Tag: england

  • ಕುಡಿದ ಮತ್ತಿನಲ್ಲಿ ಟೈರ್ ಇಲ್ಲದೆ ಕಾರ್ ಚಾಲನೆ – ವಿಡಿಯೋ ವೈರಲ್

    ಕುಡಿದ ಮತ್ತಿನಲ್ಲಿ ಟೈರ್ ಇಲ್ಲದೆ ಕಾರ್ ಚಾಲನೆ – ವಿಡಿಯೋ ವೈರಲ್

    ಲಂಡನ್: ಟೈರ್ ಇಲ್ಲದಿದ್ದರೂ ಕಾರ್ ಓಡಿಸಿಕೊಂಡು ಹೋಗುತ್ತಿದ್ದ ಪಾನಮತ್ತ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಇಂಗ್ಲೆಂಡಿನ ಸೌತ್ ಯಾರ್ಕ್‍ಶೈರ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕುಡುಕ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರಿನಲ್ಲಿ ಟೈರ್ ಇದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿದ್ದಾನೆ.

    https://twitter.com/SYP_Specials/status/1205720171949764609?

    ಘಟನೆಯ ವಿಡಿಯೋವನ್ನು ಸೌತ್ ಯಾರ್ಕ್‍ಶೈರ್ ಪೊಲೀಸರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ವಿಡಿಯೋದಲ್ಲಿ ಕಾರ್ ಚಕ್ರದಲ್ಲಿ ಟೈರ್ ಇಲ್ಲದ್ದ ಚಿತ್ರವನ್ನು ತೋರಿಸಲಾಗಿದೆ. ಅಲ್ಲದೆ ಚಾಲಕನ ಪರವಾನಿಗೆಯ ಅವಧಿ ಮುಗಿದಿತ್ತು. ವಾಹನಕ್ಕೆ ವಿಮೆ ಸಹ ಇರಲಿಲ್ಲ. ಹೀಗಾಗಿ ಚಾಲಕನನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿದ್ದ ಡ್ರೈವರ್ ಕಾರು ಚಕ್ರದಲ್ಲಿ ಟೈರ್ ಇದೆಯೇ ಎಂಬುದನ್ನು ಪರಿಶೀಲಿಸಲು ಸಹ ಮರೆತಿದ್ದಾನೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಚಾಲಕ ಸಿಕ್ಕಾಪಟ್ಟೆ ಕುಡಿದಿದ್ದರಿಂದ ಸ್ಟೇರಿಂಗ್ ಸಹ ನಿಯಂತ್ರಣದಲ್ಲಿರಲಿಲ್ಲ, ಪರವಾನಗಿ ಹೊಂದಿರಲಿಲ್ಲ. ಅಲ್ಲದೆ ಪ್ರಕರಣ ದಾಖಲಿಸಿದ್ದರ ಕುರಿತು ಈ ಹಿಂದೆ ಕೋರ್ಟಿಗೆ ಹಾಜರಾಗುವುದನ್ನು ಸಹ ತಪ್ಪಿಸಿದ್ದ ಎಂದು ಪೊಲೀಸರು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಆರೋಪಿಗೆ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಒಂದು ವರ್ಷ ವಾಹನ ಚಾಲನೆ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ಚಹಲ್‍ರನ್ನು ಅಣಕಿಸಿದ ಇಂಗ್ಲೆಂಡ್ ಆಟಗಾರ್ತಿ

    ಚಹಲ್‍ರನ್ನು ಅಣಕಿಸಿದ ಇಂಗ್ಲೆಂಡ್ ಆಟಗಾರ್ತಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಪೋಸ್ಟ್ ಗಳಿಗೆ ಅತೀ ಹೆಚ್ಚು ಪ್ರತಿಕ್ರಿಯೆ ನೀಡುವ ಸಾಲಿನಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಹಲವು ಕ್ರಿಕೆಟ್ ಆಟಗಾರ ಪೋಸ್ಟ್ ಗಳಿಗೆ ಡೇನಿಯಲ್ ವ್ಯಾಟ್ ತಮಾಷೆಯಾಗಿ ಕಾಮೆಂಟ್ ಮಾಡುವ ಮೂಲಕ ಭಾರತ ತಂಡದ ಮೇಲಿರುವ ಪ್ರೀತಿಯನ್ನು ಆಗಾಗ ಪ್ರಕಟಿಸುತ್ತಿರುತ್ತಾರೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಫೋಟೋಶೂಟ್‍ನಲ್ಲಿ ಕುಲ್ದೀಪ್ ಯಾದವ್‍ರೊಂದಿಗೆ ಇರುವ ಫೋಟೋವನ್ನು ಚಹಲ್ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಫೋಟೋದಲ್ಲಿ ಇಬ್ಬರ ಎತ್ತರದ ಬಗ್ಗೆ ಬರೆದುಕೊಂಡಿದ್ದರು. ಈ ಪೋಸ್ಟ್ ಪ್ರತಿಕ್ರಿಯೆ ನೀಡಿರುವ ವ್ಯಾಟ್, ನೀವು ನನಗಿಂತ ಕುಳ್ಳ ಎಂದು ಭಾವಿಸುತ್ತೇನೆ ಎಂದು ನಗುತ್ತಿರುವ ಎಮೋಜಿಯನ್ನು ಹಾಕುವ ಮೂಲಕ ಚಹಲ್ ಕಾಲೆಳೆದಿದ್ದಾರೆ.

    ಇತ್ತೀಚೆಗೆ ಬುಮ್ರಾ ಜಿಮ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿದ್ದ ವ್ಯಾಟ್, ಇನ್ನು ಮಕ್ಕಳು ಮಾಡುವ ವ್ಯಾಯಾಮವನ್ನು ಮಾಡುತ್ತಿದ್ದೀರಾ ಎಂದು ಪ್ರತಿಕ್ರಿಯೆ ನೀಡಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಆಡುವ ಅವಕಾಶ ಪಡೆದರೆ, ಚಹಲ್ ಅವಕಾಶ ವಂಚಿತರಾಗಿದ್ದರು. ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಜಯ ಪಡೆದು 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ಬುಧವಾರ ನಡೆಯಲಿದೆ.

  • ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

    – ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ಸಂಗ್ರಹ

    ಇಸ್ತಾಂಬುಲ್: ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಬ್ರಿಟನ್‍ನ 73 ವರ್ಷದ ರೋಸಿ ಸ್ವೆಲ್ ಪೋಪ್ ಅವರು ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿದ್ದಾರೆ.

    ‘ರನ್ ರೋಸಿ ರನ್’ ಅಭಿಯಾನದ ಅಡಿ 2018ರಲ್ಲಿ ವಿಶ್ವದಾದ್ಯಂತ ಓಡಲು ಪ್ರಾರಂಭಿಸಿದೆ. ರಾತ್ರಿ ವೇಳೆ ನಾನು ಎಲ್ಲಿ ಮಲಗುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೊಮ್ಮೆ ಹೊಲದಲ್ಲಿ, ಬೀದಿಗಳಲ್ಲಿ ಮಲಗುತ್ತೇನೆ. ಮತ್ತೆ ಬೆಳಿಗ್ಗೆ ಎದ್ದು ಓಡಲು ಪ್ರಾರಂಭಿಸಿ, ಮಾರ್ಗ ಮಧ್ಯೆ ಭೇಟಿಯಾಗುವ ಜನರನ್ನು ಮಾತನಾಡಿ ಮುಂದೆ ಸಾಗುತ್ತೇನೆ ಎಂದು ರೋಸಿ ಹೇಳಿದ್ದಾರೆ.

    ರೋಸಿ ತಮಗೆ ಬೇಕಾದ ವಸ್ತುಗಳನ್ನು ಟ್ರಾಲಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಓಡುತ್ತಾರೆ. ಈವರೆಗೆ ರೋಸಿ 12 ದೇಶಗಳನ್ನು ದಾಟಿದ್ದು, ಭಾನುವಾರ ಇಸ್ತಾಂಬುಲ್ ತಲುಪಿದ್ದಾರೆ. ಪ್ರತಿದಿನ ಸುಮಾರು 20 ಕಿ.ಮೀ ಓಡುವ ಅವರು, ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡುವಂತೆ ಮಾರ್ಗ ಮಧ್ಯೆ ಸಿಗುವ ಜನರಿಗೆ ಕೇಳಿಕೊಳ್ಳುತ್ತಾರೆ.

    ರೋಸಿ ತಮ್ಮ ಪ್ರಯಾಣದ ಉದ್ದಕ್ಕೂ ಸಿಗುವ ಜನರೊಂದಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಪ್ರಪಂಚದಾದ್ಯಂತ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ರೋಸಿ ತಮ್ಮ ಪ್ರಯಾಣ ಹಾಗೂ ಮಾರ್ಗ ಮಧ್ಯೆ ಸಿಗುವ ವ್ಯಕ್ತಿಗಳ ಜೊತೆಗಿರುವ ವಿಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರೋಸಿ ಅವರನ್ನು ವಿಶ್ವದ ಅತಿ ದೂರದ ಏಕವ್ಯಕ್ತಿ ಓಟಗಾರರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ಅವರು ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು 2004ರಲ್ಲಿ ಪ್ರಪಂಚದಾದ್ಯಂತ ಓಡಲು ಆರಂಭಿಸಿದರು. ರೋಸಿ 2015ರಲ್ಲಿ ಅಮೆರಿಕಾದಾದ್ಯಂತ ಓಡಿದ್ದಾರೆ. ರೋಸಿ ಅವರ ಪತಿ ಕ್ಲೈವ್ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ನಿಧನರಾದರು. ಹೀಗಾಗಿ ಪತಿಯ ಗೌರವಾರ್ಥವಾಗಿ ರೋಸಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರಾನ್ಸಿಸ್ಕೋ ವರೆಗೂ ಓಡಿದ್ದರು.

  • ವಿಶ್ವಕಪ್ ಫೈನಲ್ ಬಳಿಕ ಕಿವೀಸ್, ಇಂಗ್ಲೆಂಡ್ ನಡ್ವೆ ಮತ್ತೊಂದು ಸೂಪರ್ ಓವರ್

    ವಿಶ್ವಕಪ್ ಫೈನಲ್ ಬಳಿಕ ಕಿವೀಸ್, ಇಂಗ್ಲೆಂಡ್ ನಡ್ವೆ ಮತ್ತೊಂದು ಸೂಪರ್ ಓವರ್

    ಆಕ್ಲೆಂಡ್: 2019 ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಗೆ ದಾರಿ ಮಾಡಿಕೊಟ್ಟಿತ್ತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆದ ಪರಿಣಾಮ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ತಂಡ ಕಪ್ ಗೆದ್ದಿತ್ತು. ವಿಶ್ವಕಪ್ ಬಳಿಕ ಮತ್ತೊಮ್ಮೆ ಎದುರಾದ ಎರಡು ತಂಡಗಳು ಮತ್ತೊಂದು ಸೂಪರ್ ಓವರ್ ಹೋರಾಟಕ್ಕೆ ಸಾಕ್ಷಿಯಾಗಿದೆ.

    ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ 5 ಪಂದ್ಯಗಳ ಟಿ20 ಸರಣಿ ಇಂದು ಅಂತ್ಯವಾಗಿದೆ. ಸರಣಿಯಲ್ಲಿ ಮೊದಲ 4 ಪಂದ್ಯಗಳಲ್ಲಿ ಇತ್ತಂಡಗಳು ತಲಾ 2 ಗೆಲುವು ಪಡೆದು ಸಮಬಲ ಸಾಧಿಸಿದ್ದವು. ಪರಿಣಾಮ ಭಾನುವಾರ ನಡೆದ ಪಂದ್ಯ ಸರಣಿಯ ಫೈನಲ್ ಆಗಿ ಮಾರ್ಪಾಟ್ಟಿತ್ತು.

    ಪಂದ್ಯದ ಆರಂಭಕ್ಕೂ ಮೊದಲೇ ಮಳೆ ಅಡ್ಡಿ ಪಡಿಸಿದ ಪರಿಣಾಮ 11 ಓವರ್ ಗಳಿಗೆ ಪಂದ್ಯ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ತಂಡ 11 ಓವರ್ ಗಳಲ್ಲಿ 5 ವಿಕೆಟ್ ಕಳೆದು 146 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್‍ಗಳ ಸಮಬಲದ ಹೋರಾಟದ ಪರಿಣಾಮ ಪಂದ್ಯ ಟೈ ಆಯ್ತು. ಗೆಲುವಿಗಾಗಿ ಅಂತಿಮ ಓವರಿನಲ್ಲಿ ಇಂಗ್ಲೆಂಡ್‍ಗೆ 16 ರನ್ ಅಗತ್ಯವಿತ್ತು. ಅಂತಿಮ ಓವರ್ ಬೌಲ್ ಮಾಡಿದ ನೀಶಾಮ್, ಟಾಮ್ ಕರ್ರನ್ ವಿಕೆಟ್ ಪಡೆದರು. ಆದರೆ ಅಂತಿಮ 3 ಎಸೆತಗಳಲ್ಲಿ 12 ರನ್ ಗಳಿಸಿದ ಜೋರ್ಡನ್ ಪಂದ್ಯ ಟೈ ಆಗಲು ಕಾರಣರಾದರು.

    ಫಲಿತಾಂಶಕ್ಕಾಗಿ ನಡೆದ ಸೂಪರ್ ಓವರ್ ಆಟದಲ್ಲಿ ಇಂಗ್ಲೆಂಡ್ 17 ರನ್ ಗಳಿಸಿದರೆ, ಕಿವೀಸ್ 8 ರನ್ ಗಳಿಸಿ ಸೋಲುಂಡಿತು. ಪಂದ್ಯದ 7 ರನ್ ಗೆಲುವು ಪಡೆದ ಇಂಗ್ಲೆಂಡ್ ತಂಡ 3-2ರ ಅಂತರದಲ್ಲಿ ಟಿ20 ಸರಣಿಯನ್ನು ಗೆದ್ದು ಸಂಭ್ರಮಿಸಿತು.

  • ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    – ತಾಯಿಯ ಕೊನೆ ಆಸೆ ತೀರಿಸಿದ ಮಗಳು

    ಲಂಡನ್: ಇಂಗ್ಲೆಂಡ್‌ನ ಮಹಿಳೆಯೊಬ್ಬರಿಗೆ ಚಹಾ ಎಂದರೆ ಅಚ್ಚುಮೆಚ್ಚು, ಪ್ರತಿದಿನ ಏನಿಲ್ಲವೆಂದರು 30ರಿಂದ 40 ಕಪ್ ಚಹಾವನ್ನು ಮಹಿಳೆ ಸವಿಯುತ್ತಿದ್ದರು. ಅವರ ಚಹಾ ಪ್ರೀತಿ ಕೇವಲ ಅವರು ಬದುಕಿದ್ದಾಗ ಮಾತ್ರವಲ್ಲದೆ ಸಾವಿನಲ್ಲೂ ಜೊತೆಯಾಗಿದೆ.

    ಇಂಗ್ಲೆಂಡ್‌ನ ಲೀಸೆಸ್ಟರ್ ಶೈರ್‌ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮ ಅಂತ್ಯಸಂಸ್ಕಾರ ಹೇಗೆ ನಡೆಯಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಿ ಎಂದು ತಮ್ಮ ಆಸೆ ತಿಳಿಸಿದ್ದರು.

    ಹೀಗಾಗಿ ಟೀನಾ ಸಾವನ್ನಪ್ಪಿದಾಗ ಅವರ ಮೃತದೇಹವನ್ನು ಚಹಾದ ಬ್ಯಾಗ್ ರೀತಿಯೇ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ಈ ವಿಚಾರ ತಿಳಿದು ಅನೇಕರು ಎಂಥ ವಿಚಿತ್ರ ಆಸೆಯೋ ಎಂದಿದ್ದರೆ, ಕೆಲವರು ತಾಯಿಯ ಕೊನೆ ಆಸೆ ಪೂರೈಸಿದ ಮಗಳ ಪ್ರೀತಿಗೆ ಭೇಷ್ ಎಂದಿದ್ದಾರೆ.

    ಈ ಬಗ್ಗೆ ಮಾತನಾಡಿದ ಡೇಬ್ಸ್, ನನ್ನ ತಾಯಿಯ ಆಸೆಯನ್ನು ಪೂರೈಸಿದ್ದೇನೆ ಎಂಬ ತೃಪ್ತಿ ನನಗಿದೆ. ಅಮ್ಮನನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ಮಾಡಿರೋದನ್ನು ಅವರೂ ಕೂಡ ಸ್ವರ್ಗದಿಂದ ನೋಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಮೇಲಿನಿಂದ ತನ್ನ ಚಹಾ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆ ನೋಡಿ ಅವರು ಸಿಕ್ಕಾಪಟ್ಟೆ ನಕ್ಕಿರುತ್ತಾರೆ. ಅವರಿಗೆ ಇದರಿಂದ ಖುಷಿಯಾಗಿದೆ ಎಂದು ನನಗೆ ಗೊತ್ತು. ಈಗಲೂ ನಾನು ಚಹಾ ಮಾಡಿದಾಗಲೆಲ್ಲಾ ಅಮ್ಮನಿಗಾಗಿ ಚಹಾವನ್ನು ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

    ನನ್ನ ಅಮ್ಮ 73ನೇ ವಯಸ್ಸಿಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರು ಎರಡು ಬಾರಿ ಕ್ಯಾನ್ಸರ್ ಜೊತೆ ಹೋರಾಡಿ ಗುಣಮುಖರಾಗಿದ್ದರು. ಅವರು 14 ವರ್ಷದವರಾಗಿದ್ದಾಗ ಸ್ಪೇನ್‌ನಲ್ಲಿ ಒಂದು ಕೀಟ ಅವರನ್ನು ಕಚ್ಚಿತ್ತು. ಅದರ ಕಡಿತದಿಂದ ಅವರ 1 ಕಾಲಿಗೆ ಇನ್ಫೆಕ್ಷನ್ ಆಗಿ ಕಾಲನ್ನೇ ಕತ್ತರಿಸಬೇಕಾಯ್ತು. ಬಳಿಕ ಸೋಂಕು ಹರಡಿ ಇನ್ನೊಂದು ಕಾಲನ್ನು ಕೂಡ ಕತ್ತರಿಸಬೇಕಾಯ್ತು. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ನನ್ನ ಅಮ್ಮ ಛಲ ಬಿಟ್ಟಿರಲಿಲ್ಲ. ಧೈರ್ಯದಿಂದ ತಮ್ಮ ಜೀವನ ನಡೆಸಿದ್ದರು. ಎಲ್ಲರನ್ನೂ ಸದಾ ಖುಷಿಯಾಗಿಡುತ್ತಿದ್ದರು ಎಂದು ತಾಯಿ ಬಗ್ಗೆ ತಿಳಿಸಿದ್ದಾರೆ. ಮಗಳು ತಾಯಿ ಮೇಲಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದೆ.

  • ಉದ್ಯೋಗಿಗಳ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆ

    ಉದ್ಯೋಗಿಗಳ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆ

    – ಸಮೀಕ್ಷೆಯಲ್ಲಿ ಕೃಷಿಕರಿಗೆ ಮೊದಲ ಸ್ಥಾನ

    ಲಂಡನ್: ಬೇರೆ ಉದ್ಯೋಗಿಗಳಿಗಿಂತ ಕೃಷಿಕರ ಸೆಕ್ಸ್ ಲೈಫ್ ಉತ್ತಮವಾಗಿರುತ್ತದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

    ಸೆಕ್ಸ್ ಆಟಿಕೆ ಕಂಪನಿ ಲೆಲೋ 2 ಸಾವಿರ ಪುರುಷ ಮತ್ತು ಮಹಿಳೆಯರನ್ನು ಸಂದರ್ಶಿಸಿ ಈ ಸಮೀಕ್ಷೆಯನ್ನು ಮಾಡಿದೆ.

    ಸಮೀಕ್ಷೆಯಲ್ಲಿ ರೈತರ ಹೆಚ್ಚು ಸೆಕ್ಸ್ ಮಾಡುತ್ತಾರೆ ಎನ್ನುವ ಫಲಿತಾಂಶ ಪ್ರಕಟವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೃಷಿಕರ ಪೈಕಿ ಶೇ.33 ರಷ್ಟು ಮಂದಿ ನಾವು ಪ್ರತಿನಿತ್ಯ ಸೆಕ್ಸ್ ಮಾಡುತ್ತೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ಕೃಷಿಕರ ನಂತರದ ಸ್ಥಾನವನ್ನು ವಾಸ್ತುಶಿಲ್ಪಿಗಳು, ಕೇಶ ವಿನ್ಯಾಸಕಾರರು ಪಡೆದುಕೊಂಡಿದ್ದಾರೆ. ವಾಸ್ತು ಶಿಲ್ಪಿಗಳ ಪೈಕಿ ಶೇ.21 ರಷ್ಟು ಮಂದಿ ಪ್ರತಿದಿನ ಸೆಕ್ಸ್ ಮಾಡುತ್ತೇವೆ ಎಂದು ಹೇಳಿದರೆ ಕೇಶ ವಿನ್ಯಾಸಕರರ ಪೈಕಿ ಶೇ.17 ರಷ್ಟು ಮಂದಿ ಪ್ರತಿ ದಿನ ಮಿಲನ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.

    ಸಮೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿ ಪತ್ರಕರ್ತರಿದ್ದು ತಿಂಗಳಿಗೆ ಒಂದು ಬಾರಿ ಸೆಕ್ಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಉದ್ಯೋಗಿಗಳ ಲೈಫ್ ಸ್ಟೈಲ್ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆಫೀಸಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಉದ್ಯೋಗಿಗಳ ಫಿಟ್‍ನೆಸ್ ಮತ್ತು ಶಕ್ತಿ ಕಡಿಮೆಯಾಗುತ್ತದೆ ಸಮೀಕ್ಷೆ ಹೇಳಿದೆ.

  • 1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    ಇಂಗ್ಲೆಂಡ್: ಬರೀ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಜಲಚರಗಳಿಗೂ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡುವಷ್ಟರ ಮಟ್ಟಿಗೆ ವೈದ್ಯ ಲೋಕ ಬೆಳೆದು ನಿಂತಿದೆ. ಯುಕೆಯಲ್ಲಿ ಕೇವಲ 1 ಗ್ರಾಂ ತೂಕದ ಮೀನಿಗೆ ವೈದ್ಯರು ಆಪರೇಷನ್ ಮಾಡಿ ಯಶಸ್ವಿಯಾಗಿರೋದು ಅದಕ್ಕೆ ಒಂದೊಳ್ಳೆ ಉದಾಹರಣೆಯಾಗಿದೆ.

    ಹೌದು. ಇಂಗ್ಲೆಂಡಿನ ಬ್ರಿಸ್ಟಸ್‍ನ ವೈದ್ಯೆ ಸೋನ್ಯಾ ಮೈಲ್ಸ್ ಇಂತಹದೊಂದು ಅಚ್ಚರಿಯ ಕೆಲಸ ಮಾಡಿದ್ದಾರೆ. ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್‍ಗೆ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ಯುಕೆ ಮಹಿಳೆಯೊಬ್ಬರಿಗೆ ಈ 1 ಗ್ರಾಂ ತೂಕದ ಗೋಲ್ಡ್ ಫಿಶ್ ಅನ್ನು ಯಾರೋ ಗಿಫ್ಟ್ ಮಾಡಿದ್ದರು. ಆದ್ದರಿಂದ ಮೀನಿನ ಒಡತಿ ಅದನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಮೀನು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಒಡತಿ, ಅದನ್ನು ವೈದ್ಯರ ಬಳಿ ಕರೆತಂದಿದ್ದರು.

    ಆಗ ಅದರ ಹೊಟ್ಟೆಯಲ್ಲಿ ಟ್ಯೂಮರ್ ಆಗಿರುವುದು ಬೆಳಕಿಗೆ ಬಂದು, ಮೀನಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಒಡತಿ ಒಪ್ಪಿಗೆ ನೀಡಿದಾಗ, ವೈದ್ಯೆ ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ಮೀನಿನ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರತೆಗೆದು ದಾಖಲೆ ಮಾಡಿದ್ದಾರೆ. ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಹೊಗ್ಗಳಿಕೆ ಪಡೆದುಕೊಂಡಿದೆ.

    ಒಂದು ಸಣ್ಣ ಪೈಪ್ ಮೂಲಕ ಮೀನಿನಲ್ಲಿದ್ದ ಟ್ಯೂಮರ್‌ನ್ನು ವೈದ್ಯೆ ಹೊರ ತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಲು ಬರೋಬ್ಬರಿ 40 ನಿಮಿಷಗಳ ಕಾಲ ವೈದ್ಯರು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಗೋಲ್ಡನ್ ಫಿಶ್‍ಗೆ ಮಾರುಕಟ್ಟೆಯಲ್ಲಿ 89 ರೂ. ಬೆಲೆ ಇದೆ. ಆದರೆ ಇದರ ಶಸ್ತ್ರಚಿಕಿತ್ಸೆಗೆ ಮೀನಿನ ಒಡತಿ ಬರೋಬ್ಬರಿ 9 ಸಾವಿರ ರೂ. ಖರ್ಚು ಮಾಡಿದ್ದಾರೆ. ಸದ್ಯ ಈ ಮೀನು ಆರೋಗ್ಯವಾಗಿದೆ ಎಂದು ಒಡತಿ ತಿಳಿಸಿದ್ದಾರೆ.

  • ಆ್ಯಶಸ್ ಟೆಸ್ಟ್: 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಬ್ರೇಕ್

    ಆ್ಯಶಸ್ ಟೆಸ್ಟ್: 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಬ್ರೇಕ್

    ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 113 ವರ್ಷಗಳ ಹಿಂದಿನ ಕೆಟ್ಟ ದಾಖಲೆಯನ್ನು ಇತ್ತಂಡಗಳ ಆರಂಭಿಕ ಆಟಗಾರರು ಮುರಿದಿದ್ದಾರೆ.

    ಇಂಗ್ಲೆಂಡ್ ನೆಲದಲ್ಲಿ ನಡೆದ ಈ ಸಾಲಿನ ಆ್ಯಶಸ್ ಟೂರ್ನಿ 2-2 ಅಂತರದಲ್ಲಿ ಟೈನೊಂದಿಗೆ ಅಂತ್ಯವಾಗಿದೆ. ಆದರೆ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಮಾತ್ರ ತೀವ್ರ ನಿರಾಸೆ ಮೂಡಿಸಿದ್ದು, 12.55ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಭಾನುವಾರ ಅಂತ್ಯವಾದ ಅಂತಿಮ ಟೆಸ್ಟ್ ನ 5ನೇ ದಿನದಾಟದಲ್ಲಿ ಆಸೀಸ್ ತಂಡದ ಡೇವಿಡ್ ವಾರ್ನರ್ 11 ರನ್ ಹಾಗೂ ಹ್ಯಾರಿಸ್ 09 ರನ್ ಗಳಿಸಿ ಔಟಾಗಿದ್ದರು. ಪರಿಣಾಮ ಐದು, ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಗಳಿಸಿದ ಸರಾಸರಿ ಕಡಿಮೆ ರನ್ ಗಳಸಿದ ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ.

    ಈ ಹಿಂದೆ 1906 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು 14.16 ಸರಾಸರಿಯಲ್ಲಿ ರನ್ ಗಳಿಸಿದ್ದರು. ಸದ್ಯ ಆಸೀಸ್ ಹಾಗೂ ಇಂಗ್ಲೆಂಡ್ ಆರಂಭಿಕ ಆಟಗಾರರು ಇದಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

    ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 329 ರನ್ ಗಳಿಗೆ ಆಲೌಟ್ ಆಗಿ ಆಸೀಸ್‍ಗೆ 399 ರನ್‍ಗಳ ಗುರಿ ನೀಡಿತ್ತು. ಪರಿಣಾಮ 2001ರ ಬಳಿಕ ಆಸೀಸ್ ವಿದೇಶಿ ನೆಲದಲ್ಲಿ ಆ್ಯಶಸ್ ಟೂರ್ನಿ ಗೆಲುವಿಗೆ 399 ರನ್ ಗಳಿಸಬೇಕಿತ್ತು. ಆದರೆ ಆಸೀಸ್ ಆಟಗಾರರು 2ನೇ ಇನ್ನಿಂಗ್ ನಲ್ಲಿ 263 ರನ್ ಗಳಿಗೆ ಆಲೌಟ್ ಆದ ಹಿನ್ನೆಲೆಯಲ್ಲಿ ಇಂಗ್ಲೆಂಡ್ 135 ರನ್ ಗಳ ಜಯ ಪಡೆಯಿತು. ಇದರೊಂದಿಗೆ ಆಸೀಸ್ ಸರಣಿ 2-2 ಅಂತರದಲ್ಲಿ ಸಮಬಲದೊಂದೊಗೆ ಅಂತ್ಯವಾಯಿತು. 47 ವರ್ಷಗಳ ಬಳಿಕ ಆ್ಯಶಸ್ ಸರಣಿ ಡ್ರಾದೊಂದಿಗೆ ಅಂತ್ಯಗೊಂಡಿತು. ಈ ಹಿಂದೆ 1972 ರಲ್ಲಿ ಆ್ಯಶಸ್ ಸರಣಿ ಡ್ರಾಗೊಂಡಿತ್ತು.

  • ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್

    ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್

    ಲಂಡನ್: ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಮೋಸದಾಟವಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಆದರೆ ಅವರು ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೇ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲೂ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದ ಸಂಗತಿ ಸದ್ಯ ಬೆಳಕಿಗೆ ಬಂದಿದೆ.

    ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲಿಸ್ಟ್ರೈರ್ ಕುಕ್ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದು, ಸೆ.5 ರಂದು ಬಿಡುಗಡೆಯಾದ ಕುಕ್‍ರ ಆತ್ಮಚರಿತ್ರೆಯಲ್ಲಿ ಈ ಕುರಿತು ವಿವರಿಸಿದ್ದಾರೆ.

    2017-18ರ ಆ್ಯಶಸ್ ಸರಣಿಯ ವೇಳೆ ನಡೆದ ಘಟನೆಯನ್ನು ಕುಕ್ ತಿಳಿಸಿದ್ದು, ವಾರ್ನರ್ ಹಾಗೂ ಇಂಗ್ಲೆಂಡಿನ ಕೆಲ ಆಟರೊಂದಿಗೆ ಬಿಯರ್ ಕುಡಿಯುತ್ತಿದ್ದ ವೇಳೆ ವಾರ್ನರ್ ಈ ಸಂಗತಿಯನ್ನು ತಿಳಿಸಿದ್ದಾಗಿ ಹೇಳಿದ್ದಾರೆ. 2 ಬಾಟಲ್ ಬಿಯರ್ ಕುಡಿದ ಮೇಲೆ ವಾರ್ನರ್ ದೇಶಿಯ ಕ್ರಿಕೆಟ್ ಪಂದ್ಯವೊಂದರ ಸಂದರ್ಭದಲ್ಲಿ ಬಾಲ್ ಟ್ಯಾಪರಿಂಗ್ ನಡೆಸಲು ಬೇಕಾದ ವಸ್ತುವನ್ನು ಕೈಬೆರಳಿಗೆ ಕಟ್ಟಿಕೊಂಡು ತೆರಳುತ್ತಿದ್ದಾಗಿ ತಿಳಿಸಿದ್ರು. ಆದರೆ ಸ್ಮಿತ್ ತಕ್ಷಣ ಎಚ್ಚೆತ್ತು, ಇದನ್ನು ನೀನು ಹೇಳಬಾರದಿತ್ತು ಎಂದು ಎಚ್ಚರಿಕೆ ನೀಡಿದ್ದಾಗಿ ಅಂದು ಘಟನೆಯ ಬಗ್ಗೆ ಕುಕ್ ವಿವರಿಸಿದ್ದಾರೆ.

    ದಕ್ಷಿಣ ಆಫ್ರಿಕಾ ಸರಣಿ ಸಂದರ್ಭದಲ್ಲಿ ನಡೆದ ಬಾಲ್ ಟ್ಯಾಪರಿಂಗ್ ಪ್ರಕರಣದಲ್ಲಿ ತಂಡದ ನಾಯಕರಾಗಿದ್ದ ಸ್ಮಿತ್, ಉಪನಾಯಕ ವಾರ್ನರ್ 1 ವರ್ಷ ನಿಷೇಧ ಅನುಭವಿಸಿದ್ದರು. ಇತ್ತ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಸಿಡಿಸಿ ದಾಖಲೆ ಹೊಂದಿರುವ ಕುಕ್ 2018ರಲ್ಲಿ ಭಾರತ ಪ್ರವಾಸ ಬಳಿಕ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

  • ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಬೆಂಗಳೂರು: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್  ಆರಂಭಗೊಂಡಿದ್ದು, ಈ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ 60 ಅಂಕ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡಿಗೆ 24 ಅಂಕ ನೀಡಿದ್ದು ಸರಿಯೇ? ಇಂಗ್ಲೆಂಡಿಗೆ ಯಾಕೆ 60 ಅಂಕ ನೀಡಿಲ್ಲ ಎಂದು ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಆದರೆ ಈ ಅಂಕದಲ್ಲಿ ಯಾವುದೇ ಮೋಸ ನಡೆದಿಲ್ಲ. ಐಸಿಸಿ ನಿಯಮದ ಪ್ರಕಾರವೇ ಎಲ್ಲ ತಂಡಗಳಿಗೆ ಅಂಕವನ್ನು ಹಂಚಿಕೆ ಮಾಡಲಾಗುತ್ತಿದೆ.

    ಅಂಕ ಹೇಗೆ ಹಂಚಲಾಗುತ್ತದೆ?
    ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ವಿಂಡೀಸ್ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ. ಅದೇ 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 24 ಅಂಕಗಳನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಂದೊಂದು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ 24 ಅಂಕಗಳನ್ನು ನೀಡಲಾಗಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳಿಗೆ 8 ಅಂಕಗಳನ್ನು ನೀಡಲಾಗಿದೆ.

    2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.

    ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿದೆ.

    ಭಾರತಕ್ಕೆ ಮೊದಲ ಸ್ಥಾನ:
    ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಪಟ್ಟಿಯಲ್ಲಿ ಭಾರತ ಈಗ 60 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು 60 ಅಂಕಗಳು ಗಳಿಸಿದರೂ ಅನುಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದಿದೆ. ಭಾರತ 318 ರನ್‍ಗಳ ಭಾರೀ ಅಂತರದಿಂದ ಗೆದ್ದ ಹಿನ್ನೆಲೆಯಲ್ಲಿ 2.338 ರನ್ಸ್ ಪರ್ ವಿಕೆಟ್ ಅನುಪಾತ ಇರುವ ಕಾರಣ ಮೊದಲ ಸ್ಥಾನವನ್ನು ಪಡೆದಿದೆ.

    ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
    ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ  222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  100 ರನ್ ಗಳಿಗೆ ಆಲೌಟ್ ಆಗಿತ್ತು.

    ((297+343)/17)÷(222+100)/20)
    =(640/17)÷ (322/20)
    =37.647 ÷ 16.1
    =2.338