ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣಾಧಿಕಾರಿಗಳು ಅಕ್ರಮ ಹಣ, ಮದ್ಯ, ವಸ್ತುಗಳು ಸಾಗಿಸಬಾರದೆಂದು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ಹುಣಸೂರು ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೊಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ 3 ಚೀಲಗಳಲ್ಲಿ ಹಣವನ್ನು ಇಟ್ಟುಕೊಂಡು ಕೊಂಡೊಯ್ಯಲಾಗುತ್ತಿತ್ತು. ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರು ಹಣದ ಜೊತೆ ಪ್ರಯಾಣ ಮಾಡುತ್ತಿದ್ದರು. ಪಿರಿಯಾಪಟ್ಟಣ ಬ್ಯಾಂಕಿಗೆ ಇದನ್ನು ಸಾಗಿಸುತ್ತಿರುವುದಾಗಿ ಬ್ಯಾಂಕ್ ನೌಕಕರು ಪೊಲೀಸರಿಗೆ ಹೇಳಿದ್ದಾರೆ.

ಬ್ಯಾಂಕಿಗೆ ಹಣ ಸಾಗಿಸುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಯಾಕೆ ಪಡೆಯಲಿಲ್ಲ? ಅದರಲ್ಲೂ ಗನ್ ಮ್ಯಾನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡುತ್ತಿರುವುದು ತಪ್ಪು. ಬ್ಯಾಂಕಿಗೆ ಸೇರಿದ ಹಣವನ್ನು ಚೀಲಗಳಲ್ಲಿ ಸಾಗಿಸುವ ಅವಶ್ಯಕತೆ ಏನು, ಸೂಕ್ತ ದಾಖಲೆ ಇಲ್ಲದೆ ಯಾಕೆ ಹಣ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣ ಬಹುಶಃ ಉಪಚುನಾವಣೆಗೆ ಹಂಚಲು ಸಾಗಿಸುತ್ತಿದ್ದಾರಾ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಸಂಬಂಧ ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.


