Tag: Ellidde illi tanaka

  • ಸಸ್ಪೆನ್ಸ್-ಥ್ರಿಲ್ಲರ್ ಕಥೆಯಲ್ಲಿ ಟಾಕಿಂಗ್ ಸ್ಟಾರ್? – ಮತ್ತೆ ಒಂದಾಯ್ತು ‘ಎಲ್ಲಿದ್ದೆ ಇಲ್ಲಿ ತನಕ’ ಜೋಡಿ?

    ಸಸ್ಪೆನ್ಸ್-ಥ್ರಿಲ್ಲರ್ ಕಥೆಯಲ್ಲಿ ಟಾಕಿಂಗ್ ಸ್ಟಾರ್? – ಮತ್ತೆ ಒಂದಾಯ್ತು ‘ಎಲ್ಲಿದ್ದೆ ಇಲ್ಲಿ ತನಕ’ ಜೋಡಿ?

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಫ್ಯಾನ್ಸ್ ಗಳಿಗೊಂದು ಖುಷಿ ವಿಷ್ಯ ಇದೆ. ಹೌದು ಸಖತ್ ಮಾತು, ಮೋಜು ಮಸ್ತಿ ಮಾಡ್ತಾ ಅಭಿಮಾನಿಗಳ ಹಾರ್ಟ್ ಫೇವರೀಟ್ ಟಾಕಿಂಗ್ ಆಗಿದ್ದ ಸೃಜಾ ‘ಎಲ್ಲಿದ್ದೆ ಇಲ್ಲಿ ತನಕ’ ಅಂತ ಸ್ಯಾಂಡಲ್‍ವುಡ್ ನಾಯಕನಾಗಿ ಹರಿಪ್ರಿಯ ಜೊತೆ ಡ್ಯುಯೇಟ್ ಮಾಡಿದ್ದರು. ಚಿತ್ರ ಇಷ್ಟ ಪಟ್ಟಿದ್ದ ಫ್ಯಾನ್ಸ್ ಮತ್ಯಾವ ಸಿನೆಮಾದಲ್ಲಿ ಸೃಜಾ ಬಿಗ್ ಸ್ಕ್ರೀನ್ ನಲ್ಲಿ ಕಾಣ್ತಾರೆ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ದರು. ಆದರೆ ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ತೇಜಸ್ವಿಯವರೇ ಸೃಜಾರ ಮತ್ತೊಂದು ಸಿನೆಮಾಗೂ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಗಿದಿದ್ದು, ನಾಯಕಿ ಮತ್ತು ಸಂಗೀತ ನಿರ್ದೇಶಕರ ಹುಡುಕಾಟದಲ್ಲಿದೆಯಂತೆ ಚಿತ್ರತಂಡ. ಕೊಂಚ ಡಿಫ್ರೆಂಟ್ ಅನ್ನಿಸೋ ಎಳೆಯ ಕಥಾಹಂದರವಿರೋ ಈ ಚಿತ್ರದಲ್ಲಿ ಸಸ್ಪೇನ್ಸ್ ಥ್ರಿಲ್ಲರ್ ಅಂಶಗಳಿದ್ದು, ಕಥೆಯೇ ಪ್ರಧಾನವಂತೆ. ಜೊತೆಗೆ ಇನ್ನೂ ಶೀರ್ಷಿಕೆ ಫೈನಲ್ ಆಗದ ಈ ಚಿತ್ರಕ್ಕೆ ವೇಣು ಸಿನಿಮಾಟೋಗ್ರಾಫರ್ ಇರಲಿದೆ. ಪ್ರಸ್ತುತ ಸಮಾಜದಲ್ಲಿ ಆತಂಕಕ್ಕೆ ಕಾರಣವಾಗ್ತಿರೋ, ಅಪಹರಣ, ಅತ್ಯಾಚಾರಗಳ ವಿಷಯದ ಎಳೆ ಹೊತ್ತಿರೋ ಚಿತ್ರದ ಶೂಟಿಂಗ್ ಕೆಲಸ ಫೆಬ್ರವರಿಯಿಂದ ಶುರುವಾಗಲಿದ್ದು, ಮತ್ತೆ ಒಂದಾದ ಸೃಜನ್-ತೇಜಸ್ವಿ ಜೋಡಿ ಮೇಲೆ ಕುತೂಹಲ ಸಾಮಾನ್ಯವಾಗೇ ಹೆಚ್ಚಾಗಿದೆ.

  • ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಬೆಂಗಳೂರು: ಕಿರುತೆರೆಗೂ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಪ್ರೇಕ್ಷಕರ ನಾಡಿಮಿಡಿತವನ್ನು ಸ್ಪಷ್ಟವಾಗಿ ಗ್ರಹಿಸುವ ತಾಕತ್ತಿರುವ ನಿರ್ದೇಶಕನ ಪಾಲಿಗೆ ಆ ವ್ಯತ್ಯಾಸ ಸವಾಲಿನ ಸಂಗತಿಯಲ್ಲ. ನಿರ್ದೇಶಕ ತೇಜಸ್ವಿ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸಾಬೀತುಗೊಳಿಸಿದ್ದಾರೆ. ಅವರು ನಿರ್ದೇಶನ ಮಾಡಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭಾರೀ ಸದ್ದು ಮಾಡುತ್ತಲೇ ಸಾಗಿ ಬಂದಿತ್ತು. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಫ್ರೆಶ್ ಆದ ಕಥೆಯ ಹಿಂಟ್ ಬಿಟ್ಟು ಕೊಡುತ್ತಲೇ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿತ್ತು. ಅದೀಗ ಬಿಡುಗಡೆಯಾಗಿದೆ. ಈ ಮೂಲಕ ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟುವಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆದ್ದಿದ್ದಾರೆ.

    ಸೃಜನ್ ಲೋಕೇಶ್ ಇಲ್ಲಿ ಸೂರ್ಯ ಎಂಬ ಪಾತ್ರವನ್ನು ಸಂಪೂರ್ಣವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರೆ. ತಂದೆಯ ಪಾಲಿಗೆ ಸೂರ್ಯ ಮುದ್ದಿನ ಮಗ. ಆತ ಅದೆಲ್ಲಿ ಸಹವಾಸ ದೋಷದಿಂದ ಹಾಳಾಗುತ್ತಾನೋ ಎಂಬ ಭಯದಿಂದ ಆತನನ್ನು ತಂದೆ ವಿದೇಶಕ್ಕೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಅದೇನೇ ಸೌಕರ್ಯಗಳು ಸಿಕ್ಕರೂ ಸೂರ್ಯನನ್ನು ಕಳ್ಳುಬಳ್ಳಿಯ ಬಂಧ ಸದಾ ಸೆಳೆಯುತ್ತಿರುತ್ತೆ. ಒಂದಷ್ಟು ವರ್ಷಗಳ ನಂತರ ಆತ ಹಳೇ ಗೆಳೆಯರನ್ನರಸಿ ಸ್ವದೇಶಕ್ಕೆ ಮರಳುತ್ತಾನೆ. ಈ ನಡುವೆ ಮದುವೆ ಮನೆಯೊಂದರಲ್ಲಿ ದಂತದ ಬೊಂಬೆಯಂಥಾ ಹುಡುಗಿ ಆತನ ಮನ ಸೆಳೆದಿರುತ್ತಾಳೆ. ಅದೇ ಗುಂಗಿನಲ್ಲಿ ತೇಲಾಡುತ್ತಲೇ ಸೂರ್ಯ ಗೆಳೆಯನ ಚಾಲೆಂಜು ಸ್ವೀಕರಿಸಿ ಕೆಲಸ ಹುಡುಕ ಹೋದರೆ ಆ ಕಂಪನಿಯಲ್ಲಿಯೂ ಸಾಕ್ಷಾತ್ತು ನಂದಿನಿಯ ದರ್ಶನವಾಗಿ ಸೂರ್ಯನೊಳಗೆ ಪ್ರೀತಿಯ ಪ್ರಭೆ ಮತ್ತಷ್ಟು ಪ್ರಕಾಶಮಾನವಾಗುತ್ತೆ.

    ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆಂಬುದಕ್ಕಿಂತಲೂ ನಂದಿನಿಯನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸೂರ್ಯ ಅದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಆ ನಂತರದದ್ದು ಆಕೆಯನ್ನು ಒಲಿಸಿಕೊಳ್ಳೋ ಪಡಿಪಾಟಲು. ನಂದಿನಿ ಸುಳ್ಳಿನ ನೆರಳು ಸೋಕಿದರೂ ಕೊಸರಾಡುವ ಪೈಕಿ. ಆದರೆ ಸೂರ್ಯ ಸುಳ್ಳಿನ ಮಹಲಿನಲ್ಲಿಯೇ ಪ್ರೇಮಸೌಧ ಕಟ್ಟಿ ಬಿಟ್ಟಿರುತ್ತಾನೆ. ಅದಕ್ಕೆ ಮದುವೆ ಮೂಲಕ ಬ್ರೇಕ್ ಹಾಕೋ ಉದ್ದೇಶದಲ್ಲಿ ಸೂರ್ಯನಿರುವಾಗಲೇ ಮದುವೆ ಮನೆಯಲ್ಲಿಯೇ ಆತನ ಸುಳ್ಳಿನ ಪುರಾಣ ನಂದಿನಿ ಮುಂದೆ ಬಿಚ್ಚಿಕೊಳ್ಳುತ್ತೆ. ಆ ನಂತರದಲ್ಲಿ ಏನಾಗುತ್ತೆಂಬುದೂ ಸೇರಿದಂತೆ ಇಡೀ ಚಿತ್ರ ರೋಚಕವಾಗಿ ಮೂಡಿ ಬಂದಿದೆ.

    ತೇಜಸ್ವಿ ಪ್ರೇಕ್ಷಕರ ಅಭಿಲಾಶೆ ಮತ್ತು ಸೃಜನ್ ಲೋಕೇಶ್ ಅವರಿಗೆ ತಕ್ಕುದಾಗಿಯೇ ಕಥೆ ಹೊಸದು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಳಿಕೇಳಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್. ಇಲ್ಲಿ ಆ ಬಿರುದು ಮತ್ತಷ್ಟು ಮಿರುಗುವಂಥ ಮಾತಿನ ಜುಗಲ್ಬಂಧಿ ಇದೆ. ಅಚ್ಚರಿಯಾಗೋದು ಸೃಜನ್ ಅವರ ಬದಲಾವಣೆ. ಸೃಜನ್ ಅದ್ಭುತ ನಟನಾಗಿ ಬದಲಾಗಿದ್ದಾರೆ. ಡ್ಯಾನ್ಸು, ಫೈಟಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಸೃಜಾ ತಾಜಾ ತಾಜ. ಇನ್ನುಳಿದಂತೆ ನಾಯಕಿಯಾಗಿ ಹರಿಪ್ರಿಯಾ ನಟನೆ ಬಗ್ಗೆ ಎರಡು ಮಾತಿಲ್ಲ. ಅಮ್ಮನಾಗಿ ನಟಿಸಿರೋ ತಾರಾ ಅವರದ್ದು ಎಂದಿನಂತೆ ಮಂತ್ರಮುಗ್ಧಗೊಳಿಸೋ ನಟನೆ. ಮಿಕ್ಕೆಲ್ಲ ತಾರಾಗಣವೂ ಅದಕ್ಕೆ ಸಾಥ್ ಕೊಟ್ಟಿದೆ. ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ತುಸುವೂ ತತ್ವಾರವಾಗದಂತೆ ತೇಜಸ್ವಿ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ.

    ರೇಟಿಂಗ್: 3.5/5

  • ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಛಾಯೆಯೊಂದಿಗೆ ಕಾಮಿಡಿ ಮಾಯೆ!

    ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಛಾಯೆಯೊಂದಿಗೆ ಕಾಮಿಡಿ ಮಾಯೆ!

    ಬೆಂಗಳೂರು: ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವೀಗ ಮುದ್ದಾದ ರೊಮ್ಯಾಂಟಿಕ್ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಈ ಕ್ಷಣಕ್ಕೂ ಒಂದಷ್ಟು ಮಂದಿ ಇದು ಪ್ರೇಮ ಕಥೆಯೇ ಪ್ರಧಾನವಾಗಿರೋ ಸಿನಿಮಾ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಸೃಜನ್ ಮತ್ತು ನಾಯಕಿ ಹರಿಪ್ರಿಯಾ ಈ ಹಾಡುಗಳಲ್ಲಿ ಕಾಣಿಸಿಕೊಂಡಿರೋ ರೀತಿಯೇ ಅಂಥಾದ್ದಿದೆ. ಆದರೆ ಎಲ್ಲಿದ್ದೆ ಇಲ್ಲಿತನಕ ಬರೀ ಪ್ರೇಮಕಥೆಯನ್ನು ಹೊಂದಿರೋ ಚಿತ್ರವೆಂಬುದು ಅರ್ಧಸತ್ಯವಷ್ಟೇ!

    ಯಾಕೆಂದರೆ, ನಿರ್ದೇಶಕ ತೇಜಸ್ವಿ ಈ ಸಿನಿಮಾವನ್ನು ಪ್ರೀತಿಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ರೂಪಿಸಿದ್ದಾರೆ. ಆದ್ದರಿಂದಲೇ ಇಲ್ಲಿ ಪ್ರೀತಿಯೂ ಸೇರಿದಂತೆ ಸಕಲ ರಸಗಳೂ ಸೇರಿಕೊಂಡಿವೆ. ಇದೆಲ್ಲದರೊಂದಿಗೆ ಸೃಜನ್ ಅವರ ಟಾಕಿಂಗ್ ಸ್ಟಾರ್ ಎಂಬ ಇಮೇಜಿಗೆ ತಕ್ಕುದಾದ ಅಂಶಗಳೂ ಈ ಸಿನಿಮಾದಲ್ಲಿರಲಿವೆ. ಎಲ್ಲಿದ್ದೆ ಇಲ್ಲಿತನಕ ಪ್ರೇಮ ಕಥೆಯಾಗಿಯೂ ಕಾಡುತ್ತದೆ. ಅದರ ಜೊತೆಗೇ ಪಕ್ಕಾ ಕಾಮಿಡಿ ಕಿಕ್ಕಿನ ಮೂಲಕ ಎಲ್ಲರನ್ನೂ ಮತ್ತೇರಿಸುವಂತೆ ಕಚಗುಳಿ ಇಡಲಿದೆ.

    ಮಜಾ ಟಾಕೀಸ್ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಎಲ್ಲಿದ್ದೆ ಇಲ್ಲಿತನಕ ಚಿತ್ರಕ್ಕಾಗಿ ತಯಾರಿ ಆರಂಭವಾಗಿತ್ತು. ಮಜಾ ಟಾಕೀಸ್ ಟೀಮೆಲ್ಲ ಸೇರಿಕೊಂಡು ತೇಜಸ್ವಿಯವರ ಸಾರಥ್ಯದಲ್ಲಿ ಸೃಜಾಗೆ ಯಾವ ಕಥೆ ಸೂಕ್ತ ಎಂಬ ಬಗ್ಗೆ ತಿಂಗಳು ಗಟ್ಟಲೆ ಚರ್ಚೆಗಳು ನಡೆದಿದ್ದವು. ಅದೆಷ್ಟೋ ಕಥೆಗಳೂ ಚರ್ಚೆಯಾಗಿದ್ದವು. ಆದರೆ ಪ್ರೀತಿ, ಸಾಹಸ ಮತ್ತು ಕಾಮಿಡಿಯಂಥಾ ಒಂದೇ ಜಾನರಿನ ಚಿತ್ರಕ್ಕಿಂತಲೂ ಈ ಎಲ್ಲ ಅಂಶಗಳನ್ನು ಬೆರೆಸಿ ಒಂದು ಕಥೆ ಸೃಷ್ಟಿಸೋದೇ ಸೂಕ್ತ ಎಂಬ ನಿರ್ಧಾರಕ್ಕೆ ಇಡೀ ತಂಡ ಬಂದಿತ್ತು. ಹಾಗೆ ಸೃಷ್ಟಿಯಾಗಿದ್ದ ಎಲ್ಲಿದ್ದೆ ಇಲ್ಲಿತನಕದ ಫೈನಲ್ ಕಥೆ. ಅದು ಎಲ್ಲ ಅಂಶಗಳನ್ನೂ ಅರೆದು ತಯಾರಿಸಿದ ರಸಪಾಕದಂಥಾ ಚಿತ್ರ. ಅದರ ನಿಜವಾದ ಮಜಾ ಏನೆಂಬುದು ಈ ವಾರವೇ ಗೊತ್ತಾಗಲಿದೆ.

  • ಎಲ್ಲಿದ್ದೆ ಇಲ್ಲಿ ತನಕ: ಸೃಜಾ ಸ್ಪೆಷಲ್ ಲಿರಿಕಲ್ ವೀಡಿಯೋ ಸಾಂಗ್!

    ಎಲ್ಲಿದ್ದೆ ಇಲ್ಲಿ ತನಕ: ಸೃಜಾ ಸ್ಪೆಷಲ್ ಲಿರಿಕಲ್ ವೀಡಿಯೋ ಸಾಂಗ್!

    ಬೆಂಗಳೂರು: ಮಜಾ ಟಾಕೀಸ್ ಮೂಲಕ ಮನೋರಂಜನೆ ನೀಡುತ್ತಲೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡಿರುವವರು ಸೃಜನ್ ಲೋಕೇಶ್. ಈ ಕಿರುತೆರೆ ಶೋ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರೋ ಅವರೀಗ ಒಂದಷ್ಟು ಕಾಲದ ನಂತರ ‘ಎಲ್ಲಿದ್ದೆ ಇಲ್ಲಿತನಕ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರೋ ಈ ಚಿತ್ರದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್‍ಗಳು ಈಗಾಗಲೇ ಹೊರಬಂದು ಹಿಟ್ ಆಗಿವೆ. ಇದೀಗ ಸೃಜಾ ಸ್ಪೆಷಲ್ ಅನ್ನಬಹುದಾದ ಸ್ಪೆಷಲ್ ಲಿರಿಕಲ್ ವೀಡಿಯೋವೊಂದು ಬಿಡುಗಡೆಯಾಗಿದೆ.

    ನೀ ನಗೆ ಹಂಚಿ ಮಿಂಚುವಾ ನಮ್ಮ ಕನ್ನಡದವ ಎಂಬ ಈ ಹಾಡು ನಾಯಕ ಸೃಜನ್ ಲೋಕೇಶ್ ಅವರ ಬಗ್ಗೆ ರಚಿಸಿರೋ ಸಾಹಿತ್ಯದ ಸಾಲುಗಳನ್ನೊಳಗೊಂಡಿದೆ. ಭರ್ಜರಿ ಚೇತನ್ ಕುಮಾರ್ ಬರೆದಿರೋ ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಈ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಸೃಜನ್ ಗೆಟಪ್ಪುಗಳ ಝಲಕ್‍ಗಳೂ ಕೂಡಾ ಅನಾವರಣಗೊಂಡಿವೆ. ಇದು ಮಜಾ ಟಾಕೀಸ್‍ಗಿಂತಲೂ ಮುಂಚೆಯೇ ನಿರ್ದೇಶನ ವಿಭಾಗದಲ್ಲಿ ಸೃಜನ್ ತಂಡದಲ್ಲಿ ಗುರುತಿಸಿಕೊಂಡಿದ್ದ ತೇಜಸ್ವಿ ನಿರ್ದೇಶನದ ಚಿತ್ರ. ಇದುವರೆಗೂ ನೂರಾರು ಎಪಿಸೋಡುಗಳ ಧಾರಾವಾಹಿ, ಕಿರುತೆರೆ ರಿಯಾಲಿಟಿ ಶೋಗಳನ್ನು ನಿರ್ದೇಶನ ಮಾಡಿರೋ ತೇಜಸ್ವಿ ಸೃಜನ್ ಅವರಿಗೆ ಪಕ್ಕಾ ಹೊಂದಿಕೆಯಾಗೋ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಎಲ್ಲಿದ್ದೆ ಇಲ್ಲಿ ತನಕ ಹಲವಾರು ವರ್ಷಗಳ ತಯಾರಿಯೊಂದಿಗೆ ರೂಪುಗೊಂಡಿರೋ ಚಿತ್ರ. ಈ ಮೂಲಕ ಹರಿಪ್ರಿಯಾ ಸೃಜನ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಹರಿಪ್ರಿಯಾ ಕೂಡ ಇಲ್ಲಿ ವಿಶೇಷವಾದ ಗೆಟಪ್ಪಿನಲ್ಲಿ, ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರಂತೆ.  ಆಕ್ಷನ್, ಕಾಮಿಡಿ, ಫ್ಯಾಮಿಲಿ ಸಬ್ಜೆಕ್ಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬರೆಸಿದ ಮಜವಾದ ಕಥೆ ಈ ಚಿತ್ರದಲ್ಲಿದೆಯಂತೆ. ಟಾಕಿಂಗ್ ಸ್ಟಾರ್ ಈ ಸಿನಿಮಾ ಮೂಲಕ ನಾಯಕ ನಟನಾಗಿಯೂ ಭರ್ಜರಿ ಗೆಲುವು ದಕ್ಕಿಸಿಕೊಳ್ಳುವ ಉತ್ಸಾಹದಿಂದಿದ್ದಾರೆ.

     

  • ಅರಿಶಿಣ ಶಾಸ್ತ್ರದಲ್ಲಿ ಹರಿಪ್ರಿಯಾ!

    ಅರಿಶಿಣ ಶಾಸ್ತ್ರದಲ್ಲಿ ಹರಿಪ್ರಿಯಾ!

    ಬೆಂಗಳೂರು: ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಹಾಜರಾಗುತ್ತಿರುವ ನಟಿ ಹರಿಪ್ರಿಯಾ ತಮ್ಮ ಮುಂದಿನ ಚಿತ್ರ ‘ಎಲ್ಲಿದೆ ಇಲ್ಲಿ ತನಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

    ಚಿತ್ರದ ಭಾಗವಾಗಿ ಸಂಪ್ರದಾಯಿಕ ಶೈಲಿಯ ಮದುವೆ ಕಾರ್ಯಕ್ರಮದ ಭಾಗದ ಚಿತ್ರೀಕರಣದಲ್ಲಿ ತೊಡಗಿರುವ ಹರಿಪ್ರಿಯಾ ಅವರು, ಶೂಟಿಂಗ್ ಸಂದರ್ಭದ ಫೋಟೋಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಎಲ್ಲಿದೆ ಇಲ್ಲಿ ತನಕ ಸಿನಿಮಾದ ಅರಿಶಿಣ ಶಾಸ್ತ್ರದ ಸಿದ್ಧತೆಯಲ್ಲಿದ್ದು, ನಾಚಿಕೆ ಆಗುತ್ತಿದೆ ಎಂದಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಹಿರಿಯ ನಟರೊಂದಿಗೆ ನಟಿಸುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

    ಹರಿಪ್ರಿಯಾ ಅವರೊಂದಿಗೆ ಹಿರಿಯ ನಟಿ ಶೃತಿ, ಗಿರಿಜಾ ಲೋಕೇಶ್, ನಟ ಸಾಧು ಕೋಕಿಲ, ನಟಿ ತಾರಾ ಅವರನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ. ಸಿನಿಮಾದ ಕ್ಲೈಮಾಕ್ಸ್ ದೃಶ್ಯಗಳು ಇದಾಗಿದೆ. ಅಂದಹಾಗೇ ನಟ ಸೃಜನ್ ಲೋಕೇಶ್ ಅಲ್ಪ ಸಮಯದ ಬ್ರೇಕ್ ಬಳಿಕ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದು, ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದ ಮೂಲಕ ವಾಪಸ್ ಬಂದಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ಹೆಂಡತಿಯಾಗಿ ನಟಿ ಹರಿಪ್ರಿಯಾ ಅವರು ನಟಿಸುತ್ತಿದ್ದಾರೆ.

    ತೇಜಸ್ವಿ ಅವರ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕೆ ವೇಣು ಛಾಯಾಗ್ರಹಣ ಹಾಗೂ ಅರ್ಜುನ್ಯ ಜನ್ಯ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಗಿರಿಜಾ ಲೋಕೇಶ್, ಅವಿನಾಶ್, ತಬಲಾನಾಣಿ, ರಾಧಿಕಾ ರಾವ್, ಯಶಸ್ ಸೂರ್ಯ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದ್ದು, ಮುಖ್ಯವಾಗಿ ಸೃಜನ್ ಲೋಕೇಶ್ ಪುತ್ರ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೃಜಾಗೆ ಹರಿಪ್ರಿಯಾ ನಾಯಕಿ!

    ಸೃಜಾಗೆ ಹರಿಪ್ರಿಯಾ ನಾಯಕಿ!

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಸೃಜನ್ ಲೋಕೇಶ್ ಒಂದಷ್ಟು ಕಾಲದಿಂದ ಚಿತ್ರರಂಗದಿಂದ, ನಟನೆಯಿಂದ ದೂರವಿದ್ದಂತಿದ್ದರು. ಆದರೀಗ ಅವರು ಮತ್ತೆ ನಾಯಕನಾಗಿ ಮರಳಿದ್ದಾರೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಎಂಬುದು ಅವರು ನಟಿಸಲಿರೋ ಹೊಸ ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರಂತೆ. ಈ ಚಿತ್ರಕ್ಕೀಗ ಹರಿಪ್ರಿಯಾ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ.

    ಸೃಜನ್ ತಂದೆ ಲೋಕೇಶ್ ಅವರು ನಟಿಸಿದ್ದ ಪ್ರಸಿದ್ಧ ಚಿತ್ರ ಪರಸಂಗದ ಗೆಂಡೆತಿಮ್ಮ. ಎಲ್ಲಿದ್ದೆ ಇಲ್ಲೀ ತನಕ ಎಂಬುದು ಅದರ ಜನಪ್ರಿಯ ಹಾಡಿನ ಸಾಲು. ತಮ್ಮ ತಂದೆಯ ಹಾಡಿನ ಸಾಲುಗಳನ್ನೇ ಸೃಜನ್ ತಮ್ಮ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಜಾ ಟಾಕೀಸ್ ಕಂತುಗಳಿಗೆ ಸಂಭಾಷಣೆ ಬರೆಯುತ್ತಾ ಬಂದಿರೋ ರಾಕೇಶ್ ಸಂಭಾಷಣೆ ಬರೆಯಲಿದ್ದಾರೆ.

    ಸೃಜನ್ ಲೋಕೇಶ್ ಸ್ವತಃ ನಿರ್ಮಾಣ ಮಾಡಲಿರೋ ಇದು ಪಕ್ಕಾ ಕಮರ್ಶಿಯಲ್ ಕಥನ ಹೊಂದಿರೋ ಚಿತ್ರವಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv