Tag: election result

  • ಇಂದೇ ಪಂಚ ರಾಜ್ಯಗಳ ಭವಿಷ್ಯ – ಬಂಗಾಳ ಫಲಿತಾಂಶವೇ ಕುತೂಹಲ

    ಇಂದೇ ಪಂಚ ರಾಜ್ಯಗಳ ಭವಿಷ್ಯ – ಬಂಗಾಳ ಫಲಿತಾಂಶವೇ ಕುತೂಹಲ

    – ತಮಿಳಿನಾಡಿನಲ್ಲಿ ಮತ್ತೆ ಉದಯಿಸ್ತಾನಾ ಸೂರ್ಯ..?

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ರಾಜ್ಯದ 2 ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ.

    ಬೆಳಗ್ಗೆ 8 ಗಂಟೆಯಿಂದ ಕೊರೊನಾ ನಿಯಮಗಳ ಅನುಸಾರ ಮತ ಎಣಿಕೆ ನಡೆಯಲಿದೆ. ಎಕ್ಸಿಟ್ ಪೋಲ್‍ಗಳ ಪ್ರಕಾರ, ಪಶ್ಚಿಮ ಬಂಗಾಳ ಗೆಲ್ಲಲು ಬಿಜೆಪಿ ಮತ್ತು ಟಿಎಂಸಿಗೆ ಸಮಾನ ಅವಕಾಶಗಳಿವೆ. ಕೇರಳದಲ್ಲಿ ಎಲ್‍ಡಿಎಫ್, ತಮಿಳುನಾಡಲ್ಲಿ ಡಿಎಂಕೆ, ಅಸ್ಸಾಂ ಮತ್ತು ಪುದುಚೆರಿಯಲ್ಲಿ ಬಿಜೆಪಿ ಗೆಲ್ಲಬಹುದು.

    ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಫಲಿತಾಂಶವೂ ಹೊರಬೀಳಲಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲೋ ಸಾಧ್ಯತೆ ಹೆಚ್ಚಿದೆ. ಮಸ್ಕಿ, ಬಸವಕಲ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಫಿಫ್ಟಿ ಚಾನ್ಸ್ ಇದೆ. ಹಾಗೇ ನೋಡಿದ್ರೆ, ರಾಜ್ಯದಲ್ಲಿ ಕೊರೋನಾ ಅಬ್ಬರದಿಂದ ಈ 3 ಉಪ ಚುನಾವಣೆಗಳ ಫಲಿತಾಂಶ ಮಹತ್ವ ಕಳೆದುಕೊಂಡಿದೆ.

    3 ಉಪ ಚುನಾವಣೆಗಳ ಮಧ್ಯೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚ್ಚೇರಿ ಹಾಗೂ ಅಸ್ಸಾಂ ರಾಜ್ಯಗಳ ಮತ ಎಣಿಕೆಯೂ ನಡೆಯುತ್ತಿದೆ. ಪಂಚ ರಾಜ್ಯಗಳ ಪೈಕಿ, ಪಶ್ಚಿಮ ಬಂಗಾಳದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

  • ವಾಕಿಂಗ್‍ಗೂ ಹೋಗದೆ ಟಿವಿ ಮುಂದೆ ಕುಳಿತ ಬಿಎಸ್‍ವೈ

    ವಾಕಿಂಗ್‍ಗೂ ಹೋಗದೆ ಟಿವಿ ಮುಂದೆ ಕುಳಿತ ಬಿಎಸ್‍ವೈ

    ಬೆಂಗಳೂರು: ಅದೆಷ್ಟೇ ಬ್ಯುಸಿ ಶೆಡ್ಯೂಲ್ ಇರಲಿ ಅಥವಾ ಅದೇನೇ ಟೆನ್ಶನ್ ಇರಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತ್ರ ವಾಕಿಂಗ್ ಹೋಗೋದನ್ನು ಮಿಸ್ ಮಾಡೋದೇ ಇಲ್ಲ. ಬೆಳ್ಳಂಬೆಳಗೆ 7.30 ಅಥವಾ 8 ಗಂಟೆ ಸುಮಾರಿಗೆ ಸಿಎಂ ದವಳಗಿರಿ ನಿವಾಸದಿಂದ ಪಕ್ಕದ ಪಾರ್ಕ್ ನಲ್ಲಿ ಒಂದ್ ರೌಂಡ್ ಹೊಡೆಯುವ ಮೂಲಕವೇ ಅವರು ತಮ್ಮ ದಿನವನ್ನು ಆರಂಭಿಸುತ್ತಾರೆ.

    ಈ ಹಿಂದೆ ಒಂದೆರಡು ದಿನ ಸಿಎಂ ಸೀಟಿನಲ್ಲಿ ಕೂತು ರಾಜೀನಾಮೆ ಕೊಟ್ರಲ್ಲ ಅಂದು ಕೂಡ ಸಿಎಂ ವಾಕಿಂಗ್ ಮಿಸ್ ಮಾಡಿಲ್ಲ. ಬಜೆಟ್ ಮಂಡನೆಯ ದಿನವೂ ಪಾರ್ಕಿಗೆ ಹೋಗಿ ಒಂದೆರಡು ರೌಂಡ್ ಹೊಡೆದು ರಿಲೀಫ್ ಆಗಿದ್ರು. ಮಂಡಿನೋವು ಶುಗರ್ ಇರೋದ್ರಿಂದ ವೈದ್ಯರ ಸೂಚನೆಯಂತೆ ನಿತ್ಯ ವಾಕಿಂಗ್ ಮಿಸ್ ಮಾಡಲ್ಲ.

    ಆದರೆ ಇಂದು ಸಿಎಂ ಅದೆಷ್ಟರ ಮಟ್ಟಿಗೆ ಟೆನ್ಶನ್ ನಲ್ಲಿ ಇದ್ದರು ಅಂದ್ರೆ ವಾಕಿಂಗ್‍ಗೂ ಹೋಗದೇ ಟಿವಿ ಮುಂದೆ ಕುಂತುಬಿಟ್ಟಿದ್ದರು. ಉಪಚುನಾವಣೆ ಸಮರ ಏನಾಗುತ್ತೋ, ಎಲ್ಲಿ ತನ್ನ ಸಿಎಂ ಸೀಟಿಗೆ ಕುತ್ತು ಬರುತ್ತೋ ತನ್ನ ಅಧಿಕಾರ ಏನಾಗುತ್ತೋ ಅನ್ನುವ ಭೀತಿಗೆ ಉಸಿರು ಬಿಗಿ ಹಿಡಿದು ಸಿಎಂ ಬೆಳ್ಳಂಬೆಳಗ್ಗೆ ತನ್ನ ರೊಟೀನ್ ಲೈಫ್ ಗೆ ಬೈ ಬೈ ಹೇಳಿ ಟಿವಿ ಮುಂದೆ ಕುಳಿತು ಎಲೆಕ್ಷನ್ ರಿಸಲ್ಟ್ ವೀಕ್ಷಣೆ ಮಾಡಿದರು.

  • 13 ಮಂದಿ ಅನರ್ಹ ಶಾಸಕರ ಭವಿಷ್ಯ ಇಂದು ಬಯಲು – ಗೆದ್ದು ವಿಧಾನಸಭೆಗೋ, ಸೋತು ಮನೆಗೋ?

    13 ಮಂದಿ ಅನರ್ಹ ಶಾಸಕರ ಭವಿಷ್ಯ ಇಂದು ಬಯಲು – ಗೆದ್ದು ವಿಧಾನಸಭೆಗೋ, ಸೋತು ಮನೆಗೋ?

    – ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧರಿಸುವ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

    ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆದಿದ್ದ ಮತದಾನದ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಅನರ್ಹ ಎನಿಸಿಕೊಂಡಿರುವ 13 ಮಂದಿಯಲ್ಲಿ ಯಾರನ್ನ ಮತದಾರರು ಅನರ್ಹರನ್ನಾಗಿ ಉಳಿಸ್ತಾರೆ, ಯಾರಿಗೆ ಅರ್ಹ ಪಟ್ಟ ಕೊಟ್ಟು ಮತ್ತೆ ವಿಧಾನಸಭೆಗೆ ಕಳಿಸ್ತಾರೆ ಅನ್ನೋದು ಗೊತ್ತಾಗಲಿದೆ.

    ಉಪ ಚುನಾವಣೆಯಲ್ಲಿ ರಾಣೇಬೆನ್ನೂರಿನ ಮಾಜಿ ಶಾಸಕ ಆರ್ ಶಂಕರ್ ಮತ್ತು ಶಿವಾಜಿನಗರದ ಮಾಜಿ ಶಾಸಕ ರೋಷನ್‍ಬೇಗ್ ಸ್ಪರ್ಧೆ ಮಾಡಿಲ್ಲ. ಹೊಸಕೋಟೆ, ವಿಜಯನಗರ, ಗೋಕಾಕ್, ಅಥಣಿ, ಕಾಗವಾಡದಲ್ಲಿ ಎದ್ದಿದ್ದ ಬಂಡಾಯದ ಬಿಸಿ ವಲಸೆ ಬಂದು ಬಿಜೆಪಿ ಚಿಹ್ನೆಯಡಿ ಅಖಾಡಕ್ಕಿಳಿದ ಅನರ್ಹರಿಗೆ ಆಘಾತ ಕೊಡುತ್ತೋ ಅಥವಾ ಬಂಡಾಯಕ್ಕೆ ಸೆಡ್ಡು ಹೊಡೆದು ಗೆದ್ದೇ ಬಿಡುತ್ತಾರಾ ಅನ್ನೋ ಪ್ರಶ್ನೆಗಳಿಗೆ ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ಬಹುತೇಕ ಸ್ಪಷ್ಟ ಉತ್ತರ ಸಿಗಲಿದೆ.

    ಬಾಕಿ ಇರುವ ಮೂರು ವರ್ಷ ಸ್ಥಿರ ಸರ್ಕಾರವೇ ಇರಲಿ, ಮಧ್ಯಂತರ ಚುನಾವಣೆಯೇ ಬೇಡ ಅನ್ನೋ ನಿರ್ಧಾರಕ್ಕೆ ಮತದಾರರು ಬಂದಿದ್ದಾರಾ ಅಥವಾ ನಾವು ಗೆಲ್ಲಿಸಿ ಕಳುಹಿಸಿದ್ದವರು ಬಿಜೆಪಿಗೆ ನೆಗೆದು ನಮಗೆ ಮೋಸ ಮಾಡಿದರು ಅನ್ನೋ ಸಿಟ್ಟಲ್ಲಿ ಸೋಲಿನ ಪಾಠ ಕಲಿಸ್ತಾರಾ..?, ಕಾಂಗ್ರೆಸ್ಸಿನ ಕಚ್ಚಾಟದಲ್ಲಿ ಏಕಾಂಗಿ ಆಗಿರುವ ಸಿದ್ದರಾಮಯ್ಯ ಒಂಟಿ ಹೋರಾಟ ಉಪ ಚುನಾವಣೆಯಲ್ಲಿ ಫಲ ಕೊಡುತ್ತಾ..?, ದಿಕ್ಕು ತಪ್ಪಿರುವ ಜೆಡಿಎಸ್‍ನಲ್ಲಿ ಕುದಿಯುತ್ತಿರುವ ಅಸಮಾಧಾನದ ಬೆಂಕಿಗೆ ಉಪ ಚುನಾವಣೆ ಫಲಿತಾಂಶ ತುಪ್ಪ ಸುರಿಯುತ್ತಾ..? ಸರ್ಕಾರವನ್ನು ಸುಭದ್ರಗೊಳಿಸಲು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಕೈ ಹಾಕಲು ಬಿಜೆಪಿಗೆ ಪ್ರೇರೆಪಿಸುತ್ತಾ ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಫಲಿತಾಂಶವೇ ಉತ್ತರ ನೀಡಲಿದೆ.

  • ಮಾಜಿ ಸಿಎಂ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಮುಹೂರ್ತ ಫಿಕ್ಸ್?

    ಮಾಜಿ ಸಿಎಂ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಮುಹೂರ್ತ ಫಿಕ್ಸ್?

    ಬೆಂಗಳೂರು: ಉಪ ಚುನಾವಣಾ ಫಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್ ನಾಯಕರ ಗುಪ್ತ್ ಗುಪ್ತ್ ಮೀಟಿಂಗ್ ನಡೆಯುತ್ತಿದ್ದು, ಡಿಸೆಂಬರ್ 11 ಅಥವಾ 12 ರಂದು ಮೂಲ ಕಾಂಗ್ರೆಸ್ಸಿಗರ ದಂಡು ದೆಹಲಿಗೆ ದೌಡಾಯಿಸಲಿದೆ ಎನ್ನಲಾಗಿದೆ.

    ಹೈಕಮಾಂಡಿಗೆ ಫಲಿತಾಂಶದ ವರದಿ ಸಲ್ಲಿಕೆ ಮಾಡಲು ಮೂಲ ಕಾಂಗ್ರೆಸ್ಸಿಗರು ನಿರ್ಧಾರ ಮಾಡಿದ್ದಾರೆ. ಶನಿವಾರ ಸಂಜೆ ರಾಜ್ಯಸಭಾ ಸದಸ್ಯರೊಬ್ಬರ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಾರ್ಜ್ ಶೀಟ್ ರೆಡಿ ಮಾಡಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

    ಉಪ ಸಮರದಲ್ಲಿ 4ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಅನ್ನೋ ಲೆಕ್ಕದಲ್ಲಿ ಮೂಲ ಕಾಂಗ್ರೆಸ್ಸಿಗರು ಇದ್ದಾರೆ. ಫಲಿತಾಂಶದ ನಂತರ ಡಿಸೆಂಬರ್ 11 ಅಥವಾ 12 ರಂದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಉಪ ಸಮರದ ಹಿನ್ನಡೆಗೆ ಕಾರಣ ಏನು ಅಂತ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಪ್ರೊ.ರಾಜೀವ್ ಗೌಡ, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರಿಂದ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆದಿದೆ.

    ತಮಗಿಷ್ಟ ಬಂದವರಿಗೆ ಟಿಕೆಟ್ ಕೊಡಿಸಿಕೊಂಡು ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ಹಿನ್ನಡೆಗೆ ಕಾರಣ ಸಿದ್ದರಾಮಯ್ಯ ಎಂದು ದೂರು ಕೊಡಲು ರೆಡಿಯಾಗಿದ್ದಾರೆ. ಅಲ್ಲದೆ ಸತತ ಸೋಲು ಹಾಗೂ ಹಿನ್ನಡೆ ಆಗುತ್ತಿದ್ದರು ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಂತೆ ವರ್ತಿಸುತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಸಿಎಲ್ ಪಿ ನಾಯಕನ ಸ್ಥಾನ ಅಥವಾ ವಿಪಕ್ಷ ನಾಯಕನ ಸ್ಥಾನ ಒಂದರಿಂದ ತಲೆದಂಡ ಮಾಡುವಂತೆ ಹೈ ಕಮಾಂಡ್ ಮುಂದೆ ಪಟ್ಟು ಹಿಡಿಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

  • ಜೆಡಿಎಸ್ ಸ್ಥಾನದ ಮೇಲೆ ಹುಣಸೂರು ಫಲಿತಾಂಶ

    ಜೆಡಿಎಸ್ ಸ್ಥಾನದ ಮೇಲೆ ಹುಣಸೂರು ಫಲಿತಾಂಶ

    ಮೈಸೂರು: ಹುಣಸೂರು ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಕಿಂಗ್ ಆಗುತ್ತಾ ಅಥವಾ ಕಿಂಗ್ ಮೇಕರ್ ಆಗುತ್ತಾ?, ಬೈ ಎಲೆಕ್ಷನ್ ನ ಗೆಲುವಿನ ಲೆಕ್ಕಾಚಾರದಲ್ಲಿ ಜೆಡಿಎಸ್‍ನ ಪಾತ್ರ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಈ ರೀಪೋರ್ಟ್ ನಲ್ಲಿದೆ.

    ಹುಣಸೂರು ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಿರೋದು ಯಾರನ್ನೂ ಸೋಲಿಸಲು ಅಥವಾ ಯಾರನ್ನೋ ಗೆಲ್ಲಿಸಲು ಅಲ್ಲ. ಬದಲಾಗಿ ನಾವೇ ಗೆಲ್ಲುವುದಕ್ಕೆ ಸ್ಪರ್ಧೆ ಮಾಡಿದ್ದೇವೆ ಅಂತ ದಳಪತಿಗಳು ಪದೇ ಪದೇ ಹೇಳುತ್ತಿದ್ದರು. ಆದರೆ, ಮತದಾನ ನಡೆದ ಮೇಲೆ ಜೆಡಿಎಸ್ ಸ್ಪರ್ಧೆ ಈ ಕ್ಷೇತ್ರದಲ್ಲಿ ಯಾರನ್ನೋ ಸೋಲಿಸುವ ಸಲುವಾಗಿಯೇ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲಿಗೆ ನಾವೇ ಕಿಂಗ್ ಅಂತ ಹೇಳುತ್ತಿದ್ದ ಜೆಡಿಎಸ್ ಮತದಾನದ ದಿನ ಕಿಂಗ್‍ಮೇಕರ್ ಸ್ಥಾನಕ್ಕೆ ಬಂದು ಕುಳಿತಿರೋದು ಸ್ಪಷ್ಟ.

    ಹುಣಸೂರು ಉಪ ಚುನಾವಣೆಯ ಫಲಿತಾಂಶ ಜೆಡಿಎಸ್ ಪಡೆಯೋ ಮತಗಳ ಮೇಲೆ ನಿಂತಿದೆ. ಜೆಡಿಎಸ್‍ನ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ಸಿಗೆ ಶಿಫ್ಟ್ ಆಗಿವೆ ಅನ್ನೋ ಮಾತು ಮತದಾನದ ಬಳಿಕ ದಟ್ಟವಾಗಿ ಕೇಳಿ ಬರುತ್ತಿದೆ. ಅಲ್ಲಿಗೆ ಈ ಮಾತು ನಿಜವೇ ಆದರೆ ಈ ಫಲಿತಾಂಶದ ದಿಕ್ಕೂ ನಿರ್ಧಾರವಾಗುವುದು ಜೆಡಿಎಸ್ ಪಡೆಯೋ ಮತಗಳಿಂದ ಅನ್ನೋದು ಸ್ಪಷ್ಟ.

    ಜೆಡಿಎಸ್ ಈ ಚುನಾವಣೆಯಲ್ಲಿ 30 ಸಾವಿರಕ್ಕಿಂತ ಹೆಚ್ಚು ಮತ ಪಡೆದರೆ ಅದು ಬಿಜೆಪಿ ಪಾಲಿಗೆ ವರವಾಗಲಿದೆ. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜೆಡಿಎಸ್ ಇಷ್ಟು ಮತ ದಾಟಲೇ ಬೇಕು. ಒಂದು ವೇಳೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಂತರೆ ಅದು ಕಾಂಗ್ರೆಸ್ಸಿಗೆ ವರವಾಗಲಿದೆ. ಕಾಂಗ್ರೆಸ್ ಗೆಲುವಿನ ಹಾದಿ ಹಿಡಿಯಬೇಕಾದರೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಲ್ಲಬೇಕು.

    ಹೀಗಾಗಿಯೆ ಬಿಜೆಪಿ-ಕಾಂಗ್ರೆಸ್ ತಾವು ಪಡೆಯೋ ಮತಗಳ ಲೆಕ್ಕಕ್ಕಿಂತ ಜೆಡಿಎಸ್ ಪಡೆಯೋ ಮತಗಳು ಎಷ್ಟು ಎಂಬುದರ ಮೇಲೆ ಗೆಲುವಿನ ಲೆಕ್ಕ ಬರೆದಿವೆ. ಜೆಡಿಎಸ್ ತಾನು ಸೋತು ಹಳ್ಳಿಹಕ್ಕಿಯ ಗೆಲುವಿನ ರೆಕ್ಕೆ ತುಂಡು ಮಾಡುತ್ತಾ? ಅಥವಾ ಜೆಡಿಎಸ್ ತನ್ನ ವೋಟ್ ಬ್ಯಾಂಕ್ ತನ್ನಲ್ಲೇ ಉಳಿಸಿಕೊಂಡು ಕಾಂಗ್ರೆಸ್ ಕೈ ಕಟ್ ಮಾಡುತ್ತಾ ಎಂಬುದನ್ನು ಸೋಮವಾರದವರೆಗೆ ಕಾದು ನೋಡಬೇಕಿದೆ.

  • ಉಪಸಮರದಲ್ಲಿ ಬೆಟ್ಟಿಂಗ್ ಮೇನಿಯಾ!

    ಉಪಸಮರದಲ್ಲಿ ಬೆಟ್ಟಿಂಗ್ ಮೇನಿಯಾ!

    ಬೆಂಗಳೂರು: ಹದಿನೈದು ಕ್ಷೇತ್ರಗಳಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಈಗ ಇದರ ಜೊತೆಗೆ ಎಲೆಕ್ಷನ್ ಅಖಾಡದಲ್ಲಿ ಬೆಟ್ಟಿಂಗ್ ಮೇನಿಯಾ ಸದ್ದು ಮಾಡುತ್ತಿದೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ತೆರೆಮರೆಯಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ದಂಧೆ ನಡೆದಿತ್ತು. 15ರ ಪೈಕಿ ನಾಲ್ಕು ಕ್ಷೇತ್ರಗಳು ಬೆಟ್ಟಿಂಗ್ ಕಟ್ಟೋರ ಹಾಟ್ ಸ್ಪಾಟ್ ಆಗಿದೆ.

    ಕೆಆರ್ ಪೇಟೆ, ಹೊಸಕೋಟೆ, ಗೋಕಾಕ್ ಮತ್ತು ಹುಣಸೂರಿನ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ದುಡ್ಡು, ಆಸ್ತಿ, ಕೋಳಿ, ಕುರಿ ಒಡೆವೆಗಳ ಬೆಟ್ಟಿಂಗ್ ಶುರುವಾಗಿದೆ ಎನ್ನಲಾಗಿದೆ. ಮಹಿಳೆಯರಿಗೂ ಬೆಟ್ಟಿಂಗ್ ಕ್ರೇಜ್ ಹೆಚ್ಚಾಗಿದ್ದು, ಒಡವೆ, ಒಲೆ, ಮೂಗುತಿ, ಸೀರೆ ಇತ್ಯಾದಿ ವಸ್ತುಗಳನ್ನು ಒತ್ತೆ ಇಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಪ್ರಚಾರಕ್ಕೆ ತೆರಳುವ ಮಹಿಳೆಯರಲ್ಲಿ ಬೆಟ್ಟಿಂಗ್ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

    ಬೆಟ್ಟಿಂಗ್ ಕಟ್ಟೋದು ಒಳ್ಳೆಯದಲ್ಲ, ಇದು ಕಾನೂನು ಬಾಹಿರ ಕೂಡ. ರಾಜಕೀಯ ಅನ್ನೋದು ಅಭಿವೃದ್ಧಿಯ ಮಂತ್ರವಾಗಿರಬೇಕೆ ಹೊರತು ಈ ರೀತಿಯ ಬೆಟ್ಟಿಂಗ್ ಕಟ್ಟೋದು ಸಮಾಜಕ್ಕೆ ಮಾರಕ ಎಂದು ಹಿರಿಯ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಮಹಾರಾಷ್ಟ್ರ ಮತ ಎಣಿಕೆ:  5 ಸಾವಿರ ಲಡ್ಡುಗಳ ತಯಾರಿಸಿ ಸಂಭ್ರಮಾಚರಣೆಗೆ  ಬಿಜೆಪಿ ಸಿದ್ಧತೆ

    ಮಹಾರಾಷ್ಟ್ರ ಮತ ಎಣಿಕೆ: 5 ಸಾವಿರ ಲಡ್ಡುಗಳ ತಯಾರಿಸಿ ಸಂಭ್ರಮಾಚರಣೆಗೆ ಬಿಜೆಪಿ ಸಿದ್ಧತೆ

    – ಸಾಕಷ್ಟು ಹೂವಿನ ಮಾಲೆ, ಸೇರಿದಂತೆ ಎಲ್ಲ ರೀತಿಯ ಸಿದ್ಧತೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸದಲ್ಲಿರುವುದರಿಂದ ಬುಧವಾರವೇ ಅಲ್ಲಿನ ರಾಜ್ಯ ಬಿಜೆಪಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 5 ಸಾವಿರಕ್ಕೂ ಅಧಿಕ ಲಡ್ಡುಗಳು ಹಾಗೂ ಅನೇಕ ಹೂವಿನ ಮಾಲೆಗಳಿಗೆ ಆರ್ಡರ್ ನೀಡಿದೆ.

    ಅಲ್ಲದೆ ಚುನಾವಣಾ ಫಲಿತಾಂಶ ವೀಕ್ಷಣೆಗೆ ಮುಂಬೈನಲ್ಲಿರುವ ರಾಜ್ಯ ಬಿಜೆಪಿಯ ಕೇಂದ್ರ ಕಚೇರಿ ಬಳಿ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ಫಲಿತಾಂಶ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

    ಮತ ಎಣಿಕೆ ಒಂದು ಹಂತ ತಲುಪುವ ಹೊತ್ತಿಗೆ ಅಂದರೆ ಬೆಳಗ್ಗೆ 10 ಗಂಟೆಯ ನಂತರ ದಕ್ಷಿಣ ಮುಂಬೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಮತ ಎಣಿಕೆಯ ಫಲಿತಾಂಶಕ್ಕನುಗುಣವಾಗಿ ಮಧ್ಯಾಹ್ನದ ಹೊತ್ತಿಗೆ ಸಂಭ್ರಮಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ನಾವು ಅಧಿಕಾರಕ್ಕೇರುತ್ತೇವೆ ಎಂಬುದು ನಮಗೆ ತಿಳಿದಿದೆ. ಆದರೆ ಸಂಖ್ಯೆಗಳ ಬಗ್ಗೆ ಮಾತ್ರ ಕುತೂಹಲವಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

    ಬುಧವಾರ ಪ್ರಕಟವಾದ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದನ್ನು ಸೂಚಿಸಿದ್ದವು. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕಾರ ಹಿಡಿಯಲಿದೆ. ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 109-124, ಶಿವಸೇನೆ 57-40, ಕಾಂಗ್ರೆಸ್ 32-40, ಎನ್‍ಸಿಪಿ 40-50, ವಿಬಿಎ 0-2 ಮತ್ತು ಇತರರು 22-32 ಕ್ಷೇತ್ರಗಳಲ್ಲಿ ಗೆಲುವನ್ನು ದಾಖಲಿಸಬಹುದು ಇಂಡಿಯಾ ಟುಡೇ ಸಮೀಕ್ಷೆ ಹೇಳಿತ್ತು. ಇಂಡಿಯಾ ಟುಡೇ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 77, ಕಾಂಗ್ರೆಸ್ 11 ಮತ್ತು ಇತರರು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಸಾಧ್ಯತೆಗಳಿವೆ ಎಂದು ಹೇಳಾಗಿದೆ.

    2014ರಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ಮತ್ತು ಶಿವಸೇನೆ 185 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಿದ್ದವು. ಕಾಂಗ್ರೆಸ್ 83 ಮತ್ತು ಪಕ್ಷೇತರ ಅಭ್ಯರ್ಥಿಗಳು 20 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಹರ್ಯಾಣದಲ್ಲಿ ನಡೆದ 2014ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 15 ಮತ್ತು ಇತರರು 28 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

    ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ಮತದಾನ ನಡೆದಿದ್ದು, ಶೇ.61.13ರಷ್ಟು ಮತದಾನವಾಗಿದೆ. ಫಲಿತಾಂಶದ ಹಿನ್ನೆಲೆ ಬುಧವಾರವೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರಾಖಂಡ್‍ನ ಕೇದಾರನಾಥಕ್ಕೆ ಭೇಟಿ ನೀಡಿ ಶಿವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.

  • ಚುನಾವಣಾ ಫಲಿತಾಂಶ: ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತೆ?

    ಚುನಾವಣಾ ಫಲಿತಾಂಶ: ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತೆ?

    ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಇಂದು ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.

    ಈ ಹಿಂದೆಯೆಲ್ಲಾ ಮೊದಲು ಅಂಚೆ ಮತಗಳನ್ನು ನಂತರ ಇವಿಎಂನಲ್ಲಿರುವ ಮತಗಳನ್ನು ಎಣಿಕೆ ಮಾಡಿ ಯಾರು ವಿಜಯಿ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಗೆದ್ದಾಗಲೆಲ್ಲಾ, ಬಿಜೆಪಿಯೇತರ ಪಕ್ಷಗಳು ಸೋತಾಗಲೆಲ್ಲಾ ಇವಿಎಂ ಬಗ್ಗೆ ತೆಗೆಯೋ ರಾಜಕೀಯ ಪಕ್ಷಗಳ ಒತ್ತಡ, ಇವಿಎಂ ವಿಶ್ವಾಸಾರ್ಹವನ್ನ ಅನ್ನೋ ಆರೋಪಗಳ ಪರಿಣಾಮ ಐದು ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುತ್ತದೆ.

    ಎಕ್ಸಿಟ್ ಪೋಲ್‍ಗಳು ಹೊರಬಿದ್ದ ಬೆನ್ನಲ್ಲೇ, ಎವಿಎಂನಲ್ಲಿರುವ ಮತಗಳ ಎಣಿಕೆಗೆ ಮುನ್ನ ವಿವಿಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಿಸಬೇಕು ಎಂದು ವಿಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಸುಪ್ರೀಂಕೋರ್ಟ್ ಕದವನ್ನು ತಟ್ಟಿದ್ದವು. ಆದರೆ ಎಲ್ಲಾ ಕಡೆಯೂ ವಿಪಕ್ಷಗಳ ಆರೋಪಕ್ಕೆ ಹಿನ್ನಡೆಯಾಗಿದೆ.

    ಚುನಾವಣಾ ಆಯೋಗ ಈ ಮೊದಲು ನಿರ್ಧರಿಸಿದಂತೆ ಮೊದಲು ಅಂಚೆ ಮತಗಳ ಎಣಿಕೆ ಮಾಡಲಾಗುತ್ತದೆ. ನಂತರ ಮತಯಂತ್ರದಲ್ಲಿರುವ ಮತಗಳ ಕೌಂಟ್ ಮಾಡಲಾಗುತ್ತದೆ. ಬಳಿಕ ಯಾವುದಾದರೂ ಐದು ಬೂತ್‍ಗಳ ವಿವಿಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿಯೋದಕ್ಕೆ ಕನಿಷ್ಠ ಅಂದರೂ ಮಧ್ಯಾಹ್ನ ಕಳೆಯಬೇಕು. ಆದರೆ 12 ಗಂಟೆ ಹೊತ್ತಿಗೆಲ್ಲಾ ಒಂದಿಷ್ಟು ಟ್ರೆಂಡ್‍ಗಳು ಸಿಗುವ ಸಾಧ್ಯತೆಗಳಿವೆ.

  • ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಚಿಕ್ಕಮಗಳೂರು: ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯಾದ್ಯಂತ ಟೆಂಪಲ್ ರನ್ ಮಾಡಿ, ಶೃಂಗೇರಿಯಲ್ಲಿ ಪೂಜೆ, ಹೋಮ, ಹವನ ನಡೆಸಿದ್ದ ಸಿ.ಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮತ್ತೊಂದು ಸುತ್ತು ಟೆಂಪಲ್ ರನ್ ಮುಂದುವರಿಸಿದೆ. ಇಂದು ಬೆಳಗ್ಗೆ ಶೃಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್, ಸಂಜೆ ಹಾಸನದ ಕುಲದೇವರ ಸೇರಿದಂತೆ ವಿವಿಧ ದೇವಸ್ಥಾನಕ್ಕೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ತಾಯಿ- ಮಗ, ಎಕ್ಸಿಟ್ ಪೋಲ್‍ಗಳನ್ನ ಲೆಕ್ಕಕ್ಕೆ ಇಟ್ಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು.

    ದೇಶಾದ್ಯಂತ 543 ಕ್ಷೇತ್ರದಲ್ಲಿ ಚುನಾವಣೆ ನಡೆದರೂ ಇಂಡಿಯಾ ಕಣ್ಣು ಮಂಡ್ಯದ ಮೇಲಿರೋದ್ರಲ್ಲಿ ಅನುಮಾನವೇ ಇಲ್ಲ. ಅತ್ತ ಸುಮಲತಾ ಇತ್ತ ನಿಖಿಲ್ ಕುಮಾರಸ್ವಾಮಿಯ ಎದೆಯಲ್ಲೂ ಢವ-ಢವ ಶುರುವಾಗಿದೆ. ಆದರೆ, ಅಪ್ಪನಿಗೆ ಅಧಿಕಾರ ಕೊಟ್ಟ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನ ಗೆಲುವಿಗಾಗೂ ವಿಶೇಷ ಪೂಜೆ ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮಗನ ಗೆಲುವಿಗಾಗಿ ಮತ್ತೆ ಶಾರದಾಂಬೆಯ ಮೊರೆ ಹೋಗಿದ್ದಾರೆ.

    ಇದೇ ವೇಳೆ ಮಾತನಾಡಿದ ನಿಖಿಲ್, ಒಂದೊಂದು ಸರ್ವೆಗಳಲ್ಲಿ ಒಂದೊಂದು ರೀತಿ ಫಲಿತಾಂಶ ಬಂದಿದೆ. ನಾನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿಎಂ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಶಾರದಾಂಬೆಯ ಆಶೀರ್ವಾದಕ್ಕಾಗಿ ನಾವು ಆಗಾಗ ಶೃಂಗೇರಿಗೆ ಬರುತ್ತೇವೆ. ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಸರ್ಕಾರಕ್ಕೆ ಡೆಡ್‍ಲೈನ್ ಕೊಡ್ತಾನೆ ಇದೆ. ಆದರೆ ಏನೂ ಪ್ರಯೋಜನವಾಗ್ತಿಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರೋದಿಲ್ಲ. ರಾಜ್ಯದಲ್ಲಿ ಜೆಡಿಎಸ್‍ಗೆ ಆರು ಸ್ಥಾನ ಬರುವ ನಿರೀಕ್ಷೆ ಇದೆ. ನಿಖಿಲ್ ಮೇಲೆ ಚಾಮುಂಡೇಶ್ವರಿ, ಶಾರದಾಂಬೆ ಹಾಗೂ ಜನರ ಆಶೀರ್ವಾದವಿದೆ ಎಂದು ಹೇಳುವ ಮೂಲಕ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

    ಒಟ್ಟಿನಲ್ಲಿ 2018 ಜನವರಿ ತಿಂಗಳಿಂದ ಸಿಎಂ ರಾಜ್ಯ ಸುತ್ತಿದ್ದಕ್ಕಿಂತ ಅಧಿಕಾರ ಉಳಿಸಿಕೊಳ್ಳೋದಕ್ಕೆ ಮಠ-ಮಂದಿರ ಸುತ್ತಿದ್ದೇ ಹೆಚ್ಚು. ಸಿಎಂ ನಡೆ ಬಗ್ಗೆ ರಾಜ್ಯದ ಜನ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಮಗನ ರಾಜಕೀಯ ಭವಿಷ್ಯಕ್ಕೂ ಅಷ್ಟೇ ಪ್ರಮಾಣದಲ್ಲಿ ದೇವಸ್ಥಾನ, ವಿಶೇಷ ಪೂಜೆ, ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಈಗ ಫಲಿತಾಂಶಕ್ಕೂ ಮುನ್ನ ಮತ್ತೊಂದು ರೌಂಡ್ ಶುರುಮಾಡಿದ್ದಾರೆ.

  • ಸಟ್ಟಾ ಬಜಾರ್‌ನಲ್ಲಿ  ಬಿಜೆಪಿ ಪರ ಬೆಟ್ಟಿಂಗ್

    ಸಟ್ಟಾ ಬಜಾರ್‌ನಲ್ಲಿ ಬಿಜೆಪಿ ಪರ ಬೆಟ್ಟಿಂಗ್

    ಬೆಂಗಳೂರು: ಮತದಾನೋತ್ತರ ಸಮೀಕ್ಷೆಗಳು ಎನ್‍ಡಿಎ ಪರ ಒಲವು ತೋರಿದ ಬೆನ್ನಲ್ಲೇ ದೇಶದ ಪ್ರಮುಖ ಬೆಟ್ಟಿಂಗ್ ಬಜಾರ್‍ಗಳಲ್ಲಿ ಆಡಳಿತಾರೂಢ ಬಿಜೆಪಿ ಪರ ಬಾಜಿ ಕಟ್ಟುತ್ತಿದ್ದಾರೆ.

    ಯಾವುದೇ ಪ್ರಮುಖ ಬಾಜಿ ಮಾರುಕಟ್ಟೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದಿದ್ದರೂ ಎನ್‍ಡಿಎ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಟ್ಟಾ ಬಜಾರ್‍ನಲ್ಲೂ ಬಿಜೆಪಿ ಹಾರ್ಟ್ ಫೇವರಿಟ್ ಆಗಿದ್ದು, 244-247 ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದೆ.

    ಕಾಂಗ್ರೆಸ್ ಈ ಚುನಾವಣೆಯಲ್ಲಿ 76 ರಿಂದ 78 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿರುವ ಸಟ್ಟಾ ಬಜಾರ್‍ನಲ್ಲಿ ಬಿಜೆಪಿ ಪರ ಅತೀ ಹೆಚ್ಚು ಜನ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಮಾರುಕಟ್ಟೆಯಲ್ಲಿ ಬಿಜೆಪಿ ಪರ ಅತೀ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಈ ಹಿಂದೆ ಮಧ್ಯಪ್ರದೇಶದ ಚುನಾವಣೆಯಲ್ಲಿ ಸಟ್ಟಾ ಬಜಾರ್ ಬಿಜೆಪಿ 102 ಸ್ಥಾನ ಹಾಗೂ ಕಾಂಗ್ರೆಸ್ 116 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು.

    ಅಂತಿಮವಾಗಿ ಬಿಜೆಪಿ 109 ಸ್ಥಾನ ಹಾಗೂ ಕಾಂಗ್ರೆಸ್ 114 ಸ್ಥಾನ ಪಡೆದು ಸಟ್ಟಾ ಬಜಾರ್ ಉಲ್ಲೇಖಿಸಿದ ಸಂಖ್ಯೆ ನಿಜವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಟ್ಟಾ ಬಜಾರ್‍ನ ಭವಿಷ್ಯ ನಿಜವಾಗಲಿದೆಯೇ ಎನ್ನುವುದನ್ನು ತಿಳಿಯಲು ನಾಳೆವರೆಗೂ ಕಾಯಲೇಬೇಕು.