Tag: electoral bonds

  • ‘ಇದು ಅತಿ ದೊಡ್ಡ ಹಗರಣ, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ’ – ಸದನದಲ್ಲಿ ಕಾಂಗ್ರೆಸ್ ಕೋಲಾಹಲ

    ‘ಇದು ಅತಿ ದೊಡ್ಡ ಹಗರಣ, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ’ – ಸದನದಲ್ಲಿ ಕಾಂಗ್ರೆಸ್ ಕೋಲಾಹಲ

    ನವದೆಹಲಿ: “ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಭ್ರಷ್ಟಾಚಾರ. ಈ ವಿಚಾರದ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕೆಂದು” ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

    ಭಾರತ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳ ಖಾಸಗೀಕರಣ ಮತ್ತು ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಇಂದು ಕೋಲಾಹಲ ಎಬ್ಬಿಸಿದರು.

    ಸುಮಾರು 15 ನಿಮಿಷಗಳ ಕಾಲ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಹಗರಣ, ಖಾಸಗೀಕರಣಗೊಳಿಸಿ ದೇಶವನ್ನು ಲೂಟಿ ಮಾಡಲಾಗುತ್ತಿದೆ. ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಹೇಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಈ ಸಂದರ್ಭದಲ್ಲಿ ಸ್ಪೀಕರ್ ಓ ಬಿರ್ಲಾ ಅವರು, ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಭರವಸೆ ನೀಡಿದ ನಂತರ ಕೈ ಸದಸ್ಯರು ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು.

    ಸದನದ ಘನತೆಯನ್ನು ಯಾರೂ ಹಾಳು ಮಾಡಬಾರದು. ಈ ರೀತಿ ಮಾಡುವುದು ತಪ್ಪು. ಕಲಾಪದಲ್ಲಿ ಕ್ರೀಡಾಪಟುಗಳ ಬಗ್ಗೆ ಗಂಭೀರ ಚರ್ಚೆ ನಡೆಯತ್ತಿರುವಾಗ ಬಾವಿಗಿಳಿದು ಪ್ರತಿಭಟಿಸಬಾರದು. ಸದನದ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿಕೊಂಡ ಸ್ಪೀಕರ್, ನಾನು ಹೊಸಬನಾಗಿದ್ದು ನೀವು ಹಿರಿಯರಿದ್ದೀರಿ. ನಿಮ್ಮ ನಿಲುವಳಿ ಸೂಚನೆಯನ್ನು ನಾವು ಒಪ್ಪುವುದಿಲ್ಲ. ಶೂನ್ಯ ವೇಳೆ ಚರ್ಚಿಸಲು ಅನುಮತಿ ನೀಡುತ್ತೇನೆ ಎಂದು ತಿಳಿಸಿದರು.

    ಈ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಇದು ದೇಶದ ಅತಿ ದೊಡ್ಡ ಹಗರಣ. ದೇಶವನ್ನು ಲೂಟಿ ಮಾಡಲಾಗುತ್ತದೆ. ನಾವು ಸದನದ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡುತ್ತೇವೆ. ನೀವು ಸದನಕ್ಕೆ ಹೊಸಬರಲ್ಲ. ಕಲಾಪದಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗಬೇಕು. ಇದೊಂದು ದೊಡ್ಡ ಹಗರಣವಾಗಿದ್ದು, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಈ ಕಾರಣಕ್ಕೆ ನಾವು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿದ್ದೇವೆಯೇ ಹೊರತು ಸಭಾಧ್ಯಕ್ಷರಿಗೆ ಅಗೌರವ ನೀಡುತ್ತಿಲ್ಲ. ನಮ್ಮ ಮನವಿಗೆ ಸಹಕಾರ ನೀಡಬೇಕೆಂದು ಸ್ಪೀಕರ್ ಬಳಿ ಕೇಳಿಕೊಂಡರು.

    ಕೈ ನಾಯಕರ ಆರೋಪಗಳಿಗೆ ಉತ್ತರಿಸಿದ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯವರು ಸ್ವಚ್ಛ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ನೀವು ಪ್ರತಿದಿನ ಒಂದೊಂದು ವಿಷಯಕ್ಕೆ ನಿಲುವಳಿ ಸೂಚನೆ ಹಿಡಿದುಕೊಂಡು ಬರುತ್ತೀರಿ. ಈ ರೀತಿ ನೀವು ಮಾಡಬಾರದು ಎಂದು ಹೇಳಿ ತಿರುಗೇಟು ನೀಡಿದರು.

    https://www.youtube.com/watch?v=S6bowQfTxzc

  • ನಿಮ್ಮ ದಾನಿಗಳ ಮಾಹಿತಿ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

    ನಿಮ್ಮ ದಾನಿಗಳ ಮಾಹಿತಿ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ

    ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ದಾನಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.

    ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಕರಾರುಪತ್ರಗಳ (ಬಾಂಡ್) ಮೂಲಕ ಸಿಕ್ಕಂತಹ ದಾನಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾರು ದಾನ ನೀಡಿದ್ದಾರೆ ಹಾಗೂ ಎಷ್ಟು ಹಣವನ್ನು ದಾನವಾಗಿ ಪಡಯಲಾಗಿದೆ ಎನ್ನುವ ಸಂಪೂರ್ಣ ದಾಖಲೆಗಳನ್ನು ಮೇ 15ರ ಒಳಗಾಗಿ ಮುಚ್ಚಿದ ಲಕೋಟಿಯಲ್ಲಿ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಆದೇಶ ನೀಡಿದ್ದಾರೆ.

    ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಎನ್‍ಜಿಒ ಒಂದು ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ವ್ಯವಸ್ಥೆಯೇ ವ್ಯರ್ಥ. ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯನ್ನು ತಡೆಯುವುದಕ್ಕಾಗಿ ಜಾರಿಗೆ ತಂದಿರುವ ವ್ಯವಸ್ಥೆ ಉದ್ದೇಶವೇ ಈಡೇರದು ಎಂದು ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೆ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು.

    ಏನಿದು ಎಲೆಕ್ಟೋರಲ್ ಬಾಂಡ್?:
    ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿತ್ತು. 2017ರ ಬಜೆಟ್ ಭಾಷಣದಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತ್ತು. ಎಲೆಕ್ಟೋರಲ್ ಬಾಂಡ್‍ಗೆ ಕೇಂದ್ರ ಸರ್ಕಾರವು ಅಂತಿಮ ರೂಪ ನೀಡಿದ್ದು, ಅಧಿಸೂಚನೆ ಹೊರಡಿಸಿತ್ತು.

    ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಇಚ್ಛಿಸುವವರು ಆಯ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಬ್ರ್ಯಾಂಚ್ ಮೂಲಕ ನಿರ್ದಿಷ್ಟ ಮೊತ್ತದ ಎಲೆಕ್ಟೋರಲ್ ಬಾಂಡ್ ಖರೀದಿಸಬೇಕು. ಬಳಿಕ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಈ ಮೂಲಕ ದಾನಿ ಗಳು ನೀಡಿದ ಬಾಂಡ್ ಪಡೆದ ರಾಜಕೀಯ ಪಕ್ಷವು ಬ್ಯಾಂಕ್ ಖಾತೆಗೆ ಬಾಂಡ್ ಸಲ್ಲಿಸಿ, ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

    1 ಸಾವಿರ ರೂ., 10 ಸಾವಿರ ರೂ., 1 ಲಕ್ಷ ರೂ., 10 ಲಕ್ಷ ರೂ., 1 ಕೋಟಿ ರೂ. ಮೌಲ್ಯದ ಬಾಂಡ್‍ಗಳನ್ನು ಪರಿಚಯಿಸಲಾಗಿತ್ತು. ಈ ಎಲೆಕ್ಟೋರಲ್ ಬಾಂಡ್‍ಗೆ ಬ್ಯಾಂಕ್‍ನಿಂದ ಯಾವುದೇ ರೀತಿಯ ಬಡ್ಡಿ ದೊರೆಯುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವವರೆಗೂ ಆ ಹಣವು ದಾನ ಮಾಡಿದವರ ಖಾತೆಯಲ್ಲೇ ಇರುತ್ತದೆ. ಆದರೆ ಈ ಬಾಂಡ್ ಅನ್ನು 15 ದಿನಗಳ ಒಳಗಾಗಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬೇಕು.

    ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಪ್ರಕಾರ ಬ್ಯಾಂಕ್ ಗ್ರಾಹಕರ ಮಾಹಿತಿಯನ್ನು ಪಡೆದರೂ ಅದನ್ನು ಗೌಪ್ಯವಾಗಿ ಇಡಬೇಕು ಎನ್ನುವ ನಿಯಮವಿದೆ.