Tag: Employees

  • ಕಚೇರಿಗೆ ನುಗ್ಗಿ, ಪೆಟ್ರೋಲ್ ಸುರಿದು ಜೀವಂತವಾಗಿಯೇ ಮಹಿಳಾ ತಹಶೀಲ್ದಾರ್‌ಗೆ ಬೆಂಕಿಯಿಟ್ಟ

    ಕಚೇರಿಗೆ ನುಗ್ಗಿ, ಪೆಟ್ರೋಲ್ ಸುರಿದು ಜೀವಂತವಾಗಿಯೇ ಮಹಿಳಾ ತಹಶೀಲ್ದಾರ್‌ಗೆ ಬೆಂಕಿಯಿಟ್ಟ

    – ಇಂದು ಮಧ್ಯಾಹ್ನ ನಡೆಯಿತು ಆಘಾತಕಾರಿ ಘಟನೆ
    – ಕಚೇರಿಯಲ್ಲೇ ಪ್ರಾಣಬಿಟ್ಟ ತಹಶೀಲ್ದಾರ್

    ತೆಲಂಗಾಣ: ಕಚೇರಿಗೆ ನುಗ್ಗಿ ಮಹಿಳಾ ತಹಶೀಲ್ದಾರ್ ಒಬ್ಬರನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಹೈದರಾಬಾದ್‌ನ ಹೈಯತ್ ನಗರದಲ್ಲಿ ನಡೆದಿದೆ.

    ಮೃತ ಮಹಿಳಾ ತಹಶೀಲ್ದಾರನ್ನು ವಿಜಯರೆಡ್ಡಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಕಚೇರಿಗೆ ಬಂದ ಗೌರಲ್ಲಿ ಗ್ರಾಮದ ನಿವಾಸಿ ಸುರೇಶ್ ರೆಡ್ಡಿ ಕೆಲ ಕಾಲ ವಿಜಯ ಅವರ ಜೊತೆ ಮಾತನಾಡಿ ನಂತರ ತಕ್ಷಣ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಊಟದ ಸಮಯದಲ್ಲಿ ಯಾರು ಇಲ್ಲದನ್ನು ಗಮನಿಸಿದ ಆತ ಬಂದು ಈ ಕೃತ್ಯ ಮಾಡಿದ್ದಾನೆ. ಕಚೇರಿಯ ಒಳಗೆ ಬೆಂಕಿ ಹಚ್ಚಿದ ಕಾರಣ ನೋವನ್ನು ತಳಲಾರದೆ ತಹಶೀಲ್ದಾರ್ ವಿಜಯ ಕಚೇರಿಯಿಂದ ಕಾಪಾಡಿ ಎಂದು ಹೊರಗೆ ಬಂದು ಬಾಗಿಲ ಬಳಿ ಬಿದ್ದು ನರಳುತ್ತಾ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸುರೇಶ್ ರೆಡ್ಡಿಗೂ ಗಂಭೀರ ಗಾಯವಾಗಿದ್ದು, ಆತನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

    ಈ ಘಟನೆ ನಡೆದ ವೇಳೆ ಕಚೇರಿಯಲ್ಲಿದ್ದ ಅಟೆಂಡರ್ ಮತ್ತು ಕಾರು ಚಾಲಕ ಒಳಗೆ ಹೋಗಿ ಅವರನ್ನು ಉಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿ ಜಾಸ್ತಿಯಾದ ಕಾರಣ ಅವರನ್ನು ಉಳಿಸಲು ಆಗಿಲ್ಲ. ಈ ವೇಳೆ ಈ ಇಬ್ಬರು ನೌಕರರಿಗೂ ಗಂಭೀರವಾದ ಗಾಯವಾಗಿದ್ದು, ಅವರನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾಚಕೊಂಡ ನಗರದ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್, ಮಧ್ಯಾಹ್ನ ಸುಮಾರು ೧.೪೦ರ ವೇಳೆಗೆ ಸುರೇಶ್ ಕಚೇರಿಯೊಳಗೆ ಬಂದಿದ್ದಾನೆ. ಊಟದ ಸಮಯವಾದ ಕಾರಣ ಜಾಸ್ತಿ ನೌಕರರು ಕಚೇರಿಯಲ್ಲಿ ಇರಲಿಲ್ಲ. ಸ್ವಲ್ಪ ಸಮಯ ವಿಜಯ ರೆಡ್ಡಿ ಜೊತೆ ಮಾತನಾಡಿದ ಸುರೇಶ್ ನಂತರ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಿದ್ದಾರೆ.

    ಆರೋಪಿ ಸುರೇಶ್ ರೆಡ್ಡಿ ಬಚರಾಮ್ ನಗರದಲ್ಲಿ ಏಳು ಎಕ್ರೆ ಜಮೀನು ತೆಗೆದುಕೊಂಡಿದ್ದು, ಇದು ಪತ್ರದ ವಿಚಾರದಲ್ಲಿ ವಿವಾದವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರವಾಗಿ ಆತ ಕಚೇರಿಗೆ ಬಂದಿದ್ದ ಎಂದು ಹೇಳಲಾಗಿದೆ. ಆದರೆ ಆತ ಏಕೆ ವಿಜಯ ರೆಡ್ಡಿ ಅವರನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಿದ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ.

    ಈಗ ಪ್ರಸ್ತುತ ಆರೋಪಿ ನಮ್ಮ ವಶದಲ್ಲಿದ್ದಾನೆ ಮತ್ತು ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸೆಕ್ಷನ್ ೩೦೨ (ಕೊಲೆ) ಮತ್ತು ೩೦೭ (ಕೊಲೆ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಬಳಿಕ ಕಚೇರಿ ಎದುರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದ್ದರು.

  • ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

    ಮೈಸೂರು: ಸರಿಯಾಗಿ ಕೆಲಸ ಮಾಡದಿದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡೋಕೆ ಕಳುಹಿಸುತ್ತೇನೆ ಎಂದು ರೇಷ್ಮೆ ಸಚಿವ ವಿ. ಸೋಮಣ್ಣ ಅವರು ಕೆಎಸ್‌ಐಸಿ ಜನರಲ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮೈಸೂರಿನ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ(ಕೆಎಸ್‌ಐಸಿ) ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅಲ್ಲಿನ ಅವ್ಯವಸ್ಥೆ, ನೌಕಕರರ ಸಮಸ್ಯೆ ಕೇಳಿ ಸೋಮಣ್ಣ ಅವರು ಸಿಟ್ಟಾದರು. ನೌಕರರ ಮುಂದೆಯೇ ಜನರಲ್ ಮ್ಯಾನೇಜರ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

    ‘ನೀ ಬಾರೀ ಕಿಲಾಡಿ ಇದ್ದೀಯಾ. ಒಂದು ಹೇಳ್ತೀನಿ ಕೇಳು, ನಾನು ಏನ್ಮಾಡೋಕೂ ತಯಾರಿದ್ದೇನೆ. ನಿನ್ನಾಟ ನನ್ನ ಹತ್ತಿರ ನಡೆಯಲ್ಲ. ಕೇಳಿಲ್ಲಿ, ನಾನು ಫಸ್ಟ್ 1994-95 ಬಂಧೀಖಾನೆ ಮಂತ್ರಿಯಾಗಿದ್ದೆ. ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡಿಕೊಂಡು ಬರೋಕೆ ಕಳುಹಿಸುತ್ತೇನೆ’ ಎಂದು ಜನರಲ್ ಮ್ಯಾನೇಜರ್‌ಗೆ ಎಚ್ಚರಿಕೆ ಕೊಟ್ಟರು.

    ಇಲ್ಲಿನ ನೌಕರರ ಸಮಸ್ಯೆ ಬಗೆಹರಿಯಬೇಕು, ಉತ್ಪಾದನೆ ಜಾಸ್ತಿ ಆಗಬೇಕು ಅಷ್ಟೆ. ಯಾವ ಕಳ್ಳಾಟ ನಡೆಯೋಕೆ ಬಿಡಲ್ಲ ಎಂದು ಖಡಕ್ ಆಗಿ ಸಚಿವರು ಎಚ್ಚರಿಸಿದರು. ಬಳಿಕ ನೌಕರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

  • ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ತಿರುವನಂತಪುರಂ: ಕೇರಳ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ವೇತನ ಸಹಿತ ಪ್ರಸೂತಿ ರಜೆಯನ್ನು ಕೇರಳ ಸರ್ಕಾರ ಕಲ್ಪಿಸಿದೆ.

    ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕಿಯರಿಗೆ 26 ವಾರಗಳ ಕಾಲ ಮಾತ್ರ ವೇತನ ಸಹಿತ ರಜೆ ಸಿಗುತ್ತಿತ್ತು. ಆದರೆ ಈ ಸೌಲಭ್ಯ ಕೇರಳದ ಖಾಸಗಿ ಶಾಲಾ ಶಿಕ್ಷಕಿಯರಿಗೂ ಅನ್ವಯವಾಗಲಿದೆ. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ ಅಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಪ್ರಸೂತಿ ರಜೆ ನೀಡಬೇಕೆಂದು ದೀರ್ಘಕಾಲದಿಂದ ಒತ್ತಾಯಿಸಿದ್ದರು. ಈ ವಿಚಾರವಾಗಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮತಿ ಕೋರಿತ್ತು. ಸದ್ಯ ಕೇಂದ್ರ ಸರ್ಕಾರವು ಇದಕ್ಕೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ಶಿಕ್ಷಕಿಯರು, ಮಹಿಳಾ ಉದ್ಯೋಗಿಗಳು ಈಗಿನಿಂದ ಸರ್ಕಾರಿ ಶಾಲಾ ಶಿಕ್ಷಕಿಯರು ಹಾಗೂ ಮಹಿಳಾ ಉದ್ಯೋಗಿಗಳಂತೆ 26 ವಾರಗಳ ಮಾತೃತ್ವ ರಜೆ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಯು ಉದ್ಯೋಗಿಗೆ ತಿಂಗಳಿಗೆ 1,000 ರೂ.ಗಳ ವೈದ್ಯಕೀಯ ಭತ್ಯೆಯನ್ನು ಸಹ ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ 1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ಯು ಉದ್ಯೋಗದಲ್ಲಿರುವ ತಾಯಂದಿರಿಗೆ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯ ಕಲ್ಪಿಸಿಕೊಟ್ಟಿತು. ಆದರೆ ಅಗತ್ಯದಷ್ಟು ರಜೆ, ಶಿಶುವಿಗೆ ಹಾಲುಣಿಸಲು ಬಿಡವು, ಕುಂದು ಕೊರತೆಗಳನ್ನಾಲಿಸಲು ಸೌಲಭ್ಯಗಳಿಲ್ಲದೆಯೇ ಕಾನೂನು ಅಪೂರ್ಣವಾಗಿತ್ತು. ಇದರಿಂದಾಗಿ 2017ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, 26 ವಾರಗಳ (ಆರು ತಿಂಗಳು) ಹೆರಿಗೆ ರಜೆಯನ್ನು ಮೊದಲ ಎರಡು ಹೆರಿಗೆಗೆ ನೀಡಲಾಗಿದೆ.

    ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ಕನಿಷ್ಠ ವೇತನ ಪ್ರಮಾಣವನ್ನು ನಿಗದಿಪಡಿಸುವತ್ತ ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ 29ರಂದು ಕರೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ಚರ್ಚೆಯಾಗಿದೆ. ಈ ಮೂಲಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಕಾರ್ಮಿಕರ ಪ್ರಸ್ತುತ ನಿಗದಿತ ವೇತನ ಭತ್ಯೆಯನ್ನು ದಿನಕ್ಕೆ 150 ರೂ.ಗಳಿಂದ 600 ರೂ.ಗೆ ಹೆಚ್ಚಿಸಲು ಕೇರಳ ಸರ್ಕಾರ ಒತ್ತಾಯಿಸಿದೆ.

  • ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಚಿಂತನೆ

    ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಚಿಂತನೆ

    ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗ ಬಯಸುತ್ತಿರುವ ಮಂದಿಗೆ ಸಿಹಿಸುದ್ದಿ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡಲು ಚಿಂತನೆ ನಡೆಸಿದೆ.

    33 ವರ್ಷ ಸೇವೆ ಪೂರ್ಣಗೊಳಿಸಿದ ಅಥವಾ 60 ವರ್ಷ ಪೂರ್ಣಗೊಂಡ ಪೈಕಿ ಯಾವುದು ಮೊದಲು ಸಾಧ್ಯವಾಗುತ್ತದೆಯೋ ಅದನ್ನು ಪರಿಗಣಿಸಿ ಸೇವೆಯಲ್ಲಿರುವವರ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಲು ಪ್ರಸ್ತಾಪವೊಂದು ಸಿದ್ಧವಾಗಿದೆ.

    ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಪ್ರಸ್ತಾಪವನ್ನು ಸಿದ್ಧಪಡಿಸಿದ್ದು, ಸರ್ಕಾರದ ವೆಚ್ಚ ಇಲಾಖೆಗೆ ಕಳುಹಿಸಿದೆ. ಈ ನಿರ್ಧಾರ ಕೈಗೊಂಡರೆ ಹಣಕಾಸು ಇಲಾಖೆಗೆ ಆಗುವ ಹೊರೆ ಇತ್ಯಾದಿ ವಿವರಗಳನ್ನು ವೆಚ್ಚ ಇಲಾಖೆ ಪರಿಶೀಲಿಸುತ್ತಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಕೇಂದ್ರ ಸರ್ಕಾರದ ಬಹುತೇಕ ಇಲಾಖೆಗಳ ಉದ್ಯೋಗಿಗಳಿಗೆ ನಿವೃತ್ತಿ ವಯಸ್ಸು 60 ವರ್ಷ ಆಗಿದ್ದರೆ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ವೈದ್ಯರ ನಿವೃತ್ತಿ ವಯಸ್ಸು 65 ಆಗಿದೆ. ದೇಶದಲ್ಲಿ ಉದ್ಯೋಗ ಸಮಸ್ಯೆಯ ಬಗ್ಗೆ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈಗ ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವರದಿಯಾಗಿದೆ.

    1998ರಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಲಾಗಿತ್ತು. ಹಲವು ರಾಜ್ಯ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸಿವೆ.

  • ಕಾರ್ಮಿಕರ ಊಟದಲ್ಲಿ ಹಲ್ಲಿ ಬಿದ್ದ ವದಂತಿ – 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

    ಕಾರ್ಮಿಕರ ಊಟದಲ್ಲಿ ಹಲ್ಲಿ ಬಿದ್ದ ವದಂತಿ – 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

    ರಾಮನಗರ: ಊಟದಲ್ಲಿ ಹಲ್ಲಿ ಬಿದ್ದ ವದಂತಿ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ಹಾರೋಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾರೋಹಳ್ಳಿಯ ಸ್ಟವ್ ಕ್ರಾಫ್ಟ್ ಕಂಪನಿಯಲ್ಲಿ ನಡೆದಿದೆ.

    ಬೆಳಗ್ಗಿನ ಉಪಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ವದಂತಿ ಹಬ್ಬಿತ್ತು. ಈ ವಿಷಯ ತಿಳಿದು ಬೆಳಗ್ಗಿನ ಉಪಹಾರ ತಿಂದಿದ್ದ ಕಾರ್ಮಿಕರಲ್ಲಿ ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮೀಕರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

    ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರ ಸೂಚನೆ ಮೇರೆಗೆ ಒಬ್ಬೊಬ್ಬರಂತೆ ಡಿಸ್ಚಾರ್ಜ್ ಆದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರಿಗೆ ಧೈರ್ಯ ತುಂಬಿದರು. ಅಲ್ಲದೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.

    ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    – ಖಾಸಗಿ ಸಂಸ್ಥೆಯಲ್ಲಿ 10 ಗಂಟೆ ಕೆಲಸ
    – 10 ನಿಮಿಷ ತಡವಾದ್ರೂ ಅರ್ಧ ದಿನದ ಸಂಬಳ ಕಟ್

    ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ 10 ನಿಮಿಷ ತಡವಾಗಿ ಹೋದರೆ ಅರ್ಧ ದಿನದ ಸ್ಯಾಲರಿ ಕಟ್ ಮಾಡಲಾಗುತ್ತದೆ. ಹಾಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕಚೇರಿ ಸಮಯ 9.00ಕ್ಕೆ ಇದ್ದರೂ 8.30ಕ್ಕೆ ಹೋಗುತ್ತಾರೆ. ಆದರೆ ಸರ್ಕಾರಿ ನೌಕರರ ಸ್ಥಿತಿ ಹಾಗಲ್ಲ ಸಕಲ ಸವಲತ್ತು ಇರುವ ವಿಧಾನಸೌದಕ್ಕೆ ಸರಿಯಾದ ಸಮಯಕ್ಕೆ ಬರಲು ಸಾದ್ಯವೇ ಇಲ್ಲ ಎಂದು ಪತ್ರ ಬರೆದಿದ್ದಾರೆ.

    ನಮಗೆ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಪ್ಲೀಸ್ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10.10ರೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.

    ಪತ್ರದಲ್ಲಿ ಏನಿದೆ?
    ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

    ನೌಕರರು ಹಾಜರಾತಿಯನ್ನ ದಾಖಲಿಸುವ ಬಯೋಮೆಟ್ರಿಕ್ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಅಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಮಿಸ್‍ಫ್ಲ್ಯಾಷ್ ತೋರಿಸುವುದು ಕಂಡುಬರುತ್ತಿದೆ. ಬೆಂಗಳೂರಿನ ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ, ಮೇಲ್ ಸೇತುವೆಗಳು ಸೇರಿದಂತೆ ಹಲವಾರು ಕಾಮಗಾರಿಗಳಿಂದ ರಸ್ತೆ ಸಂಚಾರಿ ದಟ್ಟಣೆಯು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವುದು ಸವಾಲಿನ ಕೆಲಸವಾಗಿದೆ.

    ಈ ಮೇಲಿನ ಅಂಶಗಳನ್ನು ಪರಿಗಣಿಸಿ ಬೆಳಿಗ್ಗೆ 10.00 ರಿಂದ 10.30ರೊಳಗೆ ನೌಕರರು ಕಚೇರಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಆಗ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒತ್ತಡದಲ್ಲಿ ಜೀವನ ನಡೆಸುತ್ತಿರುವ ನೌಕರರು ಸರ್ಕಾರಿ ಸೇವೆಯನ್ನು ಒತ್ತಡರಹಿತವಾಗಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಸಿಬ್ಬಂದಿ ಇದ್ದರೂ ತಂದೆಯಿದ್ದ ಸ್ಟ್ರೆಚರ್ ದೂಡಿಕೊಂಡು ಹೋದ ಪುಟ್ಟ ಬಾಲಕಿ

    ಸಿಬ್ಬಂದಿ ಇದ್ದರೂ ತಂದೆಯಿದ್ದ ಸ್ಟ್ರೆಚರ್ ದೂಡಿಕೊಂಡು ಹೋದ ಪುಟ್ಟ ಬಾಲಕಿ

    ಹುಬ್ಬಳ್ಳಿ/ಧಾರವಾಡ: ಕಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ನೆರವು ನೀಡಬೇಕಾಗಿದ್ದ ಸಿಬ್ಬಂದಿ, ರೋಗಿಗಳ ಸಹಾಯಕ್ಕೆ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪುಟ್ಟ ಬಾಲಕಿಯೊಬ್ಬಳು ಆಸ್ಪತ್ರೆ ಆವರಣದಲ್ಲಿ ತಂದೆಯನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ತಾನೇ ದೂಡಿಕೊಂಡು ಹೋದ ಘಟನೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿ, ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಹಾಯಕ್ಕೆ ನೂರಾರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ವ್ಹೀಲ್ ಚೇರ್, ಸ್ಟ್ರೆಚರ್ ಮೇಲೆ ರೋಗಿಗಳನ್ನು ಸರಿಯಾದ ವಾರ್ಡಿಗೆ ತೆಗೆದುಕೊಂಡು ಹೋಗಬೇಕಾಗಿದ್ದ ಸಿಬ್ಬಂದಿ ಇಲ್ಲಿ ಮೈಮರೆತಿದ್ದಾರೆ. ಅಲ್ಲದೆ ಸಿಬ್ಬಂದಿ ರೋಗಿಗಳ ನೆರವಿಗೆ ಬರುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ.

    ತನ್ನ ತಂದೆಯ ಜೊತೆಗೆ ಆಸ್ಪತ್ರೆಗೆ ಬಂದಿದ್ದ ಪುಟ್ಟ ಬಾಲಕಿಯೊಬ್ಬಳು, ತಂದೆಯನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ದೂಡಿಕೊಂಡು ಸ್ಕ್ಯಾನ್ ಮಾಡಿಸಲು ಹೋದ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯ ನೋಡಿದ ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ನಾಗರಾಜ್, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದರು. ಕಿಮ್ಸ್ ನಲ್ಲಿ ಕಾಲಿನ ಸ್ಕ್ಯಾನಿಂಗ್ ಮಾಡಿಸಲು ಅಲ್ಲಿದ್ದ ಸಿಬ್ಬಂದಿ ನೆರವು ನೀಡಬೇಕಿತ್ತು. ಆದರೆ ಯಾರು ಸಹ ನೆರವು ನೀಡದಿದ್ದಾಗ ನಾಗರಾಜ್ ಪತ್ನಿ ಹಾಗೂ ಅವರ ಮಗಳು ಇಬ್ಬರು ಸೇರಿ, ನಾಗರಾಜ್‍ರನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ಸ್ಕ್ಯಾನಿಂಗ್ ಸೆಂಟರ್ ವೆರೆಗೆ ಕರೆದುಕೊಂಡು ಹೋಗಿದ್ದಾರೆ.

    ನೂರಾರು ಸಿಬ್ಬಂದಿ ಇದ್ದರು ಸಹ ರೋಗಿಗಳ ನೆರವಿಗೆ ಅವರು ಬರದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ರೋಗಿಗಳ ಜೊತೆಗೆ ಬಂದವರೇ ರೋಗಿಗಳನ್ನು ಬೇರೆ ಬೇರೆ ವಾರ್ಡ್ ಗಳಿಗೆ ಶಿಫ್ಟ್ ಮಾಡುವಂತಹ ವ್ಯವಸ್ಥೆ ಕಿಮ್ಸ್ ನಲ್ಲಿ ಕಂಡು ಬರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ತನ್ನ ತಂದೆಯ ನೆರವಿಗೆ ಆಸ್ಪತ್ರೆ ಸಿಬ್ಬಂದಿ ಬಾರದಿದ್ದಾಗ ಬಾಲಕಿ ತಾನೇ ಸ್ಟ್ರೆಚರ್ ದೂಡಿಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

  • ಕೆಲಸ ಖಾಯಂ ಮಾಡುವಂತೆ ಸಿಎಂ ಕಾಲಿಗೆ ಬಿದ್ದ ಸಾರಿಗೆ ನೌಕರರು

    ಕೆಲಸ ಖಾಯಂ ಮಾಡುವಂತೆ ಸಿಎಂ ಕಾಲಿಗೆ ಬಿದ್ದ ಸಾರಿಗೆ ನೌಕರರು

    ಬೆಂಗಳೂರು: ಒಂದೆಡೆ ಸಿಎಂ ವಿಶ್ವಾಸ ಮತಯಾಚನೆ ಗೊಂದಲದಲ್ಲಿದ್ದರೆ ಇನ್ನೊಂದೆಡೆ ಕೆಲಸ ಖಾಯಂಗೊಳಿಸಿವಂತೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನೌಕರರು ಹಾಗೂ ಖಾಸಗಿ ಶಾಲೆಯನ್ನು ಅನುದಾನಕ್ಕೊಳಪಡಿಸುವಂತೆ ಶಿಕ್ಷಕರು ದುಂಬಾಲು ಬಿದ್ದಿದ್ದಾರೆ.

    ಗುರುವಾರ ವಿಶ್ವಾಸ ಮತಯಾಚನೆ ಕುರಿತು ಹಾಗೂ ಇನ್ನಿತರೆ ರಾಜಕೀಯ ಬೆಳವಣಿಗೆಗಳ ಕುರಿತು ಸಲಹೆ ಪಡೆಯಲು ಬುಧವಾರ ಸಂಜೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ್ದ ಸಿಎಂಗೆ ನೌಕರರು ಸುತ್ತುವರಿದು ಕೆಲಸವನ್ನು ಖಾಯಂ ಮಾಡಿಸಿಕೊಂಡುವಂತೆ ಗೋಗರೆದರು.

    ಖಾಯಂಗೊಳಿಸುವ ಮೂಲಕ ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ಸಿಎಂ ಕಾಲಿಗೆ ಬಿದ್ದು ನೌಕರರು ಮನವಿ ಮಾಡಿದರು. ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರೂ ಸಹ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಖಾಸಗಿ ಶಾಲೆಗಳನ್ನು ಅನುದಾನಕ್ಕೊಳಪಡಿಸುವಂತೆ ಬೇಡಿಕೊಂಡರು. ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಶಿಕ್ಷಕರು ಬಿಕ್ಕಿ ಬಿಕ್ಕಿ ಅತ್ತು ಸಿಎಂಗೆ ಮನವಿ ಸಲ್ಲಿಸಿದ ಪ್ರಸಂಗ ನಡೆಯಿತು.

    ಸಿಎಂ ಹೆಚ್ಚು ಮಾತನಾಡದೇ ನೌಕರರ ಅಹವಾಲು ಸ್ವೀಕರಿಸಿ, ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿ ಹೊರಟರು.

  • ಕಾಳಿಂಗ ಸರ್ಪಕ್ಕೆ ಹಾವಾಡಿಗನ ಮೇಲೆ ಸಿಟ್ಟು

    ಕಾಳಿಂಗ ಸರ್ಪಕ್ಕೆ ಹಾವಾಡಿಗನ ಮೇಲೆ ಸಿಟ್ಟು

    ಚಿಕ್ಕಮಗಳೂರು: ಸೆರೆ ಸಿಕ್ಕ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಿಂತ ಹಾವಾಡಿಗನ ಮೇಲೆ ದಾಳಿ ಮಾಡಲು ಮುಂದಾಗಿ ಹತ್ತಾರು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಾಳುಕರಗುಂದ ಗ್ರಾಮದ ಜಾರ್ಜ್ ಎಂಬವರ ಕಾಫಿತೋಟದಲ್ಲಿ ಮೊಲ ಅಟ್ಟಿಸಿಕೊಂಡು ಬಂದ ಕಾಳಿಂಗ ಸರ್ಪ ಕಾಫಿತೋಟದಲ್ಲಿ ಬೀಡು ಬಿಟ್ಟಿದೆ. ಇದನ್ನು ನೋಡಿದ ಕೂಲಿ ಕಾರ್ಮಿಕರು ಭಯಗೊಂಡು ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತೋಟದ ಮಾಲೀಕ ಎನ್.ಆರ್.ಪುರದ ಉರಗ ತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾಳಿಂಗ ಸರ್ಪವನ್ನು ಸೆರೆಹಿಡಿಯಲು ಯತ್ನಸಿದ್ದಾರೆ. ಆದರೆ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಿಂತ ಹಾವಾಡಿಗ ರವೀಂದ್ರ ಮೇಲೆ ದಾಳಿಗೆ ಮುಂದಾಗಿದ್ದೇ ಹೆಚ್ಚು. ರವೀಂದ್ರ ಸೆರೆ ಹಿಡಿಯಲು ಬಾಲ ಹಿಡಿದು ಎಳೆಯುತ್ತಿದ್ದಂತೆ ಹತ್ತಾರು ಬಾರಿ ಅವರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿತು. ಆ ದೃಶ್ಯ ಮಾತ್ರ ನೋಡುಗರಿಗೆ ಎದೆ ಝಲ್ ಎನ್ನಿಸುವಂತ್ತಿತ್ತು.

    ಒಂದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೆರೆಹಿಡಿದ 14 ಅಡಿ ಉದ್ದ ಹೆಣ್ಣು ಕಾಳಿಂಗ ಸರ್ಪವನ್ನು ಹರಿಂದ್ರ ಅವರುವ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಸರ್ಪದ ಆರ್ಭಟ ಕಂಡ ತೋಟದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಮಿನಿಬಸ್ ಪಲ್ಟಿ- ಇಬ್ಬರ ಕಾಲು ಮುರಿತ, 20ಕ್ಕೂ ಹೆಚ್ಚು ಜನರಿಗೆ ಗಾಯ

    ಮಿನಿಬಸ್ ಪಲ್ಟಿ- ಇಬ್ಬರ ಕಾಲು ಮುರಿತ, 20ಕ್ಕೂ ಹೆಚ್ಚು ಜನರಿಗೆ ಗಾಯ

    ರಾಮನಗರ: ಗಾರ್ಮೆಂಟ್ಸ್ ನೌಕರರನ್ನು ಕರೆ ತರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಇಬ್ಬರಿಗೆ ಕಾಲು ಮುರಿದು, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಬಳಿ ನಡೆದಿದೆ.

    ಕನಕಪುರ ಹೊರ ವಲಯದ ಶಿವನೇಗೌಡನದೊಡ್ಡಿ ಗ್ರಾಮದ ಬಳಿಯ ಲಗೂನಾ ಗಾರ್ಮೆಂಟ್ಸ್ ಗೆ ಇಂದು ಬೆಳಿಗ್ಗೆ ನೌಕರರನ್ನು ಮಿನಿ ಬಸ್‍ನಲ್ಲಿ ಕರೆತರಲಾಗುತ್ತಿತ್ತು. ಸುಮಾರು 30 ಜನರಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ.

    ಚಾಲಕನ ಬದಲಿಗೆ ಗಾರ್ಮೆಂಟ್ಸ್ ನ ಟೈಲರ್ ಓರ್ವ ಮಿನಿಬಸ್ ಚಲಾಯಿಸಿದ್ದೆ ಈ ದುರ್ಘಟನೆಗೆ ಕಾರಣವಾಗಿದೆ. ಕಾಲು ಮುರಿತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಗೆ ಒಳಗಾದವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.