Tag: election campaign

  • ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು!

    ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು!

    ಮಂಡ್ಯ/ಮೈಸೂರು: ಮಂಡ್ಯದಲ್ಲಿ ಮಾತ್ರವಲ್ಲದೆ ಮೈಸೂರಲ್ಲೂ ಗುರು-ಶಿಷ್ಯರ ಮತಬೇಟೆ ಶುಕ್ರವಾರ ಜೋರಾಗಿತ್ತು. ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು. ಇತ್ತ ಮೈಸೂರು ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಕೇಂದ್ರ ಬಿಂದುವಾಗಿದ್ದರು.

    ರಾಜ್ಯ ರಾಜಕಾರಣದಲ್ಲಿ ಗುರು ಶಿಷ್ಯರದ್ದೇ ಸುದ್ದಿ. ಮಂಡ್ಯದಲ್ಲಿ ನಿಖಿಲ್ ಗೆಲುವಿಗಾಗಿ ಶತಾಯಗತಾಯ ಸರ್ಕಸ್ ನಡೆಸ್ತಿರೋ ದೋಸ್ತಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಪರವಾಗಿ ಮಂಡ್ಯದಲ್ಲಿ ಗುರು-ಶಿಷ್ಯರಾದ ದೇವೇಗೌಡ, ಸಿದ್ದರಾಮಯ್ಯ ಪ್ರಚಾರ ನಡೆಸಿ ಬಳಿಕ ಮೈಸೂರಿನಲ್ಲಿ ವಿಜಯ್ ಶಂಕರ್ ಪರವಾಗಿ ಮತಯಾಚಿಸಿದ್ರು.

    ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ-ಜಿಟಿಡಿ!
    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈತ್ರಿ ಪಕ್ಷದ ಪ್ರಚಾರ ಸಭೆಯ ಮುಖ್ಯ ಕೇಂದ್ರ ಬಿಂದುಗಳಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ. ದೇವೇಗೌಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಸಿದ್ದರಾಮಯ್ಯರನ್ನು ಜಿ.ಟಿ. ದೇವೇಗೌಡ ಸೋಲಿಸಿದ್ದರು. ಅಂದಿನಿಂದ ಇಬ್ಬರು ಪರಸ್ಪರ ಮುಖ ನೋಡೋದು ಬಿಡಿ ಒಂದೇ ವೇದಿಕೆಯಲ್ಲಿ ಕೂರುವುದು ಬಹುದೂರದ ಮಾತಾಗಿತ್ತು. ಅದಾದ ನಂತರ ಶುಕ್ರವಾರ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನಾವು ಮುನಿಸು ಮರೆತು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದರು.


    ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಂಡ್ಯದಲ್ಲಿ ಸುಮಲತಾರಿಗೆ ಬಿಜೆಪಿ ಸಹಕಾರ ನೀಡಿದೆ. ಅಂದರೆ ಸುಮಲತಾ ಕೂಡ ಬಿಜೆಪಿ ಅಭ್ಯರ್ಥಿಯೇ ಆಗಿದ್ದಾರೆ. ಕೋಮುವಾದಿ ಪಕ್ಷವನ್ನು ನಾವು ಸೋಲಿಸಬೇಕಿದೆ ಎಂದು ಸುಮಲತಾರನ್ನ ಕೋಮುವಾದಿಗೆ ಹೋಲಿಸಿದ್ದಾರೆ. ಇದಕ್ಕೂ ಮೊದಲು ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು.

    ಇನ್ನೊಂದೆಡೆ ಸಿದ್ದರಾಮಯ್ಯ ಮತ್ತು ಜಿಟಿಡಿ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ಕೂಡ ನಡೆಸಲಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ದೋಸ್ತಿಗಳು ವೈರತ್ವವೆಲ್ಲಾ ಮರೆತು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗುರು ಶಿಷ್ಯರ ಮೋಡಿ ಎಷ್ಟು ವರ್ಕೌಟ್ ಆಗತ್ತೆ ಎಂದು ರಿಸಲ್ಟ್ ವರೆಗೆ ಕಾಯಲೇಬೇಕು.

  • ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಮುಂಬೈ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದೆ. ದೇಶಾದ್ಯಂತ ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸಿನಿಮಾ ಕಲಾವಿದರು ತಮ್ಮ ಪಕ್ಷದ ಪರವಾಗಿ ಸಿನಿ ಅಭಿಮಾನಿಗಳ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಲಾವಿದರು ತಮ್ಮ ಆಪ್ತ ನಾಯಕರ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಈ ಚುನಾವಣಾ ಸುದ್ದಿಗಳ ಜೊತೆಗೆ ಎರಡು ದಿನಗಳಿಂದ ಬಾಲಿವುಡ್ ಕ್ಯೂಟ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಶಾಲು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ.

    ಏಕ್ ಬಿಹಾರಿ ಸೌ ಪೆ ಬಿಹಾರಿ ಎಂಬ ಫೇಸ್‍ಬುಕ್ ಖಾತೆಯಲ್ಲಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋ ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಸಹ ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಈ ಫೋಟೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ.

    ಕೆಲವು ದಿನಗಳ ಹಿಂದೆ ‘ಮಹಾರಾಷ್ಟ್ರೀಯನ್ ಪ್ರಶಸ್ತಿ’ ಸಮಾರಂಭದಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ, ನಾನು ರಾಜಕೀಯದಿಂದ ದೂರ ಇರಲು ಇಷ್ಟಪಡುತ್ತೇನೆ. ಒಂದು ವೇಳೆ ಮಂತ್ರಿಯಾದರೆ ಸ್ವಚ್ಛತೆಯ ಸಚಿವೆಯಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

  • ರಾಜ್ಯ ಸರ್ಕಾರ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ- ಬಿಎಸ್‍ವೈ

    ರಾಜ್ಯ ಸರ್ಕಾರ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ- ಬಿಎಸ್‍ವೈ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸುಭದ್ರ ಸರ್ಕಾರ ಬೇಕೋ, ಭ್ರಷ್ಟಾಚಾರದ ಸರ್ಕಾರ ಬೇಕೋ ಜನರೇ ತೀರ್ಮಾನ ಮಾಡಲಿ. ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಅವರ ನೈತಿಕ ಅಧಃ ಪತನ. ಸರ್ಕಾರದ ಆಯಸ್ಸು ಮುಗಿಯುತ್ತಾ ಬಂದಿದೆ. ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು ಕೋಮಾ ಸ್ಥಿತಿಯನ್ನು ತಲುಪಿದೆ ಅಂದ್ರು.

    ಕುಟುಂಬ ರಾಜಕಾರಣ ಅಂದ್ರೆ ಕುಟುಂಬದಲ್ಲಿ ಒಬ್ಬರು ಇಬ್ಬರೂ ರಾಜಕೀಯ ಮಾಡುವುದಲ್ಲ. ಸಂಪೂರ್ಣ ಕುಟುಂಬವೇ ರಾಜಕಾರಣ ಮಾಡುವುದು. ಅದಕ್ಕೆ ಉತ್ತಮ ಉದಾಹರಣೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ. ನಾನು ನಿಂಬೆ ಹಣ್ಣು ಇಟ್ಟುಕೊಂಡು ಭವಿಷ್ಯ ಹೇಳುತ್ತಿಲ್ಲ. ಪಕ್ಷದ ಬಲ ನೋಡಿ 22 ಸೀಟು ಗೆಲ್ಲುವುದಾಗಿ ಹೇಳುವೆ ಎಂದು ತಿಳಿಸಿದ್ರು.

    ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದಾರೆ. ಮೋದಿ ಅವರ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭೆಯ ಸೋಲಿನ ಭಯ ಕಾಡುತ್ತಿದೆ. ಕುಟುಂಬ ರಾಜಕಾರಣದಿಂದ ರಾಜ್ಯದ ಜನ ಬೇಸತ್ತಿದ್ದಾರೆ ಅಂದ್ರು.

    ಐಟಿ ದಾಳಿ ಕುರಿತು ಮಾತನಾಡಿದ ಅವರು, ದಾಖಲೆಗಳನ್ನ ಪರಿಶೀಲಿಸಿ ದಾಳಿ ನಡೆಯುತ್ತದೆ. ಬಿಜೆಪಿಯ ಅನೇಕ ನಾಯಕರ ಮನೆ ಮೇಲೂ ದಾಳಿ ಆಗಿದೆ. ಆಗ ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮಾತಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ರು.

    ಕುಂದಗೋಳ ಬೈ ಎಲೆಕ್ಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಧರ್ಮ ಒಡೆದವರು ಸದ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

  • ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ಐಟಿ ಸಹಾಯ ಪಡೆದುಕೊಂಡು ಮಂಡ್ಯದಲ್ಲಿ ದಾಳಿ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ ಐಟಿ ಈಗ ಮಂಡ್ಯದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆದಿದೆ.

    ಮಂಡ್ಯದಲ್ಲಿ ಸದ್ದಿಲ್ಲದೆ ಐಟಿಯ ಕಂಟ್ರೋಲ್ ರೂಂ ತೆರೆದಿದ್ದು, ಮಂಡ್ಯದ ಮೂಲೆ ಮೂಲೆಯಲ್ಲೂ ಐಟಿ ಸಂಚಾರಿ ತನಿಖಾ ದಳ ಸ್ಥಾಪನೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದ 40 ಕಡೆಗಳಲ್ಲಿ ಐಟಿಯಿಂದ ರಹಸ್ಯ ಕಾರ್ಯಾಚರಣೆ ನಡೆಯಲಿದ್ದು, ಬಾಲಕೃಷ್ಣನ್ ಸೂಚನೆ ಮೇರೆಗೆ ಮಂಡ್ಯದಲ್ಲಿ `ಅಪರೇಷನ್ ಮನಿ’ಗೆ ಇಬ್ಬರು ಅಧಿಕಾರಿಗಳು ಕೂಡ ಬಂದಿಳಿದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು: ಪುಟ್ಟರಾಜು

    ಮಂಡ್ಯದಲ್ಲಿ ಸ್ಥಾಪಿಸಲಾಗಿರುವ ಐಟಿ ಕಂಟ್ರೋಲ್ ರೂಂನಲ್ಲೇ ಫೋನ್ ಕದ್ದಾಲಿಕೆ ವ್ಯವಸ್ಥೆ ಕೂಡ ಮಾಡಲಾಗಿದೆ. `ಟಾರ್ಗೆಟ್ ಮಾಡಲಾದ ವ್ಯಕ್ತಿಗಳ ಫೋನ್ ಕದ್ದಾಲಿಕೆ’ಗೆ ಇಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ `ಟಾರ್ಗೆಟ್ ಆಗಿರುವ ವ್ಯಕ್ತಿ’ಗಳ ಮೊಬೈಲ್ ನಂಬರ್, ಧ್ವನಿಯನ್ನ ಫೀಡ್ ಮಾಡ್ತಾರೆ. ಈ ಮೂಲಕ 1 ಕಿಲೋ ಮೀಟರ್ ದೂರದಿಂದಲೇ ಟಾರ್ಗೆಟ್ ವ್ಯಕ್ತಿಗಳ ಕಾಲ್ ಕದ್ದಾಲಿಕೆ ಆಗುತ್ತದೆ. ಹಣ ಸಾಗಾಟ, ಸುಮಲತಾ ವಿರೋಧಿಗಳ ಕ್ಷಣಕ್ಷಣದ ನಡೆಯ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತದೆ. ಈ ಎಲ್ಲ ಆಪರೇಷನ್‍ಗಳನ್ನು ನೋಡಿಕೊಳ್ಳಲು ಇಬ್ಬರು ಅಧಿಕಾರಿಗಳ ರವಾನೆ ಮಾಡಲಾಗಿದೆ. ಈಗಾಗ್ಲೇ ಮಂಡ್ಯಕ್ಕೆ ಪಂಕಜ್‍ಕುಮಾರ್ ಸಿಂಗ್, ಹೇಮಂತ್ ಹಿಂಗೋನಿಯಾ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಪ್ರಚಾರದ ವೇಳೆ ಮುಜುಗರಕ್ಕೀಡಾದ ಡಿವಿಎಸ್‍

    ಪ್ರಚಾರದ ವೇಳೆ ಮುಜುಗರಕ್ಕೀಡಾದ ಡಿವಿಎಸ್‍

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರೋಡ್ ಶೋ ವೇಳೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿ ಸದಾನಂದ ಗೌಡರಿಗೆ ಮುಜುಗರ ಉಂಟಾದ ಪ್ರಸಂಗ ನಡೆಯಿತು.

    ಈಗ ಹೆಚ್ಚಾಗಿ ಕೇಳಿ ಬರ್ತಿರೋ ಸ್ಲೋಗನ್ ಅಂದ್ರೆ ಚೌಕೀದಾರ್.. ಚೌಕೀದಾರ್ ಎಂದು. ಆದ್ರೆ ಡಿವಿ ಸದಾನಂದಗೌಡರು ಕೆಆರ್ ಪುರಂನ ಮಹದೇವಪುರದಲ್ಲಿ ಪ್ರಚಾರಕ್ಕೆ ತೆರಳಿದ್ದಾಗ ಚೌಕಿದಾರ್ ಚೋರ್ ಹೇ ಎಂದು ಘೋಷಣೆ ಕೂಗಿದ್ರು. ಘೋಷಣೆಯಿಂದ ರೋಡ್ ಶೋನಲ್ಲಿದ್ದ ಡಿವಿಎಸ್‍ಗೆ ಮುಜುಗರವಾಯ್ತು.

    ಆದ್ರೆ ತನಗೆ ಮುಜುಗರವಾದರೂ ತೋರಿಸಿಕೊಳ್ಳದ ಸದಾನಂದಗೌಡರು, ಜೊತೆಗಿದ್ದ ಕಾರ್ಯಕರ್ತರು ಘೋಷಣೆ ಕೂಗಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಮಿತ್ ಶಾ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ವೇಳೆ ಚೌಕೀದಾರ್ ಶೇರ್ ಎಂದು ಘೋಷಣೆ ಕೂಗಿದ್ದರು.

    ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸದಾನಂದ ಗೌಡರು ಸ್ಪರ್ಧಿಸಿದ್ರೆ, ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಬೈರೇಗೌಡರು ಕಣದಲ್ಲಿದ್ದಾರೆ.

  • ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಸವಾಲೆಸೆದಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜಗ್ಗೇಶ್ ಬುಧವಾರ ಸಂಜೆ ಭದ್ರಾವತಿಯಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಜೆಡಿಎಸ್‍ನಿಂದ ಕರೆದುಕೊಂಡು ಬಂದು ಕಾಂಗ್ರೆಸ್ ನವರು ಯಾಕೆ ನಮ್ಮ ನಾಯಕರು ಅಂದ್ರು ಎಂದು ಉತ್ತರ ಕೊಟ್ಟರೆ, ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಎಂದು ಉತ್ತರ ಕೊಡ್ತೀನಿ ಎಂದು ಜಗ್ಗೇಶ್ ಚಾಲೆಂಜ್ ಹಾಕಿದ್ದಾರೆ.

    ಇದೇ ವೇಳೆ ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿನ ಮೈತ್ರಿ ಬಗ್ಗೆ ಟೀಕೆ ಮಾಡಿದ್ರು. ಯಾವ ಘಟಬಂಧನೂ ಇಲ್ಲ. ಮೋದಿನ ಮನೆಗೂ ಕಳಿಸೋಕೆ ಆಗೋಲ್ಲ. ಇವತ್ತು ರಾಜ್ಯದಲ್ಲಿ ಎರಡೆರಡು ಪಕ್ಷ ಸೇರಿಕೊಂಡು ಏನೋ ಮಾಡ್ತಿವಿ ಅಂತಿದ್ದಾರೆ. ಏನೂ ಮಾಡಕ್ಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ರಾಹುಲ್ ಗಾಂಧಿಗೆ ಎಬಿಸಿಡಿ ಗೊತ್ತಿಲ್ಲ. ವೇದಿಕೆ ಮೇಲೆ ಹೆಂಗೆ ಮಾತಾಡಬೇಕು ಎಂದು ಮೊದಲು ಟ್ರೈನಿಂಗ್ ಕೊಟ್ಟು ಕರ್ಕಂಡ್ ಬರ್ರಪ್ಪ ಎಂದು ಸಲಹೆ ನೀಡಿದರು. ಯಾಕೆ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ್ರೂ ಎಂದು ಕಾಂಗ್ರೆಸ್ ನವರು ಉತ್ತರ ಕೊಡಿ ಎಂದು ಹೇಳಿದರು.


    ಶಿವಮೊಗ್ಗ ಲೋಕಸಭಾ ಕಣದಲ್ಲಿ ಸಿನಿಮಾ ಮಂದಿಯ ಪ್ರಚಾರ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬೆನ್ನಲ್ಲೇ ಬುಧವಾರ ಜಗ್ಗೇಶ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಸ್ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಬಿ.ವೈ ರಾಘವೇಂದ್ರ ಚುನಾವಣಾ ಕಣದಲ್ಲಿದ್ದಾರೆ.

  • ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಬೆಂಗಳೂರು: ನಗರದಲ್ಲಿ ಪ್ರಚಾರದ ವೇಳೆ ನಟಿ, ಎಐಸಿಸಿ ವಕ್ತಾರೆ ಖುಷ್ಬೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

    ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಖುಷ್ಬೂ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಯ್ಸಳನಗರದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯುವಕನೊಬ್ಬ ಖುಷ್ಬೂ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಖುಷ್ಬೂ, ತಕ್ಷಣ ತಿರುಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಕೂಡಲೇ ಮಧ್ಯೆ ಬಂದ ಪೊಲೀಸರು ಕೂಡಾ ಯುವಕನಿಗೆ ಹೊಡೆದು ವಶಕ್ಕೆ ಪಡೆದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಈ ಕುರಿತು ನಾನು ಖುಷ್ಬೂ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಆಗ ಅವರು ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ. ಸಾವಿರಾರು ಜನ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿರುತ್ತದೆ. ಆ ಯುವಕ ಯಾರು ಎಂದು ನಮಗೆ ತಿಳಿದಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರು ಸೆಂಟ್ರಲ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಕಣಕ್ಕಿಳಿದಿದ್ದಾರೆ.

  • ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ಇವೆಲ್ಲಾ ನಂಗೆ ಗೊತ್ತಿಲ್ಲ- ನಿಖಿಲ್

    ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ಇವೆಲ್ಲಾ ನಂಗೆ ಗೊತ್ತಿಲ್ಲ- ನಿಖಿಲ್

    ಮೈಸೂರು: ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗಿಪನ್ ಚಾಲೆಂಜ್ ನಂಗೆ ಗೊತ್ತಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಅಭಿವೃದ್ಧಿ ಕುರಿತ ನಿಖಿಲ್ ಚಾಲೆಂಜ್ ಸ್ವೀಕರಿಸಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಂಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

    ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದಾರೆ.

    ಚಾಲೆಂಜ್ ಏನು? 
    ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಇದಕ್ಕೆ Any time, any where..I am ready ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.

  • ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಮಂಡ್ಯ: ಯುಗಾದಿ ಹಬ್ಬದ ಬ್ರೇಕ್ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಪ್ರಚಾರಕ್ಕೆ ಇಳಿದಿದ್ದು, ಇಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.

    ಅಂಬರಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಯಾವುದೇ ಕನ್ ಫ್ಯೂಶನ್ ಇಲ್ಲ. ಯಾಕಂದ್ರೆ ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಜನರ ಮುಗ್ಧತೆಯನ್ನ ಮಿಸ್‍ಯೂಸ್ ಮಾಡಿಕೊಳ್ಳಬಾರದು ಎಂದು ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಬಿಜೆಪಿ ಸುಮಲತಾಗೆ ಬೆಂಬಲವನ್ನು ನೀಡುತ್ತಿದೆ. ಹೀಗಾಗಿ ಮೋದಿ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ಮೋದಿಯನ್ನ ಭೇಟಿ ಮಾಡಲ್ಲ. ಅವರ ಭೇಟಿ ಬಗ್ಗೆ ನಮ್ಮ ಅಭ್ಯರ್ಥಿ ಸುಮಲತಾ ಅಂಬರೀಶ್ ನಿರ್ಧರಿಸುತ್ತಾರೆ ಎಂದರು.

    ಹಳ್ಳಿ ಹಳ್ಳಿಗೂ ಹೋಗಿ ನಮ್ಮ ಕರ್ತವ್ಯದಂತೆ ನಾವು ಪ್ರಚಾರ ಮಾಡುತ್ತಿದ್ದೇವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಕರ್ತವ್ಯದ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅಭ್ಯರ್ಥಿ ಏನು ಮಾಡಿದ್ದಾರೆ. ಅವರ ಅಭಿವೃದ್ಧಿ ಏನು ಮಾಡುತ್ತಾರೆ. ಇದಕ್ಕಾಗಿ ಅವರ ಯೋಜನೆಗಳು ಏನು ಎಂಬುದರ ಬಗ್ಗೆ ಅವರು ಮಾತಾಡುತ್ತಾರೆ. ಹೀಗಾಗಿ ನಾನು ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕಿಂತ ಅವರು ಮಾತನಾಡುವುದೇ ಸೂಕ್ತ ಎಂದು ಯಶ್ ಹೇಳಿದ್ರು.

    ಸುಮಲತಾ ಅವರು ಸುಮ್ಮನೆ ಹಿಂಗೆ ಬಂದು ಹಿಂಗೆ ಹೋಗುವವರು ಅಲ್ಲ. ಬಹಳಷ್ಟು ದಿನ ಉಳಿಯುತ್ತಾರೆ. ಇಲ್ಲಿ ಕೆಲಸಗಳನ್ನು ಮಾಡುತ್ತಾರೆ. ಜನರ ಪ್ರೀತಿ ಗಳಿಸೋದಕ್ಕೆ ಅಂತಾನೇ ಅವರು ಬಂದಿದ್ದಾರೆ. ಅಮೆರಿಕದಂತೆ ಇಲ್ಲಿಯೂ ಅಭ್ಯರ್ಥಿಗಳಿಬ್ಬರನ್ನು ನಿಲ್ಲಿಸಿ ಒಂದು ವೇದಿಕೆ ಕ್ರಿಯೇಟ್ ಮಾಡಿ. ಆವಾಗ ಯಾರು ಏನೇನು ಯೋಜನೆಗಳನ್ನಿಟ್ಟುಕೊಂಡಿದ್ದಾರೆ. ಯಾರು ಎಷ್ಟು ಯೋಜನೆಗಳನ್ನು ಇಟ್ಟುಕೊಂಡು ಅದರ ಬಗ್ಗೆ ಆಸಕ್ತಿ, ಶಕ್ತಿ, ಜ್ಞಾನ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಲಹೆ ನೀಡಿದ ಅವರು, ಮಂಡ್ಯದ ಯುವಕರು ಬೇರೆ ಬೇರೆ ಕಡೆ ಕೆಲಸಕ್ಕೆಂದು ತೆರಳುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬಂತೆ ಸಾಕಷ್ಟು ಪತ್ರಗಳು ಬಂದಿದೆ. ಅಲ್ಲದೇ ಮಂಡ್ಯದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದೆ. ಇವುಗಳನ್ನೆಲ್ಲಾ ಸುಮಲತಾ ಅಂಬರೀಶ್ ಮಾಡುತ್ತಾರೆ ಎಂದು ಭರವಸೆ ನೀಡಿದರು.

  • ರಾಹುಲ್ ಗಾಂಧಿಯನ್ನ ‘ಪಪ್ಪು’ ಅಂತಾ ಕರೆದು ಪೇಚಿಗೆ ಸಿಲುಕಿದ ಬಿಜೆಪಿ ಸಂಸದ

    ರಾಹುಲ್ ಗಾಂಧಿಯನ್ನ ‘ಪಪ್ಪು’ ಅಂತಾ ಕರೆದು ಪೇಚಿಗೆ ಸಿಲುಕಿದ ಬಿಜೆಪಿ ಸಂಸದ

    ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಜೆಪಿ ಸಂಸದರೊಬ್ಬರು ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು ಕರೆಯುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ಮಹಿಳೆ ಸಂಸದರನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸುರೇಂದ್ರನಗರ ಕ್ಷೇತ್ರದ ಬಿಜೆಪಿ ಸಂಸದ ದೇವಜಿ ಭಾಯಿ ಅವರು ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು ಕರೆದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ, ದೇವಜಿ ಭಾಯಿ ವಾರ್ಡ್ 36ರಲ್ಲಿ ಕಾರ್ಯಕರ್ತರೊಂದಿಗೆ ಬೈಠಕ್ ಮಾಡುತ್ತಿದ್ದರು.

    ಈ ವೇಳೆ ಅಲ್ಲಿಗೆ ಬಂದ ಸೀತಾ ದಾಮೋರ್, ನಗರದ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿಕೊಂಡಿವೆ. ರಸ್ತೆ ಕಾಮಗಾರಿ ಕಷ್ಟವಾದ್ರೆ ಕನಿಷ್ಠ ಗುಂಡಿಗಳನ್ನಾದರು ಮುಚ್ಚಿ ಎಂದು ಮನವಿ ಮಾಡಿಕೊಂಡರು. ಬೈಠಕ್ ನಲ್ಲಿ ಕಾಣಿಸಿಕೊಂಡ ಮಹಿಳೆ ಯಾರು ಅಂತಾ ತಿಳಿಯದೇ ಸಂಸದರು ಆಪ್ತರ ಬಳಿ ಯಾರು ಆಕೆ ಎಂದು ಪ್ರಶ್ನೆ ಮಾಡಿದ್ದಾರೆ. ಆಪ್ತರೊಬ್ಬರು ಅವರು ಕಾಂಗ್ರೆಸ್ ಕೌನ್ಸಿಲರ್ ಅಂತಾ ಪರಿಚಯ ಮಾಡಿಸಿಕೊಟ್ಟಿದ್ದಾರೆ.

    ಮಹಿಳೆ ಕಾಂಗ್ರೆಸ್ ನವರು ಅಂತ ತಿಳಿಯುತ್ತಲೇ, ಕೋಪಗೊಂಡ ಸಂಸದರು `ನಿಮ್ಮ ಪಪ್ಪುಗೆ ಹೇಳಿ ಗುಂಡಿ ಮುಚ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಪಕ್ಷದ ಅಧ್ಯಕ್ಷರನ್ನು ವ್ಯಂಗ್ಯ ಮಾಡಿದಾಗ ಸೀತಾ ದಾಮೋರ, ಓರ್ವ ಸಂಸದರಾಗಿ ಇಷ್ಟು ಕೆಳಮಟ್ಟದಲ್ಲಿ ಮಾತನಾಡೋದು ಸರಿ ಅಲ್ಲ. ಪಪ್ಪು ಎಂದು ಹೇಗೆ ಹೇಳಿದ್ರಿ ಎಂದು ಪ್ರಶ್ನೆ ಮಾಡಿದ್ರಿ ಅಂತಾ ಆಕ್ರೋಶ ಹೊರಹಾಕಿದರು.

    ದೇವಜಿ ಭಾಯಿ ಎಲ್ಲರೂ ಪಪ್ಪು ಅಂತಾ ಕರೆಯುತ್ತಾರೆ. ಹಾಗಾಗಿ ನಾನು ಪಪ್ಪು ಎಂದು ಕರೆದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಬ್ಬರ ನಡುವಿನ ವಾಗ್ವಾದ ಜೋರಾಗುತ್ತಿದ್ದಂತೆ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಲು ಆರಂಭಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಘಟನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೀತಾ ದಾಮೋರ, ಸಂಸದರಾಗಿ ಈ ರೀತಿ ಮಾತನಾಡೋದು ಸರಿ ಅಲ್ಲ. ಘಟನೆ ಬಳಿಕ ದೇವಜಿ ಭಾಯಿ ತಮ್ಮ ಹೇಳಿಕೆ ನನ್ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.

    https://www.youtube.com/watch?v=dX7CemLTQhE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv