Tag: england

  • ತನಗೆ ಕೊರೊನಾ ಬಂದಿದ್ದು ಹೇಗೆ ಅನ್ನೋದನ್ನು ತಿಳಿಸಿದ ಇಂಗ್ಲೆಂಡ್ ಪ್ರಧಾನಿ

    ತನಗೆ ಕೊರೊನಾ ಬಂದಿದ್ದು ಹೇಗೆ ಅನ್ನೋದನ್ನು ತಿಳಿಸಿದ ಇಂಗ್ಲೆಂಡ್ ಪ್ರಧಾನಿ

    ಲಂಡನ್: ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ತನಗೆ ಸೋಂಕು ಹೇಗೆ ಬಂದಿರಬಹುದು ಎನ್ನುವುದನ್ನು ಈಗ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಈ ವೇಳೆ ಅಲ್ಲಿ ಕೊರೊನಾ ವೈರಸ್ ರೋಗಿಗಳು ಇದ್ದರು. ಅಲ್ಲಿದ್ದ ಎಲ್ಲ ಮಂದಿಗೆ ಶೇಕ್ ಹ್ಯಾಂಡ್ ಮಾಡಿದ್ದೆ. ಇದರಿಂದಾಗಿ ನನಗೆ ವೈರಸ್ ಬಂದಿರಬಹುದು ಎಂದು ಹೇಳಿದ್ದಾರೆ.

    ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಬೋರಿಸ್ ಜಾನ್ಸನ್, ನನಗೆ ಸ್ವಲ್ಪ ಪ್ರಮಾಣದಲ್ಲಿ ಕೆಮ್ಮು ಮತ್ತು ದೇಹದ ಉಷ್ಣಾಂಶ ಜಾಸ್ತಿ ಇತ್ತು. ಆಗ ನಾನು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದೇನೆ. ಜೊತೆಗೆ ತಂತ್ರಜ್ಞಾನ ಬಳಸಿ ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದೇನೆ. ನಾವು ಕೊರೊನಾ ವೈರಸ್ ವಿರುದ್ಧ ಹೊರಾಡೋಣ. ಆದಷ್ಟೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.

    ಇಂಗ್ಲೆಂಡಿನಲ್ಲಿ 14,590 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 760 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 13,690 ಪೀಡಿತರಿದ್ದು, 140 ಮಂದಿ ಗುಣಮುಖರಾಗಿದ್ದಾರೆ.

  • ಈಡಿಯಟ್‍ಗಳಂತೆ ನಗರ ಸುತ್ತಲು ಹೋಗ್ಬೇಡಿ, ಮನೆಯಲ್ಲಿರಿ – ಮೃತಪಟ್ಟ ರೋಗಿಯ ಭಾವನಾತ್ಮಕ ಪೋಸ್ಟ್ ವೈರಲ್

    ಈಡಿಯಟ್‍ಗಳಂತೆ ನಗರ ಸುತ್ತಲು ಹೋಗ್ಬೇಡಿ, ಮನೆಯಲ್ಲಿರಿ – ಮೃತಪಟ್ಟ ರೋಗಿಯ ಭಾವನಾತ್ಮಕ ಪೋಸ್ಟ್ ವೈರಲ್

    – ಪ್ಲೀಸ್, ಪ್ಲೀಸ್ ಪ್ಲೀಸ್.. ಹೊರಗಡೆ ಹೋಗುವುದನ್ನು ನಿಲ್ಲಿಸಿ
    – ಉಳಿದ ಜೀವಗಳನ್ನು ರಕ್ಷಿಸಿ

    ಲಂಡನ್: ಈಡಿಯಟ್‍ಗಳಂತೆ ನಗರ ಸುತ್ತಲು ಹೋಗಬೇಡಿ. ಮನೆಯಲ್ಲೇ ಇದ್ದು ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಹೇಳಿ ಇಂಗ್ಲೆಂಡಿನಲ್ಲಿ 39 ವರ್ಷ ವ್ಯಕ್ತಿಯೊಬ್ಬರು ಕೊರೊನಾಗೆ ಮೃತಪಟ್ಟಿದ್ದಾರೆ.

    ಬಕಿಂಗ್‍ಹ್ಯಾಮ್‍ನ ಮ್ಯಾಟ್ ಡೊಕ್ರೆ ಅವರು ಪತ್ನಿ ಮತ್ತು ಮಗುವಿಗೆ ವಿಡಿಯೋ ಸಂದೇಶ ಕಳುಹಿಸಿ ಮೃತಪಟ್ಟಿದ್ದಾರೆ. ಮೃತಪಡುವ ಮುನ್ನ ಫೇಸ್‍ಬುಕ್ ನಲ್ಲಿ ಭಾವನಾತ್ಮಕವಾಗಿ ತನ್ನ ನೋವನ್ನು ತೋಡಿಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಅನ್ನು 23 ಸಾವಿರ ಮಂದಿ ಶೇರ್ ಮಾಡಿದ್ದು, 7 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ.

    ಮಾರ್ಚ್ 1 ರಂದು ಡೊಕ್ರೆ ಅವರಿಗೆ ಸಣ್ಣ ಕಫ ಬಂದಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಕುಟುಂಬದ ಜೊತೆ ಕೊನೆಯ ಬಾರಿಗೆ ಮಾಡಿದ ವಿಡಿಯೋ ಕರೆಯಲ್ಲಿ ತಾನು ಮುಂದೆ ಬದುಕುವುದು ಕಷ್ಟ ಎಂದು ಹೇಳಿದ ಮ್ಯಾಟ್ ಡೊಕ್ರೆ, ಇಂಗ್ಲೆಂಡಿನ ಜನ ಇಡಿಯಟ್‍ಗಳಂತೆ ನಗರದಲ್ಲಿ ಸುತ್ತಾಡುತ್ತಿದ್ದಾರೆ. ದಯವಿಟ್ಟು ನಗರದಲ್ಲಿ ಸುತ್ತಾಡಬೇಡಿ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಮನೆಯಲ್ಲೇ ಇರಿ ಎಂದು ಮನವಿ ಮಾಡಿ ಗುಡ್‍ಬೈ ಹೇಳಿದ್ದಾರೆ.

    ವಿಶೇಷ ಏನೆಂದರೆ ಅವರು ಚಿಕಿತ್ಸೆಯಿಂದ ಬದುಕಬಹುದು ಎಂದೇ ನಿರೀಕ್ಷಿಸಲಾಗಿತ್ತು. ಸ್ವಲ್ಪ ಆರೋಗ್ಯ ಸಹ ಚೇತರಿಕೆಯಾಗಿತ್ತು. ಆದರೆ ಈಗ ಅವರು ಮೃತಪಟ್ಟಿದ್ದಾರೆ. ಮೃತಪಡುವುದಕ್ಕೂ ಮುನ್ನ ಅವರು ಫೇಸ್‍ಬುಕ್ ನಲ್ಲಿ “ಪ್ಲೀಸ್, ಪ್ಲೀಸ್ ಪ್ಲೀಸ್.. ಹೊರಗಡೆ ಹೋಗುವುದನ್ನು ನಿಲ್ಲಿಸಿ ಮತ್ತು ಉಳಿದ ಜೀವಗಳನ್ನು ರಕ್ಷಿಸಿ” ಹೆಡ್‍ಲೈನ್ ಹಾಕಿ ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಾನು ಒಂದು ಪ್ರಮುಖ ಕಾರಣಕ್ಕಾಗಿ ಈ ಪೋಸ್ಟ್ ಬರೆಯುತ್ತಿದ್ದೇನೆ. ಕಳೆದ ಮೂರು ವಾರಗಳಿಂದ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ವೆಂಬ್ಲಿ ವಿಲ್ಲಾದಲ್ಲಿದ್ದಾಗ ನನಗೆ ಕಫ ಬಂದಿತ್ತು. ಇದಾದ ಬಳಿಕ ಜ್ವರ ಮತ್ತು ತಲೆನೋವು ಬಂದಿತ್ತು. ದಿನೇ ದಿನೇ ಜೋರಾಗುತ್ತಿದ್ದರೂ ನಾನು ಇದಕ್ಕೆ ಗಮನ ನೀಡಲಿಲ್ಲ. ಕುಟುಂಬದವರು ಸಲಹೆ ನೀಡಿದರೂ ನಾನು ಹೀರೋ ಥರ ಪೋಸ್ ನೀಡುತ್ತಿದ್ದೆ.

    ವೈದ್ಯರು ನನ್ನ ಬಳಿ ನೀವು ಚೀನಾಗೆ ಹೋಗಿದ್ದೀರಾ ಎಂದು ಕೇಳಿದರು. ನಾನು ಹೋಗಿಲ್ಲ ಎಂದು ಹೇಳಿದೆ. ಇದಾದ ಬಳಿಕ ನಾನು ಕೆಲವು ರೋಗ ನಿರೋಧಕಗಳನ್ನು ತೆಗೆದುಕೊಂಡೆ. ಇದಾದ 5 ದಿನಗಳ ಕಾಲ ನಾನು ಮಂಚದಿಂದ ಏಳಲೇ ಇಲ್ಲ. ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು.

    ಕೊನೆಗೆ ನನ್ನ ಪತ್ನಿ ನನ್ನ ಮಾತನ್ನು ಕೇಳಲಿಲ್ಲ. ಅಂಬುಲೆನ್ಸ್ ಗೆ ಕರೆ ಮಾಡಿ ವಿಚಾರ ತಿಳಿಸಿದಳು. ಒಂದು ಗಂಟೆಯ ನಂತರ ಮನೆಗೆ ಅಂಬುಲೆನ್ಸ್ ಬಂತು. ನಾನು ಕೋವಿದ್-19 ರೋಗಿಯಾಗಿದ್ದು ನನ್ನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ವೈದ್ಯರು ಸೂಟ್ ಧರಿಸಿಕೊಂಡು ಮನೆಗೆ ಬಂದರು. ಬಳಿಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಮೇಲೆ ಇರಿಸಿದರು.

    ವೆಂಟಿಲೇಟರ್ ಇರಿಸಿದ ಬಳಿಕ ನನ್ನ ಹೋರಾಟ ಆರಂಭವಾಯಿತು. ಕೆಲ ದಿನಗಳ ಬಳಿಕ ನನ್ನ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಆಯ್ತು. ಹೀಗಾಗಿ ನಾನು ಈಗ ನನ್ನ ನೋವಿನ ಕಥೆಯನ್ನು ಹೇಳುತ್ತಿದ್ದೇನೆ. ಯಾವುದೇ ಉದ್ದೇಶ ಇಲ್ಲದೇ ಹೊರಗಡೆ ಹೋಗಿ ಆದೇಶವನ್ನು ಉಲ್ಲಂಘಿಸುವ ಮಂದಿಗೆ ತಿಳಿ ಹೇಳಲು ನನಗೆ ಒಂದು ಅವಕಾಶ ಸಿಕ್ಕಿದೆ ಎಂದು ನಾನು ಭಾವಿಸಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ನನಗೆ ಏನು ಆಗುವುದಿಲ್ಲ ಎಂದು ಯಾರು ದಯವಿಟ್ಟು ಆಲೋಚನೆ ಮಾಡಬೇಡಿ. ಈಡಿಯೇಟ್ ಗಳಂತೆ ವರ್ತಿಸಬೇಡಿ. ಈಗಾಗಲೇ ನಾನು ನನ್ನ ಪತ್ನಿ ಮತ್ತು ಮಗುವಿಗೆ ಗುಡ್‍ಬೈ ಹೇಳಿ ಹೇಳಿದ್ದೇನೆ.

    39 ವರ್ಷದ ನಾನು ಪೋಸ್ಟರ್ ಬಾಯ್ ಅಲ್ಲ. ಈಗ ನನಗೆ ನನ್ನ ಬರಹ ಮುಗಿಸುವ ಸಮಯ ಬಂದಿದೆ. ಈಗ ನಾನು ಗಂಟೆಗೊಮ್ಮೆ ನನ್ನ ಹತ್ತಿರದ ಕೊಠಡಿಗಳಲ್ಲಿರುವ ಕೋವಿದ್-19 ಸೋಂಕಿಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು ನೋಡುತ್ತಿದ್ದೇನೆ. ಈ ರೋಗಿಗಳ ಕುಟುಂಬಸ್ಥರು ಗುಡ್‍ಬೈ ಹೇಳುತ್ತಿರುವುದು ನನಗೆ ಕಾಣುತ್ತಿದೆ.

    ನನಗೆ ನೀವು ಸಹಾನುಭೂತಿ ವ್ಯಕ್ತಪಡಿಸಲು ಅಥವಾ ನಿಮ್ಮ ಗಮನ ಸೆಳೆಯಲು ಈ ಬರಹವನ್ನು ನಾನು ಬರೆಯುತ್ತಿಲ್ಲ. ನನ್ನ ಆತ್ಮೀಯರ ಧನಾತ್ಮಕ ಚಿಂತನೆಯಿಂದ ನಾನು ಸ್ವಲ್ಪ ಗುಣಮುಖನಾಗಿದ್ದೇನೆ. ಅವರ ಧೈರ್ಯ ತುಂಬಿದ ಮಾತುಗಳಿಂದ ನನ್ನ ಉಸಿರಾಟ ಹೆಚ್ಚಾಗಿದೆ. ಪ್ರೀತಿ ಪಾತ್ರರಿಗೆ ಆಗುವ ಅಪಾಯವನ್ನು ತಪ್ಪಿಸಲು ಹೊರಗಡೆ ಹೋಗುವುದನ್ನು ನಿಲ್ಲಿಸಿ. ಪ್ರಕೃತಿ ತನ್ನ ಹಾದಿಯನ್ನು ಹಿಡಿಯಲಿ ಎಂದು ಬರೆದು 9 ಬಾರಿ ಕೈ ಮುಗಿದು ಬೇಡಿಕೊಳ್ಳುವ ಇಮೋಜಿ ಹಾಕಿ ಪೋಸ್ಟ್ ಮುಗಿಸಿದ್ದಾರೆ.

  • ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    – ಶಂಕೆ ವ್ಯಕ್ತಪಡಿಸಿದ ಪಾಕ್ ಮಾಜಿ ಕ್ರಿಕೆಟರ್

    ಇಸ್ಲಾಮಾಬಾದ್: ಇಂಗ್ಲೆಂಡ್‍ನ ಕ್ರಿಕೆಟರ್ ಅಲೆಕ್ಸ್ ಹೇಲ್ಸ್ ಅವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್, ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್‍ಎಲ್‍ಅನ್ನು ಮುಂದೂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಇದೇ ವಿಚಾರವಾಗಿ ಕರಾಚಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಜೀಜ್ ರಾಜಾ, “ನನಗೆ ತಿಳಿದಿರುವಂತೆ ಹೇಲ್ಸ್ ಅವರಿಗೆ ಯಾವುದೇ ಪರೀಕ್ಷೆ ನಡೆಸಿಲ್ಲ. ಆದರೆ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿವೆ. ಆದರೆ ನಾವೆಲ್ಲರೂ ಈಗ ಬಹಳ ಜಾಗರೂಕರಾಗಿರಬೇಕು. ಈ ಸಮಸ್ಯೆಯನ್ನು ಎದುರಿಸಲು ಸಾಮಾನ್ಯ ಜ್ಞಾನ, ವಿಧಾನವನ್ನು ಅನುಸರಿಸಬೇಕು” ಎಂದು ಹೇಳಿದ್ದಾರೆ.

    ಪಿಎಸ್‍ಎಲ್ ಟೂರ್ನಿಯಲ್ಲಿ ಹೆಲ್ಸ್ ಅವರು ಕರಾಚಿ ಕಿಂಗ್ಸ್ ಪರ ಆಡಿದ್ದು, ಪಾಕಿಸ್ತಾನದಲ್ಲಿ ವೈರಸ್ ಹರಡಿದ ನಂತರ ಇತರ ಇಂಗ್ಲೆಂಡ್ ಆಟಗಾರರೊಂದಿಗೆ ತವರಿಗೆ ಮರಳಿದ್ದಾರೆ. ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡ್‍ನ 6 ಆಟಗಾರರಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಮರಳಿದ್ದಾರೆ. ಇದನ್ನೂ ಓದಿ:  ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

    31 ವರ್ಷದ ಹೇಲ್ಸ್ ಬಲಗೈ ಓಪನರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇಂಗ್ಲೆಂಡ್ ತಲುಪಿದ ನಂತರ ಪ್ರತ್ಯೇಕವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸೀಂ ಖಾನ್ ಕೂಡ ಪಿಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದೇಶಿ ಆಟಗಾರರೊಬ್ಬರಿಗೆ ಕೊರೊನಾ ಸೋಂಕು ಇದೆ ಎಂಬ ಶಂಕಿಸಲಾಗಿದೆ ಎಂದು ಹೇಳಿದ್ದರು. ಆದರೆ ಅವರು ಆಟಗಾರನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

    ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪಿಎಸ್‍ಎಲ್ ಆಟಗಾರರು ಮತ್ತು ತಂಡದ ಜೊತೆಯಿದ್ದ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾಸೀಂ ಖಾನ್ ತಿಳಿಸಿದ್ದಾರೆ.

  • ಇಂಗ್ಲೆಂಡಿನಲ್ಲಿ ಮನೆಯಿಂದ ಹೊರಬಂದರೆ 91 ಸಾವಿರ ರೂ. ದಂಡ, ಜೈಲು ಶಿಕ್ಷೆ

    ಇಂಗ್ಲೆಂಡಿನಲ್ಲಿ ಮನೆಯಿಂದ ಹೊರಬಂದರೆ 91 ಸಾವಿರ ರೂ. ದಂಡ, ಜೈಲು ಶಿಕ್ಷೆ

    – ಕೊರೊನಾ ನಿಯಂತ್ರಣಕ್ಕೆ ಹರಸ ಸಾಹಸ ಪಡುತ್ತಿದೆ ಇಂಗ್ಲೆಂಡ್
    – ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ

    ಲಂಡನ್: ಮನೆಯಲ್ಲಿ ನಿಗಾದಲ್ಲಿರುವ ಕೊರೊನಾ ಶಂಕಿತರು ಅಥವಾ ಆಸ್ಪತ್ರೆಯಲ್ಲಿರುವ ಕೊರೊನಾ ಪೀಡಿತರು ಹೊರ ಬಂದರೆ ಅವರಿಗೆ 1 ಸಾವಿರ ಯುರೋ(ಅಂದಾಜು 91 ಸಾವಿರ ರೂ) ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.

    ಕೊರೊನಾ ಪೀಡಿತರು ಅಥವಾ ಕೊರೊನಾ ಶಂಕಿತರು ನಿಗಾದಲ್ಲಿ ಇರಬೇಕು. ಒಂದು ವೇಳೆ ಆಸ್ಪತ್ರೆಯಿಂದ ಅಥವಾ ಮನೆಯಿಂದ ಹೊರ ಬಂದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇವರ ಮೇಲೆ 1 ಸಾವಿರ ಯುರೋ ದಂಡ ಮತ್ತು ಜೈಲಿಗೆ ಹಾಕಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊರೊನಾ ವಿರುದ್ಧ ಹೋರಾಡಲು ಈಗ ಕೆಲ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಶಂಕಿತರು ಆಸ್ಪತ್ರೆಯಲ್ಲೇ ಇರಬೇಕು. ಕೊರೊನಾ ಪೀಡಿತ ದೇಶದಿಂದ ಆಗಮಿಸಿ ಈಗ ಕೊರೊನಾ ಬಾರದೇ ಇದ್ದರೂ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಬೇಕು ಎಂದು ಸೂಚಿಸಿದೆ. ಕೊರೊನಾ ವೈರಸ್ ಆರೋಗ್ಯ ರಕ್ಷಣೆ ನಿಯಮಗಳನ್ನು ಇಂಗ್ಲೆಂಡ್ ಸರ್ಕಾರ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದೆ.

    ಈ ನಿಯಮದಲ್ಲಿ ಜನರು ಪ್ರವಾಸದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಒಂದು ವೇಳೆ ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ ವಿಧಿಸಲಾಗುತ್ತದೆ.

    70 ವರ್ಷ ಮೀರಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ಹೊರಗಡೆ ಬರಬೇಡಿ. ಕನಿಷ್ಠ 4 ತಿಂಗಳು ಮನೆಯಲ್ಲೇ ಇರಿ ಎಂದು ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಒಂದೇ ದಿನ 14 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಇಂಗ್ಲೆಂಡಿನಲ್ಲಿ ಒಟ್ಟು 1,391 ಕೇಸ್ ದಾಖಲಾಗಿದ್ದು 35 ಮಂದಿ ಮೃತಪಟ್ಟಿದ್ದಾರೆ.

  • ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಲಂಡನ್: ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಹೆಲ್ತ್ ಚೆಕಪ್ ವೇಳೆ ದೃಢಪಟ್ಟಿದೆ.

    ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬರೆದೇ ಗೃಹ ಬಂಧನದಲ್ಲಿದ್ದಾರೆ.

    ನಾಡಿನ್ ಡೋರಿಸ್ ಅವರಿಗೆ ಕಳೆದ ಗುರುವಾರ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ರೋಗದ ಲಕ್ಷಣ ಕಾಣಿಸಿಕೊಂಡ ದಿನವೇ ನಾಡಿನ್ ಅವರು ಇಂಗ್ಲೆಂಡ್ ಪ್ರಧಾನ ಮಂತ್ರಿಯವರು ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರ ಬಳಿ ಸಂಪರ್ಕದಲ್ಲಿ ಇದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಾಡಿನ್ ಡೋರಿಸ್ ಅವರು, ನನಗೆ ಕೊರೊನಾ ಇರುವುದು ತಿಳಿದ ನಂತರ ಗುಣಮುಖರಾಗಿ ಎಂದು ಶುಭಕೊರಿದ ಎಲ್ಲರಿಗು ಧನ್ಯವಾದಗಳು. ಮುಂದೆ ಎಲ್ಲ ಸರಿ ಹೋಗುತ್ತದೆ. ಆದರೆ ನನ್ನ ಜೊತೆಯಲ್ಲೇ ಇದ್ದ ನನ್ನ 84 ವರ್ಷದ ಅಮ್ಮನಿಗೆ ಕೂಡ ಇಂದು ಕೆಮ್ಮು ಕಾಣಿಸಿಕೊಂಡಿದೆ. ಆಕೆಯನ್ನು ನಾಳೆ ವೈದ್ಯರು ಪರೀಕ್ಷಿಸಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ ಮತ್ತು ಎಲ್ಲರೂ ಸದಾ ಕೈಗಳನ್ನು ತೊಳಿದುಕೊಳ್ಳುತ್ತಿರಿ ಎಂದು ಬರೆದುಕೊಂಡಿದ್ದಾರೆ.

    ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ ಈಗ ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಚೀನಾದಲ್ಲಿ 80,778 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಸುಮಾರು 61 ಮಂದಿಗೆ ಕೊರೊನಾ ತಗುಲಿದ್ದು, ಕರ್ನಾಟಕದಲ್ಲಿ 4 ಮಂದಿ ಕೊರೊನಾ ತುತ್ತಾಗಿರುವುದು ದೃಢಪಟ್ಟಿದೆ. ಇತ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 14 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

    ಇತ್ತ ಇರಾನ್‍ನಲ್ಲಿ ಕೂಡ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. 291 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, 8,042 ಮಂದಿಗೆ ಸೋಂಕು ತಗುಲಿದೆ. ಈ ಮಧ್ಯೆ ಇರಾನ್‍ನಲ್ಲಿ ಇದ್ದ 58 ಭಾರತೀಯರನ್ನು ಭಾರತೀಯ ವಾಯುಪಡೆ ತಾಯ್ನಾಡಿಗೆ ವಾಪಸ್ ಕರೆತಂದಿದೆ. ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್‍ನಲ್ಲಿದ್ದ ಮನೋಹರ್ ಕೃಷ್ಣ ಪ್ರಭು(80) ಮೃತರಾಗಿದ್ದಾರೆ. ಇವರು ವ್ಯಾಟ್‍ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

  • ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಗಳ ವೇಳಾಪಟ್ಟಿಯನ್ನು ಬಹು ಎಚ್ಚರಿಕೆಯಿಂದ ಪ್ಲಾನ್ ಮಾಡಲಾಗುತ್ತದೆ. ಆದರೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮಾತ್ರ ಭಿನ್ನವಾಗಿದೆ. ‘ಮಾಡು ಇಲ್ಲವೇ ಮಡಿ’ ಎಂಬತ್ತಿರುವ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ರಿಸರ್ವ್ ಡೇ ಶೆಡ್ಯೂಲ್ ಮಾಡದಿರುವುದು ಸದ್ಯ ವಿಮರ್ಶೆಗೆ ಕಾರಣವಾಗಿದೆ.

    ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದ 2 ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯ ಆರಂಭವಾಗದೆ ರದ್ದಾಗಿವೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯ ಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ನೇರ ಫೈನಲ್ ಪ್ರವೇಶದ ಅವಕಾಶ ಪಡೆಯಿತು. ಇಂಗ್ಲೆಂಡ್ ತಂಡದ ರಿಸರ್ವ್ ಡೇ ಇಲ್ಲದ ಕಾರಣ ಟೂರ್ನಿಯಿಂದ ನಿರ್ಗಮಿಸಿತು.

    ಕಳೆದ ವಿಶ್ವಕಪ್‍ನಲ್ಲಿ ರನ್ನರ್ ಅಪ್ ಆಗಿದ್ದ ಇಂಗ್ಲೆಂಡ್ ಈ ಬಾರಿ ಸೆಮಿಸ್‍ಗೆ ತನ್ನ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರಿಂದ ಇಂಗ್ಲೆಂಡ್ ತಂಡದ ಕ್ರಿಕೆಟ್ ಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಐಸಿಸಿ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಹಲವರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡುವುದು ಜೀವನದ ಕನಸಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾಕೌಟ್ ಪಂದ್ಯದಲ್ಲಿ ಆಡುವುದು ಆಟಗಾರರಿಗೆ ಹೆಮ್ಮೆಯ ಸಂಗತಿ. ಇಂತಹ ಪಂದ್ಯಗಳಿಗೆ ರಿಸರ್ವ್ ಡೇ ಇಲ್ಲ ಎಂದರೇ ಅರ್ಥವಿರುವುದಿಲ್ಲ ಎಂದು ಐಸಿಸಿ ವಿರುದ್ಧ ಕಿಡಿಕಾರಿದ್ದರು.

    ಮೈಕಲ್ ವಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೆಲ ನೆಟ್ಟಿಗರು ವಾನ್‍ರನ್ನು ಟ್ರೋಲ್ ಮಾಡಿದ್ದಾರೆ. ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಬೌಂಡರಿ ನಿಯಮದ ಅನ್ವಯ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಅಂದು ಬೌಂಡರಿ ನಿಯಮದೊಂದಿಗೆ ಗೆಲುವು ಪಡೆದಿದ್ದ ನಿಮಗೆ ಇಂದು ತಕ್ಕ ಶಾಸ್ತಿ ಆಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

    ನೆಟ್ಟಿಗರ ಟ್ರೋಲ್‍ಗೆ ಪ್ರತಿಕ್ರಿಯೆ ನೀಡಿರುವ ವಾನ್, ನೀವು ಇದನ್ನು ಕರ್ಮ ಎಂದು ಪರಿಗಣಿಸುವುದಾದರೆ, ಇಂಗ್ಲೆಂಡ್ ತಂಡ ಅಂದು ಪಂದ್ಯದಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶನ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಯಾವ ಆಟಗಾರ್ತಿಯೂ ತಮ್ಮ ಕೌಶಲ್ಯಗಳನ್ನು ಪ್ರದರ್ಶನ ಮಾಡಲು ಅವಕಾಶವೇ ಲಭಿಸಿಲ್ಲ. ಏನೇ ಆಗಲಿ ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಸ್ಪಷ್ಟನೆ ನೀಡಿದ್ದಾರೆ.

  • Women’s T20 World Cup: 4 ಬಾರಿ ಸೋಲುಣಿಸಿದ ತಂಡದ ವಿರುದ್ಧವೇ ಭಾರತದ ಸೆಮಿಫೈನಲ್

    Women’s T20 World Cup: 4 ಬಾರಿ ಸೋಲುಣಿಸಿದ ತಂಡದ ವಿರುದ್ಧವೇ ಭಾರತದ ಸೆಮಿಫೈನಲ್

    ಮೆಲ್ಬರ್ನ್: ವೆಸ್ಟ್ ಇಂಡೀಸ್ ವಿರುದ್ಧ 46 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಎಂಟ್ರಿ ಕೊಟ್ಟಿರುವ ಇಂಗ್ಲೆಂಡ್ ತಂಡವನ್ನು ಭಾರತದ ಗುರುವಾರ ಎದುರಿಸಲಿದೆ.

    ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಲಗ್ಗೆ ಇಟ್ಟಿವೆ. ವೆಸ್ಟ್ ಇಂಡೀಸ್ ತಂಡವನ್ನು ಇಂಗ್ಲೆಂಡ್ 46 ರನ್ ಗಳಿಂದ ಹಾಗೂ ದಕ್ಷಿಣ ಆಫ್ರಿಕಾ 17 ರನ್‍ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಇಂಗ್ಲೆಂಡ್ ಸತತ 5ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ 6 ವರ್ಷಗಳ ನಂತರ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಗ್ರೂಪ್ ‘ಎ’ ನಲ್ಲಿ ಆಸ್ಟ್ರೇಲಿಯಾ ಕೂಡ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಮಹಿಳಾ ಟಿ20 ವಿಶ್ವಕಪ್ ಭಾಗವಾಗಿ ಇಂಗ್ಲೆಂಡ್ ಹಾಗೂ ಭಾರತದ ನಡುವೆ ಗುರುವಾರ ಸೆಮಿಫೈನಲ್ ಪಂದ್ಯ ನಡೆಯಲಿದೆ. ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಕಠಿಣ ಸವಾಲು ಎದುರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಭಾರತದ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಆಡಿವ ಕಳೆದ 5 ಪಂದ್ಯದಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ.

    ಭಾರತೀಯ ಮಹಿಳಾ ತಂಡವು ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಆದರೆ ಈವರೆಗೂ ಫೈನಲ್‍ಗೆ ಪ್ರವೇಶಿಸಿಲ್ಲ. ಭಾರತವು 2009, 2010 ಮತ್ತು 2018ರಲ್ಲಿ ಸೆಮಿಫೈನಲ್ ತಲುಪಿತ್ತು. ಆದರೆ ಯಾವುದೇ ಪಂದ್ಯಗಳಲ್ಲಿ 120 ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‍ಗೆ ವಿಶೇಷ ಗಮನ ನೀಡಬೇಕಾಗಿದೆ. ಟೀಂ ಇಂಡಿಯಾ ಲೀಗ್‍ನ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆದರೆ ಯಾವುದೇ ಪಂದ್ಯದಲ್ಲೂ ತಂಡಕ್ಕೆ 150 ಕ್ಕೂ ಅಧಿಕ ರನ್ ದಾಖಲಿಸಿಲ್ಲ.

    ಭಾರತವು ಬಾಂಗ್ಲಾದೇಶ ವಿರುದ್ಧದ 142 ರನ್ ಗಳಿಸಿತ್ತು. ಈ ಟೂರ್ನಿಯಲ್ಲಿ ಭಾರತದ ಅತ್ಯಧಿಕ ಸ್ಕೋರ್ ಇದಾಗಿದೆ. ಭಾರತ 2009ರ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 93 ರನ್ ಗಳಿಸಿತ್ತು.

    ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 132 ರನ್, ಬಾಂಗ್ಲಾದೇಶ ವಿರುದ್ಧ 142 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧ 133 ರನ್ ಗಳಿಸಿತ್ತು. ಕೊನೆಯದಾಗಿ ಶ್ರೀಲಂಕಾ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭಾರತವು 14.4 ಓವರ್ ಗಳಲ್ಲಿ 116 ರನ್ ಪೇರಿಸಿತ್ತು. ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳ ಪೈಕಿ ಭಾರತದ ಬ್ಯಾಟಿಂಗ್ ಸರಾಸರಿಯು ಕೆಟ್ಟದಾಗಿದೆ. ಅಷ್ಟೇ ಅಲ್ಲದೆ ಭಾರತದ ಯಾವುದೇ ಆಟಗಾಗರು ಒಂದೇ ಒಂದು ಅರ್ಧಶತಕ ಗಳಿಸಿಲ್ಲ.

    ಭಾರತೀಯ ಮಹಿಳಾ ತಂಡ ಬೌಲಿಂಗ್ ಪ್ರಾಬಲ್ಯ:
    ಟೀಂ ಇಂಡಿಯಾ ಬೌಲರ್ ಗಳು ವಿಶ್ವಕಪ್‍ನಲ್ಲಿ ಗರಿಷ್ಠ 30 ವಿಕೆಟ್‍ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಆಟಗಾರರು 27 ವಿಕೆಟ್, ಆಸ್ಟ್ರೇಲಿಯಾ ಬೌಲಿಂಗ್ ಪಡೆ 24 ವಿಕೆಟ್ ಮತ್ತು ದಕ್ಷಿಣ ಆಫ್ರಿಕಾ ಬೌಲರ್ ಗಳು 24 ವಿಕೆಟ್ ಕಿತ್ತಿದ್ದಾರೆ. ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 9 ವಿಕೆಟ್ ಪಡೆದಿದ್ದಾರೆ.

    ಮಂದಾನ- ಕೌರ್ ವೈಫಲ್ಯ:
    ಭಾರತ ತಂಡದ ಓಪನರ್ ಸ್ಮೃತಿ ಮಂದಾನ ಹಾಗೂ ನಾಯಕಿ ಹರ್ಮನ್‍ಪ್ರೀತ್ ಕೌರ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಮಂದನಾ ಕೇವಲ 38 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 17 ರನ್ ಆಗಿದೆ. ಹರ್ಮನ್‍ಪ್ರೀತ್ ನಾಲ್ಕು ಪಂದ್ಯಗಳಲ್ಲಿ 26 ರನ್ ಗಳಿಸಿದ್ದಾರೆ. ಅವರು ಶ್ರೀಲಂಕಾ ವಿರುದ್ಧ ಗಳಿಸಿದ 15 ರನ್ ಗಳಿಸಿದ್ದರು. ಮತ್ತೊಂದೆಡೆ ಶೆಫಾಲಿ ವರ್ಮಾ ಅವರು 4 ಪಂದ್ಯಗಳಲ್ಲಿ ತಂಡದ ಪರ ಅತಿ ಹೆಚ್ಚು 161 ರನ್ ಗಳಿಸಿದ್ದಾರೆ. ಜೆಮಿಮಾ ರೊಡ್ರಿಗಸ್ 85 ರನ್ನ ಹಾಗೂ ಆಲ್‍ರೌಂಡರ್ ದೀಪ್ತಿ ಶರ್ಮಾ 83 ರನ್ ದಾಖಲಿಸಿ ತಂಡಕ್ಕೆ ಆಸರೆ ಆಗಿದ್ದರು.

  • 60 ಕೆಜಿ ಕಲ್ಲು ಕಟ್ಟಿ ಬೆಲ್ಜಿಯಂ ಶೆಫರ್ಡ್ ನಾಯಿಯನ್ನು ನದಿಗೆ ಎಸೆದ ಪಾಪಿಗಳು

    60 ಕೆಜಿ ಕಲ್ಲು ಕಟ್ಟಿ ಬೆಲ್ಜಿಯಂ ಶೆಫರ್ಡ್ ನಾಯಿಯನ್ನು ನದಿಗೆ ಎಸೆದ ಪಾಪಿಗಳು

    – ನಾಯಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಮಹಿಳೆ

    ಲಂಡನ್: ಬೆಲ್ಜಿಯಂ ಶೆಫರ್ಡ್ ನಾಯಿಯೊಂದಕ್ಕೆ ಪಾಪಿಗಳು 60 ಕೆಜಿ ಕಲ್ಲು ಕಟ್ಟಿ ನದಿಗೆ ಎಸೆದ ಅಮಾನವೀಯ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

    ಪಾಪಿಗಳು ಇಂಗ್ಲೆಂಡ್‍ನ ಮೂರನೇ ಅತಿದೊಡ್ಡ ನದಿ ಟ್ರೆಂಟ್‍ಗೆ ನಾಯಿಯನ್ನು ಎಸೆದಿದ್ದರು. ಸಾವು ಬದುಕಿನ ಮಧ್ಯೆ ನಾಯಿ ಹೋರಾಟ ನಡೆಸಿತ್ತು. ಇದನ್ನು ನೋಡಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಗೂ ಆಕೆಯ ಪತಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ನಾಯಿಯ ಕಾಲಿಗೆ ಪಾಪಿಗಳು 50ರಿಂದ 60 ಕೆಜಿ ತೂಕದ ಕಲ್ಲು ಕಟ್ಟಿದ್ದರು. ಹೀಗಾಗಿ ನಾಯಿಗೆ ನದಿಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ನಾಯಿಯನ್ನು ರಕ್ಷಣೆ ಮಾಡಿದ ಜೇನ್ ಹಾರ್ಪರ್ ನೀಡಿದ ಪ್ರಕಾರ, ಅವರು ಸೋಮವಾರ ಬೆಳಗ್ಗೆ 8.45ಕ್ಕೆ ನಾಂಟಿಗ್‍ಹ್ಯಾಮ್‍ಶೈರ್ ನಲ್ಲಿ ವಾಕ್ ಮಾಡುತ್ತಿದ್ದರು. ಆಗ ವಿಚಿತ್ರ ಶಬ್ದ ಕೇಳಿಸಿಕೊಂಡ ಜೇನ್ ಸ್ನೇಹಿತ ಯಾರೋ ನದಿಯ ನೀರಿನಲ್ಲಿ ಮುಳುಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದರು. ತಕ್ಷಣವೇ ಜೇನ್ ನದಿಯ ಬಳಿ ಹೋಗಿ ನೋಡಿದಾಗ ನಾಯಿ ಎಂದು ಗೊತ್ತಾಯಿತು. ನೀರಿನಿಂದ ಹೊರಗೆ ತೆಗೆಯದಿದ್ದರೆ ಅದು ಸಾಯುತ್ತದೆ ಎಂದು ಅರಿತ ಜೇನ್ ಸ್ನೇಹಿತ ನೀರಿಗೆ ಹಾರಿ ನಾಯಿಯನ್ನು ಹೊರಗೆ ತರಲು ಪ್ರಯತ್ನಿಸಿದರು. ನಾಯಿಯನ್ನು ದಡಕ್ಕೆ ಎಳೆದ ಜೀನ್, ಅದರ ಕಾಲಿಗೆ ಕಟ್ಟಿದ ಕಲ್ಲನ್ನು ನೋಡಿದರು ಎಂದು ವರದಿಯಾಗಿದೆ.

    ರಕ್ಷಣೆ ಮಾಡಿದ ನಾಯಿಯನ್ನು ತಕ್ಷಣವೇ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ನಾಯಿ ಚೇತರಿಸಿಕೊಳ್ಳುತ್ತಿದೆ. ಇತ್ತ ಪೊಲೀಸರು ನಾಯಿಯನ್ನು ನೀರಿಗೆ ಎಸೆದ ಪಾಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಂಟಿಗ್‍ಹ್ಯಾಮ್‍ಶೈರ್ ಪೊಲೀಸ್ ಅಧಿಕಾರಿ ಪಿಸಿ ಆಡಮ್ ಪೇಸ್, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾಯಿಯನ್ನು ಸ್ನೇಹಿತರಿಬ್ಬರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ನಾಯಿಯ ಸ್ಥಿತಿ ಗಂಭೀರವಾಗಿದೆ. ಆದಾಗ್ಯೂ ಅದು ಸ್ವಲ್ಪ ಆಹಾರವನ್ನು ತಿನ್ನುವ ಮೂಲಕ ಬದುಕುತ್ತದೆ ಎನ್ನುವ ವಿಶ್ವಾಸವನ್ನು ತೋರಿಸಿದೆ ಎಂದು ತಿಳಿಸಿದ್ದಾರೆ.

  • ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಸೆಂಚೂರಿಯನ್: ಇಂಗ್ಲೆಂಡ್ ತಂಡದ ಆಲ್‍ರೌಂಡರ್, ಉಪನಾಯಕ ಬೆನ್ ಸ್ಟೋಕ್ಸ್ ಬಿರುಸಿನಿಂದ ಮಾತನಾಡುವುದು ಸ್ವಲ್ಪ ಹೆಚ್ಚು. ಈ ಹಿಂದೆಯೂ ಕೂಡ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕೂಡ ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೆಲ ಸಮಯ ದೂರ ಉಳಿದಿದ್ದರು. ಮೈದಾನದಲ್ಲೂ ಎದುರಾಳಿ ಆಟಗಾರನನ್ನು ಸ್ಲೆಡ್ಜಿಂಗ್ ಮಾಡುವುದರಲ್ಲೂ ಸ್ಟೋಕ್ಸ್ ಮುಂದು. ಈಗ ಬ್ರಾಡ್ ಜೊತೆ ವಾಗ್ವಾದ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಾವ ಕಾರಣದಿಂದ ಇಬ್ಬರು ಆಟಗಾರರು ವಾಗ್ವಾದಕ್ಕೆ ಮುಂದಾಗಿದ್ದಾರೆ ಎಂಬುವುದು ಮಾತ್ರ ಈವರೆಗೂ ಸ್ವಷ್ಟವಾಗಿಲ್ಲ. ಆದರೆ ತಂಡದ ಆಟಗಾರರ ನಡುವೆಯೇ ಇಬ್ಬರು ಆಟಗಾರರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಜೋ ರೂಟ್, ಜೋಸ್ ಬಟ್ಲರ್ ನಡುವೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3ನೇ ದಿನದಾಟದ ಬ್ರೇಕ್ ವೇಳೆ ಘಟನೆ ನಡೆದಿದೆ. ಸ್ಟೋಕ್ಸ್‍ಗೆ ಬ್ರಾಡ್ ಏನೋ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೂ ಮುನ್ನ ಸ್ಟೋಕ್ಸ್ ಏನೋ ಅಂದ ಕಾರಣ ಬ್ರಾಡ್ ವಾಗ್ವಾದಕ್ಕಿಳಿದರು ಎನ್ನಲಾಗಿದೆ. ಈ ಘಟನೆಯೊಂದಿಗೆ ಇಂಗ್ಲೆಂಡ್ ತಂಡದ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಆಟಗಾರರು ಮೈದಾನದಲ್ಲೇ ವಾಗ್ವಾದಕ್ಕೆ ಇಳಿದಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಅತೃಪ್ತಿ ಇದ್ದರೆ ಆಟಗಾರರು ಕುಳಿತು ಬಗೆಹರಿಸಿಕೊಳ್ಳಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಕುರಿತು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಮುಂಬೈ: ಬಿಸಿಸಿಐ ಮುಂಬರುವ ವರ್ಷದಲ್ಲಿ ಏಕದಿನ ಸೂಪರ್ ಸೀರಿಸ್ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ 4 ದೇಶಗಳ ನಡುವೆ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ‘ಬಿಗ್ ತ್ರೀ’ ಮಂಡಳಿಗಳು ಐಸಿಸಿ ವಿರುದ್ಧವೇ ತೊಡೆ ತಟ್ಟಲು ಮುಂದಾಗುತ್ತಿದೆ.

    ಐಸಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಾರ್ಷಿಕ ಒಂದು ಸರಣಿಯನ್ನು ವಿಶ್ವಕಪ್ ಮಾದರಿಯಲ್ಲಿ ನಡೆಸಲು ಸಿದ್ಧತೆ ನಡೆಸಿತ್ತು. ಆ ಮೂಲಕ ವಾರ್ಷಿಕವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾಪಕ್ಕೆ ವಿರೋಧವಾಗಿ 4 ದೇಶಗಳ ನಡುವೆ ಸೂಪರ್ ಸೀರಿಸ್ ನಡೆಸಲು ಮುಂದಾಗುತ್ತಿದೆ.

    ಯಾಕೆ ಈ ಪ್ರಸ್ತಾಪ?
    ಆದಾಯ ಹಂಚಿಕೆ ವಿಚಾರದಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಕಿತ್ತಾಟಗಳು ನಡೆಯುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಹೆಚ್ಚು ಆದಾಯ ತಂದುಕೊಡುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಐಸಿಸಿಯ ಆದಾಯದಲ್ಲಿ ತಮಗೆ ಹೆಚ್ಚಿನ ಪಾಲನ್ನು ನೀಡುವಂತೆ ಈ ಹಿಂದೆಯೇ ಈ ಮಂಡಳಿಗಳು ಪ್ರಸ್ತಾಪ ಮಾಡಿದ್ದವು. ಬಿಗ್ ತ್ರೀ ಕ್ರಿಕೆಟ್ ರಾಷ್ಟ್ರಗಳ ಈ ಬೇಡಿಕೆಯನ್ನು ನಿರಾಕರಿಸಿದ್ದ ಐಸಿಸಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಇತರೇ ರಾಷ್ಟ್ರಗಳಿಗೂ ಕೂಡ ಆರ್ಥಿಕವಾಗಿ ಬೆಂಬಲ ನೀಡಬೇಕಾದ ಕಾರಣ ಹೆಚ್ಚಿನ ಪಾಲನ್ನು ನೀಡಲಾಗುವುದಿಲ್ಲ ಎಂದಿತ್ತು.

    ಐಸಿಸಿ ತನ್ನ ಹೆಚ್ಚಿನ ಆದಾಯವನ್ನು ಕ್ರಿಕೆಟ್ ಸರಣಿಯ ಟೆಲಿವಿಷನ್ ಪ್ರಸಾರ ಹಕ್ಕುಗಳ ಮಾರಾಟದ ಮೂಲಕ ಪಡೆಯುತ್ತದೆ. ಉದಾಹರಣೆ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಐಸಿಸಿ ಪ್ರತಿವರ್ಷ ವಿಶ್ವಕಪ್ ಮಾದರಿಯ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು.

    ಐಸಿಸಿಯ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಸದ್ಯ ಸೂಪರ್ ಸೀರಿಸ್ ಆಯೋಜನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ಟೂರ್ನಿಯಲ್ಲಿ ಆಡಲು ಇಂಗ್ಲೆಂಡ್ ಈಗಾಗಲೇ ಸಮ್ಮತಿ ಸೂಚಿಸಿದೆ. ಇತ್ತ ಆಸೀಸ್ ಕೂಡ ಒಲವು ತೋರಿದ್ದು, ಆ ಮೂಲಕ ‘ಬಿಗ್ ತ್ರೀ’ ಎಂದೇ ಖ್ಯಾತಿ ಪಡೆದಿರುವ ಈ ಮೂರು ಸಂಸ್ಥೆಗಳು ಐಸಿಸಿ ವಿರುದ್ಧವೇ ಒತ್ತಡವನ್ನು ಹಾಕುತ್ತಿವೆ.

    ಐಸಿಸಿಯ ಈಗಿನ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಸಂಸ್ಥೆ ದ್ವಿಪಕ್ಷೀಯ ಟೂರ್ನಿಗಳನ್ನು ಆಯೋಜಿಸಲು ಮಾತ್ರ ಅನುಮತಿಯನ್ನು ಹೊಂದಿವೆ. ಈಗ ನಿಯಮಗಳ ಬದಲಾವಣೆಗೂ ಐಸಿಸಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಐಸಿಸಿಯ ವಾರ್ಷಿಕ ಕ್ರಿಕೆಟ್ ಟೂರ್ನಿಯ ಪ್ಲಾನ್‍ಗೆ ಅಪಸ್ವರವೂ ಕೇಳಿ ಬಂದಿದ್ದು, ಐಸಿಸಿ ಇಂತಹ ಟೂರ್ನಿ ನಡೆಸುವುದರಿಂದ ಆಟಗಾರರ ಮೇಲಿನ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲು ಕೂಡ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವಾಗಿದೆ. ಬಿಸಿಸಿಐ ಅಂದುಕೊಂಡಂತೆ ನಡೆದರೆ 2021 ರಲ್ಲಿ ಸೂಪರ್ ಸೀರಿಸ್ ನಡೆಯಲಿದ್ದು, ಭಾರತದಲ್ಲೇ ಮೊದಲ ಟೂರ್ನಿ ನಡೆಯಲಿದೆ.

    ಬಿಸಿಸಿಐ, ಐಸಿಸಿ ತಿಕ್ಕಾಟ ಯಾಕೆ?
    ಬಿಸಿಸಿಐ ಹಾಗೂ ಐಸಿಸಿ ನಡುವಿನ ತಿಕ್ಕಾಟ ಹಿಂದಿನಿಂದಲೇ ಜೋರಾಗಿದ್ದು, ಈ ಹಿಂದೆ ಆದಾಯದ ಹೆಚ್ಚುವರಿ ಪಾಲನ್ನು ನೀಡದಿದ್ದರೆ ಐಸಿಸಿ ಮಂಡಳಿಯಿಂದಲೇ ಹೊರ ಬರುವ ಎಚ್ಚರಿಕೆಯನ್ನು ನೀಡಿತ್ತು. ಈ ಸೂಪರ್ ಸೀರಿಸ್ ಹಿಂದಿನ ಪ್ರಮುಖ ವ್ಯಕ್ತಿ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಆಗಿದ್ದು, ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಲು ಬೆಂಬಲವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ, ಶ್ರೀನಿವಾಸನ್ ಅವರ ಪ್ರಸ್ತಾಪವನ್ನು ಚಾಲ್ತಿಗೆ ತರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿದೆ.

    ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಆರಂಭದಲ್ಲೇ ಐಸಿಸಿ ಆದಾಯ ಹಂಚಿಕೆ ವಿರುದ್ಧ ಅಪಸ್ವರ ಎತ್ತಿದ್ದರು. ಅಲ್ಲದೇ ಬಿಸಿಸಿಐಗೆ ಹೆಚ್ಚಿನ ಆದಾಯವನ್ನು ತರುವುದು ತಮ್ಮ ಪ್ರಮುಖ ಗುರಿ ಎಂದಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಶ್ರೀನಿವಾಸನ್ ಅವರು ಕೂಡ ಮಂಡಳಿಗೆ ಹೆಚ್ಚಿನ ಆರ್ಥಿಕತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದರು. ಬಿಸಿಸಿಐ ವಿಶ್ವ ಕ್ರಿಕೆಟ್‍ಗೆ ಸೇರುವ ಆದಾಯ ಶೇ.75 ರಿಂದ 80ರಷ್ಟನ್ನು ನೀಡುತ್ತಿದೆ.

    ವಿಶೇಷ ಎಂದರೆ ಹಲವು ಕ್ರಿಕೆಟ್ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸತತ 3 ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಷ್ಟವನ್ನು ಎದುರಿಸುತ್ತಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ಆರ್ಥಿಕ ಸಮಸ್ಯೆಗೆ ಸಿಲುಕಿ ಆಟಗಾರರ ವೇತನವನ್ನು ಪಾವತಿ ಮಾಡಲು ಸಮಸ್ಯೆ ಎದುರಿಸಿತ್ತು. ಐರ್ಲೆಂಡ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದ ಆಯೋಜನೆಯ ಅವಕಾಶವನ್ನು ಕೈ ಚೆಲ್ಲಿತ್ತು. ಉಳಿದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಅದರ ಭವಿಷ್ಯವೇ ಡೋಲಾಯಮಾನವಾಗಿದೆ.

    ಬಿಸಿಸಿಐ ನಿರ್ಧಾರವೇಕೆ?
    ಈಗಾಗಲೇ ಬಿಸಿಸಿಐ ಅಧ್ಯಕ್ಷರು ಮಂಡಳಿಗೆ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸೀರೀಸ್ ಆಯೋಜಿಸಿದರೆ ಟೂರ್ನಿಯ ಪ್ರಸಾರ ಹಕ್ಕುಗಳು ಸಹಜವಾಗಿಯೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ಆದಾಯ ಹೆಚ್ಚಳವಾಗಲಿದೆ. ಅಲ್ಲದೇ ಸೂಪರ್ ಸೀರೀಸ್ ಟೂರ್ನಿ ನಡೆಯುವುದರಿಂದ ಐಸಿಸಿಯ ಮಿನಿ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಬಹುದಾಗಿದೆ.