Tag: elections 2018

  • ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ರಣತಂತ್ರ- ಈ ನಾಯಕರಿಗೆ ಇಲ್ಲ ಟಿಕೆಟ್?

    ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ರಣತಂತ್ರ- ಈ ನಾಯಕರಿಗೆ ಇಲ್ಲ ಟಿಕೆಟ್?

    ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್ ಫಿವರ್ ಶುರುವಾಗಿದ್ದು, ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಅಂತಾ ತಂತ್ರ-ರಣತಂತ್ರಗಳು ಹೂಡುತ್ತಿವೆ. ಈಗ ಬಿಜೆಪಿ ಮಾಡುತ್ತಿರುವ ಚುನಾವಣಾ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ಹೂಡಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದುಬಂದಿದೆ.

    ಗುಜರಾತ್ ಚುನಾವಣೆ ಬಳಿಕ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಕರ್ನಾಟಕದ ಚುನಾವಣೆಯ ಮೇಲೆ ಕಣ್ಣಿರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಲ್ಲಿ ವಾಸ್ತವ್ಯ ಹೂಡಲಿದ್ದು, ಏರ್ ಪೋರ್ಟ್ ರಸ್ತೆಯಲ್ಲಿ ಬೃಹತ್ ವಿಲ್ಲಾವನ್ನು ಬಾಡಿಗೆ ಪಡೆದಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು. ಇತ್ತ ಕಾಂಗ್ರಸ್ ಕೂಡ ಬೆಂಗಳೂರಿನಲ್ಲಿ ವಾರ್ ರೂಂ ಸ್ಥಾಪಿಸಲು ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಏನಿದು ವಾರ್ ರೂಂ?: ರಾಜ್ಯ ರಾಜಕಾರಣದ ಮತ್ತು ಕಾಂಗ್ರೆಸ್ ನ ಗುಪ್ತ ಸಭೆಗಳನ್ನು ನಡೆಸಲು ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತದೆ. ಈ ಕಟ್ಟಡದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದು, ವಿರೋಧ ಪಕ್ಷಗಳನ್ನು ಸದೆಬಡಿಯಲು ರಾಜಕೀಯ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಜನವರಿ ಮೊದಲ ವಾರದಲ್ಲಿಯೇ ರಾಜ್ಯದಲ್ಲಿ ವಾರ್ ರೂಂ ಸ್ಥಾಪನೆಯಾಗಲಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಸರ್ವೆ ಮೂಲಕ ಟಿಕೆಟ್ ಹಂಚಿಕೆ: ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಮೂರು ಸರ್ವೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಸರ್ವೆ ಮೂಲಕ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಎರಡು ಏಜೆನ್ಸಿ ಸರ್ವೆಗಳು, ಒಂದು ಗುಪ್ತಚರ ಇಲಾಖೆ ಸರ್ವೆಯ ಆಧಾರದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾರು ಪ್ರಬಲ ನಾಯಕರು ಎಂಬುದನ್ನು ತೀರ್ಮಾನಿಸಲಾಗುತ್ತದೆ.

    ಇನ್ನೂ ಚುನಾವಣೆಗಳಲ್ಲಿ ಮೂರು ಬಾರಿ ಸೋತವರಿಗೆ ಟಿಕೆಟ್ ನೀಡದಿರಲು ಯೋಚನೆ ಮಾಡಲಾಗುತ್ತಿದೆ. ಕಳೆದ ಬಾರಿ 10 ಸಾವಿರ ಮತಗಳ ಅಂತರದಿಂದ ಸೋಲು ಕಂಡಿರುವ ನಾಯಕರಿಗೂ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದ್ದು, ಈ ಬಾರಿ ಟಿಕೆಟ್ ನೀಡುವ ವಿಚಾರದಲ್ಲಿ ರಾಹುಲ್ ಗಾಂಧಿ ಯಾವುದೇ ರಾಜಿಗಳಿಗೆ ಸಿದ್ಧರಿಲ್ಲ ಅಂತಾ ರಾಜಕೀಯ ಮೂಲಗಳು ತಿಳಿಸಿವೆ.

  • ತವರು ಕ್ಷೇತ್ರಕ್ಕೆ ಬರ್ತಿದ್ದಾರೆ ಸಿದ್ದು – ನೇರ ಎದುರಾಳಿಗಳಾಗ್ತಿದ್ದಾರೆ `ಗುಡ್ ಓಲ್ಡ್ ಫ್ರೆಂಡ್ಸ್’…!

    ತವರು ಕ್ಷೇತ್ರಕ್ಕೆ ಬರ್ತಿದ್ದಾರೆ ಸಿದ್ದು – ನೇರ ಎದುರಾಳಿಗಳಾಗ್ತಿದ್ದಾರೆ `ಗುಡ್ ಓಲ್ಡ್ ಫ್ರೆಂಡ್ಸ್’…!

    ಕೆ.ಪಿ.ನಾಗರಾಜ್
    ಮೈಸೂರು: ರಾಜ್ಯ ರಾಜಕೀಯದಲ್ಲಿ ನೂರಾರು ಉಪಚುನಾವಣೆಗಳು ನಡೆದಿವೆ. ಆಯಾ ಆಯಾ ಜಿಲ್ಲೆ ಮಟ್ಟಿಗೆ ಮತ್ತು ಆ ದಿನಗಳ ಮಟ್ಟಿಗೆ ಮಾತ್ರ ಉಪ ಚುನಾವಣೆಗಳು ದೊಡ್ಡ ಸದ್ದು ಮಾಡಿವೆ. ಆದರೆ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಷ್ಟು ದೊಡ್ಡ ಸದ್ದು, ಗದ್ದಲ, ರೋಚಕತೆ ಸೃಷ್ಟಿಸಿದ ಉಪ ಚುನಾವಣೆ ನಡೆದಿಲ್ಲ. ಅಷ್ಟರ ಮಟ್ಟಿಗೆ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಆ ಕಾಲಕ್ಕೆ ಸಂಚಲನವನ್ನೇ ಸೃಷ್ಟಿಸಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಇವತ್ತಿನ ಸಿಎಂ ಸಿದ್ದರಾಮಯ್ಯ.!.

    ಜೆಡಿಎಸ್ ತೊರೆದು ಹೊರ ಬಂದು ಉಪ ಚುನಾವಣೆ ಎದುರಿಸಿದ್ದ ಸಿದ್ದರಾಮಯ್ಯಗೆ ಆ ಚುನಾವಣೆ ಇಡೀ ಜೀವನದ ದೊಡ್ಡ ಅಗ್ನಿಪರೀಕ್ಷೆ. ಅವತ್ತು, ಚಾಮುಂಡೇಶ್ವರಿ ಕ್ಷೇತ್ರದ ಮತದಾರ ಅವರನ್ನು ಕೈ ಹಿಡಿಯದೆ ಇದ್ದಿದ್ದರೆ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಎಂಥಹ ಪೆಟ್ಟು ಬೀಳುತ್ತಿತ್ತು ಎಂಬುದು ಊಹೆಗೆ ಸಿಗುವುದಿಲ್ಲ. ಹೀಗೆ, ಜೀವದಾನ ಕೊಟ್ಟಂತಹ ಕ್ಷೇತ್ರವನ್ನು ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡಣೆಯ ತರುವಾಯ ಬಿಟ್ಟು ಹೊಸದಾಗಿ ಸೃಷ್ಟಿಯಾದ ವರುಣಾ ಕ್ಷೇತ್ರಕ್ಕೆ ಜಿಗಿದರು.

    5 ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿ ಎರಡು ಬಾರಿ ಸೋಲು ಕಂಡಿದ್ದ ಕ್ಷೇತ್ರವನ್ನು ತೊರೆದು ವರುಣಾ ಕ್ಷೇತ್ರಕ್ಕೆ ಹೋದ ಸಿದ್ದರಾಮಯ್ಯ ಅಲ್ಲೂ ಎರಡು ಬಾರಿ ಗೆದ್ದಿದ್ದಾರೆ. ಈಗ, ಸಿದ್ದರಾಮಯ್ಯ ಮತ್ತೆ ತಮ್ಮ ತವರು ಕ್ಷೇತ್ರವಾದ ಚಾಮುಂಡೇಶ್ವರಿಗೆ ಬರಲು ಮುಂದಾಗಿದ್ದಾರೆ. ತಮ್ಮ ಪಾಲಿಗೆ ಬಹಳ ಸೇಫ್ ಆಗಿರುವ ವರುಣಾ ಕ್ಷೇತ್ರವನ್ನು ಮಗ ಡಾ.ಯತೀಂದ್ರ ಅವರಿಗೆ ಬಿಟ್ಟು ತಾವು ಪುನಃ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಲು ಪ್ಲಾನ್ ಮಾಡುತ್ತಿದ್ದಾರೆ. ಅಲ್ಲದೆ, ಈ ವಿಚಾರವನ್ನು ಅವರೇ ಎಲ್ಲಾ ಕಡೆ ಹೇಳುತ್ತಿದ್ದಾರೆ. ಅಲ್ಲಿಗೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವರ್ಸಸ್ ಜಿ.ಟಿ. ದೇವೇಗೌಡ ಅನ್ನೋದು ಫಿಕ್ಸ್ ಆದಂತೆ ಕಾಣುತ್ತಿದೆ.

    ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಇಬ್ಬರು 1983ರಿಂದ ಜೊತೆಯಾಗಿದ್ದವರು. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಜಿಟಿಡಿ ಜೆಡಿಎಸ್ ನಲ್ಲೇ ಉಳಿದಿದ್ದರು. ಹುಣಸೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜಿ.ಟಿ. ದೇವೇಗೌಡ, ಬಿಜೆಪಿಯಿಂದ ಅಲ್ಲಿ ಸ್ಪರ್ಧಿಸಿ ಸೋಲು ಕಂಡ ಮೇಲೆ ಕಳೆದ ಚುನಾವಣೆ ವೇಳೆ ಮತ್ತೆ ಜೆಡಿಎಸ್‍ಗೆ ಬಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇಡೀ ಕ್ಷೇತ್ರವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಜಿಟಿಡಿ ಯಶಸ್ವಿಯಾಗಿದ್ದಾರೆ. ಈ ಆತ್ಮವಿಶ್ವಾಸ ಇರುವ ಕಾರಣಕ್ಕೆ ತಮ್ಮ ವಿರುದ್ಧ ಸಿಎಂ ಸ್ಪರ್ಧಿಸಿದರೂ ನನಗೆ ಭಯವಿಲ್ಲ. ಅವರಿಗೆ ಸ್ವಾಗತ ಕೋರುತ್ತೇನೆ ಅಂತಾ ಸಿಎಂ ಎದುರೇ ಸಾರ್ವಜನಿಕವಾಗಿ ಹೇಳಿದ್ದಾರೆ.

    ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಕುರುಬರು, ನಾಯಕರು, ಲಿಂಗಾಯತರು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗದವರು ಇದ್ದಾರೆ. ಜಾತಿ ಸಮೀಕರಣ ನೋಡಿದರೆ ಸಿಎಂಗೆ ಚಾಮುಂಡೇಶ್ವರಿ ಕ್ಷೇತ್ರಕ್ಕಿಂತಾ ವರುಣಾ ಕ್ಷೇತ್ರ ಬಹಳ ಸೇಫ್. ಜೊತೆಗೆ, ವರುಣಾ ಕ್ಷೇತ್ರದಲ್ಲಿ ಸಿಎಂಗೆ ಪೈಪೋಟಿ ಕೊಡುವಂತಹ ಅಭ್ಯರ್ಥಿಗಳು ಯಾವುದೇ ಪಕ್ಷದಲ್ಲೂ ಇಲ್ಲ. ಆದರೂ, ಮಗನ ರಾಜಕೀಯ ಹಿತದೃಷ್ಟಿಯಿಂದ ವರುಣಾವನ್ನು ಮಗನಿಗೆ ಬಿಟ್ಟುಕೊಟ್ಟು ತವರು ಕ್ಷೇತ್ರಕ್ಕೆ ಮರಳಿ ತಮ್ಮ ಚುನಾವಣಾ ರಾಜಕೀಯದ ಕೊನೆ ಆಟ ಆಡಲಿದ್ದಾರೆ.

    ಸಿದ್ದರಾಮಯ್ಯ ಪಾಲಿಗೆ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯ ಹುಟ್ಟು ಮತ್ತು ರಾಜಕೀಯದ ಪುನರ್ಜನ್ಮ ನೀಡಿದ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಮೊದಲಿನಂತೆ ಸಿದ್ದರಾಮಯ್ಯ ಪಾಲಿಗೆ ಸಾಲೀಸಾಗಿ ಇಲ್ಲ. ಇದು ಅವರಿಗೂ ಕೂಡ ಗೊತ್ತಿದೆ. ಸಿಎಂ ಆಗಿ ಕ್ಷೇತ್ರಕ್ಕೆ ಮಾಡಿದ ಕೆಲಸ, ಇಲ್ಲೇ ಚುನಾವಣೆ ರಾಜಕೀಯ ಶುರುವಾಗಿದ್ದು, ಇಲ್ಲೇ ಗೆಲುವಿನೊಂದಿಗೆ ಚುನಾವಣಾ ರಾಜಕೀಯ ಮುಗಿಸೋದು ನನ್ನ ಆಸೆ ಅನ್ನೋ ಸೆಂಟಿಮೆಂಟ್ ಮಾತು ವರ್ಕ್ ಆಗುತ್ತೆ ಅನ್ನೋದು ಸಿಎಂ ನಂಬಿಕೆ.

    ಇನ್ನು ಜಿ.ಟಿ.ದೇವೇಗೌಡ ಕೂಡ, ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಒಕ್ಕಲಿಗರು, ನಾಯಕರು, ಲಿಂಗಾಯತರ ಬೆಂಬಲ ಸಿಗುತ್ತೆ. ಅಲ್ಲದೆ, ಕಾಂಗ್ರೆಸ್ ಒಳಗಿನ ಸಿದ್ದರಾಮಯ್ಯ ವಿರೋಧಿ ಅಲೆಯ ಲಾಭ ಕೂಡ ಆಗುತ್ತೆ. ಸಿದ್ದರಾಮಯ್ಯ ಸೋಲಲೇ ಬೇಕು ಅಂತಾ ಕಮಲ ಪಾಳಯದ ಬೆಂಬಲವೂ ಸಿಗುತ್ತೆ. ಇದರಿಂದ ನನ್ನ ಗೆಲವು ಇನ್ನೂ ಸುಲಭ ಅನ್ನೋ ವಿಶ್ವಾಸದಲ್ಲಿದ್ದಾರೆ. ಯಾರ ವಿಶ್ವಾಸ, ಲೆಕ್ಕಾಚಾರ ಏನೇ ಆಗಿರಲಿ. 2018 ಚುನಾವಣೆಯ ಸ್ಟಾರ್ ಕ್ಷೇತ್ರಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಮೊದಲನೆಯದಂತೂ ಆಗುತ್ತದೆ ಎನ್ನುವುದು ಸುಳ್ಳಲ್ಲ.