Tag: Employees

  • BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    BSNL ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

    – ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ

    ಕಾರವಾರ: ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಕುಮಟಾದಲ್ಲಿ ಇಂದು ಸಂಸದರ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ಎನ್‍ಎಲ್ ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಸಮರ್ಪಕ ಸೇವೆ ನೀಡಲು ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸುತ್ತೇವೆ ಎಂದರು.

    ಎಲ್ಲ ಸೌಕರ್ಯಗಳಿದ್ದರೂ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಿದ್ದಾರೆ. ಬಿಎಸ್‍ಎನ್‍ಎಲ್ ಎಂಬ ಸಂಸ್ಥೆಯನ್ನು ಖಾಸಗೀಕರಣ ಗೊಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ಅಧೀನದಲ್ಲಿರುವ ಬಿಎಸ್‍ಎನ್‍ಎಲ್ ಸಂಸ್ಥೆ ವಿರುದ್ಧ ಹರಿಹಾಯ್ದರು.

    ಕಾರ್ಯ ವೈಖರಿ ವಿರುದ್ಧ ಅಸಮದಾನ
    ಕಳೆದ ತಿಂಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ನೆಟ್‍ವರ್ಕ್ ಸಮಸ್ಯೆ ಹಾಗೂ ಪಂಚಾಯಿತಿಗಳಿಗೆ ಇಂಟರ್‍ನೆಟ್ ಸೇವೆ ನೀಡದೇ ನೀಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ಸಭೆಯಲ್ಲೇ ಪ್ರತಿಭಟನೆಗೆ ಕುಳಿತು, ಒಂದು ವಾರದ ವರೆಗೆ ಸಮಯ ನೀಡಿ ತೆರಳಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ಮಾಡದೇ ನುಣಚಿಕೊಂಡಿದ್ದರು. ಹೀಗಾಗಿ ಮತ್ತೆ ಸಭೆ ಕರೆದು ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿವಾದಿತ ಹೇಳಿಕೆ ನೀಡಿದ್ದಾರೆ.

  • ಗೂಗಲ್ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್‍ವರೆಗೆ ವರ್ಕ್ ಫ್ರಮ್ ಹೋಮ್

    ಗೂಗಲ್ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್‍ವರೆಗೆ ವರ್ಕ್ ಫ್ರಮ್ ಹೋಮ್

    ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಗೂಗಲ್ ತನ್ನೆಲ್ಲ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು ತಿಳಿಸಿದೆ.

    ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಭಾರತ ಸೇರಿ ವಿಶ್ವಾದ್ಯಂತ ಗೂಗಲ್ ಹಾಗೂ ಅಲ್ಫಾಬೆಟ್ ಸಂಸ್ಥೆಯ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಇದು ಅನುಕೂಲವಾಗಲಿದ್ದು, 5 ಸಾವಿರಕ್ಕೂ ಕಡಿಮೆ ಉದ್ಯೋಗಿಗಳಿರುವ ಕಚೇರಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ.

    ಈ ಕುರಿತು ಗೂಗಲ್ ಹಾಗೂ ಅಲ್ಫಾಬೆಟ್ ಸಿಇಒ ಸುಂದರ್ ಪಿಚೈ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದು, ಮುಂದಿನ ಯೋಜನೆಗಳಿಗೆ ಉದ್ಯೋಗಿಗಳು ಶಕ್ತಿಯನ್ನು ನೀಡಬೇಕು, ನಾವು ವರ್ಕ್ ಫ್ರಮ್ ಹೋಮ್ ಅವಕಾಶವನ್ನು ಜೂನ್ 30, 2021ರ ವರೆಗೆ ಮುಂದುವರೆಸಿದ್ದೇವೆ. ಕಚೇರಿಗೆ ಬರಬೇಕೆಂದೇನಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಗೂಗಲ್ ಬೆಂಗಳೂರು, ಗುರುಗ್ರಾಮ, ಮುಂಬೈ ಹಾಗೂ ಹೈದರಾಬಾದ್‍ಗಳಲ್ಲಿ ತನ್ನ ಕಚೇರಿ ಹೊಂದಿದೆ. ಅಲ್ಲದೆ ಇತ್ತೀಚೆಗೆ ಗೂಗಲ್ 10 ಬಿಲಿಯನ್ ಡಾಲರ್‍ನಷ್ಟು ಹಣವನ್ನು ಡಿಜಿಟಲೈಸೇಶನ್ ನಿಧಿ ಎಂದು ಮೀಸಲಿರಿಸಿದ್ದು, ಮುಂದಿನ 5ರಿಂದ 7 ವರ್ಷಗಳಲ್ಲಿ ಕಂಪನಿಗಳು ಈ ನಿಧಿಯಡಿ ಹೂಡಿಕೆ ಮಾಡಬಹುದಾಗಿದೆ. ಅಕ್ವಿಟಿ ಇನ್ವೆಸ್ಟ್‍ಮೆಂಟ್, ಪಾಲುದಾರಿಕೆ, ಮೂಲಸೌಕರ್ಯ, ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ಹೂಡಿಕೆ ಮಾಡಬಹುದಾಗಿದೆ.

    ಕಚೇರಿಗಳನ್ನು ತೆರೆಯಲು ಗೂಗಲ್ ಹಂತ ಹಂತವಾಗಿ ಯೋಚಿಸುತ್ತಿದ್ದು, ಜುಲೈ ವೇಳೆಗೆ ಶೇ.10ರಷ್ಟು ಕಟ್ಟಡವನ್ನು ಪಡೆಯುತ್ತೇವೆ. ಸೆಪ್ಟೆಂಬರ್ ವೇಳೆಗೆ ಶೇ.30ರಷ್ಟು ಕಟ್ಟಡಗಳನ್ನು ಪಡೆಯುತ್ತೇವೆ. 2021ರ ಆರಂಭಕ್ಕೆ ಉದ್ಯೋಗಿಗಳು ಮರಳಿ ಕೆಲಸಕ್ಕೆ ಬರಬಹುದಾಗಿದೆ ಎಂದು ಈ ಹಿಂದೆ ಸುಂದರ್ ಪಿಚೈ ತಮ್ಮ ಬ್ಲಾಗ್‍ನಲ್ಲಿ ತಿಳಿಸಿದ್ದರು. ಆದರೆ ಇದೀಗ ಇನ್ನೂ ಆರು ತಿಂಗಳು ಮನೆಯಿಂದ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ.

    ಈ ವರ್ಷಾಂತ್ಯದ ವರೆಗೆ ಕೆಲಸಕ್ಕೆ ಕಚೇರಿಗೆ ಮರಳುವುದು ಉದ್ಯೋಗಿಗಳ ವಿವೇಚೆನೆಗೆ ಬಿಟ್ಟಿದ್ದು ಎಂದು ಈ ಹಿಂದೆ ಗೂಗಲ್ ತಿಳಿಸಿತ್ತು. ಆದರೆ ಈ ಅವಧಿಯನ್ನು ಇದೀಗ ಇನ್ನೂ 6 ತಿಂಗಳುಗಳ ಕಾಲ ಹೆಚ್ಚಿಸಿದೆ. ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಕಚೇರಿಗೆ ಬರುವುದು ಉದ್ಯೋಗಿಗಳ ವಿವೇಚನೆಗೆ ಬಿಟ್ಟದ್ದು ಎಂದು ಗೂಗಲ್ ತಿಳಿಸಿದೆ. ವಿವಿಧ ದೇಶಗಳಲ್ಲಿ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಗೂಗಲ್ ಈ ನಿರ್ಧಾರ ಕೈಗೊಂಡಿದೆ.

  • ಶೇ.80ಕ್ಕೂ ಹೆಚ್ಚು ಭಾರತೀಯರು ವರ್ಕ್ ಫ್ರಮ್ ಆಫೀಸ್ ಮಿಸ್ ಮಾಡಿಕೊಳ್ತಿದ್ದಾರಂತೆ!

    ಶೇ.80ಕ್ಕೂ ಹೆಚ್ಚು ಭಾರತೀಯರು ವರ್ಕ್ ಫ್ರಮ್ ಆಫೀಸ್ ಮಿಸ್ ಮಾಡಿಕೊಳ್ತಿದ್ದಾರಂತೆ!

    – ಕಚೇರಿಯ ಸ್ನೇಹಿತರು ದೂರಾ ದೂರ- ಸ್ನೇಹ ಸಂಪರ್ಕ ಕಡಿತ
    – ಆಫೀಸ್ ರೊಟೀನ್ ಒಂತರಾ ಮಜಾ ಅಂತೆ
    – ಜೆಎಲ್‍ಎಲ್ ಸಂಸ್ಥೆ ನಡೆಸಿದ ಸರ್ವೇಯಲ್ಲಿ ಬಹಿರಂಗ

    ನವದೆಹಲಿ: ವರ್ಕ್ ಫ್ರಮ್ ಹೋಮ್ ಕ್ರೇಜ್ ಹೆಚ್ಚುತ್ತಿರುವ ಬೆನ್ನಲ್ಲೇ ಅಚ್ಚರಿಯ ಮಾಹಿತಿಯನ್ನು ಸಂಶೋಧನೆಯೊಂದು ಹೊರ ಹಾಕಿದ್ದು, ಮನೆಯಿಂದ ಕೆಲಸ ಮಾಡುತ್ತಿರುವ ಶೇ.80ರಷ್ಟು ಭಾರತೀಯರು ಆಫೀಸ್ ಫ್ರಮ್ ವರ್ಕ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.

    ಈ ಕುರಿತು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಜೆಎಲ್‍ಎಲ್ ಏಷ್ಯಾ ಫೆಸಿಫಿಕ್ ಸರ್ವೇ ನಡೆಸಿದ್ದು, ‘ಹೋಮ್ ಆ್ಯಂಡ್ ಅವೇ: ದಿ ನ್ಯೂ ವರ್ಕ್‍ಪ್ಲೇಸ್ ಹೈಬ್ರಿಡ್?’ ಎಂಬ ಶಿರ್ಷಿಕೆಯಡಿ ಸಂಶೋಧನೆ ನಡೆಸಲಾಗಿದೆ. ಭಾರತದಲ್ಲಿ ಕೆಲಸ ಮಾಡುವ ಶೇ.82ರಷ್ಟು ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಸಂವಹನ ಕೊರತೆ ಅಥವಾ ಸಹೋದ್ಯೋಗಿಗಳೊಂದಿಗೆ ಪರಸ್ಪರ ಬೆರೆಯಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಕಚೇರಿ ಕೆಲಸವನ್ನು ಬಹುತೇಕ ಭಾರತೀಯರು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.

    ಕೋವಿಡ್-19 ಹೆಚ್ಚಿರುವ ಸಮಯದಲ್ಲಿ ಶೇ.68ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಈ ಪೈಕಿ ಸಿಂಗಾಪುರ ಅತಿ ಹೆಚ್ಚು ಅಂದರೆ ಶೇ.82ರಷ್ಟು ಜನ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ ಎಂದು ಜೆಎಲ್‍ಎಲ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

    ಈ ಪೈಕಿ ಮನೆಯಿಂದ ಕೆಲಸ ಮಾಡುವ ಶೇ.61ರಷ್ಟು ಉದ್ಯೋಗಿಗಳು ಕಚೇರಿಗೆ ತೆರಳಿ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಂಖ್ಯೆ ಭಾರತದಲ್ಲಿ ಶೇ.82ರಷ್ಟಿದ್ದು, ಇಷ್ಟೂ ಜನ ಕಚೇರಿಗೆ ಹೋಗಿ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದಕ್ಕೆ ಬಹುತೇಕರ ಕಾರಣ ಸಂವಹನ ಹಾಗೂ ಸಹೋದ್ಯೋಗಿಗಳೊಂದಿಗೆ ಬೆರೆಯುವುದಂತೆ.

    ಈ ಕುರಿತು ಅವರೇ ಹೇಳುವಂತೆ ಸಹೋದ್ಯೋಗಿಗಳೊಂದಿಗಿನ ಸ್ನೇಹ ಹಾಗೂ ಇತರರೊಂದಿಗೆ ಬೆರೆಯುವುದು ಪ್ರಮುಖ ಕಾರಣಗಳಾಗಿವೆ. ಮಾತ್ರವಲ್ಲದೆ ಅಗತ್ಯ ಪರಿಕರಳು ಮತ್ತು ಸಾಧನಗಳ ಕೊರತೆ ಎರಡನೇ ಕಾರಣಗಳಾಗಿವೆ. ಸಮಸ್ಯೆಗಳೂ ಆಗಿವೆ. ಇನ್ನೂ ಕೆಲವರು ದೈನಂದಿನ ಕಚೇರಿ ದಿನಚರಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರಂತೆ.

    ಕೊರೊನಾ ವೈರಸ್ ಕಾರಣದಿಂದಾಗಿ ಮಾತ್ರ ವರ್ಕ್ ಫ್ರಮ್ ಹೋಮ್ ಬೆಸ್ಟ್ ಎನ್ನಿಸುತ್ತಿದೆ ಎಂದು ಸಮೀಕ್ಷೆಗೆ ಒಳಗಾದ ಕನಿಷ್ಠ ಶೇ.66ರಷ್ಟು ಜನ ತಿಳಿಸಿದ್ದಾರೆ ಎಂದು ಜೆಎಲ್‍ಎಲ್ ಸಂಸ್ಥೆ ತಿಳಿಸಿದೆ. ಏಷ್ಯಾ ಫೆಸಿಫಿಕ್ ಪ್ರದೇಶದ 5 ದೇಶಗಳ ಒಟ್ಟು 1,500 ಜನರ ಪ್ರತಿಕ್ರಿಯೆಯನ್ನಾಧರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

  • ಮುನ್ನೆಚ್ಚರಿಕಾ ಕ್ರಮವಾಗಿ ಅರಸೀಕೆರೆಯಲ್ಲಿ ಗಾರ್ಮೆಂಟ್ಸ್‌ಗಳಿಗೆ ರಜೆ

    ಮುನ್ನೆಚ್ಚರಿಕಾ ಕ್ರಮವಾಗಿ ಅರಸೀಕೆರೆಯಲ್ಲಿ ಗಾರ್ಮೆಂಟ್ಸ್‌ಗಳಿಗೆ ರಜೆ

    ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಕೆಲವೊಂದು ಗಾರ್ಮೆಂಟ್ಸ್‌ನವರು ಇಂದಿನಿಂದ ತಮ್ಮ ನೌಕರರಿಗೆ ಕೆಲವು ದಿನಗಳ ಕಾಲ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ.

    ಅಷ್ಟೇ ಅಲ್ಲದೇ ಅರಸೀಕೆರೆ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಸೀಕೆರೆ ಡಿಪೋದಿಂದ ಸಂಚರಿಸುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಈ ಬಗ್ಗೆ ಶುಕ್ರವಾರ ರಾತ್ರಿಯಷ್ಟೇ ಸಭೆ ನಡೆಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೊರೊನಾ ವಿರುದ್ಧದ ಹೋರಾಟಕ್ಕೆ ಸ್ವಯಂಪ್ರೇರಿತವಾಗಿ ಸಹಕರಿಸುವಂತೆ ಮನವಿ ಮಾಡಿದ್ದರು. ಇದೀಗ ಕೆಲವು ಗಾರ್ಮೆಂಟ್ಸ್ ಮಾಲೀಕರು ಮತ್ತು ಅರಸೀಕೆರೆ ಡಿಪೋ ಅಧಿಕಾರಿಗಳು ಶಾಸಕರ ಮನವಿಗೆ ಸ್ಪಂದಿಸಿ ತಮ್ಮ ಕೆಲಸಗಾರರಿಗೆ ತಾತ್ಕಾಲಿಕವಾಗಿ ರಜೆ ನೀಡಿದ್ದಾರೆ.

  • ನಂಜನಗೂಡಿನ  ಜ್ಯುಬಿಲಿಯೆಂಟ್ ಕಾರ್ಖಾನೆ ಮೀರಿಸಿದ ಜಿಂದಾಲ್

    ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆ ಮೀರಿಸಿದ ಜಿಂದಾಲ್

    – ಹಾಲು ಹಾಕಿದವನಿಂದಲೂ ಬಳ್ಳಾರಿಗೆ ಟೆನ್ಶನ್

    ಬಳ್ಳಾರಿ: ದಿನದಿಂದ ದಿನಕ್ಕೆ ಜಿಂದಾಲ್‍ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯನ್ನು ಮೀರಿಸಿರುವ ಜಿಂದಾಲ್‍ನಲ್ಲಿ ಕೊರೊನಾ ಶತಕ ಬಾರಿಸಿದೆ.

    ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಂದಾಲ್ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಬಳ್ಳಾರಿ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಮುಂದುವರಿದಿದೆ. ಶನಿವಾರ ಬಳ್ಳಾರಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ 8 ಪ್ರಕರಣ ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 181 ಸೋಂಕಿತರಲ್ಲಿ ಸಿಂಹಪಾಲು ಅಂದರೆ 103 ಪ್ರಕರಣ ಜಿಂದಾಲ್‍ಗೆ ಸೇರಿದೆ. ಅಂದರೆ ಜಿಂದಾಲ್ ಒಂದೇ ಶತಕ ಬಾರಿಸಿ ಮುಂದುವರಿಯುತ್ತಿದೆ.

    ಪ್ರತಿದಿನ 120 ಮನೆಗೆ ಹಾಲು ಸರಬರಾಜು ಮಾಡ್ತಿದ್ದ
    ಜಿಂದಾಲ್ ನೌಕರರ ವಸತಿ ಸಮುಚ್ಚಯ ಇರುವ ವಿವಿ ನಗರ, ವಿದ್ಯಾನಗರ, ಶಂಕರಗುಡ್ಡ ಕಾಲೋನಿಗಳಿಗೆ ನಿತ್ಯ ಹಾಲು ಹಾಕುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ 45 ವರ್ಷದ ವ್ಯಕ್ತಿ ನಿತ್ಯ ಜಿಂದಾಲ್ ನೌಕರರ ಸುಮಾರು 120 ಮನೆಗಳಿಗೆ ಹಾಲು ಹಾಕುತ್ತಿದ್ದ. ಬೈಕ್ ಮೇಲೆ ತಿಮ್ಮಲಾಪುರದಿಂದ ಜಿಂದಾಲ್‍ಗೆ ಹೋಗಿ ಬರುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ಈತನ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಜ್ವರ ಹಾಗೂ ಗಂಟಲುನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ತಪಾಸಣೆ ಮಾಡಿಸಿ, ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಬಳಿಕ ಸೋಂಕು ಇರುವುದು ಖಚಿತವಾಗಿದೆ.

    ಹಾಲು ಹಾಕುತ್ತಿದ್ದ ವ್ಯಕ್ತಿಗೆ ಸೋಂಕು ದೃಢವಾಗ್ತಿದ್ದಂತೆ ನಗರದ ಜಿಲ್ಲಾ ಕೊರೊನಾ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿದೆ. ಈತ ವಾಸವಾಗಿರುವ ತಿಮ್ಮಲಾಪುರ ಗ್ರಾಮದ ನಿವಾಸ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗಿದೆ. ಇನ್ನೂ ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದ್ದು, ಗ್ರಾಮದ ಕೆಲ ರಸ್ತೆಗಳನ್ನು ಬಂದ್ ಮಾಡಿ, ಗ್ರಾಮದ ಜನರು ಜಿಂದಾಲ್ ನೌಕರರು ಪ್ರವೇಶವನ್ನು ನಿಷೇಧಿಸಿದ್ದಾರೆ.

    ಜಿಂದಾಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಜಿಂದಾಲ್ ಮಾತ್ರ ತಮ್ಮ 10 ಸಾವಿರ ನೌಕರರನ್ನು ಕೇವಲ ನಾಲ್ಕು ದಿನಗಳ ಕಾಲ ಕ್ವಾರೆಂಟೈನ್ ಮಾಡಿ ಮತ್ತೆ ಎಡವಟ್ಟು ಮಾಡಿಕೊಂಡಿದೆ. ಜಿಲ್ಲಾಡಳಿತ ಹಾಗೂ ಜಿಂದಾಲ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವುದು ಎಂದು ಸ್ಥಳೀಯರು ಆತಂಕ ಪಡುತ್ತಿದ್ದಾರೆ.

  • ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ- 86 ಮಂದಿ ನೌಕರರಿಗೆ ಸೋಂಕು

    ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ- 86 ಮಂದಿ ನೌಕರರಿಗೆ ಸೋಂಕು

    ಬಳ್ಳಾರಿ: ಮಹಾಮಾರಿ ಕೊರೊನಾ ರಣಕೇಕೆ ಬಳ್ಳಾರಿ ಜಿಲ್ಲೆಯಲ್ಲಿ ಮುಂದುವರೆದಿದ್ದು ಜಿಲ್ಲೆಗೆ ಜಿಂದಾಲ್ ಉಕ್ಕು ಕಂಪನಿ ಕಂಟಕವಾಗಿ ಪರಿಣಮಿಸಿದೆ. ಇಂದು ಒಂದೇ ದಿನ ಜಿಂದಾಲ್ ನಲ್ಲಿ 46 ಪ್ರಕರಣಗಳು ದಾಖಲಾಗುವ ಮೂಲಕ ಜಿಂದಾಲ್ ನೌಕರರಲ್ಲಿ ಈವರೆಗೂ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ ಆಗಿದೆ.

    ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 33 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಆರಂಭ ಆಗಿನಿಂದಲೂ ಜಿಂದಾಲ್ ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಸ್ಥಳೀಯ ಪ್ರತಿನಿಧಿಗಳು ಆಗ್ರಹ ಮಾಡಿದ್ದರು. ಆದರೆ ಇಷ್ಟು ದಿನ ಜಿಂದಾಲ್ ನಲ್ಲಿ ಒಂದೇ ಒಂದು ಪ್ರಕರಣ ಪತ್ತೆ ಆಗಿರಲಿಲ್ಲ. ಕಳೆದ ಒಂದು ವಾರದಿಂದ ಜಿಂದಾಲ್ ನಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾದರೆ ಇದರಲ್ಲಿ ಜಿಂದಾಲ್ ಸೋಂಕಿತರ ಸಂಖ್ಯೆ 86. ಕಳೆದ ಎರಡು ದಿನಗಳಿಂದ ಜಿಂದಾಲ್ ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾಗುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ಅವರು ಜಿಂದಾಲ್ ಓಪಿಜಿ ಸೆಂಟರ್ ಗೆ ಅನಿರ್ಧಿಷ್ಟ ಕಾಲ ರಜೆ ನೀಡುವಂತೆ ಆದೇಶ ಮಾಡಿದ್ದಾರೆ. ಅಲ್ಲದೇ ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳ ಆಗುವ ಮುನ್ಸೂಚನೆಯನ್ನು ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ನೀಡಿದ್ದಾರೆ.

    ಹೀಗಾಗಿ ಜಿಂದಾಲ್‍ನ ಕೆಲ ಕಾರ್ಖಾನೆಯ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅಲ್ಲದೆ ಜಿಂದಾಲ್ ಓಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ನೀಡುವುದರ ಜೊತೆಯಲ್ಲಿ ಎಲ್ಲ ಸಿಬ್ಬಂದಿ ಹೋಂ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಜಿಂದಾಲ್ ಆಡಳಿತ ಮಂಡಳಿಯ ಜೊತೆಯಲ್ಲಿ ಸಭೆ ನಡೆಸಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಂದಾಲ್ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.

  • ಅಮೆಜಾನ್‍ಗೂ ತಟ್ಟಿದ ಕೊರೊನಾ – 6 ನೌಕರರಿಗೆ ಸೋಂಕು

    ಅಮೆಜಾನ್‍ಗೂ ತಟ್ಟಿದ ಕೊರೊನಾ – 6 ನೌಕರರಿಗೆ ಸೋಂಕು

    – ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್‍ಕಾರ್ಟ್

    ವಾಷಿಂಗ್ಟನ್/ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಮಂದಿ ಆನ್‍ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಆದರೆ ಈಗ ಮಹಾಮಾರಿ ಕೊರೊನಾ ಆನ್‍ಲೈನ್ ವ್ಯವಹಾರಕ್ಕೂ ಅಡ್ಡಿಮಾಡುತ್ತಿದೆ.

    ಹೌದು. ಅಮೆರಿಕದಲ್ಲಿ ಅಮೆಜಾನ್ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.

    ಅಮೆರಿಕದ ನ್ಯೂ ಯಾರ್ಕ್ ಸಿಟಿ, ಜಾಕ್ಸನ್ ವಿಲ್ಲೆ, ಫ್ಲೋರಿಡಾ, ಶೆಪೆರ್ಡ್ಸ್ ವಿಲ್ಲೆ, ಕೆಂಟುಕಿ, ಕಾಟಿ, ಟೆಕ್ಸಾಸ್, ಬ್ರೌನ್ ಸ್ಟೌನ್, ಮಿಚಿಗನ್ ಮತ್ತು ಒಕ್ಲಹೊಮಾ ನಗರಗಳಲ್ಲಿ ಅಮೆಜಾನ್ ಕಂಪನಿಯ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಇತರೆ ನೌಕಕರು ಸ್ವತಃ ತಮ್ಮನ್ನು ತಾವೇ ಗೃಹಬಂಧನದಲ್ಲಿಟ್ಟುಕೊಂಡಿದ್ದಾರೆ.

    ಇತ್ತ ಕೊರೊನಾ ಮರಣಮೃದಂಗ ಬಾರಿಸುತ್ತಿರುವ ಇಟಲಿ, ಸ್ಪೈನ್‍ಗಳಲ್ಲಿ ಅಮೆಜಾನ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರಲ್ಲಿ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಹಿನ್ನೆಲೆ ತಮ್ಮ ಆರೋಗ್ಯಕ್ಕೆ ರಕ್ಷಣೆ ನೀಡಬೇಕೆಂದು ಅಮೆಜಾನ್ ಕಂಪನಿಯ ಸುಮಾರು 1,500 ಕಾರ್ಮಿಕರು ಸಹಿ ಹಾಕಿ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

    ಅಷ್ಟೇ ಅಲ್ಲದೇ ಫ್ಲಿಪ್‍ಕಾರ್ಟ್ ಕೂಡ ಇಂದಿನಿಂದ ತನ್ನ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಆನ್‍ಲೈನ್ ಮೂಲಕ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಜನರು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಕೊರೊನಾ ಭೀತಿಗೆ ಇಂದಿನಿಂದ ದಿನಸಿ, ದೊಡ್ಡ ಮತ್ತು ಸಣ್ಣ ಮಟ್ಟದ ಸಾಮಗ್ರಿಗಳ ಪೂರೈಕೆಯನ್ನು ಫ್ಲಿಪ್‍ಕಾರ್ಟ್ ಸ್ಥಗಿತಗೊಳಿಸಿದೆ.

  • 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    – ಬೆಂಗ್ಳೂರಿನಲ್ಲಿ 5ಕ್ಕೆ ಏರಿತು ಕೊರೊನಾ ಕೇಸ್
    – ನಗರಕ್ಕೆ ಮರಳಿದ ದಿನವೇ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಕೊರೊನಾ ವೈರಸ್ ಪತ್ತೆಯಾಗಿರುವ ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತದೆ. ಈ ವ್ಯಕ್ತಿಯು ಮೂಲತಃ ಮುಂಬೈ ನಿವಾಸಿಯಾಗಿದ್ದು, ಗ್ರೀಸ್‍ನಿಂದ ಮುಂಬೈಗೆ ಮಾರ್ಚ್ 6 ರಂದು ಬಂದಿದ್ದ. ಅಲ್ಲಿಂದ ಮಾರ್ಚ್ 8ರಂದು ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಷ್ಟೇ ಅಲ್ಲದೇ ಮಾರ್ಚ್ 9ಕ್ಕೆ ಆತ ಕಚೇರಿಗೆ ಹೋಗಿದ್ದ. ಆಗ ಆತ ಕೇವಲ 4 ಜನ ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸ್ ತೆರಳಿದ್ದ. ಇದನ್ನೂ ಓದಿ: ಕೋಳಿಯಿಂದ ಕೊರೊನಾ ಬರಲ್ಲ ಅಂತಿದಾರೆ, ಆದರೂ ಬೆಲೆ ಕಡಿಮೆಯಾಗಿದೆ- ಈಶ್ವರಪ್ಪ

    ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಕಚೇರಿಯಲ್ಲಿ 154 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದ ಎನ್ನುವ ವಿಚಾರ ಈಗ ಲಭ್ಯವಾಗಿದೆ.

    ಮನೆಗೆ ಮರಳಿದ ದಿನವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸೋದರ ಮಾತ್ರ ಬೆಂಗಳೂರಿನಲ್ಲಿ ಇದ್ದು ಜೊತೆಯಲ್ಲಿ ವಾಸ ಮಾಡುತ್ತಿದ್ದಾನೆ. ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿ ನೆಲೆಸಿದ್ದಾರೆ.

    ಆತ ಬೆಂಗಳೂರಿಗೆ ಬಂದಾಗ ಆಟೋ ಮೂಲಕ ಸಂಚರಿಸಿದ್ದ. ಆ ಆಟೋ ಡ್ರೈವರ್ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.

  • ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ- ಎಂಟು ಜನ ಕಾರ್ಮಿಕರ ಸ್ಥಿತಿ ಗಂಭೀರ

    ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ- ಎಂಟು ಜನ ಕಾರ್ಮಿಕರ ಸ್ಥಿತಿ ಗಂಭೀರ

    ರಾಯಚೂರು: ಯಾದಗಿರಿಯ ಕಡೆಚೂರು ಕೆಐಎಡಿಬಿ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಹಾಗೂ ಆಯಿಲ್ ಟ್ಯಾಂಕ್ ಸ್ಫೋಟದಿಂದ ಎಂಟು ಜನ ದಿನಗೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹೈದರಾಬಾದ್ ಮೂಲದ ಎಸ್‍ಡಿ ಪ್ಯಾರಲೆ ಕಂಪನಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಕೂಲಿ ಕೆಲಸ ಮಾಡುತ್ತಿದ್ದ ಆರೀಫ್, ಹುಸೇನ್ ಸೇರಿ ಮೂವರ ಸ್ಥಿತಿ ಗಂಭೀರವಾಗಿದೆ. ಇಮ್ರಾನ್, ರವಿ, ಸುಫಿಯನ್, ಶೇಕ್ ಹುಸೇನ್, ವಿಜಯ್ ಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಗಂಭೀರ ಗಾಯಗೊಂಡವರ ಪರಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಗಾಯಾಳುಗಳು ಬಡವರಾಗಿದ್ದು ಕೂಲಿ ಕೆಲಸವನ್ನೇ ನಂಬಿಕೊಂಡಿದ್ದವರು. ಈ ಘಟನೆಯಿಂದ ಅವರ ಕುಟುಂಬಕ್ಕೆ ನೋವಾಗಿದೆ. ಚಿಕಿತ್ಸೆ ವೆಚ್ಚವನ್ನು ಕಾರ್ಖಾನೆಯೆ ಭರಿಸಬೇಕು. ಅವರ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂದು ಗಾಯಾಳುಗಳ ಕಡೆಯವರು ಒತ್ತಾಯಿಸಿದ್ದಾರೆ.

  • ಲಿಫ್ಟ್‌ನ ಬೆಲ್ಟ್ ಕಟ್ ಆಗಿ 9 ಮಂದಿಗೆ ಗಾಯ

    ಲಿಫ್ಟ್‌ನ ಬೆಲ್ಟ್ ಕಟ್ ಆಗಿ 9 ಮಂದಿಗೆ ಗಾಯ

    ಧಾರವಾಡ: ಬೆಲ್ಟ್ ಕಟ್ ಆಗಿ ಲಿಫ್ಟ್‌ನಲ್ಲಿದ್ದ 9 ಮಂದಿ ಗಾಯಗೊಂಡ ಘಟನೆ ಧಾರವಾಡ ನಗರದ ಹೊರವಲಯದ ಖಾಸಗಿ ಹೊಟೇಲ್‍ನಲ್ಲಿ ನಡೆದಿದೆ.

    ಕಳೆದ ರಾತ್ರಿ ಧಾರವಾಡದ ಬೇಲೂರಿನ ಸ್ಟಾರ್ ಕಂಪನಿಯ ಉದ್ಯೋಗಿಗಳು ಊಟ ಮಾಡಿ ಲಿಫ್ಟ್ ಮೂಲಕ ಇಳಿಯುವಾಗಿ ಈ ಘಟನೆ ನಡೆದಿದ್ದು, 9 ಜನ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನಲ್ಲಿ ಪ್ರಯಾಣಿಸಿದ ಕಾರಣ ಲಿಫ್ಟ್‌ನ ಬೆಲ್ಟ್ ಕಟ್ ಆಗಿದೆ ಎಂದು ತಿಳಿದು ಬಂದಿದೆ.

    ಸ್ಟಾರ್ ಕಂಪನಿಯ ಉದ್ಯೋಗಿಗಳಾದ ಆನಂದ್ ಪವಾರ್(32), ಅನೀಲ್ ರಾಮಸಿಂಗ್(34), ಕೆಂಪಯ್ಯ ಪುರಾಣಿಕ್(34), ಆಂಟೋನಿ(44), ಬಸೀರ್ ಅಹ್ಮದ್ (22) ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಕಳೆದ ರಾತ್ರಿ ಪಾರ್ಟಿ ಮುಗಿಸಿದ್ದ ಸ್ಟಾರ್ ಕಂಪನಿಯ 13 ಉದ್ಯೋಗಿಗಳು ಏಕಕಾಲಕ್ಕೆ ಈ ಲಿಫ್ಟ್‌ನಲ್ಲಿ ಹತ್ತಿದ್ದಾರೆ.

    ಮೂರನೇ ಮಹಡಿಯಿಂದ ಎರಡನೇ ಮಹಡಿಗೆ ಲಿಫ್ಟ್ ಇಳಿಯುವುದರಲ್ಲಿ ಲಿಫ್ಟಿನ ಬೆಲ್ಟ್ ಕಟ್ ಆಗಿದೆ. ಸದ್ಯ ಕೆಲ ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಗಾಯವಾದವರಿಗೆ ಖಾಸಗಿ ಆಪತ್ರೆಗೆ ರವಾನೆ ಮಾಡಲಾಗಿದೆ.

    ಲಿಫ್ಟ್ ಟೆಕ್ನಿಷಿಯನ್ ಹೇಳುವ ಪ್ರಕಾರ, ‘ಹೆಚ್ಚಿನ ಜನರು ಲಿಫ್ಟ್‌ನಲ್ಲಿದ್ದ ಕಾರಣ ಎರಡನೇ ಮಹಡಿಗೆ ಬಂದಾಗ ಲಿಫ್ಟ್ ರಭಸದಿಂದ ಇಳಿದಿದೆ ಎಂದಿದ್ದಾರೆ. ಆದರೆ ಲಿಫ್ಟ್‌ನಲ್ಲಿದ್ದವರು ಲಿಫ್ಟ್‌ಗೆ ಹೆಚ್ಚಿನ ಲೋಡ್ ಆಗಿದ್ದರೆ ಬಾಗಿಲನ್ನು ತೆರೆದುಕೊಳ್ಳಬೇಕಿತ್ತು ಎಂದಿದ್ದಾರೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.