Tag: Electric Vehicles

  • ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ- ಎಲೆಕ್ಟ್ರಿಕ್‌, ಸಿಎನ್‌ಜಿ ವಾಹನಗಳ ಸಂಚಾರಕ್ಕಷ್ಟೇ ಅನುಮತಿ

    ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ- ಎಲೆಕ್ಟ್ರಿಕ್‌, ಸಿಎನ್‌ಜಿ ವಾಹನಗಳ ಸಂಚಾರಕ್ಕಷ್ಟೇ ಅನುಮತಿ

    ನವದೆಹಲಿ: ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಮಾಲಿನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನವೆಂಬರ್‌ 27ರಿಂದ ಎಲೆಕ್ಟ್ರಿಕ್‌ ವಾಹನ, ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ)ದಿಂದ ಚಲಾಯಿಸಬಹುದಾದ ವಾಹನಗಳು ಹಾಗೂ ಅಗತ್ಯ ಸೇವೆಗಳ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ರಸ್ತೆಗೆ ಇಳಿಯದಂತೆ ಸೂಚನೆ ನೀಡಿದೆ.

    ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಪರಿಸರ ಸಚಿವ ಗೋಪಾಲ್‌ ರಾಯ್‌ ಅವರು, ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮಾಲಿನ್ಯಕಾರಕ ಅನಿಲ ಹೊರಸೂಸುವ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇಂಧನ ಹೊರಸೂಸುವ ವಾಹನಗಳು ಡಿಸೆಂಬರ್‌ 3ರವರೆಗೆ ರಸ್ತೆಗೆ ಇಳಿಯದಂತೆ ಖಡಕ್‌ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನವೆಂಬರ್ 30ರವರೆಗೆ ಮಳೆ ಬೀಳುವ ಸಂಭವವಿದೆ: ಆರ್.ಅಶೋಕ್

    ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಮಾಲಿನ್ಯ ಪ್ರಮಾಣ ಕಡಿಮೆಯಾದಾಗ ನ.29 ರಿಂದ ತರಗತಿಗಳನ್ನು ಪುನಾರಂಭಿಸಲಾಗುವುದು. ಎಲ್ಲಾ ಸರ್ಕಾರಿ ಕಚೇರಿಗಳು ಮುಂದಿನ ಸೋಮವಾರದಿಂದ ತೆರೆಯಲಿವೆ. ಸರ್ಕಾರಿ ನೌಕರರು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸಬೇಕು. ಅವರಿಗಾಗಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ

    ವಾಯು ಗುಣಮಟ್ಟ ಕೊಂಚ ಸುಧಾರಿಸಿದ ಕಾರಣ ಈಗಾಗಲೇ ಕಟ್ಟಡ ಕಾಮಗಾರಿ, ನೆಲಸಮ ಚಟುವಟಿಕೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

  • ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ(ಇವಿ) ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ ಎಂದು  ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
    ವೆಬಿನಾರ್‌ನಲ್ಲಿ ಮಾತನಾಡಿದ ಅವರು,  ಈಗಾಗಲೇ ಇವಿಗಳ ಮೇಲೆ ಜಿಎಸ್‌ಟಿ ಕೇವಲ ಶೇ.5ರಷ್ಟಿದ್ದು, ಲಿಥಿಯಂ ಆಯಾನ್ ಬ್ಯಾಟರಿಗಳ ಬೆಲೆಯೂ ಕಡಿಮೆಯಾಗುತ್ತಿದೆ. ಇದಲ್ಲದೆ ಪೆಟ್ರೋಲ್ ಪಂಪ್‌ಗಳು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಅನುಮತಿಸುವ ನೀತಿಯನ್ನು ಸರ್ಕಾರ ಈಗಾಗಲೇ ರೂಪಿಸಿದೆ. ಎರಡು ವರ್ಷಗಳಲ್ಲಿ ಭಾರತದಾದ್ಯಂತ ಸಾಕಷ್ಟು ಚಾರ್ಜಿಂಗ್ ಪಾಯಿಂಟ್‌ಗಳು ಇರಲಿದೆ ಎಂದು ತಿಳಿಸಿದರು.

    ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ.  ಪೆಟ್ರೋಲ್ ಆಧಾರಿತ ವಾಹನದಲ್ಲಿ ಪ್ರತಿ ಕಿಲೋಮೀಟರ್‌ಗೆ 10 ರೂ., ಡೀಸೆಲ್‌ ವಾಹನದಲ್ಲಿ 7 ರೂ. ಆದರೆ ಇವಿಗಳಲ್ಲಿ 1 ರೂ. ಆಗುತ್ತದೆ.  2030ರ ವೇಳೆಗೆ ಭಾರತದಲ್ಲಿ  ಖಾಸಗಿ ಕಾರು  30%, ವಾಣಿಜ್ಯ ವಾಹನಗಳಿಗೆ 70%, ಬಸ್‌ಗಳಿಗೆ 40% ಮತ್ತು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 80% ಇವಿ ಮಾರಾಟದ ಗುರಿಯನ್ನು ಹೊಂದಿದೆ. ಪ್ರಸ್ತುತ ದೇಶದಲ್ಲಿ ಕೇವಲ 2-3 ಎಲೆಕ್ಟ್ರಿಕ್‌ ಕಾರುಗಳ ಬೆಲೆ 15 ಲಕ್ಷ ರೂ.ಗಿಂತ ಕಡಿಮೆಯಿದೆ. ಸಬ್ಸಿಡಿ ನೀಡುವ ಹಿನ್ನೆಲೆಯಲ್ಲಿ  ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬೆಲೆ ಈಗಾಗಲೇ ಅಸ್ತಿತ್ವದಲ್ಲಿರುವ ಪೆಟ್ರೋಲ್‌ ವಾಹನಗಳಿಗೆ ಸರಿ ಸಮಾನವಾಗಿದೆ ಎಂದರು.
    ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಎಲೆಕ್ಟ್ರಿಕ್ ಹೈವೇ ವ್ಯವಸ್ಥೆಯನ್ನು ಸ್ಥಾಪಿಸಲು ಸಂಭಾವ್ಯ ಪೈಲಟ್ ಯೋಜನೆಯನ್ನು ಯೋಜಿಸಲಾಗುತ್ತಿದೆ.  ಪ್ರದೇಶದಲ್ಲಿ ಹೇರಳವಾಗಿ ಲಭ್ಯವಿರುವ ಸೌರ ಶಕ್ತಿಯ ಶಕ್ತಿಯನ್ನು ಬಳಸಿಕೊಂಡು ವಿದ್ಯುದ್ದೀಕರಿಸಬಹುದು. ಇದಲ್ಲದೇ ಇಂಧನ ಕೇಂದ್ರಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದರು. ಇದನ್ನೂ ಓದಿ: ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ
    ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2023 ರ ವೇಳೆಗೆ ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಕನಿಷ್ಠ 700 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ. ಇವುಗಳು 40-60 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಸರ್ಕಾರವು ಶೀಘ್ರದಲ್ಲೇ ದೇಶದ ಸಂಪೂರ್ಣ ವಿದ್ಯುತ್ ಟ್ರಾಕ್ಟರ್ ಅನ್ನು ಪ್ರಾರಂಭಿಸಲಿದೆ ಎಂದು ಗಡ್ಕರಿ ಹೇಳಿದರು. ಇದನ್ನೂ ಓದಿ: ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ಅನುಮಾನ
    ಪ್ರಸ್ತುತ, ಭಾರತವು  ವಿಶ್ವದ ನಾಲ್ಕನೇ ಅತಿದೊಡ್ಡ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ.  ಕಳೆದ ಎರಡು ವರ್ಷಗಳಲ್ಲಿ ಇ-ಸ್ಕೂಟರ್‌ಗಳು, ಇ-ಕಾರ್ಟ್‌ಗಳು, ಇ-ಆಟೋಗಳು, ಇ-ಬೈಸಿಕಲ್‌ಗಳಂತಹ ಸಣ್ಣ ಬ್ಯಾಟರಿ ಚಾಲಿತ ವಾಹನಗಳಿಗೆ ದೇಶವು ಹೆಚ್ಚಿದ ಬೇಡಿಕೆಯನ್ನು ಕಂಡಿದೆ. ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಎಲೆಕ್ಟ್ರಿಕ್ ಕಾರು ಮಾರಾಟವು ಕ್ರಮವಾಗಿ 145% ಮತ್ತು 190% ರಷ್ಟು ಏರಿಕೆ ಕಂಡಿದೆ. ಇವಿಗಳ ಈ ಎರಡು ವಿಭಾಗಗಳಲ್ಲಿ ಭಾರತವು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

  • ಗಡ್ಕರಿಗೆ ಸುಪ್ರೀಂ ಬುಲಾವ್- ಆದ್ರೆ ಇದು ಮನವಿಯೇ ಹೊರತು ಸಮನ್ಸ್ ಅಲ್ಲ

    ಗಡ್ಕರಿಗೆ ಸುಪ್ರೀಂ ಬುಲಾವ್- ಆದ್ರೆ ಇದು ಮನವಿಯೇ ಹೊರತು ಸಮನ್ಸ್ ಅಲ್ಲ

    ನವದೆಹಲಿ: ಮಾಲಿನ್ಯ ನಿಯಂತ್ರಣದ ಸಂಬಂಧ ಎಲೆಕ್ಟ್ರಿಕ್ ವಾಹನ ಜಾರಿ ಸಂಬಂಧ ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಸುಪ್ರೀಂ ಕೋರ್ಟ್ ಇಂದು ವಿನಂತಿಸಿದೆ. ಸಚಿವರ ಅಭಿಪ್ರಾಯ ಆಲಿಸಲು ನಾವು ವಿನಂತಿ ಮಾಡುತ್ತಿದ್ದೇವೆ ಹೊರತು ಇದು ವಿಚಾರಣೆಗೆ ಹಾಜರಾಗುವಂತೆ ಮಾಡುವ ಸಮನ್ಸ್ ಅಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.

    ಸಚಿವ ನಿತಿನ್ ಗಡ್ಕರಿ ಅವರಿಗೆ ಮಾಲಿನ್ಯ ನಿಯಂತ್ರಣದ ಕುರಿತು ನವೀನ ವಿಚಾರಗಳಿವೆ. ಸಾರಿಗೆ ಸಚಿವರೇ ಬಂದು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನದ ಯೋಜನೆಯ ಬಗ್ಗೆ ನಮಗೆ ಮಾಹಿತಿ ನೀಡಬಹುದೇ? ಅಧಿಕಾರಿಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಯೋಜನೆಯ ಸ್ಪಷ್ಟ ಚಿತ್ರಣ ಇರುವುದರಿಂದ ಸಚಿವರನ್ನು ಕರೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ನೀತಿ ಅನುಷ್ಠಾನಗೊಳಿಸುವ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ.ಬೊಬ್ಡೆ, ನ್ಯಾ.ಬಿಆರ್ ಗವಿ, ನ್ಯಾ. ಸೂರ್ಯಕಾಂತ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ವಿಚಾರಣೆ ಸಂದರ್ಭದಲ್ಲಿ ಸಚಿವರು ನ್ಯಾಯಾಲಯಕ್ಕೆ ಬಂದು ನಮಗೆ ಸಹಾಯ ಮಾಡಬೇಕು ಎಂದು ನಾವು ವಿನಂತಿಸುತ್ತಿದ್ದೇವೆ. ಏಕೆಂದರೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದಾರೆ. ಹೀಗಾಗಿ ಕಲಾಪಕ್ಕೆ ಹಾಜರಾಗಬೇಕು ಎಂದು ನ್ಯಾ.ಬೊಬ್ಡೆ ಕೇಳಿಕೊಂಡರು.

    ಈ ವಿನಂತಿಯನ್ನು ಇದನ್ನು ರಾಜಕೀಯ ರೀತಿಯಲ್ಲಿ ನೋಡುವ ಸಾಧ್ಯತೆಯಿದೆ ಎಂದು ಸರ್ಕಾರಿ ವಕೀಲರು ಕೋರ್ಟ್ ಗಮನಕ್ಕೆ ತಂದಾಗ, ಮುಖ್ಯ ನ್ಯಾಯಮೂರ್ತಿಗಳು, “ನಾವು ಅವರನ್ನು ಕರೆಸಿಕೊಳ್ಳುತ್ತಿದ್ದೇವೆ ಎಂದು ಭಾವಿಸಬೇಡಿ. ಇದು ಒಂದು ವಿನಂತಿಯಾಗಿದೆ. ಅಧಿಕಾರದಲ್ಲಿರುವ ಯಾರಾದರೂ ನಿರ್ಧರಿಸಬೇಕೆಂದು ನಾವು ಬಯಸುತ್ತೇವೆ. ದಯವಿಟ್ಟು ಚರ್ಚೆಗೆ ಬರುವಂತೆ ಅವರಿಗೆ ತಿಳಿಸಿ” ಎಂದು ಸೂಚಿಸಿದರು.

    ನಾವು ಸರ್ಕಾರಕ್ಕೆ ಯಾವುದೇ ಆದೇಶಗಳನ್ನು ನೀಡುತ್ತಿಲ್ಲ. ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ಯೋಜನೆಗಳನ್ನು ನಾವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.

    ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂದ ಶುಲ್ಕ ವಿಧಿಸಬಹುದು. ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯಧನ ನೀಡಬಹುದು ಎಂದು ಸಲಹೆ ನೀಡಿದರು.

    ಮಾಲಿನ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ವೇಳೆ ಸ್ಪಷ್ಟವಾಗಿ ಹೇಳಿದೆ. ಈ ವಿಷಯ ದೆಹಲಿ ಎನ್‍ಸಿಆರ್‍ಗೆ ಮಾತ್ರವಲ್ಲ, ಇಡೀ ದೇಶಕ್ಕೂ ಮುಖ್ಯವಾಗಿದೆ ಎಂದ ಕೋರ್ಟ್ ಅರ್ಜಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

  • 2 ವರ್ಷದಿಂದ ತುಕ್ಕು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕ್ ವಾಹನಗಳು

    2 ವರ್ಷದಿಂದ ತುಕ್ಕು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಎಲೆಕ್ಟ್ರಿಕ್ ವಾಹನಗಳು

    ಬೀದರ್: ಪರಿಸರ ಸ್ನೇಹಿ ವಾಹನಗಳನ್ನು ಬೀದರ್‍ನ ನಗರಸಭೆ ಅಧಿಕಾರಿಗಳು ತಂದಿದ್ದಾರೆ. ಆದರೆ ನಗರದ ಕಸದ ವಿಲೇವಾರಿಗಾಗಿ ತಂದಿರುವ ಈ ವಾಹನಗಳನ್ನು ನಗರಸಭೆ ಅಧಿಕಾರಿಗಳು ಉಪಯೋಗ ಮಾಡದೆ ತುಕ್ಕು ಹಿಡಿಸುತ್ತಿದ್ದಾರೆ.

    ಎರಡು ವರ್ಷಗಳ ಹಿಂದೆ 20 ಲಕ್ಷ ಖರ್ಚು ಮಾಡಿ 10 ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳನ್ನು ತಂದಿದ್ದಾರೆ. ಎರಡು ವರ್ಷಗಳಿಂದ ಅವುಗಳನ್ನು ಉಪಯೋಗ ಮಾಡದೆ ತುಕ್ಕು ಹಿಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಯಾರಿಗೂ ಕಾಣದಂತೆ ನಗರಸಭೆ ಆವರಣದ ಮೂಲೆಯೊಂದರಲ್ಲಿ ಅವುಗಳನ್ನು ನಿಲ್ಲಿಸಿದ್ದಾರೆ.

    10 ಗಾಡಿಗಳ ಬ್ಯಾಟರಿ ಸೇರಿದಂತೆ ಬಹುತೇಕ ಗಾಡಿಯ ಭಾಗಗಳು ತುಕ್ಕು ಹಿಡಿವೆ. ಸರ್ಕಾರದ ಬೋಕ್ಕಸಕ್ಕೆ ನಷ್ಟು ಉಂಟು ಮಾಡಿದ್ದು, ಈ ಮೂಲಕ ನಗರಸಭೆ ಅಧಿಕಾರಿಗಳು ಗೋಲ್‍ಮಾಲ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

  • ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸಲ್ಲ – ನಿತಿನ್ ಗಡ್ಕರಿ

    ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸಲ್ಲ – ನಿತಿನ್ ಗಡ್ಕರಿ

    ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

    59ನೇ ವಾರ್ಷಿಕ ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‍ಐಎಎಂ) ಸಮಾವೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನಿಷೇಧದ ಕುರಿತು ಸ್ಪಷ್ಟಪಡಿಸಿದ ಅವರು, ಭಾರತದ ವಾಹನ ಉದ್ಯಮವು ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡುತ್ತಿರುವ ಕೊಡುಗೆ ಅಪಾರ, ಈ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ರಫ್ತು ಹೆಚ್ಚಿರುವುದಕ್ಕೆ ವಾಹನ ಉದ್ಯಮವೇ ಸಾಕ್ಷಿ ಎಂದು ಗಡ್ಕರಿ ಅಭಿಪ್ರಾಯ ಪಟ್ಟರು.

    ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಕುರಿತ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆಟೋಮೊಬೈಲ್ ವಲಯ ಸಾಕಷ್ಟು ಉದ್ಯೋಗ ಒದಗಿಸುತ್ತಿದ್ದು, ಮಾತ್ರವಲ್ಲದೆ ರಫ್ತು ಹೆಚ್ಚಿದೆ. ಆದರೆ, ಇದರಿಂದ ಸರ್ಕಾರ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೇಯದು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚ, ಎರಡನೇಯದು ಮಾಲಿನ್ಯ, ಮೂರನೇಯದು ರಸ್ತೆ ಸುರಕ್ಷತೆ ಎಂದು ತಿಳಿಸಿದರು.

    ದೇಶದಲ್ಲಿ ಆಟೋಮೊಬೈಲ್ ಉದ್ಯಮ 4.50 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದರ ಜೊತೆಗೆ ಮಾಲಿನ್ಯವು ದೇಶಕ್ಕೆ ಒಂದು ಪ್ರಮುಖ ವಿಷಯವಾಗಿ ಉಳಿದಿರುವುದರಿಂದ ಶುದ್ಧ ಇಂಧನ ಮೂಲಗಳತ್ತ ಮುಖ ಮಾಡಬೇಕಿದೆ. ಮಾಲಿನ್ಯದ ಸಮಸ್ಯೆಗೆ ವಾಹನಗಳನ್ನು ಮಾತ್ರ ದೂಷಿಸುವುದು ನ್ಯಾಯವಲ್ಲ. ಆದರೆ, ಅವರೂ ಸಹ ಕೆಲವು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ದೆಹಲಿ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರಗಳಲ್ಲಿ ಒಂದು. ಅಲ್ಲದೆ, 2018ರಲ್ಲಿ ಹೆಚ್ಚು ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ 50 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶೇ.29ರಷ್ಟು ಮಾಲಿನ್ಯವನ್ನು ನಿಯಂತ್ರಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ಗಡ್ಕರಿ ತಿಳಿಸಿದರು.

    ಈ ಹಿಂದೆ ನಡೆದ ನೀತಿ ಆಯೋಗದ ಸಭೆಯಲ್ಲಿ 2025ರ ವೇಳೆಗೆ ಎಲ್ಲ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸಲಾಗುವುದು ಎದು ನಿರ್ಧರಿಸಲಾಗಿತ್ತು.

    ನೀತಿ ಆಯೋಗದ `ಥಿಂಕ್ ಟ್ಯಾಂಕ್’ ಸಭೆಯಲ್ಲಿ ಈ ನಿರ್ಧಾರದ ಕುರಿತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು ಹಾಗೂ ಸ್ಟಾರ್ಟ್ ಅಪ್ ತಯಾರಿಕರೊಂದಿಗೆ ಚರ್ಚಿಸಲಾಗಿತ್ತು. ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎಂದು ಕಂಪನಿಗಳಿಗೆ ನೀತಿ ಆಯೋಗದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು.

    ಇದಕ್ಕೆ ಹಲವು ಆಟೋಮೊಬೈಲ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಸೂಕ್ತ ನೀತಿ ಮತ್ತು ಮಾರ್ಗದರ್ಶನವಿಲ್ಲದೆ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ನೀತಿಗಳನ್ನು ಸ್ಪಷ್ಟವಾಗಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದವು. ಇದಕ್ಕೆ ಪ್ರತಿಯಾಗಿ, ಹೆಚ್ಚು ವಾಯು ಮಾಲಿನ್ಯ ಹೊಂದಿದ 15ರ ಪೈಕಿ 14 ನಗರಗಳು ಭಾರತದಲ್ಲಿವೆ. ಸರ್ಕಾರ ಮತ್ತು ಕಂಪನಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದರು.

    2023ರ ವೇಳೆಗೆ ತ್ರಿಚಕ್ರ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್‍ಗೆ ಪರಿವರ್ತಿಸಬೇಕು, 2025ರ ವೇಳೆಗೆ 150 ಸಿಸಿಗಿಂತ ಕಡಿಮೆ ಎಂಜಿನ್ ಸಾಮಥ್ರ್ಯ ಹೊಂದಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಲು ನೀತಿ ಆಯೋಗ ಯೋಜನೆ ರೂಪಿಸಿದೆ.