ಹಾಸನ: ಭತ್ತದ ಬೆಳೆ ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಚೀಲಗಳಲ್ಲಿ ತುಂಬಿಟ್ಟಿದ್ದ ಸುಮಾರು 60 ಕ್ವಿಂಟಾಲ್ ಭತ್ತವನ್ನು ಕಾಡಾನೆಗಳ ಹಿಂಡು ತಿಂದು ಹಾಕಿರುವ ಘಟನೆ ಬೇಲೂರು (Beluru) ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಸೇರಿದಂತೆ 8 ಜನ ರೈತರು (Farmers) ಭತ್ತವನ್ನು ಕಟಾವು ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಿಸಲು ಸಿದ್ಧತೆ ನಡೆಸಿದ್ದರು. ತಡರಾತ್ರಿ 12 ಕಾಡಾನೆಗಳ ಹಿಂಡು ದಾಳಿ ಮಾಡಿ ಭತ್ತ ತಿಂದು ಹಾಕಿವೆ. ಅಲ್ಲದೇ ಉಳಿದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಅಂದಾಜು 3 ಲಕ್ಷ ರೂ. ಮೌಲ್ಯದ ಭತ್ತವನ್ನು ಗಜಪಡೆ ನಾಶ ಮಾಡಿವೆ.
ಕಷ್ಟಪಟ್ಟು ಬೆಳೆದಿದ್ದ ಭತ್ತದ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದು, ಕಣ್ಣೀರಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ: ತಾನೇ ಸಾಕಿ ಸಲುಹುತ್ತಿದ್ದ ಮಾವುತನನ್ನು ಆನೆಯೊಂದು (Elephant) ಸೊಂಡಿಲಿನಿಂದ ತಿವಿದು ಕೊಂದಿರುವ ಮನಕಲಕುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದೆ.
ಅಲಖನೂರ ಗ್ರಾಮದ ಕರಿಯಪ್ಪ ಬೇವನೂರ (30) ಮೃತ ದುರ್ದೈವಿ. ಅಲಖನೂರ ಶ್ರೀ ಕರಿಸಿದ್ದೇಶ್ವ ದೇವಸ್ಥಾನದ 21 ವರ್ಷದ ಧ್ರುವ ಹೆಸರಿನ ಆನೆ ತನ್ನ ಮಾವುತನನ್ನೆ ಸಾಯಿಸಿದೆ. ಇದನ್ನೂ ಓದಿ: ಖ್ಯಾತ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಇನ್ನಿಲ್ಲ
ಭಾನುವಾರ ರಾತ್ರಿ ಆನೆಗೆ ಮದ ಬಂದಿತ್ತು. ಇಂದು ಬೆಳಗ್ಗೆ ಕರಿಯಪ್ಪ ಮೇವು ಹಾಕಲು ಹೋದಾಗ ಗಂಡಾನೆ ಸೊಂಡಿಲಿನಿಂದ ಹಾಗೂ ದಂತಗಳಿಂದ ತಿವಿದು ಹತ್ಯೆ ಮಾಡಿದೆ.
ಕಳೆದ 10 ದಿನದ ಹಿಂದೆಯಷ್ಟೇ ಕರಿಯಪ್ಪಗೆ ಗಂಡು ಮಗು ಜನಿಸಿತ್ತು. ಕರಿಯಪ್ಪ ಸಾವಿನ ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ (Elephant) ದಾಳಿ ನಡೆಸಿದ್ದು, ನಾಲ್ವರು ಗಾಯಗೊಂಡ ಘಟನೆ ಬೇಲೂರಿನ (Belur) ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ನಾಲ್ವರು ಕಾರ್ಮಿಕರು ಬಿದ್ದು ಗಾಯವಾಗಿದೆ. ಗಾಯಾಳುಗಳನ್ನು ನೇತ್ರಾವತಿ, ಮಂಜಾಕ್ಷಿ, ಅಕ್ಕಮ್ಮ ಹಾಗೂ ಕಾತುರ್ ಎಂದು ಗುರುತಿಸಲಾಗಿದೆ. ಬಿಕ್ಕೋಡು ಎಸ್ಟೇಟ್‍ಗೆ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.
ಬೀಟಮ್ಮ ಗ್ಯಾಂಗ್‍ನಿಂದ ಬೇರ್ಪಟ್ಟಿರುವ ಆನೆ ದಾಳಿ ನಡೆಸಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಕಾರ್ಮಿಕರು ಪಾರಾಗಿದ್ದಾರೆ. ಗಾಯಾಳುಗಳಿಗೆ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆ ಬಗ್ಗೆ ಮಾಹಿತಿ ನೀಡದ ಮೇಸ್ತ್ರಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಇನ್ನೂ ಎಸ್ಟೇಟ್‍ನಲ್ಲೇ ಬೀಡುಬಿಟ್ಟಿದ್ದು, ಆನೆಯನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ.
ಹಾಸನ: ಜಿಲ್ಲೆಯ ಹಲವೆಡೆ ಕಾಡಾನೆ ಹಾವಳಿಗಳು ಮುಂದುವರೆದಿದ್ದು, ಆನೆಗಳ ಚಲನವಲನದ ಬಗ್ಗೆ ಗಮನಹರಿಸಲು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿದೆ. ಎರಡನೇ ದಿನದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬೇಲೂರಿನ ಬಿಕ್ಕೋಡು ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನಲೆ ಶುಕ್ರವಾರ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿತ್ತು. ಇಂದು ಶನಿವಾರ ಅರವಳಿಕೆ ತಜ್ಞರು ಹೆಣ್ಣಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಸ್ವಲ್ಪ ಓಡಿದ ಹೆಣ್ಣಾನೆ ಆಮೇಲೆ ನಿಂತಿದೆ. ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ರೇಡಿಯೋ ಕಾಲರ್ ಅಳವಡಿಸಿ ಅದೇ ಎಸ್ಟೇಟ್‌ನಲ್ಲೇ ಕಾಡಾನೆಯನ್ನು ಬಿಡಲಾಗಿದೆ.
ಸಾಕಾನೆ ಭೀಮಾ ನೇತೃತ್ವದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆದಿದ್ದು ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಹೆಸರಿನ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಮಡಿಕೇರಿ: ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ತಿಂಗಳು ತರಬೇತಿ ನೀಡುವ ಕಾರ್ಯಾಗಾರಕ್ಕೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಚಾಲನೆ ಸಿಕ್ಕಿದೆ. ಆಂಧ್ರದ ಅರಣ್ಯ ಸಚಿವ ಪವನ್ ಕಲ್ಯಾಣ್ (Pawan Kalyan) ಅವರ ಮನವಿ ಮೇರೆಗೆ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
ಕಾಡಾನೆ (Forest Elephant) ಸೇರಿದಂತೆ ವನ್ಯಜೀವಿಗಳ ಸಮಸ್ಯೆ ಕರ್ನಾಟಕ ಮಲೆನಾಡು ಭಾಗದಲ್ಲಿ ಮಾತ್ರವಲ್ಲ, ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲೂ ಹೆಚ್ಚಾಗಿದೆ. ಕಾಡಾನೆಗಳ ಹಾವಳಿಯಂತು ಮಿತಿಮೀರಿಹೋಗಿದೆ. ನಾಡಿಗೆ ನುಗ್ಗುವ ಆನೆಗಳನ್ನ ಮತ್ತೆ ಕಾಡಿಗಟ್ಟಲು ನುರಿತ ಮಾವುತರು ಹಾಗೂ ಕಾವಾಡಿಗಳು ಇಲ್ಲದೇ ಇರೋದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ವನ್ಯಜೀವಿ ನಿರ್ವಹಣೆ ಕುರಿತು ರಾಜ್ಯದ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಬೇಕೆಂದು ಕರ್ನಾಟಕದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ (Eshwar Khandre) ಅವರಿಗೆ ಪವನ್ ಕಲ್ಯಾಣ್ ಮನವಿ ಮಾಡಿದ್ದರು. ಅದರಂತೆ ಎರಡು ರಾಜ್ಯಗಳ ಅರಣ್ಯ ಇಲಾಖೆಗಳ ಪರಸ್ಪರ ಸಹಕಾರದೊಂದಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ
ಆಂಧ್ರ ಪ್ರದೇಶದ 17 ಮಾವುತ ಮತ್ತು ಕಾವಾಡಿಗರು, ನಾಲ್ವರು ಇಲಾಖೆ ಸಿಬ್ಬಂದಿ ಸೇರಿ 21 ಮಂದಿಗೆ ನಮ್ಮ ರಾಜ್ಯದ ಮಾವುತರು ಮತ್ತು ಕವಾಡಿಗಳು ತರಬೇತಿ ನೀಡುತ್ತಿದ್ದಾರೆ. ಸಾಕಾನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ಕೊಡುವುದು, ಇಂತಹದ್ದೇ ಪದಗಳನ್ನು ಬಳಸಿ ಆನೆಗಳನ್ನು ಮಾತನಾಡಿಸುವುದು, ವನ್ಯಜೀವಿ ಸಂಘರ್ಷ ತಡೆಯುವುದು ಸೇರಿದಂತೆ ಇನ್ನಿತರ ವನ್ಯಜೀವಿ ನಿರ್ವಹಣೆ ಕುರಿತು ಹೇಳಿಕೊಡುತ್ತಿದ್ದಾರೆ. ಇದನ್ನೂ ಓದಿ: ಕೋಲಾರಕ್ಕೆ ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕು, ನಾನು ಅರ್ಹನಿದ್ದೇನೆ: ಕೆವೈ ನಂಜೇಗೌಡ
ಆನೆ ಪಳಗಿಸುವುದು ಹೇಗೆ?
ಒಂದು ಆನೆಯನ್ನು ಪಳಗಿಸಿ ಸರಿದಾರಿಗೆ ತರೋದು ಮಕ್ಕಳಿಗೆ ಅ, ಆ, ಇ, ಈ ಕಲಿಸಿದಷ್ಟು ಸುಲಭದ ಕೆಲಸವಲ್ಲ. ಕೊಂಚ ಯಡವಟ್ಟಾದ್ರೂ ಪ್ರಾಣವೇ ಹೋಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಾವುತರು ಬಹಳ ಜಾಣ್ಮೆಯಿಂದಲೇ ಪಾಠ ಹೇಳಿಕೊಡುತ್ತಾರೆ. ಒಂದೊಂದೇ ಪದವನ್ನು ಕಲಿಸುತ್ತಾ… ಆನೆ ತಮ್ಮ ಮಾತಿಗೆ ಸ್ಪಂದಿಸಿದಾಗ ಶಬ್ಬಾಸ್ ಹೇಳಿ ಮೈದಡವಿ ಖುಷಿಡಿಸುತ್ತಾರೆ.
ಚಿಕ್ಕಮಗಳೂರು: ಕಾಡಾನೆ (Elephant) ದಾಳಿಯಿಂದ ರೈತನೊಬ್ಬ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ (N.R Pura) ತಾಲೂಕಿನ ಸೀತೂರು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೆರೆಗದ್ದೆ ಗ್ರಾಮದ ಉಮೇಶ್ (56) ಎಂದು ಗುರುತಿಸಲಾಗಿದೆ. ಸೀತೂರು ಗ್ರಾಮಕ್ಕೆ ಮೂರು ಕಾಡಾನೆಗಳು ಬಂದಿದ್ದು, ಹೊಲ-ಗದ್ದೆ-ತೋಟಗಳ ಮೇಲೆ ದಾಂಧಲೆ ಮಾಡುತ್ತಿದ್ದವು. ಆನೆ ಹಾವಳಿಯಿಂದ ಕಂಗಾಲದ ರೈತರು ಆನೆಗಳನ್ನ ಓಡಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಆನೆಗಳು ಕಂಡ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ (Forest Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರೈತನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾಡಾನೆಗಳನ್ನು ಜಮೀನುಗಳಿಂದ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ: ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಸೋಮವಾರ ಪೇಟೆ ತಾಲ್ಲೂಕಿನ ಭುವಂಗಾಲ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ (Elephant) ಹಿಂಡು ಬೀಡುಬಿಟ್ಟಿವೆ. ಇದರಿಂದಾಗಿ ಜನ ಆತಂಕಗೊಂಡಿದ್ದಾರೆ.
ರಸ್ತೆಯಲ್ಲೇ ಕೆಲಕಾಲ ಅಡ್ಡಗಟ್ಟಿದ್ದ ಕಾಡಾನೆಗಳು ಬಳಿಕ ಸುತ್ತಮುತ್ತಲಿನ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ. ಇದರಿಂದ ಅಪಾರ ಬೆಳೆ ನಾಶವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಹಿಂಡನ್ನು ಪುನಃ ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ
ಮಧ್ಯಪ್ರದೇಶದ (Madhya Pradesh) ಬಾಂಧವಗಢ (Bandhavgarh) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಾರೋಗ್ಯದಿಂದ ಇತ್ತೀಚೆಗೆ ಮೂರು ದಿನಗಳ ಅಂತರದಲ್ಲಿ 11 ಆನೆಗಳು (Elephant) ಸಾವನ್ನಪ್ಪಿವೆ. ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಕಿತೋಳಿ ವ್ಯಾಪ್ತಿಯ ಸಂಖಾನಿ ಮತ್ತು ಬಾಕೇಲಿಯಲ್ಲಿ ನಾಲ್ಕು ಕಾಡಾನೆಗಳು ಮೃತಪಟ್ಟಿವೆ. ಇನ್ನೂ ಎರಡು ದಿನದ ಅಂತರದಲ್ಲಿ 6 ಆನೆಗಳು ಸಾವನ್ನಪ್ಪಿದ್ದವು. ಇನ್ನೊಂದು ಆನೆ ಭಾನುವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ.
ಮೃತಪಟ್ಟ 11 ಆನೆಗಳು 13 ಆನೆಗಳ ಹಿಂಡಿನ ಭಾಗವಾಗಿದ್ದವು. ಸಾವಿಗೀಡಾದ ಆನೆಗಳಲ್ಲಿ ಒಂದು ಗಂಡು ಆನೆಯಾಗಿದ್ದು, ಉಳಿದಂತೆ ಎಲ್ಲಾ ಹೆಣ್ಣು ಆನೆಗಳಾಗಿವೆ. ಗುಂಪಿನಲ್ಲಿ ಉಳಿದ 2 ಆನೆಗಳು ಆರೋಗ್ಯವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆನೆಗಳಿಂದ ಸಂಗ್ರಹಿಸಲಾದ ಅಂಗಾಂಗಗಳ ಮಾದರಿಗಳನ್ನು ಉತ್ತರ ಪ್ರದೇಶದ ಐಸಿಎಆರ್-ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಮಧ್ಯಪ್ರದೇಶದ ಸಾಗರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೀಸಲು ಸಿಬ್ಬಂದಿ ಸಾವನ್ನಪ್ಪಿದ ಆನೆಗಳ ಬಗ್ಗೆ ಮಾಹಿತಿ ನೀಡಿ, ಆನೆಗಳು ಸಾಯುವ ಮೊದಲು ನೆಲಕ್ಕೆ ಬಿದ್ದು ನಡುಗುತ್ತಿದ್ದವು ಎಂದು ತಿಳಿಸಿದ್ದರು.
ಆನೆಗಳ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಆನೆಗಳ ಸಾವಿಗೆ ಕೊಡೋ ರಾಗಿ ಕಾರಣ ಎಂದು ಶಂಕಿಸಲಾಗಿದೆ. ಕೊಡೋ ರಾಗಿ ದೇಹದಲ್ಲಿ ಮೈಕೋಟಾಕ್ಸಿನ್‌ಗಳನ್ನು ಉತ್ಪಾದಿಸುತ್ತದೆ. ಇದು ಸೈಕ್ಲೋಪಿಯಾಜೋನಿಕ್ ಆಮ್ಲದ ಉತ್ಪಾದನೆಗೆ ಕಾರಣವಾಗುತ್ತದೆ. ಇದು ದೇಹದಲ್ಲಿ ವಿಷವನ್ನು ಉಂಟುಮಾಡುತ್ತದೆ ಎಂದು ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆ ಹಾಕಲು ಅರಣ್ಯ ಅಧಿಕಾರಿಗಳು, ಆನೆಗಳು ಮೃತಪಟ್ಟ ಸಮೀಪದ ಹೊಲಗಳಿಂದ ಸಂಗ್ರಹಿಸಿದ ‘ಕೊಡೋ ರಾಗಿ’ ಮತ್ತು ಆನೆಗಳ ಹೊಟ್ಟೆಯಿಂದ ಸಂಗ್ರಹಿಸಿದ ಮಾದರಿಯನ್ನು ಐಸಿಎಆರ್- ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಉತ್ತರಪ್ರದೇಶ ಮತ್ತು ಸಾಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇನ್ನೂ, ಮೂರು ದಿನಗಳಲ್ಲಿ 11 ಆನೆಗಳು ಸಾವನ್ನಪ್ಪಿರುವುದು ದೇಶದಲ್ಲಿ ಇದೇ ಮೊದಲ ನಿದರ್ಶನ ಎಂದು ಕೆಲವು ವನ್ಯಜೀವಿ ತಜ್ಞರು ಹೇಳಿದ್ದಾರೆ.
ಆನೆಗಳಿಗೆ ವಿಷಪ್ರಾಶನ?
ಮಧ್ಯ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿಗಳು, ವಿಷ ಪ್ರಾಶನದಿಂದ ಆನೆಗಳು ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಡೋ ರಾಗಿ ಎಂದರೇನು?
ಕೊಡೋ ರಾಗಿ (Paspalum scrobiculatum) ಅನ್ನು ಭಾರತದಲ್ಲಿ ಕೊಡ್ರ ಮತ್ತು ವರಗು ಎಂದೂ ಕರೆಯಲಾಗುತ್ತದೆ. ಈ ಬೆಳೆಯನ್ನು ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯಲಾಗುತ್ತದೆ.
ಈ ಕೊಡೋ ರಾಗಿ ಸೇವಿಸಿ 1983ರಲ್ಲಿ ಆನೆಗಳು ಮೃತಪಟ್ಟ ಬಗ್ಗೆ ವರದಿ ಇದೆ. ಇನ್ನೂ 1922 ರಲ್ಲಿ ಉತ್ತರ ಪ್ರದೇಶದಲ್ಲಿ ಕೊಡೋ ರಾಗಿ ಸೇವನೆಯಿಂದ ಕೆಲವು ವ್ಯಕ್ತಿಗಳಲ್ಲಿ ವಿಷದ ಅಂಶ ಪತ್ತೆ ಆಗಿತ್ತು. ಇದಕ್ಕೆ ರಾಗಿಯಲ್ಲಿನ ಮೈಕೋಟಾಕ್ಸಿನ್ ಸೈಕ್ಲೋಪಿಯಾಜೋನಿಕ್ ಆ್ಯಸಿಡ್(CPA) ಎಂಬ ಅಂಶ ಕಾರಣ ಎಂದು ವರದಿಯಾಗಿತ್ತು.
ಕೊಡೋ ರಾಗಿ ತೇವಾಂಶವುಳ್ಳ ಸ್ಥಿತಿಯಲ್ಲಿ ಕೊಯ್ಲು ಮಾಡುವಾಗ ಶಿಲೀಂದ್ರಗಳ ಸೋಂಕು ಹೆಚ್ಚಾಗಿ ಇದು ವಿಷಕಾರಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಕೆಲವು ಪ್ರಕರಣಗಳಲ್ಲಿ ಮನುಷ್ಯರು ಮತ್ತು ಪ್ರಾಣಿಗಳಲ್ಲೂ ಒಂದೇ ರೀತಿಯ ರೋಗಲಕ್ಷಣ ಪತ್ತೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕೊಡೋ ರಾಗಿ ಏಕೆ ವಿಷವಾಗುತ್ತದೆ?
ಮುಖ್ಯವಾಗಿ ಒಣ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಕೊಡೋ ರಾಗಿ ಬೆಳೆಯಲಾಗುತ್ತದೆ. ಈ ರಾಗಿ ಬ್ಯಾಕ್ಟೀರಿಯಾ ಮತ್ತು ಎರ್ಗೋಟ್ ಎಂಬ ಶಿಲೀಂಧ್ರಗಳ ಸೋಂಕಿಗೆ ಹೆಚ್ಚು ಗುರಿಯಾಗುತ್ತದೆ. ಕೊಯ್ಲು ಮಾಡುವಾಗ ಬೀಳುವ ಮಳೆಯಿಂದ ಈ ಶಿಲೀಂದ್ರದ ಸೋಂಕು ಉಂಟಾಗುತ್ತದೆ. ಇದನ್ನು ಸ್ಥಳೀಯವಾಗಿ ಮಾತಾವ್ನಾ ಕೊಡು ಅಥವಾ ಮಾಟೋನಾ ಕೊಡೋ ಎಂದು ಕರೆಯಲಾಗುತ್ತದೆ. ಈ ಸೋಂಕಿಗೊಳಗಾದ ರಾಗಿಯ ಸೇವನೆಯಿಂದ ಪ್ರಾಣಿಗಳ ದೆಹಕ್ಕೆ ವಿಷದ ಅಂಶ ಸೇರುತ್ತದೆ.
ಪ್ರಾಣಿಗಳ ಮೇಲೆ ಕೊಡೋ ರಾಗಿ ವಿಷಕಾರಿ ಪ್ರಭಾವ ಏನು?
ಕೊಡೋ ವಿಷವು ಮುಖ್ಯವಾಗಿ ನರ ಮತ್ತು ಹೃದಯರಕ್ತನಾಳದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಂತಿ, ತಲೆತಿರುಗುವಿಕೆ ಮತ್ತು ಪ್ರಜ್ಞೆ ಕಳೆದುಕೊಳ್ಳುವಿಕೆ, ಕೈಕಾಲುಗಳ ನಡುಕ ಉಂಟಾಗಲಿದೆ. ಅಲ್ಲದೇ ಯಕೃತ್, ಹೃದಯದಲ್ಲಿ ಕ್ಯಾಲ್ಸಿಯಂ ಅಂಶದ ಮೇಲೆ ಪರಿಣಾಮ ಬೀರುವ ಮೂಲಕ ಹೃದಯವನ್ನು ದುರ್ಬಲಗೊಳಿಸುತ್ತದೆ. ಜಠರ, ಕರುಳಿನ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಪರಿಹಾರವೇನು?
ಬೆಳೆಗಳ ಮೇಲೆ ಬೆಳೆಯುವ ಶಿಲೀಂದ್ರಗಳನ್ನು ನಾಶಮಾಡಲು ಬೇರೆ ಜೀವಿಗಳ ಬಳಕೆ ಮಾಡುವುದು. ಸಂಶೋಧಕರ ಪ್ರಕಾರ ಅನೇಕ ಸೂಕ್ಷ್ಮಜೀವಿಗಳು ಶಿಲೀಂಧ್ರ ಬೆಳವಣಿಗೆ ಮತ್ತು ಮೈಕೋಟಾಕ್ಸಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಬೆಳೆ ಕಟಾವಿನ ಬಳಿಕ ಸರಿಯಾದ ಸಂಗ್ರಹಣೆ, ಉತ್ತಮ ಕೃಷಿ ಪದ್ಧತಿಯ ಅಳವಡಿಕೆ ಅಗತ್ಯವಾಗಿದೆ. ತೇವಾಂಶವುಳ್ಳ ವಾತಾವರಣದಲ್ಲಿ ಶಿಲೀಂಧ್ರಗಳು ವೇಗವಾಗಿ ಹರಡುವುದರಿಂದ ಕೊಯ್ಲು ಮಾಡಿದ ರಾಶಿಗಳು ಮಳೆಯಿಂದ ರಕ್ಷಣೆ ಮಾಡಬೇಕು. ಒಣಗಿಸುವ ಮೊದಲು ಸಸ್ಯಗಳನ್ನು ತೇವಗೊಳಿಸಿ ಒಕ್ಕಣೆ ಮಾಡುವ ಹಳೆಯ ಅಭ್ಯಾಸವನ್ನು ನಿಲ್ಲಿಸಬೇಕು. ಸೋಂಕಿತ ಧಾನ್ಯಗಳನ್ನು ತೆಗೆದುಹಾಕುವುದು ಸಹ ರೋಗದ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.
ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಆಲ್ದೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ (Elephant) ಹಿಂಡು ಬೀಡುಬಿಟ್ಟಿದೆ. ಇದರಿಂದಾಗಿ ಆಲ್ದೂರು ಸುತ್ತ ಮುತ್ತಲಿನ 10 ಹಳ್ಳಿಗಳಲ್ಲಿ ಶನಿವಾರ ರಾತ್ರಿಯಿಂದ ಇಂದು (ಭಾನುವಾರ) ರಾತ್ರಿ 9:00 ಗಂಟೆ ವರೆಗೂ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ತುಡುಕೂರು, ಆಲ್ದೂರು ಹೊಸಳ್ಳಿ, ತೋರಣಮಾವು, ಚಿತ್ತುವಳ್ಳಿ, ಆಲ್ದೂರುಪುರ, ಮಡೆನೇರಳು, ದೊಡ್ಡಮಾಗರವಳ್ಳಿ, ಗುಲ್ಲನ್ ಪೇಟೆ, ಹಾಂದಿ ಹಾಗೂ ಕೆಳಗೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಗ್ರಾಮಗಳಲ್ಲಿ 5 ಜನ ಸೇರುವಂತಿಲ್ಲ, ಕಾರ್ಮಿಕರು ಮನೆಯಿಂದ ಹೊರಬರುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
17 ಆನೆಗಳ ತಂಡದ ಬೀಟಮ್ಮ ಗ್ಯಾಂಗಿನಲ್ಲಿ 1 ಸಲಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಸಲಗ ಸಾವನ್ನಪ್ಪಿದ ಜಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲೇ ಕಾಡಾನೆ ಹಿಂಡು ಬೀಡುಬಿಟ್ಟಿದೆ.
ಬೀಟಮ್ಮ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಆಲ್ದೂರು ಸಮೀಪದ ತುಡುಕೂರಿನಲ್ಲಿ ರೈತರೊಬ್ಬರ (Farmer) ಜಮೀನಿನಲ್ಲಿದ್ದ ಸಾವಿರಾರು ರೂ. ಮೌಲ್ಯದ ಪೈಪ್ ಹಾಗೂ ಔಷಧಿ ಸಿಂಪಡಿಸುವ ಯಂತ್ರವನ್ನು ಹಾಗೂ ಬ್ಯಾರಲ್‍ಗಳನ್ನು ಕಾಡಾನೆಗಳು (Elephant) ಧ್ವಂಸ ಮಾಡಿವೆ.
ರೈತರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ 17 ಆನೆಗಳು, ತೋಟದಲ್ಲಿ ಇಟ್ಟಿದ್ದ ಔಷಧದ ಬ್ಯಾರೆಲ್‍ಗಳ, ಸ್ಪ್ರೇಯರ್ ಮಿಷನ್, ಪೈಪ್ ಸೇರಿದಂತೆ ಕೃಷಿ ಸಲಕರಣೆಗಳನ್ನು ಧ್ವಂಸ ಮಾಡಿವೆ. ಗುರುವಾರ ಕಾಫಿ ತೋಟಕ್ಕೆ ಆನೆಗಳು ಲಗ್ಗೆ ಇಟ್ಟಿದ್ದವು. ಈ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೀವ ಭಯದಲ್ಲಿ ಓಡಿ ಹೋಗಿದ್ದರು.
ಕಾಫಿನಾಡಲ್ಲಿ ಕಾಡಾನೆಗಳ ಹಿಂಡಿನ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಆನೆಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೇ ಆನೆಗಳನ್ನು ಕಾಫಿ ತೋಟದಿಂದ ಓಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.