Tag: england

  • ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಮ್ಯಾಂಚೆಸ್ಟರ್: ಚೀನಿ ವೈರಸ್‌ ಕಷ್ಟದ ನಡುವೆಯೂ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಡೊಮಿನಿಕ್ ಸಿಬ್ಲಿ ಪಂದ್ಯದ ನಡುವೆ ಚೆಂಡಿಗೆ ಸಲೈವಾ (ಎಂಜಲು) ಉಜ್ಜಿದ್ದಾರೆ. ಈ ಮೂಲಕ ಐಸಿಸಿ ಜಾರಿ ಮಾಡಿದ್ದ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಕ್ರಿಕೆಟ್‍ನಲ್ಲಿ ಬೌಲರ್ ಕೈಗೆ ಚೆಂಡು ನೀಡುವ ಮುನ್ನ ಆಟಗಾರ ಚೆಂಡಿಗೆ ಎಂಜುಲು ಉಜ್ಜಿ ಚೆಂಡಿನ ಶೈನ್ ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಐಸಿಸಿ ಇದಕ್ಕೆ ನಿರ್ಬಂಧ ಹೇರಿದ್ದು, ಆಟಗಾರ 2 ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿತ್ತು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ಡೊಮಿನಿಕ್ ಸಿಬ್ಲಿ ಹಲವು ದಿನಗಳ ಅಭ್ಯಾಸದಂತೆ ಚೆಂಡು ಕೈಗೆ ಬರುತ್ತಿದಂತೆ ಎಂಜಲು ಉಜ್ಜಿ ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನ 42ನೇ ಓವರಿನಲ್ಲಿ ಘಟನೆ ನಡೆದಿದ್ದು, ಆಫ್ ಸ್ಪಿನ್ನರ್ ಡೊಮ್ ಬೆಸ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಡೊಮಿನಿಕ್ ಸಿಬ್ಲಿ ಚೆಂಡಿಗೆ ಎಂಜಲು ಸವರಿಸಿದ್ದರು. ಕೂಡಲೇ ತಮ್ಮ ತಪ್ಪನ್ನು ಅರಿತ ಸಿಬ್ಲೆ ಫೀಲ್ಡ್ ಅಂಪೈರ್ ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಪೈರ್ ಚೆಂಡನ್ನು ಸ್ಯಾನಿಟೈಸ್ ಮಾಡಿ ಪಂದ್ಯವನ್ನು ಪುನರ್ ಆರಂಭಿಸಿದ್ದರು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಪಂದ್ಯಗಳ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸಲಾಗುತ್ತಿದೆ. ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್ ಆರಂಭ ಮಾಡುವ ಅವಕಾಶ ಪಡೆದು 9 ವಿಕೆಟ್‌ ಕಳೆದುಕೊಂಡು 469 ರನ್‌ ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತ್ತು. ಬಳಿಕ ಮೊದಲ ಇನ್ನಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾನುವಾರ 287 ರನ್‍ಗಳಿಗೆ ಆಲೌಟ್ ಆಗಿತ್ತು. 182 ರನ್ ಮುನ್ನಡೆ ಪಡೆದ ಇಂಗ್ಲೆಂಡ್ ಭಾನುವಾರ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 219 ರನ್‍ಗಳಿಗೆ ಮುನ್ನಡೆಯನ್ನು ಹೆಚ್ಚಿಸಿದೆ. ಉಳಿದಂತೆ ಸೌತಾಪ್ಟಂನ್‍ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ವೆಸ್ಟ್ ಇಂಡೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.

  • ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಖಾತೆ ತೆರೆದ ವೆಸ್ಟ್ ಇಂಡೀಸ್- ಭಾರತ ನಂ.1

    ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಖಾತೆ ತೆರೆದ ವೆಸ್ಟ್ ಇಂಡೀಸ್- ಭಾರತ ನಂ.1

    ಸೌತಾಪ್ಟಂನ್: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಕೊನೆಗೂ ವೆಸ್ಟ್ ಇಂಡೀಸ್ ಖಾತೆ ತೆರೆದಿದೆ. ಸೌತಾಪ್ಟಂನ್‍ನಲ್ಲಿ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ 4 ವಿಕೆಟ್‍ಗಳ ಗೆಲುವು ಪಡೆದಿದ್ದು, ಆ ಮೂಲಕ 40 ಅಂಕಗಳನ್ನು ಪಡೆದುಕೊಂಡಿದೆ.

    ಆಗಸ್ಟ್ 1, 2019ರಿಂದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿ 9 ದೇಶಗಳು ಕಣದಲ್ಲಿವೆ. ಪ್ರತಿ ತಂಡ ತವರಿನಲ್ಲಿ ಮತ್ತು ವಿದೇಶಿ ನೆಲದಲ್ಲಿ 3 ಟೆಸ್ಟ್ ಟೂರ್ನಿಗಳನ್ನು ಆಡಲಿವೆ.

    27 ಟೆಸ್ಟ್ ಟೂರ್ನಿಗಳಲ್ಲಿ 71 ಟೆಸ್ಟ್ ಪಂದ್ಯಗಳು ನಡೆಯಲಿದ್ದು, 2 ವರ್ಷಗಳ ಅವಧಿಯಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ 2 ಸ್ಥಾನ ಪಡೆದಿರುವ ತಂಡಗಳ ನಡುವೆ 2021 ಜೂನ್ ನಲ್ಲಿ ಫೈನಲ್ ನಡೆಯಲಿದೆ. ಫೈನಲ್ ಪಂದ್ಯ ಗೆದ್ದ ತಂಡ ಟೆಸ್ಟ್ ಚಾಂಪಿಯನ್ ಆಗಿ ನಿಲ್ಲಲಿದೆ.

    ಸದ್ಯ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದಿರುವ ಟೀಂ ಇಂಡಿಯಾ 9 ಟೆಸ್ಟ್ ಪಂದ್ಯಗಳಿಂದ 360 ಅಂಕಗಳಿಸಿದೆ. 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ 296 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 7 ಟೆಸ್ಟ್ ಪಂದ್ಯಗಳಿಂದ 180 ಅಂಕಗಳನ್ನು ಗಳಿಸಿ 3ನೇ ಸ್ಥಾನ ಪಡೆದಿದೆ. ಉಳಿದಂತೆ 2ನೇ ಟೆಸ್ಟ್ ಟೂರ್ನಿ ಆಡುತ್ತಿರುವ ವೆಸ್ಟ್ ಇಂಡೀಸ್ ಮೊದಲ ಜಯದೊಂದಿಗೆ 40 ಅಂಕ ಪಡೆದು ಖಾತೆ ತೆರೆದಿದೆ. ಇಂಗ್ಲೆಂಡ್ ತಂಡ 146 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನಲ್ಲಿ ಜುಲೈ 16 ರಿಂದ ಆರಂಭವಾಗಲಿದೆ.

  • ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಸೌತಾಂಪ್ಟನ್: ಬರೋಬ್ಬರು 117 ದಿನಗಳ ಬಳಿಕ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದ್ದು, ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಮಳೆಯ ಅಡೆತಡೆಯ ನಡುವೆಯೂ ಸಾಗುತ್ತಿದೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಮೂಲದ ನಾಲ್ವರು ವೈದ್ಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ.

    ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದ ವೈದ್ಯರ ಹೆಸರಗಳನ್ನು ತಮ್ಮ ಜೆರ್ಸಿ ಮೇಲೆ ಮುದ್ರಿಸಿ ಕಣಕ್ಕೆ ಇಳಿಯುವ ಮೂಲಕ ವಿಶೇಷ ಗೌರವ ಅರ್ಪಿಸಿದೆ. ‘ರೈಸ್ ದಿ ಬ್ಯಾಟ್’ ಅಭಿಯಾನಕ್ಕೆ ಡಾ. ವಿಕಾಸ್ ಕುಮಾರ್ ಅವರು ನಾಮನಿರ್ದೇಶನ ಮಾಡಲಾಗಿದೆ. ವಿಕಾಸ್ ಕುಮಾರ್ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‍ಎಚ್‍ಎಸ್) ಟಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.

    35 ವರ್ಷದ ವಿಕಾಸ್ ಅವರ ಹೆಸರು ಮುದ್ರಿಸಿರುವ ಜೆರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಧರಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕಾಸ್ ಅವರು, ಸ್ಟೋಕ್ಸ್ ಹಾಗೂ ಇತರೇ ಆಟಗಾರರು ವೈದ್ಯರ ಸಂದೇಶದ ಜೆರ್ಸಿ ಧರಿಸಿದ್ದನ್ನು ಕಂಡಾಗ ಸಂತಸವಾಗಿತ್ತು. ಈ ಸಂದರ್ಭ ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿದೆ. ಎನ್‍ಎಚ್‍ಎಸ್ ಸಿಬ್ಬಂದಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ಗೌರವ ಭಾರತದ ವೈದ್ಯ ಸ್ನೇಹಿತರು ಸೇರಿದಂತೆ ಎಲ್ಲ ಸಿಬ್ಬಂದಿಗೂ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ವಿಕಾಸ್ ಕುಮಾರ್ ದೆಹಲಿಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಮೌಲಾನಾ ಅಜಾದ್ ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದರು. 2019ರಲ್ಲಿ ಇಂಗ್ಲೆಂಡ್‍ಗೆ ಕುಟುಂಬದೊಂದಿಗೆ ತೆರಳಿದ್ದ ವಿಕಾಶ್ ಕುಮಾರ್ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

    ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಡಿಯೋ ಸಂದೇಶದ ಮೂಲಕ ವೈದ್ಯ ವಿಕಾಸ್ ಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಸ್ ಕುಮಾರ್ ಅವರೊಂದಿಗೆ ಭಾರತದ ಮೂಲದ ಡಾ.ಜಮಾಸ್ಲ್ ಕೈಕುಸ್ರೂ ದಸ್ತೂರ್, ಡಾ. ಹರಿಕೃಷ್ಣ ಶಾ, ಕ್ರಿಶನ್ ಅಘಾದಾ ಅವರ ಹೆಸರುಗಳನ್ನು ಆಟಗಾರರ ಜೆರ್ಸಿ ಮೇಲೆ ಮುದ್ರಿಸಿ ಗೌರವ ಸೂಚಿಸಲಾಗಿತ್ತು.

  • ಪಾಕ್ ಕ್ರಿಕೆಟ್‍ನಲ್ಲಿ ಕೊರೊನಾ ಕೋಲಾಹಲ- ಮತ್ತೆ 7 ಕ್ರಿಕೆಟಿಗರಿಗೆ ಪಾಸಿಟಿವ್

    ಪಾಕ್ ಕ್ರಿಕೆಟ್‍ನಲ್ಲಿ ಕೊರೊನಾ ಕೋಲಾಹಲ- ಮತ್ತೆ 7 ಕ್ರಿಕೆಟಿಗರಿಗೆ ಪಾಸಿಟಿವ್

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ ಸುದೀರ್ಘ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊರೊನಾ ವೈರಸ್ ಶಾಕ್ ನೀಡಿದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‍ನಲ್ಲಿ ಮೂರು ಟೆಸ್ಟ್, ಮೂರು ಟಿ20 ಪಂದ್ಯಗಳನ್ನು ಪಾಕಿಸ್ತಾನ ಆಡಬೇಕಿದೆ. ಈಗಾಗಲೇ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ 29 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಅಲ್ಲದೇ ಕೊರೊನಾ ಕಾರಣದಿಂದ ಒಂದು ತಿಂಗಳ ಮುನ್ನವೇ ಇಂಗ್ಲೆಂಡ್‍ಗೆ ಆಟಗಾರರನ್ನು ಕಳುಹಿಸಿಕೊಡುವ ಚಿಂತನೆಯನ್ನು ನಡೆಸಿತ್ತು.

    ಆಟಗಾರರನ್ನು ಇಂಗ್ಲೆಂಡ್‍ಗೆ ಕಳುಹಿಸುವ ನಿಟ್ಟಿನಲ್ಲಿ ಆಟಗಾರರಿಗೆ ಕೊರೊನಾ ಟೆಸ್ಟ್ ಮಾಡಿತ್ತು. ಈ ಟೆಸ್ಟ್ ನಲ್ಲಿ ಆಟಗಾರರಾದ ಶದಾಬ್ ಖಾನ್, ಹೈದರ್ ಅಲಿ, ಹ್ಯಾರಿಸ್ ರೌಫ್‍ಗೆ ನಿನ್ನೆಯಷ್ಟೇ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ 7 ಆಟಗಾರರಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವುದನ್ನು ಪಿಸಿಬಿ ಖಚಿತ ಪಡಿಸಿದೆ.

    ಇಂದಿನ ವರದಿಯ ಅನ್ವಯ ಫಖರ್ ಜಮಾನ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್ ಮೊಹಮ್ಮದ್ ರಿಜ್ವಾನ್ ಮತ್ತು ವಹಾಬ್ ರಿಯಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಪಾಕಿಸ್ತಾನದ 10 ಕ್ರಿಕೆಟ್ ಆಟಗಾರಿಗೆ ಸೋಂಕು ಹರಡಿದೆ.

    ಪಿಸಿಬಿ ನೀಡಿರುವ ಮಾಹಿತಿಯ ಅನ್ವಯ ಇಂಗ್ಲೆಂಡ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದ 27 ಆಟಗಾರರು ಹಾಗೂ ಸಿಬ್ಬಂದಿಗೆ ಸೇರಿ 35 ಮಂದಿಗೆ ಕೊರೊನಾ ಟೆಸ್ಟ್ ನಡೆಸಿತ್ತು. ಸದ್ಯ 10 ಮಂದಿಗೆ ಕೊರೊನಾ ದೃಢಪಟ್ಟಿರುವುದರಿಂದ ಬಹುನಿರೀಕ್ಷಿತ ಇಂಗ್ಲೆಂಡ್ ಟೂರ್ನಿ ಮೇಲೆ ಕೊರೊನಾ ಕರಿ ನೆರಳು ಆವರಿಸಿದೆ. ಪಾಕ್ ಹಾಗೂ ಇಂಗ್ಲೆಂಡ್ ವಿರುದ್ಧ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರರಾದ ತೌಫಿಖ್ ಉಮರ್, ಅಫ್ರಿದಿ ಕೊರೊನಾ ಸೋಂಕಿಗೆ ಒಳಗಾಗಿದ್ದರು.

  • ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಲಂಡನ್: ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಎದುರಿಸುವುದು ಕಷ್ಟ ಎಂದು ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಹೆಚ್ಚಿನ ಸಮಯವನ್ನು ಇಂಗ್ಲೆಂಡ್‍ನಲ್ಲಿ ಕಳೆಯುತ್ತಾರೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ತರಬೇತಿ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಜೊತೆಯೂ ಅರ್ಜುನ್ ಹಲವು ಬಾರಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

    ತರಬೇತಿ ವೇಳೆ ಇಂಗ್ಲೆಂಡ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್‍ರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಸದ್ಯ ಅರ್ಜನ್ ಬೌಲಿಂಗ್ ಕುರಿತು ಡೇನಿಯಲ್ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದು, ಅರ್ಜುನ್ ನಾನು ಉತ್ತಮ ಸ್ನೇಹಿತರು. ಲಾಡ್ರ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅರ್ಜುನ್ ಬರುತ್ತಿದ್ದರು. ಆಗ ಅರ್ಜುನ್ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದರೆ ಎದುರಿಸಲು ಭಯವಾಗುತ್ತಿತ್ತು. ನಾನು ಎಸೆಯುವ ಬೌನ್ಸರ್ ಗಳು ನಿಮ್ಮ ತಲೆಗೆ ಬಡಿಯುತ್ತವೆ ಎಂದು ಅರ್ಜುನ್ ಹೇಳುತ್ತಿದ್ದರು. ಅವರ ವೇಗದ ಬೌಲಿಂಗ್ ಎದುರಿಸಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ಡೇನಿಯಲ್ ಹೇಳಿದ್ದಾರೆ.

     

    View this post on Instagram

     

    Great to be back in Melbourne again ???? ????

    A post shared by Danielle Wyatt (@danniwyatt28) on

    ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ನೋಡುವ ಅವಕಾಶವಿದೆ. ಅಲ್ಲದೇ ನನಗೆ ಅರ್ಜುನ್ ಅವರ ತಾಯಿ ಅಂಜಲಿರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಸಚಿನ್ ದಂಪತಿ ಇಂಗ್ಲೆಂಡ್ ಬಂದರೆ ತಪ್ಪದೇ ಭೇಟಿ ಮಾಡುತ್ತೇನೆ ಎಂದು ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ. 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಇದುವರೆಗೂ 74 ಏಕದಿನ, 109 ಟಿ20 ಪಂದ್ಯಗಳನ್ನು ಡೇನಿಯಲ್ ವ್ಯಾಟ್ ಆಡಿದ್ದಾರೆ.

     

    View this post on Instagram

     

    A post shared by Arjun Tendulkar (@arjuntendulkar24) on

  • ಕೊರೊನಾ ವೈರಸ್‌ – ರೋಗಿಯ ಜೀವ ಉಳಿಸಬಲ್ಲ ಮೊದಲ ಔಷಧಿ ಲಭ್ಯ

    ಕೊರೊನಾ ವೈರಸ್‌ – ರೋಗಿಯ ಜೀವ ಉಳಿಸಬಲ್ಲ ಮೊದಲ ಔಷಧಿ ಲಭ್ಯ

    ಲಂಡನ್‌: ಸದ್ಯಕ್ಕೆ ಕೊರೊನಾ ವೈರಸ್‌ಗೆ ಔಷಧಿ ಲಭ್ಯವಿಲ್ಲ. ವಿಶ್ವದ ವಿವಿಧ ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ. ಆದರೆ ಇಂಗ್ಲೆಂಡ್‌ ಸಂಶೋಧಕರು ಒಂದು ಡ್ರಗ್ಸ್‌ ನೀಡುವ ಮೂಲಕ ಕೋವಿಡ್‌ 19 ಗುಣಪಡಿಸಬಹುದು ಎಂದು ಹೇಳಿದ್ದಾರೆ.

    ಹೌದು. ವಿಶ್ವದೆಲ್ಲೆಡೆ ಕಡಿಮೆ ಬೆಲೆಗೆ ಸಿಗುವ ʼಡೆಕ್ಸಮೆಥಾಸೊನ್ʼ(Dexamethasone) ನೀಡಿದ್ರೆ ಕೋವಿಡ್‌ 19 ನಿಂದ ಬಳಲುತ್ತಿರುವ ರೋಗಿ ಗುಣವಾಗುವ ಸಾಧ್ಯತೆ ಹೆಚ್ಚು  ಎಂದು ಸಂಶೋಧಕರು ತಿಳಿಸಿದ್ದಾರೆ.

    ಡೆಕ್ಸಮೆಥಾಸೊನ್ ನೀಡಿದ್ದರಿಂದ ಇಂಗ್ಲೆಂಡ್‌ನಲ್ಲಿ ಸಾವಿನ ದವಡೆಯಲ್ಲಿದ್ದ ಸುಮಾರು 5 ಸಾವಿರ ರೋಗಿಗಳನ್ನು ಪಾರುಮಾಡಲಾಗಿದೆ. 20 ರೋಗಿಗಳ ಪೈಕಿ 19 ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಇತರೇ ರೋಗಗಳಿಂದಾಗಿ ಹೈ ರಿಸ್ಕ್‌ ನಲ್ಲಿರುವ ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

    ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ತಂಡವೊಂದು ಡೆಕ್ಸಮೆಥಾಸೊನ್ ನೀಡಿದ 2 ಸಾವಿರ ಆಸ್ಪತ್ರೆಯ ರೋಗಿಗಳು ಜೊತೆ ಈ ಔಷಧಿ ನೀಡದ 4 ಸಾವಿರ ರೋಗಿಗಳನ್ನು ಹೋಲಿಕೆ ಮಾಡಿ ಅಧ್ಯಯನ ನಡೆಸಿದೆ.

    ಈ ತಂಡದಲ್ಲಿದ್ದ ಪ್ರೊ. ಪೀಟರ್‌ ಹಾರ್ಬಿ ಪ್ರತಿಕ್ರಿಯಿಸಿ, ಸದ್ಯ ಸಾವನ್ನು ತಪ್ಪಿಸಲು ಇರುವ ಏಕೈ ಔಷಧಿ ಇದು. ಈ ಡ್ರಗ್ಸ್‌ ಸಾವಿನ ಪ್ರಮಾಣವನ್ನು ಭಾರೀ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ. ಕೊರೊನಾ ವೈರಸ್‌ ಲಸಿಕೆ ವಿಚಾರದಲ್ಲಿ ಇದೊಂದು ಮಹತ್ವದ ತಿರುವ ನೀಡಬಲ್ಲ ವಿಚಾರ ಎಂದು ತಿಳಿಸಿದ್ದಾರೆ.

    ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ಔಷಧಿಯಿಂದ ಖಂಡಿತವಾಗಿಯೂ ಲಾಭವಿದೆ. ಒಂದು ಡೆಕ್ಸಮೆಥಾಸೊನ್ ಗೆ 5 ಪೌಂಡ್‌(481. ರೂ.) ಖರ್ಚಾಗಬಹುದು. ಹೀಗಾಗಿ 10 ದಿನಗಳಿಗೆ 35 ಪೌಂಡ್‌(3,400 ರೂ.) ಆಗಬಹುದು. ಈ ಡ್ರಗ್ಸ್‌ ವಿಶ್ವದೆಲ್ಲೆಡೆ ಲಭ್ಯವಿದೆ. ವಿಶೇಷವಾಗಿ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

    1960ರಿಂದ ಡೆಕ್ಸಮೆಥಾಸೊನ್ ಔಷಧಿಯನ್ನು ಬಳಕೆ ಮಾಡಲಾಗುತ್ತದೆ. ವಿಶೇಷವಾಗಿ ಅಸ್ತಮಾ ಸೇರಿದಂತೆ ಇತರೇ ರೋಗಗಳಿಗೆ ಇದನ್ನು ನೀಡಲಾಗುತ್ತಿದೆ. ಕಳೆದ ಮಾರ್ಚ್‌ ತಿಂಗಳಿನಿಂದಲೇ ಈ ಔಷಧಿಯನ್ನು ಇಂಗ್ಲೆಂಡಿನಲ್ಲಿ ನೀಡಲಾಗುತ್ತಿದೆ.

    ಈಗಾಗಲೇ ಕೋವಿಡ್‌ 19ಗೆ ಮಲೇರಿಯಾ ಜ್ವರಕ್ಕೆ ನೀಡುವ ಹ್ರೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಯನ್ನು ನೀಡಲಾಗುತ್ತಿದೆ. ಬಹಳಷ್ಟು ಕಡೆ ಇದು ಯಶಸ್ವಿಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಳಕೆ ಅನುಮೋದನೆ ನೀಡಿದೆ. ಆದರೆ ಈ ಮಾತ್ರೆ ಸೇವನೆಯಿಂದ ಹೃದಯ ಸಮಸ್ಯೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

  • ಸಚಿನ್‍ರ 100ನೇ ‘ಶತಕ’ ತಪ್ಪಿಸಿದ್ದಕ್ಕೆ ಕೊಲೆ ಬೆದರಿಕೆ ಕರೆ ಬಂದಿದ್ವು: ಟಿಮ್ ಬ್ರೆಸ್ನನ್

    ಸಚಿನ್‍ರ 100ನೇ ‘ಶತಕ’ ತಪ್ಪಿಸಿದ್ದಕ್ಕೆ ಕೊಲೆ ಬೆದರಿಕೆ ಕರೆ ಬಂದಿದ್ವು: ಟಿಮ್ ಬ್ರೆಸ್ನನ್

    ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿದ್ದಕ್ಕೆ ಅವರ ಅಭಿಮಾನಿಗಳು ನನಗೆ ಹಾಗೂ ಅಂಪೈರ್ ರಾಡ್ ಟಕ್ಕರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎಂದು ಇಂಗ್ಲೆಂಡ್‍ನ ಮಾಜಿ ವೇಗದ ಬೌಲರ್ ಟಿಮ್ ಬ್ರೆಸ್ನನ್ ಹೇಳಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಕ್ರೀಡಾಪಟುಗಳು ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ತಾವು ದ್ವಿಶತಕ ಗಳಿಸಿದ್ದಾಗ ಪತ್ನಿ ಯಾಕೆ ಕಣ್ಣೀರು ಹಾಕಿದ್ದರು ಎನ್ನುವ ವಿಚಾರವನ್ನು ತಿಳಿಸಿದ್ದರು. ಸದ್ಯ ಟಿಮ್ ಬ್ರೆಸ್ನನ್ ಅವರು ವಿಶೇಷ ಸಂದರ್ಭವನ್ನು ನೆನೆದಿದ್ದಾರೆ.

    2011ರ ಓವೆಲ್ ಟೆಸ್ಟ್ ಪಂದ್ಯದಲ್ಲಿ ಸಚಿನ್ 91 ರನ್ ಗಳಿಸಿದ್ದರು. ಕೇವಲ 9 ರನ್ ಬಾರಿಸಿದ್ದರೆ 100ನೇ ಶತಕ ದಾಖಲಾಗುತ್ತಿತ್ತು. ಆದರೆ ಟಿಮ್ ಬ್ರೆಸ್ನನ್ ಬೌಲಿಂಗ್‍ನಲ್ಲಿ ಮಾಸ್ಟರ್ ಬ್ಲಾಸ್ಟರ್ ಎಲ್‍ಬಿಡಬ್ಲ್ಯೂನಿಂದ ವಿಕೆಟ್ ಒಪ್ಪಿಸಿದರು. ಚೆಂಡು ಲೆಗ್‍ಸ್ಟಂಪ್ ಮಿಸ್ ಆದಂತೆ ಕಂಡು ಬಂದಿದ್ದರಿಂದ ನನಗೆ ಹಾಗೂ ಅಂಪೈರ್ ಟಕ್ಕರ್ ಅವರಿಗೆ ಬೆದರಿಕೆಯ ಕರೆಗಳು ಬಂದಿದ್ದವು ಎಂದು ಬಹಿರಂಗಪಡಿಸಿದ್ದಾರೆ.

    “ಅಂಪೈರ್ ಹಾಗೂ ನಾನು ಬೆದರಿಕೆ ಕರೆಯಿಂದ ಆತಂಕಕ್ಕೆ ಒಳಗಾಗಿದ್ದೆವು. ಅಷ್ಟೇ ಅಲ್ಲದೆ ನನಗೆ ಟ್ವಿಟರ್ ನಲ್ಲಿ ಹಾಗೂ ಅಂಪೈರ್ ಟಕ್ಕರ್ ಅವರ ಮನೆಯ ವಿಳಾಸಕ್ಕೆ ಬೆದರಿಕೆಯ ಪತ್ರಗಳು ಬಂದಿದ್ದವು. ಸಚಿನ್ ವಿಕೆಟ್ ಆಗಿದ್ದರೂ ಔಟ್ ಎಂದು ತೀರ್ಪು ಕೊಡಲು ಎಷ್ಟು ಧೈರ್ಯ ನಿಮಗೆ ಎಂದು ಟಕ್ಕರ್ ಅವರಿಗೆ ಕೇಳಲಾಗಿತ್ತು. ಇದರಿಂದಾಗಿ ಅವರು ಪೊಲೀಸ್ ಭದ್ರತೆ ಪಡೆದುಕೊಂಡಿದ್ದರು ಎಂದು ಟಿಮ್ ಬ್ರೆಸ್ನನ್ ಹೇಳಿದ್ದಾರೆ.

    ಇಂಗ್ಲೆಂಡ್ ಪರ 23 ಟೆಸ್ಟ್, 85 ಏಕದಿನ ಪಂದ್ಯ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ 99ನೇ ಶತಕವನ್ನು 2011ರ ವಿಶ್ವಕಪ್‍ನಲ್ಲಿ ದಕ್ಚಿಣ ಆಫ್ರಿಕಾ ವಿರುದ್ಧ ಸಿಡಿಸಿದ್ದರು. ನಂತರ 2012ರ ಏಷ್ಯಾಕಪ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ 100ನೇ ಶತಕ ಪೂರ್ಣಗೊಳಿಸಿದ್ದರು.

  • ಬರ್ತ್‍ಡೇ ಬಾಯ್ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿರುವ ಕೊಹ್ಲಿ ಅಭಿಮಾನಿಗಳು!

    ಬರ್ತ್‍ಡೇ ಬಾಯ್ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿರುವ ಕೊಹ್ಲಿ ಅಭಿಮಾನಿಗಳು!

    ಮುಂಬೈ: ಇಂಗ್ಲೆಂಡ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಇಂದು ತಮ್ಮ 29ನೇ ವಸಂತಕ್ಕೆ ಕಾಲಿಟ್ಟಿದ್ದು, ವಿಶ್ವ ಹಲವು ಕ್ರಿಕೆಟ್ ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ. ಆದರೆ ಕೊಹ್ಲಿ ಅಭಿಮಾನಿಗಳು ಮಾತ್ರ ಶುಭ ಕೋರುವ ಮೂಲಕ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿದ್ದಾರೆ.

    ಪಂದ್ಯವೊಂದರಲ್ಲಿ ಬೆನ್ ಸ್ಟೋಕ್ಸ್ ವಿಕೆಟ್ ಉರುಳಿದ ಸಂದರ್ಭದಲ್ಲಿ ಕೊಹ್ಲಿ ಒಂದು ಅಸಭ್ಯ ಶಬ್ದ ಬಳಸಿ ಇತರೇ ಆಟಗಾರರೊಂದಿಗೆ ಸಂಭ್ರಮ ನಡೆಸಿದ್ದರು. ಸದ್ಯ ಈ ವಿಡಿಯೋವನ್ನೇ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಅಭಿಮಾನಿಗಳು ಸ್ಟೋಕ್ಸ್ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ನಾಯಕ ವಿರಾಟ್ ಕೊಹ್ಲಿಯೇ ಪ್ರಮುಖ ಕಾರಣ ಎಂದು ಸ್ಟೋಕ್ಸ್ ತಮ್ಮ ಪುಸ್ತಕವೊಂದರಲ್ಲಿ ನಮೂದಿಸಿದ್ದರು. ಆ ವೇಳೆ ಕೊಹ್ಲಿ ಅಭಿಮಾನಿಗಳು ಸ್ಟೋಕ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ಸ್ಟೋಕ್ಸ್ ವಿರುದ್ಧ ಅಸಮಾಧಾನ ಹೊಂದಿದ್ದ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ ಶುಭ ಕೋರುವ ಮೂಲಕ ಕಾಲೆಳೆಯುತ್ತಿದ್ದಾರೆ. ಅಂದಹಾಗೇ ಕೊಹ್ಲಿ ವಿಶ್ವಕಪ್ ಪಂದ್ಯದ ಸೋಲಿಗೆ ಕಾರಣ ಎಂದಿದ್ದ ಸ್ಟೋಕ್ಸ್, ಭಾರತ ತಂಡ ಪಂದ್ಯದಲ್ಲಿ ಗೆಲ್ಲುವ ಯಾವುದೇ ರೀತಿ ಪ್ರಯತ್ನವನ್ನು ತೋರಿಸಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ಹಲವು ಸಂದರ್ಭದಲ್ಲಿ ಸ್ಟೋಕ್ಸ್, ಕೊಹ್ಲಿ ವಿರುದ್ಧ ವಿಮರ್ಶೆಗಳನ್ನು ಮಾಡಿದ್ದರು.

    ಅಭಿಮಾನಿಗಳು ಶೇರ್ ಮಾಡುತ್ತಿರುವ ವಿಡಿಯೋ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದ ಬೆನ್ ಸ್ಟೋಕ್ಸ್, ವಿಡಿಯೋದಲ್ಲಿ ಕೊಹ್ಲಿ ಅಸಭ್ಯ ಪದ ಬಳಕೆ ಮಾಡಿಲ್ಲ. ತಮ್ಮ ಹೆಸರನ್ನೇ ಹೇಳಿದ್ದಾರೆ ಅಷ್ಟೇ. ಇಂತಹ ಟ್ವೀಟನ್ನು ನಾನು ಮತ್ತೊಮ್ಮೆ ನೋಡಲು ಬಯಸುವುದಿಲ್ಲ. ಆದ್ದರಿಂದ ನಾನು ಟ್ವಿಟ್ಟರ್ ಖಾತೆಯನ್ನೇ ತೊರೆಯಬೇಕೆನೋ. ಸದ್ಯ ಇದು ತಮಾಷೆ ಎನಿಸಿದರೂ ಕೋಪಗೊಳ್ಳುವಂತೆ ಮಾಡುತ್ತಿದೆ ಎಂದು ಕಳೆದ ವರ್ಷ ಟ್ವೀಟ್ ಮಾಡಿದ್ದರು. ಆದರೆ ವಿಡಿಯೋ ನೋಡಿದ ಸಂದರ್ಭದಲ್ಲಿ ಕೊಹ್ಲಿ ಅಸಭ್ಯ ಪದ ಬಳಕೆ ಮಾಡಿರುವುದು ಸ್ಪಷ್ಟವಾಗಿ ಅರಿವಾಗುತ್ತದೆ.

    ಕಳೆದ ವರ್ಷ ಇಂಗ್ಲೆಂಡ್ ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಿದ್ದ ಬೆನ್ ಸ್ಟೋಕ್ಸ್ 2020ರ ವಿಸ್ಡನ್ ಕ್ರಿಕೆಟ್ ಆಟಗಾರನಾಗಿ ಆಯ್ಕೆಯಾಗಿದ್ದರು. ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಆ್ಯಶಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಸ್ಟೋಕ್ಸ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‍ನಲ್ಲಿ 821 ರನ್, ಏಕದಿನ ಕ್ರಿಕೆಟ್‍ನಲ್ಲಿ 719 ರನ್ ಸಿಡಿಸಿದ್ದರು. 2019ರ ಐಸಿಸಿ ಪ್ಲೇಯರ್ ಆಫ್ ಇಯರ್ ಪ್ರಶಸ್ತಿಯನ್ನು ಪಡೆದಿದ್ದರು.

  • 2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೋತಿತ್ತು: ಪಾಕ್ ಕ್ರಿಕೆಟಿಗ

    2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೋತಿತ್ತು: ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ 2019ರ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತ್ತು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪಾಕಿಸ್ತಾನ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.

    ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರೆ ಪಾಕಿಸ್ತಾನಕ್ಕೆ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಭಾರತ ಸೋಲುವ ಮೂಲಕ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿತ್ತು ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

    ಅಂದು ಪಂದ್ಯದ ವೀಕ್ಷಕ ವಿಶ್ಲೇಷಣೆ ಮಾಡುತ್ತಿದ್ದ ಎಲ್ಲರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಾನು ಈ ಬಗ್ಗೆ ಐಸಿಸಿಗೂ ಮನವಿ ಸಲ್ಲಿಸಿದ್ದೆ. ಐಸಿಸಿ, ಆಟಗಾರರ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತದೆ. ಆದರೆ ತಂಡವೊಂದು ಮತ್ತೊಂದು ತಂಡವನ್ನು ಸೆಮಿ ಫೈನಲ್‍ಗೆ ತಲುಪದಂತೆ ಮಾಡಲು ಉದ್ದೇಶ ಪೂರ್ವಕವಾಗಿ ಸೋತರೆ ದಂಡ ತೆರಬೇಕು ಎಂದು ತಿಳಿಸಿದ್ದಾರೆ.

    ಕ್ರಿಕೆಟ್ ಆಡಿದ ಯಾವುದೇ ಆಟಗಾರ ಇಂತಹ ಅಂಶಗಳನ್ನು ಸುಲಭವಾಗಿ ಅರಿತುಕೊಳ್ಳಬಹುದು. ಯಾವುದೇ ಒಬ್ಬ ಉತ್ತಮ ಬೌಲರ್ ಲೈನ್ ಅಂಡ್ ಲೆಂಥ್ ತಪ್ಪಿಸಿ ಬೌಲ್ ಮಾಡಲು ಪ್ರಯತ್ನಿಸುವುದು. ವಿಕೆಟ್ ಪಡೆಯಲು ಯತ್ನಿಸದೆ ಸುಲಭವಾಗಿ ರನ್ ಬಿಟ್ಟುಕೊಡುವುದು ನೋಡಿದರೆ ಅದು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೆ ಎಂದು ಹೇಳಬಹುದು. ಇದು ಕೂಡ ಐಸಿಸಿ ನಿಯಮಗಳ ಭಾಗಬೇಕು. ಅಲ್ಲದೇ ಐಸಿಸಿ ಲೆವೆಲ್ 1,2..5ರ ಉಲ್ಲಂಘನೆ ಅಡಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

    ಈ ವೇಳೆ ಭಾರತ ಉದ್ದೇಶವಾಗಿ ಪಂದ್ಯದಲ್ಲಿ ಸೋಲುಂಡಿತ್ತಾ ಎಂಬ ಪ್ರಶ್ನೆಗೆ ಉತ್ತರಿಸುವ ಅಬ್ದುಲ್ ರಜಾಕ್, ಖಂಡಿತ ಇದರಲ್ಲಿ ಯಾವುದೇ ಸಂದೇಹವಿಲ್ಲ. ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರೋ ಆಟಗಾರ, ಬೌಂಡರಿ ಅಥವಾ ಚೆಂಡನ್ನು ಬ್ಲಾಕ್ ಮಾಡುತ್ತಿದ್ದರೆ ಸುಲಭವಾಗಿ ಇದನ್ನು ಆರ್ಥೈಸಬಹುದಾಗಿದೆ. ನಾನು ಮಾತ್ರವಲ್ಲದೇ ಹಲವು ಕ್ರಿಕೆಟ್ ಆಟಗಾರರು ಇದನ್ನೇ ಹೇಳಿದ್ದಾರೆ. ಐಸಿಸಿ ಉದ್ದೇಶ ಪೂರ್ವಕವಾಗಿ ಸೋಲುವವರ ವಿರುದ್ಧ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೇಳಿದ್ದಾರೆ.

    ಅಂದು ಪಂದ್ಯದಲ್ಲಿ ಗೆಲ್ಲಲು 338 ರನ್ ಗುರಿ ಪಡೆದಿದ್ದ ಟೀಂ ಇಂಡಿಯಾ ಅಂತಿಮ 5 ಓವರ್ ಗಳಲ್ಲಿ 71 ರನ್ ಗಳಿಸುವ ಗುರಿಯನ್ನು ಹೊಂದಿತ್ತು. ಆ ವೇಳೆ ಧೋನಿ ಹಾಗೂ ಕೇಧಾರ್ ಜಾಧವ್ ಬ್ಯಾಟ್ ಬೀಸುತ್ತಿದ್ದರು. ಆದರೆ ಅಂದು ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 306 ರನ್ ಕಲೆ ಹಾಕಿ 31 ರನ್ ಅಂತರದಲ್ಲಿ ಸೋಲುಂಡಿತ್ತು. ಅಂತಿಮ 5 ಓವರ್ ಗಳಲ್ಲಿ ಟೀಂ ಇಂಡಿಯಾ ಆಟಗಾರರು 39 ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗಿತ್ತು. ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಟೀಂ ಇಂಡಿಯಾ ಆಟಗಾರರು ಇನ್ನಿಂಗ್ಸ್ ನಲ್ಲಿ ಕೇವಲ 1 ಸಿಕ್ಸರ್ ಸಿಡಿಸಿದ್ದರು. ಇಂಗ್ಲೆಂಡ್ ಆಟಗಾರು 13 ಸಿಕ್ಸರ್ ಸಿಡಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ಕೊಹ್ಲಿ, ಧೋನಿ ನಿಧಾನ ಗತಿ ಬ್ಯಾಟಿಂಗ್ ಶೈಲಿಗೆ ಸ್ಪಷ್ಟನೆ ನೀಡಿದ್ದರು. ಅನುಭವಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿದ್ದ ಧೋನಿ ಬೌಂಡರಿ ಸಿಡಿಸಲು ಸಾಕಷ್ಟು ಪ್ರಯತ್ನಿಸಿದ್ದರು ಎಂದಿದ್ದರು.

  • ಲಾಕ್‍ಡೌನ್ ಎಫೆಕ್ಟ್- ಅಕ್ರಮ ಸಂಬಂಧ ಬ್ಯಾನ್

    ಲಾಕ್‍ಡೌನ್ ಎಫೆಕ್ಟ್- ಅಕ್ರಮ ಸಂಬಂಧ ಬ್ಯಾನ್

    – ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ

    ಲಂಡನ್: ಕೊರೊನಾ ವೈರಸ್ ಹಿನ್ನೆಲೆ ಜೀವನ ಕ್ರಮದಲ್ಲಿ ಈಗಾಗಲೇ ಹಲವು ಬದಲಾವಣೆಗಳಾಗಿದ್ದು, ಇದೀಗ ಇಂಗ್ಲೆಂಡ್ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಮತ್ತೊಂದು ಬದಲಾವಣೆ ತಂದಿದೆ.

    ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಹೊಸ ಮಾರ್ಗಸೂಚಿ ರಚಿಸಿದ್ದು, ಅಕ್ರಮ ಸಂಬಂಧವನ್ನು ಬ್ಯಾನ್ ಮಾಡಿ ಆದೇಶಿಸಿದೆ. ಈ ನಿಯಮದ ಪ್ರಕಾರ ಮನೆಯಲ್ಲಿ ಜೊತೆಯಾಗಿದ್ದರೆ ಮಾತ್ರ ಲೈಂಗಿಕ ಕ್ರಿಯೆ ನಡೆಸಬೇಕು. ಹೊರಗಿನ ವ್ಯಕ್ತಿ ಅಥವಾ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನಿಗೆ ವಿರುದ್ಧವಾಗಲಿದೆ. ಇದನ್ನೂ ಓದಿ: ಲಾಕ್‍ಡೌನ್ ವೇಳೆ ಸೆಕ್ಸ್​ಗಾಗಿ ಸಂಗಾತಿಯನ್ನ ಹುಡುಕಿಕೊಳ್ಳಿ: ಆರ್‍ಐವಿಎಂ ಸಲಹೆ

    ಈ ಹಿಂದೆ ಸೂಕ್ತ ಕಾರಣವಿಲ್ಲದೆ ಪ್ರಯಾಣಿಸುವುದು ಶಿಕ್ಷಾರ್ಹ ಅಪರಾಧ ಎಂದು ಅಲ್ಲಿನ ಸರ್ಕಾರ ಹೇಳಿತ್ತು. ಆದರೆ ಮತ್ತೊಬ್ಬ ವ್ಯಕ್ತಿ ಭೇಟಿ ಕುರಿತು ಪ್ರಸ್ತಾಪಿಸಿರಲಿಲ್ಲ. ಇದೀಗ ಇದಕ್ಕೂ ಸರ್ಕಾರ ಬ್ರೇಕ್ ಹಾಕಿದೆ. ಒಂದು ವೇಳೆ ಇಬ್ಬರಿಗಿಂತ ಹೆಚ್ಚು ಜನ ಒಟ್ಟಿಗೆ ಸೇರಿದರೆ, ಹೊಸ ಮಾರ್ಗಸೂಚಿಗಳ ನಿಯಮದಂತೆ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದಿದೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ವೀರ್ಯ ಕುಡಿಯುತ್ತಿದ್ದಾಳೆ ಮಹಿಳೆ

    ಸೋಮವಾರ ಈ ಕಾನೂನನ್ನು ಪರಿಚಯಿಸಲಾಗಿದ್ದು, ಇದರನ್ವಯ ಸೂಕ್ತ ಕಾರಣವಿಲ್ಲದೆ ಇಬ್ಬರಿಗಿಂತ ಅಧಿಕ ಜನ ಮನೆಯೊಳಗೆ ವಾಸಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಎರಡಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ಕೂಟಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ ಮನೆಯಲ್ಲಿರುವವರೊಂದಿಗೇ ಲೈಂಗಿಕ ಕ್ರಿಯೆ ನಡೆಸಬೇಕು, ಹೊರಗಿನವರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತಿಲ್ಲ ಎಂದು ನಿಯಮದಲ್ಲಿ ತಿಳಿಸಿದೆ.