Tag: election commissioner

  • ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ: ಯತೀಂದ್ರ ಸಿದ್ದರಾಮಯ್ಯ

    ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಉತ್ತರಾಧಿಕಾರಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

    ವೋಟ್ ಚೋರಿ (Vote Choroi) ಸಹಿ ಸಂಗ್ರಹ ಸಭೆಯಲ್ಲಿ ಮತಗಳ್ಳತನ ವಿರುದ್ಧ ಮಾತನಾಡುವಾಗ ಕೇಂದ್ರ ಚುನಾವಣಾ ಆಯುಕ್ತರನ್ನು (Chief Election Commissioner of India) ರಾಜಕೀಯ ಪುಢಾರಿ ಎಂದು ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.  ಇದನ್ನೂ ಓದಿ:  ಧಾರವಾಡ ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ: ಸಿದ್ದರಾಮಯ್ಯ

     

    ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಡೆದ ವೋಟ್ ಚೋರಿ ಸಹಿ ಸಂಗ್ರಹ ಸಭೆಯಲ್ಲಿ ಈ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯುಕ್ತ ಒಬ್ಬ ರಾಜಕೀಯ ಪುಢಾರಿ. ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಬಿಹಾರ, ಪಶ್ಚಿಮ ಬಂಗಾಳ ಮತದಾರರ ಪಟ್ಟಿಯಲ್ಲಿ ಹೆಸರು – ಚುನಾವಣಾ ಆಯೋಗದಿಂದ ಪ್ರಶಾಂತ್ ಕಿಶೋರ್‌ಗೆ ನೋಟಿಸ್

    ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ (Rahul Gandhi) ಸಾಕ್ಷಿ ಸಮೇತ ದೂರು ಕೊಟ್ಟಿದ್ದಾರೆ. ಆದರೆ ದೂರು ಕೊಟ್ಟವರ ಮೇಲೆಯೇ ಚುನಾವಣಾ ಆಯುಕ್ತರು ಮಾತನಾಡುತ್ತಿದ್ದಾರೆ. ಆರೋಪ ಮಾಡಿರುವವರ ಮೇಲೆಯೇ ದಾಳಿ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಗ್ಗೆ ಟೀಕಿಸಿದ್ದಾರೆ.

  • ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

    ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

    ನವದೆಹಲಿ: ಚುನಾವಣಾ ಆಯೋಗ (Election Commission) ಕೇಂದ್ರದ ಹಿಡಿತದಲ್ಲಿದೆ. ಆಯುಕ್ತರ ನೇಮಕಾತಿ ಸರಿಯಿಲ್ಲ ಎಂದು ನಿನ್ನೆಯಷ್ಟೇ ಸುಪ್ರೀಂಕೋರ್ಟ್ (Supreme Court) ಚಾಟಿ ಬೀಸಿತ್ತು. ಇದ್ರ ಮುಂದುವರಿದ ಭಾಗವಾಗಿ ಇಂದು ಕೂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ನೇಮಕಾತಿ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿ, ಕೇಂದ್ರದ ಧೋರಣೆ ಬಗ್ಗೆ ಅಸಹನೆ ವ್ಯಕ್ತಪಡಿಸಿದೆ.

    ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ ಎಂದು ಪ್ರಶ್ನಿಸಿದೆ. ಅರುಣ್ ಗೋಯೆಲ್ ವಿಆರ್‌ಎಸ್‌ ಪಡೆದು 24 ಗಂಟೆ ಕಳೆಯುವುದಕ್ಕೆ ಮೊದಲೇ ತರಾತುರಿಯಲ್ಲಿ ಅರುಣ್ ಗೋಯೆಲ್ ನೇಮಕವನ್ನು ಹೇಗೆ ಪೂರ್ಣಗೊಳಿಸಲಾಯ್ತು ಎಂದು ಸಾಂವಿಧಾನಿಕ ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ. ಚುನಾವಣಾ ಮುಖ್ಯ ಆಯುಕ್ತರು, ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆಯನ್ನು ಏರ್ಪಾಟು ಮಾಡುವಂತೆ ದಾಖಲಾದ ಅರ್ಜಿಗಳ ವಿಚಾರಣೆ ವೇಳೆ, ಗೋಯೆಲ್ ನೇಮಕ ಸಂಬಂಧ ಕೇಂದ್ರ ಸಲ್ಲಿಸಿದ ವರದಿ ಪರಿಶೀಲಿಸಿ ಹಲವು ಪ್ರಶ್ನೆ ಎತ್ತಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್‌ ಕೊಲೆ ಪ್ರಕರಣ ಲವ್‌ ಜಿಹಾದ್‌ ಅಲ್ಲ – ಅಸಾದುದ್ದೀನ್‌ ಓವೈಸಿ

    ಈ ಸಂದರ್ಭದಲ್ಲಿ, ನೀವು ಸ್ವಲ್ಪ ಸುಮ್ಮನಿರ್ತೀರಾ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಹೇಳಿದ ಘಟನೆಯೂ ನಡೆದಿದೆ. ನಾಲ್ಕು ದಿನಗಳ ಸುಧೀರ್ಘ ವಿಚಾರಣೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

    ಸುಪ್ರೀಂ ಪೀಠದ ಪ್ರಶ್ನೆಗಳ ಸುರಿಮಳೆ:
    ಆಯುಕ್ತರ ಹುದ್ದೆ ಮೇ 15ರಿಂದ ಖಾಲಿ ಇದೆ. ಇಲ್ಲಿ ಅರ್ಜಿವಾದ ಶುರುವಾದ ಕೂಡಲೇ ನೇಮಕಾತಿ ನಡೆದಿದೆ. ಇದ್ಯಾವ ರೀತಿಯ ನೇಮಕ? ನಾವು ಗೋಯೆಲ್ ಸಾಮರ್ಥ್ಯ ಪ್ರಶ್ನಿಸ್ತಿಲ್ಲ. ಅರುಣ್ ಗೋಯೆಲ್ ನೇಮಕಾತಿಯ ಪ್ರಕ್ರಿಯೆ ಪ್ರಶ್ನಿಸುತ್ತಿದ್ದೇವೆ. ಗೋಯೆಲ್ ಕಡತವನ್ನು ಮಿಂಚಿನ ವೇಗದಲ್ಲಿ ಕ್ಲಿಯರ್ ಮಾಡಿದ್ದೇಗೆ? ಅರುಣ್ ಗೋಯೆಲ್ ಫೈಲ್ ಬಂದ ದಿನವೇ ನೇಮಕಾತಿ ಹೇಗೆ ಆಯ್ತು? ಇ.ಸಿ ಹುದ್ದೆಗಾಗಿ ನಾಲ್ವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಈ ಕಡತವನ್ನು ಕಾನೂನು ಇಲಾಖೆ ನ.18 ರಂದು ಪಿಎಂಓಗೆ ಕಳಿಸಿತ್ತು. ಅದೇ ದಿನ ಪ್ರಧಾನಮಂತ್ರಿಗಳು ಒಂದು ಹೆಸರನ್ನು ಪ್ರತಿಪಾದಿಸಿದರು. ನಾಲ್ವರಲ್ಲಿ ಕಿರಿಯರಾದ ಗೋಯೆಲ್ ಹೆಸರನ್ನು ಯಾವ ಆಧಾರದ ಮೇಲೆ ಫೈನಲ್ ಮಾಡಿದ್ದೀರಿ. ಗೋಯೆಲ್ ಸಾಮರ್ಥ್ಯವನ್ನು ಯಾವ ರೀತಿ ಮೌಲ್ಯಮಾಪನ ಮಾಡಿದ್ದೀರಿ. ಇದಕ್ಕೆ ಅನುಸರಿಸಿದ ಪದ್ದತಿ ಏನು ಎಂದು ಚಾಟಿ ಬೀಸಿತು. ಇದನ್ನೂ ಓದಿ: ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ಅಟಾರ್ನಿ ಜನರಲ್ ವಾದ ಏನು?
    ದಯವಿಟ್ಟು ನೀವು ಕೆಲ ಕಾಲ ಸುಮ್ಮನಿರಿ. ಚುನಾವಣಾ ಆಯುಕ್ತರ ನೇಮಕದಲ್ಲಿ ತಪ್ಪು ನಡೆದಿಲ್ಲ. ಈ ಹಿಂದೆಯೂ 12 ರಿಂದ 24 ಗಂಟೆಯಲ್ಲಿ ನೇಮಕಾತಿ ಆಗಿದೆ. ಕಾನೂನು ಇಲಾಖೆ ಪ್ರತಿಪಾದಿಸಿದ 4 ಹೆಸರುಗಳನ್ನು ಡಿಓಪಿಟಿ ಡೇಟಾ ಬೇಸ್‍ನಿಂದಲೇ ತೆಗೆದುಕೊಳ್ಳಲಾಗಿದೆ. ಈ ವಿವರಗಳೆಲ್ಲಾ ಬಹಿರಂಗವಾಗಿ ಎಲ್ಲರಿಗೂ ಲಭ್ಯ ಆಗುವಂತಿವೆ. ನೇಮಕ ವೇಳೆ ಸೀನಿಯಾರಿಟಿ, ನಿವೃತ್ತಿ ವಯಸ್ಸು ಪರಿಗಣಿಸಲಾಗುತ್ತದೆ. ವಯಸ್ಸಿಗೆ ಬದಲಾಗಿ ಬ್ಯಾಚ್ ಆಧಾರವಾಗಿ ಸೀನಿಯಾರಿಟಿ ಪರಿಗಣಿಸಲಾಗಿದೆ. ಸಣ್ಣ ಸಣ್ಣ ವಿಚಾರಗಳನ್ನು ಕೂಡ ಸುಪ್ರೀಂ ಗಮನಿಸುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ನೇಮಕಾತಿ ವಿಚಾರದಲ್ಲಿ ಎಲ್ಲಾ ಅಂಶಗಳನ್ನು ಸುಪ್ರೀಂ ಪರಿಶೀಲಿಸಬೇಕು ಎಂದು ವಾದ ಮಂಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಗರಿಗೆದರಿದ್ದು, ಇಂದು ದಾಖಲೆಗಳಿಲ್ಲದ 8.50 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

    ಇಂದು ಎರಡು ಕಡೆ ವಾಹನ ತಪಾಸಣೆ ಮಾಡುತ್ತಿದ್ದ ಚುನಾವಣಾಧಿಕಾರಿಗಳಿಗೆ, ಬಾಗೇಪಲ್ಲಿ ಟೋಲ್ ಗೇಟ್ ಬಳಿ 5 ಲಕ್ಷ ರೂ. ಮತ್ತು ನಂದಿ ಚೆಕ್ ಪೋಸ್ಟ್ ಬಳಿ 3.50 ಲಕ್ಷ ರೂ. ದಾಖಲೆಯಿಲ್ಲದ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೀರೆ ವಶ: ಇಂದು ಬೆಳಗ್ಗೆ ಮೈಸೂರಿನಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ 30 ಸಾವಿರ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್ ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

    ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಲೆಕ್ಷನ್ ಮುಂದೂಡಿಕೆಗೆ ಮಾಡಲು ಯತ್ನಿಸಿದ್ದ ಬಿಜೆಪಿಗೆ ಸರ್ಕಾರಿ ಅಧಿಕಾರಿ ಸವಾಲೆಸೆದಿದ್ದು, ಸಿಎಂ ಮಾತಿಗೂ ಕೇರ್ ಮಾಡದ ನಿಷ್ಠಾವಂತ ಐಎಎಸ್ ಅಧಿಕಾರಿ ಹರ್ಷಾಗುಪ್ತಾ ನಾಳೆಯೇ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ.

    ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ಪ್ಲಾನ್ ಮಾಡಿದ್ದ ಬಿಜೆಪಿಗೆ ಅಧಿಕಾರಿಯ ಈ ನಿರ್ಧಾರ ಬಹುದೊಡ್ಡ ಶಾಕ್ ಲಭಿಸಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಆಗಲ್ಲ. ಶಾಸನ ಬದ್ಧವಾಗಿ ಲಭಿಸಿರುವ ಅಧಿಕಾರ ಬಳಿಸಿಕೊಂಡು ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಈಗಾಗಲೇ ನಿಗದಿಪಡಿಸಿದಂತೆ ಅಕ್ಟೋಬರ್ 1 ರಂದು ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತಾ 7 ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಮೇಯರ್ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಚುನಾವಣೆ ನಡೆಸುವುದು ಬಹುತೇಕ ಖಚಿತವಾಗಿದೆ ಎಂದು ಪತ್ರದಲ್ಲಿ ಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.

    ನಗರಾಭಿವೃದ್ಧಿ ಇಲಾಖೆಗೆ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವಂತೆ, ಕೆಎಂಸಿ ಕಾಯ್ದೆ 10(1), 11(2), (ಬಿ) ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ಕಾನೂನಿನ ಪ್ರಕಾರವೇ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ. ಮೇಯರ್ ಅವಧಿ ಸೆಪ್ಟೆಂಬರ್ 27 ಕ್ಕೆ ಮುಗಿದಿರುವುದರಿಂದ ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾಗಿ ನನ್ನ ಕರ್ತವ್ಯ ಎಂದು ಹರ್ಷಗುಪ್ತ ತಿಳಿಸಿದ್ದಾರೆ.

    ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ 8-30 ರಿಂದ ನಡೆಯಲಿದ್ದು, 11-30 ಕ್ಕೆ ಚುನಾವಣೆ ನಡೆಯಲಿದೆ.

    ಕೆಎಂಸಿ ಕಾಯ್ದೆ ಪ್ರಕಾರವೇ ತಿರುಗೇಟು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ಪ್ರಾದೇಶಿಕ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಇಂದು ಅಧಿಕೃತವಾಗಿ ಸೂಚನೆ ರವಾನೆಯಾಗಿತ್ತು. ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ವಿಜಯ್‍ಕುಮಾರ್ ಅವರು ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ಮುಂದೂಡುವಂತೆ ಬಿಬಿಎಂಪಿ ಕಾಯ್ದೆ ನಿಯಮಗಳನ್ನು ಉಲ್ಲೇಖಿಸಿ ಚುನಾವಣೆ ಮುಂದೂಡಲು ಸೂಚಿಸಲಾಗಿತ್ತು. ಆದರೆ ಈ ಇದೇ ಕೆಎಂಸಿ ಕಾಯ್ದೆ ನಿಯಮಗಳನ್ನು ಮುಂದಿಟ್ಟಿರುವ ಗುಪ್ತಾ ಅವರು, ಕೆಎಂಸಿ ಕಾಯ್ದೆಯ 10(1) , 11(2)ಬಿ ಪ್ರಕಾರ ಚುನಾವಣೆ ನಡೆಸಲು ಅವಕಾಶವಿದೆ. 1976 ಪ್ರಕಾರ 71 ರಲ್ಲಿ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡುವ ಅಧಿಕಾರ ಪ್ರಾದೇಶಿಕ ಆಯುಕ್ತರಾಗಿದೆ. ಹೈಕೋರ್ಟ್ 8 ಸ್ಥಾಯಿ ಸಮಿತಿಗೆ ಮಾತ್ರ ಚುನಾವಣೆ ತಡೆಯಾಜ್ಞೆ ನೀಡಿದ್ದು, ಕಾನೂನಿನಲ್ಲಿ ಚುನಾವಣೆ ಮುಂದೂಡಲು ಅವಕಾಶವಿಲ್ಲದಿರುವುದರಿಂದ ಚುನಾವಣೆ ನಡೆಸಬೇಕಿದೆ. ಪ್ರಾದೇಶಿಕ ಆಯುಕ್ತ ಶಾಸನಬದ್ಧ ಕರ್ತವ್ಯ. ಇದರ ಅನ್ವಯ ಚುನಾವಣೆ ದಿನಾಂಕ ಮುಂದೂಡಲು ಅವಕಾಶವಿಲ್ಲ ಎಂದು ಗೌರವ ಪೂರ್ವಕವಾಗಿ ಗುಪ್ತಾ ಅವರು ಮಾಹಿತಿ ಪತ್ರವನ್ನು ರವಾನೆ ಮಾಡಿದ್ದಾರೆ.

  • ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್‍ಸಿಂಹಗೆ ಎಫ್‍ಐಆರ್ ಶಾಕ್!

    ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್‍ಸಿಂಹಗೆ ಎಫ್‍ಐಆರ್ ಶಾಕ್!

    ಮೈಸೂರು: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಿಂಹ ವಿರುದ್ಧ ದೂರು ದಾಖಲಾಗಿದೆ.

    ಪ್ರತಾಪ್ ಸಿಂಹ ಅವರು ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ ಲೆಟ್‍ಗಳನ್ನ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‍ಓಯು) ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯರಾದ ಕೆ ಎಸ್.ಶಿವರಾಮ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಈ ದೂರನ್ನು ಪರಿಶೀಲನೆ ನಡೆಸಿದ ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ದೂರು ನೀಡಿದ್ದು, ಮಾರ್ಚ್ 23 ರಂದು ಎಫ್‍ಐಆರ್ ದಾಖಲು ಮಾಡಲಾಗಿದೆ.

    ಬುಕ್ ಲೆಟ್ ಗಳಲ್ಲಿ ಪ್ರಚಾರಕರ ಹಾಗೂ ಮುದ್ರಕರ ವಿವರ ನೀಡದೇ ಇರುವುದು ಹಾಗೂ ಬುಕ್ ಲೆಟ್ ಗಳ ಮುದ್ರಣ ಸಂಖ್ಯೆ ಲೆಕ್ಕ ಸಿಗದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

    ಇತ್ತ ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರತಾಪ್ ಸಿಮಹ ಅವರು ಟೆಂಪಲ್ ರನ್ ಮಾಡುತ್ತಿದ್ದು, ಚಾಮುಂಡಿ ದೇವಿಯ ದರ್ಶನ ಪಡೆದ್ರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹುಲಿಗಳಿಗೆ ಪ್ರಸಿದ್ಧಿಯಾಗಿದೆ. ಚಾಮುಂಡೇಶ್ವರಿ ಕುಳಿತಿರೋದು ಸಿಂಹದ ಮೇಲೆ. ಆದರೆ ಚಾಮುಂಡೇಶ್ವರಿ ತನ್ನ ವಾಹನವನ್ನ ಕೈಬಿಡೋದಿಲ್ಲ ಎಂಬ ನಂಬಿಕೆ ಇದೆ. ಮೈಸೂರಿಗೆ ಮೋದಿ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದ್ರೆ ಮೈಸೂರು ಪ್ರವಾಸ ಖಚಿತವಾಗಿದೆ. ಇಂದು ಸಂಜೆ ವೇಳೆಗೆ ಮೈಸೂರು ಪ್ರವಾಸದ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ಎಂದು ಹೇಳಿದ್ರು.

  • ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣ- ಮತಗಟ್ಟೆ ಅಧಿಕಾರಿ ಅರೆಸ್ಟ್

    ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣ- ಮತಗಟ್ಟೆ ಅಧಿಕಾರಿ ಅರೆಸ್ಟ್

    ವಿಜಯಪುರ: ಜಿಲ್ಲೆಯ ಉಕ್ಜಲಿಯಲ್ಲಿ ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಉಕ್ಕಲಿ ಗ್ರಾಮದಲ್ಲಿ ಮೇ 27ರಂದು ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ಈ ಸಂಬಂಧ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ವಿವಿ ಪ್ಯಾಟ್ ಬಾಕ್ಸ್ ಬಳಿಕ ಪತ್ತೆ ಆಯ್ತು ವಿವಿ ಪ್ಯಾಟ್ ರಶೀದಿ

    ದೂರಿನಲ್ಲಿ ಸ್ಥಳೀಯ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ತಿಳಿಸಿದ್ದರು. ಉಕ್ಕಲಿ ಗ್ರಾಮದ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಸಂಖ್ಯೆ 12ಕ್ಕೆ ಸಂಬಂಧಿಸಿದ ರಶೀದಿಯನ್ನು ವಶಕ್ಕೆ ಪಡೆದು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ನಂತರ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಬಂಧಿಸಿ ಶುಕ್ರವಾರ ತಡರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸ್‍ಪಿ ಪ್ರಕಾಶ ನಿಕ್ಕಂ ಪಬ್ಲಿಕ್ ಟಿವಿಗೆ ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ಏನಿದು ಪ್ರಕರಣ?:
    ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಖಾಲಿ ವಿವಿ ಪ್ಯಾಟ್ ಬಾಕ್ಸ್ ಪತ್ತೆಯಾದ ಪ್ರಕರಣ ಮಾಸುವ ಮುನ್ನವೇ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮತದಾನದ ಮಾಹಿತಿ ಗುಪ್ತವಾಗಿಡುವ ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ರಾಜಕೀಯ ಪಕ್ಷ ವೊಂದಕ್ಕೆ ಮತದಾನ ಮಾಡಿದ ಸಾಕ್ಷಿಯಾಗಿ ಈ ರಶೀದಿಯನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮತದಾನದ ಬಳಿಕ ವಿವಿ ಪ್ಯಾಟ್ ರಶೀದಿ ಹೊಂದಿರುವ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರಪಡಿಸಲಾಗಿರುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿವಿ ಪ್ಯಾಟ್ ರಶೀದಿ ಫೋಟೋ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬಸವನ ಬಾಗೇವಾಡಿಯ ಗ್ರಾಮದಲ್ಲಿ ಸಿಕ್ಕಿದ್ದು ವಿವಿಪ್ಯಾಟ್ ಖಾಲಿ ಬಾಕ್ಸ್!

  • ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಮಂಡ್ಯ: ಮತದಾರರಿಗೆ ಹಂಚುತ್ತಿದ್ದ ಕೋಳಿಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲಗೇಜ್ ಆಟೋದಲ್ಲಿ ಕೋಳಿ ತಂದು ಮನೆ ಮನೆಗೆ ಹಂಚಲಾಗುತ್ತಿತ್ತು. ಇದನ್ನು ತಿಳಿದು ಸ್ಥಳೀಯರಲ್ಲೇ ಒಬ್ಬರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಲಗೇಜ್ ಆಟೋ ಸಹಿತ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ವಶ

    ಅಷ್ಟೇ ಅಲ್ಲದೆ ಈಗಾಗಲೇ ಕೋಳಿಗಳನ್ನು ಪಡೆದಿದ್ದವರಿಂದಲೂ ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಕೋಳಿ ಹಂಚಲು ಹೇಳಿದ್ದು ಯಾರು.? ಯಾವ ಪಕ್ಷದ ಅಭ್ಯರ್ಥಿ ಕೋಳಿ ಹಂಚಲು ಸೂಚಿಸಿದ್ದು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

  • ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿರುವಾಗಲೇ ಕಾಗೋಡು, ಪದ್ಮಾವತಿಗೆ ಬಿಗ್ ಶಾಕ್

    ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿರುವಾಗಲೇ ಕಾಗೋಡು, ಪದ್ಮಾವತಿಗೆ ಬಿಗ್ ಶಾಕ್

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮಂಗಳವಾರವಷ್ಟೇ ಅಭ್ಯರ್ಥಿಗಳೆಲ್ಲಾ ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಗ್ ಶಾಕ್ ಆಗಿದೆ.

    ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳ ನಾಮಪತ್ರ ರದ್ದಾಗುವ ಸಾಧ್ಯತೆ ಇದೆ. ಸಾಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಗೋಡು ತಿಮ್ಮಪ್ಪ ನಾಮಪತ್ರದಲ್ಲಿ ಪತ್ನಿ ಮತ್ತು ಅವಲಂಬಿತರ ಮಾಹಿತಿ, ಚಿನ್ನಾಭರಣ ವಿವರ, ಶೈಕ್ಷಣಿಕ ವಿವರವನ್ನೂ ಸಮರ್ಪಕವಾಗಿ ನಮೂದಿಸಿಲ್ಲ ಹೀಗಾಗಿ ನಾಮಪತ್ರ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

    ಬೆಂಗಳೂರಿನ ರಾಜಾಜಿನಗರದ ಅಭ್ಯರ್ಥಿ ಪದ್ಮಾವತಿಯವರು ಮತ್ತು ಅವರ ಪುತ್ರ ಬ್ಯಾಂಕ್ ಸಾಲ ಪಡೆದು ವಂಚನೆ ಪ್ರಕರಣ ಇರುವುದರಿಂದ ನಾಮಪತ್ರ ಪರಿಶೀಲನೆಗೆ ಚುನಾವಣಾ ಆಯೋಗ ತಡೆ ಹಿಡಿದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ಶಾಸಕ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಾಮಪತ್ರ ಅಸಿಂಧು ಮಾಡಲಾಗಿದೆ.

  • ಎಟಿಎಂ ಸೇರಬೇಕಿದ್ದ 2 ಕೋಟಿ 19ಲಕ್ಷ ರೂ. ಸೀಜ್ – ಬೆಂಗ್ಳೂರಿನ ಚೆಕ್‍ಪೋಸ್ಟ್ ನಲ್ಲಿ ಜಪ್ತಿ

    ಎಟಿಎಂ ಸೇರಬೇಕಿದ್ದ 2 ಕೋಟಿ 19ಲಕ್ಷ ರೂ. ಸೀಜ್ – ಬೆಂಗ್ಳೂರಿನ ಚೆಕ್‍ಪೋಸ್ಟ್ ನಲ್ಲಿ ಜಪ್ತಿ

    ಬೆಂಗಳೂರು: ಎಟಿಎಂಗೆ ತುಂಬಿಸಲು ಸಾಗಿಸ್ತಿದ್ದ 2 ಕೋಟಿ 19 ಲಕ್ಷ ರೂಪಾಯಿಯನ್ನು ಬೆಂಗಳೂರಿನ ಹಲಸೂರು ಕೆರೆಯ ಬಳಿ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.

    ವೈಟ್‍ಫೀಲ್ಡ್‍ನಲ್ಲಿ ಹೆಚ್‍ಡಿಎಫ್‍ಸಿ ಮತ್ತು ಐಸಿಐಸಿಐ ಬ್ಯಾಂಕ್‍ನ ಎಟಿಎಂಗಳಿಗೆ ತುಂಬಿಸಬೇಕಿತ್ತು. ರೈಟರ್ಸ್ ಸೇಫ್ ಗಾರ್ಡ್ಸ್ ಅನ್ನೋ ಸಂಸ್ಥೆಗೆ ಸೇರಿದ ಎಟಿಎಂ ಸಾಗಿಸ್ತಿದ್ದ ವಾಹನದ ದಾಖಲಾತಿಗೂ ಸಾಗಿಸ್ತಿದ್ದವರ ಬಳಿಯಿದ್ದ ದಾಖಲಾತಿಗೂ ವ್ಯತ್ಯಾಸ ಕಂಡುಬಂದಿದೆ. ಇದನ್ನೂ ಓದಿ: ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಸ್ಥಳಕ್ಕೆ ಬಂದ ಮ್ಯಾನೇಜರ್ ಮಧುಸೂದನ್ ನೀಡಿದ ದಾಖಲೆಯಿಂದ ಐಟಿ ಅಧಿಕಾರಿಗಳು ಸಮಾಧಾನಗೊಳ್ಳಲಿಲ್ಲ. ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ರು. 24 ಎಟಿಎಂಗಳಿಗೆ ಬೇಕಾದಷ್ಟು ದುಡ್ಡು ಐಟಿ ವಶದಲ್ಲಿದೆ. ಇದನ್ನೂ ಓದಿ: ಅರ್ಧ ಕೋಟಿಗಿಂತಲೂ ಅಧಿಕ ನಗದು ಹಣ, 200 ಗ್ರಾಂ ಬಂಗಾರ ವಶ

    ಕರ್ನಾಟಕ ಎಲೆಕ್ಷನ್‍ನಲ್ಲಿ ಇಲ್ಲಿಯವರೆಗೆ 4 ಕೋಟಿ 13 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 4 ಕೋಟಿ 3 ಲಕ್ಷ ರೂಪಾಯಿಯಷ್ಟು 2 ಸಾವಿರ ಮತ್ತು ಐನೂರು ರೂಪಾಯಿ ನೋಟೇ ಇದೆ ಅಂತ ಆದಾಯ ತೆರಿಗೆ ಇಲಾಖೆ ಹೇಳಿದೆ. ಎಟಿಎಂಗಳಲ್ಲಿ ಹಣ ಸಿಕ್ತಿಲ್ಲ ಅನ್ನೋವಾಗ ಇಷ್ಟೊಂದು ನೋಟು ಸಿಕ್ಕಿರೋದೇ ಸೋಜಿಗ. ಬೆಂಗಳೂರಲ್ಲಿ 2.47 ಕೋಟಿ ಮತ್ತು ಬಳ್ಳಾರಿಯಲ್ಲಿ 55 ಲಕ್ಷ ರೂಪಾಯಿ ನಗದು ಜಪ್ತಿ ಆಗಿದೆ. ರಾಜ್ಯಾದ್ಯಂತ 1.32 ಕೋಟಿ ರೂಪಾಯಿ ಮೌಲ್ಯದ 4.32 ಕೆ.ಜಿಯಷ್ಟು ಬಂಗಾರ ವಶವಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

  • ಕುಂದಾಪುರದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ

    ಕುಂದಾಪುರದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ

    ಉಡುಪಿ: ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳ ಮೇಲೆ ಜಿಲ್ಲೆಯ ಕುಂದಾಪುರದಲ್ಲಿ ಹಲ್ಲೆಯತ್ನ ನಡೆದಿದೆ. ಕುಂದಾಪುರದ ಸಹನಾ ರೆಸ್ಟೋರೆಂಟ್ ಮೇಲೆ ದಾಳಿ ಮಾಡಲು ತೆರಳಿದ್ದ ಕುಂದಾಪುರ ಸಹಾಯಕ ಕಮಿಷನರ್ ಮತ್ತು ಐಎಎಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.

    ಸಹನಾ ಹೋಟೆಲ್ ಮತ್ತು ಲಾಡ್ಜ್ ನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಕುಂದಾಪುರ ಸಹಾಯಕ ಕಮಿಷನರ್ ಭೂಬಾಲನ್ ಮತ್ತು ಐಎಎಸ್ ಅಧಿಕಾರಿ ಪೂವಿತಾ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.

    ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಸೋಮವಾರ ರಾತ್ರಿ ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಸಹನಾ ಹೋಟೆಲ್ ಆಂಡ್ ಲಾಡ್ಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಸಹನಾ ಹೋಟೆಲಿನಲ್ಲಿ ಹೊರಗಿನವರಿಗೆ ಮದ್ಯ ಸರಬರಾಜಿಗೆ ಅವಕಾಶ ಇಲ್ಲದೆ ಹೋದರೂ ಅನಧಿಕೃತವಾಗಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಹೋಟೆಲಿನವರೊಂದಿಗೆ ಪ್ರಶ್ನೆ ಮಾಡಿದ್ದಾರೆ.

    ಈ ವೇಳೆ ಹೋಟೆಲಿನವರು ಮತ್ತು ಅಲ್ಲಿದ್ದ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಕೂಡಲೇ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದು ಶೋಧ ಕಾರ್ಯ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ. ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಹಾಯಕ ಕಮೀಷನರ್ ಅವರಿಗೆ ಗನ್ ಮ್ಯಾನ್ ನೀಡಿದ್ದು, ಇದರಿಂದ ನಡೆಯಬಹುದಾದ ಹಲ್ಲೆ ತಪ್ಪಿದೆ.

    ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಹೋಟೆಲಿನವರ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.