Tag: england

  • RCB ಸ್ಟಾರ್‌ ಸಾಲ್ಟ್‌ ಬೆಂಕಿ ಆಟಕ್ಕೆ ಹರಿಣರ ಪಡೆ ಛಿದ್ರ – ಟಿ20ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್‌

    RCB ಸ್ಟಾರ್‌ ಸಾಲ್ಟ್‌ ಬೆಂಕಿ ಆಟಕ್ಕೆ ಹರಿಣರ ಪಡೆ ಛಿದ್ರ – ಟಿ20ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್‌

    ಮ್ಯಾಂಚೆಸ್ಟರ್: ಫಿಲ್ ಸಾಲ್ಟ್ (Phil Salt) ಬೆಂಕಿ ಶತಕ ಹಾಗೂ ಇತರ ಬ್ಯಾಟರ್‌ಗಳ ಸ್ಫೋಟಕ ಆಟದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ (England) ಹಲವು ದಾಖಲೆಗಳನ್ನು ಪುಡಿಗಟ್ಟಿದೆ.

    ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ರನ್‌ಗಳ ಸುರಿಮಳೆಯನ್ನೇ ಸುರಿಸಿತು. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ 3ನೇ ಗರಿಷ್ಠ ಸ್ಕೋರ್ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿತು. ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕಿದ್ದು, ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ 3ನೇ ಗರಿಷ್ಠ ರನ್‌ ಆಗಿದೆ. ಮೊದಲು ಬ್ಯಾಟ್‌ ಮಾಡಿದ್ದ ತಂಡ ತಂಡ 12.1 ಓವರ್‌ನಲ್ಲೇ 200ರ ಗಡಿ ದಾಟಿತು. ಇದೂ ಕೂಡ ಟಿ20ಯಲ್ಲಿ ಯಾವುದೇ ತಂಡದ ಪೈಕಿ ಗರಿಷ್ಠ ರನ್‌ ಆಗಿದೆ.ಇದನ್ನೂ ಓದಿ: ಏಷ್ಯಾ ಕಪ್ 2025 – ಹಾಂಗ್‌ಕಾಂಗ್‌ ವಿರುದ್ಧ ಬಾಂಗ್ಲಾ ತಂಡಕ್ಕೆ 7 ವಿಕೆಟ್‌ಗಳ ಜಯ

    ಇಂಗ್ಲೆಂಡ್ 20 ಓವರ್‌ಗಳಲ್ಲಿ ನೀಡಿದ್ದ 304 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲೇ ಆಲೌಟ್ ಆಯಿತು. ಐಡೆನ್ ಮಾರ್ಕ್ರಾಮ್ 20 ಎಸೆತಗಳಲ್ಲಿ 41 ರನ್, ಬ್ಜೋರ್ನ್ ಫೋರ್ಟುಯಿನ್ 16 ಎಸೆತಗಳಲ್ಲಿ 32 ರನ್, ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ 23 ರನ್, ಡೊನೊವನ್ ಪೆರೀರಾ 11 ಎಸೆತಗಳಲ್ಲಿ 23 ರನ್ ಕಲೆಹಾಕಿದರು. ಜೋಫ್ರಾ ಆರ್ಚರ್, ಸ್ಯಾಮ್ ಕರನ್ ಬೌಲಿಂಗ್ ಅಬ್ಬರಕ್ಕೆ ಮಣಿದು ದಕ್ಷಿಣ ಆಫ್ರಿಕಾ ಒಟ್ಟು 158 ರನ್‌ಗಳಿಸಿ ಪರಾಭವಗೊಂಡರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಫಿಲ್ ಸಾಲ್ಟ್ 39 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿ, ಇಂಗ್ಲೆಂಡ್ ಪರ ಅತಿ ವೇಗದ ಶತಕದ ದಾಖಲೆ ಬರೆದರು. ಒಟ್ಟು 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೇ 141 ರನ್ ಗಳಿಸಿ, ಲಿವಿಂಗ್‌ಸ್ಟೋನ್ (42 ಎಸೆತ) ಹೆಸರಲ್ಲಿದ್ದ ದಾಖಲೆ ಮುರಿದರು. ಇದು ಇಂಗ್ಲೆಂಡ್ ಪರ ಟಿ20ಯಲ್ಲಿ ಬ್ಯಾಟರೊಬ್ಬರು ಗಳಿಸಿದ ಗರಿಷ್ಠ ರನ್. ಇನ್ನುಳಿದಂತೆ ಬಟ್ಲರ್ 30 ಎಸೆತಕ್ಕೆ 83, ಜಾಕೊಬ್‌ ಬೆಥಲ್ 14 ಎಸೆತಕ್ಕೆ 26, ನಾಯಕ ಹ್ಯಾರಿ ಬ್ರೂಕ್ 21 ಎಸೆತಕ್ಕೆ ಔಟಾಗದೇ 41 ರನ್ ಸಿಡಿಸಿದರು.ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

  • ಜೈಲಿಂದ ಬಂದ ಮರುದಿನವೇ ಮತ್ತೆ ಸಹೋದ್ಯೋಗಿ ಯುವತಿಗೆ ಕಿರುಕುಳ – ಕೇರಳ ಯುವಕ ಯುಕೆಯಿಂದ ಗಡೀಪಾರು ಸಾಧ್ಯತೆ

    ಜೈಲಿಂದ ಬಂದ ಮರುದಿನವೇ ಮತ್ತೆ ಸಹೋದ್ಯೋಗಿ ಯುವತಿಗೆ ಕಿರುಕುಳ – ಕೇರಳ ಯುವಕ ಯುಕೆಯಿಂದ ಗಡೀಪಾರು ಸಾಧ್ಯತೆ

    ಲಂಡನ್: ಇಲ್ಲಿನ ಮೃಗಾಲಯ ಒಂದರಲ್ಲಿ ತನ್ನ ಸಹೋದ್ಯೋಗಿ ಯುವತಿಗೆ ಪದೇ ಪದೇ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಕೇರಳದ (Kerala) ಯುವಕನೊಬ್ಬ ಇಂಗ್ಲೆಂಡ್‌ನಿಂದ (England) ಗಡೀಪಾರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

    ಕೆರಳ ಮೂಲದ ಆಶಿಶ್ ಜೋಸ್ ಪಾಲ್  (Asish Jose Paul) ಎಂಬಾತ ಸಹೋದ್ಯೋಗಿ ಯುವತಿಗೆ ನಿರಂತರ ಮೆಸೇಜ್‌ ಮಾಡುವುದು, ಅನಗತ್ಯ ಗಿಫ್ಟ್‌ ನೀಡುವುದು, ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದೆ ವಿಚಾರಕ್ಕೆ ಆಶಿಶ್‌ ಹಲವು ಬಾರಿ ಬಂಧನಕ್ಕೊಳಗಾಗಿದ್ದ. ಅಲ್ಲದೇ 6 ತಿಂಗಳ ಶಿಕ್ಷೆಯನ್ನು ವಿಧಿಸಿ, ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿತ್ತು. ಬಳಿಕ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಮತ್ತೆ ಅಪರಾಧ ಪುನರಾವರ್ತನೆ ಮಾಡಿದರೆ ಜೈಲಿಗೆ ಹಾಕುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೂ  ಆತ ಜೈಲಿಂದ ಹೊರಬಂದ ಮರುದಿನವೇ ಯುವತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

    ಜೋಸ್ ಪಾಲ್, ಯುವತಿಗೆ ಹೂವುಗಳು ಮತ್ತು ಚಾಕೊಲೇಟ್‌ಗಳನ್ನು ಕೊಟ್ಟು, ಪ್ರಪೋಸ್ ಮಾಡುವುದು ಮಾಡಿದ್ದಾನೆ. ಆಕೆ ಆತನ ನಂಬರ್‌ ಬ್ಲಾಕ್‌ ಮಾಡಿದಾಗ ಹಿಂಬಾಲಿಸಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನೂ ಆತನನ್ನು ಬಂಧಿಸಿ ಬಿಡುಗಡೆ ಮಾಡುವಾಗ, ಆಕೆಯನ್ನು ಭೇಟಿಯಾಗದಂತೆ ಸೂಚಿಸಲಾಗಿತ್ತು. ಅಲ್ಲದೇ ಲಂಡನ್ ಮೃಗಾಲಯದಿಂದ 50 ಮೀಟರ್ ಒಳಗೆ ಹೋಗದಂತೆ ಆದೇಶಿಸಲಾಗಿತ್ತು. ಆದರೂ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, ಆಶಿಶ್‌ ನಡತೆ ನನ್ನನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಈ ಘಟನೆ ನನ್ನ ಸ್ನೇಹಿತರು ಹಾಗೂ ಕುಟುಂಬ ನನ್ನ ಬಗ್ಗೆ ಯೋಚಿಸುವಂತೆ ಮಾಡಿದೆ. ನಾನು ಸುರಕ್ಷಿತವಾಗಿರಲು ಯಾರನ್ನಾದರೂ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೊಂಡಿದ್ದಾಳೆ.

    ಇದೆಲ್ಲದರ ನಡುವೆ ಜೋಸ್ ಪಾಲ್ ಪರ ವಕೀಲರು ನ್ಯಾಯಾಲಯದಲ್ಲಿ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಯುವತಿಗೆ ಗಮನಾರ್ಹ ತೊಂದರೆ ಉಂಟಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದ್ದರು. ನ್ಯಾಯಾಲಯ, ಅಶಿಶ್‌ ವೀಸಾ ಈ ವರ್ಷ ಸೆಪ್ಟೆಂಬರ್ 13ರಂದು ಮುಕ್ತಾಯಗೊಳ್ಳಲಿದೆ. ಹೊಸ ವೀಸಾ ನೀಡದ ಹೊರತು ಇಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಅದ್ದರಿಂದ ಗಡೀಪಾರಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

    ಜೋಸ್ ಪಾಲ್, ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದಲ್ಲಿ (2022-2023) ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದ. ಇದರ ಜೊತೆ ಲಂಡನ್ ಮೃಗಾಲಯದ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಆತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಕಳೆದ ವರ್ಷ ಜುಲೈ ಮತ್ತು ಡಿಸೆಂಬರ್ ಅವಧಿಯಲ್ಲಿ ಜೋಸ್ ಪಾಲ್ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

  • 1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    ಲಂಡನ್‌: ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಜಯಗಳಿಸುವ ಮೂಲಕ ಭಾರತ (Team India) ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ (ICC World Test Championship) ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ 16 ಅಂಕ ಪಡೆದಿದ್ದರೆ ಇಂಗ್ಲೆಂಡ್‌ 26 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿತ್ತು. ಆದರೆ 5ನೇ ಟೆಸ್ಟ್‌ ಪಂದ್ಯವನ್ನು 6 ರನ್‌ಗಳಿಂದ ಜಯಗಳಿಸುವ ಮೂಲಕ ಭಾರತ 28 ಅಂಕ ಪಡೆದು ಮೂರನೇ ಸ್ಥಾನಕ್ಕೆ ಏರಿದರೆ 26 ರನ್‌ನಲ್ಲೇ ಮುಂದುವರಿಯುತ್ತಿರುವ ಇಂಗ್ಲೆಂಡ್‌ ನಾಲ್ಕನೇ ಸ್ಥಾನಕ್ಕೆ ಜಾರಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮೊದಲಿದ್ದ ಅಂಕಪಟ್ಟಿ

    ಭಾರತ ಮತ್ತು ಇಂಗ್ಲೆಂಡ್‌ ತಲಾ 5 ಪಂದ್ಯವಾಡಿದ್ದು ಇತ್ತಂಡಗಳು 2 ಜಯ 2 ಸೋಲು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಲಾರ್ಡ್ಸ್‌ ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 22 ರನ್‌ಗಳಿಂದ ಗೆದ್ದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿ  ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ   2 ಅಂಕ ಕಡಿತವಾಗಿದ್ದರಿಂದ ಇಂಗ್ಲೆಂಡ್‌ 26 ಅಂಕ ಪಡೆದಿದೆ.

    ಆಡಿರುವ ಮೂರು ಪಂದ್ಯಗಳನ್ನು ಗೆದ್ದು 36 ಅಂಕ ಪಡೆದಿರುವ ಆಸ್ಟ್ರೇಲಿಯಾ  ಮೊದಲ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ 1 ಜಯ, 1 ಡ್ರಾ ಮಾಡಿಕೊಂಡಿರುವ ಶ್ರೀಲಂಕಾ 16 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    5ನೇ ಟೆಸ್ಟ್‌ ಮುಕ್ತಾಯದ ಬಳಿಕ ಪ್ರಕಟವಾದ ಅಂಕಪಟ್ಟಿ

    ಅಂಕ ಹೇಗೆ ನೀಡಲಾಗುತ್ತೆ?
    ಗೆಲುವಿಗೆ 12 ಅಂಕ, ಟೈ ಆದರೆ 6 ಅಂಕ, ಡ್ರಾಗೆ 4 ಅಂಕ ನೀಡಲಾಗುತ್ತದೆ. ತಂಡಗಳನ್ನು ಗೆದ್ದ ಅಂಕಗಳ ಶೇಕಡಾವಾರು ಲೆಕ್ಕಾಚಾರ ಹಾಕಿ ಅಂಕಪಟ್ಟಿ ನೀಡಲಾಗುತ್ತದೆ. ನಿಧಾನಗತಿಯ ಓವರ್ ಮಾಡಿದರೆ ಅಂಕ ಕಡಿತವಾಗುತ್ತದೆ. 2027 ರಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ.

  • India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    ಬ್ರಿಟನ್‌: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿವೆ. ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಮತ್ತು ಭಾರತದ ವೇಗಿ ಜಸ್ಪ್ರಿತ್‌ ಬುಮ್ರಾ (Jasprit Bumrah) ಇಬ್ಬರೂ ಓವಲ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.

    ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜದ ಗಾಯದಿಂದಾಗಿ ಸ್ಟೋಕ್ಸ್ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ. ಉಪನಾಯಕ ಓಲಿ ಪೋಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಇದನ್ನೂ ಓದಿ: ವಾಂಖೆಡೆಯಲ್ಲಿ 6.5 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿ ಕಳವು – ಸೆಕ್ಯುರಿಟಿ ಗಾರ್ಡ್ ಅರೆಸ್ಟ್

    ಇಂಗ್ಲೆಂಡ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.

    ಭಾರತ ಕೂಡ ಬೌಲಿಂಗ್ ಮುಂಚೂಣಿಯಲ್ಲಿಲ್ಲ. ಜಸ್ಪ್ರಿತ್‌ ಬುಮ್ರಾ ಅವರ ಬೆನ್ನಿನ ನೋವು ಸಮಸ್ಯೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಗಾಯದಿಂದಾಗಿ ಅವರು ಹಲವು ತಿಂಗಳು ತಂಡದಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

    ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಸರಣಿಯನ್ನು 2-2 ಸಮಬಲಗೊಳಿಸುವ ಅವಕಾಶವಿದೆ. ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

  • ಬೆನ್‌ ಸ್ಟೋಕ್ಸ್‌ ಡ್ರಾ ಆಫರ್‌  ರಿಜೆಕ್ಟ್‌ – ಬ್ಯಾಟಿಂಗ್‌ ಮುಂದುವರಿಸಿ ಚಮಕ್‌ ಕೊಟ್ಟ ಜಡೇಜಾ, ಸುಂದರ್‌

    ಬೆನ್‌ ಸ್ಟೋಕ್ಸ್‌ ಡ್ರಾ ಆಫರ್‌ ರಿಜೆಕ್ಟ್‌ – ಬ್ಯಾಟಿಂಗ್‌ ಮುಂದುವರಿಸಿ ಚಮಕ್‌ ಕೊಟ್ಟ ಜಡೇಜಾ, ಸುಂದರ್‌

    ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ (England) ತಂಡದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಡ್ರಾ ಮಾಡಲು ಮುಂದಾಗಿದ್ದರೂ ರವೀಂದ್ರ ಜಡೇಜಾ (Ravindra Jadeja) ಮತ್ತು ವಾಷಿಂಗ್ಟನ್‌ ಸುಂದರ್‌ (Washington Sundar) ಬ್ಯಾಟಿಂಗ್‌ ಮುಂದುವರಿಸಿದ ಪ್ರಸಂಗ ನಡೆಯಿತು.

    ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 138 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 386 ರನ್‌ ಗಳಿಸಿತ್ತು. 5ನೇ ದಿನದ ಆಟ ಕೊನೆಯಾಗಲು ಇನ್ನೂ 15 ಓವರ್‌ ಬಾಕಿ ಇತ್ತು. ಇದನ್ನೂ ಓದಿ: ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಈ ಸಂದರ್ಭದಲ್ಲಿ ಜಡೇಜಾ 89 ರನ್‌, ಸುಂದರ್‌ 80 ರನ್‌ ಗಳಿಸಿ ಆಟವಾಡುತ್ತಿದ್ದರು. ಇವರಿಬ್ಬರು ಆಡುತ್ತಿರುವ ಪರಿಯನ್ನು ನೋಡಿ ಬೆನ್‌ಸ್ಟೋಕ್ಸ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ಆಫರ್‌ ನೀಡಿದರು. ಈ ಆಫರ್‌ ತಿರಸ್ಕರಿಸಿದ ಜಡೇಜಾ ಮತ್ತು ಸುಂದರ್‌ ಬ್ಯಾಟ್‌ ಮಾಡುವುದಾಗಿ ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಇಂಗ್ಲೆಂಡ್‌ ಬೌಲರ್‌ಗಳು ಬೌಲಿಂಗ್‌ ಮಾಡಬೇಕಾಯಿತು.

    ರವೀಂದ್ರ ಜಡೇಜಾ 107 ರನ್‌(185 ಎಸೆತ, 13 ಬೌಂಡರಿ, 1 ಸಿಕ್ಸ್‌) ವಾಷಿಂಗ್ಟನ್‌ ಸುಂದರ್‌ 101 ರನ್‌  206 ಎಸೆತ, 9 ಬೌಂಡರಿ, 1 ಸಿಕ್ಸ್‌) ಹೊಡೆದರು. ಜಡೇಜಾ 5ನೇ ಟೆಸ್ಟ್‌ ಶತಕ ಹೊಡೆದರು. ಇವರಿಬ್ಬರು ಮುರಿಯದ 5ನೇ ವಿಕೆಟಿಗೆ 334 ಎಸೆತಗಳಲ್ಲಿ 203 ರನ್‌ ಹೊಡೆಯುವ ಮೂಲಕ ಪಂದ್ಯ ಕೈ ಜಾರದಂತೆ ನೋಡಿಕೊಂಡರು. ಇದನ್ನೂ ಓದಿ: ಜಡೇಜಾ, ಸುಂದರ್‌ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್‌ ಅಂತ್ಯ

    ವಾಷಿಂಗ್ಟನ್‌ ಸುಂದರ್‌ ಮೊದಲ ಶತಕ ಹೊಡೆದ ಬೆನ್ನಲ್ಲೇ ಡ್ರಾ ಮಾಡಲು ಒಪ್ಪಿಗೆ ಸೂಚಿಸಿದರು. ಡ್ರಾಗೊಂಡಾಗ ಭಾರತ 143 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 425 ರನ್‌ ಹೊಡೆದಿತ್ತು. ಇಂದು ಒಟ್ಟು 82 ಓವರ್‌ ಎಸೆದರು ಇಂಗ್ಲೆಂಡ್‌ ಬೌಲರ್‌ಗಳು ಕೇವಲ 2 ವಿಕೆಟ್‌ ಪಡೆಯಲ ಮಾತ್ರ ಯಶಸ್ವಿಯಾದರು.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 358/4
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 669
    ಭಾರತ ಎರಡನೇ ಇನ್ನಿಂಗ್ಸ್‌ 425/4

  • ಜಡೇಜಾ, ಸುಂದರ್‌ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್‌ ಅಂತ್ಯ

    ಜಡೇಜಾ, ಸುಂದರ್‌ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್‌ ಅಂತ್ಯ

    ಮ್ಯಾಂಚೆಸ್ಟರ್‌: ರವೀಂದ್ರ ಜಡೇಜಾ (Ravindra Jadeja) ಮತ್ತು ವಾಷಿಂಗ್ಟನ್‌ ಸುಂದರ್‌ (Washington Sundar) ಅವರ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ನಡೆದ 4 ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 311 ರನ್‌ ಮುನ್ನಡೆ ಪಡೆದ ಕಾರಣ ಭಾರತದ (Team India) ಬ್ಯಾಟರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಆಟವಾಡಿ ಡ್ರಾದತ್ತ ಪಂದ್ಯವನ್ನು ಕೊಂಡೊಯ್ದರು.

    ವಾಷಿಂಗ್ಟನ್‌ ಸುಂದರ್‌ ಮೊದಲ ಶತಕ ಹೊಡೆದ ಬೆನ್ನಲ್ಲೇ ಎರಡು ತಂಡದ ನಾಯಕರು ಡ್ರಾ ಮಾಡಲು ಒಪ್ಪಿಗೆ ಸೂಚಿಸಿದರು. ಡ್ರಾಗೊಂಡಾಗ ಭಾರತ 143 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 425 ರನ್‌ ಹೊಡೆದಿತ್ತು.  ಇದನ್ನೂ ಓದಿ: ಈಗಲೂ ಅದೇ ಖದರ್‌ – 15 ಫೋರ್‌, 8 ಸಿಕ್ಸ್‌, ಆಸೀಸ್‌ ವಿರುದ್ಧ ತೂಫಾನ್‌ ಶತಕ ಸಿಡಿಸಿದ ಎಬಿಡಿ

    ರವೀಂದ್ರ ಜಡೇಜಾ 107 ರನ್‌(185 ಎಸೆತ, 13 ಬೌಂಡರಿ, 1 ಸಿಕ್ಸ್‌) ವಾಷಿಂಗ್ಟನ್‌ ಸುಂದರ್‌ 101 ರನ್‌( 206 ಎಸೆತ, 9 ಬೌಂಡರಿ, 1 ಸಿಕ್ಸ್‌) ಹೊಡೆದರು. ಜಡೇಜಾ 5ನೇ ಟೆಸ್ಟ್‌ ಶತಕ ಹೊಡೆದರು. ಇವರಿಬ್ಬರು ಮುರಿಯದ 5ನೇ ವಿಕೆಟಿಗೆ 334 ಎಸೆತಗಳಲ್ಲಿ 203 ರನ್‌ ಹೊಡೆಯುವ ಮೂಲಕ ಪಂದ್ಯ ಕೈ ಜಾರದಂತೆ ನೋಡಿಕೊಂಡರು.

     

     

    ನಿನ್ನೆ 87 ರನ್‌ ಗಳಿಸಿದ್ದ ರಾಹುಲ್‌ 90 ರನ್‌ ಗಳಿಸಿ ಔಟಾದರೆ 78 ರನ್‌ ಹೊಡೆದಿದ್ದ ನಾಯಕ ಶುಭಮನ್‌ ಗಿಲ್‌ 103 ರನ್‌ (238 ಎಸೆತ, 12 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ಇಂದು ಒಟ್ಟು 82 ಓವರ್‌ ಎಸೆದರು ಇಂಗ್ಲೆಂಡ್‌ ಬೌಲರ್‌ಗಳು ಕೇವಲ 2 ವಿಕೆಟ್‌ ಪಡೆಯಲ ಮಾತ್ರ ಯಶಸ್ವಿಯಾದರು.

    ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ 5ನೇ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದರಷ್ಟೇ ಮಾತ್ರ ಸರಣಿ 2-2 ರಲ್ಲಿ ಸಮಬಲವಾಗಲಿದೆ.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 358/4
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 669
    ಭಾರತ ಎರಡನೇ ಇನ್ನಿಂಗ್ಸ್‌ 425/4

  • ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಯುವ ನಾಯಕ ಶುಭಮನ್‌ ಗಿಲ್ (Shubman Gill) ‌ಮತ್ತೊಂದು ಶತಕ ಸಿಡಿಸುವ ಮೂಲಕ ಡಾನ್‌ ಬ್ರಾಡ್ಮನ್ (Don Bradman), ಸುನೀಲ್‌ ಗವಾಸ್ಕರ್‌, ರನ್‌ ಮಿಷನ್‌ ಕೊಹ್ಲಿ (Virat Kohli) ಅವರಂತಹ ದಿಗ್ಗಜರ ದಾಖಲೆಗಳನ್ನ ಸರಿಗಟ್ಟಿದ್ದಾರೆ.

    ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದ ಹೊತ್ತಿಗೆ ಒಟ್ಟು 238 ಎಸೆತಗಳನ್ನು ಎದುರಿಸಿದ ಗಿಲ್‌ 12 ಬೌಂಡರಿ ಸಹಿತ 103 ರನ್‌ ಚಚ್ಚಿದರು. ಇದರಿಂದ ಹಲವು ದಾಖಲೆಗಳನ್ನ ನುಚ್ಚುನೂರು ಮಾಡಿ, ದಿಗ್ಗಜರ ಎಲೈಟ್‌ ಲಿಸ್ಟ್‌ ಸೇರಿಕೊಂಡಿದ್ದಾರೆ. ಇದನ್ನೂ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!

    2ನೇ ಭಾರತೀಯನೆಂಬ ಹೆಗ್ಗಳಿಕೆ
    ಟೆಸ್ಟ್‌ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿರುವ ಶುಭಮನ್‌ ಗಿಲ್‌ ವೃತ್ತಿಜೀವನದ 18ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ. ಈ ಮೂಲಕ 35 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ಡಾನ್‌, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌
    ಟೀಂ ಇಂಡಿಯಾದ 37ನೇ ಟೆಸ್ಟ್ ಕ್ಯಾಪ್ಟನ್‌ ಆಗಿರುವ ಶುಭಮನ್‌ ಗಿಲ್‌ ಚೊಚ್ಚಲ ಸರಣಿಯಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂದು ಸಿಡಿಸಿದ ಶತಕದೊಂದಿಗೆ ಈ ಸರಣಿಯಲ್ಲಿ ಒಟ್ಟು 4 ಶತಕ, ಒಂದು ದ್ವಿಶತಕವನ್ನ ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್‌ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌

    ಇದರೊಂದಿಗೆ ಟೆಸ್ಟ್‌ ಸರಣಿಯೊಂದರಲ್ಲಿ ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿದ ಅಗ್ರ ಬ್ಯಾಟರ್‌ಗಳ ಎಲೈಟ್‌ ಲಿಸ್ಟ್‌ ಸೇರಿಕೊಂಡಿದ್ದಾರೆ. 1947-48ರಲ್ಲಿ ಡಾನ್‌ ಬ್ರಾಡ್ಮನ್ ಮೊದಲ ಬಾರಿಗೆ 4 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆ ಬಳಿಕ 1978-79ರಲ್ಲಿ ಟೀಂ ಇಂಡಿಯಾದ ಸುನೀಲ್‌ ಗವಾಸ್ಕರ್‌ ಈ ಸಾಧನೆ ಮಾಡಿದ್ದರು. ಇದಾದ 46 ವರ್ಷಗಳ ಬಳಿಕ ಶುಭಮನ್‌ ಗಿಲ್‌ ಸರಣಿಯೊಂದರಲ್ಲಿ 4‌ ಶತಕದ ಸಾಧನೆ ಮಾಡಿದ್ದಾರೆ.

    ಶತಕ ಸಿಡಿಸಿದ 3ನೇ ಭಾರತೀಯ
    ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ ಟೀಂ ಇಂಡಿಯಾದ 3ನೇ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

  • ಗಿಲ್‌, ರಾಹುಲ್‌ ಶತಕದ ಜೊತೆಯಾಟ – ಭಾರತಕ್ಕೆ 137 ರನ್‌ಗಳ ಹಿನ್ನಡೆ, ಡ್ರಾನತ್ತ ತಿರುಗುತ್ತಾ ಪಂದ್ಯ?

    ಗಿಲ್‌, ರಾಹುಲ್‌ ಶತಕದ ಜೊತೆಯಾಟ – ಭಾರತಕ್ಕೆ 137 ರನ್‌ಗಳ ಹಿನ್ನಡೆ, ಡ್ರಾನತ್ತ ತಿರುಗುತ್ತಾ ಪಂದ್ಯ?

    ಮ್ಯಾಚೆಂಸ್ಟರ್‌: ಇಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಆಂಗ್ಲರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿತು. 4ನೇ ದಿನದ ಕೊನೇವರೆಗೂ ವಿಕೆಟ್‌ ಬಿಟ್ಟುಕೊಡದ ಕೆ.ಎಲ್‌ ರಾಹುಲ್‌, ಶುಭಮನ್‌ ಗಿಲ್‌ (Shubman Gill) ಜೋಡಿ 377 ಎಸೆತಗಳಲ್ಲಿ 174 ರನ್‌ಗಳ ಜೊತೆಯಾಟ ನೀಡಿ ವಿಕೆಟ್‌ ಉಳಿಸಿಕೊಂಡಿದೆ. ಆದಾಗ್ಯೂ ಇಂಗ್ಲೆಂಡ್‌ 137 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಅವರ ಅಮೋಘ ಶತಕ,‌ ಬೆನ್‌ ಡಕೆಟ್‌, ಓಲಿ ಪೋಪ್‌ ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ ಕಲೆಹಾಕಿತ್ತು.

    3ನೇ ದಿನದಾಟದಲ್ಲಿ 134 ಎಸೆತಗಳಲ್ಲಿ 77 ರನ್‌ ಗಳಿಸಿದ್ದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) 4ನೇ ದಿನ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್‌ ನಡೆಸಿದರು. 198 ಎಸೆತಗಳಲ್ಲಿ 141 ರನ್‌ (3 ಸಿಕ್ಸರ್‌, 11 ಬೌಂಡರಿ) ಚಚ್ಚಿದರು ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 7,000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು. ಇದರೊಂದಿಗೆ ಬ್ರ್ಯಾಂಡನ್‌ ಕಾರ್ಸ್‌ (47 ರನ್‌), ಲಿಯಾಮ್‌ ದಾವ್ಸನ್‌ (26 ರನ್‌) ಅವರ ಸಣ್ಣ ಕೊಡುಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಕಾರಿಯಾಯಿತು.

    ಕೈಕೊಟ್ಟ ಸುದರ್ಶನ್‌, ಜೈಸ್ವಾಲ್‌
    ಇನ್ನೂ 4ನೇ ದಿನ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಮರಳಿದ್ರು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್‌ ರಾಹುಲ್‌ (KL Rahul ) 87 ರನ್‌ (210 ಎಸೆತ, 8 ಬೌಂಡರಿ) ಗಳಿಸಿದ್ರೆ, ನಾಯಕ ಶುಭಮನ್‌ ಗಿಲ್‌ 78 ರನ್‌ (167 ಎಸೆತ, 10 ಬೌಂಡರಿ) ಗಳಿಸಿದರು. ಭಾನುವಾರ ಈ ಜೋಡಿ 5ನೇ ದಿನದ ಕ್ರೀಸ್‌ ಆರಂಭಿಸಲಿದೆ.

  • ವಿಕೆಟ್‌ ಪಡೆಯಲು ಪರದಾಡಿದ ಬೌಲರ್‌ಗಳು – ಭರ್ಜರಿ 186 ರನ್‌ ಮುನ್ನಡೆಯಲ್ಲಿ ಇಂಗ್ಲೆಂಡ್‌

    ವಿಕೆಟ್‌ ಪಡೆಯಲು ಪರದಾಡಿದ ಬೌಲರ್‌ಗಳು – ಭರ್ಜರಿ 186 ರನ್‌ ಮುನ್ನಡೆಯಲ್ಲಿ ಇಂಗ್ಲೆಂಡ್‌

    ಮ್ಯಾಚೆಂಸ್ಟರ್‌: ಜೋ ರೂಟ್‌ (Joe Root) ಅವರ ಶತಕ, ಬೆನ್‌ ಸ್ಟೋಕ್ಸ್‌ ಮತ್ತು ಓಲಿ ಪೋಪ್‌ ಅವರ ಅರ್ಧಶತಕದ ನೆರವಿನಿಂದ ಭಾರತದ (India) ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್‌ ಕ್ರಿಕೆಟ್‌ನ ಮೂರನೇ ದಿನ ಇಂಗ್ಲೆಂಡ್‌ (England) 186 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

    ಭಾರತದ 358 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್‌ 135 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 544 ರನ್‌ ಹೊಡೆದಿದೆ. ಎರಡನೇ ದಿನ 2 ವಿಕೆಟ್‌ ನಷ್ಟಕ್ಕೆ 225 ರನ್‌ ಹೊಡೆದಿದ್ದ ಇಂಗ್ಲೆಂಡ್‌ ಇಂದು 5 ವಿಕೆಟ್‌ಗಳ ಸಹಾಯದಿಂದ 319 ರನ್‌ ಹೊಡೆಯಿತು. ಇಂದು 89 ಓವರ್‌ ಎಸೆದ ಭಾರತ ಬೌಲರ್‌ಗಳಿಗೆ ದಕ್ಕಿದ್ದು ಕೇವಲ 5 ವಿಕೆಟ್‌ಗಳು ಮಾತ್ರ.

    ಔಟಾಗದೇ ಉಳಿದಿದ್ದ ಜೋ ರೂಟ್‌ 150 ರನ್‌(248 ಎಸೆತ, 14 ಬೌಂಡರಿ ಹೊಡೆದು ಔಟಾದರೆ, ಓಲಿ ಪೋಪ್‌ 71 ರನ್‌(128 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಇವರಿಬ್ಬರು ಮೂರನೇ ವಿಕೆಟಿಗೆ 231 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟಿನಲ್ಲಿ ಎರಡನೇ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಜೋ ರೂಟ್‌ ಪಾತ್ರರಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

    ನಾಯಕ ಬೆನ್‌ ಸ್ಟೋಕ್ಸ್‌ (Ben Stokes) 77 ರನ್‌ (134 ಎಸೆತ, 6 ಬೌಂಡರಿ) ಲಿಯಾಮ್ ಡಾಸನ್ 21 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಶನಿವಾರ ಭಾರತದ ಬೌಲರ್‌ಗಳು ಉತ್ತಮವಾಗಿ ಆಡಿ ಬೇಗನೇ ವಿಕೆಟ್‌ ತೆಗೆದು ನಂತರ ಭಾರತ ಔಟಾಗದೇ ದಿನಪೂರ್ತಿ ಆಡಿದರೆ ಪಂದ್ಯಕ್ಕೆ ರೋಚಕ ತಿರುವು ಸಿಗಬಹುದು. ಹೀಗಾಗಿ 4ನೇ ದಿನದಲ್ಲಿ ಭಾರತದ ಆಟ ಯಾವ ರೀತಿ ಇರಲಿದೆ ಎನ್ನುವುದರ ಪಂದ್ಯ ಡ್ರಾ/ ಜಯದ ಬಗ್ಗೆ ಲೆಕ್ಕಾಚಾರ ಹಾಕಬಹುದು.

    ಭಾರತದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಎರಡು ವಿಕೆಟ್‌ ಪಡೆದರೆ ಬುಮ್ರಾ, ಸಿರಾಜ್‌, ಕಾಂಬೋಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ನೋವಿನಲ್ಲೂ ಫಿಫ್ಟಿ ಹೊಡೆದ  ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

    ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

    ಮ್ಯಾಂಚೆಸ್ಟರ್‌: ಭಾರತದ (Team India) ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರೆ ಇಂಗ್ಲೆಂಡ್‌ (England) ಬ್ಯಾಟರ್‌ಗಳು ಏಕದಿನದಂತೆ ಬ್ಯಾಟ್‌ ಬೀಸಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 46 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 225 ರನ್‌ಗಳಿಸಿದ್ದು 133 ರನ್‌ ಹಿನ್ನಡೆಯಲ್ಲಿದೆ.

    ಇನ್ನಿಂಗ್ಸ್‌ ಆರಂಭಿಸಿದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 195 ಎಸೆತಗಳಲ್ಲಿ 166 ರನ್‌ ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಜ್ಯಾಕ್ ಕ್ರಾಲಿ 84 ರನ್‌(113 ಎಸೆತ, 13 ಬೌಂಡರಿ, 1 ಸಿಕ್ಸ್‌) ಹೊಡೆದರೆ ಬೆನ್ ಡಕೆಟ್ 94 ರನ್‌(100 ಎಸೆತ, 13 ಬೌಂಡರಿ) ಹೊಡೆದು ಔಟಾದರು.

    ಕ್ರೀಸ್‌ನಲ್ಲಿ ಓಲಿ ಪೋಪ್ 20 ರನ್‌, ಜೋ ರೂಟ್‌ 11 ರನ್‌ ಗಳಿಸಿದ್ದು ಮೂರನೇ ದಿನ ಆಟ ಆಡಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಇಂದು ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

    ಮೊದಲ ದಿನ 4 ವಿಕೆಟ್‌ ಕಳೆದುಕೊಂಡು 264 ರನ್‌ ಗಳಿಸಿದ್ದ ಭಾರತ ಇಂದು ಆ ಮೊತ್ತಕ್ಕೆ 6 ವಿಕೆಟ್‌ಗಳ ಸಹಾಯದಿಂದ 94 ರನ್‌ ಸೇರಿಸಿತು. ಎರಡನೇ ದಿನ ಉತ್ತಮ ಜೊತೆಯಾಟ ಬಾರದ ಕಾರಣ ಭಾರತ ಅಂತಿಮವಾಗಿ 114.1 ಓವರ್‌ಗಳಲ್ಲಿ 358 ರನ್‌ಗಳಿಗೆ ಆಲೌಟ್‌ ಆಯ್ತು.  ಇದನ್ನೂ ಓದಿಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ  ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

     

    ಜಡೇಜಾ ನಿನ್ನೆಯ ಮೊತ್ತಕ್ಕೆ 1 ರನ್‌ ಸೇರಿಸಿ 20 ರನ್‌ಗಳಿಗೆ ಔಟಾದರೆ ಶಾರ್ದೂಲ್‌ ಠಾಕೂರ್‌ 41 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ವಾಷಿಂಗ್ಟನ್‌ ಸುಂದರ್‌ 27 ರನ್‌ಗಳಿಸಿದರು. 37 ರನ್‌ ಗಳಿಸಿದ್ದಾಗ ಗಂಭೀರವಾಗಿ ಗಾಯಗೊಂಡು ಮೈದಾನ ತೊರೆದಿದ್ದ ರಿಷಭ್‌ ಪಂತ್‌ (Rishabh Pant) ಇಂದು 54 ರನ್‌(74 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ 9ನೇಯವರಾಗಿ ಔಟಾದರು.

    ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 5 ವಿಕೆಟ್‌ ಪಡೆದರೆ ಜೋಫ್ರಾ ಅರ್ಚರ್‌ 3 ವಿಕೆಟ್‌, ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್ ಡಾಸನ್ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌