Tag: EMI Payment

  • ಮಾರ್ಚ್‌ನಿಂದ ಮೂರು ತಿಂಗಳು ಇಎಂಐ ರಿಯಾಯಿತಿ

    ಮಾರ್ಚ್‌ನಿಂದ ಮೂರು ತಿಂಗಳು ಇಎಂಐ ರಿಯಾಯಿತಿ

    – ಸಾಲಗಾರರಿಗೆ ಬಿಗ್ ರಿಲೀಫ್ ಕೊಟ್ಟ ಆರ್‌ಬಿಐ

    ಮುಂಬೈ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದರಿಂದ ಸಾಮಾನ್ಯ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದರು. ಈ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದೆ.

    ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ದೇಶದಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರೆಪೋ ದರದಲ್ಲಿ ಶೇ. 0.75 ಕಡಿತಗೊಳಿಸಲಾಗಿದೆ. ಸಾಲದ ಅವಧಿಯ ಮರುಪಾವತಿಸಲು 3 ತಿಂಗಳ ಇಎಂಐ ಅನ್ನು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದರು. ಕ್ರೆಡಿಟ್ ಕಾರ್ಡ್ ಹೊರತು ಪಡಿಸಿ ಎಲ್ಲ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ.

    ಶಕ್ತಿಕಾಂತ ದಾಸ್ ಘೋಷಣೆಯ 4 ಅಂಶಗಳು:
    ಟರ್ಮ್ ಸಾಲದಿಂದ ವಿನಾಯಿತಿ:
    ಎಲ್ಲಾ ಬ್ಯಾಂಕುಗಳ ನಿಗದಿತ ಅವಧಿಯ ಸಾಲದ ಕಂತು ಪಾವತಿಸುವುದರಿಂದ 3 ತಿಂಗಳ ವಿನಾಯಿತಿ ನೀಡಲಾಗಿದೆ. ಷೇರು ಮಾರುಕಟ್ಟೆಯ ಕುಸಿತದಿಂದ ಬ್ಯಾಂಕ್ ಠೇವಣಿಗಳು ಪರಿಣಾಮ ಬೀರುವುದಿಲ್ಲ, ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಇಎಂಐ ವಿನಾಯಿತಿ ಅಂದರೆ ಮನ್ನಾ ಅಲ್ಲ. ಮೂರು ತಿಂಗಳ ನಂತರ ಬಾಕಿ ಉಳಿಸಿಕೊಂಡ ಹಣವನ್ನು ನಿಗದಿತ ಕಂತುಗಳಲ್ಲಿ ಗ್ರಾಹಕರು ಪಾವತಿಸಬೇಕಾಗುತ್ತದೆ‌.

    ರೆಪೋ ದರ ಕಡಿಮೆ:
    ರೆಪೋ ದರವು ಈಗ ಶೇ.5.15ರಿಂದ ಶೇ.4.4ಕ್ಕೆ ಇಳಿದಿದೆ. ಇದು ಎಲ್ಲಾ ರೀತಿಯ ಸಾಲಗಳನ್ನು ಅಗ್ಗವಾಗಿಸುತ್ತದೆ. ವಿತ್ತೀಯ ನೀತಿ ಸಮಿತಿಯ 6 ಸದಸ್ಯರಲ್ಲಿ 4 ಮಂದಿ ದರ ಕಡಿತದ ಪರವಾಗಿ ಮತ ಚಲಾಯಿಸಿದ್ದಾರೆ. ಕೋವಿಡ್ -19 ಕಾರಣ, ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಕೋವಿಡ್ -19 ರ ಪರಿಣಾಮವು ತಿಳಿಯುವುದಿಲ್ಲ. ಆದಾಗ್ಯೂ ಕಡಿಮೆ ಕಚ್ಚಾ ಬೆಲೆಗಳು ಸ್ವಲ್ಪ ಪರಿಹಾರವನ್ನು ನೀಡುತ್ತದೆ.

    ಸಿಆರ್‌ಆರ್‌ ಕೂಡ ಕಡಿಮೆ:
    ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ.1ರಿಂದ ಶೇ.3ಕ್ಕೆ ಇಳಿದಿದೆ. ಸಿಆರ್‍ಆರ್ ಕಡಿಮೆಯಾಗುವುದರೊಂದಿಗೆ, ಬ್ಯಾಂಕುಗಳು ಹೆಚ್ಚಿನ ಹಣವನ್ನು ಹೊಂದಿರುತ್ತವೆ. ಆರ್‌ಬಿಐ ಕೈಗೊಂಡ ಕ್ರಮಗಳು ವ್ಯವಸ್ಥೆಯಲ್ಲಿ 3.74 ಲಕ್ಷ ಕೋಟಿ ರೂ. ಸಿಗಲಿದ್ದು, ಎಲ್ಲಾ ಬ್ಯಾಂಕುಗಳು ನಿಗದಿತ ಅವಧಿಯ ಸಾಲದ ಕಂತು ಪಾವತಿಸುವುದರಿಂದ 3 ತಿಂಗಳ ವಿನಾಯಿತಿ ಸಿಗುತ್ತದೆ.

    ಸರ್ಕಾರ ಹಲವಾರು ಕ್ರಮಗಳು:
    ಸರ್ಕಾರದ ಎಲ್ಲಾ ನಿಯಮಗಳು ಮತ್ತು ಸಲಹೆಗಳನ್ನು ಅನುಸರಿಸಿದರೆ ನೀವು ಕೋವಿಡ್-19 ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ವ್ಯವಸ್ಥೆಯಲ್ಲಿ ಹಣದ ಕೊರತೆಯಿಲ್ಲ. ಅಗತ್ಯವಿರುವವರಿಗೆ ಹಣವನ್ನು ಒದಗಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಂಪೂರ್ಣ ಗಮನ ಹರಿಸಬೇಕು ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

    1.70 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. ಇದರಲ್ಲಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಪರಿಹಾರ ಘೋಷಿಸಲಾಯಿತು. ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದು ಆರ್ಥಿಕತೆ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಿದೆ.

    ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.