Tag: engine

  • ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಬೀಜಿಂಗ್: 80 ವರ್ಷದ ವೃದ್ಧೆಯೊಬ್ಬರು ಅದೃಷ್ಟ ಬರಲಿ, ಒಳ್ಳೆದಾಗಲಿ ಅಂತ ಮಾಡಿದ ಒಂದು ಚಿಕ್ಕ ಕೆಲಸ ವಿಮಾನದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಘೈ ಪುಡೊಂಗ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವೃದ್ಧೆ ಎಂಜಿನ್‍ನೊಳಗೆ ನಾಣ್ಯಗಳನ್ನ ಹಾಕಿದ್ರಿಂದ ಚೀನಾ ಸದರ್ನ್ ಏರ್‍ಲೈನ್ಸ್ ಫ್ಲೈಟ್ ತಡವಾಗಿ ಹೊರಡಬೇಕಾಯ್ತು. ಅಷ್ಟೇ ಅಲ್ಲ ವಿಮಾನದ ಎಂಜಿನ್‍ನಿಂದ ನಾಣ್ಯಗಳನ್ನು ಹೊರತೆಗೆಯೋಕೆ ಹರಸಾಹಸಪಡಬೇಕಾಯ್ತು.

    ಪ್ರಯಾಣಿಕರು ವಿಮಾನವೇರುವಾಗ ವೃದ್ಧೆಯೊಬ್ಬರು ಮೆಟ್ಟಿಲುಗಳ ಮೇಲೆ ನಿಂತು ಎಂಜಿನ್‍ನೊಳಗೆ ನಾಣ್ಯ ಎಸೆಯೋದನ್ನ ನೋಡಿ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ರು. ವೃದ್ಧೆ ತನ್ನ ಗಂಡ, ಮಗಳು ಹಾಗೂ ಅಳಿಯನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ವೃದ್ಧೆ ಎಸೆದ ನಾಣ್ಯಗಳಲ್ಲಿ 8 ನಾಣ್ಯ ಬೇರೆ ಕಡೆ ಬಿದ್ದಿದ್ದು ಒಂದು ಮಾತ್ರ ಎಂಜಿನ್‍ನೊಳಗೆ ಹೋಗಿತ್ತು.

    ವಿಷಯ ತಿಳಿದ ನಂತರ ವಿಮಾನದಲ್ಲಿದ್ದ ಸುಮಾರು 150 ಪ್ರಯಾಣಿಕರನ್ನ ಕೆಳಗಿಳಿಸಲಾಯ್ತು. ವಿಮಾನದ ಮೆಕ್ಯಾನಿಕ್‍ಗಳು ಎಂಜಿನ್‍ನಲ್ಲಿನ ಒಂದು ನಾಣ್ಯ ಸೇರಿದಂತೆ ಒಟ್ಟು 9 ನಾಣ್ಯಗಳನ್ನ ಹೊರತೆಗೆದಿದ್ದಾರೆ. ಒಂದು ವೇಳೆ ಲೋಹದ ನಾಣ್ಯವನ್ನ ಎಂಜಿನ್ ಒಳಗೆಳೆದುಕೊಂಡಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.

    ಘಟನೆ ಹಿನ್ನೆಲೆಯಲ್ಲಿ ವೃದ್ಧೆಯನ್ನ ವಿಮಾನ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಯಾಣ ಸುರಕ್ಷಿತವಾಗಿರಲಿ ಎಂದು ನಾಣ್ಯ ಎಸೆದಿದ್ದಾಗಿ ವೃದ್ಧೆ ಹೇಳಿದ್ದಾರೆ. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ 5 ಗಂಟೆ ತಡವಾಗಿ ಟೇಕ್‍ಆಫ್ ಆಗಿದೆ.

    ಈ ಸುದ್ದಿ ಚೀನಾದ ಸಾಮಾಜಿಕ ಜಾಲತಾಣವಾದ ವೀಬೋದಲ್ಲಿ ಟ್ರೆಂಡಿಂಗ್ ಆಗಿದ್ದು, ಅಜ್ಜಿ.. ನಾಣ್ಯ ಎಸೆಯೋಕೆ ಇದೇನು ಆಸೆ ಈಡೇರಿಸೋ ಆಮೆಯ ಕೊಳ ಎಂದುಕೊಂಡ್ರಾ ಎಂದು ಕಮೆಂಟ್ ಮಾಡಿದ್ದಾರೆ.

  • ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

    ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

    ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನೆಲಮಂಗಲ ಪಟ್ಟಣದ ಸೊಂಡೇಕುಪ್ಪ ಬೈಪಾಸ್ ಬಳಿ ನಡೆದಿದೆ.

    ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಡ್ರೈವರ್ ಎಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿಗೆ ನೀರು ಹಾಕಿ ನಂದಿಸಿದ್ರು. ಹೀಗಾಗಿ ಆತಂಕಗೊಂಡ ಪ್ರಯಾಣಿಕರು ಬಸ್‍ನಿಂದ ಕೆಳಗೆ ಇಳಿದರು.

    ಎರಡು ತಿಂಗಳ ಹಿಂದೆ ಇದೇ ರಸ್ತೆಯಲ್ಲಿ ಬಸ್‍ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಪ್ರಯಾಣಿಕರು ದಾರುಣವಾಗಿ ಸಾವನಪ್ಪಿದ್ದರು.