Tag: Enforcement Directorat

  • ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗ್ತಾರೆ: ಡಿಕೆಶಿ ಮಾವ

    ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗ್ತಾರೆ: ಡಿಕೆಶಿ ಮಾವ

    ಮೈಸೂರು: ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಹೇಳಿದ್ದಾರೆ.

    ನಗರದ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನನ್ನ ಅಳಿಯ ಯಾವದೇ ತಪ್ಪು ಮಾಡಿಲ್ಲ. ಇದರಲ್ಲಿ ಯಾವ ಹವಾಲವೂ ಇಲ್ಲ ಅಕ್ರಮ ಸಂಪಾದನೆಯೂ ಇಲ್ಲ. ಬುಧವಾರವೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ. ಅಳಿಯನ ಬಂಧನ ಸುದ್ದಿ ಕೇಳಿದ ಕೂಡಲೇ ಮಗಳ ಜೊತೆ ಮಾತನಾಡಿದ್ದೇನೆ. ನಾವೂ ಯಾರು ಆತಂಕಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ.

    ತಪ್ಪು ಮಾಡಿಲ್ಲ ಎಂದ ಮೇಲೆ ಆತಂಕ ಯಾಕೆ ಹೇಳಿ? ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧನವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಅಧಿಕಾರ ದುರಪಯೋಗ ಪಡಿಸಿಕೊಂಡು ಬಂಧನ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರನ್ನು ನಾಲ್ಕು ದಿನ ವಿಚಾರಣೆ ಮಾಡಿದೆ. ಎಲ್ಲ ರೀತಿಯಲ್ಲೂ ಅವರು ವಿಚಾರಣೆಗೆ ಸಹಕಾರ ನೀಡಿದ್ದಾರೆ. ಈಗ ವಿಚಾರಣೆಗೆ ಸಹಕರಿಸುತ್ತಿಲ್ಲ ಅಂದರೆ ಅದರ ಅರ್ಥ ಏನೂ? ವಿಚಾರಣೆ ನಾಲ್ಕು ದಿನ ನಡೆದ ಕಾರಣ ಬಂಧನವಾಗಲ್ಲ ಎಂದು ಕೊಂಡಿದ್ದೇವು. ಆದರೆ ಈಗ ಬಂಧನವಾಗಿದೆ. ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ನನ್ನ ಅಳಿಯನಿಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಡಿಕೆಶಿ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ: ಬಿಜೆಪಿ ವಿರುದ್ಧ ಎಚ್‍ಡಿಕೆ ಕಿಡಿ

    ಡಿಕೆಶಿ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ: ಬಿಜೆಪಿ ವಿರುದ್ಧ ಎಚ್‍ಡಿಕೆ ಕಿಡಿ

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರತಿಪಕ್ಷ ಇರಬಾರದು ಎನ್ನುವುದೇ ಡಿ.ಕೆ.ಶಿವಕುಮಾರ್ ಅವರ ಬಂಧನದ ಉದ್ದೇಶವಾಗಿದೆ. ಕಳೆದ ನಾಲ್ಕು ದಿನಗಳಿಂದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿ, ಈಗ ಬಂಧನ ಮಾಡುವ ಅವಶ್ಯಕತೆ ಏನಿತ್ತು? ಕಾನೂನು ವ್ಯಾಪ್ತಿಯಲ್ಲಿ ಕ್ರಮ ತಗೆದುಕೊಳದೇ ಈ ರೀತಿ ಮಾಡುವುದು ತಪ್ಪು ಎಂದರು.

    ಡಿಸಿಎಂ ಅಶ್ವಥ್ ನಾರಾಯಣ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಮಲ್ಲೇಶ್ವರಂನಲ್ಲಿ ಏನೇನ್ ಲೂಟಿ ಹೊಡೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷ ರಾಜಕೀಯ ಮಾಡಲ್ಲ ಎನ್ನುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಆಗುತ್ತಿರುವುದು ಏನು? ಫೋನ್ ಕದ್ದಾಲಿಕೆ ನಡೆದಿದೆ ಅಂತ ತನಿಖೆಗೆ ಆದೇಶ ನೀಡಿದ್ದಾರೆ. ಯಾವ್ ತನಿಖೆ ಆದರೂ ಮಾಡಲಿ ಸಿಬಿಐ ಅಲ್ಲ, ಇಂಟರ್ ನ್ಯಾಷನಲ್ ಸಂಸ್ಥೆಯಿಂದ ತನಿಖೆ ಮಾಡಿಸಲಿ ನನಗೇನು ಭಯವಿಲ್ಲ ಎಂದು ಗುಡುಗಿದರು.

    ಟ್ವೀಟ್ ಕೂಡ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬದ ಆಚರಣೆಗೂ ಅವಕಾಶ ನೀಡದೆ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಸಹದ್ಯೋಗಿ ಡಿ.ಕೆ.ಶಿವಕುಮಾರ್ ಅವರ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸಲಾಗದೆ ಅಧಿಕಾರ ದುರುಪಯೋಗದ ಮೂಲಕ ದಮನಿಸುವ ಯತ್ನ ಹೇಡಿತನದ್ದು. ಇಂತಹ ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಶಿವಕುಮಾರ್ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.

  • ಡಿಕೆಶಿ ಬಂಧನದಿಂದ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ಬಿಎಸ್‍ವೈ

    ಡಿಕೆಶಿ ಬಂಧನದಿಂದ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ಬಿಎಸ್‍ವೈ

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ಇಡಿ) ಬಂಧನದಿಂದ ಹೊರಬರಲಿ ಅಂತ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ, ಮಾಜಿ ಸಚಿವರ ಬಂಧನ ಆಗಿರುವ ಬಗ್ಗೆ ನನಗೇನು ಸಂತೋಷವಾಗಿಲ್ಲ. ಇದೆಲ್ಲದರಿಂದ ಅವರು ಆದಷ್ಟು ಬೇಗ ಹೊರಬರಲಿ. ಡಿ.ಕೆ.ಶಿವಕುಮಾರ್ ಅವರು ಹೊರಬಂದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಬಡುತ್ತೇನೆ ಎಂದರು.

    ಕಾನೂನು ಚೌಕಟ್ಟಿನಲ್ಲಿ ಕೆಲವೊಂದು ನಿರ್ಧಾರ ಆಗಿರುತ್ತದೆ. ಹೀಗಾಗಿ ಬಂಧನ ಆಗಿರಬೇಕು. ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸಿಲ್ಲ, ಕೆಟ್ಟದ್ದನ್ನು ಬಯಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ

    ಇತ್ತ ಮೌರ್ಯ ಸರ್ಕಲ್‍ನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಸಿಎಂ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ಯಡಿಯೂರಪ್ಪನವರ ದವಳಗಿರಿ ನಿವಾಸಕ್ಕೆ ಬೀಗಿ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಇಡಿಗೆ ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ: ಡಿಕೆಶಿ ಪರ ವಕೀಲ ಶ್ಯಾಮ್ ಸುಂದರ್

    ಇದಕ್ಕೂ ಮುನ್ನ ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿ, ಮಾಡಿದ್ದುಣ್ಣೋ ಮಾರಾಯ ಎಂದು ಡಿಕೆ ಶಿವಕುಮಾರ್ ಅವರಿಗೆ ಗುದ್ದು ಕೊಟ್ಟಿದ್ದರು. ಹೊಸ ಭಾರತದಲ್ಲಿ ಭ್ರಷ್ಟರಿಗೆ ಜಾಗವಿಲ್ಲ. ಭ್ರಷ್ಟರನ್ನ ಶಿಕ್ಷಿಸುವ ಸರ್ಕಾರ ಕೆಲಸ ಮಾಡುತ್ತಿದೆ. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ವರ್ಕೌಟ್ ಆಗಲ್ಲ ಎಂದು ಹೇಳಿದ್ದರು.

    ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸಚಿವ ರಾಮುಲು ಹೇಳಿಕೆಯಿಂದ ಡಿಕೆ ಶಿವಕುಮಾರ್ ಸೋಮವಾರ ಕಣ್ಣೀರು ಹಾಕಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಸಚಿವ ರಾಮುಲು ಡಿಕೆಶಿ ಅವರಿಗೆ ಕೈಮುಗಿದು ಕ್ಷಮೆ ಕೇಳಿ, ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ರಾಜಕೀಯವಾಗಿ ಟೀಕೆ ಮಾಡಿದ್ದೆ ಅಷ್ಟೇ ಎಂದು ತಿಳಿಸಿದ್ದರು.

  • ಇಡಿಗೆ ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ: ಡಿಕೆಶಿ ಪರ ವಕೀಲ ಶ್ಯಾಮ್ ಸುಂದರ್

    ಇಡಿಗೆ ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ: ಡಿಕೆಶಿ ಪರ ವಕೀಲ ಶ್ಯಾಮ್ ಸುಂದರ್

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇಲ್ಲ ಎಂದು ಡಿಕೆಶಿ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಹಿರಿಯ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸುತ್ತಾರೆ ಎಂದು ಊಹೆ ಕೂಡ ಮಾಡಿರಲಿಲ್ಲ. ಇದು ಈ ಹಂತಕ್ಕೆ ಹೋಗಬಾರದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ

    ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಬಳಿಕ ಇಡಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ತಿಳಿಸಿತ್ತು. ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯಲ್ಲ. ಆದಾಯ ತೆರಿಗೆ ಇಲಾಖೆಯವರು ದೂರಿನ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದರು.

    ಬಂಧನವನ್ನು ವಿರೋಧಿಸಿ ನಾವು ಕರ್ನಾಟಕ ಹೈಕೋರ್ಟಿನಲ್ಲಿ ತುರ್ತು ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡುತ್ತೇವೆ. ನೀವು ಆರೋಪಿಗಳಂತೆ ಭಾವಿಸಬೇಡಿ, ನಿಮ್ಮನ್ನ ಅವರು ಕೇವಲ ವಿಚಾರಣೆಗೆ ಕರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇಡಿಗೆ ಇಲ್ಲ ಅಂತ ವಿಚಾರಣೆ ವೇಳೆ ಸ್ಪಷ್ಟವಾಗಿ ತಿಳಿಸಿ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಏಕಾಏಕಿ ಮಾಜಿ ಸಚಿವರನ್ನು ಯಾಕೆ ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ಬಂಧನ – ಬುಧವಾರ ರಾಮನಗರ, ಕನಕಪುರ ಬಂದ್

    ಇಡಿ ಅಧಿಕಾರಿಗಳು ಪ್ರಶ್ನೆ ಕೇಳುವ ಅಧಿಕಾರವೇ ಇಲ್ಲ. ಐಟಿ ಇಲಾಖೆ ನೀಡಿದ ದಾಖಲೆಯೇ ತಪ್ಪು ಎನ್ನುವುದು ಈಗಾಗಲೇ ತಿಳಿದು ಬಂದಿದೆ. ಯಾರ ಜಾಗದಲ್ಲಿ 8.9 ಕೋಟಿ ರೂ. ಸಿಕ್ಕಿತ್ತೋ ಅವರು ಹಣ ನನ್ನದೇ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಯನ್ನು ಐಟಿ ತಿರಸ್ಕರಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲು ಸಾಧ್ಯವೇ ಇಲ್ಲ ಎಂದು ಎಂದು ಮಾಹಿತಿ ನೀಡಿದರು.

    ಕಾನೂನು ಹೋರಾಟ ಸುದೀರ್ಘವಾಗಿ ಇರುತ್ತವೆ. ಆದರೆ ಕೋರ್ಟ್ ನಿರಪರಾಧಿಗಳನ್ನು ರಕ್ಷಿಸುತ್ತದೆ. ಸಂಬಂಧವಿಲ್ಲ ಸಂಸ್ಥೆ ಸೂಕ್ತವಲ್ಲದ ರೀತಿ ವಿಚಾರಣೆ ನಡೆಸುತ್ತಿರುವುದು ತಪ್ಪು ಎನ್ನುವುದೇ ನಮ್ಮ ವಾದ. ಈ ಬಗ್ಗೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದರು.