Tag: england

  • 8 ರನ್‌ ಅಂತರದಲ್ಲಿ 4 ವಿಕೆಟ್‌ ಪತನ – ಇಂಗ್ಲೆಂಡಿಗೆ 330 ರನ್‌ಗಳ ಗುರಿ

    8 ರನ್‌ ಅಂತರದಲ್ಲಿ 4 ವಿಕೆಟ್‌ ಪತನ – ಇಂಗ್ಲೆಂಡಿಗೆ 330 ರನ್‌ಗಳ ಗುರಿ

    ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಾಟದಲ್ಲಿ ಭಾರತ ಶಿಖರ್ ಧವನ್, ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್‍ಗೆ 330 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.

    ಭಾರತ ಪರ ಉತ್ತಮ ಆರಂಭ ನೀಡಿದ ಧವನ್ ಮತ್ತು ರೋಹಿತ್ ಜೊಡಿ ಮೊದಲ ವಿಕೆಟ್‍ಗೆ 103 ರನ್‍ಗಳ ಜೊತೆಯಾಟವಾಡಿ ಆರಂಭಿಕ ಮೇಲುಗೈ ತಂದುಕೊಟ್ಟರು. ಈ ವೇಳೆ ಉತ್ತಮ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ 37 ರನ್(37 ಎಸೆತ, 6 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಒಂದು ಬದಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಧವನ್ 67 ರನ್ ( 56 ಎಸೆತ, 10 ಬೌಂಡರಿ) ಮಾಡಿ 16.4 ಓವರ್ ವೇಳೆ ಅದೀಲ್ ರಶೀದ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಬಂದ ಕೊಹ್ಲಿ ಮತ್ತು ರಾಹುಲ್‌ 7 ರನ್‌ಗಳಿಸಿ ಔಟಾದರೂ ರಿಷಭ್‌ ಪಂತ್‌ ಮತ್ತು ಹಾರ್ದಿಕ್‌ ಪಾಂಡ್ಯ 5ನೇ ವಿಕೆಟಿಗೆ 99 ರನ್‌ಗಳ ಜೊತೆಯಾಟವಾಡಿ ಇನ್ನಿಂಗ್ಸ್‌ ಕಟ್ಟಿದರು.

    78 ರನ್‌(62 ಎಸೆತ, 5 ಬೌಂಡರಿ, 4 ಸಿಕ್ಸರ್‌) ಹೊಡೆದು ರಿಷಭ್‌ ಪಂತ್‌ ಔಟಾದಾಗ ಭಾರತದ ಸ್ಕೋರ್‌ 5 ವಿಕೆಟ್‌ ನಷ್ಟಕ್ಕೆ 256 ರನ್‌. 20 ರನ್‌ ಅಂತರದಲ್ಲಿ 64 ರನ್‌(44 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿದ್ದ ಹಾರ್ದಿಕ್‌ ಪಾಂಡ್ಯ ಔಟಾದರು.

    ಕೃನಾಲ್‌ ಪಾಂಡ್ಯ ಮತ್ತು ಶಾರ್ದೂಲ್‌ ಠಾಕೂರ್‌ ಉತ್ತಮವಾಗಿ ಆಡುತ್ತಿದ್ದರು. ಶಾರ್ದೂಲ್‌ ಠಾಕೂರ್‌ 30 ರನ್‌ ಗಳಿಸಿ ಔಟಾದ ಬೆನ್ನಲ್ಲೇ ಭಾರತ ದಿಢೀರ್‌ ಕುಸಿತ ಆರಂಭವಾಯಿತು. 6 ವಿಕೆಟ್‌ ನಷ್ಟಕ್ಕೆ 321 ರನ್‌ ಗಳಿಸಿದ್ದ ಭಾರತದ ಕೊನೆಯ 4 ವಿಕೆಟ್‌ 8 ರನ್‌ ಅಂತರದಲ್ಲಿ ಪತನವಾದ ಕಾರಣ  ಅಂತಿಮವಾಗಿ 48.2 ಓವರ್‌ಗಳಲ್ಲಿ 329 ರನ್‌ಗಳಿಗೆ ಆಲೌಟ್‌ ಆಯ್ತು. ಕೃನಾಲ್‌ ಪಾಂಡ್ಯ 25 ರನ್‌ ಹೊಡೆದು ಔಟಾದರು. ಮಾರ್ಕ್‌ ವುಡ್‌ 3 ವಿಕೆಟ್‌ ಕಿತ್ತರೆ, ಆದಿಲ್‌ ರಷೀದ್‌ 2 ವಿಕೆಟ್‌ ಪಡೆದರು.

  • ರಾಹುಲ್ ವಿಶಿಷ್ಟ ಶತಕ ಸಂಭ್ರಮಾಚರಣೆಯ ರೀಸನ್ ರೀವಿಲ್

    ರಾಹುಲ್ ವಿಶಿಷ್ಟ ಶತಕ ಸಂಭ್ರಮಾಚರಣೆಯ ರೀಸನ್ ರೀವಿಲ್

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸುವ ಮೂಲಕ ಮಿಂಚಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸಿದ ಕೂಡಲೇ ಕೈಗಳಿಂದ ಕಿವಿ ಮುಚ್ಚಿಕೊಂಡು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದ್ದರು. ಇದೀಗ ಸ್ವತಃ ರಾಹುಲ್ ಅವರೇ ಈ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ರಾಹುಲ್ ಏಕದಿನ ಸರಣಿಯಲ್ಲಿ ಮತ್ತೆ ಫಾರ್ಮ್‍ಗೆ ಮರಳಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 62 ರನ್(43 ಬಾಲ್) ಸಿಡಿಸಿ ಮಿಂಚಿದ್ದ ರಾಹುಲ್ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತನ್ನ ಬ್ಯಾಟಿಂಗ್ ಬಗ್ಗೆ ಕಿಡಿಕಾರಿದವರಿಗೆ ಬ್ಯಾಟ್‍ನಿಂದಲೇ ಉತ್ತರ ನೀಡಿದ್ದಾರೆ.

    ಒಂದು ಹಂತದಲ್ಲಿ ಭಾರತ ತಂಡ 37 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಾಹುಲ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಜೊತೆಗೂಡಿ ಉತ್ತಮ ಜೊತೆಯಾಟವಾಡುವ ಮೂಲಕ ಭಾರತದ ಸ್ಕೋರ್ 300ರ ಗಡಿ ದಾಟುವಂತೆ ಮಾಡಿದ್ದರು. ರಾಹುಲ್ ಈ ಪಂದ್ಯದಲ್ಲಿ 108 ರನ್ (114 ಬಾಲ್, 7 ಬೌಂಡರಿ, 2 ಸಿಕ್ಸರ್) ಸಿಡಿಸಿ ತನ್ನ ಐದನೇ ಏಕದಿನ ಶತಕವನ್ನು ವಿಶೇಷವಾಗಿ ಸಂಭ್ರಮಿಸಿದರು.

    ರಾಹುಲ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‍ನತ್ತ ಬ್ಯಾಟ್ ತೋರಿಸಿ ನಂತರ ಎರಡು ಕಣ್ಣುಗಳನ್ನು ಮುಚ್ಚಿ, ಕೈಗಳಿಂದ ಕಿವಿಗಳನ್ನು ಮುಚ್ಚಿ ಸುಮ್ಮನೆ ನಿಂತು ಸಂಭ್ರಮಾಚರಣೆ ಮಾಡಿದ್ದರು. ಈ ಕುರಿತು ಪಂದ್ಯದ ಬಳಿಕ ಉತ್ತರಿಸಿದ ರಾಹುಲ್, ನನ್ನ ಸಂಭ್ರಮಾಚರಣೆ ಯಾರಿಗೂ ಅಗೌರವ ತೋರುವ ಉದ್ದೇಶ ಹೊಂದಿಲ್ಲ. ನನ್ನ ಬಗ್ಗೆ ಮಾತನಾಡುವವರ ಬಗ್ಗೆ ನಾನು ಕಿವಿಕೊಡಲಾರೆ, ಯಾರು ನನ್ನನ್ನು ಕುಗ್ಗಿಸಲು ನೋಡುತ್ತಾರೋ ಅವರಿಗೆ ಉತ್ತರವಾಗಿ ಈರೀತಿ ಮಾಡಿದೆ ಎಂದರು.

    ಟಿ20 ಪಂದ್ಯಗಳಲ್ಲಿ ನಾನು ನೀಡಿದ ಪ್ರದರ್ಶನ ನನಗೆ ಬೇಸರ ತಂದಿತ್ತು. ನಾನು ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದೆ, ಆದರೆ ಇದನ್ನು ಸರಿಪಡಿಸಿಕೊಂಡು ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದೇನೆ ಎಂದರು. ರಾಹುಲ್ ಈ ಹಿಂದೆಯೂ ಶತಕ ಸಿಡಿಸಿದ ವೇಳೆ ಇದೆ ರೀತಿ ಸಂಭ್ರಮಾಚರಣೆ ಮಾಡಿದ್ದರು.

    ಟಿ20 ಸರಣಿಯ ವೈಫಲ್ಯದಿಂದ ಹೊರಬಂದಿರುವ ರಾಹುಲ್ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದು, ಇದೇ ಲಯದಲ್ಲಿ ಮುಂದುವರಿದರೆ ಮುಂದಿನ ಐಪಿಎಲ್‍ನಲ್ಲಿ ರಾಹುಲ್ ಬ್ಯಾಟ್‍ನಿಂದ ರನ್‍ಮಳೆ ಸುರಿಯುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • 2 ಅತ್ಯುತ್ತಮ ಜೊತೆಯಾಟ, ಇಂಗ್ಲೆಂಡಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಭಾನುವಾರ ಫೈನಲ್‌

    2 ಅತ್ಯುತ್ತಮ ಜೊತೆಯಾಟ, ಇಂಗ್ಲೆಂಡಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಭಾನುವಾರ ಫೈನಲ್‌

    ಪುಣೆ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್‌ ಇಂದು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ.

    ಗೆಲ್ಲಲು 337 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 337 ರನ್‌ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.

    ಎರಡು ಅತ್ಯುತ್ತಮ ಜೊತೆಯಾಟದಿಂದ ಇಂಗ್ಲೆಂಡ್‌ ತಂಡ ಇಂದಿನ ಪಂದ್ಯವನ್ನು ಗೆದ್ದುಕೊಂಡಿದೆ. ಮೊದಲ ವಿಕೆಟಿಗೆ ಜೇಸನ್‌ ರಾಯ್‌ ಮತ್ತು ಜಾನಿ ಬೈರ್‌ಸ್ಟೋ 102 ಎಸೆತಗಳಿಗೆ 110 ರನ್‌ ಜೊತೆಯಾಟವಾಡಿದರೆ ಎರಡನೇ ವಿಕೆಟಿಗೆ ಬೈರ್‌ಸ್ಟೋ ಮತ್ತು ಬೆನ್‌ ಸ್ಟೋಕ್ಸ್‌  117 ಎಸೆತಗಳಿಗೆ 175 ರನ್‌ ಜೊತೆಯಾಟವಾಡಿದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಡೇವಿಡ್‌ ಮಲಾನ್‌ ಮತ್ತು ಲಿವಿಂಗ್‌ಸ್ಟೋನ್‌ ಅವರು 43 ಎಸೆತಗಳಲ್ಲಿ 50 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಟ್ಟರು.

    ಜೇಸನ್‌ ರಾಯ್‌ 55 ರನ್‌( 52 ಎಸೆತ, 7 ಬೌಂಡರಿ, 1 ಸಿಕ್ಸರ್‌) ಜಾನಿ ಬೈರ್‌ಸ್ಟೋ 124 ರನ್‌(112 ಎಸೆತ, 11 ಬೌಂಡರಿ, 7 ಸಿಕ್ಸರ್‌), ಬೆನ್‌ ಸ್ಟೋಕ್ಸ್‌ 99 ರನ್‌( 52 ಎಸೆತ, 4 ಬೌಂಡರಿ, 10 ಸಿಕ್ಸರ್‌) ಡೇವಿಡ್‌ ಮಲಾನ್‌ ಔಟಾಗದೇ 16 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಔಟಾಗದೇ 27 ರನ್‌ ಹೊಡೆದರು.

    ಪ್ರಸಿದ್ದ್‌ ಕೃಷ್ಣ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಕಿತ್ತರು. ಕುಲದೀಪ್‌ ಯಾದವ್‌ 84 ರನ್‌ ನೀಡಿದರೆ,  ಕೃನಾಲ್‌ ಪಾಂಡ್ಯ 6 ಓವರ್‌ ಎಸೆದು 72 ರನ್‌ ನೀಡಿದರು. ಶಾರ್ದೂಲ್‌ ಠಾಕೂರ್‌ 7.3 ಓವರ್‌ ಎಸೆದು 54 ರನ್‌ ನೀಡಿ ದುಬಾರಿಯಾದರು.

    ಆರಂಭಿಕ ಆಟಗಾರನಾಗಿ ಆಗಮಿಸಿ ಶತಕ ಸಿಡಿಸಿದ ಜಾನಿ ಬೈರ್‌ಸ್ಟೋ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಮಾರ್ಚ್‌ 28 ರಂದು ಪುಣೆ ಮೈದಾನದಲ್ಲೇ ಕೊನೆಯ ಫೈನಲ್‌ ಪಂದ್ಯ ನಡೆಯಲಿದೆ.

  • ಗ್ರೇಮ್ ಸ್ಮಿತ್ ದಾಖಲೆ ಮುರಿದ ಕೊಹ್ಲಿ

    ಗ್ರೇಮ್ ಸ್ಮಿತ್ ದಾಖಲೆ ಮುರಿದ ಕೊಹ್ಲಿ

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 41 ರನ್ ಬಾರಿಸುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ದಾಖಲೆ ಮುರಿದಿದ್ದಾರೆ.

    ವಿರಾಟ್ ನಾಯಕನಾಗಿ ಏಕದಿನ ಪಂದ್ಯದಲ್ಲಿ 5,441 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸ್ಮಿತ್ 150 ಏಕದಿನ ಪಂದ್ಯಗಳಿಂದ 5,416 ರನ್ ಗಳಿಸಿದ್ದರು. ಇದೀಗ ಸ್ಮಿತ್ ಅವರ ದಾಖಲೆಯನ್ನು ಮುರಿದು ಕೊಹ್ಲಿ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

    ವಿರಾಟ್ ಈ ಮೂಲಕ ನಾಯಕನಾಗಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಟಿಂಗ್ 234 ಪಂದ್ಯಗಳಿಂದ 8,497 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 200 ಪಂದ್ಯಗಳಿಂದ 6641 ರನ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀಫನ್ ಫ್ಲೇಮಿಂಗ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಅರ್ಜುನ್ ರಣತುಂಗ ಪಡೆದುಕೊಂಡಿದ್ದಾರೆ.

    ಈ ದಾಖಲೆಯೊಂದಿಗೆ ವಿರಾಟ್ ಇನ್ನೊಂದು ದಾಖಲೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‍ಬೀಸಿ 10 ಸಾವಿರ ರನ್ ಸಿಡಿಸಿದ ವಿಶ್ವದ ಎರಡನೇ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 10,000 ರನ್ ಸಿಡಿಸಿ ನೂತನ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಮೂರನೇ ಕ್ರಮಾಂಕದಲ್ಲಿ 330 ಇನ್ನಿಂಗ್ಸ್ ಗಳಿಂದ 12,662 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ. ಎರಡನೇ ಸ್ಥಾನ ವಿರಾಟ್ ಕೊಹ್ಲಿ ಪಾಲಾಗಿದೆ. ಕೊಹ್ಲಿ 190 ಇನ್ನಿಂಗ್ಸ್ ಗಳಿಂದ 10,000 ರನ್ ಸಿಡಿಸಿದ್ದಾರೆ. 3 ಮತ್ತು 4 ನೇ ಸ್ಥಾನದಲ್ಲಿ ಕ್ರಮವಾಗಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಇದ್ದಾರೆ.

    ವಿರಾಟ್ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸಿ 66ರನ್ (79 ಎಸೆತ,3 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಭಾರತ ಪರ ಕೆ. ಎಲ್ ರಾಹುಲ್ 108 ರನ್( 114 ಬಾಲ್,7 ಬೌಂಡರಿ,2 ಸಿಕ್ಸರ್) ಬಾರಿಸಿ ಭಾರತಕ್ಕೆ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ. ಭಾರತ ನಿಗದಿತ ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ. ಇಂಗ್ಲೆಂಡ್ 337 ರನ್‍ಗಳ ಗುರಿ ಪಡೆದುಕೊಂಡಿದೆ.

  • ಕೊನೆಯ 60 ಬಾಲಿಗೆ 126 ರನ್‌ – ರಾಹುಲ್‌ ಶತಕ, ಪಂತ್‌, ಪಾಂಡ್ಯ ಸ್ಫೋಟಕ ಆಟ

    ಕೊನೆಯ 60 ಬಾಲಿಗೆ 126 ರನ್‌ – ರಾಹುಲ್‌ ಶತಕ, ಪಂತ್‌, ಪಾಂಡ್ಯ ಸ್ಫೋಟಕ ಆಟ

    ಪುಣೆ: ಕೊನೆಯ 60 ಎಸೆತಗಳಲ್ಲಿ ಟೀಂ ಇಂಡಿಯಾ 126 ರನ್‌ ಚಚ್ಚುವ ಮೂಲಕ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡಿಗೆ 337 ರನ್‌ಗಳ ದೊಡ್ಡ ಗುರಿಯನ್ನು ನೀಡಿದೆ.

    40 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 210 ರನ್‌ಗಳಿಸಿದ್ದ ಭಾರತದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದ್ದು ರಾಹುಲ್‌ ಮತ್ತು ಕೊನೆಯಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ಪಂತ್‌, ಹಾರ್ದಿಕ್‌ ಪಾಂಡ್ಯ ಜೋಡಿ.

    ವಿರಾಟ್‌ ಕೊಹ್ಲಿ 66 ರನ್‌( 79 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದು 31.6 ಓವರ್‌ಗಳಲ್ಲಿ ಔಟಾದಾಗ ಭಾರತದ ಸ್ಕೋರ್‌ 3 ವಿಕೆಟ್‌ ನಷ್ಟಕ್ಕೆ 158 ಆಗಿತ್ತು. ನಂತರ ಒಂದಾದ ರಾಹುಲ್‌ ಮತ್ತು ರಿಷಭ್‌ ಪಂತ್‌ 4ನೇ ವಿಕೆಟಿಗೆ 80 ಎಸೆತಗಳಲ್ಲಿ 113 ರನ್‌ ಜೊತೆಯಾಟವಾಡಿದರು.

    44.5 ಓವರ್‌ನಲ್ಲಿ ರಾಹುಲ್‌ 108 ರನ್‌(114 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ನಂತರ ಸಿಕ್ಸರ್‌, ಬೌಂಡರಿಗಳ ಆರ್ಭಟ ಮತ್ತಷ್ಟು ಜಾಸ್ತಿಯಾಯಿತು. ಸ್ಯಾಮ್‌ ಕರ್ರನ್‌ ಎಸೆದ 46ನೇ ಓವರ್‌ನಲ್ಲಿ 21 ರನ್‌ ಬಂತು. ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್‌ ಜೋಡಿ 13 ಎಸೆತಗಳಿಗೆ 37 ರನ್‌ ಚಚ್ಚಿದರು. ಕೊನೆಯಲ್ಲಿ ಕೃನಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ 19 ಎಸೆತಗಳಿಗೆ 26 ರನ್‌ ಹೊಡೆದರು.

    ರಿಷಭ್‌ ಪಂತ್‌ 77 ರನ್‌(40 ಎಸೆತ, 3 ಬೌಂಡರಿ, 7 ಸಿಕ್ಸರ್‌) ಹೊಡೆದರೆ ಹಾರ್ದಿಕ್‌ ಪಾಂಡ್ಯ 35 ರನ್‌(16 ಎಸೆತ, 1 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು.

    ರನ್‌ ಏರಿದ್ದು ಹೇಗೆ?
    50 ರನ್‌ – 78 ಎಸೆತ
    100 ರನ್‌ – 133 ಎಸೆತ
    150 ರನ್‌ – 187 ಎಸೆತ
    200 ರನ್‌ – 234 ಎಸೆತ
    250 ರನ್‌ – 256 ಎಸೆತ
    300 ರನ್‌ – 277 ಎಸೆತ
    336 ರನ್‌ – 300 ಎಸೆತ

  • ಮೊದಲ ಏಕದಿನ ಪಂದ್ಯ ಗೆಲುವಿನ ಬಳಿಕ ಸಂಭ್ರಮ ಆಚರಿಸಿದ ಟೀಂ ಇಂಡಿಯಾ

    ಮೊದಲ ಏಕದಿನ ಪಂದ್ಯ ಗೆಲುವಿನ ಬಳಿಕ ಸಂಭ್ರಮ ಆಚರಿಸಿದ ಟೀಂ ಇಂಡಿಯಾ

    ಪುಣೆ: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಜೊತೆಯಾಗಿ ಊಟಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

    ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 66 ರನ್‍ಗಳಿಂದ ಗೆದ್ದು ಬಿಗಿತ್ತು. ಇದೀಗ ಈ ಜಯವನ್ನು ಭರ್ಜರಿಯಾಗಿ ಸಂಭ್ರಮಿಸಿರುವ ಟೀಂ ಇಂಡಿಯಾ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಜೊತೆಯಾಗಿ ಊಟಮಾಡುತ್ತೀರುವ ಫೋಟೋವನ್ನು ತಂಡದ ಕೋಚ್ ರವಿಶಾಸ್ತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಸಂಭ್ರಮಾಚರಣೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ರಿಷಬ್ ಪಂತ್, ಪಾಂಡ್ಯ ಸಹೋದರರು, ಚಹಲ್ ಮತ್ತು ಇತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಜೊತೆಗಿದ್ದರು. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿರುವ ರವಿಶಾಸ್ತ್ರಿ ಎಲ್ಲರು ಜೊತೆಯಾಗಿದ್ದೇವೆ, ಬಬಲ್ ಒಳಗೂ ಹೊರಗೂ ಹಾಗಾಗಿ ಫಲಿತಾಂಶ ಒಂದೇ ಆಗಿದೆ. ಪುಣೆಯಲ್ಲಿ ಇಂದು ಸುಂದರವಾದ ದಿನ ಕಳೆದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

    ತಂಡದ ಆಟಗಾರರು ಮತ್ತು ಸಿಬ್ಬಂದಿಗಳು ಕೊರೊನಾದಿಂದಾಗಿ ಬಯೋ ಬಬಲ್‍ಗೆ ಒಳಗಾಗಿದ್ದು ಎಲ್ಲರೂ ಕೂಡ ಜೊತೆಯಾಗಿ ಸಮಯ ಕಳೆಯುವ ಮೂಲಕ ದೀರ್ಘವಾದ ಕ್ರಿಕೆಟ್ ಸರಣಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ರಿಂದ ಗೆದ್ದರೆ, ಟಿ20 ಸರಣಿಯನ್ನು 3-2 ರಿಂದ ಭಾರತ ಜಯಿಸಿತ್ತು ಇದೀಗ ಮೊದಲ ಏಕದಿನ ಸರಣಿಯಲ್ಲಿ 66 ರನ್‍ಗಳ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಏಕದಿನ ಪಂದ್ಯ ಪುಣೆಯಲ್ಲಿ ಮಾರ್ಚ್ 26 ರಂದು ನಡೆಯಲಿದೆ.

  • ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 3 ಓವರ್ ಆಗುವಷ್ಟರಲ್ಲೇ ಪಂದ್ಯದಲ್ಲಿ ಬಳಸುತ್ತಿದ್ದ ಹೊಸ ಬಾಲ್‍ನ್ನು ಬದಲಾವಣೆ ಮಾಡಲಾಗಿತ್ತು.

    ಕ್ರಿಕೆಟ್‍ನಲ್ಲಿ ಬಾಲ್‍ಗಳಲ್ಲಿ ಲೋಪ ಮತ್ತು ಸ್ಟೇಡಿಯಂನಿಂದ ಹೊರ ಹೋದ ಬಾಲ್ ಸಿಗದೆ ಇದ್ದಾಗ ಮಾತ್ರ ಚೆಂಡನ್ನು ಬದಲಾವಣೆ ಮಾಡಲಾಗುತ್ತದೆ. ಆದರೆ ಪುಣೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಆರಂಭದ 3 ನೇ ಓವರ್ ನಲ್ಲೇ ಬಾಲ್‍ನ್ನು ಬದಲಾಯಿಸಲು ಅಂಪೈರ್ ನಿರ್ಧಾರ ಮಾಡಿದ್ದರು.

    ಇದ್ದನ್ನು ಗಮನಿಸಿದ ಅಭಿಮಾನಿಗಳಲ್ಲಿ ಬಾಲ್ ಬದಲಾವಣೆಯ ಕುರಿತು ಭಾರೀ ಕೂತುಹಲ ಮೂಡಿಸಿತ್ತು. ಆದರೆ ಪಂದ್ಯ ಮುಗಿದ ಬಳಿಕ ಬಾಲ್ ಬದಲಾವಣೆಯ ಕಾರಣ ರೀವಿಲ್ ಆಗಿದೆ.

    ಭಾರತ ಬ್ಯಾಟಿಂಗ್ ಆರಂಭಿಸಿ 3ನೇ ಓವರ್ ವೇಳೆ ಹೊಸ ಬಾಲ್‍ನ್ನು ಅಂಪೈರ್ ಬದಲಾವಣೆಗಾಗಿ ಕೊಂಡೊಯ್ಯಲಾಗಿತ್ತು. ಶಿಖರ್ ಧವನ್ ಹೊಡೆದ ಬಾಲ್ ಬೌಂಡರಿ ಗೆರೆ ದಾಟಿದ ನಂತರ ಬಾಲ್‍ನ್ನು ಬದಲಾವಣೆ ಮಾಡಲಾಯಿತು. ಇದಕ್ಕೆ ಕಾರಣ ಚೆಂಡಿನಲ್ಲಿ ಇದ್ದಂತಹ ಸಣ್ಣ ತೂತು.

    ಮೊದಲ ಏಕದಿನ ಪಂದ್ಯದ ವೇಳೆ ಹೊಸ ಬಾಲ್‍ನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಕೇವಲ 16 ಎಸೆತ ಎಸೆಯುವಷ್ಟರಲ್ಲಿ ಬಾಲ್‍ನಲ್ಲಿ ಕಂಡು ಬಂದ ದೋಷವನ್ನು ಗಮನಿಸಿದ ಅಂಪೈರ್ ಬದಲಾವಣೆ ನಿರ್ಧರಿಸಿದ್ದರು. ಬಾಲ್ ಮೈದಾನದ ಬೌಂಡರಿ ರೋಪ್, ಮೈದಾನದಲ್ಲಿದ್ದ ವಸ್ತುವಿಗೆ ಅಥವಾ ಡಿಜಿಟಲ್ ಬೋರ್ಡ್‍ಗೆ ಬಡಿದ ಪರಿಣಾಮ ಬಾಲ್‍ನಲ್ಲಿ ತೂತು ಕಂಡು ಬಂದು ಬಾಲ್‍ನ ತೂಕ ಕಡಿಮೆಯಾಗಿತ್ತು. ಹೀಗಾಗಿ ಅಂಪೈರ್ ಚೆಂಡು ಬದಲಾವಣೆಯ ನಿರ್ಧಾರ ಕೈಗೊಳ್ಳಲಾಯಿತು.

  • 4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    ಪುಣೆ: ಪ್ರಸಿದ್ದ್‌ ಕೃಷ್ಣ, ಶಾರ್ದೂಲ್‌ ಠಾಕೂರ್‌ ಅವರ ಮಾರಕ ಬೌಲಿಂಗ್‌ ದಾಳಿಯಿಂದ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 66 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    318 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಪತನಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ 251 ರನ್‌ಗಳಿಗೆ ಆಲೌಟ್‌ ಆಯ್ತು.

    ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಮೊದಲ ವಿಕೆಟಿಗೆ 14.2 ಓವರ್‌ಗಳಲ್ಲಿ 135 ರನ್‌ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್‌ ಕೃಷ್ಣ ಅವರ ಮಾರಕ ಬೌಲಿಂಗ್‌ಗೆ ಇಂಗ್ಲೆಂಡಿನ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪ್ರಸಿದ್ಧ್‌ ಕೃಷ್ಣ 8.1 ಓವರ್‌ ಎಸೆದು 1 ಮೇಡನ್‌ 54 ರನ್‌ ನೀಡಿ 4 ವಿಕೆಟ್‌ ಪಡೆದರೆ ಶಾರ್ದೂಲ್‌ ಠಾಕೂರ್‌ 6 ಓವರ್‌ ಎಸೆದು 37 ರನ್‌ ನೀಡಿ 3 ವಿಕೆಟ್‌ ಕಿತ್ತರು. ಭುವನೇಶ್ವರ್‌ ಕುಮಾರ್‌ 2 ವಿಕೆಟ್‌, ಕೃನಾಲ್‌ ಪಾಂಡ್ಯ 1 ವಿಕೆಟ್‌ ಪಡೆದರು.

    ಜೇಸನ್‌ ರಾಯ್‌ 46 ರನ್‌(35 ಎಸೆತ, 7 ಬೌಂಡರಿ, 1 ಸಿಕ್ಸರ್‌), ಜಾನಿ ಬೈರ್‌ಸ್ಟೋವ್‌ 94 ರನ್‌(66 ಎಸೆತ, 6 ಬೌಂಡರಿ, 7 ಸಿಕ್ಸರ್‌) ನಾಯಕ ಇಯಾನ್‌ ಮಾರ್ಗನ್‌ 22 ರನ್‌, ಮೋಯಿನ್‌ ಆಲಿ 30 ರನ್‌ ಗಳಿಸಿ ಔಟಾದರು. 98 ರನ್‌ (106 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾಗಿದ್ದ ಶಿಖರ್‌ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪ್ರಸಿದ್ಧ್‌ ಕೃಷ್ಣ ದಾಖಲೆ: ಇಲ್ಲಿಯವರೆಗೆ ಭಾರತದ ತಂಡದಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ಯಾರೂ 4 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 4 ವಿಕೆಟ್‌ ಕೀಳುವ ಮೂಲಕ ಪ್ರಸಿದ್ಧ್‌ ಕೃಷ್ಣ ಭಾರತದ ಪರ ದಾಖಲೆ ನಿರ್ಮಿಸಿದ್ದಾರೆ.

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪುಣೆ: ತಾನು ಆಡಿದ ಮೊದಲ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ವಿಶ್ವದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಈ ಸಾಧನೆ ನಿರ್ಮಿಸಿದ್ದಾರೆ.

    ಇಂದು ಕೃನಾಲ್‌ ಪಾಂಡ್ಯ 26 ಎಸೆತದಲ್ಲಿ 50 ರನ್‌ ಹೊಡೆದರು. ಟಾಮ್‌ ಕರ್ರನ್‌ ಎಸೆದ ಎಸೆತದಲ್ಲಿ ಒಂದು ಸಿಂಗಲ್‌ ರನ್‌ ಓಡಿ ವಿಶ್ವದಾಖಲೆ ನಿರ್ಮಿಸಿದರು.

    ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್‌ ಆಟಗಾರ ಜಾನ್‌ ಮೋರಿಸ್‌ ಹೆಸರಿನಲ್ಲಿತ್ತು. 1990ರಲ್ಲಿ ಮೋರಿಸ್‌ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 36 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು.

    ವೇಗದ ಅರ್ಧಶತಕವನ್ನು ಜನವರಿಯಲ್ಲಿ ಮೃತರಾದ ತಂದೆಗೆ ಅರ್ಪಿಸುವುದಾಗಿ ಕೃನಾಲ್‌ ಹೇಳಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ಭಾರತದ ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೊನೆಯಲ್ಲಿ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್‌ಗಳ ಗುರಿಯನ್ನು ನೀಡಿದೆ.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

     

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮಾರ್ಕ್‌ ವುಡ್‌ ಎಸೆದ 48ನೇ ಓವರಿನಲ್ಲಿ 28 ರನ್‌ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್‌, 13 ರನ್‌ ಬಂದಿತ್ತು.

    ಭಾರತದ ಪರ ರೋಹಿತ್‌ ಶರ್ಮಾ 28 ರನ್‌, ಶಿಖರ್‌ ಧವನ್‌ 98 ರನ್(106‌ ಎಸೆತ, 11 ಬೌಂಡರಿ, 2 ಸಿಕ್ಸರ್‌) ನಾಯಕ ಕೊಹ್ಲಿ 56 ರನ್‌( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್‌, ರೋಹಿತ್‌ 64 ರನ್‌, ಎರಡನೇ ವಿಕೆಟಿಗೆ ಶಿಖರ್‌ ಧವನ್‌, ಕೊಹ್ಲಿ 105 ರನ್‌ಗಳ ಜೊತೆಯಾಟವಾಡಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ