Tag: england

  • ಹಿಟ್ ಮ್ಯಾನ್, ಕೊಹ್ಲಿ ಅಬ್ಬರ- ಸರಣಿ ಗೆದ್ದ ಭಾರತ

    ಹಿಟ್ ಮ್ಯಾನ್, ಕೊಹ್ಲಿ ಅಬ್ಬರ- ಸರಣಿ ಗೆದ್ದ ಭಾರತ

    ಅಹಮದಾಬಾದ್: ಒಟ್ಟು 5 ಪಂದ್ಯಗಳ ಪೈಕಿ ತಲಾ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಹಾಗೂ ಇಂಗ್ಲೆಂಡ್ ಇಂದು ನಿರ್ಣಾಯಕ ಪಂದ್ಯವನ್ನಾಡಿದ್ದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಆಟದಿಂದಾಗಿ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ಕೊನೇಯ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ. 36 ರನ್‍ಗಳಿಂದ ಭಾರತ ವಿಜಯಿಯಾಗಿದ್ದು, 3-2 ಅಂತರದಲ್ಲಿ ಸರಣಿಯನ್ನು ತನ್ನದಾಗಹಿಸಿಕೊಂಡಿದೆ.

    ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಆರಂಭಿಕ ಆಟಗಾರಾಗಿ ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಇಬ್ಬರೂ ಉತ್ತಮ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್ ಬೌಲರ್‍ಗಳ ಬೆವರಿಳಿಸಿದರು. ಜೊತಯಾಟದಲ್ಲಿ ಬರೋಬ್ಬರಿ 94 ರನ್ ಗಳಿಸುವ ಮೂಲಕ ಸತತ ಮೂರನೇ ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ನಾಯಕ ಐಯಾನ್ ಮಾರ್ಗನ್ ಅವರ ಯೋಜನೆಯನ್ನು ತಲೆ ಕೆಳಗೆ ಮಾಡಿದರು.

    ಹಿಟ್ ಮ್ಯಾನ್ ಸ್ಫೋಟಕ ಅರ್ಧ ಶತಕ
    ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಭಾರತ ತಂಡ ಉತ್ತಮ ರನ್ ಕಲೆ ಹಾಕಲು ಸಹಕಾರಿಯಾಯಿತು. ಕೇವಲ 34 ಎಸೆತಗಳಿಗೆ 64 ರನ್(6 ಸಿಕ್ಸ್, 4 ಬೌಂಡರಿ) ಕಲೆ ಹಾಕುವ ಮೂಲಕ ತಂಡಕ್ಕೆ ಬೃಹತ್ ರನ್‍ಗಳ ಕೊಡುಗೆ ನೀಡಿದರು. ಆರಂಭದಿಂದಲೂ ಅಬ್ಬರದ ಆಟವಾಡಿದ್ದ ರೋಹಿತ್ ಶರ್ಮಾ 8ನೇ ಓವರ್ ನ ಕೊನೆಯಲ್ಲಿ ಬೆನ್ ಸ್ಟೋಕ್ ಬಾಲ್‍ಗೆ ಕ್ಲೀನ್ ಬೋಲ್ಡ್ ಆದರು.

    ಅಚ್ಚರಿ ಮೂಡಿಸಿದ ವಿರಾಟ್
    ನಾಯಕ ವಿರಾಟ್ ಕೊಹ್ಲಿ ಆರಂಭಿಕ ಆಟಗಾರಾರಾಗಿ ಕಣಕ್ಕಿಳಿದು ಔಟಾಗದೆ 52 ಬಾಲ್‍ಗೆ 80 ರನ್(2 ಸಿಕ್ಸ್ 7 ಬೌಂಡರಿ) ಚೆಚ್ಚಿ ತಂಡದ ಮೊತ್ತವನ್ನು 200 ದಾಟಿಸುವಲ್ಲಿ ಬೃಹತ್ ಕೊಡುಗೆ ನೀಡಿದರು. ಪಂದ್ಯವನ್ನು ಗೆಲುವಿನ ದಡಕ್ಕೆ ತಂದರು. ಇಬ್ಬರು ಆಟಗರರೊಂದಿಗೆ ಉತ್ತಮ ಜೊತೆಯಾಟವಾಡಿ ವಿರಾಟ್ ಕೊಹ್ಲಿ ಉತ್ತಮ ರನ್ ಕಲೆ ಹಾಕಿದರು. ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟವಾಡಿ 56 ಬಾಲ್‍ಗೆ 94 ರನ್ ಸಿಡಿಸಿದ್ದು, ಈ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದಲ್ಲಿ 26 ಬಾಲ್‍ಗೆ 49 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ 3ನೇ ವಿಕೆಟ್‍ಗೆ 40 ಎಸೆತಗಳಿಗೆ 81 ರನ್ ಸಿಡಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

    ಕೊಹ್ಲಿ ದಾಖಲೆ
    ವಿರಾಟ್ ಕೊಹ್ಲಿ ಟಿ20ಯಲ್ಲಿ 12 ಅರ್ಧ ಶತಕ ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಬರೆದರು. ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸ್ 11 ಅರ್ಧ ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ಅರೋನ್ ಪಿಂಚ್ 10 ಅರ್ಧ ಶತಕ ದಾಖಲಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 17 ಎಸೆತದಲ್ಲಿ 32 ಮತ್ತು ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 39 ರನ್ ಪೇರಿಸಿದರು.

    ಭುವನೇಶ್ವರ್ ಕುಮಾರ್ ಪ್ಲೇಯರ್ ಆಫ್ ದಿ ಮ್ಯಾಚ್
    ಕೇವಲ 15 ರನ್ ನೀಡಿ 2 ವಿಕೆಟ್ ಪಡೆದು ಅತ್ಯದ್ಭುತವಾಗಿ ಬಾಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಗೆ ಪ್ಲೇಯರ್ ಆಫ್ ದಿ ಮ್ಯಾಚ್ ನೀಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ಲೇಯರ್ ಆಫ್ ದಿ ಸಿರೀಸ್ ಸಹ ನೀಡಲಾಗಿದೆ.

    ಸೂರ್ಯಕುಮಾರ್ ಯಾದವ್ ಸಹ ಅದೇ ವೇಗದಲ್ಲಿ ಆಟವಡಲು ಯತ್ನಿಸಿದರು. 17 ಬಾಲ್‍ಗೆ 32ರನ್(2 ಸಿಕ್ಸ್, 3 ಬೌಂಡರಿ) ಸಿಡಿಸಿದರು. ಉತ್ತಮ ಆಡವಾಡುತ್ತಿದ್ದರೂ 13ನೇ ಓವರ್ ಆರಂಭದಲ್ಲಿ ಕ್ರಿಸ್ ಜೋರ್ಡನ್ ಬಾಲ್‍ಗೆ ಜೇಸನ್ ರಾಯ್‍ಗೆ ಕ್ಯಾಚ್ ನೀಡಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಔಟಾಗದೆ 17 ಬಾಲ್‍ಗೆ 39 ರನ್(2 ಸಿಕ್ಸ್, 4 ಬೌಂಡರಿ) ಸಿಡಿಸಿದರು.

    ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಹಾಗೂ ಇಂಗ್ಲೆಂಡ್ ಟಿ-20 ಸರಣಿಯಲ್ಲಿ ಸಮ ಬಲ ಸಾಧಿಸಿದ್ದವು. ಇದು ನಿರ್ಣಾಯಕ ಪಂದ್ಯವಾಗಿದ್ದರಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು.

    ಗೆಲುವಿಗೆ 225 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ಗೆ ಆರಂಭಿಕ ಆಘಾತ ನೀಡಿದ ಭೂವನೇಶ್ವರ್ ಕುಮಾರ್ ಎರಡನೇ ಬಾಲ್‍ಗೇ ಜೇಸನ್ ರಾಯ್‍ರನ್ನು ಕ್ಲೀನ್ ಬೋಲ್ಡ್ ಮಾಡಿದರು. ಈ ಮೂಲಕ ರಾಯ್ ಡಕೌಟ್ ಆದರು. ಅಬ್ಬರದ ಆಟವಾಡಿ 34 ಎಸೆತಗಳಿಗೆ 52 ರನ್(4 ಸಿಕ್ಸ್, 2 ಬೌಂಡರಿ) ಸಿಡಿಸಿ ಬಟ್ಲರ್ ಜೋಸ್ ಬಟ್ಲರ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್‍ಸ್ಟೋವ್ 7 ರನ್ (1 ಬೌಂಡರಿ) ಸಿಡಿಸಿ ಕ್ಯಾಚ್ ಸೂರ್ಯಕುಮಾರ್ ಯಾದವ್‍ಗೆ ಕ್ಯಾಚ್ ನೀಡಿದರು. ಬಳಿಕ ಡೇವಿಡ್ ಮಲನ್ ಮಿಂಚಿನಾಟವಾಡಿ 46 ಬಾಲ್‍ಗೆ 68 ರನ್ ಸಿಡಿಸಿ(2 ಸಿಕ್ಸ್, 9 ಬೌಂಡರಿ) ಶಾರ್ದೂಲ್ ಠಾಕೂರ್ ಅವರ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ಐಯಾನ್ ಮಾರ್ಗನ್ ಸಹ 1 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 12 ಬಾಲ್‍ಗೆ 14ರನ್(2 ಬೌಂಡರಿ) ಬಾರಿಸಿ 18ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ಇದೇ ಓವರ್ ಕೊನೇ ಬಾಲ್‍ಗೆ ಜೋಫ್ರಾ ಆರ್ಚರ್ 1 ರನ್ ಹೊಡೆದು ರನ್‍ಔಟ್ ಆದರು. ಕೊನೆಯದಾಗಿ ಕ್ರಿಸ್ ಜಾರ್ಡನ್ 10 ಬಾಲ್‍ಗೆ 11 ರನ್(1 ಸಿಕ್ಸ್) ಬಾರಿಸಿ ಸೂರ್ಯಕುಮಾರ್ ಯಾದವ್ ಅವರಿಗೆ ಕ್ಯಾಚ್ ನೀಡಿದರು.

  • ಸಿಡಿದ ಸೂರ್ಯಕುಮಾರ್ ಯಾದವ್- ಇಂಗ್ಲೆಂಡ್ ವಿರುದ್ಧ ವಿಜಯಪತಾಕೆ ಹಾರಿಸಿದ ಭಾರತ

    ಸಿಡಿದ ಸೂರ್ಯಕುಮಾರ್ ಯಾದವ್- ಇಂಗ್ಲೆಂಡ್ ವಿರುದ್ಧ ವಿಜಯಪತಾಕೆ ಹಾರಿಸಿದ ಭಾರತ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ರನ್‍ಗಳ ರೋಚಕ ಜಯ ಸಾಧಿಸಿದೆ. ಈ ಮೊದಲು ಬ್ಯಾಟಿಂಗ್‍ನಲ್ಲಿ ಭಾರತದ ಯುವ ಆಟಗಾರ ಸೂರ್ಯಕಮಾರ್ ತನ್ನ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನ ಮೊದಲ ಅರ್ಧಶತಕವನ್ನು ಭರ್ಜರಿಯಾಗಿ ಸಿಡಿಸಿ ಸಂಭ್ರಮಾಚರಿಸಿಕೊಂಡರು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಟಿ20 ಪಂದ್ಯದ ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ಬೌಲರ್ ಗಳು  ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ರನ್(12 ಬಾಲ್ 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಂತೆ 3ನೇ ಓವರ್‍ನಲ್ಲಿ ದಾಳಿಗಿಳಿದ ಜೊಫ್ರಾ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಕೆ.ಎಲ್ ರಾಹುಲ್ ಒಂದು ಬೌಂಡರಿ ಸಿಡಿಸಿ ಆರ್ಭಟಿಸುವ ಲಕ್ಷಣ ತೋರಿದರು ಕೂಡ ಅವರ ಆಟ 14 ರನ್ (17 ಬಾಲ್, 2 ಬೌಂಡರಿ)ಗೆ ಅಂತ್ಯವಾಯಿತು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ 1 ರನ್ ಗೆ ಸುಸ್ತಾದರು. ಈ ವೇಳೆ ಒಂದಾದ ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ 4ನೇ ವಿಕೆಟ್‍ಗೆ 48 ರನ್(28 ಬಾಲ್) ಸಿಡಿಸಿ ತಂಡಕ್ಕೆ ಚೇತರಿಕೆಯ ಜೊತೆಯಾಟವಾಡಿದರು. ಪಂತ್ 30 ರನ್(23 ಬಾಲ್, 4 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೊಂದು ಕಡೆಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ 57 ರನ್(31 ಬಾಲ್, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ತಮ್ಮ ಟಿ20 ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿ ಸಂಭ್ರಮ ಆಚರಿಸಿಕೊಂಡರು.

    ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 37( 18 ಎಸೆತ, 5 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟ್ ಆದರು ಅಂತಿಮವಾಗಿ ಭಾರತ ತಂಡ 20 ಒವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಕಳೆಹಾಕಿತು.

    ಗೆಲುವಿಗೆ 186 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್, 9ರನ್(6 ಎಸೆತ, 1 ಸಿಕ್ಸರ್) ಹೊಡದು ಆಡುತ್ತಿದ್ದ ಜೋಸ್ ಬಟ್ಲರ್ ವಿಕೆಟ್ ಪಡೆದರು. ನಂತರ ಬಂದ ಡೇವಿಡ್ ಮಲಾನ್ 14 ರನ್( 17 ಎಸೆತ, 1 ಸಿಕ್ಸರ್)ಗೆ ವಿಕೆಟ್ ಒಪ್ಪಿಸಿದರು. ನಂತರ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಜೇಸನ್ ರಾಯ್ 40 ರನ್(27 ಎಸೆತ,6 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತ ಬೌಲರ್‌ಗಳಿಗೆ ಕಾಡಿದರು. ಬಳಿಕ ಬೆನ್ ಸ್ಟೋಕ್ 46 ರನ್ (23 ಎಸೆತ,4 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟ್ ಆದರು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಜೋಫ್ರಾ ಆರ್ಚರ್ 18 ರನ್( 8 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿದರು ಕೂಡ ಅಂತಿಮವಾಗಿ ನಿಗದಿತ ಒವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 8 ರನ್‍ಗಳ ಅಂತರದಲ್ಲಿ ಸೋಲುಂಡಿದೆ. ಭಾರತ 8 ರನ್‍ಗಳ ರೋಚಕ ಗೆಲುವಿನೊಂದಿಗೆ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ ಮುಂದಿನ ಕೊನೆಯ ಪಂದ್ಯ ಶನಿವಾರ ನಡೆಯಲಿದ್ದು, ಫೈನಲ್ ಹಣಾಹಣಿಯಂತಾಗಿದೆ.

  • 2 ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಕ್ಕೆ ಕಾರಣ ತಿಳಿಸಿದ ನೆಟ್ಟಿಗರು

    2 ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಕ್ಕೆ ಕಾರಣ ತಿಳಿಸಿದ ನೆಟ್ಟಿಗರು

    – ಕದ್ದು ತಿಂಡಿ ತಿಂದು ಸಿಕ್ಕಿಬಿದ್ದ ರೋಹಿತ್ ಶರ್ಮಾ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯ 2 ಪಂದ್ಯಗಳಿಂದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊರಗುಳಿದಿದ್ದರು. ಇದೀಗ ರೋಹಿತ್ ಶರ್ಮಾ ಯಾವ ಕಾರಣಕ್ಕೆ 2 ಪಂದ್ಯಗಳಿಂದ ಹೊರಗೆ ಉಳಿದಿದ್ದರು ಎಂಬ ಬಗ್ಗೆ ನೆಟ್ಟಿಗರು ಕಾರಣ ಕೊಟ್ಟಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಮತ್ತು ಎರಡನೇ ಪಂದ್ಯದಿಂದ ರೋಹಿತ್ ಶರ್ಮಾ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳದೆ ವಿಶ್ರಾಂತಿಯಲ್ಲಿದ್ದರು. ಆದರೆ ನೆಟ್ಟಿಗಾರು ಮಾತ್ರ ರೋಹಿತ್ ಯಾಕೆ ಆಡುವ ಬಳಗಲ್ಲಿ ಕಾಣಿಸಿಕೊಂಡಿಲ್ಲ ಎಂಬ ಬಗೆಗೆ ಒಂದು ವೀಡಿಯೋ ತುಣುಕನ್ನು ಹಾಕಿ ಉತ್ತರ ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ರೋಹಿತ್ ಶರ್ಮಾ ತರಬೇತಿ ಸಿಬ್ಬಂದಿ ಹಿಂದೆ ಕುಳಿತುಕೊಂಡು ಕದ್ದು ತಿಂಡಿ ತಿನ್ನುತ್ತಿದ್ದರು. ಇದನ್ನು ಗಮನಿಸಿದ ಕ್ಯಾಮೆರಾ ಮ್ಯಾನ್ ಈ ದೃಶ್ಯವನ್ನು ಸೆರೆ ಹಿಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಹಿಟ್ ಮ್ಯಾನ್‍ಗೆ ಪಂದ್ಯಕ್ಕಿಂತ ವಡಾಪಾವ್ ಮುಖ್ಯ 2ನೇ ಪಂದ್ಯದಿಂದ ಹೊರಗುಳಿಯಲು ಇದೇ ಕಾರಣ ಎಂದು ಟ್ರೋಲ್ ಮಾಡಿದ್ದಾರೆ.

    ವಡಾಪಾವ್ ತಿನ್ನುವ ಧಾವಂತದಲ್ಲಿದ್ದ ರೋಹಿತ್ ಕೆಳಗೆ ಬಗ್ಗಿಕೊಂಡು ತಿಂಡಿಯನ್ನು ಕಚ್ಚಿ ನಂತರ ಮೇಲೆ ನೋಡುತ್ತಿರುವ ದೃಶ್ಯವನ್ನು ನೋಡಿರುವ ನೆಟ್ಟಿಗರು ಹಲವು ಬಗೆ ಬಗೆಯ ಟ್ರೋಲ್‍ಗಳನ್ನು ಮಾಡುತ್ತಿದ್ದಾರೆ.

    ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಮುಂದಿನ ಪಂದ್ಯಗಳಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು ಈಗಾಗಲೇ ತಂಡದೊಂದಿಗೆ ಅಭ್ಯಾಸದಲ್ಲಿ ತೋಡಗಿಕೊಂಡಿದ್ದಾರೆ.

    ಇದೀಗ ಎಲ್ಲೆಡೆ ಹಿಟ್‍ಮ್ಯಾನ್ ತಿಂಡಿ ಕದ್ದುತಿನ್ನುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಇದು ಸೊಗಸಾದ ಆಹಾರ ಸಿಕ್ಕಂತಾಗಿದೆ.

  • 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ಅಹಮದಾಬಾದ್‌: ಇಂಗ್ಲೆಂಡ್‌ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಐಸಿಸಿ ಶೇ.20 ರಷ್ಟು ದಂಡವನ್ನು ವಿಧಿಸಿದೆ.

    ನಿಗದಿತ ಸಮಯಕ್ಕಿಂತಲೂ ಒಂದು ಓವರ್‌ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಪಂದ್ಯದ ರೆಫ್ರಿ ಜಾವಗಲ್‌ ಶ್ರೀನಾಥ್‌ ಭಾರತ ತಂಡಕ್ಕೆ ದಂಡ ವಿಧಿಸಿದ್ದಾರೆ.

    ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಅವಧಿಯ ಒಳಗಡೆ ತಂಡ ತನ್ನ ಬೌಲಿಂಗ್‌ ಕೋಟಾವನ್ನು  ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯ ಒಳಗಡೆ ಬೌಲಿಂಗ್‌ ಮುಕ್ತಾಯಗೊಳಿಸದಿದ್ದರೆ ಆಟಗಾರರು ತಮ್ಮ  ಪಂದ್ಯದ ಶುಲ್ಕದ ಶೇ.20 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

    ನಾಯಕ ಕೊಹ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ್ದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.

    ಆನ್-ಫೀಲ್ಡ್ ಅಂಪೈರ್‌ಗಳಾದ ಅನಿಲ್ ಚೌಧರಿ, ಕೆ.ಎನ್. ಅನಂತಪದ್ಮನಾಭನ್ ಮತ್ತು ಮೂರನೇ ಅಂಪೈರ್ ವೀರೇಂದ್ರ ಶರ್ಮಾ ಅವರು ರೆಫ್ರಿಗೆ ಭಾರತ ತಂಡದ ವಿರುದ್ಧ ದೂರು ನೀಡಿದ್ದರು.

    ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 165 ರನ್‌ಗಳ ಗುರಿಯನ್ನು ಪಡೆದಿದ್ದ ಭಾರತ 3 ವಿಕೆಟ್‌ ಕಳೆದುಕೊಂಡು ಜಯವನ್ನು ಸಾಧಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಇಶಾನ್‌ ಕಿಶನ್‌ 56 ರನ್‌(32 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿರಾಟ್‌ ಕೊಹ್ಲಿ ಅಜೇಯ 73 ರನ್‌(49 ಎಸೆತ, 5 ಬೌಂಡರಿ, 3 ಸಿಕ್ಸರ್‌) ಹೊಡೆದು ಭಾರತಕ್ಕೆ ಜಯವನ್ನು ತಂದುಕೊಟ್ಟರು.

    ಒಂದು ಪಂದ್ಯಕ್ಕೆ ಎಷ್ಟು ನಿಮಿಷ?
    ಒಂದು ಟಿ 20 ಪಂದ್ಯ 180 ನಿಮಿಷಗಳಲ್ಲಿ ಮುಗಿಯಬೇಕಾಗುತ್ತದೆ. ಒಂದು ಇನ್ನಿಂಗ್ಸ್‌ಗೆ 90 ನಿಮಿಷ ಇರುತ್ತದೆ. ಎರಡು ಇನ್ನಿಂಗ್ಸ್‌ ನಡುವೆ 10 ನಿಮಿಷ ಬ್ರೇಕ್‌ ಇರುತ್ತದೆ. 90 ನಿಮಿಷದ ಒಳಗಡೆ ಇನ್ನಿಂಗ್ಸ್‌ ಮುಗಿಯದೇ ಇದ್ದಲ್ಲಿ ಬೌಲಿಂಗ್‌ ಹಾಕುವ ತಂಡಕ್ಕೆ ದಂಡವನ್ನು ವಿಧಿಸಲಾಗುತ್ತದೆ.

  • ಎಬಿಡಿಯೊಂದಿಗೆ ಸ್ಪೆಷಲ್ ಚಾಟ್ – ಬ್ಯಾಟಿಂಗ್ ಲಯಕ್ಕೆ ಮರಳಿದ ಕೊಹ್ಲಿ

    ಎಬಿಡಿಯೊಂದಿಗೆ ಸ್ಪೆಷಲ್ ಚಾಟ್ – ಬ್ಯಾಟಿಂಗ್ ಲಯಕ್ಕೆ ಮರಳಿದ ಕೊಹ್ಲಿ

    ಅಹಮದಾಬಾದ್: ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ಕೊಹ್ಲಿ ತನ್ನ ಬ್ಯಾಟಿಂಗ್ ಫಾರ್ಮ್‍ಗೆ ಮರಳಲು ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಅವರೊಂದಿಗೆ ಮಾಡಿದ ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಮತ್ತು ಮೊದಲ ಟಿ 20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಕಾರಣ ಅಭಿಮಾನಿಗಳಿಂದ ಭಾರಿ ಟೀಕೆಗೆ ಒಳಗಾಗಿದ್ದರು. ವಿರಾಟ್ ಬ್ಯಾಟಿಂಗ್ ಫಾರ್ಮ್ ಕೂಡ ಕೈ ಕೊಟ್ಟಿತ್ತು. ಆದರೆ ಎರಡನೇ ಟಿ20 ಯಲ್ಲಿ ವಿರಾಟ್ 73 ರನ್(49 ಎಸೆತ,5 ಬೌಂಡರಿ, 3 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಿದ್ದರು. ಆದರೆ ಪಂದ್ಯದ ಬಳಿಕ ಬ್ಯಾಟಿಂಗ್ ಲಯಕ್ಕೆ ಮರಳಲು ಎಬಿಡಿ ಜೊತೆ ಮಾಡಿದ ಆ ಒಂದು ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.

    ಪಂದ್ಯ ಮುಗಿದ ಬಳಿಕ ಎಬಿಡಿ ಜೊತೆ ಮಾಡಿದ ಸ್ಪೆಷಲ್ ಚಾಟ್ ಬಗ್ಗೆ ಮಾತನಾಡಿದ ಕೊಹ್ಲಿ ನಾನು ಪಂದ್ಯದ ಮೊದಲು ಎಬಿಡಿಗೆ ಸಂದೇಶ ಕಳುಹಿಸಿದ್ದೆ. ಅವರು ನನಗೆ ನೀನು ಬಾಲ್‍ನ್ನು ಸರಿಯಾಗಿ ಗಮನಿಸು ಎಂದಿದ್ದರು. ನಾನು ಅವರು ತಿಳಿಸಿದಂತೆ ಬಾಲ್‍ನ್ನು ಸರಿಯಾಗಿ ಗಮನಿಸಿ ಆಟವಾಡಿದೆ ಎಂದು ಸ್ನೇಹಿತನ ಜೊತೆಗಿನ ವಿಶೇಷ ಸಂದೇಶವನ್ನು ಕೊಹ್ಲಿ ಎಲ್ಲರೊಂದಿಗೆ ಹಂಚಿಕೊಂಡರು.

    ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಪರ ಇಬ್ಬರು ಆಡುತ್ತಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ವೇಳೆ ಕೊಹ್ಲಿ ಎಬಿಡಿ ಆರ್‌ಸಿಬಿಯ ಏಲಿಯನ್ ಆಟಗಾರನೆಂದು ವಿಶೇಷವಾಗಿ ಬಣ್ಣಿಸಿದ್ದರು.

    2ನೇ ಟಿ20 ಪಂದ್ಯದಲ್ಲಿ ರಾಹುಲ್ ಔಟ್ ಆದ ಬಳಿಕ ಕ್ರಿಸ್‍ಗೆ ಬಂದು ಉತ್ತಮವಾಗಿ ಆಡಿ ಕೊನೆಯವರೆಗೆ ಬ್ಯಾಟಿಂಗ್ ಮಾಡಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಇದರೊಂದಿಗೆ ಇದೇ ಪಂದ್ಯದಲ್ಲಿ ವಿರಾಟ್ ಟಿ20 ಕ್ರಿಕೆಟ್ ಪಂದ್ಯದಲ್ಲಿ 3 ಸಾವಿರ ರನ್ ಸಿಡಿಸಿದ ವಿಶ್ವದ ಮೊದಲ ಪುರುಷ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೂ ಕಾರಣರಾಗಿದ್ದರು.

  • ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ – ಭಾರತಕ್ಕೆ 7 ವಿಕೆಟ್‍ಗಳ ಜಯ

    ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ – ಭಾರತಕ್ಕೆ 7 ವಿಕೆಟ್‍ಗಳ ಜಯ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 13 ಬಾಲ್ ಇರುವಂತೆ 7 ವಿಕೆಟ್ ನಿಂದ ಗೆದ್ದು ಬೀಗಿದೆ.

    ಈ ಮೂಲಕ ಮೊದಲ ಟಿ20 ಸೋಲಿನ ಸೇಡನ್ನು ಭಾರತ ತಂಡ ಇಂಗ್ಲೆಂಡ್ ವಿರುದ್ಧ ತೀರಿಸಿಕೊಂಡಿದೆ. ಗುಜಾರಾತ್‍ನ ಮೋದಿ ಕ್ರೀಡಾಂಗಣದಲ್ಲಿ ಭಾರತದ ಯುವ ಆಟಗಾರ ಇಶಾನ್ ಕಿಶನ್ ತನ್ನ ಪಾದಾರ್ಪಣ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬರಿದ್ದಾರೆ. ಈ ಮೂಲಕ ಇಂಗ್ಲೆಂಡ್ ನೀಡಿದ 165 ರನ್‍ಗಳ ಗುರಿಯನ್ನು ಭಾರತ 17.5 ಓವರ್‌ನಲ್ಲಿ ಚೇಸ್ ಮಾಡಿ ಗೆದ್ದಿದೆ.

    ರಾಹುಲ್ ಜೊತೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕಿಶನ್ 56 ರನ್ ( 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ತನ್ನ ಬ್ಯಾಟಿಂಗ್ ವೈಭವ ತೋರಿಸಿದರು. ಆದರೆ ಇತ್ತ ಕನ್ನಡಿಗ ಕೆಎಲ್ ರಾಹುಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

    ರಾಹುಲ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗಿಳಿದ ವಿರಾಟ್ ಕೊಹ್ಲಿ 73 ರನ್(49 ಎಸೆತ, 5 ಬೌಡಂರಿ, 3 ಸಿಕ್ಸರ್) ಸಿಡಿಸಿ ತಮ್ಮ ರನ್ ಬರ ತೀರಿಸಿಕೊಂಡರು. ಕಡೆಯವರೆಗೆ ಬ್ಯಾಟ್ ಬೀಸಿದ ಕೊಹ್ಲಿ ಭರ್ಜರಿ ಸಿಕ್ಸರ್ ಮೂಲಕ ಮ್ಯಾಚ್ ಗೆಲ್ಲಿಸಿಕೊಟ್ಟರು. ಕೊಹ್ಲಿಗೆ ಪಂತ್ 26 ರನ್(13 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ 8 ರನ್(8 ಎಸೆತ) ಮಾಡಿ ಉತ್ತಮ ಸಾತ್ ನೀಡಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡ ಜೇಸನ್ ರಾಯ್ 46 ರನ್(35 ಎಸೆತ, 4 ಬೌಂಡರಿ, 2 ಸಿಕ್ಸರ್), ಡೇವಿಡ್ ಮಲಾನ್ 24 ರನ್(23 ಎಸೆತ, 4 ಬೌಂಡರಿ), ಜಾನಿ ಬ್ಯೈರೊಸ್ಟೊ 20 ರನ್(15 ಎಸೆತ 1 ಬೌಂಡರಿ, 1 ಸಿಕ್ಸರ್) ಮೋರ್ಗನ್ 28 ರನ್( 20 ಎಸೆತ, 4 ಬೌಂಡರಿ) ಮತ್ತು ಬೇನ್ ಸ್ಟೋಕ್ 24 ರನ್ (21 ಎಸೆತ, 1 ಬೌಂಡರಿ) ನೆರವಿನಿಂದ ನಿಗದಿತ 20 ಓವರ್ ಗೆ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು ಭಾರತದ ಪರ ಚಹಲ್ 2 ವಿಕೆಟ್ ಕಿತ್ತು ಮಿಂಚಿದರೆ, ಭುವನೇಶ್ವರ್ ಕಮಾರ್, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಿತ್ತು ಮಿಂಚಿದರು.

  • ಕೆ.ಎಲ್ ರಾಹುಲ್ ಅದ್ಭುತ ಫೀಲ್ಡಿಂಗ್‍ಗೆ ಬೆರಗಾದ ಅಭಿಮಾನಿಗಳು

    ಕೆ.ಎಲ್ ರಾಹುಲ್ ಅದ್ಭುತ ಫೀಲ್ಡಿಂಗ್‍ಗೆ ಬೆರಗಾದ ಅಭಿಮಾನಿಗಳು

    ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲಿ ಫ್ಲಾಪ್ ಆದ ಕನ್ನಡಿಗ ಕೆ.ಎಲ್ ರಾಹುಲ್ ಫೀಲ್ಡಿಂಗ್‍ನಲ್ಲಿ ತಮ್ಮ ಖದರ್ ತೋರ್ಪಡಿಸುತ್ತಿದ್ದಾರೆ.

    ಟಿ-20 ಪಂದ್ಯಗಳಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ಅಬ್ಬರದ ಹೊಡಿಬಡಿ ಆಟದ ಮುಂದೆ ಬೌಲರ್‍ ಗಳು ಮಂಕಾಗುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಯಾವುದೇ ತಂಡದಲ್ಲೂ ಕೂಡ ಕ್ಷೇತ್ರ ರಕ್ಷಣೆ ಉತ್ತಮವಾಗಿದ್ದರೆ ಹಲವು ರನ್‍ಗಳಿಗೆ ಕಡಿವಾಣ ಹಾಕಬಹುದಾಗಿದೆ. ಇದರಂತೆ ಕಳೆದ ರಾತ್ರಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರ ಕನ್ನಡಿಗ ರಾಹುಲ್ ತಮ್ಮ ಅದ್ಭುತವಾದ ಫೀಲ್ಡಿಂಗ್‍ನಿಂದಾಗಿ ಬಟ್ಲರ್ ಸಿಡಿಸಿದ ಸಿಕ್ಸರ್ ನ್ನು ತಡೆದು 4 ರನ್‍ಗಳನ್ನು ಉಳಿತಾಯ ಮಾಡಿದ್ದಾರೆ.

    ಭಾರತ ತಂಡ ನೀಡಿದ 125 ರನ್‍ಗಳ ಗುರಿ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 4 ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್ ಎಸೆತವನ್ನು ಸಿಕ್ಸರ್‍ ಗಟ್ಟಲು ಪ್ರಯತ್ನಿಸಿದರು. ಆದರೆ ಬೌಂಡರಿ ರೋಪ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಹಾರಿ ಸಿಕ್ಸರ್ ಹೋಗುತ್ತಿದ್ದ ಬಾಲ್‍ನ್ನು ಹಿಡಿದು ಕೆಳಕ್ಕೆ ಎಸೆದು 4 ರನ್‍ಗಳನ್ನು ಸೇವ್ ಮಾಡಿದರು. ಆದರೂ ಭಾರತ ಇಂಗ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಸೋಲು ಅನುಭವಿಸಿದೆ. ಆದರೆ ಇತ್ತ ರಾಹುಲ್ ಅವರ ಫೀಲ್ಡಿಂಗ್ ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಸೂಪರ್ ಡೂಪರ್ ಕ್ಷೇತ್ರ ರಕ್ಷಣೆಗೆ ಮನಸೋತು ವೀಡಿಯೋದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಾಹುಲ್‍ರನ್ನು ಅಭಿನಂದಿಸಿದ್ದಾರೆ.

  • ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 8 ವಿಕೆಟ್ ಅಂತರದಿಂದ ಗೆದ್ದು ಬೀಗಿದೆ.

    ಟೆಸ್ಟ್ ಪಂದ್ಯವನ್ನು 3-1 ಅಂತರದಿಂದ ಗೆದ್ದಿದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೋಟೆರಾ ಅಂಗಳದಲ್ಲಿ ಕಣಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಪವರ್ ಪ್ಲೇ ಮುಗಿಯುವ ಮೊದಲೇ ಕೆ.ಎಲ್ ರಾಹುಲ್, 1 ರನ್, ಕೊಹ್ಲಿ 0, ಧವನ್ 4 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ನಂತರ ಬಂದ ರಿಷಬ್ ಪಂತ್ ಸಿಡಿಯುವ ಸೂಚನೆ ನೀಡಿದರು ಕೂಡ ಅವರ ಆಟ 21ರನ್( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಕೊನೆಗೊಂಡಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆಕರ್ಷಕ 67 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು.

    125 ರನ್‍ಗಳ ಗುರಿ ಪಡೆದು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿ ಜೋಸನ್ ರಾಯ್ ಮತ್ತು ಜೋಸ್ ಬಟ್ಲರ್ ಸ್ಪೋಟಕ 72 ರನ್‍ಗಳ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಚಹಾಲ್, 28ರನ್( 24 ಎಸೆತ,2 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಬಟ್ಲರ್ ಅವರ ವಿಕೆಟ್ ಪಡೆದರು. ನಂತರ ಜೋಸನ್ ರಾಯ್ 49 ರನ್( 32 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ, ನಂತರ ಬಂದ ಡೇವಿಡ್ ಮಲಾನ್ 24 ರನ್( 20 ಎಸೆತ,2 ಬೌಂಡರಿ, 1 ಸಿಕ್ಸರ್) ಮತ್ತು ಜಾನಿ ಬೈರ್ಸ್ಟೋವ್ 26 ರನ್( 17 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಇಂಗ್ಲೆಂಡ್ 15.3 ಬೌಲರ್‌ಗಳಲ್ಲಿ ಇನ್ನು 27 ಎಸೆತ ಬಾಕಿ ಇರುವಂತೆ 130 ರನ್‍ಗಳಿಸಿ ಭಾರತ ವಿರುದ್ಧ ಭರ್ಜರಿ ಜಯ ಗಳಿಸಿತು.

  • ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್  ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಹೊಡೆದ ರಿವರ್ಸ್ ಸ್ಕೂಪ್ ಕಂಡು ಮಾಜಿ ಆಟಗಾರರು ಸಹಿತ ಕ್ರೀಡಾಭಿಮಾನಿಗಳು ದಂಗಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿದ್ದ ಭಾರತ ಅಹಮದಾಬಾದ್‍ನ ಮೋಟೆರಾ ಕ್ರೀಡಾಂಗಣದಲ್ಲಿ ಇದೇ ಹುರುಪಿನಲ್ಲಿ ಟಿ-20 ಪಂದ್ಯಕ್ಕೆ ಸಜ್ಜಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ಇಳಿಯುತ್ತಿದ್ದಂತೆ ಪವರ್ ಪ್ಲೇ ಮುಗಿಯುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. ಈ ವೇಳೆ ಬ್ಯಾಟಿಂಗ್ ಇಳಿದ ಪಂತ್, ಜೊಫ್ರಾ ಆರ್ಚರ್ ಎಸೆದ 3ನೇ ಓವರ್‍ ನ ನಾಲ್ಕನೇ ಎಸೆತವನ್ನು ಆಕರ್ಷಕ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್‌ಗಟ್ಟಿದರು. ಇದನ್ನು ಕಂಡು ಮಾಜಿ ಆಟಗಾರರಾದ ವಿ.ವಿ.ಎಸ್ ಲಕ್ಷಣ್, ಯುವರಾಜ್ ಸಿಂಗ್, ಇಂಗ್ಲೆಂಡ್‍ನ ಕೆವಿನ್ ಪೀರ್ಟಸನ್ ಸಹಿತ ಹಲವು ಕ್ರಿಕೆಟಿಗರು ದಂಗಾಗಿದ್ದಾರೆ.

    ಪಂತ್ ಈ ಮೊದಲು ನಡೆದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇದೇ ರೀತಿಯ ಸಿಕ್ಸ್ ಅನ್ನು ಇಂಗ್ಲೆಂಡ್‍ನ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಬಾರಿಸಿ ಮಿಂಚಿದ್ದರು.

    ಪಂತ್ 23 ಎಸೆತಗಳಲ್ಲಿ 21ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ಬೆನ್‍ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಭಾರತ ಅಂತಿಮವಾಗಿ 20 ಓವರ್‍ ಗಳಲ್ಲಿ 124 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್‍ಗೆ 125 ರನ್‍ಗಳ ಗುರಿ ನೀಡಿದೆ.

  • ಮಗಳಿಂದ ಲವ್  ಟಾರ್ಚರ್​ಗೆ ಒಳಗಾದ ಅಶ್ವಿನ್

    ಮಗಳಿಂದ ಲವ್ ಟಾರ್ಚರ್​ಗೆ ಒಳಗಾದ ಅಶ್ವಿನ್

    ಚೆನ್ನೈ: ಭಾರತ ತಂಡದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯದ ಬಳಿಕ ಮನೆಗೆ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಮಗಳು ಅಶ್ವಿನ್‍ಗೆ ಲವ್ ಟಾರ್ಚರ್ ನೀಡಿದ್ದಾಳೆ.

    ಅಶ್ವಿನ್ 2 ತಿಂಗಳ ಕಾಲ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಕ್ರಿಕೆಟ್ ತಂಡದೊಂದಿಗೆ ಬಯೋ ಬಬಲ್‍ನಲ್ಲಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ 3-1 ಅಂತರದಲ್ಲಿ ಟೆಸ್ಟ್ ಸರಣಿ ಗೆಲುವಿನ ಬಳಿಕ ಅಶ್ವಿನ್ ಮನೆಗೆ ಆಗಮಿಸುತ್ತಿದ್ದಂತೆ ತಮ್ಮ ಮುದ್ದಿನ ಮಗಳು ಅಶ್ವಿನ್ ಜೊತೆ ತುಂಟಾಟ ಆಡುತ್ತಿರುವ ವೀಡಿಯೋ ಒಂದನ್ನು ಅಶ್ವಿನ್ ಪತ್ನಿ ಪ್ರೀತಿನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುದೀರ್ಘ ಕ್ರಿಕೆಟ್ ಬಳಿಕ ಅಶ್ವಿನ್ ವಿಶ್ರಾಂತಿಯಲ್ಲಿದ್ದಂತೆ ಮಗಳ ಲವ್ ಟಾರ್ಚರ್ ಮನೆಯಲ್ಲಿ ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 32 ವಿಕೆಟ್ ಸಹಿತ 189 ರನ್ ಸಿಡಿಸಿ ಭಾರತ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಅಶ್ವಿನ್ ಇದೀಗ ನಿಗದಿತ ಓವರ್‍ ಗಳ ಕ್ರಿಕೆಟ್‍ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯದ ಇರುವುದರಿಂದ ವಿಶ್ರಾಂತಿಯಲ್ಲಿದ್ದಾರೆ.

    ಕೆಲದಿನಗಳ ಹಿಂದೆ ಅಶ್ವಿನ್ ಅವರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಐಸಿಸಿಯು ಫೆಬ್ರವರಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ಅಶ್ವಿನ್ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿದ್ದರೆ, ನಿಗದಿತ ಓವರ್‍ ಗಳ ಕ್ರಿಕೆಟ್‍ನಲ್ಲಿ 2017ರ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅಶ್ವಿನ್ ಒಟ್ಟು 46 ಟಿ20 ಪಂದ್ಯಗಳಿಂದ 52 ವಿಕೆಟ್ ಕಬಳಿಸಿದ್ದು, 7ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದರೂ ಕೂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.