Tag: election result

  • Haryana Result | ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು ಖಚಿತ – ಸಿಎಂ ನಯಾಬ್‌ ಸಿಂಗ್‌ ಸೈನಿ ವಿಶ್ವಾಸ

    Haryana Result | ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು ಖಚಿತ – ಸಿಎಂ ನಯಾಬ್‌ ಸಿಂಗ್‌ ಸೈನಿ ವಿಶ್ವಾಸ

    ನವದೆಹಲಿ: ಹರಿಯಾಣದಲ್ಲಿ (Haryana) ಕಾಂಗ್ರೆಸ್‌ ಹಿಂದಿಕ್ಕಿ ಬಿಜೆಪಿ (BJP) ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ.

    ಈ ನಡುವೆ ಲಾಡ್ವಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ (Nayab Singh Saini) ಅವರಿಂದು ಧರ್ಮಶಾಲಾ ಕುರುಕ್ಷೇತ್ರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಗಳೊಂದಿಗೆ ಮಾತನಾಡಿ, ಹರಿಯಾಣದಲ್ಲಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಕ್ಫ್ ಆಸ್ತಿ ದೇವರ ಆಸ್ತಿ, ಕಬಳಿಕೆ ಆಗಬಾರದು ರಕ್ಷಣೆ ಮಾಡಬೇಕು; ಸಚಿವ ಜಮೀರ್‌ ಕರೆ

    ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ಎರಡರಲ್ಲೂ ಕಾಂಗ್ರೆಸ್ ಗೆಲುವನ್ನು ಮುನ್ಸೂಚಿಸಿತ್ತು. ಆದ್ರೆ ಫಲಿತಾಂಶ ಎಕ್ಸಿಟ್‌ ಪೋಲ್‌ ಮೀರಿಸಿ ಬರುತ್ತದೆ ಎನ್ನುವ ನಮ್ಮ ನಿರೀಕ್ಷೆ ಸುಳ್ಳಾಗಿಲ್ಲ, ಬಿಜೆಪಿ 3ನೇ ಬಾರಿಗೆ ಅಧಿಕಾರ ಹಿಡಿಯುವುದು ಖಚಿತವಾಗಿದೆ. ನಾವು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸ್ಥಾಪಿಸಿದ ರೀತಿಯ ವ್ಯವಸ್ಥೆಯು ಹರಿಯಾಣಕ್ಕೆ ದೀರ್ಘಕಾಲದವರೆಗೆ ಪ್ರಯೋಜನ ತರುತ್ತದೆ. ಈ ಒಳ್ಳೆಯ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

    ಹರಿಯಾಣದಲ್ಲಿ ಬಿಜೆಪಿಗೆ ಮುನ್ನಡೆ:
    ಹರ್ಯಾಣದಲ್ಲಿ (Haryana Election Results) ಹಾವು ಏಣಿ ಆಟ ಆರಂಭವಾಗಿದೆ. ಆರಂಭದಲ್ಲಿ ಕಾಂಗ್ರೆಸ್‌ (Congress) ಮುನ್ನಡೆಯಲ್ಲಿದ್ದರೆ ಈಗ ಬಿಜೆಪಿ (BJP) ಮುನ್ನಡೆ ಸಾಧಿಸಿದೆ. ಬೆಳಗ್ಗೆ 9 ಗಂಟೆ ಟ್ರೆಂಡ್‌ನಲ್ಲಿ ಕಾಂಗೆಸ್‌ ಮುನ್ನಡೆಯಲ್ಲಿತ್ತು. ಆದರೆ ಬೆಳಗ್ಗೆ 10 ಗಂಟೆಯಿಂದ 11 ಗಂಟೆ ವೇಳೆಗೆ ಬಿಜೆಪಿ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: Haryana Results| ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಹಿನ್ನಡೆ

     

    ಸದ್ಯ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್‌ 36 ಇತರರು 03 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಐಎನ್ಎಲ್‌ಟಡಿ 2 ಹಾಗೂ ಇತರೇ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹರ್ಯಾಣದಲ್ಲಿ ಒಟ್ಟು 90 ಕ್ಷೇತ್ರಗಳಿದ್ದು ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ.

  • ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸಂಸದರಿವರು!

    ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸಂಸದರಿವರು!

    ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್‌ 4 ರಂದು ಹೊರಬಿದ್ದಿದ್ದು, ಇದರಲ್ಲಿ ನಾಲ್ವರು ಅತ್ಯಂತ ಕಿರಿಯ ಸಂಸದರಾಗಿ ಸಂಸತ್‌ ಪ್ರವೇಶಿಸಲು ಸಿದ್ಧರಾಗಿದ್ದಾರೆ.

    ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ (SP) ಟಿಕೆಟ್‌ನಲ್ಲಿ ಸ್ಪರ್ಧಿಸಿದರೆ, ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರನ್ನು ಕ್ರಮವಾಗಿ ಲೋಕ ಜನಶಕ್ತಿ ಪಕ್ಷ (LJP) ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗಿದೆ. ಇದೀಗ ಈ 4 ಅಭ್ಯರ್ಥಿಗಳು ಬಿಹಾರ, ಯುಪಿ, ರಾಜಸ್ಥಾನದ ಸ್ಥಾನಗಳಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ 25 ವರ್ಷ ವಯಸ್ಸಿನವರಾಗಿದ್ದು, ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸದಸ್ಯರು ಎನಿಸಿಕೊಂಡಿದ್ದಾರೆ.

    ನಾಲ್ವರ ವಿವರ ಇಲ್ಲಿದೆ:
    * ಶಾಂಭವಿ ಚೌಧರಿ: ಬಿಹಾರದ ನಿತೀಶ್ ಕುಮಾರ್ ಸಂಪುಟದ ಸಚಿವ ಅಶೋಕ್ ಚೌಧರಿ ಅವರ ಪುತ್ರಿಯಾಗಿರುವ ಶಾಂಭವಿ (Shambhavi Choudhary), ಬಿಹಾರದ ಸಮಸ್ತಿಪುರ್ ಕ್ಷೇತ್ರದಲ್ಲಿ LJP ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.

    ಶಾಂಭವಿ ಚೌಧರಿಯವರು ಕಾಂಗ್ರೆಸ್‌ನ ಸನ್ನಿ ಹಜಾರಿಯವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಸನ್ನಿ ಹಜಾರಿ ಜೆಡಿಯು ಸಚಿವ ಮಹೇಶ್ವರ್ ಹಜಾರಿ ಅವರ ಪುತ್ರ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಶಾಂಭವಿ ಎನ್‌ಡಿಎ ಕಿರಿಯ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದರು.

    * ಸಂಜನಾ ಜಾತವ್: ಇವರು ರಾಜಸ್ಥಾನದ ಭರತ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. 25ರ ಹರೆಯದ ಸಂಜನಾ, ಬಿಜೆಪಿಯ ರಾಮಸ್ವರೂಪ್ ಕೋಲಿ ಅವರನ್ನು 51,983 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಂಜನಾ (Sanjana Jatav), ಬಿಜೆಪಿಯ ರಮೇಶ್ ಖೇಡಿ ವಿರುದ್ಧ ಕೇವಲ 409 ಮತಗಳಿಂದ ಸೋತಿದ್ದರು. ಸಂಜನಾ ರಾಜಸ್ಥಾನದ ಪೊಲೀಸ್ ಪೇದೆ ಕಪ್ತಾನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.

    * ಪುಷ್ಪೇಂದ್ರ ಸರೋಜ್: ಉತ್ತರಪ್ರದೇಶದ ಕೌಶಂಬಿ ಸಂಸದೀಯ ಸ್ಥಾನದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಪುಷ್ಪೇಂದ್ರ (Pushpendra Saroj) ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರನ್ನು ಪುಷ್ಪೇಂದ್ರ ಅವರು 1,03,944 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಪುಷ್ಪೇಂದ್ರ ಅವರು ಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, 5 ಬಾರಿ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಇಂದರ್‌ಜಿತ್ ಸರೋಜ್ ಅವರ ಪುತ್ರ. ಪುಷ್ಪೇಂದ್ರ ಸರೋಜ್ ಬಿಎಸ್‌ಸಿ ಮುಗಿಸಿದ ನಂತರ ರಾಜಕೀಯಕ್ಕೆ ಧುಮುಕಿದರು.

    * ಪ್ರಿಯಾ ಸರೋಜ್: 25 ವರ್ಷದ ಪ್ರಿಯಾ ಸರೋಜ್‌ (Priya Saroj) ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದಾರೆ.

  • ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.

    ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ವಿರುದ್ಧ 2,77,083 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ಅವರಿಗೆ 7,50,830 ಮತಗಳು ಬಿದ್ದಿದೆ. ವಿಧಾನಸಭೆ ಸೋಲಿನ ಬಳಿಕ ಲೋಕಸಭೆಯಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಸೌಮ್ಯಾ ರೆಡ್ಡಿಯವರು 4,73,747 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಸೋಲಿನ ರುಚಿ ಕಂಡಿದ್ದಾರೆ. ಇನ್ನು 7830 ಮತಗಳು ನೋಟಾ ಚಲಾವಣೆಯಾಗಿದೆ.

    ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿದೆ. ಮುಖ್ಯವಾಗಿ ಇದು ದಿ. ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರಿಗೆ 7,39,229 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರು 4,08,037 ಮತಗಳನ್ನು ಪಡೆದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಸೋಲು ಅನುಭವಿಸಿದ್ದರು.

  • ಗದ್ದಿಗೌಡರಿಗೆ 5 ನೇ ಬಾರಿಗೆ ಒಲಿದ ಬಾಗಲಕೋಟೆ ‘ಗದ್ದುಗೆ’

    ಗದ್ದಿಗೌಡರಿಗೆ 5 ನೇ ಬಾರಿಗೆ ಒಲಿದ ಬಾಗಲಕೋಟೆ ‘ಗದ್ದುಗೆ’

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ್ (P. C. Gaddigoudar)  ಅವರು ಗೆಲುವು ಸಾಧಿಸಿದ್ದು, ಈ ಮೂಲಕ 5ನೇ ಬಾರಿ ಗೆಲುವಿನ ಗದ್ದುಗೆ ಏರಿದ್ದಾರೆ.

    ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಅಖಾಡದಲ್ಲಿದ್ದರು. ಹೀಗಾಗಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪಿಸಿ ಗದ್ದಿಗೌಡರ್ ಅವರು ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‍ನಿಂದ ಮೊದಲ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಅದೃಷ್ಟ ಪರೀಕ್ಷೆಗೆ ಇಳಿದು ಸೋತಿದ್ದಾರೆ.

    ಗದ್ದಿಗೌಡರ್ ಅವರು ಸಂಯುಕ್ತಾ ಪಾಟೀಲ್ ವಿರುದ್ಧ 6,83,99 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರಿಗೆ 6,71,039 ಮತಗಳು ಬಿದ್ದರೆ, ಸಂಯುಕ್ತಾ ಪಾಟೀಲ್ ಅವರು 6,02,640 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಯುಕ್ತಾ ಪಾಟೀಲ್ ಅವರು ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರವೇಶಿಸಲು ವಿಫಲರಾದರು.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?: 2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಗದ್ದಿಗೌಡರ್ 1,68,187 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಭಾರೀ ಅಂತರದ ಸೋಲು ಅನುಭವಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

  • ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ (Loksabha Election Result 024) ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ (G Kumar Naik) ಭರ್ಜರಿ ಜಯಗಳಿಸಿದ್ದಾರೆ.

    ಜಿ. ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯ್ಕ್ ವಿರುದ್ಧ 79,781 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕುಮಾರ್ ನಾಯ್ಕ್ ಅವರು 6,70,966 ಮತಗಳನ್ನು ಪಡೆದರೆ, ರಾಜಾ ಅಮರೇಶ್ವರ್ ನಾಯ್ಕ್ (Raja Amareshwar Naik) ಅವರು 5,91,185 ಮತಗಳನ್ನು ಗಳಿಸಿದ್ದಾರೆ.

    ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ್ ನಾಯ್ಕ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭಾರೀ ಗೆಲುವು ಕಂಡಿದ್ದರು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಆದರೆ ಸೋಲು ಕಂಡಿದ್ದಾರೆ.‌ ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಕುಮಾರ್ ನಾಯ್ಕ್, ದೇಶದಲ್ಲಿನ ಬಿಜೆಪಿ ವಿರೋಧಿ ಅಲೆ ನನ್ನ ಗೆಲುವಿಗೆ ಕಾರಣವಾಗಿದೆ. ಬಿಜೆಪಿಯವರು ಪ್ರಚಾರದ ಭರಾಟೆಯಲ್ಲಿ ತಮ್ಮ ವಿರೋಧಿ ಅಲೆಯನ್ನು ಕಡೆಗಣಿಸಿದ್ದರು. 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರ ನಿರೀಕ್ಷೆ ಸುಳ್ಳಾಗಿದೆ. ಮೋದಿ ಸರ್ಕಾರದ ವಿರುದ್ಧದ ಅಸಮಧಾನ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ರಾಯಚೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ರಾಜಕೀಯ ರಂಗದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ರಾಯಚೂರು ನನಗೆ ಹೊಸದಲ್ಲಾ ಇದು ನನ್ನ ಕರ್ಮಭೂಮಿ ಹೀಗಾಗಿ ಜನ ಕೈ ಹಿಡಿದಿದ್ದಾರೆ.ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.

  • ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    – ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾಗೆ ಗೆಲುವು

    ಉಡುಪಿ: ಇನ್ನು ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಆರು ತಿಂಗಳು ಅವಧಿ ಇದೆ. ಹಿಂದಿ ಮಾತನಾಡೋದನ್ನು ಕಲಿಯಲು ಇವತ್ತಿನಿಂದಲೇ ಶುರು ಮಾಡುತ್ತೇನೆ ಎಂದರು.

    ಬಿಜೆಪಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟದ್ದೇ ಆಶ್ಚರ್ಯ. ಎರಡು ಜಿಲ್ಲೆಯ ನಾಯಕರ ಅವಿಶ್ರಾಂತ ದುಡಿಮೆ ಈ ಗೆಲುವಿಗೆ ಕಾರಣ. ಇದು ಕಾರ್ಯಕರ್ತರ ಗೆಲುವು ಎಂದು ಭಾವಿಸಿದ್ದೇನೆ. ಪಕ್ಷ ಮತ್ತು ಎನ್‍ಡಿಎ ಒಕ್ಕೂಟಕ್ಕೆ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

    ಪಂಚಾಯತ್ ನಿಂದ ಪಾರ್ಲಿಮೆಂಟ್‍ವರೆಗೆ ಎಂಬ ಘೋಷಣೆ ಇಂದು ಸಾಬೀತಾಯಿತು. ನಾವು 1 ಲಕ್ಷ ಸುಮಾರು ಅಂತರದ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರ್ಯಕರ್ತರು ನಾಯಕರ ಪರಿಶ್ರಮ ನನ್ನ ಮೇಲಿನ ಪ್ರೀತಿ ಈ ಸಂಖ್ಯೆಗೆ ಕಾರಣ. ನರೇಂದ್ರ ಮೋದಿ ಅವರಿಂದ ಭಾರತಕ್ಕೆ ಗೌರವ ಎಂಬುದು ಸತ್ಯ. ರಾಷ್ಟ್ರೀಯ ಭದ್ರತೆ, ರಾಮಮಂದಿರ -370, ಇಂತಹ ಬಹುದೊಡ್ಡ ಸವಾಲುಗಳಿಂದ ನಾವು ಗೆದ್ದಿದ್ದೇವೆ ಎಂದು ತಿಳಿಸಿದರು.

    ಬಡವರ ಮನೆಗೆ ಒಂದು ಲಕ್ಷ ಎಂದು ಇಂಡಿಯಾ ಕೂಟ ಹೇಳಿತ್ತು. ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರ ಮಾಡುವುದರಲ್ಲಿ ಸಂಶಯ ಇಲ್ಲ. ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಇನ್ನು ಮುಂದೆ ಆರು ತಿಂಗಳು ಅವಧಿ ಇದೆ ಎಂದು ನುಡಿದರು.

    ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಹೊಸ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದ್ದರು. ಇದೀ ಕೋಟಾ ಅವರು ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

    ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ: ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 731408 ಮತಗಳು ಬಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 4,72,505 ಮತಗಳು ಬಿದ್ದಿವೆ. ಈ ಮೂಲಕ 2,58,903 ಮತಗಳ ಅಂತರದಿಂದ ಕೋಟಾ ಅವರಿಗೆ ಪಾರ್ಲಿಮೆಂಟ್‌ ಪ್ರವೇಶ ಮಾಡುವ ಅವಕಾಶ ದಕ್ಕಿದೆ.

  • ದಕ್ಷಿಣ ಕನ್ನಡದ ‘ಕ್ಯಾಪ್ಟನ್’ ಚೌಟ

    ದಕ್ಷಿಣ ಕನ್ನಡದ ‘ಕ್ಯಾಪ್ಟನ್’ ಚೌಟ

    ಮಂಗಳೂರು: ಬಿಜೆಪಿ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ (Brijesh Chowta) ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ.

    ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ (Padmaraj R. Poojary) ವಿರುದ್ಧ ಸುಮಾರು 1 ಲಕ್ಷ 37 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯದ ಮಾಲೆಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಚೌಟ ಅವರು ಮೊದಲ ಪ್ರಯತ್ನದಲ್ಲಿಯೇ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಲೋಕಸಭಾ ಚುನಾವಣೆಗೆ (Loksabha Elections 2024) ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈ ಬಾರಿ ಹೊಸ ಮುಖಗಳನ್ನೇ ಅಖಾಡಕ್ಕೆ ಇಳಿಸಿದ್ದವು. ಹೀಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪದ್ಮರಾಜ್ ಪೂಜಾರಿ ಹೆಸರು ಕೇಳಿ ಬರುತ್ತಿದ್ದಂತೆಯೇ ಭಾರೀ ಪೈಪೋಟಿ ಇರುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಚೌಟ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪೂಜಾರಿಯವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಗೆ ಗೆಲುವು- ಉತ್ತರ ಕನ್ನಡದಲ್ಲಿ ಸಂಭ್ರಮಾಚರಣೆ

    ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಮಿಥುನ್ ರೈ (Mithun Rai) ಹಾಗೂ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಣಕ್ಕಿಳಿದಿದ್ದರು. ಈ ವೇಳೆ ಕಟೀಲ್ ಅವರು ಮಿಥುನ್ ರೈ ವಿರುದ್ಧ 2,74,621 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ 57.55 %ರಷ್ಟು ಮತಗಳನ್ನು ಪಡೆದಿತ್ತು.

    ದಕ್ಷಿಣ ಕನ್ನಡದಲ್ಲಿ 1951 ರಿಂದ 2019 ರವರೆಗೆ ಒಟ್ಟು 16 ಚುನಾವಣೆಗಳು ನಡೆದಿದೆ. ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 9 ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ.

  • ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್‌ (BJP- JDS) ಮೈತ್ರಿ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿ ಬಹುತೇಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

    ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಗೆಲುವು ಬಹುತೇಕ ಖಚಿತವಾಗಿದೆ. ಮತಎಣಿಕೆ ಆರಂಭವಾದಿಗಿನಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.

    ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಎನ್‌ಡಿಎ ಅಭ್ಯರ್ಥಿ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು ನಡುವೆ ಇಲ್ಲಿ ಫೈಟ್‌ ಇತ್ತು. ಇದೀಗ ಸ್ಟಾರ್ ಚಂದ್ರು ವಿರುದ್ಧ ಹೆಚ್‌ಡಿಕೆ ಗೆಲುವು ಸಾಧಿಸಿದರೂ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಆಗಬೇಕಷ್ಟೇ.

    ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದರು. ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‌ ಕಣಕ್ಕಿಳಿದು ನಿಖಿಲ್‌ ವಿರುದ್ಧ ಭರ್ಜರಿ ಜಯಗಳಿಸಿದ್ದರು. ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗ್ತಿತ್ತು. ಈ ನಡುವೆ ಸುಮಲತಾ ಅಂಬರೀಶ್‌ ಕೂಡ ಬಿಜೆಪಿಯಿಂದ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಕೊನೆಗೆ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರೇ ಸ್ವತಃ ಕಣಕ್ಕಿಳಿದಿದ್ರು.

    ವಿಜಯೋತ್ಸವಕ್ಕೆ ಬ್ರೇಕ್: ವಿಜಯೋತ್ಸವ, ಸಂಭ್ರಮಾಚರಣೆ, ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಮಂಡ್ಯ ಜಿಲ್ಲಾಡಳಿತ ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ ಮಂಡ್ಯ ನಗರ ವ್ಯಾಪ್ತಿಯಲ್ಲಿ ಜೂನ್ 3ರ ಸಂಜೆ 6 ಗಂಟೆಯಿಂದ 5 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

  • ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

    ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

    ಚಿಕ್ಕಬಳ್ಳಾಪುರ: ಲೊಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಈ ನಡುವೆ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ರಾಜೀನಾಮೆಗೆ ಒತ್ತಾಯ ಕೇಳಿ ಬರುತ್ತಿದೆ.

    ಸದ್ಯ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ (K sudhakar) ಅವರು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಅವರಿಂದ ಸುಮಾರು 7,2180 ಅಂತರಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

    ಈ ಹಿಂದೆ ಕೆ ಸುಧಾಕರ್‌ ವಿರುದ್ಧ ಸವಾಲೆಸೆದಿದ್ದ ಪ್ರದೀಪ್‌ ಈಶ್ವರ್‌, ಒಂದು ವೋಟ್‌ ಲೀಡ್‌ ಬಂದರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಇದೀಗ ಸುಧಾಕರ್‌ ಅವರು ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಇಂದೇ ಪ್ರದೀಪ್‌ ಈಶ್ವರ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ.

  • ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಮುನ್ನಡೆ

    ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಮುನ್ನಡೆ

    ಹಾಸನ: ಲೋಸಕಭಾ ಚುನಾವಣೆಯ ಮತೆಣಿಕೆ ನಡೆಯುತ್ತಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಮುನ್ನಡೆ ಸಾಧಿಸಿದ್ದಾರೆ.

    ಹಾಲಿ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ಅವರಿಗಿಂತ 5,201 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರು 1.4 ಲಕ್ಷಕ್ಕೂ ಹೆಚ್ಚು ಅಂತರದಿಂದ ಕ್ಷೇತ್ರವನ್ನು ಗೆದ್ದಿದ್ದರು.

    ಹಾಸನ ಲೋಕಸಭಾ ಕ್ಷೇತ್ರದಲ್ಲಿ 15 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖವಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ.

    ಮತ ಎಣಿಕೆಗಾಗಿ 500 ಸಿಬ್ಬಂದಿ, ಭದ್ರತೆಗಾಗಿ 400 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರತಿ ಟೇಬಲ್‌ನಲ್ಲಿ ಕೌಂಟಿಂಗ್ ಅಸಿಸ್ಟೆಂಟ್, ಕೌಂಟಿಂಗ್ ಸುಪರ್ವೈಸರ್ ಸೇರಿ ಒಟ್ಟು ನಾಲ್ಕು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,36,610 ಮತದಾರರಿದ್ದಾರೆ.

    13,48,966 ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾನ 77.68% ಮತದಾನವಾಗಿತ್ತು. ಇದೀಗ ಹಾಸನದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕ್ಷೇತ್ರದ ಜನರಲ್ಲಿ ಭಾರೀ ಕುತೂಹಲ ಮೂಡಿದೆ.