Tag: Employees

  • ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

    ಮುಷ್ಕರ ನಿರತ 20 ಸಾರಿಗೆ ನೌಕರರು ಪೊಲೀಸರ ವಶಕ್ಕೆ

    ಧಾರವಾಡ: ಕೊರೊನಾ ಮಧ್ಯೆ ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡಿದ್ದು, ಪ್ರತಿಭಟನಾ ನಿರತ ನೌಕರರನ್ನು ನಗರದಲ್ಲಿ ವಶಪಡಿಸಿಕೊಳ್ಳಲಾಗಿದೆ.

    ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು. ಈ ವೇಳೆ ಸಾರಿಗೆ ನೌಕರರ ಮುಖಂಡ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಸಾರಿಗೆ ನೌಕರರು ಜೈಲ್ ಭರೋ ನಡೆಸಲು ಮುಂದಾದರು. ಬಳಿಕ ಪೊಲೀಸರು 20ಕ್ಕೂ ಹೆಚ್ಚು ಸಾರಿಗೆ ನೌಕರರನ್ನು ವಶಕ್ಕೆ ಪಡೆಯಬೇಕಾಯಿತು.

    ಬಂಧನಕ್ಕೂ ಮುನ್ನ ಮಾತನಾಡಿದ ನೌಕರರ ಮುಖಂಡ ನೀರಲಕೇರಿ, ಸರ್ಕಾರ ನಮ್ಮ ಹೋರಾಟ ದಮನ ಮಾಡಲು ಮುಂದಾಗುತ್ತಿದೆ. ಸಿಎಂ ಮಾತುಕತೆಗೆ ಕರೆಸಿ ಸಂಧಾನ ಮಾಡಲಿ. ಸರ್ಕಾರ ಐಸಿಯುನಲ್ಲಿದೆ, ಜನರ ಜವಾಬ್ದಾರಿ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನೀರಲಕೇರಿ ಹೇಳಿದರು.

  • ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿದ್ದೇವೆ- ಕೋಡಿಹಳ್ಳಿ ಆಕ್ರೋಶ

    ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿದ್ದೇವೆ- ಕೋಡಿಹಳ್ಳಿ ಆಕ್ರೋಶ

    ಬೆಂಗಳೂರು: ಕೆಲಸ ಮಾಡದೇ, ಮುಷ್ಕರ ನಡೆಸುತ್ತಿರುವುದಕ್ಕೆ ಸರ್ಕಾರ ಸಂಬಳ ನೀಡಿಲ್ಲ. ಹೀಗಾಗಿ ಹಬ್ಬ ಮಾಡದೇ ಬೀದಿಯಲ್ಲಿ ಇದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಗಾಂಧಿನಗರದ ತಮ್ಮ ಕಚೇರಿ ಬಳಿಯೇ ಭಿಕ್ಷಾಟನೆ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿ ಇದ್ದೇವೆ. ಯುಗಾದಿ ಹಬ್ಬದ ಸಂಭ್ರಮ ಸಾರಿಗೆ ನೌಕರರಿಗಿಲ್ಲ. ವೇತನ ನೀಡದೇ ಸರ್ಕಾರ ಸತಾಯಿಸುತ್ತಿದೆ. ವೇತನ ನೀಡುವುದಿಲ್ಲ ಎಂದು ಸಿಎಂ ಹೇಳುವುದು ಸರಿಯಲ್ಲ. ವೇತನ ನೀಡದ್ದಕ್ಕೆ ಡಿಪೋ ಮ್ಯಾನೇಜರ್ ವಿರುದ್ಧ ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರು ದಾಖಲಿಸಿದ್ದಾರೆ. ಇದೇ ರೀತಿ ರಾಜ್ಯದೆಲ್ಲೆಡೆ ವೇತನ ನೀಡಿಲ್ಲ ಎಂದು ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.

    ಸಾರಿಗೆ ಬಸ್ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ ಚಾಲಕರ ಮೂಲಕ ಬಸ್ ಓಡಿಸುವುದು ಸಕ್ಸಸ್ ಆಗುವುದಿಲ್ಲ, ಅದೆಷ್ಟೇ ಪ್ರಯತ್ನ ಮಾಡಿದರೂ ಸಫಲವಾಗುವುದಿಲ್ಲ. ನೌಕರರು 1 ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ಸಿಎಂ ಹೇಳಿಕೆ ದೌರ್ಜನ್ಯದ ಪರಮಾವಧಿ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು. ಸಿಎಂ ಇನ್ನೊಮ್ಮೆ ಪರಿಶೀಲಿಸಲಿ, ಸರ್ಕಾರ ನೀಡಿದ ವಾಗ್ದಾನವಿದು. 6ನೇ ವೇತನ ನಮ್ಮ ಬೇಡಿಕೆಯೇ ಆಗಿರಲಿಲ್ಲ. ಅವರೇ ಭರವಸೆ ನೀಡಿದ್ದರು, ಇದೀಗ ಮೊಂಡುವಾದ ಮಾಡುವುದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ ಬರಬೇಕು ಎಂದು ಹೇಳಿದರು.

    ಸಾರಿಗೆ ನೌಕರರ ಮುಷ್ಕರಕ್ಕೆ ಹೋಗದಂತೆ ಕೋಡಿಹಳ್ಳಿ ಚಂದ್ರಶೇಖರ್ ಗೆ ಪೊಲೀಸರು ದಿಗ್ಬಂಧನ ಹಾಕಿದರು. ಗಾಂಧಿನಗರದ ಕೋಡಿಹಳ್ಳಿ ಕಚೇರಿಯ ಮುಂದೆ 5 ಪೊಲೀಸ್ ಜಿಪ್ ಗಳಲ್ಲಿ ದಿಗ್ಬಂಧನ ಹಾಕಲಾಗಿತ್ತು. ಕಚೇರಿಯಿಂದ ಹೊರ ಹೋಗಲು ಬಿಡಲಿಲ್ಲ. ಈ ಹಿನ್ನೆಲೆ ಗಾಂಧಿನಗರದ ಕಚೇರಿಯಲ್ಲೇ ಸಾರಿಗೆ ನೌಕರರು ಹಾಗೂ ಕೋಡಿಹಳ್ಳಿ ಭಿಕ್ಷಾಟನೆ ನಡೆಸಿ, ಪ್ರತಿಭಟಿಸಿದರು.

  • ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಮಾತ್ರ ಸೋಮವಾರ ಸಂಬಳ: ಡಿಸಿ

    ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಮಾತ್ರ ಸೋಮವಾರ ಸಂಬಳ: ಡಿಸಿ

    ಚಿಕ್ಕಮಗಳೂರು: ಮುಷ್ಕರ, ಜೀವ ಬೆದರಿಕೆ ಮಧ್ಯೆಯೂ ಸೇವೆಗೆ ಹಾಜರಾದ ಕೆಎಸ್‍ಆರ್‍ಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಮಾತ್ರ ಸೋಮವಾರ ಸಂಬಳ ನೀಡುವುದಾಗಿ ಕೆಎಸ್‍ಆರ್ ಟಿಸಿ ಡಿಸಿ ವೀರೇಶ್ ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರನೇ ವೇತನ ಅಯೋಗದ ಜಾರಿಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹಾಗೂ ಜಿಲ್ಲಾ ಡಿಸಿಗಳು ಸಿಬ್ಬಂದಿಗಳಿಗೆ ಸೇವೆಗೆ ಮರಳುವಂತೆ ಮನವಿ ಮಾಡಿದ್ದಾರೆ. ಆದರೆ ಬಹುತೇಕ ಸಿಬ್ಬಂದಿ ಸೇವೆಗೆ ಹಾಜರಾಗದೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮಧ್ಯೆಯೂ ಕೆಲ ಸಿಬ್ಬಂದಿ ಸೇವೆಗೆ ಹಾಜರಾಗಿದ್ದಾರೆ. ಹೀಗಾಗಿ ಮುಷ್ಕರ, ಜೀವ ಬೆದರಿಕೆ, ಇತರ ಸಿಬ್ಬಂದಿಯಿಂದ ಬೈಸಿಕೊಂಡರೂ ಸೇವೆಗೆ ಬಂದಿದ್ದಾರೋ ಅಂತಹವರಿಗೆ ಸೋಮವಾರ ಸಂಬಳ ನೀಡುವುದಾಗಿ ಕೆಎಸ್‍ಆರ್ ಟಿಸಿ ಡಿಸಿ ವೀರೇಶ್ ಮಾಹಿತಿ ನೀಡಿದ್ದಾರೆ.

    ಈಗಾಗಲೇ ಇಲಾಖೆಯ ಆಡಳಿತ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗೆ ಏಪ್ರಿಲ್ 1 ಹಾಗೂ ಏಪ್ರಿಲ್ 5ರಂದು ಸಂಬಳ ಆಗಿದೆ. ಸೋಮವಾರ ಮುಷ್ಕರದ ಮಧ್ಯೆಯೂ ಸೇವೆಗೆ ಹಾಜರಾಗಿರೋ ಚಾಲಕರು ಹಾಗೂ ನಿರ್ವಾಹಕರಿಗೆ ಸಂಬಳ ನೀಡಲು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿರುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆಗೆ ಇಳಿಯುತ್ತಿರೋ ಬಸ್‍ಗಳ ಸಂಖ್ಯೆ ಕೂಡ ಏರಿಕೆಯಾಗ್ತಿದೆ. ಮುಷ್ಕರದ ಎರಡನೇ ದಿನ ಮೂರು, ಮೂರನೇ ದಿನ 6, ನಾಲ್ಕನೇ ದಿನ 36 ಬಸ್ ಹಾಗೂ ಐದನೇ ದಿನ 29 ಕೆಂಪು ಬಸ್‍ಗಳು ರಸ್ತೆಗೆ ಇಳಿದಿವೆ. ಹೀಗಾಗಿ ಜಿಲ್ಲೆಯ ಆರು ಡಿಪೋಗಳಲ್ಲಿ ಯಾರು ಸೇವೆಗೆ ಬಂದಿದ್ದಾರೋ ಅವರಿಗೆ ಸೋಮವಾರ ಸಂಬಳ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

  • ವರ್ಗಾವಣೆ ಆದೇಶ ಬರುತ್ತಿದ್ದಂತೆ ಕೆಲಸಕ್ಕೆ ಹಾಜರಾದ ಸಾರಿಗೆ ನೌಕರರು

    ವರ್ಗಾವಣೆ ಆದೇಶ ಬರುತ್ತಿದ್ದಂತೆ ಕೆಲಸಕ್ಕೆ ಹಾಜರಾದ ಸಾರಿಗೆ ನೌಕರರು

    ಕಾರವಾರ: ರಾಜ್ಯಾದ್ಯಂತ ಕಳೆದ ಐದು ದಿನದಿಂದ ಬಸ್ ಸಂಚಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದು, ವರ್ಗಾವಣೆ ಆದೇಶ ಬರುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ವಾಯುವ್ಯ ಸಾರಿಗೆ ನೌಕರರು ಕೆಲಸಕ್ಕೆ ಹಾಜುರಾಗಿದ್ದಾರೆ.

    ನೌಕರರು ಕೆಲಸಕ್ಕೆ ಹಾಜುರಾಗುತಿದ್ದಂತೆ ಜಿಲ್ಲೆಯ ವಿವಿಧೆಡೆ ಹಾಗೂ ಗೋವಾ ಭಾಗಕ್ಕೆ ಸಂಚಾರ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ 60 ಬಸ್ ಗಳು ರಸ್ತೆಗಿಳಿದಿವೆ. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರಲ್ಲಿ ಹಲವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾತ್ರ ವಾಯುವ್ಯ ಸಾರಿಗೆ ಬಸ್‍ಗಳು ಇರುವ ನೌಕರರನ್ನು ಬಳಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

    ನಿನ್ನೆ ದಿನ ಮುಷ್ಕರ ಹಿನ್ನಲೆಯಲ್ಲಿ 40 ಜನ ಸಾರಿಗೆ ಸಿಬ್ಬಂದಿಯನ್ನ ಹುಬ್ಬಳ್ಳಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇಂದು ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಲಾಗಿತ್ತು. ವೀಕೆಂಡ್ ಮತ್ತು ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿರುವುದು ಖುಷಿ ಕೊಟ್ಟಿದ್ದು, ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.

  • ಏನಿದು ಎಸ್ಮಾ? ಸರ್ಕಾರಿ ನೌಕರರಿಗೆ ಭಯ ಯಾಕೆ?

    ಏನಿದು ಎಸ್ಮಾ? ಸರ್ಕಾರಿ ನೌಕರರಿಗೆ ಭಯ ಯಾಕೆ?

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ನಾಳೆಯಿಂದ ಮುಷ್ಕರಕ್ಕೆ ಇಳಿಯುತ್ತಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರ ಎಸ್ಮಾ ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಿದೆ.

    ಕೆಲತಿಂಗಳ ಹಿಂದೆ ಸಾರಿಗೆ ನೌಕರರು 9 ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಇವರ 8 ಬೇಡಿಕೆಗಳನ್ನು ಸ್ವೀಕರಿಸಿ ಸರ್ಕಾರ ಚಾಲನೆ ನೀಡಿದೆ. ಆದರೆ 6ನೇ ವೇತನ ಆಯೋಗವನ್ನು ಜಾರಿಗೊಳಿಸುವ ಕುರಿತು ಸರ್ಕಾರ ಎಲೆಕ್ಷನ್ ಕಮೀಷನ್ ಸ್ಪಷ್ಟೀಕರಿಸಿದ ಮೇಲೆ ಮಾಹಿತಿ ನೀಡಲಾಗುತ್ತದೆ ಎಂಬ ಮಾಹಿತಿ ನೀಡಿತ್ತು. ಆದರೆ ಇದೀಗ ಸಾರಿಗೆ ನೌಕರರು ಮತ್ತೆ ನಾಳೆಯಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ನೌಕರರ ಮುಷ್ಕರ ಅತಿರೇಕಕ್ಕೆ ಹೋದರೆ ಎಸ್ಮಾ ಜಾರಿಗೊಳಿಸುವ ಎಚ್ಚರಿಕೆ ನೀಡಿದೆ.

    ಸಾರಿಗೆ ನೌಕರರು, ಪೊಲೀಸರು, ಉಪನ್ಯಾಸಕರು ಅಥವಾ ಇತರೆ ಯಾವುದೇ ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದಾಗ ಎಸ್ಮಾ ಜಾರಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈ ಹಿಂದೆ ಎಸ್ಮಾ ಜಾರಿಗೊಳಿಸಿರುವ ಉದಾಹರಣೆಯು ಇದೆ. ಹಾಗಾದರೆ ಈ ಎಸ್ಮಾ ಎಂದರೇನು? ಎಸ್ಮಾ ಜಾರಿಗೆ ಸರ್ಕಾರ ಮುಂದಾದರೆ ಉದ್ಯೋಗಿಗಳು ಯಾವ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ?

    ಎಸ್ಮಾ ಎಂದರೆ, ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎಂದರ್ಥ(Essential Services Maintenance Act) ಸರ್ಕಾರಿ ನೌಕರನನ್ನು ನಿಯಂತ್ರಣ ಮಾಡುವ ಕಾಯ್ದೆ 1968 ರಿಂದ ಜಾಲ್ತಿಯಲ್ಲಿದ್ದು, ಕರ್ನಾಟಕದಲ್ಲಿ ಎಸ್ಮಾ ಕುರಿತು 1994ರಲ್ಲಿ ಕಾನೂನಿನ ಮೊದಲ ರೂಪುರೇಷೆ ತಯಾರಾಯಿತು. 2013ರ ಜೂನ್ ನಿಂದ ರಾಜ್ಯದಲ್ಲಿ ಕಾನೂನಾಗಿ ಮಾರ್ಪಾಡಾಯಿತು. ನಂತರ 2015 ರಲ್ಲಿ ಸರ್ಕಾರ ಕೆಲ ತಿದ್ದುಪಡಿ ಮಾಡಿದೆ.

    ಯಾವಾಗ ಜಾರಿ?
    ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆ ನಡೆಸಿ ಪರಿಸ್ಥಿತಿ ನಿಯಂತ್ರಣ ತಪ್ಪುತ್ತದೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದರೆ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಮುಖಭಂಗ ಬರುವ ಹಂತಕ್ಕೆ ಪ್ರತಿಭಟನೆಗಳು ಬಂದಾಗ ಸರ್ಕಾರ ಎಸ್ಮಾ ಜಾರಿ ಮಾಡುವ ಅಧಿಕಾರವಿದೆ.

    ಪರಿಣಾಮ ಏನು?
    ಎಸ್ಮಾ ಎಂದರೆ ಕಡ್ಡಾಯ ಕೆಲಸ. ಸಂವಿಧಾನದಲ್ಲಿ ತಿಳಿಸಿರುವಂತೆ, 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಶಿಕ್ಷೆಯನ್ನು ನೀಡುವ ಸಾಧ್ಯತೆಯೂ ಇರುತ್ತದೆ ಎಂಬ ಉಲ್ಲೇಖವಿದೆ. ಎಸ್ಮಾ ಜಾರಿಯಲ್ಲಿದ್ದ ಮೇಲೆ ಅದನ್ನು ಧಿಕ್ಕರಿಸಿ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಉದ್ಯೋಗಿಗಳು ಹಠ ಮುಂದುವರಿಸಿದರೆ ಕೊನೆಯ ಅಸ್ತ್ರವಾಗಿ ಎಸ್ಮಾ ಜಾರಿಗೊಳಿಸುತ್ತದೆ.

  • ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    – ಸಂಬಳದಲ್ಲಿ ವ್ಯತ್ಯಯವಾಗಿರುವುದನ್ನು ಒಪ್ಪಿದ ಕಂಪನಿ

    ನವದೆಹಲಿ: ಕೋಲಾರದ ನರಸಾಪುರದ ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಲೀ ವಿನ್ಸೆಂಟ್ ತಲೆದಂಡವಾಗಿದೆ. ಅಷ್ಟೇ ಅಲ್ಲದೇ ಉದ್ಯೋಗಿಗಳಿಗೆ ಸಂಬಳ ನೀಡುವುದರಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಕಂಪನಿ ಒಪ್ಪಿಕೊಂಡಿದೆ.

    ಕೋಲಾರದ ನರಸಾಪುರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಉದ್ಯೋಗಿಗಳು ಸಂಬಳ ನೀಡದ್ದಕ್ಕೆ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ನರಸಾಪುರದ ಘಟಕದಲ್ಲಿ ದುರದೃಷ್ಟಕರ ಘಟನೆ ನಡೆದ ಬಳಿಕ ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲ ನೌಕರರಿಗೆ ಸಂಬಳ ನೀಡದಿರುವುದು ಕಂಡುಬಂದಿದೆ. ಈ ಕುರಿತು ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೆ ನಮ್ಮೆಲ್ಲ ಉದ್ಯೋಗಿಗಳ ಕ್ಷಮೆಯಾಚಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮಿಂದ ತಪ್ಪಾಗಿರುವುದನ್ನು ಅರಿತಿದ್ದೇವೆ. ಕಾರ್ಮಿಕ ಏಜೆನ್ಸಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಕೆಲ ಪ್ರಕ್ರಿಯೆಗಳನ್ನು ಬಲಪಡಿಸಬೇಕಿದೆ ಹಾಗೂ ನವೀಕರಿಸಬೇಕಿದೆ. ಶಿಸ್ತು ಕ್ರಮ ಸೇರಿದಂತೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಇದರ ಭಾಗವಾಗಿ ಕಂಪನಿಯ ಭಾರತದ ಉಪಾಧ್ಯಕ್ಷರನ್ನು ಹುದ್ದೆಯಿಂದ ತೆಗೆಯಲಾಗಿದೆ. ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡಗಳನ್ನು ಪುನರ್‍ರಚಿಸುತ್ತೇವೆ ಎಂದು ಶನಿವಾರ ವಿಸ್ಟ್ರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಉಪಾಧ್ಯಕ್ಷ ಹುದ್ದೆಯಲ್ಲಿದ್ದ ವಿನ್ಸೆಂಟ್ ಲೀಯವರನ್ನು ತೆಗೆದು ಹಾಕಲಾಗಿದ್ದು, ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‍ನ ಭಾರತದ ಎಂಡಿಯಾಗಿ ಸುಧಿತೋ ಗುಪ್ತಾ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ನೀಡಿ, ಈ ಕುರಿತು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಕಾರ್ಮಿಕರಿಗಾಗಿ ನೌಕರರ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

    ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಲು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ತೆರೆಯುತ್ತೇವೆ. ನಮ್ಮ ವ್ಯವಹಾರ ಹಾಗೂ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಕರ್ನಾಟಕದ ಕಾರ್ಮಿಕ ಇಲಾಖೆ ಕಂಪನಿಯ ಅವ್ಯವಸ್ಥೆ ಕುರಿತು ಎಚ್ಚರಿಸಿದ ಬಳಿಕ ವಿಸ್ಟ್ರನ್ ಹೇಳಿಕೆ ಬಿಡುಗಡೆ ಮಾಡಿದೆ. ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳ ಹಾಗೂ ಹಾಜರಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಅಲ್ಲದೆ ಉದ್ಯೋಗಿಗಳ ಕುರಿತು ಯಾವುದೇ ವಿವರಣೆ ಇರಲಿಲ್ಲ. ಅಲ್ಲದೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಒತ್ತಡ ಹೇರಲಾಗಿತ್ತು. ಉದ್ಯೋಗಿಗಳ ಎಷ್ಟು ಗಂಟೆ ಕೆಲಸ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಸಂಗ್ರಹಿಸುವ ವ್ಯವಸ್ಥೆ ಸರಿಯಿಲ್ಲ. ಸರಿಯಾದ ಸಮಯಕ್ಕೆ ಸಂಬಳ ಪಾವತಿ ಆಗುತ್ತಿರಲಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

    ವಿಸ್ಟ್ರಾನ್ 2,850 ಕೋಟಿ ರೂ.ಗಳನ್ನು ಕೋಲಾರದ ಪ್ಲಾಂಟ್‍ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಇದರ ಒಟ್ಟು ಮೊತ್ತವನ್ನು 18,000 ಕೋಟಿ ರೂ.ಗೆ ಕ್ಕೆ ಹೆಚ್ಚಿಸಲು ಬದ್ಧವಾಗಿತ್ತು. ಇದು ಪ್ರಸ್ತುತ 10 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಂಡಿದೆ. ಸ್ಮಾರ್ಟ್‍ಫೋನ್‍ನಿಂದ ಐಒಟಿ ವಸ್ತುಗಳವರೆಗೆ ಹಾಗೂ ಬಯೋಟೆಕ್ ಡಿವೈಸ್‍ಗಳನ್ನು ಉತ್ಪಾದಿಸುವುದಾಗಿ ಸಂಸ್ಥೆ ಹೂಡಿಕೆ ಮಾಡಿದೆ.

    ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಆಪಲ್ ಕಂಪನಿ ತನಿಖೆ ನಡೆಸಲು ತನ್ನ ಭಾರತದ ಅಧಿಕಾರಿಗಳನ್ನು ಘಟಕಕ್ಕೆ ಕಳುಹಿಸಿಕೊಟ್ಟಿತ್ತು.

  • ಪ್ರತಿಭಟನೆಗೆ ಬಗ್ಗದ ಸರ್ಕಾರ, ನಾಳೆಯಿಂದ ರಸ್ತೆಗೆ ಇಳಿಯಲಿವೆ ಖಾಸಗಿ ಬಸ್‍ಗಳು

    ಪ್ರತಿಭಟನೆಗೆ ಬಗ್ಗದ ಸರ್ಕಾರ, ನಾಳೆಯಿಂದ ರಸ್ತೆಗೆ ಇಳಿಯಲಿವೆ ಖಾಸಗಿ ಬಸ್‍ಗಳು

    – ಸರ್ಕಾರಿ ದರದಲ್ಲಿ ಓಡಲಿದೆ ಖಾಸಗಿ ವಾಹನ

    ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಗೆ ಸರ್ಕಾರ ಮಣಿಯದೇ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲು ಮುಂದಾಗಿದೆ.

    ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ತಾರಕ್ಕೇರಿದ್ದು, ಇನ್ನೊಂದೆಡೆ ಪ್ರಯಾಣಿಕರು ಬಸ್ ಇಲ್ಲದೆ ಎರಡನೇ ದಿನವೂ ಪರದಾಟ ನಡೆಸಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ಸರ್ಕಾರ ಪರ್ಯಾಯ ಮಾರ್ಗದ ಮೊರೆ ಹೋಗಿದ್ದು, ಸರ್ಕಾರಿ ದರದಲ್ಲಿ ಖಾಸಗಿ ಬಸ್‍ಗಳನ್ನು ಓಡಿಸಲು ನಿರ್ಧರಿಸಿದೆ.

    ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಮಧ್ಯಮಗಳೊಂದಿಗೆ ಮಾತನಾಡಿದ್ದು, ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಲು ನಾನು ನಿನ್ನೆಯಿಂದಲೂ ಕಾಯುತ್ತಿದ್ದೇನೆ. ಆದರೆ ಯಾರೂ ನಮ್ಮ ಬಳಿ ಬಂದಿಲ್ಲ. ಹೋರಾಟವನ್ನು ಸಹ ಬಿಡುತ್ತಿಲ್ಲ. ಈಗಲೂ ನಾನು ಮಾತುಕತೆ ಸಿದ್ಧನಿದ್ದೇನೆ ರಾತ್ರಿ 12 ಗಂಟೆಯವರೆಗೆ ನಾನು ನೌಕರರು ಹಾಗೂ ಸಂಘಟನೆಯವರಿಗೆ ಲಭ್ಯವಿದ್ದೇನೆ. ಬನ್ನಿ ಮಾತನಾಡೋಣ ಎಂದಿದ್ದಾರೆ.

    ಇದೇ ವೇಳೆ ಪರ್ಯಾಯ ಮಾರ್ಗದ ಕುರಿತು ಅವರು ಮಾತನಾಡಿದ್ದು, ನಮಗೆ ಪ್ರಯಾಣಿಕರ ಹಿತ ಮುಖ್ಯ. ಸಾರಿಗೆ ನೌಕರರು ಪಟ್ಟು ಬಿಡದಿದ್ದರೆ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ನೌಕರರು ಇದಕ್ಕೆ ಆಸ್ಪದ ನೀಡಬಾರದು ಎಂದು ತಿಳಿಸಿದ್ದಾರೆ.

    ಅಧಿಕಾರಿಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ನಾಳೆ ಖಾಸಗಿ ವಾಹನಗಳನ್ನು ಬಳಸಿಕೊಂಡು ಸರ್ಕಾರಿ ದರದಲ್ಲಿ ಖಾಸಗಿ ವಾಹನಗಳನ್ನು ಓಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಾವು ಮಾಡಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಿದ್ದೇನೆ. ಈ ಕುರಿತು ಸಿಎಂ ಪ್ರಕಟಣೆಯನ್ನು ಸಹ ಹೊರಡಿಸಿದ್ದಾರೆ. ಗೃಹ ಸಚಿವರು ಸಹ ಮಾಹಿತಿ ನೀಡಿದ್ದಾರೆ ಎಂದರು.

    ಅಧಿಕಾರಿಗಳ ಜೊತೆ ನೌಕರರು ಹಾಗೂ ಸಂಘಟನೆಯವರನ್ನು ಮಾತನಾಡಿಸಿ, ಮಾತುಕತೆಗೆ ಆಹ್ವಾನಿಸಲು ಬೆಳಗ್ಗೆಯಿಂದ ಪ್ರಯತ್ನಿಸಿದರೂ ಅವರು ಬಂದು ನಮ್ಮ ನೊತೆ ಚರ್ಚೆ ನಡೆಸಲು ಸಿದ್ಧರಿಲ್ಲ. ಸಿಎಂ ಈ ಕುರಿತು ಸ್ಪಷ್ಟವಾಗಿ ಹೇಳಿದ್ದು ಪ್ರತಿಭಟನೆ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಕರೆದಿದ್ದಾರೆ.

    ನೋಟಿಸ್ ನೀಡಿ ಪ್ರತಿಭಟನೆ ಮಾಡಿದ್ದರೆ ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಕುಟುಂಬದ ಮಧ್ಯದ ಚರ್ಚೆಯನ್ನು ಹೊರಗಡೆ ತರಬಾರದು. ಪ್ರಯಾಣಿಕರು ನಮಗೆ ಶಾಪ ಹಾಕಬಾರದು. ನಿಮ್ಮೊಂದಿಗೆ ಚರ್ಚಿಸಲು ನಮಗೆ ಯಾವುದೇ ಮುಜುಗರವಿಲ್ಲ. ನಮ್ಮ ನೌಕರರು ಮಾತನಾಡಲು ಬರಬೇಕು. ನಿನ್ನೆ ಟ್ರೇಡ್ ಯೂನಿಯನ್‍ನವರ ಜೊತೆಗೆ ಸಹ ಚರ್ಚೆ ನಡೆಸಿದ್ದೇನೆ ಎಂದರು.

    ಸಾರಿಗೆ ಸಚಿವರು ನೌಕರರಿಗಾಗಿ ಕಾದಿದ್ದು, ಇಂದು ಸಾರಿಗೆ ನೌಕರರ ಜೊತೆ ಚರ್ಚೆಗೆ ಆಹ್ವಾನ ನೀಡಿದ್ದರು. ಮನೆಯಲ್ಲಿದ್ದುಕೊಂಡು ನೌಕರರಿಗಾಗಿ ಕಾಯುತ್ತಿದ್ದರು. ಖಾಸಗಿ ನಿವಾಸದಲ್ಲೇ ಕಾಲ ಕಳೆದಿದ್ದು, ತಮ್ಮೆಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ನೌಕರರಿಗೆ ಕಾದಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ನಿಗದಿಯಾಗಿದ್ದ ಸಭೆ ರದ್ದುಗೊಳಿಸಿ ಚರ್ಚೆಗೆ ಮುಂದಾಗಿದ್ದರು. ಆದರೆ ಸಭೆ ನಡೆದಿಲ್ಲ.

  • ಮಂಗಳೂರಲ್ಲಿ ಬಂದ್ ಇಲ್ಲ- ಬಸ್ ಸಂಚಾರ ಇದ್ದರೂ, ಪ್ರಯಾಣಿಕರಿಲ್ಲ

    ಮಂಗಳೂರಲ್ಲಿ ಬಂದ್ ಇಲ್ಲ- ಬಸ್ ಸಂಚಾರ ಇದ್ದರೂ, ಪ್ರಯಾಣಿಕರಿಲ್ಲ

    ಮಂಗಳೂರು: ರಾಜ್ಯದಾದ್ಯಂತ ಸಾರಿಗೆ ಇಲಾಖೆ ನೌಕರರ ಮುಷ್ಕರ ತಾರಕಕ್ಕೇರಿದ್ದು, ಬೇಡಿಕೆ ಈಡೇರಿಸುವ ವರೆಗೆ ಹೋರಾಟ ನಡೆಸುವುದಾಗಿ ಪಟ್ಟು ಹಿಡಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ಎಂದಿನಂತೆ ಮುಂದುವರಿದಿದ್ದು, ಪ್ರಯಾಣಿಕರು ಮಾತ್ರ ಬಸ್ ಹತ್ತುತ್ತಿಲ್ಲ.

    ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗದೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದು, ಕೆಎಸ್‍ಆರ್‍ಟಿಸಿಟಿ ಬಸ್ಸುಗಳು ಎಂದಿನಂತೆ ಸಂಚಾರ ನಡೆಸಿವೆ. ಆದರೆ ಪ್ರಯಾಣಿಕರು ಮಾತ್ರ ಹೊರಗೆ ಬರುತ್ತಿಲ್ಲ. ಹೀಗಾಗಿ ಕಡಿಮೆ ಜನ ಇದ್ದರೂ, ಬಸ್‍ಗಳು ಎಂದಿನಂತೆ ಸಂಚರಿಸುತ್ತಿವೆ.

    ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಬಸ್ ಸಂಚಾರ ನಡೆಸಿದೆ. ಆದರೆ ಹೊರ ಜಿಲ್ಲೆಗಳಿಂದ ಬರುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಪ್ರಯಾಣಿಕರಿಗೂ ಗೊಂದಲ ಸೃಷ್ಟಿಯಾಗಿದ್ದು, ಹೊರ ಜಿಲ್ಲೆಗೆ ಹೋದ ಬಳಿಕ ಸಮಸ್ಯೆಯಾಗಬಹುದೆಂದು ಕೆಲವು ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿಸಿದ್ದಾರೆ. ಬಸ್ ಗಳಲ್ಲಿ ಪ್ರಯಾಣಿಕರು ಕಡಿಮೆ ಇದ್ದರೂ ಎಲ್ಲ ಬಸ್ಸುಗಳು ಸಂಚರಿಸುತ್ತಿವೆ.

  • ನಾಳೆಯೂ ಬಸ್ ಬಂದ್ ಸಾಧ್ಯತೆ – ಬೇಡಿಕೆ ಈಡೇರುವವರೆಗೆ ಮುಷ್ಕರ

    ನಾಳೆಯೂ ಬಸ್ ಬಂದ್ ಸಾಧ್ಯತೆ – ಬೇಡಿಕೆ ಈಡೇರುವವರೆಗೆ ಮುಷ್ಕರ

    – ಬಸ್ ನಿಲ್ದಾಣದಲ್ಲೇ ಸಾರಿಗೆ ನೌಕರರ ಅಹೋರಾತ್ರಿ ಧರಣಿ

    ಬೆಂಗಳೂರು: ಸಾರಿಗೆ ಸಿಬ್ಬಂದಿ ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದ್ದು, ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‍ಗಳಿಲ್ಲದೆ ಜನ ರೋಸಿ ಹೋಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆಯೇ ನಾಳೆಯೂ ಬಸ್‍ಗಳು ರಸ್ತೆಗೆ ಇಳಿಯುವುದಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.

    ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮುಂದುವರಿದಿದ್ದು, ಬೇಡಿಕೆ ಈಡೇರಿಸುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ನೌಕರರೊಂದಿಗೆ ಸರ್ಕಾರ ಮಾತಕತೆಗೆ ಸಿದ್ಧವಿದೆ. ಸಂಘಟನೆ ಮುಖಂಡರು ಹಾಗೂ ಕಾರ್ಮಿಕರು ಮಾತುಕತೆಗೆ ಆಗಮಿಸಬೇಕು. ಹಠ ಹಿಡಿದು ಮುಷ್ಕರ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

    ಯಾವುದಕ್ಕೂ ಕ್ಯಾರೆ ಎನ್ನದ ನೌಕರರು ತಮ್ಮ ಹೋರಾಟವನ್ನು ಮುಂದುವರಿಸಿದ್ದು, ಪ್ರಯಾಣಿಕರು ಮೆಜೆಸ್ಟಿಕ್, ಯಶವಂತಪುರ, ಬಾಪೂಜಿ ನಗರ ಬಸ್ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‍ಗಾಗಿ ಪರದಾಡಿದ್ದಾರೆ. ಮತ್ತೊಂದೆಡೆ ಇದೇ ಸಂದರ್ಭದ ಲಾಭ ಪಡೆದ ಆಟೋ ಹಾಗೂ ಖಾಸಗಿ ವಾಹನದವರು ದುಪ್ಪಟ್ಟು ಬೆಲೆ ನಿಗದಿಪಡಿಸಿ ಪ್ರಯಾಣಿಕರಿಗೆ ಬರೆ ಎಳೆದಿದ್ದಾರೆ. ಆದರೆ ನೌಕರರು ಮಾತ್ರ ತಮ್ಮ ಬೇಡಿಕೆಯನ್ನು ಈಡೇರಿಸುವ ವೆರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ನಾಳೆಯೂ ಬಸ್‍ಗಳು ರಸ್ತೆಗೆ ಇಳಿಯುವುದು ಅನುಮಾನ ಎನ್ನಲಾಗಿದೆ.

    ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿಧಾನಸೌಧದಲ್ಲಿ ಸಿಎಂ ಜೊತೆ ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಬಿಎಂಟಿಸಿ ಎಂಡಿ, ಅಧ್ಯಕ್ಷರ ಜೊತೆ ಸಹ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಸಂಧಾನಕ್ಕೆ ಸರ್ಕಾರ ಸರ್ಕಸ್ ಮಾಡಿದ್ದಾರೆ. ಆದರೆ ಸರ್ಕಾರ-ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ರೈತರು ಭಾರತ್ ಬಂದ್‍ಗೆ ಕರೆಕೊಟ್ಟರು. ಇದೀಗ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗೆ ಸಾಲು ಸಾಲು ಬಂದ್‍ಗೆ ಜನ ಬೇಸತ್ತಿದ್ದು, ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿ, ರೋಗಿಗಳು ನಿಲ್ದಾಣಗಳದಲ್ಲೇ ನಿದ್ರೆಗೆ ಜಾರಿದ ಚಿತ್ರಣ ಕಂಡು ಬಂತು.

    ರಾಜ್ಯದ ಹಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ಸಹ ಮಾಡಿದ್ದು, ಸಂಚಾರ ಶುರು ಮಾಡಿದ್ದ ಬಸ್‍ಗಳ ಗಾಜುಗಳನ್ನು ಪುಡಿಪುಡಿ ಮಾಡಲಾಗಿದೆ. ಬಸ್ ಬಂದ್‍ನ ಲಾಭ ಪಡೆದ ಆಟೋ ಹಾಗೂ ಖಾಸಗಿ ವಾಹನಗಳು ಬಾಯಿಗೆ ಬಂದಷ್ಟು ಹಣ ಪೀಕಿದ್ದಾರೆ. ಖಾಸಗಿ ಬಸ್‍ಗಳು ಸಹ ಪ್ರಯಾಣಿಕರನ್ನು ಸುಲಿಗೆ ಮಾಡಿವೆ.

  • ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಿವಮೊಗ್ಗ: ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

    ನಗರದ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಬಂದ ದಿನದಿಂದ ಬಿಸಿಯೂಟ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ವೇತನ ನೀಡುವಂತೆ ಹಲವು ದಿನದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಲ್ಲದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.

    ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದಾದರೆ ಸರ್ಕಾರ ಏಕೆ ನಡೆಸುತ್ತೀರಾ? ಶಾಸಕರುಗಳನ್ನು ಖರೀದಿ ಮಾಡಲು ಹಣವಿದೆ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.

    ಇನ್ನಾದರೂ ಬಿಸಿಯೂಟ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಬಿಸಿಯೂಟದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.