Tag: employment

  • ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಮೈತ್ರಿ ಸರ್ಕಾರ: ಸಿಎಂ ಎಚ್‍ಡಿಕೆ

    ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಮೈತ್ರಿ ಸರ್ಕಾರ: ಸಿಎಂ ಎಚ್‍ಡಿಕೆ

    ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಭಾರೀ ಬಹುಮತದಲ್ಲಿ ಮತದಾರರು ನಮಗೇ ಆಶೀರ್ವಾದ ಮಾಡಿದ್ದಾರೆ. ನನ್ನ ಮೇಲೆ ಜಿಲ್ಲೆ ಜನ ಅವರ ಋಣಭಾರ ಇದೆ. ಆದರಿಂದ ಕಳೆದ 25 ವರ್ಷದಿಂದ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ನನಗೆ ಜವಾಬ್ದಾರಿ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವುದು ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಇರುತ್ತದೆ. ಆದರೆ ಮಗುವಾದಾಗ ತೃಪ್ತಿ ಇರುತ್ತೆ. ಆದೇ ರೀತಿ ಸಮ್ಮಿಶ್ರ ಸರ್ಕಾರದ ಆಡಳಿತ ನಮಗೇ ತೃಪ್ತಿ ಇದೆ ಎಂದು ಹೇಳಿದರು.

    ಮಂಡ್ಯ ಜಿಲ್ಲೆಗೆ ಬಜೆಟ್ ಮಾತ್ರವಲ್ಲದೇ ಕೆಲವು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡು ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಆದರೆ ಈ ಮೊತ್ತವನ್ನು ನಾನು ಹೇಳಿದರೆ ಬೇರೆ ಕಡೆ ಶುರುವಾಗುತ್ತೆ. ಆದ್ದರಿಂದ ಹಾಗಾಗಿ ಹೇಳಲೋ ಬೇಡವೋ ಎಂಬಂತಾಗಿದೆ. ಕುಮಾರಣ್ಣ ಮಂಡ್ಯಗೆ ಮಾತ್ರ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಬರದಂತೆ ಎಲ್ಲಾ ಜಿಲ್ಲೆಗಳಲ್ಲೂ ಕೆಲ ಸಂಸ್ಥೆಗಳನ್ನು ಆರಂಭಿಸಲು ಉದ್ದೇಶಿಸಿದ್ದೇನೆ. ಮುಂದಿನ ತಿಂಗಳಿನಿಂದ ಈ ಯೋಜನೆಗಳ ಜಾರಿ ಆರಂಭವಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರತಿ ಜಿಲ್ಲೆಯ ಆಯಾ ಜಿಲ್ಲೆಯ ಯುವ ಸಮುದಾಯಕ್ಕೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.

    ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟಾರೆ ಸುಮಾರು 603 ಕೋಟಿ ರೂ. ವೆಚ್ಚದಲ್ಲಿ ಮೊದಲನೇ ಹಂತದ ಕಾಮಗಾರಿಗಳಿಗೆ ಈ ವಾರದಲ್ಲಿ ಚಾಲನೆ ನೀಡುತ್ತೇನೆ. ಫೆಬ್ರವರಿ 27 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಮಂಡ್ಯದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಸಾಲಮನ್ನಾಕ್ಕೂ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆಗೂ ಕೊರತೆಯಿಲ್ಲ. ಒಟ್ಟಾರೆ ವಿವಿಧ ಇಲಾಖೆಗಳಿಗೆ ಸೇರಿದಂತೆ ಇದೇ ತಿಂಗಳು 27 ರಂದು ಸರ್ಕಾರಿ ಕಾರ್ಯಕ್ರಮ ಮಾಡಿ ಮಂಡ್ಯ ಜಿಲ್ಲೆಗೆ ಒಟ್ಟು 5 ಸಾವಿರ ಕೋಟಿ ರೂ. ಮಿಗಿಲಾದ ಯೋಜನೆಗಳನ್ನು ಜಾರಿಗೆ ತರಲಾಗುತ್ತೆ ಎಂದು ತಿಳಿಸಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ನೀಡುವ ಡೆಡ್ ಲೈನ್‍ಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರಕ್ಕೆ ಡೆಡ್ ಲೈನ್ ಕೊಡುವವಳು ತಾಯಿ ಚಾಮುಂಡೇಶ್ವರಿ. ಮನುಷ್ಯರು ಕೊಡುವ ಡೆಡ್ ಲೈನ್‍ಗೆ ನಾನು ಏಕೆ ಹೆದರಲಿ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದಲ್ಲಿ 45 ವರ್ಷದಲ್ಲೇ ಅತಿಹೆಚ್ಚು ನಿರುದ್ಯೋಗ – ಸರ್ಕಾರ ಹೇಳೋದು ಏನು?

    ದೇಶದಲ್ಲಿ 45 ವರ್ಷದಲ್ಲೇ ಅತಿಹೆಚ್ಚು ನಿರುದ್ಯೋಗ – ಸರ್ಕಾರ ಹೇಳೋದು ಏನು?

    ನವದೆಹಲಿ: ದೇಶದಲ್ಲಿ ನೋಟು ನಿಷೇಧ ಬಳಿಕ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಿಗೆ ಅತಿ ಹೆಚ್ಚು ದಾಖಲಾಗಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿದ ಸಮೀಕ್ಷೆ ತಿಳಿಸಿದೆ.

    2017-18ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಶೇ.6.01ರಷ್ಟಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದ್ದು, ಈ ವರದಿಯನ್ನು ಕಳೆದ ತಿಂಗಳು ಸಿದ್ಧ ಪಡಿಸಲಾಗಿತ್ತು ಎನ್ನಲಾಗಿದೆ.

    ವರದಿಯನ್ನು ಸಾರ್ವಜನಿಕ ಪಡಿಸಿದ ಕಾರಣಕ್ಕೆ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗದ ಇಬ್ಬರು ಸ್ವತಂತ್ರ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಆದರೆ ಸರ್ಕಾರವೇ ಈ ವರದಿಯನ್ನ ಮರೆಮಾಚಿದೆ ಎಂದು ವರದಿಯಾಗಿದೆ. 1972-73ರಲ್ಲಿ ನಿರುದ್ಯೋಗ ದರ ಹೆಚ್ಚಿತ್ತು, ಆದಾದ ಬಳಿಕ ಈಗಲೇ ಇಷ್ಟು ಪ್ರಮಾಣದ ಸಂಖ್ಯೆ ಹೆಚ್ಚಿದೆ. 2011-12ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಿರುದ್ಯೋಗದ ಸಂಖ್ಯೆ ಕೇವಲ 2.2ರಷ್ಟು ಮಾತ್ರ ಇತ್ತು.

    ರಾಹುಲ್ ಗಾಂಧಿ ಟೀಕೆ: ಇತ್ತ ವರದಿಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‍ನಲ್ಲಿ ಪ್ರಧಾನಿ ಮೋದಿ ಅವರನ್ನು ಹಿಟ್ಲರ್ ಎಂದು ಜರಿದಿದ್ದಾರೆ. ಹಿಟ್ಲರ್ ವರ್ಷದಲ್ಲಿ 2 ಕೋಟಿ ಉದ್ಯೋಗ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್‍ನ ಸಮೀಕ್ಷೆ ಅವರ ರಿಪೋರ್ಟ್ ಕಾರ್ಡನ್ನು ಬಹಿರಂಗ ಪಡಿಸಿದೆ. ಟೈಮ್ ಫಾರ್ `ನೋಮೊ ಜಾಬ್ಸ್’ ಎಂದು ವ್ಯಂಗ್ಯವಾಡಿದ್ದಾರೆ.

    ಸರ್ಕಾರ ಹೇಳೋದು ಏನು?
    ಸಮೀಕ್ಷಾ ವರದಿಯ ಕುರಿತು ಸ್ಪಷ್ಟನೆ ನೀಡಿರುವ ನೀತಿ ಆಯೋಗ ಸಮೀಕ್ಷೆಯ ವರದಿ ಮಾಹಿತಿ ಅಂತಿಮವಲ್ಲ ಎಂದು ಹೇಳಿದೆ. ಬಿಡುಗಡೆ ಆಗಿರುವ ಈ ಮಾಹಿತಿಯನ್ನು ಪರಿಶೀಲನೆ ನಡೆಸಿಲ್ಲ ಹಾಗೂ ಮಾಹಿತಿಯ ಸತ್ಯತೆಯೂ ತಿಳಿದಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

    ವರದಿಯೂ ಪರಿಶೀಲನೆಯ ಹಂತದಲ್ಲಿ ಇದ್ದು, ವರದಿ ಸಂಪೂರ್ಣವಾಗಿ ಸಿದ್ಧವಾದ ನಂತರ ಬಿಡುಗಡೆ ಮಾಡಲಾಗುವುದು. ಪೂರ್ಣ ವರದಿ ತಯಾರದ ಮೇಲೆ ಬಿಡುಗಡೆ ಮಾಡುತ್ತೇವೆ. ಅಲ್ಲದೇ ಸಮೀಕ್ಷೆಯ ದತ್ತಾಂಶಗಳನ್ನು ಬಿಡುಗಡೆ ಮಾಡಲು ಭಿನ್ನ ಮಾನದಂಡಗಳನ್ನು ಬಳಕೆ ಮಾಡಲಾಗಿದ್ದು, ಆದ್ದರಿಂದ ಬಿಡುಗಡೆ ಆಗಿರುವ ವರದಿಯೇ ಅಂತಿಮವಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದಲ್ಲಿ 24 ಲಕ್ಷ ಉದ್ಯೋಗ ಖಾಲಿ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ? ಇಲ್ಲಿದೆ ಮಾಹಿತಿ

    ದೇಶದಲ್ಲಿ 24 ಲಕ್ಷ ಉದ್ಯೋಗ ಖಾಲಿ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ? ಇಲ್ಲಿದೆ ಮಾಹಿತಿ

    ನವದೆಹಲಿ: ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿಂತೆ ದೇಶಾದ್ಯಂತ ಕುರಿತು ಭಾರೀ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ವೇಳೆ ಕೇಂದ್ರಾಡಳಿತ ಪ್ರದೇಶ, ಕೇಂದ್ರ, ರಾಜ್ಯ ಸರ್ಕಾರದಲ್ಲಿ ಒಟ್ಟು 24 ಲಕ್ಷ ಉದ್ಯೋಗಗಳು ಖಾಲಿ ಇರುವ ವಿಚಾರ ಬೆಳಕಿಗೆ ಬಂದಿದೆ.

    ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿವಿಧ ದಿನಾಂಕಗಳಲ್ಲಿ ಇಲಾಖೆವಾರು ಉದ್ಯೋಗ ಸೃಷ್ಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಮುಖವಾಗಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ನೇಮಕವಾಗಬೇಕಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ 9 ಲಕ್ಷ ಇದ್ದರೆ, ಸೆಕೆಂಡರಿ ಶಾಲೆಯ 1.1 ಲಕ್ಷ ಹುದ್ದೆ ಖಾಲಿಯಿದೆ.

    ಮಾರ್ಚ್ 27 ರಂದು ಲೋಕಸಭೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಕುರಿತು ಉತ್ತರಿಸಿ, ನಾಗರಿಕ ಜಿಲ್ಲಾ ಸಶಸ್ತ್ರ ಪಡೆಯಲ್ಲಿ 4.4 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ. ಅಲ್ಲದೇ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ 90,000 ಹುದ್ದೆಗಳು ಖಾಲಿ ಉಳಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಹುದ್ದೆಗಳನ್ನು ಆಯಾ ರಾಜ್ಯ ಸರ್ಕಾರಗಳು ಭರ್ತಿ ಮಾಡಬೇಕಿದೆ.

    ರಾಜ್ಯ ಸಭೆಯಲ್ಲಿ ಮಾರ್ಚ್ 14 ಹಾಗೂ 19 ಮತ್ತು ಲೋಕಸಭೆಯಲ್ಲಿ ಏಪ್ರಿಲ್ 4 ರಂದು ಕೇಳಲಾದ ಪ್ರಶ್ನೆಯ ವೇಳೆ ರಕ್ಷಣಾ ಕ್ಷೇತ್ರದಲ್ಲಿ 1.2 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ ಎಂಬ ಅಂಕಿ ಅಂಶಗಳನ್ನ ನೀಡಲಾಗಿದೆ. ದೇಶದ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗವಕಾಶ ನೀಡಿರುವ ರೈಲ್ವೇ ಇಲಾಖೆ ಕುರಿತು ಮಾರ್ಚ್ 16 ರಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನ್ ಗೆಜೆಟೆಡ್ ಹುದ್ದೆಗಳು 2.5 ಲಕ್ಷ ಹುದ್ದೆ ಖಾಲಿ ಉಳಿದಿದೆ ಎಂಬ ವರದಿ ಸಲ್ಲಿಕೆಯಾಗಿದೆ. ಇದೇ ವೇಳೆ ನೀಡಲಾದ ಮಾಹಿತಿಯಲ್ಲಿ ಫೆಬ್ರವರಿ ವೇಳೆಗೆ 89,000 ಹುದ್ದೆಗಳ ನೇಮಕಾತಿಗೆ ಆದೇಶ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

    ಪೋಸ್ಟಲ್ ಇಲಾಖೆಯಲ್ಲಿ ಮಾರ್ಚ್ 28 ರಂದು ಸದನಕ್ಕೆ ನೀಡಿರುವ ಮಾಹಿತಿ ಅನ್ವಯ 54 ಸಾವಿರ ಹುದ್ದೆಗಳು ಖಾಲಿ ಇದೆ. ಇನ್ನು ರಾಜ್ಯಸಭೆಯಲ್ಲಿ ಫೆ.6 ರಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆರೋಗ್ಯ ಇಲಾಖೆಯಲ್ಲಿ 1.5 ಲಕ್ಷ ಹುದ್ದೆ ಖಾಲಿ ಇದ್ದು, ಪ್ರಮುಖವಾಗಿ 16 ಸಾವಿರ ವೈದ್ಯರ ನೇಮಕವಾಗಬೇಕಿದೆ.

    ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?
    ಶಿಕ್ಷಣ ಕ್ಷೇತ್ರ – 10.1 ಲಕ್ಷ
    ಪೊಲೀಸ್ ಇಲಾಖೆ – 5.4 ಲಕ್ಷ
    ರೈಲ್ವೇ ಇಲಾಖೆ – 2.4 ಲಕ್ಷ
    ಅಂಗನವಾಡಿ – 2.2 ಲಕ್ಷ
    ಆರೋಗ್ಯ ಇಲಾಖೆ – 1.5 ಲಕ್ಷ
    ಸಶಸ್ತ್ರ ಮೀಸಲು ಪಡೆ – 62,084
    ಪ್ಯಾರಾ ಮಿಲಿಟರಿ ಪಡೆ – 61,509
    ಪೋಸ್ಟಲ್ ಇಲಾಖೆ – 54,263
    ಏಮ್ಸ್ – 21,740
    ಉನ್ನತ ಶಿಕ್ಷಣ ಸಂಸ್ಥೆ – 12,020
    ನ್ಯಾಯಾಲಯ – 5,853

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಎಂ ಜನತಾ ದರ್ಶನಕ್ಕೆ ತಂಡ ರಚನೆ – ವ್ಯಕ್ತಿಗೆ ಸ್ಥಳದಲ್ಲೇ ಉದ್ಯೋಗ ಕೊಡಿಸಿದ ಎಚ್‍ಡಿಕೆ

    ಸಿಎಂ ಜನತಾ ದರ್ಶನಕ್ಕೆ ತಂಡ ರಚನೆ – ವ್ಯಕ್ತಿಗೆ ಸ್ಥಳದಲ್ಲೇ ಉದ್ಯೋಗ ಕೊಡಿಸಿದ ಎಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಜನತಾ ದರ್ಶನಕ್ಕಾಗಿ ತಂಡ ರಚಿಸಿದ್ದಾರೆ. ಇನ್ನು ಮುಂದೆ ಈ ತಂಡ ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲಿದೆ.

    ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣ ಆವರಣದಲ್ಲಿ ಜನತಾ ದರ್ಶನದ ತಂಡ ರಚಿಸಿದ್ದು, ಸಮಸ್ಯೆ ಹೇಳಿಕೊಂಡು ಬರೋರ ಮಾಹಿತಿ ಪಡೆಯೋದು ಈ ತಂಡದ ಕೆಲಸವಾಗಿದೆ. ಸಿಎಂ ಜನತಾ ದರ್ಶನಕ್ಕೂ ಮುನ್ನ ಸಮಸ್ಯೆ ಏನು? ಯಾವ ಊರು? ಇನ್ನಿತರ ಮಾಹಿತಿ ಕಲೆ ಹಾಕಲಿದ್ದಾರೆ. ನಾಲ್ಕು ಸದಸ್ಯರ ಈ ತಂಡ ಗೃಹಕಚೇರಿ ಕೃಷ್ಣಾದಲ್ಲಿ ಕಾರ್ಯನಿರ್ವಹನಿಸಲಿದ್ದು, ಮಾಹಿತಿ ಪಡೆದು ಕಂಪ್ಯೂಟರ್ ನಲ್ಲಿ ದಾಖಲಿಸಿ, ಜನತಾ ದರ್ಶನ ನಂತರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಿದೆ.

    ಜನತಾ ದರ್ಶನದ ವೇಳೆ ಶಿವಮೊಗ್ಗ ಜಿಲ್ಲೆಯ ಸೊರಬದ ವಿಕಲಚೇತನ ಮಾಲತೇಶ್ ಸಹಾಯ ಕೇಳಿ ಬಂದಿದ್ದರು. ಮಾಲತೇಶ್ ಎಂಬಿಎ ಓದುತ್ತಿದ್ದು, ಬಲಗಾಲು ಕಳೆದುಕೊಂಡಿದ್ದಾರೆ. ಇದನ್ನು ಆಲಿಸಿದ ಸಿಎಂ ವ್ಯಕ್ತಿಗೆ ಸ್ಥಳದಲ್ಲೇ ಅವರ ಕಚೇರಿಯಲ್ಲೇ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

    ಕೊರಟಗೆರೆ ಸಮೀಪದ ಕೋಳಾಲದಿಂದ ಆಗಮಿಸಿದ್ದ ರಮೇಶ್ ಮತ್ತು ಪ್ರೇಮಾ ದಂಪತಿ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದಿದ್ದಾರೆ. ತಮ್ಮ ಎರಡು ಚಿಕ್ಕ ಮಕ್ಕಳಿಗೆ ಬೋನ್ ಮ್ಯಾರೋ ಆರೋಗ್ಯ ಸಮಸ್ಯೆ ಇದ್ದು, ಒಂದು ಮಗುವಿಗೆ 32 ಲಕ್ಷ ರೂ. ವೆಚ್ಚ ವಾಗುತ್ತದೆ. ಆದ್ದರಿಂದ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ 10 ತಿಂಗಳ ಮಗು ಲಿಖಿತ್ ಚಿಕಿತ್ಸೆಗೆ ಸೂಚನೆ ನೀಡಿದ್ದು, ಕುಮಾರಸ್ವಾಮಿ ಇಂದಿರಾಗಾಂಧಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ.

    ಇನ್ನು ಹುಟ್ಟಿದ ಹಬ್ಬದ ದಿನದಂದು ಮುಖ್ಯಮಂತ್ರಿ ಎಚ್‍ಡಿಕೆಯನ್ನು ಅಪ್ಪಿಕೊಳ್ಳುವ ಬಯಕೆಯನ್ನು ತಿಂಡ್ಲು ನಿವಾಸಿ ಬಾಲಕ ಯಶವಂತ್ ವ್ಯಕ್ತಪಡಿಸಿದ್ದನು. ನನ್ನ ತಾಯಿಗೆ ಕಣ್ಣಿಲ್ಲ, ಜೀವನ ಕಷ್ಟವಾಗಿದೆ ಅಂತ ಸಿಎಂಗೆ ಮನವಿ ಮಾಡಿದ್ದಾನೆ. ಕುಮಾರಸ್ವಾಮಿ ಅವರು ಬಾಲಕನ ಕೋರಿಕೆ ಮನ್ನಿಸಿ ಹಣಕಾಸು ನೆರವಿನ ಭರವಸೆ ನೀಡಿದ್ದಾರೆ. ಜೊತೆಗೆ ಬಾಲಕನ್ನು ತಬ್ಬಿಕೊಂಡು ಆತನ ಬಯಕೆಯನ್ನು ಈಡೇರಿಸಿದ್ದಾರೆ.

  • ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ಚೆನ್ನೈ: ವೇದಾಂತ ಕಂಪನಿಯ ಸ್ಟೆರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಈ ತೀರ್ಮಾನದಿಂದಾಗಿ ಸುಮಾರು 30 ಸಾವಿರ ಮಂದಿಗೆ ಉದ್ಯೋಗ ಕಳೆದು ಕೊಳ್ಳುವ ಭೀತಿ ಎದುರಾಗಿದೆ.

    ಸರ್ಕಾರವು ಹಠಾತ್ತಾಗಿ ತಾಮ್ರ ಘಟಕವನ್ನು ಮುಚ್ಚುವ ನಿರ್ಧಾರದಿಂದಾಗಿ ಸುಮಾರು 30 ಸಾವಿರ ಮಂದಿ ಉದ್ಯೋಗ ಕಳೆದುಕೊಂಡು, ದೇಶಕ್ಕೆ 200 ಕೋಟಿ ರೂ. ನಷ್ಟವುಂಟಾಗಿದೆ. ಹಾಗೆಯೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುವಂತೆ ಮಾಡಿದ್ದಾರೆಂದು ಸ್ಟೆರ್ಲೈಟ್ ಕಂಪನಿಯ ಮುಖ್ಯಸ್ಥ ಪಿ ರಾಮನಾಥ್ ತಿಳಿಸಿದ್ದಾರೆ.

    ಈ ಘಟಕಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಪನ್ಮೂಲಗಳನ್ನು ಪೂರೈಕೆ ಮಾಡುತ್ತಿದ್ದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿನ ಸುಮಾರು 30,000 ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

    ತೂತುಕುಡಿ ಘಟಕವು ಸುಮಾರು 40 ಲಕ್ಷ ಟನ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು, ದೇಶದಲ್ಲಿಯೇ ಅತಿಹೆಚ್ಚು ತಾಮ್ರ ಉತ್ಪಾದಿಸುತ್ತಿದ್ದ ಘಟಕವಾಗಿತ್ತು. ವಾರ್ಷಿಕವಾಗಿ ಘಟಕವು 200 ಕೋಟಿಗಳಷ್ಟು ವ್ಯವಹಾರ ನಡೆಸುತ್ತಿತ್ತು. ಕಂಪೆನಿಯು ಇದಲ್ಲದೆ ಪಶ್ಚಿಮ ಭಾರತದಲ್ಲಿ ಫಾಸ್ಪೋರಿಕ್ ಆಮ್ಲ ಘಟಕ, ಸಲ್ಫೂರಿಕ್ ಆ್ಯಸಿಡ್ ಘಟಕ, ತಾಮ್ರ ಘಟಕ ಹಾಗೂ 2 ಬೃಹತ್ ವಿದ್ಯುಸ್ಥಾವರನ್ನು ಹೊಂದಿದೆ.

    ತೂತುಕುಡಿ ಘಟಕದಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆಗಾಗಿ ಕಂಪನಿಯು ಸುಮಾರು 70 ಕೋಟಿ ಬಂಡವಾಳವನ್ನು ಹೂಡಿ 14 ಕೋಟಿ ಹಣವನ್ನು ಖರ್ಚುಮಾಡಿತ್ತು. ಈ ಯೋಜನೆ ಪೂರ್ಣಗೊಂಡಿದ್ದಲ್ಲಿ ಈ ಘಟಕದಲ್ಲಿ ಒಟ್ಟು 80 ಲಕ್ಷ ಟನ್ ತಾಮ್ರ ಉತ್ಪಾದನೆಯಾಗುತಿತ್ತು.

    ತಾಮ್ರ ಘಟಕದಿಂದ ಪರಿಸರದ ಮೇಲೆ ಮಾರಕವಾಗಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಗೋಲಿಬಾರ್‍ಗೆ 13 ಮಂದಿ ಮೃತಪಟ್ಟಿದ್ದರು. ಇದಾದ ನಂತರ ತಮಿಳುನಾಡು ಸರ್ಕಾರ ಸ್ಟೆರ್ಲೈಟ್ ತಾಮ್ರ ಘಟಕವನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಂಡಿದೆ.

  • ಮೋದಿ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ: ಜಿಗ್ನೇಶ್ ಮೇವಾನಿ

    ಮೋದಿ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ: ಜಿಗ್ನೇಶ್ ಮೇವಾನಿ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಗುಜರಾತ್ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಏರ್ಪಡಿಸಿದ್ದ ಸಂವಿಧಾನ ಉಳಿವಿಗಾಗಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2 ಕೋಟಿ ಉದ್ಯೋಗ ಸೃಷ್ಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಎಂದು ಕರೆ ನೀಡಿದ್ದಾರೆ. ಈ ವೇಳೆ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ತೂರಾಡಿ ಗದ್ದಲವೆಬ್ಬಿಸಿ ಎಂದು ಹೇಳಿದರು.

    ಇದೇ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಖೇದಕರ ಎಂದು ಹೇಳಿದ ಅವರು, ಅಟ್ರಾಸಿಟಿ ಅನ್ನು ನಾಶಮಾಡುವ ಹುನ್ನಾರ ನಡೆಯುತ್ತಿದೆ. ತೀರ್ಪಿನ ಹಿಂದೆ ಕಾಣದ ಶಕ್ತಿಗಳ ಕೈವಾಡ ಇರಬಹುದು ಎಂದು ಆರೋಪಿಸಿದರು.

    ಗುಜರಾತನ್ನು ಮಾದರಿ ರಾಜ್ಯ ಎಂದು ಹೇಳುತ್ತಾರೆ. ಆದರೆ ಅಲ್ಲಿನ ದಲಿತರ, ಆದಿವಾಸಿಗಳ, ಕಾರ್ಮಿಕರ, ರೈತರ ಪರಿಸ್ಥಿತಿ ಕಷ್ಟಕಾರವಾಗಿದೆ. ಸುಪ್ರೀಂಕೋರ್ಟ್ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ಹೇಳಿಕೆ ನೀಡಿಲ್ಲ. ನ್ಯಾಯಮೂರ್ತಿ ಲೋಯಾ ಅವರ ಹತ್ಯೆಯ ಬಗ್ಗೆ ಯಾರೂ ಮಾತಾಡಿಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಫ್ಯಾಸಿಸ್ಟ್ ಶಕ್ತಿ ಬಿಜೆಪಿಯನ್ನ ಸೋಲಿಸ ಬೇಕಿದೆ. ಅಲ್ಲದೇ ದೇಶದಲ್ಲಿ ಇವಿಎಂ ಗೊಂದಲವಿದೆ. ನನ್ನ ಆಯ್ಕೆ ಬ್ಯಾಲೆಟ್ ಪೇಪರ್ ಎಂದು ಹೇಳಿದರು.

    ತಮ್ಮ ಭಾಷಣದ ಉದಕ್ಕೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೇವಾನಿ, ಈ ದೇಶದ ಯುವಕರನ್ನ ಮೋದಿ ಸರ್ಕಾರ ನಿರುದ್ಯೋಗಿಗಳನ್ನಾಗಿ ಮಾಡಿದೆ. ಕರ್ನಾಟಕದ ಯುವಕರಿಗೆ ಕಿವಿಮಾತು ಹೇಳುತ್ತೇನೆ. ಮೋದಿಯವರು ಚುನಾವಣೆಗೆ ಬಂದಾಗ ಕೇಳಬೇಕು ನಿಮ್ಮ ಎರಡು ಕೋಟಿ ಉದ್ಯೋಗ ಎಲ್ಲಿದೆ. ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಇದ್ದರೆ ಹಿಮಾಲಯದ ರಾಮಮಂದಿರದಲ್ಲಿ ಗಂಟೆ ಬಾರಿಸಲು ಹೋಗಲು ಹೇಳಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸ ಬೇಕಿದ ಎಂದು ಕರೆ ನೀಡಿದರು.

  • ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಬೆಂಗಳೂರು: ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೊನೆಗೂ ಸಿದ್ದರಾಮುಯ್ಯ ನೇತೃತ್ವದ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದೇ ವೇಳೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ರೆ ಹೆಚ್ಚು ಸೌಲಭ್ಯ ಸಿಗುತ್ತೆ ಎನ್ನವು ಚರ್ಚೆ ನಡೆಯುತ್ತದೆ. ಆದರೆ ಪ್ರತ್ಯೇಕ ಧರ್ಮ ಸ್ಥಾನ ಜೊತೆಗೆ ಯಾವ ಸೌಲಭ್ಯಗಳಿ ಸಿಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

    ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಸ್ಥಾನಮಾನ ವಿಚಾರದಲ್ಲಿ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ಒಂದು ವೇಳೆ ಕೇಂದ್ರ ರಾಜ್ಯ ಸರ್ಕಾರದ ಶಿಫಾರಸಿಗೆ ಒಪ್ಪಿಗೆ ನೀಡಿದರು ಅಲ್ಪ ಸಂಖ್ಯಾತರಿಗೆ ಸಿಗುವ ವಿಶೇಷ ಸೌಲಭ್ಯಗಳು ಲಿಂಗಾಯತ, ವೀರಶೈವರಿಗೆ ಸಿಗುವುದಿಲ್ಲ. ಉದ್ಯೋಗದಲ್ಲೂ ಯಾವುದೇ ಸೌಲಭ್ಯಗಳು ಸಿಗಲ್ಲ. ಆದರೆ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯ ಸಿಗುತ್ತೆ.

    ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನದಿಂದ ಹಾಲಿ ಇರುವ ಪ್ರವರ್ಗ ಬದಲಾಗುವುದಿಲ್ಲ. ಪ್ರಸ್ತುತ ಇರುವ 3ಬಿ ಅಡಿಯಲ್ಲಿಯೇ ಲಿಂಗಾಯತ, ವೀರಶೈವ ಸಮುದಾಯ ಮುಂದುವರೆಯುತ್ತದೆ. ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕರೇ ಮುಸ್ಲಿಮರಿಗೆ ಹಾಲಿ ಇರುವ ಸೌಲಭ್ಯಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರಸ್ತುತ 4%ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಓದಿ: ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಸಚಿವ ಸಂಪುಟದ ನಿರ್ಣಯಗಳೇನು?
    * ಬಸವ ತತ್ವ ಒಪ್ಪಿ ಬರುವವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ
    * ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಅನ್ವಯ
    * ಪ್ರತ್ಯೇಕ ಧರ್ಮಕ್ಕೆ ಒಳಗಾಗುವವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ
    * ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2ಡಿ ಅಡಿ ಶಿಫಾರಸು
    * ಕೇಂದ್ರದ ಅಲ್ಪಸಂಖ್ಯಾತ ಆಯೋಗದ 2 (ಸಿ) ಕಾಯ್ದೆ ಅನ್ವಯ

    ಅಲ್ಪಸಂಖ್ಯಾತರ ಸ್ಥಾನಮಾನ ಯಾರಿಗೆ?
    * ರಾಜ್ಯ ಸರ್ಕಾರವೇನೋ ಶಿಫಾರಸು ಮಾಡಿದೆ ಆದ್ರೆ ಕೇಂದ್ರ ಸಂಪುಟ ಒಪ್ಪಿಗೆ ನೀಡಬೇಕು
    * ಅಲ್ಪಸಂಖ್ಯಾತರ ಸ್ಥಾನಮಾನ ಬೇಕಾದರೆ ವೀರಶೈವರು ಕೂಡ ಬಸವ ತತ್ವ ಪಾಲನೆ ಮಾಡಬೇಕು
    * ವೀರಶೈವರು ತಮ್ಮದೇ ಆದ ತತ್ವ ಸಿದ್ಧಾಂತ ಹೊಂದಿರುವುದರಿಂದ ಬಸವ ತತ್ವ ಅನುಕರಣೆ ಅಸಾಧ್ಯ
    * ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದ್ರೆ, ಲಿಂಗಾಯತರು ಮತ್ತು ವೀರಶೈವರು ಹಿಂದುಗಳಲ್ಲ! ಇದನ್ನು ಓದಿ: ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

  • ಮೋದಿ ಉದ್ಯೋಗ ಸೃಷ್ಟಿ ನೀತಿಯನ್ನು ಟೀಕಿಸಿದವರಿಗೆ ಬಜೆಟ್‍ನಲ್ಲಿ ಜೇಟ್ಲಿ ಉತ್ತರಿಸಿದ್ದು ಹೀಗೆ

    ಮೋದಿ ಉದ್ಯೋಗ ಸೃಷ್ಟಿ ನೀತಿಯನ್ನು ಟೀಕಿಸಿದವರಿಗೆ ಬಜೆಟ್‍ನಲ್ಲಿ ಜೇಟ್ಲಿ ಉತ್ತರಿಸಿದ್ದು ಹೀಗೆ

    ನವದೆಹಲಿ: ಈ ಹಣಕಾಸು ವರ್ಷದಲ್ಲಿ 70 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಉದ್ಯಮಶೀಲರಿಗೆ ಹಣಕಾಸು ನೆರವು ನೀಡಲು ಆರಂಭಿಸಿರುವ ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ. ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಂಎಸ್‍ಎಂಇ) ಗಳಿಗೆ ಪ್ರೋತ್ಸಾಹ ನೀಡಲು 3794 ಕೋಟಿ ರೂಗಳ ಅನುದಾನ ಬಜೆಟ್ ನಲ್ಲಿ ಸಿಕ್ಕಿದೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ಪಕೋಡಾ ಮಾಡಿ ಮಾರುವುದು ಕೂಡ ಒಂದು ಉದ್ಯೋಗವೇ ಎಂದು ಹೇಳಿದ್ದರು.

    ಪ್ರಧಾನಿಯವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಎಂಎಸ್‍ಸಿ, ಎಂಎ ಹಾಗೂ ಎಂಜಿನೀಯರಿಂಗ್ ವಿದ್ಯಾರ್ಥಿಗಳು ನಗರದ ಬಿಜೆಪಿ ಕಚೇರಿಯೆದುರು ಪಕೋಡ ಮಾಡಿ ಅದನ್ನು 10 ರೂ.ಗೆ ಮಾರುವುದರ ಮೂಲಕ ಪ್ರತಿಭಟನೆ ನಡೆಸಿದ್ದರು.

    ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡ ಮಾರುವಂತೆ ಹೇಳಿದ್ದರು. ಆದರೆ ಪಕೋಡಾ ಮಾರುವ ಉದ್ಯೋಗ ಸೃಷ್ಟಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟದ ಉದಾಹರಣೆ ನೀಡಿದ್ದರು.

    ಆ ಬಳಿಕ ಆಮ್ ಆದ್ಮಿ ಪಾರ್ಟಿ ವತಿಯಿಂದಲೂ ಕೆಲಸ ಸಿಕ್ಕಿಲ್ವಾ..? ಬಜ್ಜಿ ವಡಾ ಪಕೋಡಾ ಮಾರು 200 ರೂ. ಸಂಪಾದಿಸು, ಅದೇ ನಿನ್ನ ಉದ್ಯೋಗ ಅಂತ ಬೋರ್ಡ್ ಹಾಕೋ ಮೂಲಕ ಮೋದಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನು ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

    https://www.youtube.com/watch?v=LqnbGiE0F3Q

  • ಮಹಾರಾಷ್ಟ್ರ ಸರ್ಕಾರಿ ಉದ್ಯೋಗದಲ್ಲಿ ಅನಾಥರಿಗೆ 1% ಮೀಸಲಾತಿ

    ಮಹಾರಾಷ್ಟ್ರ ಸರ್ಕಾರಿ ಉದ್ಯೋಗದಲ್ಲಿ ಅನಾಥರಿಗೆ 1% ಮೀಸಲಾತಿ

    ಮುಂಬೈ: ಅನಾಥ ಮಕ್ಕಳಿಗಾಗಿ ಸಾಮಾನ್ಯ ವರ್ಗದ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ 1% ಮೀಸಲಾತಿಯನ್ನು ನೀಡಲು ಮಹಾರಾಷ್ಟ್ರ ಕ್ಯಾಬಿನೆಟ್ ನಿರ್ಧರಿಸಿದೆ.

    ಅನಾಥ ಮಕ್ಕಳು ತಮ್ಮ ಜಾತಿಯನ್ನು ತಿಳಿಯದ ಕಾರಣ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಅವರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಈ ನಿರ್ಧಾರವು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೇ ಸಾಮಾನ್ಯ ವರ್ಗದಲ್ಲಿ 1%ರಷ್ಟು ಮೀಸಲಾತಿಯ ಸಹಾಯದಿಂದ ಅವರು ಉದ್ಯೋಗಗಳನ್ನು ಪಡೆಯಬಹುದು ಹಾಗೂ ಇತರ ಸೌಲಭ್ಯಗಳನ್ನು ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಂಕಜಾ ಮುಂಡೆ, ಅನಾಥ ಮಕ್ಕಳು ಅನಾಥಾಶ್ರಮದಿಂದ ಹೊರ ಹೋದಾಗ ಅವರು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಕ್ರಮ ಸಹಾಯವಾಗುತ್ತದೆ. ಅನಾಥ ಮಕ್ಕಳ ಜಾತಿ ತಿಳಿದಿಲ್ಲವಾದ್ದರಿಂದ ಅವರನ್ನು ಒಂದು ನಿರ್ದಿಷ್ಟ ವರ್ಗದಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ರಿಯಾಯಿತಿಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

    ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ಮಹಾರಾಷ್ಟ್ರ ರಾಜ್ಯ ಹೊಸ ನೀತಿಗೆ ಸಹಿ ಹಾಕಿದ್ದು, ಸುಮಾರು 5,000 ಕೋಟಿ ರೂ. ಬಂಡವಾಳವನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

    ಈ ನೂತನ ಯೋಜನೆಗೆ ಐದು ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಬರಗಾಲದ ಪೀಡಿತ ಮರಾಠವಾಡ ಪ್ರದೇಶದಲ್ಲಿ ನೀರಿನ ಗ್ರಿಡ್‍ಗಳನ್ನು ಸ್ಥಾಪಿಸಲು ಇಸ್ರೇಲ್‍ನ ರಾಷ್ಟ್ರೀಯ ಜಲ ಕಂಪೆನಿಯಾದ ಮೆಕೊರೊಟ್‍ನೊಂದಿಗಿನ ಒಕ್ಕೂಟವನ್ನು ಕ್ಯಾಬಿನೆಟ್ ಅನುಮೋದಿಸಿದೆ.

  • ಎಂಜಿನಿಯರಿಂಗ್ ಓದುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್: ಜಾಬ್‍ಗೆ ಚಿಂತೆ ಮಾಡಬೇಡಿ

    ಎಂಜಿನಿಯರಿಂಗ್ ಓದುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್: ಜಾಬ್‍ಗೆ ಚಿಂತೆ ಮಾಡಬೇಡಿ

    ನವದೆಹಲಿ: ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ/ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. 2018ರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಯುವ ಜನತೆಗೆ ಉದ್ಯೋಗವಕಾಶ ರೂಪಿಸುವ ದೃಷ್ಟಿಯಲ್ಲಿ 2017ನೇ ವರ್ಷವು ನಿರಾಸೆ ಮೂಡಿಸಿದ್ದರೂ, 2018 ರಲ್ಲಿ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳು ಲಭ್ಯವಾಗಲಿದೆ. ಹಾಗೆಯೇ ಐಟಿ ಕ್ಷೇತ್ರಕ್ಕೆ ಕಾಲಿಡುವ ಹೊಸ ಉದ್ಯೋಗಿಗಳ ಸಂಖ್ಯೆಯು ಶೇ. 20 ರಷ್ಟು ಹೆಚ್ಚಳವಾಗಲಿದೆ ಎಂದು ಟೀಮ್‍ಲೀಸ್ ಸರ್ವಿಸ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಕೆಯಲ್ಲಿ ಉಂಟಾಗಿರುವ ಹೆಚ್ಚಳವೇ ಕಾರಣವಾಗಿದೆ. ಅಲ್ಲದೇ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದು ಮುಂದುವರೆಯಬೇಕಾದರೆ ಹೊಸ ಕೌಶಲ್ಯಗಳನ್ನು ಕಲಿಯುವುದು ಕಡ್ಡಾಯ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್! 

    ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾದರೆ, ಆಟೋಮೆಷನ್ ಬಳಕೆಯಿಂದಾಗಿ ಮೊಬೈಲ್ ತಯಾರಿಕಾ ಕ್ಷೇತ್ರ, ಸ್ಪಾರ್ಟ್ ಆಪ್, ಫಿನೆಟೆಕ್ ಸ್ಪಾರ್ಟ್ ಆಪ್ (ಫಿನ್‍ಟೆಕ್) ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಕಡಿತಗೊಳ್ಳುವ ಸಾಧ್ಯತೆಗಳಿವೆ. ಆರ್ಥಿಕ ಕ್ಷೇತ್ರ, ಡಿಜಿಟಲ್ ವ್ಯವಹಾರ, ಡಿಜಿಟಲ್ ಸೇವೆಗಳಲ್ಲಿ ಉಂಟಾಗಿರುವ ಹೊಸ ಆರ್ಥಿಕ ಹೂಡಿಕೆಗಳು ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಟೀಮ್‍ಲೀಸ್ ಸರ್ವಿಸ್ ಕಂಪೆನಿಯ ಜನರಲ್ ಮ್ಯಾನೇಜರ್ ಆಲ್ಕಾ ಧಿಂಗ್ರಾ ಹೇಳಿದ್ದಾರೆ. ಇದನ್ನೂ ಓದಿ:  ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಭಾರತದ ಐಟಿ ಕ್ಷೇತ್ರವೊಂದರಲ್ಲೇ ಸುಮಾರು 1.8 ರಿಂದ 2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ಡಿಜಿಟಲ್ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ನವ ತಂತ್ರಜ್ಞಾನದ ಪ್ರಾವೀಣ್ಯತೆಯುಳ್ಳ ಶೇ.50 ಮಂದಿ ಹೆಚ್ಚುವರಿಯಾಗಿ ಅಗತ್ಯವಿದ್ದು, 2020ರ ವೇಳೆಗೆ ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಕ್ಷೇತ್ರ ಒಂದರಲ್ಲೇ ವಿಶ್ವದಲ್ಲಿ 23 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ಇದನ್ನೂ ಓದಿ: ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ