Tag: Electric Bike

  • ಓಲಾ ಉದ್ಯೋಗಿ ಆತ್ಮಹತ್ಯೆ – ಸಿಇಓ ಭವಿಶ್‌ ಅಗರ್‌ವಾಲ್‌ ಮೇಲೆ ಎಫ್‌ಐಆರ್‌

    ಓಲಾ ಉದ್ಯೋಗಿ ಆತ್ಮಹತ್ಯೆ – ಸಿಇಓ ಭವಿಶ್‌ ಅಗರ್‌ವಾಲ್‌ ಮೇಲೆ ಎಫ್‌ಐಆರ್‌

    – ಸಂಬಳ ನೀಡದೇ ಕಿರುಕುಳ
    – ಡೆತ್‌ ನೋಟ್‌ ಬರೆದು ಆತ್ಮಹತ್ಯೆ

    ಬೆಂಗಳೂರು: ಪ್ರಸಿದ್ಧ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕಂಪನಿ ಓಲಾ (OLA) ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಓ ಭವಿಶ್‌ ಅಗರ್‌ವಾಲ್‌ (Bhavish Aggarwal), ಓಲಾ ಸಂಸ್ಥೆ ಮತ್ತು ಎಂಜಿನಿಯರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಕಂಪನಿಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ(38) ಅವರು ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ (Sucidde) ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಅಕೌಂಟ್ 17.46 ಲಕ್ಷ ರೂ. ಹಣ ಜಮೆಯಾಗಿತ್ತು.

    ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಆದರೆ ಕಂಪನಿಯಿಂದ ಸರಿಯಾದ ಸ್ಪಷ್ಟನೆ ಸಿಕ್ಕಿರಲಿಲ್ಲ. ಹೀಗಾಗಿ ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್‌ ನೋಟ್‌ ಆಧಾರದ ಮೇಲೆ ಅರವಿಂದ್ ಅವರ ಸಹೋದರ ಅಶ್ವಿನ್‌ ಅವರು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಸುಬ್ರತ್ ಕುಮಾರ್ ದಾಸ್(ಎ1),ಭವೀಶ್ ಅಗರ್ವಾಲ್ (ಎ2),ಓಲಾ ಎಲೆಕ್ಟ್ರಿಕ್ ಕಂಪನಿ(ಎ3) ಆರೋಪಿಗಳನ್ನಾಗಿ ಮಾಡಲಾಗಿದೆ.

     ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ
    ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ

    ದೂರಿನಲ್ಲಿ ಏನಿದೆ?
    ನನ್ನ ತಮ್ಮ ಅರವಿಂದ್ ಕೋರಮಂಗಲದಲ್ಲಿರುವ ಓಲಾ ಎಲೆಕ್ಟ್ರಿಕ್‌ ಕಂಪನಿಯಲ್ಲಿ 2022 ರಿಂದ ಹೋಮೋ ಲೋಗೇಷನ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದ. ಸೆ.28ರ ಬೆಳಗ್ಗೆ 10:45 ರಂದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆತನ ಕೋಣೆಯಲ್ಲಿ ಡೆತ್‌ನೋಟ್‌ ಸಿಕ್ಕಿದ್ದರೂ ಸಾವಿನ ಬಗ್ಗೆ ಸರಿಯಾದ ವಿವರ ತಿಳಿಯದ ಕಾರಣ ಅಸಹಜ ಸಾವಿನ ಅಡಿ ಪ್ರಕರಣ ದಾಖಲಾಗಿತ್ತು.  ಇದನ್ನೂ ಓದಿ:  ಬೆಂಗಳೂರು | ಜಿಟಿ ಮಾಲ್‌ನ 3ನೇ ಫ್ಲೋರ್‌ನಿಂದ ಬಿದ್ದು ವ್ಯಕ್ತಿ ಸಾವು

    ಅರವಿಂದ್‌ ಮೃತಪಟ್ಟ ಎರಡು ದಿನದ ನಂತರ ಅಂದರೆ ಸೆ.30 ರಂದು ಸಹೋದರನ  ಖಾತೆಗೆ 17,46,313 ರೂ. ಹಣವನ್ನು NEFT ಮೂಲಕ ಓಲಾ ಕಂಪನಿ ಜಮೆ ಮಾಡಿದೆ. ಅನುಮಾನಾಸ್ಪದವಾಗಿ ಹಣ ಜಮೆಯಾದ ಬಗ್ಗೆ ಕಂಪನಿ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಮಗೆ ಯಾವುದೇ ಸರಿಯಾದ ಉತ್ತರ ನೀಡಲಿಲ್ಲ.

    ನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್ ದೇಸಾಯಿ ಪರಮೇಶ್ ಮತ್ತು ರೋಷನ್ ಎಂಬುವರು ತಮ್ಮ ಮನೆಗೆ ಬಂದು ಹಣಕಾಸಿನ ವ್ಯವಹಾರದ ಬಗ್ಗೆ, ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು ಇದು ಕಂಪನಿಯವರ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡುಬಂದಿದ್ದು ನಮಗೆ ಅನುಮಾನ ಮೂಡಿಸಿದೆ.

    ಡೆತ್ ನೋಟ್‌ನಲ್ಲಿ ಕಂಪನಿಯ ಹೆಡ್ ಆಫ್ ಹೋಮೋರೋಗೇಷನ್ ಎಂಜಿನಿಯರ್ ಸಂಬ್ರತ್ ಕುಮಾರ್ ದಾಸ್ ಮತ್ತು ಕಂಪನಿ ಮಾಲೀಕ ಬಾವೀಶ್ ಅಗರ್‌ವಾಲ್‌ ಕೆಲಸದಲ್ಲಿ ಒತ್ತಡ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ತನಗೆ ನೀಡಬೇಕಾಗಿರುವ ವೇತನ ಮತ್ತು ಇತರೆ ಭತ್ಯೆ ನೀಡದೇ ಕಿರುಕುಳ ನೀಡುತ್ತಿದ್ದರಿಂದ ತಾನು ಬೇಸತ್ತು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾನೆ. ಹೀಗಾಗಿ ತನ್ನ ತಮ್ಮನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ನೀಡುತ್ತಿದ್ದೇನೆ.

  • ಬೆಂಗ್ಳೂರಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ ಸ್ಫೋಟ

    ಬೆಂಗ್ಳೂರಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ ಸ್ಫೋಟ

    ಬೆಂಗಳೂರು: ಚಾರ್ಜ್‌ಗೆ ಹಾಕಿದ್ದ ಇವಿ ಬೈಕ್‌ ಸ್ಫೋಟಗೊಂಡ ಘಟನೆ ಬಸವೇಶ್ವರನಗರದ ಶಿವನಹಳ್ಳಿ 1ನೇ ಕ್ರಾಸ್‍ನಲ್ಲಿ ನಡೆದಿದೆ.

    ಮನೆ ಬೇಸ್‍ಮೆಂಟ್‍ನಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಇದ್ದಕ್ಕಿದ್ದಂತೆ ಸ್ಫೋಟಿಸಿದೆ. ಬಳಿಕ ಬೆಂಕಿ ಹೊತ್ತಿ ಉರಿದಿದೆ. ಇದರಿಂದ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಇದನ್ನೂ ಓದಿ: ವಿಜಯದಶಮಿ ದಿನವೇ ಬೆಂಗ್ಳೂರಲ್ಲಿ ಅಗ್ನಿ ಅವಘಡ – ಸುಟ್ಟು ಕರಕಲಾದ 19 ಇವಿ ಬೈಕ್‌ಗಳು

    ಎಲೆಕ್ಟ್ರಿಕ್ ಬೈಕ್ ಮುಕೇಶ್ ಎಂಬವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬೈಕ್‌ ಹೊತ್ತಿ ಉರಿಯುತ್ತಿದ್ದಂದೆ, ಮನೆಯಲ್ಲಿದ್ದವರು ಟೆರಸ್ ಮೇಲೆ ಹೋಗಿದ್ದಾರೆ. ಘಟನೆಯಲ್ಲಿ ಒಂದು ಸೈಕಲ್ ಕೂಡ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇವಿ ಬೈಕ್‌ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

    ಇತ್ತೀಚೆಗೆ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡವೊಂದರ ಬೇಸ್ಮೆಂಟ್‌ನಲ್ಲಿದ್ದ ಇವಿ ಬೈಕ್ ಚಾರ್ಜಿಂಗ್ ಪಾಯಿಂಟ್ ಓವರ್ ಹೀಟ್ ಆಗಿ ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಆರು ಸಿಲಿಂಡರ್‌ಗಳ ಗ್ಯಾಸ್ ಸೋರಿಕೆಯಾಗಿದ್ದು, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

  • ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

    ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ

    ಬೆಂಗಳೂರು: ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಂ (Electric Showroom) ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,  (Fire Accident)  70 ಬೈಕ್‌ಗಳು ಭಸ್ಮವಾಗಿವೆ.

    ಶುಕ್ರ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿ 10 ನಿಮಿಷದಲ್ಲಿ ಕಟ್ಟಡದ ತುಂಬಾ ಬೆಂಕಿ ಅವರಿಸಿದೆ. ನೋಡನೋಡುತ್ತಿದ್ದಂತೆ ಸುಮಾರು 70 ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೆಂಕಿ ಕಟ್ಟಡಕ್ಕೆ ಅವರಿಸಿಕೊಳ್ಳುತ್ತಿದ್ದಂತೆ ಶೋರೂಂನಲ್ಲಿದ್ದ ಕೆಲಸಗಾರರು ಕಟ್ಟಡದಿಂದ ಜಿಗಿದು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಒಬ್ಬರ ಕಿವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

    ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ‌ ಅವಘಡ ಸಂಭವಿಸಿರುವ ಸಾದ್ಯತೆ ಇದ್ದು ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸುಟ್ಟು ಹೋಗಿರುವ ಶೋರೂಂನಲ್ಲಿ 25 ಕಿ.ಮೀ ಸ್ಪೀಡ್‌ನ ಒಳಗಡೆ ಓಡುವ ಎಲೆಕ್ಟಿಕ್ ಬೈಕ್‌ಗಳನ್ನು 50 ಕಿ.ಮೀ ಸ್ಪೀಡ್ ಓಡುವ ರೀತಿಯಲ್ಲಿ ಮಾಡಿ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು. 25 ಕಿಲೋಮೀಟರ್ ಒಳಗಿನ ಸ್ಪೀಡ್ ಇರುವ ಇವಿ ಬೈಕ್ ರಿಜಿಸ್ಟ್ರೇಷನ್ ಕಡ್ಡಾಯ ಇರೋದಿಲ್ಲ. ಇದನ್ನ ಬಂಡವಾಳ ಮಾಡಿಕೊಂಡು ಶೋರೂಂ ಮಾಲೀಕ ವಂಚಿಸುತ್ತಿದ್ದರು ಎಂಬ ಆರೋಪವನ್ನು RTO ಅಧಿಕಾರಿಗಳು ಮಾಡಿದ್ದಾರೆ. ಈ ಸಂಬಂಧ ಶೋರೂಂ ಮೇಲೆ RTO ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು.

    ಅಧಿಕಾರಿಗಳು ಶೋರೂಂನಲ್ಲಿ ಅನಧಿಕೃತ ಮಾರಾಟಕ್ಕಿಟ್ಟಿದ್ದ ಎಲೆಕ್ಟ್ರಿಕ್ ಬೈಕ್‌ಗಳನ್ನು ಸೀಜ್ ಮಾಡಿಕೊಂಡು ಹೋಗಿದ್ದರು. ಅನಧಿಕೃತವಾಗಿ ಇ.ವಿ ಬೈಕ್ ಗಳನ್ನ ಮಾರಾಟ ಮಾಡಲು ಮುಂದಾಗುತ್ತಿರೋ ಶೋರೂಂ ಮಾಲೀಕರನ್ನ ಹುಡುಕಿ ಕಾನೂನು ಕ್ರಮ ಜರಗಿಸಲು ಅಧಿಕಾರಿಗಳು ಮುಂದಾಗಿದ್ದರು. ನಾಳೆಯಿಂದ (ಮಂಗಳವಾರ) ಎಲ್ಲಾ ಎಲೆಕ್ಟ್ರಿಕ್ ಶೋರೂಂಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

  • FAME II ಸಬ್ಸಿಡಿ ಕಡಿತ; ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ

    FAME II ಸಬ್ಸಿಡಿ ಕಡಿತ; ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ

    ಜೂನ್ 1, 2023ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ಭಾರೀ ಏರಿಕೆಯಾಗಲಿದೆ. ಇದಕ್ಕೆ ಕಾರಣ ಏನೆಂದರೆ ಕೇಂದ್ರ ಸರ್ಕಾರ FAME II ಸಬ್ಸಿಡಿಯನ್ನು ಪ್ರತಿ ಕಿಲೋವ್ಯಾಟ್‌ಗೆ 5 ಸಾವಿರ ಕಡಿತಗೊಳಿಸಿದೆ. ಹೊಸ ಅಧಿಸೂಚನೆ ಬರುವ ಮುನ್ನ FAME II ಸಬ್ಸಿಡಿ ಪ್ರತಿ ಕಿಲೋವ್ಯಾಟ್‌ಗೆ 15 ಸಾವಿರ ರೂ. ಇತ್ತು.

    ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದ್ದರೂ ಪೆಟ್ರೋಲ್ ವಾಹನಗಳಿಗಿಂತ ಅವು ದುಬಾರಿ. ಈಗ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿರುವುದರಿಂದ ಅವುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗೋದಂತೂ ಗ್ಯಾರಂಟಿ. ಇದನ್ನೂ ಓದಿ: ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ಈ ಪರಿಷ್ಕರಣೆಯ ಪರಿಣಾಮವಾಗಿ, FAME II ಸಬ್ಸಿಡಿಗೆ ಅರ್ಹವಾಗಿರುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ತಮ್ಮ ಉತ್ಪನ್ನದ ಬೆಲೆಗಳನ್ನು ಸರಿಸುಮಾರು 25.000-35,000 ರೂ.ಗಳಷ್ಟು ಹೆಚ್ಚಿಸಬೇಕಾಗುತ್ತದೆ. ಉದಾಹರಣೆಗೆ, ಏಥರ್ 450X ಮತ್ತು OLA S1 Proಗೆ ಲಭ್ಯವಿರುವ ಸಬ್ಸಿಡಿ ಮೊತ್ತವು ಪ್ರಸ್ತುತ ರೂ 55,000-60,000ದ ನಡುವೆ ಇದೆ ಮತ್ತು ಪರಿಷ್ಕೃತ ದರಗಳೊಂದಿಗೆ, ಸಬ್ಸಿಡಿ ಮೊತ್ತವನ್ನು ಅರ್ಧಕ್ಕಿಂತ ಹೆಚ್ಚುಗೊಳಿಸಬೇಕಾದ ಅನಿವಾರ್ಯತೆ ತಯಾರಕರದ್ದು. ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರತಿ ತಿಂಗಳು ಇಳಿಮುಖವಾಗುತ್ತಿರುವಾಗ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮಾರಾಟ ಇನ್ನಷ್ಟು ಕಡಿಮೆಯಾಗುವ ಸಂಭವವಿದೆ.

    ನಿಮಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬೇಕು ಎಂಬ ಆಸೆ ಇದ್ದಲ್ಲಿ ಮೇ 31ರ ಒಳಗೆ ಕೊಂಡುಕೊಳ್ಳಿ ಮತ್ತು FAME II ಸಬ್ಸಿಡಿಯ ಪೂರ್ಣ ಲಾಭವನ್ನು ಪಡೆದುಕೊಳ್ಳಿ. ಇದನ್ನೂ ಓದಿ: Harley-Davidson Pan America 1250 ಅಡ್ವೆಂಚರ್‌ ಸ್ಪೆಷಲ್‌ ಬೈಕ್‌ ಭಾರತದಲ್ಲಿ ಬಿಡುಗಡೆ

  • ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ

    ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ

    ಮಂಡ್ಯ: ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜ್‌ ಹಾಕಿದ್ದ ಬೈಕ್‌ವೊಂದು (Electric Bike) ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು (Madduru) ತಾಲೂಕಿನ ವಳೆಗೆರೆಹಳ್ಳಿಯಲ್ಲಿ ಜರುಗಿದೆ.

    ವಳೆಗೆರೆಹಳ್ಳಿಯ ಮುತ್ತುರಾಜ್ ಎಂಬುವವರ ಮನೆಯ ಒಳ ಭಾಗದಲ್ಲಿ ಬೈಕ್ ಚಾರ್ಜ್ ಹಾಕಿದ್ದ ವೇಳೆ ಈ ಘಟನೆ ಜರುಗಿದೆ. ಬೈಕ್ ಚಾರ್ಜ್ ಹಾಕಿದ್ದ ವೇಳೆ ಇದಕ್ಕಿದ್ದ ಹಾಗೆ ಸ್ಫೋಟಗೊಂಡಿದ್ದು, ಈ ವೇಳೆ‌ ಮನೆಯ ಒಳಭಾಗದಲ್ಲಿ ಇದ್ದ 5 ಮಂದಿ ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ಅದೃಷ್ಟವಶಾತ್ ಎಲ್ಲರೂ ಬೈಕ್‌ನಿಂದ ದೂರವಿದ್ದರಿಂದ ಪ್ರಾಣಾಪಾಯದಿಂದ ಪಾರಗಿದ್ದಾರೆ. ಇನ್ನೂ ಈ ಸ್ಫೋಟದಿಂದ ಪಕ್ಕದಲ್ಲಿ‌ ಇದ್ದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿದಂದೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಬಳಿಕ ಸ್ಫೋಟದ ಬೆಂಕಿಯನ್ನು‌ ಕುಟುಂಬಸ್ಥರು ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ಹೇ ನಡೀಯಪ್ಪ ನೀನು, ನಮಗೆ ತಲೆ ಬಿಸಿಯಾಗಿದೆ: ಸಿದ್ದರಾಮಯ್ಯ ಇನ್ ಟೆನ್ಶನ್

  • ಡಿ.29ಕ್ಕೆ ಬೆಂಗ್ಳೂರಲ್ಲಿ ಆಟೋ ಸಂಚಾರ ಬಂದ್ – ಸಾರಿಗೆ ಇಲಾಖೆ ವಿರುದ್ಧ ಸಿಡಿದ ಚಾಲಕರು

    ಡಿ.29ಕ್ಕೆ ಬೆಂಗ್ಳೂರಲ್ಲಿ ಆಟೋ ಸಂಚಾರ ಬಂದ್ – ಸಾರಿಗೆ ಇಲಾಖೆ ವಿರುದ್ಧ ಸಿಡಿದ ಚಾಲಕರು

    ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ವರ್ಷದ ಕೊನೆಯಲ್ಲಿ ಆಟೋ ಚಾಲಕರು (Auto Drivers) ಶಾಕ್ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 29 ರಿಂದ ಆಟೋ ಚಾಲಕರು ಆಟೋ ಸಂಚಾರ ಬಂದ್ ಮಾಡಲು ತೀರ್ಮಾನಿಸಿದ್ದು, ಆಟೋ ಓಡಾಟ ಬಹುತೇಕ ಸ್ತಬ್ಧವಾಗುವ ಸಾಧ್ಯತೆ ಇದೆ.

    ಬರುವ ಹೊಸ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸುವ ಖುಷಿಯಲ್ಲಿದ್ದ ಜನರಿಗೆ ಆಟೋ ಚಾಲಕರು ಶಾಕ್ ಕೊಟ್ಟಿದ್ದಾರೆ. ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್ (Rapido Bike), ಟ್ಯಾಕ್ಸಿ ಬ್ಯಾನ್ ಮಾಡಬೇಕು, ಬೌನ್ಸ್ ಎಲೆಕ್ಟ್ರಿಕ್‌ ಬೈಕ್‌ಗೆ (Electric Bike) ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ (Protest) ಕರೆ ನೀಡಲಾಗಿದೆ. ಡಿ.29ಕ್ಕೆ ಸಂಪೂರ್ಣ ಆಟೋ ಓಡಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಬರೊಬ್ಬರಿ ನಗರದ 2 ಲಕ್ಷ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ಇತ್ತೀಚಿಗಷ್ಟೇ ಸಾರಿಗೆ ಇಲಾಖೆ ರಾಜ್ಯದಲ್ಲಿ ಕೆಲ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್‌ ಬೈಕ್ (Electric Bike), ಟ್ಯಾಕ್ಸಿಗೆ ಅವಕಾಶ ನೀಡಿತ್ತು. ಸದ್ಯ ಈ ವಿಚಾರ ಆಟೋ ಚಾಲಕರ ಕೆಂಗೆಣ್ಣಿಗೆ ಗುರಿಯಾಗಿದೆ. ಹಲವು ವರ್ಷಗಳಿಂದ ನಗರದ ಜನರಿಗೆ ಸೇವೆ ಸಲ್ಲಿಸುತ್ತಿರೋ ಆಟೋ ಚಾಲಕರಿಗೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸದೇ ಏಕಾಏಕಿ ಬೈಕ್ ಟ್ಯಾಕ್ಸಿಗೆ ಸಾರಿಗೆ ಇಲಾಖೆ ಅವಕಾಶ ನೀಡಿರೋದಕ್ಕೆ ಚಾಲಕ ಸಂಘಟನೆಗಳು ಆಕ್ರೋಶಗೊಂಡಿವೆ. ಇದನ್ನೂ ಓದಿ: ನೂಪೂರ್‌ಗೆ ಬೆಂಬಲ ನೀಡಿದ್ದಕ್ಕೆ ತಬ್ಲೀಘಿ ಜಮಾತ್‌ನ ಮೂಲಭೂತವಾದಿಗಳಿಂದ ಔಷಧ ವ್ಯಾಪಾರಿಯ ಹತ್ಯೆ: ಎನ್‌ಐಎ

    ಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್‌ ಬೈಕ್‌ಗಳನ್ನ (E-Bike) ರಸ್ತೆಗಿಳಿಸಲು ನಿರ್ಧರಿಸಿರುವ ಬೌನ್ಸ್ ಕಂಪನಿ, ನಂತರ ಹಂತ-ಹಂತವಾಗಿ ಸಾವಿರ ಇ- ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿದೆ. ಈ ಹಿಂದೆ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಆದ್ರೆ ಕೊರೊನಾ ಸಮಯದಲ್ಲಿ ಬೈಕ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಮುಂದಾಗಿರೋದು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಬೇಸತ್ತಿರುವ ಚಾಲಕರಿಗೆ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

    ಇನ್ನೂ ಸಾರಿಗೆ ಇಲಾಖೆ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.29 ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರ ಸ್ಥಗಿತಗೊಳಿಸಲು ಆಟೋ ಚಾಲಕರು ಮುಂದಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್) ದಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ 2.10 ಲಕ್ಷ ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದು 29ರ ಗುರುವಾರದಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ ಎಂದು ಆದರ್ಶ ಅಟೋ ಚಾಲಕರ ಸಂಘದ ಪ್ರಮುಖ ಮಂಜುನಾಥ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಕಿಯಿಂದ ಹೊತ್ತಿ ಉರಿದ ಚಾರ್ಜಿಂಗ್‌ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್

    ಬೆಂಕಿಯಿಂದ ಹೊತ್ತಿ ಉರಿದ ಚಾರ್ಜಿಂಗ್‌ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್

    ಚೆನ್ನೈ: ಚಾರ್ಜ್‍ಗೆ ಹಾಕಲಾಗಿದ್ದ ಎಲೆಕ್ಟ್ರಿಕ್ ಬೈಕ್‍ಗೆ (Electric bike) ಬೆಂಕಿ ಹೊತ್ತಿಕೊಂಡಿರುವ ಘಟನೆ ಸೋಮವಾರ ರಾತ್ರಿ ತಮಿಳುನಾಡಿನ (Tamil Nadu) ತಿರುನಲ್ವೇಲಿಯಲ್ಲಿ (Tirunelveli ) ನಡೆದಿದೆ.

    ಸೆಲ್‍ಫೋನ್ ಅಂಗಡಿ ಹೊಂದಿರುವ ಅಂಬಾಸಮುದ್ರಂ ನಿವಾಸಿ ರಾಮರಾಜನ್ ಎಂಟು ತಿಂಗಳ ಹಿಂದೆ ಇ-ಬೈಕ್ ಖರೀದಿಸಿದ್ದರು. ಸೆಪ್ಟೆಂಬರ್ 27ರಂದು ಸೋಮವಾರ ತಮ್ಮ ಎಲೆಕ್ಟ್ರಿಕಲ್ ಬೈಕ್ ಅನ್ನು ಚಾರ್ಜ್‍ಗೆ ಹಾಕಿ ಸ್ನೇಹಿತರೊಂದಿಗೆ ರಾಮರಾಜನ್ ಅವರು ಮಾತನಾಡುತ್ತಿದ್ದರು. ಈ ವೇಳೆ ಬೈಕ್‍ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಇದರಿಂದ ಗಾಬರಿಯಾಗಿ ತಕ್ಷಣ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬೈಕ್‍ಗೆ ಜನರು ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಬೈಕ್‍ನಿಂದ ಹೊರಹೋಗುವ ಶಾಖ ಹೆಚ್ಚಾಗಿತ್ತು ಮತ್ತು ಚಾರ್ಜ್‍ಗೆ ಹಾಕಲಾಹಿದ್ದ ಗೋಡೆಯ ಒಂದು ಭಾಗ ಹೊಗೆಯಿಂದ ಸಂಪೂರ್ಣ ಕಪ್ಪಾಗಿದೆ. ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಮುಂಬೈ: ಶೋರೂಮ್‍ನಲ್ಲಿ ಎಲೆಕ್ಟ್ರಿಕಲ್ ಬೈಕ್‍ಗಳನ್ನು ಚಾರ್ಚಿಂಗ್ ಮಾಡುತ್ತಿದ್ದ ವೇಳೆ ಔಟ್‍ಲೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡು 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು

    ಈ ಬಗ್ಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು, ಬೈಕ್‍ಗಳಿಗೆ ಪ್ಲಗ್ ಹಾಕಿ ಚಾರ್ಚಿಂಗ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಬೈಕ್‍ಗಳಿಗೆ ಬೆಂಕಿ ಹೊತ್ತಿಕೊಂಡಿರಬಹುದು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್

    ಈ ಘಟನೆ ಕುರಿತಂತೆ ನಮಗೆ ರಾತ್ರಿ 8 ಗಂಟೆ ಸುಮಾರಿಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿಯನ್ನು ನಂದಿಸಲಾಗಿದೆ ಎಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮುನ್ನ ಮಾರ್ಚ್‍ನಲ್ಲಿಯೂ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿತ್ತು. ಹೀಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಪರಿಶೀಲನೆ ನಡೆಸಲು 1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ದಂಪತಿ ತೆರಳುತ್ತಿದ್ದ ಎಲೆಕ್ಟ್ರಿಕ್ ಬೈಕ್‍ಗೆ ಕಾರು ಡಿಕ್ಕಿ – ಚಾಲಕ ಎಸ್ಕೇಪ್

    ದಂಪತಿ ತೆರಳುತ್ತಿದ್ದ ಎಲೆಕ್ಟ್ರಿಕ್ ಬೈಕ್‍ಗೆ ಕಾರು ಡಿಕ್ಕಿ – ಚಾಲಕ ಎಸ್ಕೇಪ್

    ಚಿಕ್ಕಬಳ್ಳಾಪುರ: ಇ-ಬೈಕ್‍ಗೆ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬೆಮೆಲ್ ಶೋ ರೂಂ ಮುಂಭಾಗ ನಡೆದಿದೆ.

    ಚಿಕ್ಕಬಳ್ಳಾಪುರ ನಗರದಿಂದ ಸ್ವಗ್ರಾಮ ಕುಪ್ಪಹಳ್ಳಿ ಬಳಿ ಇ-ಬೈಕ್‍ನಲ್ಲಿ ಮಮತಾ ಹಾಗೂ ಆನಂದ್ ದಂಪತಿ ಬರುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ಬರ್ತಿದ್ದ ಸ್ಯಾಂಟ್ರೋ ಕಾರು, ಬೈಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಇ-ಬೈಕ್ ಮುಂಭಾಗ ಜಖಂಗೊಂಡಿದ್ದು, ಕಾರಿನ ಗಾಜು ಸಹ ಜಖಂ ಆಗಿ ಮುಂಭಾಗ ಹಾನಿಯಾಗಿದೆ. ಇದನ್ನೂ ಓದಿ: ಪ.ಬಂಗಾಳದ 11 ಜಿಲ್ಲೆಗಳಲ್ಲಿ ಕಾಡುತ್ತಿದೆ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ – ಲಕ್ಷಣವೇನು? 

    ಬೈಕ್‍ನಲ್ಲಿದ್ದ ಆನಂದ್ ಕಾಲು ಮುರಿದಿದ್ದು, ಮಮತಾಗೂ ಗಾಯಗಳಾಗಿವೆ. ಇಬ್ಬರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಂಪತಿ ಚಿಕ್ಕಬಳ್ಳಾಪುರದಲ್ಲಿ ಸ್ವಗ್ರಾಮ ಕುಪ್ಪಹಳ್ಳಿಗೆ ಹೋಗುತ್ತಿದ್ದರು. ಅಪಘಾತ ನಂತರ ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಪಘಾತದ ನಂತರ ಟ್ರಾಫಿಕ್ ಜಾಮ್ ಉಂಟಾದ ಕಾರಣ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದನ್ನೂ ಓದಿ:  ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ 

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ

    ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ಅನಾವರಣಗೊಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಜಾರಿಯಿಂದ ರಾಜ್ಯದಲ್ಲಿ ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ ವಾತಾವರಣ ನಿರ್ಮಾಣ, ಇಂಧನ ಉಳಿತಾಯದ ಪ್ರೋತ್ಸಾಹ, ನಗರ ಸಾರಿಗೆ ಬಲಪಡಿಸುವುದು, ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹಿಸುವುದು, ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆ ನಡುವೆ ಸಂಪರ್ಕ ಕಲ್ಪಿಸುವುದರ ಬಗ್ಗೆ ಈ ಯೋಜನೆಯು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

    ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಸಾರ್ವಜನಿಕರು ಬಸ್ ಮತ್ತು ರೈಲ್ವೆ, ಮೆಟ್ರೋ ನಿಲ್ದಾಣಗಳಿಂದ ಮನೆಗೆ ಮತ್ತು ಮನೆಯಿಂದ ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಸರಿಯಾದ ಸಮಯದಲ್ಲಿ ಪ್ರಯಾಣಿಸಲು ವ್ಯಯಿಸಬೇಕಾದ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.

    ವಾಹನಗಳ ಚಾಲನೆಗೆ ಸಾಂಪ್ರದಾಯಿಕ ಇಂಧನಗಳ ಬಳಕೆಯಿಂದಾಗಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಆಗಿರುವ ಅಧ್ಯಯನಗಳ ಹಿನ್ನೆಲೆಯಲ್ಲಿ ಪರ್ಯಾಯ ಇಂಧನಗಳನ್ನು ಬಳಸುವ ಮೂಲಕ ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಸದುದ್ದೇಶದಿಂದ ವಿವಿಧ ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರವು ಉತ್ತೇಜನ ನೀಡುತ್ತಾ ಬಂದಿದೆ. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿದ ರಾಜ್ಯ ಕರ್ನಾಟಕ. ಇದೀಗ ಮತ್ತೊಂದು ಹೆಜ್ಜೆ ಮುಂದುವರಿದು, ರಾಜ್ಯದ ಪ್ರಮುಖ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021ನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ನಾಳೆಯಿಂದ ಪಿಯುಸಿ ಕಾಲೇಜುಗಳು ಪ್ರಾರಂಭ- ಆನ್‍ಲೈನ್ ಮೂಲಕ ಪಠ್ಯ ಬೋಧನೆ

    ಈ ಯೋಜನೆಯಲ್ಲಿ ಕಂಪನಿಗಳು, ಪಾಲುದಾರಿಕೆ ಕಂಪನಿಗಳು ಮತ್ತು ವೈಯಕ್ತಿಕ ಪ್ರಜೆಗಳೂ ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮತ್ತು ಉದ್ದಿಮೆದಾರರು ಮುಕ್ತವಾಗಿ ಈ ಯೋಜನೆ ಸದುಪಯೋಗ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರವು ಹಲವಾರು ರಿಯಾಯಿತಿಗಳನ್ನು ನೀಡಿರುತ್ತದೆ. ಸಾರಿಗೆ ವಾಹನಗಳಾಗಿ ನೋಂದಣಿಯಾಗುವ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳಿಗೆ ಪರವಾನಿಗೆಯಿಂದ ವಿನಾಯಿತಿ ನೀಡುವುದು, ತೆರಿಗೆ ವಿನಾಯಿತಿ ನೀಡುವುದು, ಈ ವಾಹನಗಳ ಉತ್ಪಾದಕರಿಗೆ ಸಹಾಯಧನವನ್ನು ನೀಡುವುದು ಸೇರಿದಂತೆ ಇನ್ನೂ ಹಲವಾರು ರಿಯಾಯಿತಿಗಳನ್ನು ನೀಡಲಾಗಿರುತ್ತದೆ. ವಾಹನ ಉತ್ಪಾದಕರು, ಉದ್ದಿಮೆದಾರರು ಮತ್ತು ಸಾರ್ವಜನಿಕರು ಈ ಯೋಜನೆಗಳ ಪ್ರಯೋಜನವನ್ನು ಪಡೆದು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ಹಾಗೂ ಮಹಿಳಾ ಉದ್ದಿಮೆದಾರರು ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯ ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.