Tag: Election Commission of India

  • ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Assembly Election) ಸಿದ್ಧತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ (Election Commission of India) ಇಂದು ಪರಿಶೀಲನಾ ಸಭೆ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ನೇತೃತ್ವದಲ್ಲಿ ಪಾಟ್ನಾಗೆ ತೆರಳಿರುವ ನಿಯೋಗ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸಿದೆ.

    ಪಾಟ್ನಾದ (Patna) ತಾಜ್ ಹೋಟೆಲ್‌ನಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅಧ್ಯಕ್ಷತೆ ಹಾಗೂ ಚುನಾವಣಾ ಆಯುಕ್ತ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಉಪಸ್ಥಿತಿಯಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಇಸಿಐ ಅಧಿಕಾರಿಗಳು, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಗುಂಜ್ಯಾಲ್ ಹಾಗೂ ರಾಜ್ಯದ ಎಲ್ಲಾ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಬಿಹಾರ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವಂತೆ ಜೆಡಿಯು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಥವಾ ನಕ್ಸಲ್ ಸಮಸ್ಯೆಗಳಿಲ್ಲ ಹೀಗಾಗಿ ಒಂದೇ ಹಂತದಲ್ಲಿ ಮತದಾನ ನಡೆಯಬೇಕು. ಛತ್ ಪೂಜಾ ಸಮಯದಲ್ಲಿ ಅನೇಕ ಜನರು ಮನೆಗೆ ಮರಳುತ್ತಾರೆ. ಆದ್ದರಿಂದ ಆ ಸಮಯದಲ್ಲಿ ಚುನಾವಣೆಯನ್ನು ನಡೆಸಬೇಕು ಎಂದು ಮನವಿ ಮಾಡಿದೆ.

    ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಎಲ್ಲಾ ಪಕ್ಷಗಳು ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯೋಗ ಆಯುಕ್ತರು ಸಭೆಯಲ್ಲಿ ಹೇಳಿದರು. ಚುನಾವಣೆಯನ್ನು ಸಾಮರಸ್ಯದಿಂದ ನಡೆಸುವ ಜೊತೆಗೆ ಮತದಾರರನ್ನೂ ಗೌರವಿಸಬೇಕು ಎಂದು ಆಯೋಗ ತಿಳಿಸಿದೆ.

    ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಪ್ರತಿ ಮತಗಟ್ಟೆಯಲ್ಲಿ ಏಜೆಂಟ್‌ಗಳನ್ನು ನೇಮಿಸುವಂತೆ ಪಕ್ಷಗಳಿಗೆ ಸೂಚಿಸಲಾಯಿತು. ಇದೀಗ ಚುನಾವಣಾ ಆಯೋಗವು ಅಕ್ಟೋಬರ್ 6 ಅಥವಾ 7 ರಂದು ಚುನಾವಣಾ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

  • ಕೇಂದ್ರ ಚುನಾವಣಾ ಆಯೋಗದಿಂದ ಬಿಜೆಪಿ ಏಜೆಂಟ್ ರೀತಿ ವರ್ತನೆ: ಈಶ್ವರ್ ಖಂಡ್ರೆ ಕಿಡಿ

    ಕೇಂದ್ರ ಚುನಾವಣಾ ಆಯೋಗದಿಂದ ಬಿಜೆಪಿ ಏಜೆಂಟ್ ರೀತಿ ವರ್ತನೆ: ಈಶ್ವರ್ ಖಂಡ್ರೆ ಕಿಡಿ

    ಬೆಂಗಳೂರು: ಚುನಾವಣಾ ಆಯೋಗ (Election Commission of India) ಬಿಜೆಪಿ (BJP) ಏಜೆಂಟ್ ತರ ವರ್ತನೆ ಮಾಡುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್‌ (Congress) ನಾಯಕ ರಾಹುಲ್ ಗಾಂಧಿಯವರ (Rahul Gandhi)  ವೋಟ್ ಚೋರಿ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಅಳಂತದಲ್ಲಿ ಮತದಾರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಅವರು ಖಚಿತ ಪಡಿಸಿಕೊಂಡು ಈ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್‌ ಗಾಂಧಿ ಬಾಂಬ್‌

    ರಾಹುಲ್ ಗಾಂಧಿಯವರ ಜೊತೆ ಇಡೀ ದೇಶ ಇದೆ. ನಮ್ಮ ಮತ ನಮ್ಮ ಹಕ್ಕು ಹೋರಾಟ ಮಾಡ್ತೀವಿ. ಹಿಂಬಾಗಿಲಿನಿಂದ ಬಂದಿರೋ ಈ ಸರ್ಕಾರವನ್ನು ಕಿತ್ತು ಹಾಕುವವರೆಗೂ ನಾವು ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಲಿ: ಶಿವರಾಜ್ ತಂಗಡಗಿ

  • ಬಡವರು, ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ – ಮತದಾರರ ಪರಿಷ್ಕರಣೆಗೆ ಖರ್ಗೆ ಆಕ್ಷೇಪ

    ಬಡವರು, ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ – ಮತದಾರರ ಪರಿಷ್ಕರಣೆಗೆ ಖರ್ಗೆ ಆಕ್ಷೇಪ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗ (Election Commission Of India) ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದವರನ್ನು ಚುನಾವಣಾ ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದಾರೆ.

    ದೆಹಲಿಯಲ್ಲಿ ವಾರ್ಷಿಕ ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಕೆಲವು ಕ್ರಮಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮತದಾನದ ಹಕ್ಕನ್ನು ನಿರಾಕರಿಸುವಂತಿವೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಕೆಲವು ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ. ಇದು ಜನಾಂಗೀಯ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ಭೂಕುಸಿತ – ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌, ಪುತ್ರ ಸಾವು

    ಮತದಾರರ ಪಟ್ಟಿಯ ನೋಂದಣಿ ಮತ್ತು ತಿದ್ದುಪಡಿ ಪ್ರಕ್ರಿಯೆಯಲ್ಲಿ ತಾರತಮ್ಯದ ನೀತಿಗಳನ್ನು ಅನುಸರಿಸಲಾಗುತ್ತಿದೆ, ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಕೊರತೆ ಇದೆ ಎಂದು ದೂರಿರುವ ಅವರು, ಈ ಕ್ರಮಗಳಿಂದ ದೇಶದ ಚುನಾವಣಾ ವ್ಯವಸ್ಥೆ ಮೇಲಿನ ನಂಬಿಕೆ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

    ಸಂವಿಧಾನ ಒಂದು ಪುಸ್ತಕ ಅಲ್ಲ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ, ಎಲ್ಲರಿಗೂ ಅಧಿಕಾರ ನೀಡುವ ಶಕ್ತಿ ಹೊಂದಿದೆ. ಆದರೆ ಸಂವಿಧಾನ ಈಗ ಅಪಾಯದಲ್ಲಿದೆ. ಅಧಿಕಾರದಲ್ಲಿರುವ ನಾಯಕರು ಸಂವಿಧಾನ ಬದಲಿಸುವ ಉದ್ದೇಶ ಹೊಂದಿದ್ದಾರೆ. ಸಮಾಜವಾದ, ಜಾತ್ಯತೀತವಾದ ಪದ ಪೀಠಿಕೆಯಿಂದ ಬದಲಿಸುವ ಉದ್ದೇಶ ಬಿಜೆಪಿ, ಆರ್‌ಎಸ್‌ಎಸ್ ಹೊಂದಿದೆ. ಆದರೆ ಅವರಿಗೆ ದೇಶದ ಜನರು ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ಇದರ ಕ್ರೆಡಿಟ್ ರಾಹುಲ್ ಗಾಂಧಿ (Rahul Gandhi) ಅವರಿಗೆ ನೀಡಬೇಕು ಎಂದರು. ಇದನ್ನೂ ಓದಿ: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ – ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

    ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತವಾದ ಪದ ತೆಗೆಯಲು ಹೊರಟವರು ಅವರ ಪಕ್ಷದ ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತವಾದ ಪದ ಬಳಸಿದ್ದಾರೆ. ಸಮಾಜವಾದ, ಜಾತ್ಯತೀತವಾದ ಪದ ತೆಗೆಯಲು ಅವರಿಗೆ ಸಾಧ್ಯವಿಲ್ಲ. ಎಲ್ಲವನ್ನೂ ನಿಯಂತ್ರಣ ಮಾಡಲು ಪ್ರಯತ್ನಿಸುವುದು ಸರ್ವಾಧಿಕಾರದ ಪ್ರವೃತ್ತಿ. ಕೆಲ ನ್ಯಾಯಧೀಶರು ಒಂದು ಧರ್ಮದ ಬಗ್ಗೆ ಮಾತನಾಡುತ್ತಾರೆ. ಅಂಥವರು ಆರ್‌ಎಸ್‌ಎಸ್ ನ್ಯಾಯಾಧೀಶರು, ದೇಶದ ಪ್ರಧಾನಿ ಸದಾ ದೇಶದ ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನ ಪಾಲನೆಗೆ ಅವರನ್ನು ಆಯ್ಕೆ ಮಾಡಿದರೆ, ಅವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ, ಕರ್ನಾಟಕದ ಬೆಂಗಳೂರು ಸೆಂಟ್ರಲ್‌ನಲ್ಲಿ ಮತದಾರರು ಹೇಗೆ ಬದಲಾದರು ಇದು ಚುನಾವಣಾ ಆಯೋಗವಾ ಅಥಾವ ಮೋದಿ ಸರ್ಕಾರದ ಗಿಣಿಯೇ? ಬಿಹಾರದಲ್ಲಿ 65% ಮತದಾರರನ್ನು ತೆಗೆದು ಹಾಕಲಾಗಿದೆ. ಇದನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಹಾರ ಚುನಾವಣಾ ಕರಡು ಪಟ್ಟಿಯಲ್ಲಿ ನನ್ನ ಹೆಸರಿಲ್ಲ, ಚುನಾವಣೆಗೆ ಸ್ಪರ್ಧಿಸೋದು ಹೇಗೆ..?: ತೇಜಸ್ವಿ ಯಾದವ್ ಆರೋಪ

    ಪ್ರಧಾನಿ ಮೋದಿ ಸಂಸತ್‌ಗೆ ಬಂದು ಕಲಾಪವನ್ನು ಟಿವಿಯಲ್ಲಿ ನೋಡುತ್ತಾರೆ, ಅವರಿಗೇನು ಭಯ? ನೇರ ಬಂದು ಕಲಾಪದಲ್ಲಿ ಭಾಗಿಯಾಗಬಹುದಲ್ವ? ಅವರು ನಮ್ಮ ನಾಯಕರು ತಲೆ ಬಾಗಬಾರದು. ಡೊನಾಲ್ಡ್ ಟ್ರಂಪ್ ಮುಂದೆಯೂ ತಲೆ ಬಾಗಬಾರದು. ನಮ್ಮ ಸಂಖ್ಯೆ ಸಂಸತ್‌ನಲ್ಲಿ ಕಡಿಮೆ ಇದೆ ಎಂದು ನಮ್ಮನ್ನು ಹೆದರಿಸುತ್ತಿದ್ದಾರೆ, ಆದರೆ ಟ್ರಂಪ್ ಮುಂದೆ ತಲೆ ಬಗ್ಗಿಸುತ್ತಿದ್ದಾರೆ. ದೇಶದ ಘನತೆ ಹಾಳುಗೆಡವುತ್ತಿದ್ದಾರೆ. ಶ್ರಾವಣ ಇರುವ ಕಾರಣ ಮೋದಿ ಮೌನ ವೃತದಲ್ಲಿರಬೇಕು, ಅದಕ್ಕೆ ಅವರು ಮಾತನಾಡುತ್ತಿಲ್ಲ, ಬಹುಶಃ ಸಂಸತ್ ಅಧಿವೇಶನ ಅಂತ್ಯವಾಗುವವರೆಗೂ ಮೌನ ವೃತದಲ್ಲಿರುತ್ತಾರೆ. ದೇವರಿಂದ ಬಂದವರಲ್ವ ಅದಕ್ಕೆ ಮೌನ ವೃತ ಎಂದು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದರು. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ

    ಮಾಜಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಬಗ್ಗೆ ಪ್ರಸ್ತಾಪಿಸಿದ ಅವರು, ಸದನದಲ್ಲಿ ಪ್ರತಿಪಕ್ಷಗಳ ಮಾತನಾಡುವ ಹಕ್ಕನ್ನು ಹತ್ತಿಕ್ಕುತ್ತಿದ್ದರು. ಆದರೆ ಅವರು ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದಾಗ ಮತ್ತು ಅವರು ಒಂದು ಕಾಲದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರದೊಂದಿಗೆ ವಿವಿಧ ವಿಷಯಗಳ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿದಾಗ ಸ್ವತಃ ಕೊಡಲಿ ಪೆಟ್ಟು ಬೀಳುವ ಶಿಕ್ಷೆಯನ್ನು ಎದುರಿಸಿದರು ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಅಂಗಾಂಗ ಸಾಗಾಟ – ತುರ್ತು ಕಸಿಗಾಗಿ ಯಕೃತ್ ಸಾಗಣೆ

    ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ನಿರ್ಣಯವನ್ನು ಹಿಂಪಡೆಯಲು ವಿರೋಧ ಪಕ್ಷದ ಸದಸ್ಯರು ಮಾಜಿ ರಾಜ್ಯಸಭೆಯ ಅಧ್ಯಕ್ಷರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಒತ್ತಡ ಹೇರಿದ್ದಾರೆ ಎಂದು ಖರ್ಗೆ ಆರೋಪಿಸಿದರು. ಅವರಿಗೆ ನಿರ್ಣಯವನ್ನು ಹಿಂತೆಗೆದುಕೊಳ್ಳಿ ಅಥವಾ ರಾಜೀನಾಮೆ ನೀಡಿ ಎಂದು ಬೆದರಿಕೆ ಹಾಕಲಾಯಿತು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆ.5ರ ಪ್ರತಿಭಟನೆಗೆ ಮಂಡ್ಯದಿಂದ 5 ಸಾವಿರ ಜನ: ಚಲುವರಾಯಸ್ವಾಮಿ

  • ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ನಾರೋಗ್ಯದ ಕಾರಣ ಕೊಟ್ಟು ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ಜಗದೀಪ್‌ ಧನಕರ್‌ (Jagdeep Dhankhar) ರಾಜೀನಾಮೆ ಕೊಟ್ಟಿದ್ದಾರೆ. ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಬಳಿಕ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.‌ ಸಂಸತ್ತಿನ ಮೊದಲ ದಿನದ ಅಧಿವೇಶದ ಮೊದಲ ದಿನದ ಕಲಾಪವನ್ನು ನಡೆಸಿ, ಜಗದೀಪ್ ಧನಕರ್ ರಾಜೀನಾಮೆಯನ್ನು ನೀಡಿದ್ದರು. ಇವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆಂಗೀಕರಿಸಿದ್ದಾರೆ. ಹಾಗಾಗಿ, ಮುಂದಿನ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಕೇಂದ್ರ ಚುನಾವಣಾ ಆಯೋಗ (Election Commission Of India) ಹೇಳಿದೆ. ಹಾಗಿದ್ರೆ ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಅರ್ಹತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಜಗದೀಪ್‌ ಧನಕರ್‌ ರಾಜೀನಾಮೆ ನೀಡಿದ್ದು ಯಾಕೆ?
    ಆರೋಗ್ಯದ ಕಾರಣವನ್ನು ನೀಡಿ 74 ವರ್ಷದ ಜಗದೀಪ್ ಧನಕರ್ ಪದತ್ಯಾಗ ಮಾಡಿದ್ದಾರೆ. ಮೊದಲ ದಿನದ ಕಲಾಪವನ್ನು ಸುಮಾರು 65 ನಿಮಿಷ ನಡೆಸಿಕೊಟ್ಟು, ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭವನ್ನು ಕೋರಿ, ಐದು ನೂತನ ಸಂಸದರಿಗೆ ಪ್ರಮಾಣವಚನವನ್ನು ಜಗದೀಪ್ ಧನಕರ್ ಬೋಧಿಸಿದ್ದರು. ಆದರೆ, ಅದೇ ದಿನ ರಾಜೀನಾಮೆಯನ್ನು ನೀಡಿ ಎಲ್ಲರಿಗೂ ಶಾಕ್ ನೀಡಿದ್ದರು.

    ಜನತಾ ದಳದ ಅಭ್ಯರ್ಥಿಯಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಸಿದ ಧನಕರ್‌ ಆ ಬಳಿಕ ಕಾಂಗ್ರೆಸ್‌ ಸೇರಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬಿಜೆಪಿ ನಾಯಕತ್ವದ ಗಮನ ಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಸಲಹೆಗಳಿಂದ ಈ ತಕ್ಷಣದಿಂದ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ. ಜಗದೀಪ್ ಧನಕರ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಆಗಾಗ್ಗೆ ಘರ್ಷಣೆಗಳು ನಡೆದವು. ಹಲವು ಬಾರಿ ಅವರು ಸುದ್ದಿಗೆ ಗ್ರಾಸವಾಗಿದ್ದರು.

    ರಾಷ್ಟ್ರಪತಿಯ ಹುದ್ದೆ ತೆರವಾದಾಗ ಅಥವಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿ ಗರಿಷ್ಠ 6 ತಿಂಗಳ ಕಾಲ
    ಉಪರಾಷ್ಟ್ರಪತಿಯು ಕಾರ್ಯನಿರ್ವಹಿಸುತ್ತಾರೆ. ಈ ಮೂಲಕ ಆಡಳಿತ ವ್ಯವಸ್ಥೆ ನಿರಾತಂಕವಾಗಿರುವಂತೆ ಖಾತರಿಪಡಿಸುತ್ತಾರೆ. ಉಪರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿಯಾಗಿ, ಚರ್ಚೆಗಳನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ಶಿಷ್ಟಾಚಾರಗಳನ್ನು ಖಾತರಿಪಡಿಸುತ್ತಾರೆ. ರಾಜಕೀಯ ಪಕ್ಷಪಾತವಿಲ್ಲದೆ ಉನ್ನತ ಸದನವನ್ನು ನಿರ್ದೇಶಿಸುವ ಮೂಲಕ, ಸಾಂವಿಧಾನಿಕ ಪ್ರಜಾಪ್ರಭುತ್ವದ ನೈತಿಕತೆಯನ್ನು ಬಲಪಡಿಸುತ್ತಾರೆ.

    ಉಪರಾಷ್ಟ್ರಪತಿ ಚುನಾವಣೆ ಯಾವಾಗ?
    ಹಾಲಿ ಉಪರಾಷ್ಟ್ರಪತಿ 5 ವರ್ಷ ತಮ್ಮ ಅಧಿಕಾರಾವಧಿ ಪೂರ್ಣ ಗೊಳಿಸಿದಾಗ, ಇಲ್ಲವೇ ರಾಜೀನಾಮೆ ನೀಡಿದಾಗ ಚುನಾವಣೆ ನಡೆಯುತ್ತದೆ. ಜೊತೆಗೆ ಈ ಹುದ್ದೆಯಲ್ಲಿರುವವರು ಮರಣ ಹೊಂದಿದರೆ, ಸಂಸದೀಯ ಪ್ರಕ್ರಿಯೆಯ ಮೂಲಕ ಪದಚ್ಯುತಗೊಂಡರೆ ಇಲ್ಲವೇ ಚುನಾವಣೆ ವೇಳೆ ಅನರ್ಹತೆ ಸಾಬೀತಾದಾಗ ಉಪರಾಷ್ಟ್ರಪತಿ ಚುನಾವಣೆಯನ್ನು ನಡೆಸಲಾಗುತ್ತದೆ.

    ಆಯೋಗವು ಅಧಿಸೂಚನೆ ಹೊರಡಿಸಿದ ನಂತರ ನಾಪತ್ರ ಸಲ್ಲಿಕೆ, ಅಧಿಸೂಚನೆ, ಹಿಂಪಡೆಯುವಿಕೆ ಮತದಾನ ಹಾಗೂ ಎಣಿಕೆ ಪ್ರಕ್ರಿಯೆ 30 ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು.

    ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ?
    ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು.

    ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕ ರಿಗೆ ಮತದಾನದ ಅವಕಾಶವಿಲ್ಲ. ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ಯಕ್ಕೆ 1, 2ನೇ ಪ್ರಾಶಸ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ. ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.

    ಮುಂದಿನ ಚುನಾವಣೆ ಯಾವಾಗ?
    ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿ ಹುದ್ದೆ ಖಾಲಿಯಾದ 60 ದಿನಗಳ ಒಳಗೆ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ. ಚುನಾವಣಾ ಆಯೋಗವು ಶೀಘ್ರದಲ್ಲೇ ಉಪ ರಾಷ್ಟ್ರಪತಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸುತ್ತದೆ. ಉಪಾಧ್ಯಕ್ಷರನ್ನು ಲೋಕಸಭೆ ಮತ್ತು ರಾಜ್ಯಸಭಾ ಸಂಸದರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, 543 ಲೋಕಸಭಾ ಸಂಸದರು ಮತ್ತು 245 ರಾಜ್ಯಸಭಾ ಸಂಸದರು (ನಾಮನಿರ್ದೇಶಿತ ಸದಸ್ಯರು ಸೇರಿದಂತೆ) ಸೇರಿದಂತೆ ಒಟ್ಟು 788 ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಈ ಚುನಾವಣೆಯನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುತ್ತದೆ.

    ಲೋಕಸಭೆಯಲ್ಲಿ ಎನ್‌ಡಿಎ ಒಕ್ಕೂಟವೂ 542ರ ಪೈಕಿ 293 ಸದಸ್ಯರ ಬೆಂಬಲ ಹೊಂದಿದ್ದು, ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲ ಹೊಂದಿದೆ. ಆಡಳಿತರೂಢ ಒಕ್ಕೂಟವೂ ಒಟ್ಟು 422 ಸದಸ್ಯರ ಬೆಂಬಲ ಹೊಂದಿದೆ.

    ಅರ್ಹತೆಗಳೇನು?
    *ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ಭಾರತದ ನಾಗರಿಕನಾಗಿರಬೇಕು.
    *ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.
    *ರಾಜ್ಯಸಭೆಯ ಸದಸ್ಯನಾಗಿ ಚುನಾಯಿತಗೊಳ್ಳಲು ಅರ್ಹತೆಯನ್ನು ಹೊಂದಿರಬೇಕು.
    *ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸ್ಥಳೀಯ ಪ್ರಾಧಿಕಾರಗಳು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
    *1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳ ಅಡಿಯಲ್ಲಿ, ಅಭ್ಯರ್ಥಿಯ ನಾಮನಿರ್ದೇಶನವನ್ನು ಚುನಾವಣಾ ಕಾಲೇಜಿನಿಂದ ಕನಿಷ್ಠ 20 ಪ್ರಸ್ತಾವಕರು ಮತ್ತು 20 ಸಮರ್ಥಕರು ಬೆಂಬಲಿಸಬೇಕು,
    *15,000 ರೂ. ಭದ್ರತಾ ಠೇವಣಿಯನ್ನು ಇಡಬೇಕು.

    ಬಿಜೆಪಿ ನೇತೃತ್ವದ ಎನ್​ಡಿಎ ಲೋಕಸಭೆಯಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ( 542 ಸದಸ್ಯರು) ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲವನ್ನು ಹೊಂದಿದೆ. ಇನ್ನು ನಾಮನಿರ್ದೇಶಿತ ಸದಸ್ಯರುಗಳನ್ನು ಸೇರಿಸಿದರೆ, ಆಡಳಿತ ಒಕ್ಕೂಟವು 786 ಸದಸ್ಯರಲ್ಲಿ 422 ಸದಸ್ಯರ ಬೆಂಬಲವನ್ನು ಹೊಂದಿದೆ.

    ಸಂಭಾವ್ಯ ಅಭ್ಯರ್ಥಿ ಯಾರು?
    ಜನತಾದಳ-ಸಂಯುಕ್ತ ಸಂಸದರಾಗಿರುವ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ. ಅವರು 2020 ರಿಂದ ಈ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದು,ಸರ್ಕಾರದ ವಿಶ್ವಾಸವನ್ನು ಹೊಂದಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಕೂಡ ಮುಂದಿನ ಉಪ ರಾಷ್ಟ್ರಪತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಅವರು ಮೋದಿ ಮತ್ತು ಅಮಿತ್ ಶಾ ಅವರ ಸಮೀಪದಲ್ಲಿದ್ದು, ಬಿಜೆಪಿ ಅಧ್ಯಕ್ಷತ್ವ ಅವಧಿ ಮುಕ್ತಾಯವಾಗುತ್ತಿರುವುದರಿಂದ ನಡ್ಡಾ ಅವರಿಗೆ ಈ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪರಾಷ್ಟ್ರಪತಿ ಚುನಾವಣೆ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಅವರಿಗೂ ಈ ಹುದ್ದೆಗೇರುವ ಅವಕಾಶವಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.

    ಉಪರಾಷ್ಟ್ರಪತಿ ಹುದ್ದೆಯ ಇತಿಹಾಸ:
    1950ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದಾಗ ಉಪರಾಷ್ಟ್ರಪತಿ ಹುದ್ದೆಯನ್ನು ಸೃಜಿಸಲಾಯಿತು. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿ 1952ರಲ್ಲಿ ಆಯ್ಕೆಯಾದರು. ಒಟ್ಟಾರೆಯಾಗಿ, ಭಾರತವು ಇದುವರೆಗೆ 14 ಉಪರಾಷ್ಟ್ರಪತಿಗಳನ್ನು ಕಂಡಿದೆ.

  • ಕೇಂದ್ರ ಚುನಾವಣಾ ಆಯೋಗಕ್ಕೆ ಬಿಗ್ ರಿಲೀಫ್ – ಬಿಹಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ತಡೆಗೆ ‘ಸುಪ್ರೀಂ’ ನಕಾರ

    ಕೇಂದ್ರ ಚುನಾವಣಾ ಆಯೋಗಕ್ಕೆ ಬಿಗ್ ರಿಲೀಫ್ – ಬಿಹಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ತಡೆಗೆ ‘ಸುಪ್ರೀಂ’ ನಕಾರ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಹಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ತಡೆಗೆ ಸುಪ್ರೀಂ ಕೋರ್ಟ್‌ (Supreme Court) ನಕಾರ ವ್ಯಕ್ತಪಡಿಸಿದೆ.

    ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಪರಿಷ್ಕರಣೆಯನ್ನು ಪ್ರಾರಂಭಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಈ ಕ್ರಮವು ಪ್ರಜಾಪ್ರಭುತ್ವದ ಮೂಲ ಮತ್ತು ಮತದಾನದ ಅಧಿಕಾರಕ್ಕೆ ಹೋಗುತ್ತದೆ ಎಂದು ತಿಳಿಸಿತು. ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಎಸ್‌ಐಆರ್‌ನ ಸಮಯ ಮತ್ತು ವಿಧಾನವನ್ನು ಪ್ರಶ್ನಿಸುವ ಅರ್ಜಿಗಳ ಗುಂಪನ್ನು ಪರಿಶೀಲಿಸಲು ನ್ಯಾಯಾಲಯ ಒಪ್ಪಿಕೊಂಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 28 ಕ್ಕೆ ನಿಗದಿಪಡಿಸಲಾಗಿದೆ. ಚುನಾವಣಾ ಆಯೋಗಕ್ಕೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಜುಲೈ 21 ರವರೆಗೆ ಸಮಯ ನೀಡಲಾಗಿದೆ. ಇನ್ನೂ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲಾಗಿಲ್ಲ.

    ಗುರುವಾರ ಸುಪ್ರೀಂ ಕೋರ್ಟ್, ಬಿಹಾರದಲ್ಲಿ ಭಾರತೀಯ ಚುನಾವಣಾ ಆಯೋಗದ (ECI) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೂಕ್ತ ದಾಖಲೆ ಎಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ನವೀಕರಣದ ಟೈಮಿಂಗ್ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ, ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಅನುಮಾನಗಳಿಲ್ಲ: 1 ವಾರದಲ್ಲಿ ಉತ್ತರಿಸುವಂತೆ ನೋಟಿಸ್ ವಿಚಾರಣೆ ಜು.28ಕ್ಕೆ ಕೋರ್ಟ್‌ ಮುಂದೂಡಿದೆ. ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಕೊಳ್ತೀನಿ: ಅಮಿತ್ ಶಾ‌

    ಬಿಹಾರದಲ್ಲಿ ಮತದಾರರ ಪಟ್ಟಿಯ SIR ಅಡಿಯಲ್ಲಿ ಪೌರತ್ವವನ್ನು ಪರಿಶೀಲಿಸಬೇಕಾದರೆ, ನೀವು ಬೇಗನೆ ಕ್ರಮ ಕೈಗೊಳ್ಳಬೇಕಿತ್ತು. ಇದು ಸ್ವಲ್ಪ ತಡವಾಗಿದೆ. ಚುನಾವಣೆಗಳಿಗೆ ಬಹಳ ಹತ್ತಿರದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದರಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳು ಉಂಟಾಗಬಹುದು ಎಂದು ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಧುಲಿಯಾ ತಿಳಿಸಿದ್ದಾರೆ.

    ಚುನಾವಣಾ ಆಯೋಗಕ್ಕೆ ಅಂತಹ ಪರಿಷ್ಕರಣೆ ನಡೆಸುವ ಅಧಿಕಾರವಿಲ್ಲ ಎಂಬ ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕ ಸಮಾಜದ ಗುಂಪುಗಳು ಸೇರಿದಂತೆ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.

  • ಚಿಕ್ಕಮಗಳೂರು | 2021ರ ಪರಿಷತ್ ಚುನಾವಣೆ – ಫೆ.28ಕ್ಕೆ ಮರು ಮತ ಎಣಿಕೆ

    ಚಿಕ್ಕಮಗಳೂರು | 2021ರ ಪರಿಷತ್ ಚುನಾವಣೆ – ಫೆ.28ಕ್ಕೆ ಮರು ಮತ ಎಣಿಕೆ

    ಚಿಕ್ಕಮಗಳೂರು: 2021ರಲ್ಲಿ ವಿಧಾನ ಪರಿಷತ್‍ಗೆ ನಡೆದಿದ್ದ ಚುನಾವಣೆಯ (Parishad Elections) ಮರು ಮತ ಎಣಿಕೆಯನ್ನು (Vote Recou) ಕೋರ್ಟ್‌ ಆದೇಶದಂತೆ ಫೆ.28ರಂದು ನಡೆಯಲಿದೆ. ಮರು ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

    ಈಗಾಗಲೇ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಮರು ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗದಿಂದ (Election Commission of India) ವೀಕ್ಷಕರ ನೇಮಕ ಮಾಡಲಾಗಿದೆ. ಮರು ಮತ ಎಣಿಕೆಯ ವೀಕ್ಷಕರಾಗಿ ಉಜ್ವಲ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮರು ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ (Court) ಸಲ್ಲಿಸಲಾಗುತ್ತದೆ. ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಓರ್ವ ಏಜೆಂಟ್‍ಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಉಪಸಭಾಪತಿ ಪ್ರಾಣೇಶ್, ಕಾಂಗ್ರೆಸ್ಸಿನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. 6 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದರು. ನಾಮನಿರ್ದೇಶಿತ 12 ಮತಗಳ ಎಣಿಕೆ ಮಾಡಬಾರದೆಂದು ಪರಾಜಿತ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಾಮನಿರ್ದೇಶಿತರ ಮತಗಳನ್ನ ಬಿಟ್ಟು ಎಣಿಕೆ ಮಾಡುವಂತೆ ಸೂಚಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ.

    ನಗರದ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಶುಕ್ರವಾರ ಮರು ಮತ ಎಣಿಕೆ ಕಾರ್ಯ ನಡೆಯಲಿದೆ.

  • Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ

    Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi Assembly Election) ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ (Election Commission Of India) ಈ ವಾರ ಪೂರ್ವಸಿದ್ಧತಾ ಸಭೆಗೆ ಕರೆ ನೀಡಿದೆ. ಈ ಸಭೆಯ ಬಳಿಕ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಈಗಾಗಲೇ ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ (AAP) ಎಲ್ಲಾ 70 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಜೊತೆಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ.ಇದನ್ನೂ ಓದಿ: ಪ್ಯಾಲೆಸ್ತೀನ್ ಬಳಿಕ ಬಾಂಗ್ಲಾ ಅಲ್ಪಸಂಖ್ಯಾತರ ಪರ ಪ್ರಿಯಾಂಕಾ ಧ್ವನಿ

    ಇನ್ನೂ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಯು ಈ ತಿಂಗಳ ಕೊನೆಯ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಹೊಂದಿರುವ ಸಾಧ್ಯತೆಯಿದೆ ಹಾಗೂ ಬಿಜೆಪಿ ದಿವಂಗತ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ಅವರನ್ನು ಕಣಕ್ಕಿಳಿಸಬಹುದು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

    ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮಾತನಾಡಿ, ಈಗಾಗಲೇ ಪಕ್ಷವು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಎಲ್ಲಾ 70 ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರಿಂದ 2,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮುಂದುವರಿದ ಹಂತದಲ್ಲಿದ್ದು, ಪ್ರತಿ ಕ್ಷೇತ್ರದಲ್ಲಿ ಮೂರು ಸಂಭಾವ್ಯರನ್ನು ಈಗಾಗಲೇ ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ಹೇಳಿದರು.

    ಫೆಬ್ರವರಿಯಲ್ಲಿ ನಡೆಯಲಿರುವ 70 ಸದಸ್ಯರ ದೆಹಲಿ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ಬೃಹತ್ ಪ್ರಚಾರವನ್ನು ಆರಂಭಿಸಿದ್ದು, ಆಡಳಿತಾರೂಢ ಎಎಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ನಗರಗಳಲ್ಲಿ ನೆಲೆಯೂರಲು ಸಿದ್ಧತೆಯನ್ನು ನಡೆಸಿದೆ.

    ಬಿಜೆಪಿಯು 1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿದ್ದು, 2015 ರಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಹೊಂದಿರುವ ಆಡಳಿತಾರೂಢ ಎಎಪಿಯನ್ನು ತಳ್ಳಿಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಎಎಪಿ 2015 ಮತ್ತು 2020ರಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.ಇದನ್ನೂ ಓದಿ: ಫಾಲೋ ಆನ್‌ನಿಂದ ಭಾರತ ಬಚಾವ್‌ – ಕೊನೆಯ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಉಳಿಸಿತು ಮಾನ!

  • ಉತ್ತರ ಪ್ರದೇಶ, ಕೇರಳ, ಪಂಜಾಬ್ ಉಪಚುನಾವಣೆ ದಿನಾಂಕ ಬದಲು – ನ.20ರಂದು ಮತದಾನ

    ಉತ್ತರ ಪ್ರದೇಶ, ಕೇರಳ, ಪಂಜಾಬ್ ಉಪಚುನಾವಣೆ ದಿನಾಂಕ ಬದಲು – ನ.20ರಂದು ಮತದಾನ

    ನವದೆಹಲಿ: ಹಲವಾರು ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಭಾರತದ ಚುನಾವಣಾ ಆಯೋಗವು (Election Commission of India) ಕೇರಳ (Kerala), ಪಂಜಾಬ್ (Punjab) ಮತ್ತು ಉತ್ತರ ಪ್ರದೇಶದ (Uttar Pradesh) 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Bypolls) ಮತದಾನದ ದಿನಾಂಕವನ್ನು ಬದಲಾಯಿಸಿದೆ.

    ಈ ಹಿಂದೆ ನ.13 ರಂದು ಚುನಾವಣೆ ಘೋಷಿಸಲಾಗಿತ್ತು. ಈಗ ನ.20ಕ್ಕೆ ಚುನಾವಣೆ ಮುಂದೂಡಿಕೆಯಾಗಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    ಕಲ್ಪಾಠಿ ರಥೋತ್ಸವ (ನವೆಂಬರ್ 13-15), ಕಾರ್ತಿಕ ಪೂರ್ಣಿಮಾ (ನವೆಂಬರ್ 15) ಮತ್ತು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ (ನವೆಂಬರ್ 15) ದಂತಹ ಹಬ್ಬಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷಗಳು ಮತದಾನದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿದ್ದವು. ಅಲ್ಲದೇ ಈ ಹಬ್ಬಗಳು ಈ ರಾಜ್ಯಗಳಲ್ಲಿನ ಮತದಾರರ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷಗಳು ಹೇಳಿದ್ದವು. ಇದರಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಸಮಿತಿಯ ಮೂಲಗಳು ತಿಳಿಸಿವೆ.

    ಈ ಉಪಚುನಾವಣೆಯಲ್ಲಿ ಉತ್ತರ ಪ್ರದೇಶದ 9, ಪಂಜಾಬ್‌ನಲ್ಲಿ 4 ಮತ್ತು ಕೇರಳದ 1 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇದನ್ನೂ ಓದಿ: Uttarakhand | ಕಮರಿಗೆ ಉರುಳಿದ ಬಸ್‌, ಸಾವಿನ ಸಂಖ್ಯೆ 36ಕ್ಕೆ ಏರಿಕೆ, 19 ಮಂದಿಗೆ ಗಾಯ

  • ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ನವದೆಹಲಿ: ಕೇರಳದ ಕಾಸರಗೋಡಿನಲ್ಲಿ (Kasaragodu) ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ (BJP) ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (Electronic Voting Machines) ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ಆದೇಶಿಸಿದೆ.

    ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ ನಂತರ ನ್ಯಾ.ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಇವಿಎಂ ಸಮಸ್ಯೆಯನ್ನು ಪರಿಶೀಲಿಸುವಂತೆ ಇಸಿಐಗೆ ಸೂಚಿಸಿತು. ಇದನ್ನೂ ಓದಿ: ಬೆಂಗ್ಳೂರು ಕುದುರೆಗಳಿಗೆ ಗ್ಲಾಂಡರ್ಸ್‌ ರೋಗ ಕಂಟಕ; ಚಿತಾಗಾರದಲ್ಲಿ ರೋಗ ಪೀಡಿತ ಕುದುರೆ ಬರ್ನಿಂಗ್‌

    ಅಣಕು ಮತದಾನ ನಡೆದ ವೇಳೆ 4 ಇವಿಎಂಗಳು ಮತ್ತು ವಿವಿಪ್ಯಾಟ್‍ಗಳ (VVPAT) ಹೋಲಿಕೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಮುಂದೆ ಈ ವಿಚಾರ ಪ್ರಸ್ತಾಪಿಸಿದರು. ಮನವಿಯನ್ನು ಆಲಿಸಿದ ಪೀಠ ಚುನಾವಣಾ ಆಯೋಗದ ಸಲಹೆಗಾರ ಮಣಿಂದರ್ ಸಿಂಗ್ ಅವರಿಗೆ ಸೂಚನೆ ನೀಡಿದೆ.

    ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳೊಂದಿಗೆ ತಾಳೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್‍ಗಳಿಗೆ ಹೋಲಿಸಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.

    ಮತದಾರರ ಮತವನ್ನು ದಾಖಲಿಸಿದಂತೆ ಖಚಿತಪಡಿಸಿಕೊಳ್ಳಲು ಮತಪೆಟ್ಟಿಗೆಯಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳನ್ನು ಭೌತಿಕವಾಗಿ ಬಿಡಲು ಮತದಾರರಿಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರಸ್ತುತ, ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಿದ ಐದು ಇವಿಎಂಗಳಲ್ಲಿ ದಾಖಲಾದ ಮತಗಳಿಗೆ ಮಾತ್ರ ವಿವಿಪ್ಯಾಟ್ ಪರಿಶೀಲನೆಯನ್ನು ಮಾಡಲಾಗುತ್ತಿತ್ತು. ಇದನ್ನೂ ಓದಿ: ಮಸೀದಿಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್: ಮುತಾಲಿಕ್

  • ಏ.16ಕ್ಕೆ ವಿವಿಪ್ಯಾಟ್ ತಾಳೆಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ: ಸುಪ್ರೀಂ

    ಏ.16ಕ್ಕೆ ವಿವಿಪ್ಯಾಟ್ ತಾಳೆಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ: ಸುಪ್ರೀಂ

    ನವದೆಹಲಿ: ವಿವಿಪ್ಯಾಟ್ (VVPAT) ಮೂಲಕ ಚಲಾವಣೆಯಾದ ಮತಗಳ ಮರು ಪರಿಶೀಲನೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಏ.16 ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

    ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಏ.16 ರಂದು ವಿಚಾರಣೆಗೆ ಈ ಬಗ್ಗೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ‌

    ವಕೀಲ ಪ್ರಶಾಂತ್ ಭೂಷಣ್ ಅವರು ತುರ್ತು ವಿಚಾರಣೆಯನ್ನು ಕೋರಿದ ನಂತರ, ಇತರ ವಿಷಯಗಳ ಜೊತೆಗೆ ಎನ್‍ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಸಲ್ಲಿಸಿದ ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಏಪ್ರಿಲ್ 3 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

    ಎಪ್ರಿಲ್ 1 ರಂದು, ಆಯ್ದ ಐದು ಇವಿಎಂಗಳಿಂದ ಸ್ಲಿಪ್‍ಗಳನ್ನು ತಾಳೆ ಮಾಡುವ ಪ್ರಸ್ತುತ ಪದ್ಧತಿಗೆ ವಿರುದ್ಧವಾಗಿ ಚುನಾವಣೆಯಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳ ಸಂಪೂರ್ಣ ಎಣಿಕೆಗೆ ಕೋರಿ ಕಾರ್ಯಕರ್ತ ಅರುಣ್ ಕುಮಾರ್ ಅಗರವಾಲ್ ಮನವಿ ಮಾಡಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಮತ್ತು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.

    ಪ್ರಸ್ತುತ ಬ್ಯಾಲೆಟ್ ಯಂತ್ರದಲ್ಲಿ ಬಟನ್ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್ ಸ್ಕ್ರೀನ್‍ನಲ್ಲಿ ಒಂದು ಸ್ಲಿಪ್ ರೆಡಿಯಾಗುತ್ತದೆ. ಆ ಸ್ಲಿಪ್‍ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್ ಈ ಸ್ಲಿಪ್ ಸ್ಕ್ರೀನ್‍ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್ ಆದ ಬಳಿಕ ಆ ಸ್ಲಿಪ್ ಅಟೋಮ್ಯಾಟಿಕ್ ಆಗಿ ಕತ್ತರಿಸಿ ವಿವಿಪ್ಯಾಟ್ ಬಾಕ್ಸ್ ಒಳಗಡೆ ಬೀಳುತ್ತದೆ.

    ಏಳು ಹಂತದಲ್ಲಿ ಲೋಕಸಭೆ ಚುನಾವಣೆ ಭಾರತದಲ್ಲಿ ನಡೆಯಲಿದ್ದು ಏ.19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್‌ ಕೇರ್ – ಏ.23 ರವರೆಗೆ‌ ಜೈಲೇ ಗತಿ