿಚಾರ ಪಿಎಸ್‍ಎಲ್ ಟೂರ್ನಿಯ ವೇಳೆ ಆಸೀಫ್ ಅವರಿಗೆ ಗೊತ್ತಾಗಿತ್ತು. ಆ ಬಳಿಕ ತಮ್ಮ ಮಗಳನ್ನು ಚಿಕಿತ್ಸೆಗಾಗಿ ಅಮೆರಿಕಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು. ನಂತರ ದೇಶದ ಪರ ತಂಡದಲ್ಲಿ ಪ್ರತಿನಿಧಿಸಲು ಇಂಗ್ಲೆಂಡ್ ಟೂರ್ನಿಗೆ ಹಾಜರಾಗಿದ್ದರು. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 4-0 ಅಂತರದಲ್ಲಿ ಸೋಲು ಕಂಡಿದೆ.

  • 36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ

    36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ ದಾಖಲೆಯನ್ನು ಪಾಕಿಸ್ತಾನದ ಯುವ ಆಟಗಾರ ಇಮಾಮ್-ಉಲ್-ಹಕ್ ಮುರಿದಿದ್ದಾರೆ.

    ಕಪಿಲ್ ದೇವ್ ತಮ್ಮ 24 ನೇ ವಯಸ್ಸಿನಲ್ಲಿ 1983ರ ವಿಶ್ವಕಪ್ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ 175 ರನ್ ಸಿಡಿಸಿದ್ದರು. ಈ ಮೂಲಕ 150 ಕ್ಕೂ ಅಧಿಕ ರನ್ ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಆದರೆ ಸುದೀರ್ಘ 36 ವರ್ಷದ ನಂತರ ಈ ದಾಖಲೆಯನ್ನು ಇಮಾಮ್-ಉಲ್-ಹಕ್ ಅವರು ಅಳಿಸಿ ಹಾಕಿದ್ದಾರೆ.

    ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ನಡೆದ 3 ನೇ ಏಕದಿನ ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರು 151 ರನ್ (131 ಎಸೆತ, 16 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ತನ್ನ 23ನೇ ವಯಸ್ಸಿನಲ್ಲೇ ಈ ಸಾಧನೆಯನ್ನು ಮಾಡಿದ್ದಾರೆ.

    ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರ 151 ರನ್‍ಗಳ ಭರ್ಜರಿ ಆಟದಿಂದ ಪಾಕಿಸ್ತಾನ 359 ರನ್‍ಗಳನ್ನು ಕಲೆಹಾಕಿತ್ತು. ಆದರೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೈರ್ ಸ್ಟೋವ್ (128 ರನ್, 93 ಎಸೆತ, 15 ಬೌಂಡರಿ, 5 ಸಿಕ್ಸರ್) ಅವರ ಶತಕದ ನೆರವಿನಿಂದ ಸುಲಭವಾಗಿ 6 ವಿಕೆಟ್‍ಗಳ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2 ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.