Tag: Employment Guarantee Scheme

  • ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ – ನಾಲ್ವರು ಪಿಡಿಒಗಳ ಅಮಾನತು

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ – ನಾಲ್ವರು ಪಿಡಿಒಗಳ ಅಮಾನತು

    ರಾಯಚೂರು: ಜಿಲ್ಲೆಯ ದೇವದುರ್ಗದ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ 100 ಕೋಟಿ ರೂ.ಗೂ ಅಧಿಕ ಹಗರಣದ ಹಿನ್ನೆಲೆ ಈಗ 4 ಜನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (PDO) ಅಮಾನತು ಮಾಡಲಾಗಿದೆ.

    ಮುಷ್ಟುರು ಪಿಡಿಒ ಪತ್ಯಪ್ಪ ರಾಥೋಡ್, ಕ್ಯಾದಗೇರಾ ಪಿಡಿಒ ಸಿಬಿ ಪಾಟೀಲ್, ಗಾಣದಾಳ ಪಿಡಿಒ ಮಲ್ಲಪ್ಪ, ಶಾವಂತಗೇರಾ ಪಿಡಿಒ ಗುರುಸ್ವಾಮಿ ಅಮಾನತಾಗಿದ್ದಾರೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೇ ರಾಹುಲ್ ತುಕಾರಾಂ ಅಮಾನತು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ

    ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ಭ್ರಷ್ಟಾಚಾರ ಎಸಗಿರುವುದು ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ತನಿಖೆಯಲ್ಲಿ ಬಯಲಾಗಿದೆ.

    2020-21 ರಿಂದ 2022-23 ರವರೆಗೆ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರ ಬಯಲಾಗಿದ್ದು, ಉಳಿದ ಪಂಚಾಯತಿ ಪಿಡಿಒಗಳು ಹಾಗೂ ಅಕ್ರಮದಲ್ಲಿ ಭಾಗಿಯಾದ ಇನ್ನುಳಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂದು ನನ್ನ ಕಣ್ಣು ತೆರೆಯಿತು: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಹಾಡಿ ಹೊಗಳಿದ ಹೆಚ್‌ಡಿಕೆ

  • ಉದ್ಯೋಗ ಖಾತ್ರಿ ಕೂಲಿಯನ್ನು ಶಾಲೆ, ಅಂಗನವಾಡಿಗಳ ಉದ್ಯಾನ ಅಭಿವೃದ್ಧಿಗೆ ನೀಡಿದ ಯುವಕರು

    ಉದ್ಯೋಗ ಖಾತ್ರಿ ಕೂಲಿಯನ್ನು ಶಾಲೆ, ಅಂಗನವಾಡಿಗಳ ಉದ್ಯಾನ ಅಭಿವೃದ್ಧಿಗೆ ನೀಡಿದ ಯುವಕರು

    – ಕೆಲಸ ಮಾಡಿದ ಕೂಲಿಯನ್ನೂ ಉದ್ಯಾನ ಅಭಿವೃದ್ಧಿಗೆ ವಿನಿಯೋಗ

    ಮಡಿಕೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಂದ ಕೆಲಸಗಳನ್ನು ಮಾಡಿಸುವುದಕ್ಕಿಂತ ಯಂತ್ರೋಪಕರಣಗಳ ಬಳಸಿ ಕಾಮಗಾರಿ ಮಾಡಿಸುವವರೇ ಹೆಚ್ಚು. ಆದರೆ ಇಲ್ಲೊಂದು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನು ಬಳಸಿ ಶಾಲೆ, ಅಂಗನವಾಡಿಗಳ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗಿದೆ. ಈ ಶಾಲೆಗಳು ಇದೀಗ ಖಾಸಗಿ ಶಾಲೆಗಳಿಗಿಂತಲೂ ಅಚ್ಚುಕಟ್ಟಾಗಿವೆ.

    ಕೊರೊನಾ ಲಾಕ್‍ಡೌನ್‍ನಿಂದ ಜನರು ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಜನರಿಗೆ ತಮ್ಮ ಊರುಗಳಲ್ಲೇ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಕೆಲಸ ನೀಡಲಾಗಿತ್ತು.

    ಮೇಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶುಭಾಷ್ ನಗರದ ಅಂಗನವಾಡಿ ಮತ್ತು ಹಾಕತ್ತೂರಿನ ಪ್ರೌಢಶಾಲೆ ಮೂರನ್ನು ತಲಾ 3 ಲಕ್ಷ ರೂ.ಗಳ ಅನುದಾನ ಬಳಸಿ ಉದ್ಯಾನವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಗೊಳಿಸಲಾಗಿದೆ. ಉದ್ಯಾನವಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಹಲವು ಬಗೆಯ ಹೂಗಿಡಗಳು, ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಉದ್ಯಾನವನದ ದಾರಿಗಳಿಗೆ ಇಂಟರ್‍ಲಾಕ್ ಗಳನ್ನು ಅಳವಿಡಿಸಿ ಸ್ವಚ್ಛವಾಗಿರುವಂತೆ ಮಾಡಲಾಗಿದೆ. ಉದ್ಯಾನವನಕ್ಕೆ ಸ್ಪಿಂಕ್ಲರ್ ಗಳನ್ನು ಸಹ ಅಳವಡಿಸಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿಯಲ್ಲಿಯೂ ಉದ್ಯಾನದ ಜೊತೆಗೆ ಮಕ್ಕಳ ಆಟದ ಸಾಮಾಗ್ರಿಗಳನ್ನು ಅಳವಡಿಸಿ ಮಕ್ಕಳನ್ನು ಸೆಳೆಯುವಂತೆ ಮಾಡಲಾಗಿದೆ.

    ಮತ್ತೊಂದು ವಿಶೇಷವೆಂದರೆ ಶುಭಾಷ್ ನಗರದಲ್ಲಿ ಸ್ವಾಗತ್ ಯುವಕ ಸಂಘದ ಮೂಲಕ ಅಂಗನವಾಡಿ ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಊರಿನ ಜನರು ತಮ್ಮ ಕೂಲಿಯ ಹಣವನ್ನೂ ಅಂಗನವಾಡಿಯ ಅಭಿವೃದ್ಧಿಗೆ ಬಳಕೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ.

    ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಿ, ಶಾಲೆ ಅಂಗನವಾಡಿಗಳನ್ನೂ ಅಭಿವೃದ್ಧಿಗೊಳಿಸಿದ ಪಂಚಾಯಿತಿ ಅಧಿಕಾರಿಗಳು ಸಹ ಇತರರಿಗೆ ಪ್ರೇರಣೆಯಾಗಿದ್ದಾರೆ.

  • ಲಾಕ್‍ಡೌನ್ ರಿಲೀಫ್ – ರಾಯಚೂರಿನಲ್ಲಿ ಆರಂಭವಾಯ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ

    ಲಾಕ್‍ಡೌನ್ ರಿಲೀಫ್ – ರಾಯಚೂರಿನಲ್ಲಿ ಆರಂಭವಾಯ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ

    ರಾಯಚೂರು: ಕೊರೊನಾ ತಡೆಗಾಗಿ ಲಾಕ್‍ಡೌನ್ ಜಾರಿಮಾಡಿದ ಹಿನ್ನೆಲೆ ಕೂಲಿಕಾರ್ಮಿಕರಿಗೆ ಉದ್ಯೋಗವಿಲ್ಲದೆ ಕುಳಿತಿದ್ದರು. ಆದರೆ ಈಗ ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಕೊರೊನಾ ಭೀತಿಯ ಮಧ್ಯೆಯೂ ರಾಯಚೂರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನ ಆರಂಭಿಸಲಾಗಿದೆ.

    ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಪ್ಪುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಪನಾಳ ಕೆರೆ ಹೂಳೆತ್ತೆವ ಕಾಮಗಾರಿಯನ್ನು ಆರಂಭ ಮಾಡಲಾಗಿದೆ. ಒಟ್ಟು 115 ಜನ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದ್ದು, ಕಾಮಗಾರಿ ಆರಂಭದ ಮುನ್ನ ಕೂಲಿಕಾರ್ಮಿಕರಿಂದ ಜ್ವರ-ಕೆಮ್ಮು-ನೆಗಡಿ ಬಂದವರು ಕೆಲಸಕ್ಕೆ ಬರುವುದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೂಲಿಕಾರ್ಮಿಕರಿಗೆ ಕೆಲಸ ಸಿಕ್ಕಿದ್ದು ಸಮಾಧಾನಕರವಾಗಿದೆ. ಆದರೆ ಕಾಮಗಾರಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದ್ದು, ಜಿಲ್ಲಾ ಪಂಚಾಯ್ತಿಯಿಂದ ಕ್ರಮ ಕೈಗೊಳ್ಳಲಾಗಿದೆ.

    ಜಿಲ್ಲೆ ಗ್ರೀನ್ ಝೋನ್‍ನಲ್ಲಿರುವುದರಿಂದ ಜನರ ಓಡಾಟ ಹೆಚ್ಚಾಗಿದ್ದು, ಬಹಳಷ್ಟು ಅಂಗಡಿಗಳನ್ನ ತೆರೆಯಲಾಗಿದೆ. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಕೃಷಿ ಪರಿಕರ, ಉಪಕರಣಗಳು, ರಸಗೊಬ್ಬರ, ಬೀಜದ ಅಂಗಡಿಗಳನ್ನ ತೆರೆಯಲಾಗಿದೆ. ಕೃಷಿ ಚಟುವಟಿಕೆಗಾಗಿ ಹೊರಬರುವ ರೈತರಿಗೆ ಪಾಸ್‍ಗಳ ವಿನಾಯಿತಿ ನೀಡಲಾಗಿದೆ. ಸ್ಥಳೀಯ ಕೂಲಿ ಕೆಲಸಗಾರರು, ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

  • ಕೆರೆ ಹೂಳೆತ್ತುವ ಕಾಯಕಕ್ಕೆ ಕಾರ್ಮಿಕರ ಜೊತೆ ಕೈ ಜೋಡಿಸಿದ ರೇಣುಕಾಚಾರ್ಯ

    ಕೆರೆ ಹೂಳೆತ್ತುವ ಕಾಯಕಕ್ಕೆ ಕಾರ್ಮಿಕರ ಜೊತೆ ಕೈ ಜೋಡಿಸಿದ ರೇಣುಕಾಚಾರ್ಯ

    ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಯಕಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಲಿ ಕಾರ್ಮಿಕರ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆಯುತಿತ್ತು. ಈ ವೇಳೆ ಸ್ವತಃ ತಾವೇ ಮುಂದೆ ಬಂದು ಹಾರೆ ಕೋಲು ಹಿಡಿದು ಮಣ್ಣನ್ನು ತೆಗೆದು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.

    ಅಷ್ಟೇ ಅಲ್ಲದೆ ಯೋಗ ಮಾಡುವುದಕ್ಕಿಂತ 10 ನಿಮಿಷ ಕೂಲಿ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಕೆಲಸ ಮಾಡುತ್ತ ತಮ್ಮ ಜೊತೆಗಿದ್ದವರಿಗೆ ಹೇಳಿದರು. ಸುಮಾರು ಒಂದು ಗಂಟೆಗಳ ಕಾಲ ಇತರೆ ಕೂಲಿ ಕಾರ್ಮಿಕರಂತೆ ಒಂದು ಕಡೆ ಹಾರೆಕೋಲಿನಿಂದ ಮಣ್ಣು ಬಗೆದು, ಇನ್ನೊಂದು ಕಡೆ ಚಲಕಿಯಿಂದ ಮಣ್ಣು ತೆಗೆದು ಹೂಳೆತ್ತೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.