Tag: Ellyse Perry

  • ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ RCBಗೆ ಸೋಲು – WPL 2ನೇ ಆವೃತ್ತಿಯಲ್ಲಿ ಗುಜರಾತ್‌ಗೆ ಚೊಚ್ಚಲ ಜಯ

    ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ RCBಗೆ ಸೋಲು – WPL 2ನೇ ಆವೃತ್ತಿಯಲ್ಲಿ ಗುಜರಾತ್‌ಗೆ ಚೊಚ್ಚಲ ಜಯ

    – ಜಾರ್ಜಿಯಾ ವೇರ್ಹ್ಯಾಮ್ ಸ್ಫೋಟಕ ಬ್ಯಾಟಿಂಗ್‌ ವ್ಯರ್ಥ

    ನವದೆಹಲಿ: ಕಳಪೆ ಬೌಲಿಂಗ್‌, ಅಗ್ರ‌ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡದ ವಿರುದ್ಧ ಸೋಲನುಭವಿಸಿದೆ. ಆದ್ರೆ ಕಳೆದ 4 ಪಂದ್ಯಗಳಲ್ಲೂ ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್‌ ತಂಡ 19 ರನ್‌ಗಳ ಜಯ ಸಾಧಿಸಿ, WPLನ 2ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 199 ರನ್‌ ಬಾರಿಸಿತು. 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಸ್ಫೋಟಕ ಪ್ರದರ್ಶನ ನೀಡುವ ಉತ್ಸಾಹದಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ಕೈಚೆಲ್ಲಿದರು. ಆರಂಭಿಕ ಆಟಗಾರ್ತಿ ಸಬ್ಬಿನೇನಿ ಮೇಘನಾ 4 ರನ್‌ಗಳಿಗೆ ಕೈಕೊಟ್ಟರೆ, ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ತಲಾ 24 ರನ್‌, ಸೋಫಿ ಡಿವೈನ್‌ 23 ರನ್‌, ರಿಚಾ ಘೋಷ್‌ 30 ರನ್‌ ಗಳಿಸಿದ್ದರು. ಕೊನೆಯಲ್ಲಿ ಆರ್ಭಟಿಸಿದ ಜಾರ್ಜಿಯಾ ವೇರ್ಹ್ಯಾಮ್ 21‌ ಎಸೆತಗಳಲ್ಲಿ 48 ರನ್‌ ಸಿಡಿಸಿ, ಗೆಲುವಿನ ಭರವಸೆ ಮೋಡಿಸಿದ್ದರು. ಅಷ್ಟರಲ್ಲಿ 22ನೇ ಎಸೆತದಲ್ಲೇ ರನೌಟ್‌ಗೆ ತುತ್ತಾದರು. ಇದರೊಂದಿಗೆ ಆರ್‌ಸಿಬಿ ಗೆಲುವಿನ ಕನಸು ಮಣ್ಣುಪಾಲಾಯಿತು. ಸೋಫಿ ಮೊಲಿನೆಕ್ಸ್ 3 ರನ್‌ ಗಳಿಸಿದ್ರೆ ಸಿಮ್ರನ್‌ ಬಹದ್ದೂರ್‌ 1 ರನ್‌ , ಏಕ್ತಾ ಬಿಷ್ತ್ 12 ರನ್‌ ಗಳಿಸಿ ಔಟಾದರು. ಅಂತಿಮವಾಗಿ ಆರ್‌ಸಿಬಿ 180 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಗುಜರಾತ್‌ ತಂಡ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ ಜೋಡಿ 13 ಓವರ್‌ಗಳಲ್ಲಿ 140 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಲಾರಾ 5 ಎಸೆತಗಳಲ್ಲಿ ಸ್ಫೋಟಕ 76 ರನ್‌ (13 ಬೌಂಡರಿ) ಸಿಡಿಸಿ ರನೌಟ್‌ಗೆ ತುತ್ತಾದರೆ, ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದ ಬೆತ್‌ ಮೂನಿ 51 ಎಸೆತಗಳಲ್ಲಿ 85 ರನ್‌ (12 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಇನ್ನುಳಿದಂತೆ ಫೋಬೆ ಲಿಚ್‌ಫೀಲ್ಡ್ 18 ರನ್‌ ಗಳಿಸಿದ್ರೆ, ದಯಾಳನ್ ಹೇಮಲತಾ, ವೇದಾ ಕೃಷ್ಣಮೂರ್ತಿ ಮತ್ತು ಕ್ಯಾಥರಿನ್ ಬ್ರೈಸ್ ತಲಾ ಒಂದೊಂದು ರನ್‌ ಗಳಿಸಿದರು.

    ಆರ್‌ಸಿಬಿ ಪರ ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಒಂದೊಂದು ವಿಕೆಟ್‌ ಕಿತ್ತರು.

  • WPL 2024 – ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ

    WPL 2024 – ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ 23 ರನ್‌ಗಳ ಭರ್ಜರಿ ಜಯ ಗಳಿಸಿದೆ.

    ಆರ್‌ಸಿಬಿ ನೀಡಿದ್ದ 199 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್‌ಗೆ 20 ಓವರ್‌ಗಳಲ್ಲಿ 175 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದನ್ನೂ ಓದಿ: ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಉತ್ತರಪ್ರದೇಶದ ಪರ ಅಲಿಸ್ಸಾ ಹೀಲಿ 38 ಎಸೆತಗಳಿಗೆ 7 ಫೋರ್‌ ಹಾಗೂ 3 ಸಿಕ್ಸ್‌ ಸೇರಿ 55 ರನ್‌ಗಳಿಸಿದರು. ಕಿರಣ್‌ ನವಿಗೆರೆ 11 ಎಸೆತಗಳಿಗೆ 18 ರನ್‌ ಕಲೆಹಾಕಿದರು. ಉಳಿದಂತೆ ಚಾಮರಿ ಅಥಾಪತ್ತು 8, ಗ್ರೇಸ್‌ ಹ್ಯಾರೀಸ್‌ 5, ಶ್ವೇತಾ ಶೆರಾವತ್‌ 1, ದೀಪ್ತಿ ಶರ್ಮಾ 33, ಪೂನಮ್‌ ಕೆಮ್ನಾರ್‌ 31, ಸೋಫಿ ಎಕ್ಲೆಸ್ಟೋನ್ 4 ಹಾಗೂ ಅಂಜಲಿ ಸರ್ವಾಣಿ 3 ರನ್‌ ಗಳಿಸಿದರು.

    ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದ ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿತ್ತು. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

  • ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ 198 ರನ್ ಗಳಿಸಿದೆ. ಇದು ಈ ಆವೃತ್ತಿಯಲ್ಲಿ ತಂಡವೊಂದು ಬ್ಯಾಟಿಂಗ್‌ನಲ್ಲಿ ಗಳಿಸಿದ ಅಧಿಕ ಸ್ಕೋರ್ ಆಗಿದೆ.

    ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿವಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

    ಟಾಸ್ ಸೋತೊ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಅಗ್ರಕ್ರಮಾಂಕದ ಬ್ಯಾಟರ್‌ಗಳು ಹೊಡಿಬಡಿ ಆಟಕ್ಕೆ ಮುಂದಾದರು. ಮೊದಲ ವಿಕೆಟ್‌ಗೆ ಸಬ್ಬಿನೇನಿ ಮೇಘನಾ ಮತ್ತು ಸ್ಮೃತಿ ಮಂಧಾನ ಜೋಡಿ 5.3 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಮಂಧಾನ ಮತ್ತು ಎಲ್ಲಿಸ್ ಪರ‍್ರಿ 64 ಎಸೆತಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿದರು. ಕೊನೆಯಲ್ಲಿ ಸ್ಫೋಟಕ ಪ್ರದರ್ಶನದೊಂದಿಗೆ ಪರ‍್ರಿ ಹಾಗೂ ರಿಚಾ ಘೋಷ್ ಜೋಡಿ ಕೇವಲ 18 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇದನ್ನೂ ಓದಿ: ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್‌ – ಸಿಎಸ್‌ಕೆಗೆ ಭಾರೀ ಆಘಾತ

    ಆರಂಭದಿಂದಲೇ ಯುಪಿ ವಾರಿಯರ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಆರ್‌ಸಿಬಿ ಮಹಿಳಾ ಬ್ಯಾರ್‌ಗಳು ಅಭಿಮಾನಿಗಳಿಗೆ ರಸದೌತಣ ನೀಡಿದರು. 160 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 80 ರನ್ (3 ಸಿಕ್ಸರ್, 10 ಬೌಂಡರಿ) ಚಚ್ಚಿದರೆ, ಎಲ್ಲಿಸ್ ಪರ‍್ರಿ 58 ರನ್ (37 ಎಸೆತ, 4 ಬೌಂಡರಿ, 4 ಸಿಕ್ಸರ್), ಮೇಘನಾ 28 ರನ್ (21 ಎಸೆತ, 5 ಬೌಂಡರಿ), ರಿಚಾ ಘೋಷ್ 21 ರನ್ (10 ಎಸೆತ, 2 ಬೌಂಡರಿ, 1 ಸಿಕ್ಸರ್), ಸೋಫಿ ಡಿವೈನ್ 2 ರನ್ ಗಳಿಸಿದರು.

    ಯುಪಿ ವಾರಿಯರ್ಸ್ ಪರ ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ಸೋಫಿ ಎಕ್ಲಿಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

  • WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

    WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

    – ಬ್ಯಾಟಿಂಗ್‌ನಲ್ಲಿ ಕೈಕೊಟ್ಟ ಮಂಧಾನ, ಸೋಭಾನ ಆಶಾ ಸ್ಪಿನ್‌ ಜಾದು

    ಬೆಂಗಳೂರು: ಸೋಭಾನ ಆಶಾ (Sobhana Asha) ಸ್ಪಿನ್‌ ಜಾದು ಹಾಗೂ ರಿಚಾ ಘೋಷ್‌, ಮೇಘನಾ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯುಪಿ ವಾರಿಯರ್ಸ್‌ (UP Warriorz) ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿತು. ಮೊದಲ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದ ಆರ್‌ಸಿಬಿ (RCB) ತಂಡ ಈ ಬಾರಿ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.

    ಕೊನೆಯ ಓವರ್‌ನಲ್ಲಿ‌ ಯುಪಿ ವಾರಿಯರ್ಸ್‌ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಸೋಫಿ ಎಕ್ಲೆಸ್ಟೋನ್‌ ಹಾಗೂ ದೀಪ್ತಿ ಶರ್ಮಾ ಜೋಡಿ ಮೊದಲ 4 ಎಸೆತಗಳಲ್ಲಿ ಕೇವಲ 2 ರನ್‌ ಕಲೆಹಾಕಿತು. 5ನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಂಡರಿ ಬಾರಿಸಿದರು. ಕೊನೇ ಎಸೆತದಲ್ಲಿ 5 ರನ್‌ ಅಗತ್ಯವಿದ್ದಾಗ ಸೂಪರ್‌ ಓವರ್‌ ನಿರೀಕ್ಷಿಸಲಾಗಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸೋಫಿ ಮೊಲಿನೆಕ್ಸ್ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರಿಂದ ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತ್ತು. 158 ರನ್‌ಗಳ ಗುರಿ ಬೆನ್ನತ್ತಿದ ಯುಪಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸಾಧಾರಣ ಮೊತ್ತದ ಚೇಸಿಂಗ್‌ ಆರಂಭಿಸಿದ ಯುಪಿ ವಾರಿಯರ್ಸ್‌ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿತ್ತಲ್ಲದೇ 8.3 ಓವರ್‌ಗಳಲ್ಲೇ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್ ಜೋಡಿ 46 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಸ್ಪಿನ್‌ ದಾಳಿ ನಡೆಸಿದ ಸೋಭಾನ ಆಶಾ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದ್ರು. ಗ್ರೇಸ್‌ ಹ್ಯಾರಿಸ್‌ 38 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ, ಸೆಹ್ರಾವತ್‌ ಸಹ ವಿಕೆಟ್‌ ಕೈಚೆಲ್ಲಿದರು. ಆ ನಂತರ ಗೆಲುವು ಆರ್‌ಸಿಬಿಯತ್ತ ವಾಲಿತು.

    ಅಲಿಸ್ಸಾ ಹೀಲಿ 5 ರನ್‌, ದಿನೇಶ್ ವೃಂದಾ 18 ರನ್‌, ತಹ್ಲಿಯಾ ಮೆಕ್‌ಗ್ರಾತ್ 22, ಕಿರಾನ್ ನವಗಿರೆ 1, ಪೂನಂ ಖೇಮ್ನಾರ್ 14 ರನ್‌, ದೀಪ್ತಿ ಶರ್ಮಾ 13 ರನ್‌ ಗಳಿಸಿದ್ರೆ ಸೋಫಿ ಎಕ್ಲೆಸ್ಟೋನ್ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಆರ್‌ಸಿಬಿ ಪರ ಸೋಭಾನಾ ಆಶಾ 4 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬವಾಗಿತ್ತು. ಪುರುಷ ಕ್ರೀಡಾಕೂಟಕ್ಕೂ ಕಮ್ಮಿಇಲ್ಲವೆನ್ನುವಂತೆ ಅಭಿಮಾನಿಗಳು ಮೈದಾನದಲ್ಲಿ ತುಂಬಿ ತುಳುಕಿದ್ದರು. ಪ್ರತಿಯೊಂದು ಕ್ಷಣದಲ್ಲೂ ಆರ್‌ಸಿಬಿ, ಆರ್‌ಸಿಬಿ ಉದ್ಘೋಷ ಕೂಗುತ್ತಾ ಕಣದಲ್ಲಿದ್ದ ಆಟಗಾರ್ತಿಯರನ್ನು ಹುರಿದುಂಬಿಸಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಆರ್‌ಸಿಬಿ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ನಿಧಾನಗತಿ ಬ್ಯಾಟಿಂಗ್‌ ಆರಂಭಿಸುವ ಜೊತೆಗೆ 75. ಓವರ್‌ಗಳಲ್ಲಿ 54 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಚಾ ಘೋಷ್‌ ಹಾಗೂ ಸಬ್ಬಿನೇನಿ ಮೇಘನಾ 50 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾದರು.

    ಸ್ಫೋಟಕ ಬ್ಯಾಟಿಂಗ್‌ ಮಾಡಿರ ರಿಚಾ ಘೋಷ್‌ 37 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 62 ರನ್‌ ಬಾರಿಸಿದ್ರೆ, ಮೇಘನಾ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 53 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಇನ್ನುಳಿದಂತೆ ಸೋಫಿ ಡಿವೈನ್ 1 ರನ್‌, ಸ್ಮೃತಿ ಮಂಧಾನ 13 ರನ್‌, ಎಲ್ಲಿಸ್ ಪೆರ್ರಿ 8 ರನ್‌, ಫಿ ಮೊಲಿನೆಕ್ಸ್ 9 ರನ್‌ ಹಾಗೂ ಶ್ರೇಯಾಂಕ ಪಾಟೀಲ್ 8 ರನ್‌ ಗಳಿಸಿದರು.

    ಯುಪಿ ವಾರಿಯರ್ಸ್‌ ಪರ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್‌ ಕಿತ್ತರೆ, ಗ್ರೇಸ್ ಹ್ಯಾರಿಸ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಎಕ್ಲೆಸ್ಟೋನ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • RCB ಸ್ಟಾರ್‌ ಎಲ್ಲಿಸ್‌ ಪೆರ್ರಿ, ಮಿಚೆಲ್‌ ಮಾರ್ಷ್‌ ಸೇರಿದಂತೆ ಹಲವರಿಗೆ Cricketer Of The year-2023 ಪ್ರಶಸ್ತಿ

    RCB ಸ್ಟಾರ್‌ ಎಲ್ಲಿಸ್‌ ಪೆರ್ರಿ, ಮಿಚೆಲ್‌ ಮಾರ್ಷ್‌ ಸೇರಿದಂತೆ ಹಲವರಿಗೆ Cricketer Of The year-2023 ಪ್ರಶಸ್ತಿ

    ಮೆಲ್ಬರ್ನ್‌: 2023ರ ಕ್ಯಾಲೆಂಡರ್‌ ವರ್ಷದಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಎಲ್ಲಿಸ್ ಪೆರ್ರಿ (Ellyse Perry) ಹಾಗೂ ಆಸ್ಟ್ರೇಲಿಯಾ ಪುರುಷರ ತಂಡದ ಸ್ಟಾರ್‌ ಆಟಗಾರ ಮಿಚೆಲ್‌ ಮಾರ್ಷ್‌ (Mitchell Marsh) ಸೇರಿದಂತೆ ಹಲವರಿಗೆ ʻಕ್ರಿಕೆಟರ್‌ ಆಫ್‌ ದಿ ಇಯರ್‌-2023ʼಪ್ರಶಸ್ತಿ ಲಭಿಸಿದೆ.

    ಮೆಲ್ಬರ್ನ್‌ನಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಂಮಾರಂಭದಲ್ಲಿ 2023ರ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಹಲವು ಕ್ರಿಕೆಟಿಗರಿಗೆ ವಾರ್ಷಿಕ ಪ್ರಶಸ್ತಿಗಳನ್ನ ವಿತರಿಸಲಾಯಿತು. ಕಳೆದ ವರ್ಷ ಆಸೀಸ್‌ ತಂಡವು ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಹಾಗೂ 2023ರ ಏಕದಿನ ವಿಶ್ವಕಪ್‌ (ODI World Cup) ಟೂರ್ನಿಯಲ್ಲಿ ಭಾರತ ತಂಡವನ್ನು ಸೋಲಿಸಿತ್ತು. ಅಲ್ಲದೇ ಆಶಸ್‌ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ 2-2 ಅಂತರದಲ್ಲಿ ಗೆದ್ದು ಸಮಬಲ ಸಾಧಿಸಿತು. ಈ ಎಲ್ಲ ಟೂರ್ನಿಗಳು ಸೇರಿದಂತೆ ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಮಿಚೆಲ್‌ ಮಾರ್ಷ್‌ಗೆ ವರ್ಷದ ಕ್ರಿಕೆಟಿಗ (Cricketer Of The year) ಪ್ರಶಸ್ತಿ ನೀಡಲಾಯಿತು. ಇದನ್ನೂ ಓದಿ: ಬೆಂಗಳೂರಿಗೆ ‌ಮಯಾಂಕ್‌ ವಾಪಸ್-‌ ಮಾತನಾಡಲು ಆಗ್ತಿಲ್ಲವೆಂದ ಕ್ರಿಕೆಟಿಗ!

    ಅಲ್ಲದೇ ಮಿಚೆಲ್ ಮಾರ್ಷ್, ಆಸೀಸ್‌ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್ ಕಮಿನ್ಸ್, ಅಗ್ರ ಕ್ರಮಾಂಕದ ಬ್ಯಾಟರ್‌ ಸ್ಟೀವ್‌ ಸ್ಮಿತ್ ಅವರಿಗೆ ಅಲನ್ ಬಾರ್ಡರ್ ಪದಕ ನೀಡಿ ಗೌರವಿಸಲಾಯಿತು. ಇನ್ನೂ 26 ವರ್ಷದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಆಶ್ಲೀಗ್ ಗಾರ್ಡ್ನರ್‌ ʻಬೆಲಿಂಡಾ ಕ್ಲಾರ್ಕ್ʼ ಪ್ರಶಸ್ತಿಗೆ (ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟ್‌ ಆಟಗಾರ್ತಿ) ಪಾತ್ರರಾದರು. ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿಯೂ ಆಗಿರುವ ಎಲ್ಲಿಸ್‌ ಪೆರ್ರಿಗೆ ಮಹಿಳಾ ವಿಭಾಗದ T20I ಕ್ರಿಕೆಟ್‌ನಲ್ಲಿ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ನೀಡಲಾಯಿತು. ಇದನ್ನೂ ಓದಿ: ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ

    ಯಾರಿಗೆಲ್ಲ ಪ್ರಶಸ್ತಿ?
    * ಅಲನ್ ಬಾರ್ಡರ್ ಪದಕ: ಮಿಚೆಲ್ ಮಾರ್ಷ್
    * ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ: ಆಶ್ಲೀ ಗಾರ್ಡ್ನರ್
    * ಶೇನ್ ವಾರ್ನ್ ವರ್ಷದ ಪುರುಷರ ಟೆಸ್ಟ್ ಆಟಗಾರ: ನಾಥನ್ ಲಿಯಾನ್
    * ಪುರುಷರ ODI ವರ್ಷದ ಆಟಗಾರ: ಮಿಚೆಲ್ ಮಾರ್ಷ್
    * ವರ್ಷದ ಮಹಿಳಾ ODI ಆಟಗಾರ್ತಿ: ಎಲ್ಲಿಸ್ ಪೆರ್ರಿ
    * ಪುರುಷರ T20I ವರ್ಷದ ಆಟಗಾರ: ಜೇಸನ್ ಬೆಹ್ರೆಂಡಾರ್ಫ್
    * ಮಹಿಳಾ T20I ವರ್ಷದ ಆಟಗಾರ್ತಿ: ಎಲ್ಲಿಸ್ ಪೆರ್ರಿ
    * BBL ಟೂರ್ನಿ ಆಟಗಾರ: ಮ್ಯಾಟ್ ಶಾರ್ಟ್ (ಅಡಿಲೇಡ್ ಸ್ಟ್ರೈಕರ್ಸ್)
    * WBBL ಟೂರ್ನಿ ಆಟಗಾರ್ತಿ: ಚಾಮರಿ ಅಥಾಪತ್ತು (ಸಿಡ್ನಿ ಥಂಡರ್)
    * ವರ್ಷದ ಪುರುಷರ ದೇಶೀಯ ಕ್ರಿಕೆಟಿಗ: ಕ್ಯಾಮೆರಾನ್ ಬ್ಯಾಂಕ್ರಾಫ್ಟ್
    * ವರ್ಷದ ಮಹಿಳಾ ದೇಶೀಯ ಕ್ರಿಕೆಟಿಗ: ಸೋಫಿ ಡೇ ಮತ್ತು ಎಲಿಸ್ ವಿಲ್ಲಾನಿ
    * ಡಾನ್ ಬ್ರಾಡ್ಮನ್ ವರ್ಷದ ಯುವ ಕ್ರಿಕೆಟಿಗ: ಫರ್ಗುಸ್ ಓ’ನೀಲ್
    * ಬೆಟ್ಟಿ ವಿಲ್ಸನ್ ವರ್ಷದ ಯುವ ಕ್ರಿಕೆಟಿಗ: ಎಮ್ಮಾ ಡಿ ಬ್ರೌಗ್

  • WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    ಮುಂಬೈ: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಕೊನೆಯ ಪಂದ್ಯವಾಡಿದ ಆರ್‌ಸಿಬಿ ಸೋಲಿನೊಂದಿಗೆ ವಿದಾಯ ಹೇಳಿದೆ. ಇದನ್ನೂ ಓದಿ: WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ (Smriti Mandhana) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. 126 ರನ್‌ಗಳ ಗುರಿ ಪಡೆದ ಎದುರಾಳಿ ಮುಂಬೈ ತಂಡವು 16.3 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 129 ರನ್ ಚಚ್ಚಿ ಮತ್ತೆ ಅಗ್ರಸ್ಥಾನಕ್ಕೇರಿತು.  ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥಿವ್ಸ್ 17 ಎಸೆತಗಳಲ್ಲಿ 24 ರನ್ ಗಳಿಸಿದರೆ, ಯಸ್ತಿಕಾ ಭಾಟಿಯಾ 26 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಮಧ್ಯಂತರದಲ್ಲಿ ನಾಟ್ ಸ್ಕಿವರ್ ಬ್ರಂಟ್ (13 ರನ್), ನಾಯಕಿ ಹರ್ಮನ್ ಪ್ರೀತ್‌ಕೌರ್ (2 ರನ್) (Harmanpreet Kaur) ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೀಡಾಯಿತು. ನಂತರ ಕ್ರೀಸ್‌ಗಿಳಿದ ಅಮೇಲಿ ಕೇರ್ 27 ಎಸತೆಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 31 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 19 ರನ್ ಗಳಿಸಿ ತಂಡಕ್ಕೆ ನೆರವಾದರು.

    ಆರ್‌ಸಿಬಿ ಪರ ಮೇಗನ್ ಶುಟ್, ಶ್ರೇಯಾಂಕ ಪಾಟೀಲ್, ಎಲ್ಲಿಸ್ ಪರ‍್ರಿ, ಸೋಭಾನಾ ಆಶಾ ತಲಾ ಒಂದೊಂದು ವಿಕೆಟ್ ಪಡೆದರೆ, ಕನಿಕಾ ಅಹುಜಾ 2 ವಿಕೆಟ್ ಕಿತ್ತರು.

    ಇದಕ್ಕೂ ಮುನ್ನ ಆರ್‌ಸಿಬಿ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ, ಸೋಫಿ ಡಿವೈನ್ ಕೊನೆಯ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಮೊದಲ ಓವರ್‌ನ 3ನೇ ಎಸೆತದಲ್ಲಿ ರನ್ ಕದಿಯಲು ಯತ್ನಿಸಿ ಸೋಫಿ ಡಿವೈನ್ ರನೌಟ್‌ಗೆ ತುತ್ತಾದರು. ನಂತರ ಬಂದ ಎಲ್ಲಿಸ್ ಪರ‍್ರಿ 38 ಎಸೆತಗಳಲ್ಲಿ 29 ರನ್ ಗಳಿಸಿದರೆ, ನಾಯಕಿ ಸ್ಮೃತಿ ಮಂದಾನ 25 ಎಸೆತಗಳಲ್ಲಿ 24 ರನ್ ಬಾರಿಸಿ ಔಟಾದರು. ಹೀದರ್ ನೈಟ್ 12 ರನ್, ಕನಿಕಾ ಅಹುಜಾ 12 ರನ್ ಮತ್ತು ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಯಿತು.

    ಮುಂಬೈ ಪರ ಬೌಲಿಂಗ್‌ನಲ್ಲಿ ಅಮೆಲಿಯಾ ಕೆರ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ನಾಟ್ ಸೀವರ್-ಬ್ರಂಟ್, ಇಸ್ಸಿ ವಾಂಗ್ ತಲಾ 2 ವಿಕೆಟ್ ಹಾಗೂ ಸೈಕ್ ಇಶಾಕ್ 1 ವಿಕೆಟ್ ಪಡೆದು ಮಿಂಚಿದರು.

    ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ:
    ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ 5 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ಆರ್‌ಸಿಬಿ 6, 7ನೇ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡಿತ್ತು. ಆದರೆ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಯುಪಿ ವಾರಿಯರ್ಸ್ ತಂಡ 7ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ದಾಖಲಿಸಿದ ನಂತರ ಆರ್‌ಸಿಬಿ ಪ್ಲೆ ಆಫ್ ಕನಸು ಭಗ್ನಗೊಂಡಿತು. ಕೊನೆಯ ಪಂದ್ಯದಲ್ಲೂ ಹೀನಾಯವಾಗಿ ಸೋತು ಅಭಿಮಾನಿಗಳಿಗೆ ಭಾರೀ ನಿರಾಸೆ ತರಿಸಿತು.

  • ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

    ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

    – ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್

    ಮುಂಬೈ: ಸತತ ಸೋಲಿನಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮೊದಲ ಗೆಲುವು ದಾಖಲಿಸಿದೆ.

    ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ಯುಪಿ ವಾರಿಯರ್ಸ್ (UP Warriorz) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಗೆಲುವಿನ ನಗೆ ಬೀರಿದೆ. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

    ಪಂದ್ಯದ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ (Smriti Mandhana), ಕೊಹ್ಲಿ (Virat Kohli) ಅಣ್ಣನ ಸಲಹೆಗಳು ಗೆಲುವಿಗೆ ತುಂಬಾ ಸಹಾಯವಾಯಿತು. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ತಂಡದೊಂದಿಗೆ ಮಾತನಾಡಿದ್ದರು. ತಮ್ಮ 15 ವರ್ಷದ ಅನುಭವ ಹಂಚಿಕೊಳ್ಳುತ್ತಾ ನಮ್ಮಲ್ಲಿ ಉತ್ಸಾಹ ತುಂಬಿದರು. ಇದರೊಂದಿಗೆ ಆರ್‌ಸಿಬಿ ತಂಡದ ಪ್ರತಿಯೊಬ್ಬರ ಆಲ್‌ರೌಂಡ್ ಪ್ರದರ್ಶನವೂ ಗೆಲುವಿಗೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.

    ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ 19.3 ಓವರ್‌ಗಳಲ್ಲಿ 135 ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 136 ರನ್‌ಗಳ ಗುರಿ ಪಡೆದ ಆರ್‌ಸಿಬಿ, 18 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೆಲುವು ಸಾಧಿಸಿತು. ಕನಿಕಾ ಅಹುಜಾ 46 ರನ್, ರಿಚಾ ಘೋಷ್ 31 ರನ್ ಹಾಗೂ ಹೀದರ್ ನೈಟ್ 24 ರನ್ ಚಚ್ಚಿ ತಂಡದ ಗೆಲುವಿಗೆ ನೆರವಾದರು.

    ಆಲ್‌ರೌಂಡರ್ ಎಲ್ಲಿಸ್ ಪರ‍್ರಿ (Ellyse Perry) 4 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಕಿತ್ತರು. ಸೋಫಿ ಡಿವೈನ್, ಸೋಭಾನಾ ಆಶಾ ತಲಾ 2 ವಿಕೆಟ್ ಪಡೆದರೆ, ಮೆಗ್ ಶೂಟ್ ಹಾಗೂ ಶ್ರೇಯಾಂಕ ಪಾಟೀಲ್ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

    ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಆರ್‌ಸಿಬಿ ಮೊದಲ ಗೆಲುವಿನ ಬಳಿಕ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಾಯಕಿ ಸ್ಮೃತಿ ಮಂದಾನ ಮುಖದಲ್ಲೂ ಮಂದಹಾಸ ಮೂಡಿದೆ.

  • ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

    ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL 2023) ಸತತ 5 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಆರ್‌ಸಿಬಿ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸೋಮವಾರ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ್ದು, ಆರ್‌ಸಿಬಿ (RCB) ತಂಡದ ಗೆಲುವಿನ ಕನಸಿಗೆ ತಣ್ಣೀರು ಎರಚಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 150 ರನ್‌ ಗಳಿಸಿತ್ತು. 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.4 ಓವರ್‌ಗಳಲ್ಲಿ 154 ರನ್‌ ಬಾರಿಸಿ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ಡೆಲ್ಲಿ ತಂಡದ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್‌ ತಂಡಕ್ಕೆ ಸೇರ್ಪಡೆಯಾಯಿತು. ನಂತರ ಕ್ರೀಸ್‌ನಲ್ಲಿ ಉಳಿದ ಜೆಸ್‌ ಜೋನಾಸೆನ್‌ 3ನೇ ಎಸೆತವನ್ನು ಸಿಕ್ಸ್‌ಗೆ, 4ನೇ ಎಸೆತವನ್ನು ಬೌಂಡರಿಗಟ್ಟಿ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಂಡವನ್ನು ಗೆಲ್ಲಿಸಿ ನಗೆಬೀರಿದರು. ಇದನ್ನೂ ಓದಿ: ಕೊನೆಯ ಪಂದ್ಯ ಡ್ರಾ – ಆಸೀಸ್ ವಿರುದ್ಧ ಸರಣಿ ಗೆದ್ದ ಭಾರತ

    ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲಿಸ್ ಕ್ಯಾಪ್ಸಿ ಮತ್ತು ಜೆಮಿಮಾ ರೊಡ್ರಿಗಸ್‌ (Jemimah Rodrigues) ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. ಕ್ಯಾಪ್ಸಿ 24 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 38 ರನ್‌ ಗಳಿಸಿದರೆ, ಜೆಮಿಮಾ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್‌ ಕಲೆಹಾಕಿ ತಂಡಕ್ಕೆ ನೆರವಾದರು.

    ನಂತರ ಮಾರಿಜಾನ್ನೆ ಕಪ್‌ ಹಾಗೂ ಜೆಸ್‌ ಜೊನಾಸೆನ್‌ (Jess Jonassen) ಜವಾಬ್ದಾರಿಯು ಬ್ಯಾಟಿಂಗ್‌ ನಿಂದ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ತಾಳ್ಮೆಯ ಆಟವಾಡಿದ ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 45 ರನ್‌ ಕಲೆಹಾಕಿತು. ಮಾರಿಜಾನ್ನೆ ಕಪ್‌ 32 ಎಸೆತಗಳಲ್ಲಿ 32 ರನ್‌ (3 ಬೌಂಡರಿ, 1 ಸಿಕ್ಸರ್‌) ಗಳಿಸಿದ್ರೆ, ಜೊನಾಸೆನ್‌ 15 ಎಸೆತಗಳಲ್ಲಿ ಭರ್ಜರಿ 29 ರನ್‌ (4 ಬೌಂಡರಿ, 1 ಸಿಕ್ಸರ್‌) ಚಚ್ಚಿ ಮಿಂಚಿದರು.

    ಡೆಲ್ಲಿ ತಂಡದ ಪರ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) 15 ರನ್‌ ಗಳಿಸಿದ್ರೆ, ಶಫಾಲಿ ವರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆರ್‌ಸಿಬಿ ಪರ ಸೋಭಾನ ಆಶಾ 2 ವಿಕೆಟ್‌ ಪಡೆದರೆ, ಮೇಗನ್ ಶುಟ್ ಹಾಗೂ ಪ್ರೀತಿ ಬೋಸ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಆಟ – ಹರ್ಮನ್‌ಪ್ರೀತ್ ಕೌರ್ ಫಿಫ್ಟಿ; ಮುಂಬೈಗೆ 8 ವಿಕೆಟ್‌ಗಳ ಜಯ

    ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ಮತ್ತೊಮ್ಮೆ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿ ಟೀಕೆಗೆ ಗುರಿಯಾದರು. 15 ಎಸೆತಗಳಲ್ಲಿ 8 ರನ್ ಗಳಿಸಿ ಮಂದಾನ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಸೋಫಿ ಡಿವೈನ್ 21 ರನ್‌ ಗಳಿಸಿ ಔಟಾದರು. ನಂತರ ಬಂದ ಎಲ್ಲಿಸ್ ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 67 ರನ್ ಬಾರಿಸಿ ತಂಡಕ್ಕೆ ನೆರವಾದರು. ಈ ವೇಳೆ ಜೊತೆಗೂಡಿದ ರಿಚಾ ಘೋಷ್‌ 16 ಎಸೆತಗಳಲ್ಲಿ ಸ್ಫೋಟಕ 37 ರನ್ (3 ಬೌಂಡರಿ, 3 ಸಿಕ್ಸರ್‌) ಬಾರಿಸಿದರೆ, ಕೊನೆಯಲ್ಲಿ ಬಂದ ಶ್ರೇಯಾಂಕ ಪಾಟೀಲ್ 4 ರನ್ ಗಳಿಸಿದರು. ಹೀದರ್ ನೈಟ್ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಿಖಾ ಪಾಂಡೆ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ತಾರಾ ನಾರ್ರಿಸ್ 3 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.

  • ಸೋಲಿನ ಹೊಣೆ ನಾನೇ ಹೊರುತ್ತೇನೆ – ತನ್ನನ್ನು ತಾನೇ ಟೀಕಿಸಿಕೊಂಡ ಸ್ಮೃತಿ ಮಂದಾನ

    ಸೋಲಿನ ಹೊಣೆ ನಾನೇ ಹೊರುತ್ತೇನೆ – ತನ್ನನ್ನು ತಾನೇ ಟೀಕಿಸಿಕೊಂಡ ಸ್ಮೃತಿ ಮಂದಾನ

    ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ (WPL 2023) ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ತನ್ನನ್ನು ತಾನೇ ಟೀಕಿಸಿಕೊಂಡಿದ್ದಾರೆ.

    ಲೀಗ್ ಸುತ್ತಿನಲ್ಲಿ ಆಡಿರುವ 4 ಪಂದ್ಯಗಳಲ್ಲೂ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಆ ಮೂಲಕ ಮುಂದಿನ ಹಂತದ ಹಾದಿಯನ್ನು ಕಠಿಣವಾಗಿಸಿಕೊಂಡಿದೆ. ಜೊತೆಗೆ ಆರ್‌ಸಿಬಿ ಅಭಿಮಾನಿಗಳಲ್ಲೂ ನಿರಾಸೆ ಉಂಟುಮಾಡಿದೆ. ಇದನ್ನೂ ಓದಿ: 4ನೇ ಪಂದ್ಯದಲ್ಲೂ RCBಗೆ ಹೀನಾಯ ಸೋಲು; ಹೀಲಿ ಸ್ಫೋಟಕ ಬ್ಯಾಟಿಂಗ್‌ – ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    RCBvsGG

    ಡಬ್ಲ್ಯೂಪಿಎಲ್‌ನಲ್ಲಿ 3.4 ಕೋಟಿ ದುಬಾರಿ ಬೆಲೆಗೆ ಆರ್‌ಸಿಬಿ ತಂಡಕ್ಕೆ ಬಿಕರಿಯಾದ ಸ್ಮೃತಿ ಮಂದಾನ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 35, 23, 18 ಹಾಗೂ 4 ರನ್ ಗಳಿಸಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: IPL 2023: ಮಾಸ್ ಲುಕ್‌ನಲ್ಲಿ ಹಾಲಿ ಚಾಂಪಿಯನ್ಸ್ – ಮುಂಬೈ, ಟೈಟಾನ್ಸ್ ಹೊಸ ಜೆರ್ಸಿ ಅನಾವರಣ

    Smriti Mandhana 2

    ಯುಪಿ ವಾರಿಯರ್ಸ್ ವಿರುದ್ಧ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಂದಾನ, ತಮ್ಮನ್ನೇ ದೂಷಿಸಿಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ರನ್ ಹೊಳೆ ಹರಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಸಹಕಾರಿ ಆಗಬೇಕು. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಲಾಗಿದೆ. ಹಾಗಾಗಿ ದೊಡ್ಡ ಮೊತ್ತವಾಗಿ ಪರಿವರ್ತನೆ ಮಾಡುವಲ್ಲಿ ಎಡವಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ನಾನು ಈ ಸೋಲಿನ ಹೊಣೆ ಹೊರುತ್ತೇನೆ’ ಎಂದು ಬೇಸರ ಹೊರಹಾಕಿದ್ದಾರೆ.

    Ellyse Perry

    ಆರ್‌ಸಿಬಿ ನೀಡಿದ 139 ರನ್ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ಪರ ನಾಯಕಿ ಅಲಿಸಾ ಹೀಲಿ 96 ರನ್ ಹಾಗೂ ದೇವಿಕಾ ವೈದ್ಯ 36 ರನ್ ಗಳಿಸಿದರು. ಇಬ್ಬರ ಸ್ಫೋಟಕ ಆಟದಿಂದಾಗಿ 13 ಓವರ್‌ಗಳಲ್ಲೇ ಗುರಿ ತಲುಪಿ ವಾರಿಯರ್ಸ್ ತಂಡ ಸಂಭ್ರಮಿಸಿತು. ಆ ಮೂಲಕ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

    ಸ್ಮೃತಿ ಮಂದಾನ ಪಡೆ ತನ್ನ 2ನೇ ಸುತ್ತಿನ ಮೊದಲ ಪಂದ್ಯವನ್ನು ಮಾರ್ಚ್ 13 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ ಆರಂಭಿಸಲಿದ್ದು, ಮಾರ್ಚ್ 15 ರಂದು ಯುಪಿ ವಾರಿಯರ್ಸ್ ವಿರುದ್ಧ ಮತ್ತೊಮ್ಮೆ ಸೆಣಸಲಿದೆ.

  • 4ನೇ ಪಂದ್ಯದಲ್ಲೂ RCBಗೆ ಹೀನಾಯ ಸೋಲು; ಹೀಲಿ ಸ್ಫೋಟಕ ಬ್ಯಾಟಿಂಗ್‌ – ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    4ನೇ ಪಂದ್ಯದಲ್ಲೂ RCBಗೆ ಹೀನಾಯ ಸೋಲು; ಹೀಲಿ ಸ್ಫೋಟಕ ಬ್ಯಾಟಿಂಗ್‌ – ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಅಲಿಸ್ಸಾ ಹೀಲಿ (Alyssa Healy), ದೇವಿಕಾ ವೈದ್ಯ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಹಾಗೂ ಸಾಂಘಿಕ ಬೌಲಿಂಗ್‌ ಪರಾಕ್ರಮದಿಂದ ಯುಪಿ ವಾರಿಯರ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಆರ್‌ಸಿಬಿ ತಂಡದಿಂದ ಎಂದಿನಂತೆ ಕಳಪೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರದರ್ಶನ ಮುಂದುವರಿಸಿದ್ದು, ನಾಲ್ಕನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿದೆ. ಇದನ್ನೂ ಓದಿ: Ind Vs Aus ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಇಳಿದಿದ್ದು ಯಾಕೆ?

    ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ (UP Warriorz) 13 ಓವರ್‌ಗಳಲ್ಲೇ 139 ರನ್‌ ಬಾರಿಸಿ 10 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಅಲಿಸ್ಸಾ ಹೀಲಿ ಹಾಗೂ ದೇವಿಕಾ ವೈದ್ಯ ವಿಕೆಟ್‌ ಬಿಟ್ಟುಕೊಡದೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಹೀಲಿ ಭರ್ಜರಿ 96 ರನ್‌ (47 ಎಸೆತ, 18 ಬೌಂಡರಿ) ಚಚ್ಚಿದರೆ, ದೇವಿಕಾ 31 ಎಸೆತಗಳಲ್ಲಿ 36 ರನ್‌ ಗಳಿಸಿದರು. 13ನೇ ಓವರ್‌ನ ಕೊನೆಯ ಎಸೆತದಲ್ಲಿ ಹೀಲಿ ಸಿಕ್ಸ್‌ ಸಿಡಿಸಿ ಶತಕ ಬಾರಿಸಲು ಯತ್ನಿಸಿದರು. ಆದರೆ ಕೇಲವ ಒಂದು ರನ್‌ ಕದಿಯುವಲ್ಲಿ ಯಶಸ್ವಿಯಾಗಿ ಶತಕ ವಂಚಿತರಾದರು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನಾಯಕಿ ಸ್ಮೃತಿ ಮಂದಾನ (Smriti Mandhana) ಸತತ 4ನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಸೋಫಿ ಡಿವೈನ್‌ನೊಂದಿಗೆ ಕಣಕ್ಕಿಳಿದ ಮಂದಾನ 4 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡರು. ಬಳಿಕ ಸೋಫಿ ಡಿವೈನ್ ಹಾಗೂ ಎಲ್ಲಿಸ್ ಪೆರ್ರಿ (Ellyse Perry) ಜೋಡಿ ಉತ್ತಮ ಪ್ರದರ್ಶನ ನೀಡಿತು. ಸೋಫಿ 24 ಎಸೆತಗಳಲ್ಲಿ 36 ರನ್‌ಗಳಿಸಿದರೆ, ಪೆರ್ರಿ 39 ಎಸೆತಗಳಲ್ಲಿ ಅವರು 52 ರನ್ ಬಾರಿಸಿ ಮಿಂಚಿದರು.

    ಈ ಜೋಡಿ ಬೇರ್ಪಟ್ಟ ನಂತರ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ಆರ್‌ಸಿಬಿ 19.3 ಓವರ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: IPL 2023: ಮಾಸ್ ಲುಕ್‌ನಲ್ಲಿ ಹಾಲಿ ಚಾಂಪಿಯನ್ಸ್ – ಮುಂಬೈ, ಟೈಟಾನ್ಸ್ ಹೊಸ ಜೆರ್ಸೆ ಅನಾವರಣ

    ಇನ್ನು ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕ್ಲೆಸ್ಟೋನ್ 4 ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ ಕೂಡ 3 ವಿಕೆಟ್ ಹಾಗೂ ರಾಜೇಶ್ವರಿ ಗಾಯಕ್ವಾಡ್‌ 1 ವಿಕೆಟ್‌ ಕಬಳಿಸಿದರು.