Tag: Employees

  • ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಬೆಂಗಳೂರು: ಇಂದು ನಗರದಲ್ಲಿ ಬಿಎಂಟಿಸಿ ಬಸ್ ಇರುತ್ತಾ ಇಲ್ವಾ, ಸಾರಿಗೆ ನೌಕರರ ಬೆಂಗಳೂರು ಚಲೋ ರ‍್ಯಾಲಿಯಿಂದಾಗಿ ಹೀಗೊಂದು ಪ್ರಶ್ನೆ ಮೂಡಿದೆ. ಸಾರಿಗೆ ಸಚಿವರ ವಿರುದ್ಧ ಸಮರ ಸಾರಿರರುವ ನೌಕರರು ಇಂದು ಬೀದಿಗಿಳಿಯಲಿದ್ದಾರೆ.

    ಇಂದು ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ. ಏಕೆಂದರೆ ಇಂದು ನಾಲ್ಕು ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರು ಚಲೋ ನಡೆಸಲಿದ್ದು ಬೀದಿಗಿಳಿಯಲಿದ್ದಾರೆ. ಸಾರಿಗೆ ಕಾರ್ಮಿಕ ಸಂಘಟನೆ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್ ಈ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದು, ಸಾರಿಗೆ ಸಚಿವರ ವಿರುದ್ಧ ಈ ವಾರ್ ಎಂದಿದ್ದಾರೆ. ಹಾಗಿದ್ರೆ ಈ ರ‍್ಯಾಲಿಗೆ ಏನ್ ಕಾರಣ, ಎಷ್ಟು ಜನ ನೌಕರರು ಭಾಗಿಯಾಗಲಿದ್ದಾರೆ ಜನ್ರಿಗೇನು ಸಮಸ್ಯೆಯಾಗಲಿದೆ ಎನ್ನವುದು ನೋಡೋದಾದರೆ.

    ಸಾರಿಗೆ ಸಚಿವರ ವಿರುದ್ಧ ನೌಕರರ ಕೋಪ ಯಾಕೆ;
    1. ಸಾರಿಗೆ ನಿಗಮ ನಷ್ಟದ ಹಾದಿಯಲ್ಲಿದೆ. ಇದು ಉದ್ದೇಶಪೂರ್ವಕ, ಸಾರಿಗೆ ನಿಗಮವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲಿದ್ದಾರೆ.
    2. ಸಾರಿಗೆ ನೌಕರರಿಗೆ ಡಿಸಿ ತಮ್ಮಣ್ಣ ಬಂದ ಬಳಿಕ ಸರಿಯಾದ ವೇತನ ಸಿಗುತ್ತಿಲ್ಲ, ಪಿಎಫ್ ದುಡ್ಡು, ಇನ್ಸೂರೆನ್ಸ್ ಹಣ ಪಾವತಿ ಮಾಡುತ್ತಿಲ್ಲ. ನೌಕರರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಿಗದಿತ ಸಂದರ್ಭದಲ್ಲಿ ವೇತನ ಪಾವತಿಸಬೇಕು ಎನ್ನುವುದು ಬೇಡಿಕೆ.
    3. ಡಿಸಿ ತಮ್ಮಣ್ಣ ಎಂದ್ರೆ ‘ಡೈರೆಕ್ಟ್ ಕಲೆಕ್ಷನ್’ ಅಂತಾ. ಸಿಎಂ ಸಂಬಂಧಿಯಾಗಿರೋದ್ರಿಂದ ಅವರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ನಿಗಮದ ಕಾರ್ಮಿಕ ಸಂಘಟನೆಗಳ ಆರೋಪ
    4. ಸಾರಿಗೆ ನಿಗಮ ಕೋಟಿ ಕೋಟಿ ಲೆಕ್ಕದಲ್ಲಿ ನಷ್ಟದಲ್ಲಿದೆ. ಬೇಕಾಬಿಟ್ಟಿ ಸಾಲವನ್ನು ಕೂಡ ಮಾಡಲಾಗಿದೆ.
    5. ವಿದ್ಯಾರ್ಥಿಗಳ ಪಾಸ್ ದುಡ್ಡನ್ನು ಸರ್ಕಾರ ನಿಗಮಕ್ಕೆ ನೀಡಿಲ್ಲ ಬಾಕಿ ಇಟ್ಟುಕೊಂಡಿದೆ.

    ರ‍್ಯಾಲಿ ಹೇಗಿರಲಿದೆ?
    * ಶುಕ್ರವಾರ 11 ಗಂಟೆಗೆ, ಲಾಲ್‍ಬಾಗ್‍ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ‍್ಯಾಲಿ ನಡೆಯಲಿದೆ.
    * ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
    * ಕರ್ತವ್ಯಕ್ಕೆ ಹಾಜರಾಗದೇ ರ‍್ಯಾಲಿಯಲ್ಲಿ ಪಾಲ್ಗೊಳ್ಳೋದ್ರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು.
    * ಆದರೆ ನಾಳೆಯ ರ‍್ಯಾಲಿಗೆ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಭಾಗವಹಿಸುವಂತೆ ಸೂಚಿಸಿಲ್ಲ. ಆದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಜನರಿಗೆ ತೊಂದರೆಯಾಗಲಿದೆ.
    * ಮೂರು ಸಾವಿರ ಜನ ಸೇರೋದ್ರಿಂದ ಶಾಂತಿನಗರ, ಲಾಲ್ ಬಾಗ್ ರಸ್ತೆ, ಜಯನಗರ ಅಸುಪಾಸು ಟ್ರಾಫಿಕ್ ಬಿಸಿ ತಟ್ಟಬಹುದು.

  • ಗ್ಲಾಸ್ ಸ್ವಚ್ಛಗೊಳಿಸ್ತಿದ್ದಾಗ 10ನೇ ಮಹಡಿಯಿಂದ ಬಿದ್ದು ಕಾರ್ಮಿಕರಿಬ್ಬರು ಸಾವು

    ಗ್ಲಾಸ್ ಸ್ವಚ್ಛಗೊಳಿಸ್ತಿದ್ದಾಗ 10ನೇ ಮಹಡಿಯಿಂದ ಬಿದ್ದು ಕಾರ್ಮಿಕರಿಬ್ಬರು ಸಾವು

    ನವದೆಹಲಿ: ವಿಡಿಯೋಕಾನ್ ಬೃಹತ್ ಕಟ್ಟಡದ 10ನೇ ಅಂತಸ್ತಿನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಕೆಳಗೆ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ರಾಜು ಶರ್ಮಾ(22) ಮತ್ತು ಅಶ್ತಿಯಾಕ್ ಖಾನ್(23) ಮೃತ ದುರ್ದೈವಿಗಳು. ಇಬ್ಬರು ಕಾರ್ಮಿಕರು ಕೇಂದ್ರ ದೆಹಲಿಯ ಭಾಗದಲ್ಲಿರುವ ವಿಡಿಯೋಕಾನ್ ಟವರ್‍ನ 10ನೇ ಅಂತಸ್ತಿನಲ್ಲಿ ಗ್ಲಾಸ್ ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಅವರು ಕುಳಿತಿದ್ದ ಸ್ಟ್ಯಾಂಡ್‍ನ ಹಗ್ಗ ತುಂಡಾಗಿದೆ. ಪರಿಣಾಮ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಈ ಇಬ್ಬರು ಕಟ್ಟಡದ ಹೊರಭಾಗದಲ್ಲಿ ಗ್ಲಾಸ್‍ಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕೆಲಸ ಮಾಡುತ್ತಿದ್ದಾಗ ಹೆಲ್ಮೆಟ್ ಹಾಗೂ ಭದ್ರತೆಯ ಬೆಲ್ಟ್ ಗಳನ್ನು ಧರಿಸಿರಲಿಲ್ಲ. ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಯಾವುದೇ ರೀತಿಯ ಭದ್ರತಾ ಸಾಮಾಗ್ರಿಗಳು ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಿದ್ದ ತಕ್ಷಣ ಅಶ್ತಿಯಾಕ್ ಹಾಗೂ ರಾಜು ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೇಲಿಂದ ಬಿದ್ದ ರಭಸಕ್ಕೆ ಇಬ್ಬರ ದೇಹದ ಮೂಳೆಗಳು ಮುರಿದಿದ್ದು, ಗಂಭೀರ ಗಾಯಗಳಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಕಟ್ಟಡದ ಸ್ವಚ್ಛತೆಯ ಹೊಣೆಯನ್ನು ಎಂಎಸ್ ಎಂಟರ್ ಪ್ರೈಸಸ್ ಕಂಪನಿಗೆ ವಹಿಸಲಾಗಿತ್ತು. ಸಾವನ್ನಪ್ಪಿದ ಯುವಕರು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದು, ಎಂಎಸ್ ಎಂಟರ್ ಪ್ರೈಸಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾವಿನ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

  • ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಗರಹಾವು ಪ್ರತ್ಯಕ್ಷ

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಗರಹಾವು ಪ್ರತ್ಯಕ್ಷ

    ಚಿಕ್ಕಬಳ್ಳಾಪುರ: ನಗರ ಹೊರವಲಯದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.

    ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಕೆಳ ಮಹಡಿಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗರಹಾವನ್ನು ನೋಡಿದ ಸಿಬ್ಬಂದಿ ಕೂಡಲೇ ಸಿಬ್ಬಂದಿ ಉರಗ ರಕ್ಷಕ ಪ್ರಥ್ವಿರಾಜ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು.

    ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ಪ್ರಥ್ವಿರಾಜ್ ನಾಗರಹಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಹಾವನ್ನು ಕಾಡಿಗೆ ಬಿಡುವ ಕಾಯಕ ಮಾಡಿದ್ದಾರೆ. ನಾಗರಹಾವನ್ನು ಸೆರೆಹಿಡಿಯುವ ದೃಶ್ಯವನ್ನು ಅಲ್ಲಿದ್ದ ಸಿಬ್ಬಂದಿ ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಇಷ್ಟು ದಿನ ಕೋತಿ ಕಾಟ, ಹೆಜ್ಜೇನು ಹುಳುಗಳ ಕಾಟದಿಂದ ಬೇಸತ್ತ ಸಿಬ್ಬಂದಿಗೆ ಈಗ ಹಾವುಗಳ ಭಯ ಶುರುವಾಗಿದೆ.

  • ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಕಂಟ್ರೋಲ್ ರೂಂ ಮೇಲ್ವಿಚಾರಕನ ದರ್ಬಾರ್ ಶುರುವಾಗಿದ್ದು, ಇವರಿಗೆ ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಬೆಂಗಳೂರು ಮಹಾನಗರ ಪಾಲಿಕೆಯ ಕ್ಲಾಸ್ 4 ನೌಕರ ಸುಬ್ರಮಣ್ಯ ಅಂಧ ದರ್ಬಾರ್ ಮಾಡುತ್ತಿದ್ದು, ಇವರು ಬಿಬಿಎಂಪಿಯ ಕೊಠಡಿಯ ಕಂಟ್ರೋಲ್ ರೂಮಿನ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಮರ ಕಡಿಯುವರು, ಪಾಲಿಕೆ ಕೆಳ ವರ್ಗದ ನೌಕರರನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಕ ಗಾಳಿ ಬೀಸಿಕೊಳ್ಳುತ್ತಿರೋ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 3- 4 ವರ್ಷಗಳಿಂದ ಕಂಟ್ರೋಲ್ ರೂಂ ಜೊತೆ ಎಲ್ಲ ಕಂಟ್ರೋಲ್ ಇರುವ ನೌಕರನಾಗಿದ್ದು, ಮಾತು ಶುರು ಮಾಡಿದರೆ ಸಾಕು ಕಮೀಷನರ್, ಮಿನಿಸ್ಟರ್ ಹೆಸರು ಹೇಳುತ್ತಾರೆ. ಇವರ ಅಡಿಯಲ್ಲಿ ಬರುವ ಕೆಳ ವರ್ಗದ ನೌಕರರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಕ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಅವರ ಪಕ್ಕದ ಎರಡನೇ ಚೇರ್ ಮೇಲೆ ಕೆಳ ನೌಕರ ಕುಳಿತುಕೊಂಡು ಅವರಿಗೆ ಗಾಳಿ ಬೀಸುತ್ತಿದ್ದಾರೆ. ಸರ್ಕಾರಿ ಸಂಬಳ ಕೊಡುವುದು ಕಚೇರಿಯ ಕೆಲಸವನ್ನು ಮಾಡುವುದಕ್ಕೆ, ಆದರೆ ಮೇಲ್ವಿಚಾರಕ ತನಗೆ ಗಾಳಿ ಬೀಸಿಕೊಳ್ಳುವ ಮೂಲಕ ಗಾಳಿ ಬೀಸುವುದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಮೇಲ್ವಿಚಾರಕನು ಪಾಲಿಕೆ ವರ್ಗಾವಣೆ, ನೇಮಕಾತಿ, ವ್ಯಜ್ಯಗಳನ್ನ ಬರೀ ಅವಾಜ್ ಹಾಕುತ್ತಲೇ ಬಗೆಹರಿಸುವ ಮಾಸ್ಟರ್ ಎಂಬ ಮಾತು ಕೂಡ ಇದೆ. ಆದರೆ ಇವರು ಕೆಳವರ್ಗದ ಜನರಿಂದ ಗಾಳಿ ಬೀಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ಸಿಗುವ ಸಾಧ್ಯತೆಯಿದೆ. ರಜೆ ಸಿಕ್ಕಿದರೂ 8 ಜಯಂತಿಗೆ ಸಿಗುತ್ತಿದ್ದ ಸಾಂದರ್ಭಿಕ ರಜೆ ರದ್ದಾಗುವ ಸಾಧ್ಯತೆಯಿದೆ.

    ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂರ್ದಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು. ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲ ಶಿಫಾರಸು ಮಾಡಿದೆ.

    ಶಿಫಾರಸಿನಲ್ಲಿ ಏನಿದೆ?
    ಸರ್ಕಾರಿ ನೌಕರರಿಗೆ ಈಗ ಇರುವಂತಹ 15 ಸಾಂದರ್ಭಿಕ ರಜೆಗಳ ಪೈಕಿ ಮೂರು ಕಡಿಮೆ ಮಾಡಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್‍ಗಳಿಗೆ ಕಡಿತ ಮಾಡುವುದು, ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.

    ಸದ್ಯದ ಮಾಹಿತಿಗಳ ಪ್ರಕಾರ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ಮಿಕ ದಿನ, ಗುಡ್‍ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿದೆ.

    ಬದಲಾವಣೆ ಯಾಕೆ?
    ಸರ್ಕಾರಿ ನೌಕರರು 100 ಕ್ಕೂ ಹೆಚ್ಚು ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜಾ ದಿನಗಳು ಬರುತ್ತದೆ. 15 ಸಾಂದರ್ಭಿಕ ರಜೆಗಳಿದ್ದು, ರಜಾ ದಿನಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ರಜೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಂತ್ಯಕ್ರಿಯೆಯಲ್ಲಿ ಗೊತ್ತಾಯ್ತು ರಿಮ್ಸ್ ಎಡವಟ್ಟು – ಆಸ್ಪತ್ರೆಯಲ್ಲಿ `ಪದ್ಮ’ ತಾಯಂದಿರ ಗಲಾಟೆ!

    ಅಂತ್ಯಕ್ರಿಯೆಯಲ್ಲಿ ಗೊತ್ತಾಯ್ತು ರಿಮ್ಸ್ ಎಡವಟ್ಟು – ಆಸ್ಪತ್ರೆಯಲ್ಲಿ `ಪದ್ಮ’ ತಾಯಂದಿರ ಗಲಾಟೆ!

    ರಾಯಚೂರು: ತಾಯಿ ಹೆಸರು ಒಂದೇ ಆಗಿದ್ದರಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಮಕ್ಕಳನ್ನು ಬದಲಿಸಿ ಎಡವಟ್ಟು ಮಾಡಿದ್ದಾರೆ.

    ಪದ್ಮ ಜಯಪ್ಪ ಜನವರಿ 28ರಂದು ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತೂಕ ಕಡಿಮೆ ಇದ್ದ ಕಾರಣ ಅವರು ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಪದ್ಮ ಮೋಹನ್ ಎಂಬವರು ಕೂಡ ಇಂದು ನಸುಕಿನ ಜಾವ 1.00 ಗಂಟೆಗೆ ಹೆಣ್ಣು ಮಗುವಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜನನದ ಬಳಿಕ ಹೆಣ್ಣು ಮಗುವಿನ ಜನ್ಮ ದಾಖಲಾತಿ ಕೂಡ ನೀಡಿದ್ದು, ಆದರೆ ಆ ಮಗು ಪಾಶ್ರ್ವವಾಯುನಿಂದ ಬಳುತ್ತಿತ್ತು.

    ಎಡವಟ್ಟು ಆಗಿದ್ದು ಎಲ್ಲಿ?
    ಪದ್ಮ ಜಯಪ್ಪ ಹಾಗೂ ಪದ್ಮ ಮೋಹನ್ ಅವರ ಗಂಡು ಮತ್ತು ಹೆಣ್ಣು ಮಗುವನ್ನು ಮಕ್ಕಳನ್ನು ಎನ್‍ಐಸಿಯುನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಎರಡು ಕಡೆಯೂ ಪದ್ಮ ಮಗು (Baby of Padma) ಎಂದು ಬರೆದುಕೊಂಡಿದ್ದರು. ಈ ಮಧ್ಯೆ ಇಂದು ನಸುಕಿನ ಜಾವ 3.50ರ ಸುಮಾರಿಗೆ ಪದ್ಮ ಜಯಪ್ಪ ಅವರ ಗಂಡು ಮಗು ಮೃತಪಟ್ಟಿದೆ.

    ಆಸ್ಪತ್ರೆ ಸಿಬ್ಬಂದಿ ಪದ್ಮ ಜಯಪ್ಪ ಅವರ ಮಗುವನ್ನು ಪದ್ಮ ಮೋಹನ್ ಅವರಿಗೆ ನೀಡಿ ನಿಮ್ಮ ಮಗು ಮೃತಪಟ್ಟಿದೆ ಎಂದು ಶಿಶುವನ್ನು ಬಟ್ಟೆಯಿಂದ ಸುತ್ತಿ ನೀಡಿದ್ದಾರೆ. ಪದ್ಮ ಮೋಹನ್ ಹಾಗೂ ಅವರ ಕುಟುಂಬದವರು ತಮ್ಮದೇ ಮಗು ಎಂದು ತಿಳಿದು ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಹೆಣ್ಣು ಮಗು ಬದಲಾಗಿ ಗಂಡು ಮಗುವನ್ನು ವೈದ್ಯರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪದ್ಮ ಮೋಹನ್ ಆಸ್ಪತ್ರೆಗೆ ತೆರಳಿ ಇದು ನಮ್ಮ ಮಗು ಅಲ್ಲ ಎಂದು ವೈದ್ಯರಿಗೆ ಹೇಳಿದ್ದಾರೆ. ಈ ವೇಳೆ ಪದ್ಮ ಜಯಪ್ಪ ಅವರಿಗೆ ತಮ್ಮ ಗಂಡು ಶಿಶು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಹೆಣ್ಣು ಮಗು ನಮ್ಮದು ಎಂದು ವೈದ್ಯರ ಬಳಿ ಗಲಾಟೆ ಮಾಡಿದ್ದಾರೆ. ಪದ್ಮ ಮೋಹನ್ ಅವರ ಹೆಣ್ಣು ಮಗು ಈಗ ಎನ್‍ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

  • ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ನವದೆಹಲಿ: “ಕಾಲ್ ರಿಸೀವ್ ಮಾಡಿಲ್ಲ ಯಾಕೆ? ಮೇಲ್ ಕಳುಹಿಸಿದ್ರು ರಿಪ್ಲೈ ಮಾಡಿಲ್ಲ ಯಾಕೆ?” ಈ ರೀತಿಯ ಪ್ರಶ್ನೆಗಳನ್ನು ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದರೂ ಉದ್ಯೋಗಿಗಳಿಗೆ ಬಾಸ್ ಸಾಮಾನ್ಯವಾಗಿ ಕೇಳುತ್ತಿರುತ್ತಾರೆ. ಆದರೆ ಈ ಬಾರಿ ಮಂಡನೆಯಾಗಿರುವ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಈ ರೀತಿಯಾಗಿ ಬಾಸ್ ಕೇಳುವ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಬೀಳಲಿದೆ.

    ಹೌದು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ‘ರೈಟ್ ಟು ಡಿಸ್‍ಕನೆಕ್ಟ್’ ಮಸೂದೆ ಮಂಡನೆಯಾಗಿದೆ. ಮನೆಗೆ ತೆರಳಿದ ಬಳಿಕವೂ ಉದ್ಯೋಗಿಯ ಖಾಸಗಿ ಬದುಕನ್ನು ರಕ್ಷಿಸುವ ಸಲುವಾಗಿ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಈ ಮಸೂದೆಯನ್ನು ಮಂಡಿಸಿದ್ದಾರೆ.

     

    ಮಸೂದೆಯಲ್ಲಿ ಏನಿದೆ?
    ಆಫೀಸ್ ಅವಧಿ ಮುಗಿದ ಬಳಿಕವೂ ಮನೆಯಲ್ಲಿ ಬಾಸ್ ಕರೆ, ಇ ಮೇಲ್‍ಗೆ ಉತ್ತರಿಸದೇ ಇರುವ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಂಶ ಈ ಮಸೂದೆಯಲ್ಲಿದೆ. ಉದ್ಯೋಗಿಯ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ ಇದು ಸಹಾಯವಾಗಲಿದೆ. ಆಫೀಸಿನಿಂದ ಮನೆಗೆ ತೆರಳಿದ ಬಳಿಕ ಬಾಸ್ ಕರೆಯನ್ನು ನಿರ್ಲಕ್ಷ್ಯಿಸಬಹುದು. ಇಮೇಲ್ ನೋಡಿದರೂ ರಿಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಬಾಸ್ ಕರೆಯನ್ನು ನಿರ್ಲಕ್ಷ್ಯ ಮಾಡಿದರೂ ಉದ್ಯೋಗಿಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ ಎನ್ನುವ ವಿಶೇಷ ಅಂಶ ಈ ಮಸೂದೆಯಲ್ಲಿದೆ. ಕೇವಲ ಕೆಲಸದ ಅವಧಿ ಅಲ್ಲದೇ ರಾಜಾ ದಿನಕ್ಕೂ ಈ ನಿಯಮ ಅನ್ವಯವಾಗುತ್ತದೆ.

    ಬೇರೆ ಕಡೆ ಜಾರಿಯಲ್ಲಿದೆ:
    ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ನಂತರ ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಂಡಿದೆ. ಆಫೀಸ್ ಸಮಯದ ನಂತರವೂ ಇಮೇಲ್ ಚೆಕ್, ಫೋನ್ ಕಾಲ್ ರಿಸೀವ್ ಮಾಡಿದ್ದರಿಂದ ಒತ್ತಡ ಹೆಚ್ಚಾಗಿ ಮನೆಯ ವಾತಾವರಣ ಹಾಳಾಗಿ ಸಾಂಸಾರಿಕ ಜೀವನದ ಮೇಲೂ ಪೆಟ್ಟು ಬೀಳುತ್ತದೆ. ಇದರಿಂದಾಗಿ ಉದ್ಯೋಗಿಯ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿದೇಶದಲ್ಲಿ ಈ ಕಾಯ್ದೆ ಜಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲು ಡಿಕ್ಕಿ- ಟ್ರ್ಯಾಕ್ ಮ್ಯಾನ್, ಗ್ಯಾಂಗ್ ಮ್ಯಾನ್ ದುರ್ಮರಣ

    ರೈಲು ಡಿಕ್ಕಿ- ಟ್ರ್ಯಾಕ್ ಮ್ಯಾನ್, ಗ್ಯಾಂಗ್ ಮ್ಯಾನ್ ದುರ್ಮರಣ

    ಸಾಂದರ್ಭಿಕ ಚಿತ್ರ

    ಕೋಲಾರ: ರೈಲು ಡಿಕ್ಕಿ ಹೊಡೆದ ಪರಿಣಾಮ ರೈಲ್ವೇ ಟ್ರ್ಯಾಕ್ ಮ್ಯಾನ್ ಹಾಗೂ ಗ್ಯಾಂಗ್ ಮ್ಯಾನ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವರದಾಪುರ ಬಳಿಯ ರೈಲ್ವೇ ಗೇಟ್ ಬಳಿ ನಡೆದಿದೆ.

    ರಾಜಸ್ಥಾನ ಮೂಲದ ಹರೀ ಸಿಂಗ್ ಮೀನಾ (30) ಹಾಗೂ ಕುಪ್ಪಂ ತಾಲೂಕಿನ ಬಂಡಪಲ್ಲಿ ಗ್ರಾಮದ ರಾಮಸ್ವಾಮಿ(28) ಮೃತಪಟ್ಟ ರೈಲ್ವೇ ನೌಕರರು. ಬುಧವಾರ ರಾತ್ರಿ ಎಂದಿನಂತೆ ಇಬ್ಬರೂ ನೌಕರರು ರೈಲ್ವೇ ಟ್ರ್ಯಾಕ್ ಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಪೊಲೀಸರು ಹಾಗೂ ಸ್ಟೇಷನ್ ಮಾಸ್ಟರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ನಂತರ ನಂಜನಗೂಡಿನ ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

    ಸೋಮವಾರದಿಂದ ನಂಜನಗೂಡು ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಧರಣಿ ಮಾಡಲು ನಿರ್ಧರಿಸಿದ್ದು, ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಧರಣಿಯಲ್ಲಿ ದೇವಾಲಯದ 180 ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಆರಂಭಿಸಿದ್ದಾರೆ. ಚಾಮುಂಡಿ ಬೆಟ್ಟದ ನೌಕರರಂತೆ ಇವರು ಪ್ರಮುಖ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

    ಪ್ರತಿಭಟನಾಕಾರರ ಬೇಡಿಕೆಗಳು:
    1. ಕಾರ್ಯಾರ್ಥ ನೇಮಕ ಮಾಡಿರುವ ನೌಕರರನ್ನು ಖಾಯಂಗೊಳಿಸಬೇಕು.
    2. ವೇತನ ಶ್ರೇಣಿ ಪಡೆಯುತ್ತಿರುವ ನೌಕರರಿಗೆ 6ನೇ ವೇತನ ಮಂಜೂರು ಮಾಡಿ ಕಾಲ ಕಾಲಕ್ಕೆ ಬರುವ ಭತ್ಯೆಯನ್ನು ಕೊಡಲು ಖಾಯಂ ಆದೇಶ ಮಾಡುವುದು.
    3. ಪ್ರತಿವರ್ಷ ಬೋನಸ್ ರೂಪದಲ್ಲಿ ಎಲ್ಲ ನೌಕರರಿಗೆ ಇಡೀ ತಿಂಗಳ ಪೂರ್ಣ ವೇತನ ಪಾವತಿಸಬೇಕು.
    4. ಸೇವಾವಧಿಗೂ ಮುನ್ನಾ ಅಕಾಲಿಕ ಮರಣ ಹೊಂದುವ ನೌಕರರ ಕುಟುಂಬದವರಿಗೆ ಅನುಕಂಪದ ಮೇಲೆ ಕೆಲಸ ನೀಡಬೇಕು.
    5. ನಿವೃತ್ತಿ ಬಳಿಕ ನೌಕರರಿಗೆ ಕೊಡುವ 35 ಸಾವಿರ ರೂ. ಹಣವನ್ನು 5 ಲಕ್ಷ ರೂ.ಗೆ ಏರಿಸಬೇಕು
    6. ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು.
    7. ದೇವಾಲಯದ ಕಾರ್ಯನಿರ್ವಹಿಸುತ್ತಿರುವ ಅನುವಂಶೀಯ ನೌಕರರು ಮರಣ ಹೊಂದಿದಲ್ಲಿ ಧಾರ್ಮಿಕ ಕೈಂಕಾರ್ಯಗಳಿಗೆ ಅಡೆ ತಡೆ ಉಂಟಾಗದಂತೆ ಸದರಿ ಹುದ್ದೆಗೆ ತುರ್ತಾಗಿ ನೌಕರರನ್ನು ನಿಗದಿ ಪಡಿಸಬೇಕು.

    ಇಂದು ಬೆಳಗ್ಗೆ ದೇವಾಲಯದಲ್ಲಿ ನಂಜುಡೇಶ್ವರನಿಗೆ ಪೂಜಾ ವಿಧಿ ವಿಧಾನ ನಡೆದ ಬಳಿಕ ನೌಕರರು ಧರಣಿ ಆರಂಭಿಸಿದ್ದಾರೆ. ಅರ್ಚಕರು, ಸೇವಾ ಕೌಂಟರ್ ಸಿಬ್ಬಂದಿ, ಪ್ರಸಾದ ವಿತರಣಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಿಂದ ಭಕ್ತರಿಗೆ ಸೇವೆಗಳಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ. ವಿಶೇಷ ಪೂಜೆ, ಅರ್ಚನೆ ಹಾಗೂ ಇತರೆ ಸೇವೆಗಳು ಪ್ರತಿಭಟನೆ ಆರಂಭವಾದ ಬಳಿಕ ಭಕ್ತರಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಒಟ್ಟು 242 ಮಂದಿ ನೌಕರರಿರುವ ನಂಜನಗೂಡು ದೇವಾಲಯದಲ್ಲಿ ಸುಮಾರು 62 ಹುದ್ದೆಗಳು ಖಾಲಿಯಿದ್ದು, ಇನ್ನುಳಿದ 180 ಮಂದಿ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಹಕರೇ ಬ್ಯಾಂಕ್ ಕೆಲ್ಸ ಬೇಗ  ಮುಗಿಸಿಕೊಳ್ಳಿ- ಡಿ.25ರಿಂದ 5 ದಿನ ಸಾಲು ಸಾಲು ರಜೆ

    ಗ್ರಾಹಕರೇ ಬ್ಯಾಂಕ್ ಕೆಲ್ಸ ಬೇಗ ಮುಗಿಸಿಕೊಳ್ಳಿ- ಡಿ.25ರಿಂದ 5 ದಿನ ಸಾಲು ಸಾಲು ರಜೆ

    ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಎಚ್ಚರ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರತಿಭಟನೆ ಹಾಗೂ ಸಾಲು ಸಾಲಾಗಿ ಬಂದ ರಜೆಯಿಂದಾಗಿ ದೇಶಾದ್ಯಂತ ಡಿಸೆಂಬರ್ 21ರಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವುದಿಲ್ಲ.

    ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ಎಐಬಿಒಸಿ ಪ್ರತಿಭಟನೆ ಡಿಸೆಂಬರ್ 21ರಂದು ಮುಷ್ಕರಕ್ಕೆ ಕರೆ ನೀಡಿದೆ. ನಂತರದ ದಿನ (ಡಿಸೆಂಬರ್ 22) ನಾಲ್ಕನೇ ಶನಿವಾರದ ರಜೆ ಹಾಗೂ ಡಿಸೆಂಬರ್ 23 ಭಾನುವಾರದ ರಜೆ. ಮಂಗಳವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇರುತ್ತದೆ. ಹೀಗಾಗಿ ಸಾಲು ಸಾಲು ರಜೆಗಳು ಬರುವುದರಿಂದ ಗ್ರಾಹಕರು ಆದಷ್ಟು ಬೇಗ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಿ.

    ದೇನಾ, ವಿಜಯ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಒ) ಡಿಸೆಂಬರ್ 26ರಂದು ಮುಷ್ಕರ ನಡೆಸಲಿದೆ. ಹೀಗಾಗಿ ಡಿಸೆಂಬರ್ 24 (ಸೋಮವಾರ) ಹೊರತುಪಡಿಸಿದರೆ ಒಟ್ಟಾರೆ ಐದು ದಿನ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಸಾಲು ರಜೆ ಇರುವುದರಿಂದ ಕೆಲವು ಸಿಬ್ಬಂದಿ ಡಿಸೆಂಬರ್ 24ರಂದು ಕೂಡಾ ರಜೆ ಪಡೆಯುವ ಸಾಧ್ಯಗಳಿದ್ದು, ಬ್ಯಾಂಕ್ ವಹಿವಾಟು ನಡೆಯುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv