Tag: england

  • ಪಿಚ್ ಬಳಿ ಬಂದ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ವಿರಾಟ್ ಕೊಹ್ಲಿ

    ಪಿಚ್ ಬಳಿ ಬಂದ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ವಿರಾಟ್ ಕೊಹ್ಲಿ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಅಭಿಮಾನಿಯೋರ್ವ ಪಿಚ್ ಬಳಿ ಓಡಿ ಬರುತ್ತಿದ್ದಂತೆ ಕೊಹ್ಲಿ ಅಭಿಮಾನಿಯಿಂದ ಅಂತರ ಕಾಯ್ದುಕೊಂಡು ಹತ್ತಿರ ಬರದಂತೆ ಕೇಳಿಕೊಂಡಿದ್ದಾರೆ.

    ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಂತೆ ಅಭಿಮಾನಿಯೋರ್ವ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ಓಡಿಕೊಂಡು ಪಿಚ್ ಬಳಿ ಬರುತ್ತಾನೆ. ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಎಚ್ಚೆತ್ತುಕೊಂಡು ಅಭಿಮಾನಿಯನ್ನು ಅಂತರ ಕಾಪಾಡುವಂತೆ ಕೇಳಿಕೊಂಡು ಹಿಂದೆ ಸರಿದು ಮರಳಿ ತೆರಳುವಂತೆ ಸೂಚಿಸುತ್ತಾರೆ. ಅಭಿಮಾನಿಯು ಕೊಹ್ಲಿಯ ಸೂಚನೆಯಂತೆ ಹಿಂದೆ ಸರಿಯುತ್ತಾನೆ ಇದನ್ನು ಕಂಡ ಪ್ರೇಕ್ಷಕರೆಲ್ಲರೂ ಹರ್ಷೋದ್ಗಾರ ಹಾಕಿ ಸಂಭ್ರಮಿಸಿದರು.

    ಕೋವಿಡ್-19 ನಿಂದಾಗಿ ಬಯೋ ಬಬಲ್‍ನಲ್ಲಿರುವ ಕ್ರಿಕೆಟ್‍ಗರು ಯಾರನ್ನು ಕೂಡ ಭೇಟಿಯಾಗಲು ಅವಕಾಶ ಇಲ್ಲ. ಹಾಗಾಗಿ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಪಂದ್ಯವು ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತ ಮುಂದುವರಿಯುತ್ತಿದೆ. ಕ್ರೀಡಾಂಗಣಕ್ಕೆ ಕೇವಲ ಶೇ.50 ಮಾತ್ರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್‍ನ ಮೊದಲ ದಿನದಾಟದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 13 ರನ್‍ಗಳ ಹಿನ್ನಡೆ ಪಡೆದಿದ್ದರು, ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ಇನ್ನೂ ನಾಲ್ಕು ದಿನ ಬಾಕಿಯಿದ್ದು ಬಾರಿ ಕೂತುಹಲ ಕೆರಳಿಸಿದೆ.

  • ಅಕ್ಷರ್‌ ಪಟೇಲ್‌ ಮಾರಕ ಬೌಲಿಂಗ್‌ – ಉತ್ತಮ ಸ್ಥಿತಿಯಲ್ಲಿ ಭಾರತ

    ಅಕ್ಷರ್‌ ಪಟೇಲ್‌ ಮಾರಕ ಬೌಲಿಂಗ್‌ – ಉತ್ತಮ ಸ್ಥಿತಿಯಲ್ಲಿ ಭಾರತ

    ಅಹಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಮೊದಲ ದಿನ ಭಾರತ ಉತ್ತಮ ಸ್ಥಿತಿಯಲ್ಲಿದೆ.

    ಹಗಲು ರಾತ್ರಿ ಪಿಂಕ್‌ ಬಾಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಅಕ್ಷರ್‌ ಪಟೇಲ್‌ ಅವರ ಸ್ಪಿನ್‌ ದಾಳಿಗೆ ತತ್ತರಿಸಿ 48.4 ಓವರ್‌ಗಳಲ್ಲಿ ಕೇವಲ 112 ರನ್‌ಗಳಿಗೆ ಆಲೌಟ್‌ ಆಯ್ತು.

    ಆರಂಭಿಕ ಆಟಗಾರ ಜಾಕ್‌ ಕ್ರಾಲೆ 53 ರನ್‌(84 ಎಸೆತ, 10 ಬೌಂಡರಿ) ನಾಯಕ ಜೊ ರೂಟ್‌ 17 ರನ್‌ ಹೊಡೆದರು. ಆರಂಭದಿಂದಲೂ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್‌ ಅಂತಿಮವಾಗಿ 112 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ ಕೊನೆಗೊಳಿಸಿತು.

    ಅಕ್ಷರ್‌ ಪಟೇಲ್‌ ತಾನು ಆಡಿದ ಎರಡು ಟೆಸ್ಟ್‌ಗಳಲ್ಲಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಅಕ್ಷರ್‌ ಪಟೇಲ್‌ 21.4 ಓವರ್‌ ಎಸೆದು 38 ರನ್‌ ನೀಡಿ 6 ವಿಕೆಟ್‌ ಕಿತ್ತಿದ್ದಾರೆ. ಅಶ್ವಿನ್‌ 3 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ 1 ವಿಕೆಟ್‌ ಪಡೆದರು.

    ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ 33 ರನ್‌ಗಳಿಸುವಷ್ಟರಲ್ಲಿ ಶುಭಮನ್‌ ಗಿಲ್‌ ವಿಕೆಟ್‌ ಕಳೆದುಕೊಂಡಿತು. ತಂಡಕ್ಕೆ 1 ರನ್ ಸೇರ್ಪಡೆಯಾದ ಬೆನ್ನಲ್ಲೇ ಚೇತೇಶ್ವರ ಪೂಜಾರ ಶೂನ್ಯ ಸುತ್ತಿದರು.

    34 ರನ್‌ಗಳಿಗೆ 2 ವಿಕೆಟ್‌ ಉರುಳಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಕೊಹ್ಲಿ ಮತ್ತು ರೋಹಿತ್‌ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಇಬ್ಬರು ಮೂರನೇ ವಿಕೆಟಿಗೆ 64 ರನ್‌ ಜೊತೆಯಾಟವಾಡಿದರು.

    ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 27 ರನ್‌(58 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಅಂತಿಮವಾಗಿ ಭಾರತ 33 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 99 ರನ್‌ ಗಳಿಸಿದೆ. ದಿನದ ಅಂತ್ಯಕ್ಕೆ ರೋಹಿತ್‌ ಶರ್ಮಾ 57 ರನ್‌( 82 ಎಸೆತ, 9 ಬೌಂಡರಿ) ಮತ್ತು ಅಜಿಂಕ್ಯಾ ರಹಾನೆ 1 ರನ್‌ ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ಸ್ಪೈಡಿ ಜೊತೆ ಮೈದಾನಕ್ಕಿಳಿದ ರಿಷಬ್ ಪಂತ್

    ಸ್ಪೈಡಿ ಜೊತೆ ಮೈದಾನಕ್ಕಿಳಿದ ರಿಷಬ್ ಪಂತ್

    ಗಾಂಧಿನಗರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಗಾಗಿ  ಭಾರತ ತಂಡ ಅಹಮದಾಬಾದ್‍ನ ಮೊಟೆರಾ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತ ತಂಡದ ಎಲ್ಲಾ ಆಟಗಾರರೂ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದರೆ ರಿಷಬ್ ಪಂತ್ ಹೊಸ ಫ್ರೆಂಡ್ ಸ್ಪೈಡಿ ಜೊತೆ ಮೈದಾನದಲ್ಲಿ ಕಾಲ ಕಳೆದರು.

    ಪಂತ್ ಮೈದಾನದಲ್ಲಿ ಹೊಸ ಸ್ನೇಹಿತನೊಂದಿಗೆ ಕಾಲ ಕಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಫ್ರೆಂಡ್‍ನ ಪರಿಚಯ ಮಾಡಿದ್ದಾರೆ. ಹೊಸ ಸ್ನೇಹಿತನಾಗಿರುವುದು ಡ್ರೋನ್ ಕ್ಯಾಮೆರಾ ಅದರ ಹೆಸರು ಸ್ಪೈಡಿ ಎಂದಿರುವ ಪಂತ್ ನೆಟ್ ಪ್ರಾಕ್ಟೀಸ್ ವೇಳೆ ಕೆಲ ಹೊತ್ತು ಮೈದಾನದ ಮೇಲೆ ಹಾರಿಸಿ ಸಂತೋಷವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Rishabh Pant (@rishabpant)

    ಡ್ರೋನ್ ಕ್ಯಾಮೆರಾದಲ್ಲಿ ನೆಟ್‍ಪ್ರಾಕ್ಟೀಸ್‍ನ ಕೆಲ ದೃಶ್ಯಗಳನ್ನು ಪಂತ್ ಸೆರೆ ಹಿಡಿದಿದ್ದಾರೆ. ಕೆಲದಿನಗಳ ಹಿಂದೆ ಬಿಸಿಸಿಐ ಮೊಟೆರಾ ಅಂಗಳದ ಕೆಲ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಕ್ರಿಕೆಟ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು.

    4 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ ಮತ್ತು ಇಂಗ್ಲೆಂಡ್ 1-1 ರಲ್ಲಿ ಸಮಬಲ ಸಾಧಿಸಿದೆ. 3ನೇ ಟೆಸ್ಟ್ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ಫೆಬ್ರವರಿ 24 ರಂದು ಪ್ರಾರಂಭಗೊಳ್ಳಲಿದೆ.

  • ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಗಾಂಧಿನಗರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾ ಭರ್ಜರಿಯಾಗಿ ಸಿದ್ಧಗೊಂಡಿದೆ.

    ಗುಜರಾತ್‍ನ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, ಈ ಕ್ರೀಡಾಂಗಣದಲ್ಲಿ ನಡೆಯುವ ಡೇ-ನೈಟ್ ಟೆಸ್ಟ್ ಪಂದ್ಯಾಟಕ್ಕಾಗಿ ಇದೀಗ ಆಟಗಾರರು ಕೂಡ ಬಾರಿ ಉತ್ಸಾಹದಲ್ಲಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಪಂದ್ಯ ಫೆಬ್ರವರಿ 24 ರಿಂದ 28 ವರೆಗೆ ನಡೆಯಲಿದ್ದು, ಈಗಾಗಲೇ ಭಾರತೀಯ ಆಟಗಾರರೂ ಮೊಟೆರಾ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಒಟ್ಟು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕ್ರೀಡಾಂಗಣದ ಒಳಭಾಗದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ಮೂರು ಅಭ್ಯಾಸ ಮೈದಾನಗಳು ಮತ್ತು ಸುಸಜ್ಜಿತಾ ನಾಲ್ಕು ಡ್ರೆಸ್ಸಿಂಗ್ ರೂಂ ಇದೆ. ಇನ್ನೂ ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವ ಕಾರಣ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‍ಇಡಿ ಬಲ್ಬ್ ಗಳನ್ನು ಹಾಕಲಾಗಿದೆ.

    ಮಳೆ ಬಂದರೆ ಪರಿಹಾರವಾಗಿ ಮೈದಾನವನ್ನು ಒಣಗಿಸಲು ಸಬ್ ಏರ್ ಸಿಸ್ಟಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಈ ಎಲ್ಲ ಸೌಲಭ್ಯಗಳೊಂದಿಗೆ, ವಿಶ್ವದ ಎರಡನೇ ಅತೀ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಮೊಟೆರಾ ಇದೀಗ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕಾತರದಿಂದ ಕಾಯುತ್ತಿದೆ ಇದೀಗ ಎಲ್ಲರ ಚಿತ್ತ ಮೊಟೆರಾ ಕ್ರೀಡಾಂಗಣದತ್ತ ನೆಟ್ಟಿದೆ.

  • ಖಾಲಿಸ್ತಾನಿ ಉಗ್ರರಿಂದ ರೈತನಾಯಕನ ಹತ್ಯೆಗೆ ಸಂಚು

    ಖಾಲಿಸ್ತಾನಿ ಉಗ್ರರಿಂದ ರೈತನಾಯಕನ ಹತ್ಯೆಗೆ ಸಂಚು

    – ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಯತ್ನ
    – ಅಂತರಾಷ್ಟ್ರಿಯ ಷಡ್ಯತಂತ್ರದ ಬಗ್ಗೆ ಸ್ಫೋಟಕ ವಿಚಾರ ಪ್ರಕಟ

    ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಓರ್ವ ರೈತ ನಾಯಕನ ಹತ್ಯೆಗೆ ಖಲಿಸ್ತಾನಿ ಉಗ್ರರು ಸಂಚು ರೂಪಿಸಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಬೆಲ್ಜಿಯಂ ಮತ್ತು ಇಂಗ್ಲೆಂಡ್‍ನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಂಚು ರೂಪಿಸುತ್ತಿದೆ ಎಂಬ ಸ್ಪೋಟಕ ಮಾಹಿತಿಯನ್ನು ಗುಪ್ತಚರ ವಿಭಾಗ ಸರ್ಕಾರಕ್ಕೆ ತಿಳಿಸಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಗುಪ್ತಚರ ವಿಭಾಗ ತಿಳಿಸಿರುವ ಮಾಹಿತಿ ಪ್ರಕಾರ ಸಿಂಘುಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ನಾಯಕರನ್ನು ಗುರಿಯಾಗಿಸಿ ಅವರ ಮೇಲೆ ದಾಳಿ ಮಾಡಲು ಇಂಗ್ಲೆಂಡ್ ಮತ್ತು ಬೆಲ್ಜಿಯಂನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆಹಾಕಿ ವ್ಯವಸ್ಥಿತ ಸಂಚನ್ನು ಮಾಡುತ್ತಿದೆ. ಇದರೊಂದಿಗೆ ಈ ಭಯೋತ್ಪಾದಕ ಸಂಘಟನೆಗಳಿಗೆ ಭಾರತದಲ್ಲೇ ಇರುವ ಕೆಲವು ಸಂಘಟನೆಗಳು ಬೆಂಬಲ ನೀಡುತ್ತಿದೆ. ಅದೇ ರೀತಿ ಭಾರತ ನೆರೆಯ ರಾಷ್ಟ್ರಗಳಾದ ಕೆನಡಾ, ಇಂಗ್ಲೆಂಡ್, ಬೆಲ್ಜಿಯಂ ಮತ್ತು ಪಾಕಿಸ್ತಾನದ ಹಲವು ಸಂಘಟನೆಗಳು ಖಲಿಸ್ತಾನದ ಭಯೋತ್ಪಾದಕರಿಗೆ ಬೆಂಬಲ ಸೂಚಿಸುತ್ತಿದೆ ಎಂದು ಮಾಹಿತಿಯನ್ನು ನೀಡಿದೆ.

    ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿರುವ ಮಾಹಿತಿ ಪ್ರಕಾರ ಖಲಿಸ್ತಾನಿ ಭಯೋತ್ಪಾದಕರು ಈಗಾಗಲೇ ಮೂರು ರೀತಿಯ ಸಂಚನ್ನು ರೂಪಿಸಿ ರೈತನಾಯಕರನ್ನು ಹತ್ಯೆಮಾಡಲು ಪ್ಲಾನ್ ರೂಪಿಸಿದ್ದರು. ಇದರೊಂದಿಗೆ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುವ ರೈತರನ್ನೇ ಗುರಿಯಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.

    ರೈತ ಪ್ರತಿಭಟನೆಯಲ್ಲಿ ನಿರತರಾಗಿರುವ ನಾಯಕರನ್ನು ಹತ್ಯೆ ಮಾಡಿ ನಂತರ ಭಾರತದಲ್ಲಿ ತೀವ್ರವಾಗಿ ಗಲಾಟೆಗಳನ್ನು ಎಬ್ಬಿಸಿ ಅಶಾಂತಿ ಕದಡುವ ಮೂಲಕ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಪಾಕಿಸ್ತಾನದ ಬೆಂಬಲವಿದ್ದು, ಈಗಾಗಲೇ ಪಾಕಿಸ್ತಾನದಿಂದ 400 ಟ್ವಿಟ್ಟರ್ ಖಾತೆಗಳು ರೈತ ಪ್ರತಿಭಟನೆಯ ಕುರಿತು ಕಾರ್ಯಾಚರಣೆ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

  • ಅಕ್ಷರ್‌, ಅಶ್ವಿನ್‌ ಸ್ಪಿನ್‌ಗೆ ಇಂಗ್ಲೆಂಡ್‌ ಬೌಲ್ಡ್‌ – ಭಾರತಕ್ಕೆ 317 ರನ್‌ಗಳ ಭರ್ಜರಿ ಜಯ

    ಅಕ್ಷರ್‌, ಅಶ್ವಿನ್‌ ಸ್ಪಿನ್‌ಗೆ ಇಂಗ್ಲೆಂಡ್‌ ಬೌಲ್ಡ್‌ – ಭಾರತಕ್ಕೆ 317 ರನ್‌ಗಳ ಭರ್ಜರಿ ಜಯ

    ಚೆನ್ನೈ: ಅಕ್ಷರ್‌ ಪಟೇಲ್‌ ಮತ್ತು ಅಶ್ವಿನ್‌ ಮಾರಕ ಅವರ ಬೌಲಿಂಗ್ ದಾಳಿಗೆ‌ ಇಂಗ್ಲೆಂಡ್‌ ತತ್ತರಿಸಿದ್ದು, ಎರಡನೇ ಟೆಸ್ಟ್‌ ಪಂದ್ಯವನ್ನು ಭಾರತ 317 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದಂತಾಗಿದೆ.

    ಗೆಲ್ಲಲು 482 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಇಂದು ಸ್ಪಿನ್ನರ್‌ಗಳ ಬಿಗಿಯಾದ ದಾಳಿಗೆ ಒದ್ದಾಡಿ 54.2 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್‌ ಆಯ್ತು.

    ಮೂರನೇ ದಿನದಾಟಕ್ಕೆ 3 ವಿಕೆಟ್‌ ಕಳೆದುಕೊಂಡು 53 ರನ್‌ ಗಳಿಸಿದ್ದ ಇಂಗ್ಲೆಂಡ್‌ ಇಂದು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. 26 ರನ್‌ ಗಳಿಸಿದ್ದ ಡಾನ್‌ ಲಾರೆನ್ಸ್‌ ಸ್ಟಂಪ್‌ ಔಟಾದರು. ನಾಯಕ ಜೋ ರೂಟ್‌ 33 ರನ್‌(92 ಎಸೆತ, 3 ಬೌಂಡರಿ) ಹೊಡೆದರೆ ಕೊನೆಯಲ್ಲಿ ಮೋಯಿನ್‌ ಆಲಿ ಸ್ಫೋಟಕ ಆಟವಾಡಿದರು.

    ಸಿಕ್ಸರ್‌, ಬೌಂಡರಿ ಸಿಡಿಸಿ ಮುನ್ನುಗುತ್ತಿದ್ದ ಮೋಯಿನ್‌ ಆಲಿ 43 ರನ್‌(18 ಎಸೆತ, 3 ಬೌಂಡರಿ, 5 ಸಿಕ್ಸರ್‌) ಗಳಿಸಿದ್ದಾಗ ಕುಲದೀಪ್‌ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು. ಈ ಮೂಲಕ ಇಂಗ್ಲೆಂಡ್‌ ತನ್ನ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು.

    ಭಾರತದ ಪರವಾಗಿ ಅಕ್ಷರ್‌ ಪಟೇಲ್‌ 5 ವಿಕೆಟ್‌ ಪಡೆದರೆ ಅಶ್ವಿನ್‌ 3 ವಿಕೆಟ್‌ ಪಡೆದರು. ಕುಲದೀಪ್‌ ಯಾದವ್‌ 2 ವಿಕೆಟ್‌ ಪಡೆದರು.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 329/10
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 134/10
    ಭಾರತ ಎರಡನೇ ಇನ್ನಿಂಗ್ಸ್‌ 286/10
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 164/10

  • ಅಶ್ವಿನ್‌ ಶತಕದಾಟ – ಇಂಗ್ಲೆಂಡಿಗೆ 482 ರನ್‌ಗಳ ಗುರಿ

    ಅಶ್ವಿನ್‌ ಶತಕದಾಟ – ಇಂಗ್ಲೆಂಡಿಗೆ 482 ರನ್‌ಗಳ ಗುರಿ

    ಚೆನ್ನೈ: ಬೌಲಿಂಗ್‌ನಲ್ಲಿ 5 ವಿಕೆಟ್‌ ಪಡೆದು ಮಿಂಚಿದ್ದ ಸ್ಪಿನ್ನರ್‌ ಆರ್‌ ಅಶ್ವಿನ್‌ ಏಕದಿನ ಪಂದ್ಯದಂತೆ ಆಡಿ ಶತಕ ಸಿಡಿಸಿದ ಪರಿಣಾಮ ಭಾರತ ಇಂಗ್ಲೆಂಡ್‌ ತಂಡಕ್ಕೆ 482 ರನ್‌ಗಳ ಗುರಿಯನ್ನು ನೀಡಿದೆ.

    ನಿನ್ನೆ1 ವಿಕೆಟ್‌ ಕಳೆದುಕೊಂಡು 54 ರನ್‌ಗಳಿಸಿದ್ದ ಭಾರತ ಮೂರನೇ ದಿನದಾಟದಲ್ಲಿ 85.5 ಓವರ್‌ಗಳಲ್ಲಿ286 ರನ್‌ಗಳಿಗೆ ಆಲೌಟ್‌ ಆಯ್ತು. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್‌ ಗೆದ್ದರೆ ಚೇಸಿಂಗ್‌ನಲ್ಲಿ ವಿಶ್ವದಾಖಲೆ ಬರೆಯಲಿದೆ.

    106 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕೊಹ್ಲಿ ಮತ್ತು ಅಶ್ವಿನ್‌ 7ನೇ ವಿಕೆಟಿಗೆ 96 ರನ್‌ಗಳ ಜೊತೆಯಾಟವಾಡಿದರು.

    ತಂಡದ ಮೊತ್ತ 202 ಆಗಿದ್ದಾಗ ಕೊಹ್ಲಿ62 ರನ್‌(149 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಬೆನ್ನಲ್ಲೇ ಕುಲದೀಪ್‌ ಯಾದವ್‌ ಮತ್ತು ಇಶಾಂತ್‌ ಶರ್ಮಾ ಔಟಾದರು. ಆದರೆ 9ನೇ ವಿಕೆಟಿಗೆ ಅಶ್ವಿನ್‌ ಮತ್ತು ಸಿರಾಜ್‌ ಉತ್ತಮವಾಗಿ ಆಡಿ 55 ಎಸೆತಗಳಲ್ಲಿ 49 ರನ್‌ ಜೊತೆಯಾಟವಾಡಿದರು.

    ಏಕದಿನ ಶೈಲಿಯಲ್ಲೇ ಬ್ಯಾಟ್‌ ಬೀಸಿದ ಅಶ್ವಿನ್‌ 106 ರನ್‌(148, 14 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಮೊಹಮ್ಮದ್‌ ಸಿರಾಜ್‌ 16 ರನ್‌(21 ಎಸೆತ, 2 ಬೌಂಡರಿ) ಹೊಡೆದ ಅಜೇಯರಾಗಿ ಉಳಿದರು.

  • ವಿಸಿಲ್ ಪೋಡು ಎಂದು ಚೆನ್ನೈ ಅಭಿಮಾನಿಗಳನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

    ವಿಸಿಲ್ ಪೋಡು ಎಂದು ಚೆನ್ನೈ ಅಭಿಮಾನಿಗಳನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

    ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಾಟದ ಎರಡನೇ ದಿನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಸಿಲ್ ಹೊಡೆಯಿರಿ ಎಂದು ಸನ್ನೆ ಮಾಡುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪ್ರವಾಸಿ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಚಿಪಾಕ್‍ನ ಎಂ ಚಿದಂಬರಂ ಸೇಡಿಯಂನಲ್ಲಿ ನಡೆಯುತ್ತಿದ್ದು, ಎರಡನೇ ದಿನದ ಪಂದ್ಯಾಟದಲ್ಲಿ ಭಾರತದ ಬೌಲರ್ ಗಳು ವಿಕೆಟ್ ಪಡೆಯುತ್ತಿದ್ದರೆ ಇದ್ದ ಕೊಹ್ಲಿ ಪ್ರೇಕ್ಷಕರಲ್ಲಿ ವಿಸಿಲ್ ಹಾಕುವಂತೆ ಕೈ ಸನ್ನೆ ಮಾಡಿದ್ದಾರೆ. ಪ್ರೇಕ್ಷಕರು ಕೊಹ್ಲಿ ಕೈ ಸನ್ನೆ ಮಾಡುತ್ತಿದ್ದಂತೆ ವಿಸಿಲ್ ಹೊಡೆಯಲು ಪ್ರಾರಂಭಿಸಿದ್ದಾರೆ. ವಿರಾಟ್ ಇನ್ನು ಜೋರಾಗಿ ವಿಸಿಲ್ ಹೋಡಿಯಿರಿ ಎಂದಿದ್ದಾರೆ.

    ಕೊಹ್ಲಿ ಪ್ರೇಕ್ಷಕರಲ್ಲಿ ವಿಸಿಲ್ ಹಾಕುವಂತೆ ಕೈ ಸನ್ನೆ ಮಾಡುವ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ.

    ಕಳೆದ ಒಂದು ವರ್ಷಗಳಿಂದ ಕೊರೊನಾದಿಂದಾಗಿ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಎರಡನೇ ಟೆಸ್ಟ್ ವೇಳೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಅಭಿಮಾನಿಗಳು ಮತ್ತೆ ಕ್ರೀಡಾಂಗಣಕ್ಕೆ ಬಂದು ಕ್ರಿಕೆಟ್ ವೀಕ್ಷಣೆಯಲ್ಲಿ ತೊಡಗಿದ್ದಾರೆ.

  • ತವರಿನ ಹುಲಿ ಅಶ್ವಿನ್ ದಾಳಿಗೆ ಇಂಗ್ಲೆಂಡ್ ತತ್ತರ – ಭಾರತಕ್ಕೆ 195 ರನ್ ಮುನ್ನಡೆ

    ತವರಿನ ಹುಲಿ ಅಶ್ವಿನ್ ದಾಳಿಗೆ ಇಂಗ್ಲೆಂಡ್ ತತ್ತರ – ಭಾರತಕ್ಕೆ 195 ರನ್ ಮುನ್ನಡೆ

    ಚೆನ್ನೈ: ತವರಿನ ಹುಲಿ ಅಶ್ವಿನ್ ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 134 ರನ್‍ಗಳಿಗೆ ಆಲೌಟ್ ಆಗಿದ್ದು, ಭಾರತ 195 ರನ್‍ಗಳ ಮುನ್ನಡೆ ಪಡೆದುಕೊಂಡಿದೆ. ಒಂದೇ ದಿನ ಭಾರತ ಹಾಗೂ ಇಂಗ್ಲೆಂಡ್‍ನ 14 ವಿಕೆಟ್ ಪತನಗೊಂಡಿದ್ದು ಪಂದ್ಯ ಕುತೂಹಲದತ್ತ ಸಾಗಿದೆ.

    ಮೊದಲದಿನದಾಟದಲ್ಲಿ 300 ರನ್‍ಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 95.5 ಓವರ್‍ ಗಳಿಗೆ 329 ರನ್‍ಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಯ ಮುಂದೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ 59.5 ಓವರ್‍ ಗಳಲ್ಲಿ ಆಲೌಟ್ ಆಯ್ತು.

    ಇಂಗ್ಲೆಂಡ್ ಪರ ಬೆನ್ ಫೋಕ್ಸ್ ಔಟಾಗದೇ 42 ರನ್(107 ಎಸೆತ, 4 ಬೌಂಡರಿ)ಸಿಡಿಸಿ ಭಾರತದ ಬೌಲರ್‍ ಗಳನ್ನು ಕಾಡಿದನ್ನು ಹೊರತು ಪಡಿಸಿ ಉಳಿದ ಯಾವ ಬ್ಯಾಟ್ಸ್‌ಮ್ಯಾನ್ ಗಳು ಕ್ರೀಸ್‍ನಲ್ಲಿ ನೆಲೆಯೂರುವ ಪ್ರಯತ್ನ ಮಾಡಲಿಲ್ಲ.

    ಭಾರತದ ಪರ ಭರ್ಜರಿ ದಾಳಿ ಸಂಘಟಿಸಿದ ಆರ್ ಅಶ್ವಿನ್ 5 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ ಮತ್ತು ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.

    ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತಪರ 2ನೇ ದಿನದಾಟದಲ್ಲಿ ರಿಷಬ್ ಪಂತ್ 58 ರನ್(77 ಬಾಲ್, 7 ಬೌಂಡರಿ, 3 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಬಾಲಂಗೋಚಿ ಬ್ಯಾಟ್ಸ್‌ಮ್ಯಾನ್ ಗಳು ಯಾರು ಸಾಥ್ ಕೊಡದ ಹಿನ್ನೆಲೆ ಭಾರತ ಅಂತಿಮವಾಗಿ 329 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.

  • ದಾಖಲೆಯ ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಹಿಟ್‍ಮ್ಯಾನ್ ರೋಹಿತ್

    ದಾಖಲೆಯ ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಹಿಟ್‍ಮ್ಯಾನ್ ರೋಹಿತ್

    ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಹಲವು ದಾಖಲೆಗಳ ಸರದಾರನಾಗಿ ಭಾರತಕ್ಕೆ ಆಸರೆಯಾಗಿದ್ದಾರೆ.

    ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಎರಡನೇ ಓವರ್‍ನಲ್ಲೇ ಆಘಾತ ಎದುರಾಯಿತು. ಆರಂಭಿಕ ಬ್ಯಾಟ್ಸ್‌ಮ್ಯಾನ್ ಶುಭ್ಮನ್ ಗಿಲ್ ಶೂನ್ಯಕ್ಕೆ ಔಟ್ ಆದರೆ, ನಂತರ ಬಂದ ಚೇತೇಶ್ವರ ಪೂಜಾರ 21 ರನ್‍ಗೆ ಸುಸ್ತಾದರು. ನಾಯಕ ಕೊಹ್ಲಿ ಶೂನ್ಯ ಸುತ್ತಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 4ನೇ ವಿಕೆಟ್‍ಗೆ ಜೊತೆಯಾದ ರೋಹಿತ್ ಮತ್ತು ಅಜಿಂಕ್ಯ ರಹಾನೆ 162 ರನ್ (310 ಬಾಲ್) ಜೊತೆಯಾಟವಾಡಿ ಭಾರತಕ್ಕೆ ಚೇತರಿಕೆ ನೀಡಿದರು.

    ರೋಹಿತ್ ಶರ್ಮಾ 161 ರನ್ (231 ಬಾಲ್, 18 ಬೌಂಡರಿ, 2 ಸಿಕ್ಸರ್) ಸಿಡಿಸಿ ತಮ್ಮ ಏಳನೇ ಶತಕದೊಂದಿಗೆ ಸಂಭ್ರಮಾಚರಿಸಿದರು. ಈ ಎಲ್ಲಾ ಏಳು ಶತಕಗಳು ಭಾರತದಲ್ಲೇ ಬಂದಿರುವುದು ವಿಶೇಷ ದಾಖಲೆಯಾಗಿದೆ. ಇದರೊಂದಿಗೆ ಇನ್ನೊಂದು ದಾಖಲೆಗೆ ಸಾಕ್ಷಿಯಾಗಿರುವ ರೋಹಿತ್ ಇಂಗ್ಲೆಂಡ್ ವಿರುದ್ಧ ಮೂರು ಮಾದರಿ ಕ್ರಿಕೆಟ್ (ಟೆಸ್ಟ್, ಟಿ20, ಏಕದಿನ) ನಲ್ಲಿ ಶತಕ ಬಾರಿಸಿ ದಾಖಲೆ ಬರೆದರು. ಈ ಮೂಲಕ ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಎಲ್ಲಾ ಮೂರು ಮಾದರಿ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರನಾಗಿ ದಾಖಲೆ ಬರೆದರು.

    ರೋಹಿತ್‍ಗೆ ಉತ್ತಮ ಸಾಥ್ ನೀಡಿದ ಉಪನಾಯಕ ಅಜಿಂಕ್ಯ ರಹಾನೆ 67 ರನ್(149 ಬಾಲ್, 9 ಬೌಂಡರಿ) ಬಾರಿಸಿ ಮಿಂಚಿದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 300 ರನ್‍ಗೆ 6 ವಿಕೆಟ್ ಕಳೆದುಕೊಂಡಿದೆ. ರಿಷಬ್ ಪಂತ್ 33 ರನ್ (56 ಬಾಲ್, 5 ಬೌಂಡರಿ, 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ 13 ರನ್ (19 ಬಾಲ್, 1 ಬೌಂಡರಿ) ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಇಂಗ್ಲೆಂಡ್ ಪರ ಜೆಕ್ ಲೀಚ್ ಮತ್ತು ಮೊಯಿನ್ ಆಲಿ 2 ವಿಕೆಟ್ ಪಡೆದು ಮಿಂಚಿದರೆ, ಓಲಿ ಸ್ಟೋನ್ ಮತ್ತು ಜೋ ರೂಟ್ ತಲಾ 1 ವಿಕೆಟ್ ಕಬಳಿಸಿದರು.