Tag: electric wire

  • ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

    ಮಡಿಕೇರಿ: ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಯುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ತಗುಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

    ಕೊಡಗಿನ ಆರ್ಜಿ ಗ್ರಾಮದ ನಿವಾಸಿ ಸಬಾಸ್ಟಿನ್ ಲೋಬೋ(60) ಮೃತ ದುರ್ದೈವಿ. ಪ್ರತಿ ದಿನದಂತೆ ಬೆಳಗ್ಗೆ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಇಂದು ಸಬಾಸ್ಟಿನ್ ಲೋಬೋ ಕಾಳು ಮೆಣಸು ಕೊಯ್ಯುವ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ವಿದ್ಯುತ್ ಕಂಬಕ್ಕೆ ಕಬ್ಬಿಣದ ಏಣಿ ಇಡುವ ಸಂದರ್ಭ ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ.

    ವಿದ್ಯುತ್ ತಂತಿಯಿಂದ ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಬಾಸ್ಟಿನ್ ಸಾವನಪ್ಪಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

    ಕೋಲಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

    ಕೋಲಾರ ತಾಲೂಕಿನ ಮೂರಾಂಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಂಗಮ್ಮ(41) ಮೃತ ದುರ್ದೈವಿ. 11 ಕೆವಿ ವಿದ್ಯುತ್ ತಂತಿ ಬಿದ್ದು, ನೀಲಗಿರಿ ತೋಪಿಗೆ ಬೆಂಕಿ ಹೊತ್ತಿ ಕೊಂಡು ಉರಿಯುತ್ತಿತ್ತು. ಇದನ್ನು ಆರಿಸಲು ಹೋದಾಗ ದುರ್ಘಟನೆ ನಡೆದಿದೆ.

    ತಂತಿಯನ್ನು ಸರಿಯಾಗಿ ನಿರ್ವಹಿಸದಿರುವುದೇ ಅವಘಡಕ್ಕೆ ಕಾರಣವಾಗಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಸ್‍ಗೆ ತಾಗಿದ 11 ಸಾವಿರ ವೋಲ್ಟ್ ವಿದ್ಯುತ್ ತಂತಿ – 11 ಮಂದಿ ಸಜೀವ ದಹನ

    ಬಸ್‍ಗೆ ತಾಗಿದ 11 ಸಾವಿರ ವೋಲ್ಟ್ ವಿದ್ಯುತ್ ತಂತಿ – 11 ಮಂದಿ ಸಜೀವ ದಹನ

    – ತೀರ್ಥಯಾತ್ರೆಗೆ ಹೊರಟಿದ್ದ 36 ಜನರು

    ಜೈಪುರ: ರಾಜಸ್ಥಾನದ ಜಲೌರ್ ನಲ್ಲಿ ಶನಿವಾರ ರಾತ್ರಿ ಸುಮಾರು 10.45ಕ್ಕೆ ಭೀಕರ ಅವಘಢ ಸಂಭವಿಸಿದ್ದು, 11 ಸಾವಿರ ವೋಲ್ಟ್ ವಿದ್ಯುತ್ ತಂತಿ ತಾಗಿದ ಪರಿಣಾಮ ಬಸ್ ಸುಟ್ಟು ಭಸ್ಮವಾಗಿದೆ. ಬಸ್ ನಲ್ಲಿದ್ದ ಆರು ಜನರ ಸಜೀವ ದಹನವಾಗಿದ್ದಾರೆ. ಜಲೌನ್ ನಗರದ ಏಳು ಕಿಲೋ ಮೀಟರ್ ದೂರದಲ್ಲಿರುವ ಮಹೇಶಪುರ ಗ್ರಾಮದಲ್ಲಿ ಈ ದುರಂತ ನಡೆದಿದೆ.

    ಜೈನ ಸಮುದಾಯದ 36 ಜನರು ನಾಕೋಡ ತೀರ್ಥ ಕ್ಷೇತ್ರದ ದರ್ಶನ ಪಡೆದು ಅಜ್ಮೇರ್ ನತ್ತ ಪ್ರಯಾಣ ಬೆಳೆಸಿದ್ದರು. ಗಾಯಾಳುಗಳನ್ನು ಜಲೌರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನ ಜೋಧಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕೆಲವರ ಗುರುತು ಪತ್ತೆಯಾಗಿದ್ದು, ಹಲವರ ಗುರುತು ಪತ್ತೆಯಾಗಿಲ್ಲ.

    ಶುಕ್ರವಾರ ಎರಡು ಖಾಸಗಿ ಬಸ್ ಗಳಲ್ಲಿ ಯಾತ್ರಿಗಳು ಬೀವಾರ್ ನತ್ತ ಪ್ರಯಾಣ ಬೆಳೆಸಿದ್ದರು. ಶನಿವಾರ ಜಲೌರ್ ನಲ್ಲಿರುವ ಜೈನ ಮಂದಿರದ ದರ್ಶನ ಪಡೆದು ಅಜ್ಮೇರ್ ಮಾರ್ಗವಾಗಿ ಬೀವರ್ ನತ್ತ ಹೊರಟಿದ್ದರು. ರಾತ್ರಿ ಊಟದ ಬಳಿಕ ಚಾಲಕ ಗೂಗಲ್ ಮ್ಯಾಪ್ ಬಳಸಿ ಮಹೇಶಪುರ ಗ್ರಾಮದ ಸಂಕಲಿ ಗಲ್ಲಿಗಳ ಮೂಲಕ ಹೊರಟಿದ್ದನು. ಗ್ರಾಮದಲ್ಲಿಯ ವಿದ್ಯುತ್ ತಂತಿಗೆ ಬಸ್ ಮೇಲ್ಭಾಗ ತಾಗಿದ್ದರಿಂದ ಬೆಂಕಿ ಹತ್ತಿಕೊಂಡಿದೆ.

    ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬೀವರ್ ನತ್ತ ಹೊರಟಿದ್ದನು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುತ್ತಿದ್ದರಿಂದ ಓರ್ವ ಬಸ್ ಮೇಲ್ಭಾಗದಲ್ಲಿ ಕೇಬಲ್, ವಿದ್ಯುತ್ ತಂತಿ ತಗುಲದಂತೆ ನೋಡಿಕೊಳ್ಳುತ್ತಿದ್ದಂತೆ ನೋಡಿಕೊಳ್ಳುತ್ತಿದ್ದನು. ಮೇಲೆ ನಿಂತಿದ್ದವನಿಗೆ ವಿದ್ಯುತ್ ಸ್ಪರ್ಶಗೊಂಡಿದ್ದರಿಂದ ಬಸ್ ಗೆ ಬೆಂಕಿ ತಗುಲಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

  • ಶಿಕ್ಷಕಿ ಮೇಲೆ ಬಿತ್ತು ವಿದ್ಯುತ್ ತಂತಿ – 20 ನಿಮಿಷದಲ್ಲಿ ಸುಟ್ಟು ಕರಕಲಾದ ಮಹಿಳೆ

    ಶಿಕ್ಷಕಿ ಮೇಲೆ ಬಿತ್ತು ವಿದ್ಯುತ್ ತಂತಿ – 20 ನಿಮಿಷದಲ್ಲಿ ಸುಟ್ಟು ಕರಕಲಾದ ಮಹಿಳೆ

    – 11 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್

    ಜೈಪುರ: ಶಾಲೆಗೆ ಹೊರಟಿದ್ದ ಶಿಕ್ಷಕಿ ಮೇಲೆ 11 ಕೆವಿ ವಿದ್ಯುತ್ ತಂತಿ ಬದ್ದ ಘಟನೆ ರಾಜಸ್ಥಾನದ ಬಾಂಸ್ವಾಡ ಜಿಲ್ಲೆಯ ನೊಗ್ಮಾದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿ ಸಂಪೂರ್ಣ ಸುಟ್ಟ ಕರಕಲಾಗಿ ಸಾವನ್ನಪ್ಪಿದ್ದಾರೆ.

    25 ವರ್ಷದ ನೀಲಂ ಸಾವನ್ನಪ್ಪಿದ ಶಿಕ್ಷಕಿ. ಗುರುವಾರ ಬೆಳಗ್ಗೆ ತಮ್ಮ ಸ್ಕೂಟಿಯಲ್ಲಿ ನೀಲಂ ಶಾಲೆಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 10 ಗಂಟೆಗೆ ಪಾಟಿದಾರ್ ಸೇತುವೆ ದಾಟಿ ಹೋಗ್ತಿರುವಾಗ ವಿದ್ಯುತ್ ತಂತಿ ತುಂಡಾಗಿ ಶಿಕ್ಷಕಿ ಮೇಲೆ ಬಿದ್ದಿದೆ. ಘಟನೆಗೂ ಮುನ್ನ ಮಳೆಯಾಗಿತ್ತು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ಭಯಗೊಂಡ ಸ್ಥಳೀಯರು ರಕ್ಷಣೆಗೆ ಹಿಂದೇಟು ಹಾಕಿದ್ದಾರೆ. ಆದ್ರೆ ವಿದ್ಯುತ್ ಇಲಾಖೆ ಸಹಾಯವಾಣಿ, ಸ್ಥಳೀಯ ಸಿಬ್ಬಂದಿ, ಪೊಲೀಸರು, ಅಂಬುಲೆನ್ಸ್ ಸಿಬ್ಬಂದಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

    ಸ್ಥಳೀಯರು ಫೋನ್ ಮಾಡಿ ವಿಷಯ ತಿಳಿಸಿದ್ರೂ ಸಿಬ್ಬಂದಿ 20 ನಿಮಿಷದ ಬಳಿಕ ವಿದ್ಯುತ್ ಕಡಿತಗೊಳಿಸಿದ್ದಾರೆ. ಫೋನ್ ಮಾಡಿದಾಗ ವಿದ್ಯುತ್ ಕಡಿತಗೊಳಿಸಿದ್ರೆ ಶಿಕ್ಷಕಿ ಬದುಕುತ್ತಿದ್ದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಿದೋರ ನಿವಾಸಿಯಾಗಿದ್ದು ನೀಲಂ, ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಉದಯಪುದಲ್ಲಿ ಸರ್ಕಾರಿ ನೌಕರರಾಗಿದ್ದು, ದಂಪತಿಗೆ ಐದು ವರ್ಷದ ಮಗನಿದ್ದಾನೆ.

    ಅರ್ಧಗಂಟೆಯ ಬಳಿಕ ಸ್ಥಳಕ್ಕಾಗಮಿಸಿದ ಅಂಬುಲೆನ್ಸ್ ಸಿಬ್ಬಂದಿ ಮಹಿಳೆ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಆರು ತಿಂಗಳ ಹಿಂದೆ ಇದೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿವೆ. ಈ ಘಟನೆಗೆ ವಿದ್ಯುತ್ ಇಲಾಖೆಯ ಬೇಜಾವಾಬ್ದಾರಿಯೇ ಕಾರಣ ಎಂದು ಶಿಕ್ಷಕಿ ಕುಟುಂಬಸ್ಥರು ಆರೋಪಿಸಿದ್ದಾರೆ.

  • ಮನೆ ಮುಂದೆ ವಿದ್ಯುತ್ ತಂತಿ ಸ್ಪರ್ಶಿಸಿ 6ರ ಬಾಲಕ ಸಾವು

    ಮನೆ ಮುಂದೆ ವಿದ್ಯುತ್ ತಂತಿ ಸ್ಪರ್ಶಿಸಿ 6ರ ಬಾಲಕ ಸಾವು

    ಬಳ್ಳಾರಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದಲ್ಲಿ ನಡೆದಿದೆ.

    ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದ ಮಹಮ್ಮದ್ ಶರೀಫ್ (6) ಮೃತಪಟ್ಟ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ. ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಅರ್ಥಿಂಗ್ ತಂತಿಯನ್ನು ಆಟವಾಡುವ ಸಂದರ್ಭದಲ್ಲಿ ಮುಟ್ಟಿದ ಕಾರಣ ವಿದ್ಯುತ್ ಪ್ರವಹಿಸಿ ಬಾಲಕ ಸಾವಿಗೀಡಾಗಿದ್ದಾನೆ.

    ಹಲವಾರು ದಿನಗಳಿಂದ ವಿದ್ಯುತ್ ತಂತಿಯನ್ನು ತೆರೆವುಗೊಳಿಸುವಂತೆ ಮನೆಯವರು ಆಗ್ರಹಿಸಿದ್ದರು. ಆದರೆ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಈಗ ಅಧಿಕಾರಿಗಳ ನಿರ್ಲಕ್ಷ್ಯವೇ ಇಂದು ಮಗು ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಡು-ಕುರಿಗಳಿಗೆ ಮೇವು ತರಲು ಹೋಗಿ ಮರದ ಮೇಲೆ ಶವವಾದ ರೈತ

    ಆಡು-ಕುರಿಗಳಿಗೆ ಮೇವು ತರಲು ಹೋಗಿ ಮರದ ಮೇಲೆ ಶವವಾದ ರೈತ

    ಹಾಸನ: ಕುರಿ ಮತ್ತು ಆಡುಗಳಿಗೆ ಸೊಪ್ಪು ಕತ್ತರಿಸಲು ಮರದ ಮೇಲೆ ಹತ್ತಿದ್ದ ರೈತನೋರ್ವ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ರಾಗಿಮರೂರು ಗ್ರಾಮದಲ್ಲಿ ನಡೆದಿದೆ.

    38 ವರ್ಷದ ಧರ್ಮ ಮೃತ ದುರ್ದೈವಿ. ಧರ್ಮ ಅವರು ಕುರಿ ಮತ್ತು ಆಡುಗಳಿಗೆ ಸೊಪ್ಪು ಕಡಿಯಲು ಮರ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಮರದ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಮೃತ ಪಟ್ಟಿದ್ದಾರೆ. ಮೃತ ವ್ಯಕ್ತಿಯು ವ್ಯವಸಾಯದ ಜೊತೆಗೆ ಜೀಪು ಚಾಲಕನಾಗಿ ಕೆಲಸ ಮಾಡುತ್ತಿದ್ದರು.

    ದಿನ ಜೀಪು ಓಡಿಸಲು ಹೋಗುತ್ತಿದ್ದ ಧರ್ಮ ಅವರು, ಈ ದಿನ ಭಾನುವಾರವಾಗಿದ್ದರಿಂದ ಮನೆಯಲ್ಲೇ ಇದ್ದರು. ಈ ವೇಳೆ ತಾನೇ ಕುರಿ ಮೇಯಿಸಲು ಹೋದ ವೇಳೆ ಈ ಅವಘಡ ಸಂಭವಿಸಿದೆ. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ರಾಮನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

    ಹಾಸನ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 45 ವರ್ಷದ ರೈತ ಚಂದ್ರೇಗೌಡ ಮೃತ ದುರ್ದೈವಿ. ತಮ್ಮ ಹೊಲದಲ್ಲಿ ಬೆಳೆಯಲಾಗಿದ್ದ ಶುಂಠಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಹೋಗಿದ್ದಾಗ, ಹೊಲದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬದವರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಬೇಲೂರು ಪಿಎಸ್‍ಐ ಅಜೇಯ ಕುಮಾರ್, ಸಹಾಯಕ ಎಂಜಿನಿಯರ್ ಗಳಾದ ಕುಮಾರ್ ಹಾಗೂ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಾಯಚೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ಸಾವು

    ರಾಯಚೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ಸಾವು

    ರಾಯಚೂರು: ವಿದ್ಯುತ್ ತಂತಿ ತಗುಲಿ ತಂದೆ- ಮಗ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ.

    ಮಹೇಶ(46), ನವೀನ್(16) ಮೃತಪಟ್ಟ ದುರ್ದೈವಿಗಳು. ಇವರನ್ನು ಕಾಪಾಡಲು ಹೋದ ಇನ್ನೋರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆಯಿಂದ ರಾಯಚೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ವಿದ್ಯುತ್ ತಂತಿ ಪರಿಶೀಲಿಸಲು ಹೋದಾಗ ಮಹೇಶ್ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾನೆ.

    ತಂದೆಗೆ ಏನಾಗಿದೆ ಎಂದು ನೋಡಲು ಹೋಗಿ ಮಗ ನವೀನ್ ಕೂಡ ಕೆಳಗೆ ಬಿದ್ದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಸ್ಥಳೀಯರೊಬ್ಬರು ನವೀನ್ ನನ್ನ ರಕ್ಷಣೆಗೆ ಮುಂದಾದಾಗ ಅವರಿಗೂ ವಿದ್ಯುತ್ ಸ್ಪರ್ಶವಾಗಿದೆ. ಆದರೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ವಿದ್ಯುತ್ ತಂತಿ ಹರಿದು ಬಿದ್ದ ಬಗ್ಗೆ ಸ್ಪಷ್ಟತೆಯಿಲ್ಲ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

  • ವಿದ್ಯುತ್ ಸ್ಪರ್ಶದಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಸಾವು

    ವಿದ್ಯುತ್ ಸ್ಪರ್ಶದಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಸಾವು

    ರಾಯಚೂರು: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ತಾಲೂಕಿನ ಗುಂಜಹಳ್ಳಿ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿದ್ದಾನೆ. ಗುಂಜಹಳ್ಳಿ ಗ್ರಾಮದ ಬಾರಯ್ಯ (35) ಮೃತ ದುರ್ದೈವಿ. ಪ್ರೌಢಶಾಲೆ ಪಕ್ಕದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಾಮಗಾರಿ ನಡೆಯುತ್ತಿತ್ತು. ಇದಕ್ಕಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ವಿದ್ಯುತ್ ತಂತಿ ಸ್ಪರ್ಷದಿಂದ ಇದೀಗ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಮೆಣಸಿಕಾಯಿ ಬಿಡಿಸಲು ಕೃಷಿ ಕೂಲಿ ಕಾರ್ಮಿಕ ಹೋಗಿದ್ದ. ಆಂಧ್ರ ಪ್ರದೇಶದಿಂದ ಮರಳಿ ಬಂದಿದ್ದ ಕಾರ್ಮಿಕರನ್ನು ಶಾಲೆಯಲ್ಲಿ ಕೊರಂಟೈನ್ ಮಾಡಲಾಗಿತ್ತು. ಶನಿವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿ ಕೆಳಗೆ ನೇತಾಡುತ್ತಿತ್ತು. ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬಾರಯ್ಯ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್, ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತುಂಡಾದ ವಿದ್ಯುತ್ ತಂತಿಯಿಂದ ಅಗ್ನಿ ಅವಘಡ – ಮಾವಿನ ತೋಟ ಭಸ್ಮ, ವ್ಯಕ್ತಿಗೆ ಗಾಯ

    ತುಂಡಾದ ವಿದ್ಯುತ್ ತಂತಿಯಿಂದ ಅಗ್ನಿ ಅವಘಡ – ಮಾವಿನ ತೋಟ ಭಸ್ಮ, ವ್ಯಕ್ತಿಗೆ ಗಾಯ

    ರಾಮನಗರ: ಮಾವಿನ ತೋಪಿನಲ್ಲಿ ಹಾಕಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಾವಿನ ತೋಪು ಭಸ್ಮವಾಗಿದ್ದಲ್ಲದೇ, ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬೆಂಕಿಯಿಂದ ಸುಟ್ಟ ಗಾಯಗಳಿಗೆ ಒಳಗಾಗಿರುವ ಘಟನೆ ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದಿದೆ.

    ಅಕ್ಕೂರು ಗ್ರಾಮದ ರೈತ ಸಂಪಂಗಿ ಎಂಬವರ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಮಾವಿನ ಸಸಿಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಮಧ್ಯಾಹ್ನದ ಉರಿ ಬಿಸಿಲಿನ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ಮಾರ್ಗದಲ್ಲಿ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಈ ವೇಳೆ ಉಂಟಾದ ಬೆಂಕಿಯ ಕಿಡಿಯಿಂದ ಬೆಂಕಿ ಹೊತ್ತಿದ್ದು, ಕ್ಷಣಾರ್ಧದಲ್ಲಿಯೇ ಇಡೀ ತೋಟವನ್ನು ಆವರಿಸಿ ಹೊತ್ತಿ ಉರಿದಿದೆ.

    ರೈತ ಸಂಪಗಿ ಬೆಂಕಿ ಹೊತ್ತಿದ್ದ ವೇಳೆ ತೋಟದಲ್ಲಿಯೇ ಕೆಲಸ ಮಾಡುತ್ತಿದ್ದರು. ಬೆಂಕಿ ತೋಟವನ್ನು ಆವರಿಸುತ್ತಿದ್ದ ಹಿನ್ನೆಲೆಯಲ್ಲಿ ಹಸಿ ಸೊಪ್ಪಿನ ಕಡ್ಡಿಗಳನ್ನು ಹಿಡಿದು ಬೆಂಕಿಯನ್ನು ಆರಿಸಲು ಮುಂದಾಗಿದ್ದಾರೆ. ಆದರೆ ಮೊದಲೇ ಒಣಗಿ ಹೋಗಿದ್ದ ಹುಲ್ಲು, ಅಂಚಿ ಹಾಗೂ ಕಸಕಡ್ಡಿಗಳಿಂದ ಬೆಂಕಿಯ ಕೆನ್ನಾಲಿಗೆ ಜೋರಾಗಿದ್ದು ರೈತ ಸಂಪಂಗಿಗೂ ಬೆಂಕಿ ಹೊತ್ತಿದೆ.

    ಈ ಘಟನೆಯಲ್ಲಿ ರೈತ ಸಂಪಂಗಿ ಹಾಕಿಕೊಂಡಿದ್ದ ಬಟ್ಟೆಗೆ ಬೆಂಕಿ ಹೊತ್ತಿದ್ದು ಬೆನ್ನು, ತಲೆ, ಕಾಲು, ಕೈಗಳಿಗೆ ಸುಟ್ಟು ಗಾಯಗಳಾಗಿದ್ದು, ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಉತ್ತಮ ಮಳೆಯಿಂದ ಈ ಬಾರಿ ಉತ್ತಮ ಫಸಲು ಬಿಡುವ ಮುನ್ಸೂಚನೆಯಾಗಿ ತೋಟದಲ್ಲಿದ್ದ ಮಾವಿನ ಸಸಿಗಳೆಲ್ಲ ಹೂ ಬಿಟ್ಟು, ಮಾವಿನ ಪೀಚುಗಳ ಗೊಂಚಲು ನೇತಾಡಿತ್ತಿದ್ದವು. ಆದರೆ ಇದೀಗ ಮಾವಿನ ತೋಟವೇ ಹೊತ್ತಿ ಉರಿಯುವುದರ ಜೊತೆಗೆ ರೈತ ಸಂಪಂಗಿಯೂ ಸುಟ್ಟು ಗಾಯಗಳಿಗೆ ಒಳಗಾಗಿರುವುದು ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.