Tag: election campaign

  • ದೇಶದಲ್ಲಿ ಎರಡನೇ ಹಂತದ ಪ್ರಚಾರಕ್ಕೆ ತೆರೆ-ಏಪ್ರಿಲ್ 18ಕ್ಕೆ 97 ಕ್ಷೇತ್ರಗಳಲ್ಲಿ ಚುನಾವಣೆ

    ದೇಶದಲ್ಲಿ ಎರಡನೇ ಹಂತದ ಪ್ರಚಾರಕ್ಕೆ ತೆರೆ-ಏಪ್ರಿಲ್ 18ಕ್ಕೆ 97 ಕ್ಷೇತ್ರಗಳಲ್ಲಿ ಚುನಾವಣೆ

    ಬೆಂಗಳೂರು: ರಾಜ್ಯದ ಮೊದಲ ಮತ್ತು ದೇಶದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಏಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

    ರಾಜ್ಯದಲ್ಲಿ ಹೇಗಿತ್ತು ಪ್ರಚಾರ?
    ರಾಜ್ಯದಲ್ಲಿ ಮೊದಲ ಹಂತದ ಲೋಕ ಸಮರದ ಮತದಾನಕ್ಕೆ ಇನ್ನು 45 ಗಂಟೆ ಮಾತ್ರ ಬಾಕಿ ಇದೆ. ತಿಂಗಳಿಂದ ಅಧಿಕೃತವಾಗಿ ನಡೆದಿದ್ದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಾಗಿದೆ. ಎಲ್ಲರ ಆರೋಪ, ಆಕ್ಷೇಪದಂತೆ 14 ಕ್ಷೇತ್ರಗಳ ಪೈಕಿ ಕಂಪ್ಲೀಟ್ ಹೈಜಾಕ್ ಮಾಡಿದ್ದು, ಅದೇ ಮಂಡ್ಯ ರಾಜಕೀಯ. ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನ ಹೆಸರಿನಲ್ಲಿ ದೊಡ್ಡ ಸಮಾವೇಶ ನಡೆಸಿದ ಮತ ಯಾಚನೆ ಮಾಡಿದರು. ಇತ್ತ ಸಿಎಂ ಕುಮಾರಸ್ವಾಮಿ ಸಹ ಪುತ್ರನ ಪರವಾಗಿ ಪ್ರಚಾರ ನಡೆಸಿದರು.

    ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊನೆ ಕ್ಷಣದವರೆಗೂ ಮತದಾರರ ಓಲೈಕೆಗೆ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಇನ್ನಿಲ್ಲದ ಕಸರತ್ತು ನಡೆಸಿದರು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೂಡಿಗೆರೆಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆಯ ಮೂಲಕ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ದೇವನಹಳ್ಳಿಯಲ್ಲಿ ಪ್ರಚಾರ ಮಾಡಿದರು. ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ರೋಡ್ ಶೋ ನಡೆಸಿದರು ಮತ ನೀಡುವಂತೆ ಮನವಿ ಮಾಡಿಕೊಂಡರು.

    ತಮಿಳುನಾಡಿನ 39, ಕರ್ನಾಟಕ 14, ಮಹಾರಾಷ್ಟ್ರ 10, ಉತ್ತರ ಪ್ರದೇಶ 8, ಅಸ್ಸಾಂ, ಬಿಹಾರ, ಓರಿಸ್ಸಾಗಳಲ್ಲಿ 5, ಛತ್ತೀಸಘಡ ಮತ್ತು ಪಶ್ಚಿಮ ಬಂಗಾಲದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದು ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.

    ಕಣದಲ್ಲಿರುವ ಪ್ರಮುಖರು:
    ನೆರೆಯ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮಹಾ ಚೇತನ ಎಂದು ಕರೆಸಿಕೊಂಡ ಮಾಜಿ ಸಿಎಂ ಜಯಲಲಿತಾ ಮತ್ತು ಕರುಣಾನಿಧಿ ಅಗಲಿದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷ ತಮಿಲಿಸಾಯಿ ಸುಂದರರಾಜನ್ ತೂತುಕುಡಿ ಲೋಕ ಅಖಾಡದಲ್ಲಿ ಡಿಎಂಕೆಯ ಕರುಣಾನಿಧಿ ಪುತ್ರಿ ಕನ್ನಿಮೋಳಿಯನ್ನು ಎದುರಿಸುತ್ತಿದ್ದಾರೆ.

    ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮಥುರಾದಿಂದ ಬಿಜೆಪಿಯಿಂದ ನಟಿ ಹೇಮಾ ಮಾಲಿನಿ ಸ್ಪರ್ಧೆ ಮಾಡಿದ್ದಾರೆ. ಗೋಧಿ ಕಟಾವು, ರೈತ ಮಹಿಳೆ ಫೋಟೋ ಮತ್ತು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಪ್ರಚಾರ ಕೈಗೊಂಡಿದ್ದರು.

     

  • ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಹೀಗಾಗಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗೆ ಪ್ರಚಾರ ನಡೆಸುತ್ತಿದ್ದ ವೇಳೆ ಸಚಿವ ಡಿಸಿ ತಮ್ಮಣ್ಣ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಂಡ್ಯದ ಮದ್ದೂರಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಚಿವರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತ ಕೇಳಲು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಗ್ರಾಮಸ್ಥರು ಗ್ರಾಮದ ಸಮಸ್ಯೆ, ಮೈಷುಗರ್‍ಗೆ ಕಬ್ಬು ಪೂರೈಕೆ ಮಾಡಲು ಹಣ ಸಂದಾಯದ ವಿಚಾರವಾಗಿ ಸಚಿವರನ್ನು ಪ್ರಶ್ನಿಸಿದ್ದಾರೆ.

    ಕಬ್ಬಿನ ದುಡ್ಡು ಬಂದಿಲ್ಲ, ಊರು ಸಮಸ್ಯೆ ಬಗೆಹರಿದಿಲ್ಲ, ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರು ಸಮಜಾಯಿಷಿ ನೀಡಲು ಮುಂದಾದ್ರು. ಆದ್ರೆ ಯುವಕನೊಬ್ಬ ಸಿಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಸಮಾಧಾನಪಡಿಸಿದ ಘಟನೆಯೂ ನಡೆದಿದೆ.

  • ಮಂಡ್ಯ ಕ್ಲೈಮ್ಯಾಕ್ಸ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ?

    ಮಂಡ್ಯ ಕ್ಲೈಮ್ಯಾಕ್ಸ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ?

    ಮಂಡ್ಯ: ಕ್ಷೇತ್ರದಲ್ಲಿ ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭರ್ಜರಿಯಿಂದ ಪ್ರಚಾರ ಮಾಡುತ್ತಿದ್ದರು. ನಾಳೆ (ಮಂಗಳವಾರ) ಚುನಾವಣೆಯ ಕೊನೆಯ ಬಹಿರಂಗ ಪ್ರಚಾರ ನಡೆಯಲಿದೆ. ಈ ಕ್ಲೈಮ್ಯಾಕ್ಸ್ ಪ್ರಚಾರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಡುವ ಸಾಧ್ಯತೆಯಿದೆ.

    ನಾಳೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾಗಿದ್ದು, ಇಂದು ಮೈತ್ರಿ ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ನಾಳೆ ರಜನಿಕಾಂತ್ ಕರೆಸಲೇಬೇಕು ಎಂದು ಸುಮಲತಾಗೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ.

    ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸುಮಲತಾ ಅಂಬರೀಶ್ ಅವರು ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದಾರೆ. ಈ ಸಮಾವೇಶಕ್ಕೆ ರಜಿನಿಕಾಂತ್ ಕರೆಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರಜನಿಕಾಂತ್ ಅವರು ಅಂಬರೀಶ್ ಅವರ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರಕ್ಕೆ ಬರುವಂತೆ ಸುಮಲತಾ ಅವರು ರಜನಿಕಾಂತ್‍ಗೆ ಕರೆ ಮಾಡಿದ್ದಾರೆ. ಒಂದು ವೇಳೆ ರಜನಿಕಾಂತ್ ಬರೋದು ಓಕೆ ಆದರೆ ನಾಳೆ ಸುಮಲತಾ ನೇತೃತ್ವದ ಸಮಾವೇಶಕ್ಕೆ ಮತ್ತಷ್ಟು ರಂಗು ಬರಲಿದೆ.

    ಮಂಡ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ತಮಿಳು ಭಾಷಿಕರ ಮತವಿದೆ. ಅಷ್ಟೇ ಅಲ್ಲದೆ ಮಂಡ್ಯದಲ್ಲೂ ರಜನಿಕಾಂತ್ ಅವರ ಅಭಿಮಾನಿಗಳು ತುಂಬಾ ಜನರಿದ್ದಾರೆ. ಹೀಗಾಗಿ ರಜನಿಕಾಂತ್ ಬಂದರೆ ಮಂಡ್ಯದಲ್ಲಿರುವ ತಮಿಳರ ವೋಟ್‍ಗಳು ಸುಮಲತಾಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ರಜನಿಕಾಂತ್ ಕರೆಸಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ರಜನಿಕಾಂತ್ ಬಂದರೆ ಸುಮಲತಾ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗಿದೆ. ಆದರೆ ಕರ್ನಾಟಕದ ವಿರುದ್ಧ ಕಾವೇರಿ ಹೋರಾಟದಲ್ಲಿ ರಜನಿಕಾಂತ್ ಪಾಲ್ಗೊಂಡಿದ್ದರು. ಹೀಗಾಗಿ ರಜನಿಕಾಂತ್ ಬರುತ್ತಾರಾ ಇಲ್ಲವೋ ಎನ್ನುವುದು ಮಂಗಳವಾರ ಸ್ಟಷ್ಟವಾಗಲಿದೆ.

  • ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸುವ ಸುಳಿವು ಕೊಟ್ಟ ಸಿದ್ದರಾಮಯ್ಯ

    ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸುವ ಸುಳಿವು ಕೊಟ್ಟ ಸಿದ್ದರಾಮಯ್ಯ

    ಮೈಸೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲಲ್ಲ. ಬೇರೆ ಕಡೆ ನಿಲ್ಲೋದನ್ನ ಆಮೇಲೆ ನೋಡೋಣ. ಇನ್ನೂ ಚುನಾವಣೆಗೆ ನಾಲ್ಕು ವರ್ಷ ಇದೆ ಎಂದು ಹೇಳುವ ಮೂಲಕ ಮತ್ತೆ ಚುನಾವಣೆಗೆ ನಿಲ್ಲುವ ಸುಳಿವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

    ಭಾನುವಾರ ಇಲವಾಲದ ಸಮಾವೇಶದಲ್ಲಿ ನಾನು ಇನ್ನೂ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಹೇಳಿಕೆಗೆ ಸ್ಪಷ್ಟಪಡಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಋಣವನ್ನು ಸಾಕಷ್ಟು ತೀರಿಸಿದ್ದೇನೆ. ಹೀಗಾಗಿ ನಾನು ಮತ್ತೆ ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದೆ ಅಂದ ಅವರು, ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಸೂಚನೆಯನ್ನು ನೀಡಿದರು.

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸೋತ್ರೆ, ಸರ್ಕಾರ ಉಳಿಯುತ್ತಾ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ ಯೂಟರ್ನ್ ಹೊಡೆದ ಸಿದ್ದರಾಮಯ್ಯ, ಮೈತ್ರಿ ಪಕ್ಷ ಸೋತ್ರೆ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಎಂದು ಹೇಳಿದ್ದೇನೆ. ಅದನ್ನು ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದಾನೆ. ಸರ್ಕಾರ ಬಿಳಿಸೋಕೆ ಆಗಿದ್ಯಾ ಎಂದು ಪ್ರಶ್ನಿಸಿದ್ರು. ಯಡಿಯೂರಪ್ಪ ಒಬ್ಬ ಲೀಡರೇನ್ರಿ. ಬಿಜೆಪಿ ಒಂದು ಪಾರ್ಟಿನಾ, ಒಂದು ತತ್ವ ಸಿದ್ಧಾಂತ ಇಲ್ಲ. ಅವ್ರಿಗೆ ನೈತಿಕತೆ ಇದ್ಯಾ ಎಂದು ಸಿದ್ದರಾಮಯ್ಯ ಕೆಂಡಾಮಂಡಲರಾದ್ರು. ಇದನ್ನೂ ಓದಿ: ಮೂಡ್ ಅಂದ್ರೆ ಬೇರೆ ಕಣಪ್ಪ – ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ: ಸಿದ್ದು ಹಾಸ್ಯದ ಹೇಳಿಕೆ

    ನಾನು, ಜಿ.ಟಿ.ದೇವೇಗೌಡ ಕ್ಷೇತ್ರ ಪ್ರವಾಸ ಮಾಡಿದ ಮೇಲೆ ವಾತಾವರಣ ಬದಲಾಗಿದೆ. ಜನ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಅವರು, ದೇವೇಗೌಡರ ರಾಜಕೀಯ ಸನ್ಯಾಸತ್ವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು. ಮೋದಿ, ದೇವೇಗೌಡರ ಬಗ್ಗೆ ಹೇಳಿದ್ರೆ ನನ್ನನ್ನ ಯಾಕೆ ಕೇಳ್ತೀರಾ. ಹೋಗಿ ದೇವೇಗೌಡರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು.

    ಇದೇ ವೇಳೆ ಪರ್ಸೆಂಟೇಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ ಗರಂ ಆದ ಮಾಜಿ ಸಿಎಂ, ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನ ಕೊಡಬಾರದು. ಇದೊಂದು ಬೇಸ್‍ಲೆಸ್ ಆರೋಪವಾಗಿದೆ. ಮೋದಿ ಸರ್ಕಾರ ಶೇ.100 ರಷ್ಟು ಭ್ರಷ್ಟ ಸರ್ಕಾರ ಎಂದು ಆರೋಪ ಮಾಡುತ್ತೇನೆ. ಅದನ್ನು ನೀವು ಹಾಕ್ತೀರಾ ಎಂದು ಪ್ರಶ್ನಿಸಿದ್ರು.

    ಒಬ್ಬ ಪ್ರಧಾನಿ ಈ ಮಟ್ಟಕ್ಕೆ ಇಳಿದು ಮಾತನಾಡಬಾರು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಎಮೋಷನಲ್ ವಿಚಾರ ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ನಲ್ಲಿ ನಿಲ್ಲೋದಕ್ಕೆ, ಅಲ್ಲಿ ಮೈನಾರಿಟಿ ಇರುವುದರಿಂದ ಅಲ್ಲಿ ನಿಲ್ಲುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಾರೆ. ಇದು ಕಮ್ಯೂನಲ್ ವಯಲೆನ್ಸ್ ಆಗಲ್ವ ಎಂದು ಕಿಡಿಕಾರಿದ್ರು.

    ಐಟಿ ಕಚೇರಿ ಮುಂದೆ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಐಟಿಯಿಂದ ನೋಟಿಸ್ ಬಂದಿದೆ. ಈಗಾಗಲೇ ಉತ್ತರ ಕೊಟ್ಟಿದ್ದೇನೆ. ನಾನು ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ. ನಾನು ಉತ್ತರ ಕೊಡಲು 15 ದಿನ ಬೇಕು ಎಂದು ಪ್ರತಿಕ್ರಿಯಿಸಿದ್ದೇನೆ ಎಂದರು.

  • ಪ್ರಚಾರಕ್ಕೆ ಬಂದ್ರೆ ದುಡ್ಡು ಕೊಡ್ತೀನಿ ಎಂದು ಹೇಳಿ ಕೈ ಕೊಟ್ಟ ಪ್ರಕಾಶ್ ರೈ!

    ಪ್ರಚಾರಕ್ಕೆ ಬಂದ್ರೆ ದುಡ್ಡು ಕೊಡ್ತೀನಿ ಎಂದು ಹೇಳಿ ಕೈ ಕೊಟ್ಟ ಪ್ರಕಾಶ್ ರೈ!

    ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಭಾಗಿಯಾದ್ರೆ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ಬಡ ಜನರು ಹೋಗ್ತಾರೆ. ಆದ್ರೆ ಬೆಂಗೂರು ಕೇಂದ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹಣ ಕೊಡುತ್ತೇನೆ ಎಂದು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನ ಕರೆದೊಯ್ದು ಹಣ ಕೊಡದೇ ವಂಚನೆ ಮಾಡಿದ ಆರೋಪವೊಂದು ಕೇಳಿಬಂದಿದೆ.

    ಹೌದು. ಲೋಕಸಭಾ ಚುನಾವಣೆಗೆ ಉಳಿದಿರುವುದು ಇನ್ನೂ ಕೇವಲ ನಾಲ್ಕು ದಿನ ಮಾತ್ರ. ಹೀಗಾಗಿ ಪ್ರಚಾರದ ಭರಾಟೆ ಎಲ್ಲೆಡೆ ಜೋರಾಗಿದೆ. ಜನ ಇಲ್ಲದಿದ್ದರೂ ಹಣ ಕೊಟ್ಟು ಜನರನ್ನು ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಕೂಡ ಹಣ ಕೊಡುತ್ತೇನೆ ಎಂದು ಮಹಿಳೆಯರನ್ನ ಪ್ರಚಾರಕ್ಕೆ ಕರೆದೊಯ್ದು ವಂಚನೆ ಮಾಡಿದ್ದಾರೆ ಎಂಬ ಆರೋಪಿಸಲಾಗುತ್ತಿದೆ.

    ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನ ಗೌರಿಪಾಳ್ಯದ ಮೂವತ್ತು ಜನ ಮಹಿಳೆಯರನ್ನ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದ ಪ್ರಕಾಶ್ ರೈ, ಪ್ರಚಾರದ ಬಳಿಕ ದುಡ್ಡು ಕೇಳಿದ್ರೆ ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಯಾಮಾರಿಸ್ತಿದ್ದಾರೆ ಅಂತ ಪ್ರಚಾರಕ್ಕೆ ಹೋಗಿದ್ದ ಮಹಿಳೆಯೊಬ್ಬರು ಆರೋಪ ಮಾಡುತ್ತಿದ್ದಾರೆ.

    ಪ್ರಕಾಶ್ ರೈ ಕಚೇರಿಗೆ ಹೋಗಿ ವಿಚಾರಿಸಿದ್ರೆ ಅವರು ಕೂಡ ನಾಳೆ ಬನ್ನಿ, ನಾಡಿದ್ದು ಬನ್ನಿ. ನಿಮ್ಮ ಕರೆದುಕೊಂಡು ಬಂದಿದವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಒಂದೊಂದು ರೀತಿಯಲ್ಲಿ ಮಾತಾಡುತ್ತಾರೆ ಎಂದು ಪ್ರಚಾರಕ್ಕೆ ಹೋಗದಿದ್ದ ಅರುಣ್ ಕುಮಾರ್ ಕಿಡಿಕಾರಿದ್ದಾರೆ.

  • ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದು, ಇಂದು ತಮ್ಮ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.

    ಕಳೆದ ಕೆಲ ದಿನಗಳಿಂದ ಪ್ರಚಾರ ಮಾಡಿದ್ದರಿಂದ ದರ್ಶನ್ ಅವರಿಗೆ ಗಂಟಲು ನೋವು, ಕೈನೋವು ಕಾಣಿಸಿಕೊಂಡಿತ್ತು. ಗಂಟಲು ನೋವಿದ್ದರೂ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಇಂದು ಪ್ರಚಾರ ನಡೆಸುತ್ತಿದ್ದಾಗ ಮೈಕ್ ಆಗಾಗ ಕೈ ಕೊಡುತಿತ್ತು. ಗಂಟಲು ಕಟ್ಟಿಕೊಂಡಿದ್ದ ಕಾರಣ ಮೈಕ್ ಇಲ್ಲದೆ ಭಾಷಣ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಕೇವಲ ನಾಲ್ಕು ಊರುಗಳಲ್ಲಿ ಮಾತ್ರ ಪ್ರಚಾರ ಮಾಡಿ ನಂತರ ತಮ್ಮ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ನಾಳೆ ಮತ್ತೆ ದರ್ಶನ್ ತಮ್ಮ ಪ್ರಚಾರ ಮುಂದುವರಿಸಲಿದ್ದಾರೆ. ಇತ್ತ ದರ್ಶನ್ ವಾಪಸ್ ಹೋದ ವಿಷಯ ಗೊತ್ತಿಲ್ಲದೇ ಹೆಮ್ಮನಹಳ್ಳಿ, ಸೋಮನಹಳ್ಳಿ ಸೇರಿ ಹಲವು ಗ್ರಾಮಗಳ ಜನ ರಸ್ತೆಯಲ್ಲಿ ಸಾರಥಿಗಾಗಿ ಕಾದು ನಿಂತಿದ್ದಾರೆ.

    ಎಲ್ಲೆಲ್ಲಿ ಪ್ರಚಾರ:
    ಮದ್ದೂರು ತಾಲೂಕಿನ ಗ್ರಾಮಗಳಲ್ಲಿ ಸಾರಥಿ ಅಬ್ಬರದ ಪ್ರಚಾರ ನಡೆಸಿದ್ದರು. ಮಲ್ಲನಕುಪ್ಪೆಯಲ್ಲಿ ಇಂದು ಪ್ರಚಾರ ಆರಂಭಿಸಿದ ದರ್ಶನ್ ಸುಮಲತಾ ಪರ ದರ್ಶನ್ ಮತಯಾಚನೆ ಮಾಡಿದ್ರು. ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಗೆ ಶುಭ ಕೋರಿದರು. ದರ್ಶನ್ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುವುದು ಕಂಡುಬಂತು. ದರ್ಶನ್‍ಗೆ ನಟ, ಸ್ನೇಹಿತ ರವಿಚೇತನ್ ಸಾಥ್ ನೀಡಿದ್ದರು.

    ಮದ್ದೂರಿನ ಕೆಸ್ತೂರಿನಲ್ಲಿ ದರ್ಶನ್‍ಗೆ ಭವ್ಯ ಸ್ವಾಗತ ಸಿಕ್ಕಿದ್ದು, ಗ್ರಾಮಸ್ಥರು ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಜೆಡಿಎಸ್‍ನ ಸ್ಥಳೀಯ ಮುಖಂಡ ಧನಂಜಯ್ ಅವರು, ಪ್ರಚಾರ ವಾಹನ ಹತ್ತಿ ಸುಮಲತಾ ಪರ ಬೆಂಬಲ ಘೋಷಿಸಿದ್ರು.

    ಅಂತಿಮ ಹಂತದ ಪ್ರಚಾರ ಕಣದಲ್ಲಿ ದರ್ಶನ್ ಭಾಷಣ ಮಾಡಿದ್ದು, ಮತಗಳನ್ನು ಮಾರಿಕೊಳ್ಳದಂತೆ ಜನತೆಗೆ ಮನವಿ ಮಾಡಿದ್ರು. ಹಣಕ್ಕೆ ಮತ ಮಾರಿಕೊಳ್ಳಬೇಡಿ. ಸ್ವಾಭಿಮಾನದ ಮತಗಳನ್ನು ಸುಮಲತಾರಿಗೆ ಹಾಕುವಂತೆ ದರ್ಶನ್ ಕೇಳಿಕೊಂಡರು. ಇದೇ ವೇಳೆ ಪ್ರಚಾರದ ಮೈಕ್ ಕೂಡ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರಿಯಾಗಿ ಭಾಷಣ ಮಾಡಲು ಸಾಧ್ಯವಾಗಿಲ್ಲ.

    ಮದ್ದೂರಿನ ತೂಬಿನಕೆರೆಯಲ್ಲಿ ಅಭಿಮಾನಿಗಳು ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿದ್ರು. ಎರಡು ಜೆಸಿಬಿ ಮೂಲಕ ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮದ್ದೂರಿನ ಕೆಸ್ತೂರಿನಲ್ಲಿ ಮಾತನಾಡುವಾಗಲೂ ಮೈಕ್ ಕೈ ಕೊಡ್ತಿದ್ದ ಕಾರಣ ದರ್ಶನ್ ಸಿಟ್ಟಾದ್ರು. ಅಲ್ಲದೆ ತಮ್ಮ ಕೈಲಿದ್ದ ಮೈಕನ್ನು ಕೆಳಕ್ಕೆ ಎಸೆದ ಪ್ರಸಂಗವೂ ನಡೆಯಿತು.

  • ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯ: ಪ್ರಚಾರದ ಅಬ್ಬರ ನಡುವೆಯೇ ಯೋಧರೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಕತೆ ನಡೆಸಿದ್ದಾರೆ.

    ಶ್ರೀರಂಗಪಟ್ಟಣದ ಮೂಳೆಕೊಪ್ಪಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯೋಧ ತನ್ನ ನೆಚ್ಚಿನ ನಟನಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ.

    ಮಧ್ಯಾಹ್ನದ ಊಟ ಮುಗಿಸಿ ಸೈನಿಕನ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ದರ್ಶನ್, ನಿಮ್ಮ ಮಾತಿನಿಂದ ನಮಗೆ ಮತ್ತಷ್ಟು ಧೈರ್ಯ ಸಿಕ್ಕಿದೆ ಎಂದು ಹೇಳಿದರು. ಅಭಿಮಾನಿ ಯೋಧ ಜಮ್ಮು ಗಡಿ ಸೇನಾ ಕ್ಯಾಂಪ್ ನಿಂದ ದರ್ಶನ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಹಾಕುವುದಾಗಿ ಹೇಳಿದ್ದಾರೆ. ಯೋಧನ ಮಾತಿಗೆ ದರ್ಶನ್ ಥ್ಯಾಂಕ್ಯೂ.. ಥ್ಯಾಂಕ್ಯೂ.. ಎಂದು ಹೇಳಿದ್ದಾರೆ.

  • ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

    ಸುಮಲತಾಗೆ CRPF ಅಷ್ಟೇ ಯಾಕೆ ಅಮೆರಿಕದ ಅಧ್ಯಕ್ಷರನ್ನೂ ಸಂಪರ್ಕ ಮಾಡ್ಲಿ- ಸಿಎಂ ಲೇವಡಿ

    ಮಂಡ್ಯ: ಸಿಆರ್‌ಪಿಎಫ್ ಒಂದೇ ಅಲ್ಲ. ಬೇಕಿದ್ರೆ ಅಮೆರಿಕದ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋಗಳನ್ನು ಕೂಡ ನರೇಂದ್ರ ಮೋದಿಯವರು ಏರ್ಪಾಡು ಮಾಡಿ ಕಳುಹಿಸಿ ಕೊಡೋದು ಸೂಕ್ತ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ನಗರದ ಮದ್ದೂರಿನಲ್ಲಿ ಮಗ ನಿಖಿಲ್ ಪರ ಮತಯಾಚನೆಯ ಸಂದರ್ಭದಲ್ಲಿ ಸುಮಲತಾ ಅವರು ತನಗೆ ಸಿಆರ್‌ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಪಕ್ಷೇತರ ಅಭ್ಯರ್ಥಿ ಸುಮಲತಾ ಯಾಕೆ ಭಯ ಪಡಬೇಕು. ಅವರಿಗೆ ಬೇಕಾದ ಭದ್ರತಾ ವ್ಯವಸ್ಥೆಯನ್ನು ಮೋದಿಯವರೇ ಮಾಡುತ್ತಾರೆ. ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಿ ಅಲ್ಲಿನ ಕಮಾಂಡೋಗಳನ್ನ ಕರೆಸಿಕೊಡಲಿ. ನನಗೇನು ಅಭ್ಯಂತರ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಸಿಎಂ ಮಾತು ಸೈನ್ಯಕ್ಕೆ ಅವಮಾನ ಮಾಡಲಾಗಿದೆ ಎಂದು ಮೋದಿ ಹೇಳಿಕೆ ಪ್ರತಿಕ್ರಿಯಿಸಿದ ಎಚ್‍ಡಿಕೆ, ಶ್ರೀಮಂತರ ಮಕ್ಕಳು ಯಾರೂ ಸೈನ್ಯಕ್ಕೆ ಸೇರಲ್ಲ. ಇದಕ್ಕೆ ಹುತಾತ್ಮರಾಗಿರೋ ಗುರು ಅವರ ಉದಾಹರಣೆ ನೀಡಿದ್ದೆ. ಆ ಕುಟುಂಬದ ಪರಿಸ್ಥಿತಿ ನೋಡಿಯೇ ನಾನು ಹೇಳಿಕೆ ನೀಡಿರುವುದು. ನಾನು ಹೇಳಿದ್ದರಲ್ಲಿ ಅಸತ್ಯ ಏನಿಲ್ಲ. ನಮ್ಮ ದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ. ಹೀಗಾಗಿ ಕೊನೆಗೆ ಸೈನ್ಯಕ್ಕಾದ್ರೂ ಸೇರಿ ಜೀವನ ಮಾಡೋಣ ಎಂದು ಅವರು ಹೋಗ್ತಾರೆ. ಆದ್ರೆ ನರೇಂದ್ರ ಮೋದಿಯವರು ಬಡ ಕುಟುಂಬಗಳ ಮಕ್ಕಳ ಜೊತೆ ಚೆಲ್ಲಾಟವಾಡುತ್ತಾರೆ. ಇದು ವಾಸ್ತವವೇ ಹೊರತು ಯಾರಿಗೂ ಅವಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯ್ತಾರೆ – ಎಚ್‍ಡಿಕೆಗೆ ಮೋದಿ ತಿರುಗೇಟು

    ಗುರು ಧರ್ಮಪತ್ನಿಗೆ ಬೆಂಗಳೂರಲ್ಲಿ ನಾನೇ ಕೆಲಸ ಕೊಡಿಸಿದ್ದೇನೆ. ನರೇಂದ್ರ ಮೋದಿ ಕೆಲಸ ಕೊಡಿಸಿಲ್ಲ. ಕುಟುಂಬದ ಪರಿಸ್ಥಿತಿ ನೋಡೋಕ್ಕಾಗದೆ ನಾನು ಕೆಲಸ ಕೊಡಿಸಿರುವುದು. ಗುರು ಅವರು ಸೈನಿಕ ವೃತ್ತಿಗೆ ಹೋಗೋದಕ್ಕೆ ಕಾರಣವೇನು? ದೊಡ್ಡವರ ಕಮಾಂಡೋಗಳ ವಿಚಾರ ಬೇರೆ, ಆದ್ರೆ ದೇಶದ ಗಡಿಯನ್ನು ಕಾಯುತ್ತಿರುವವರು ಸಾಮಾನ್ಯವಾಗಿ ಎಲ್ಲರೂ ಬಡ ಕುಟುಂಬದವರೇ ಆಗಿರುತ್ತಾರೆ. ಈ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೂ ಪರದಾಡುವ ಬಡ ಕುಟುಂಬವನ್ನು ನಾನು ಗಮನಿಸಿದ್ದೇನೆ. ನಾನು ಕೂಡ ಪ್ರತಿ ದಿನ ಅಂತವರ ಜೊತೆಯೇ ಬದುಕಿದವನು. ನಾನೇನು ಚಿನ್ನದ ಸ್ಪೂನಿನಲ್ಲಿ ತಿನ್ನೋರ ಜೊತೆ ಬೆರೆತಿಲ್ಲ. ಅವರ ಕಷ್ಟ ನೋಡಿ ಹೇಳಿದ್ದೇನೆ. ಅಂತವರ ಜೊತೆ ಚೆಲ್ಲಾಟವಾಡ ಬೇಡಪ್ಪ ಎಂದು ಪ್ರಧಾನಿಗಳಿಗೆ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ತೆರಳಿದರು.

  • ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    – ನಿಖಿಲ್ ಕಿವಿಗೆ ಗಾಯ

    ಮಂಡ್ಯ: ನಮ್ಮ ಪಕ್ಷದಲ್ಲಿ ಭಯೋತ್ಪಾದಕರಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಚಿವ ಡಿ.ಸಿ ತಮ್ಮಣ್ಣ ಟಾಂಗ್ ನೀಡಿದ್ರು.

    ಮದ್ದೂರಿನ ಬೋರಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದಿದ್ದ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಭ್ಯರು. ನಮ್ಮ ನಡವಳಿಕೆ ನೋಡಿದ್ದೀರಲ್ಲ. ಅವರು ಸಂಬಂಧಿಕರೂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹಾಗಾಗಿ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಯಾರಿಗೆ ಯಾವ ಸಂದರ್ಭದಲ್ಲಿ ಭಯ ಆಗುತ್ತದೆ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ. ಮಂಡ್ಯದಲ್ಲಿ ವಾತಾವರಣ ಚೆನ್ನಾಗಿದೆ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಇಂದು ಮಾತ್ರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಾರೆ. ಮತ್ತೆ ಅವರು ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಅಂದ್ರು.

    ನಿಖಿಲ್ ಕಿವಿಗೆ ಗಾಯವಾಗಿದ್ದರಿಂದ ಶುಕ್ರವಾರ ಪ್ರಚಾರಕ್ಕೆ ಹೋಗಿಲ್ಲ. ಇಂದಿನಿಂದ ನಿಖಿಲ್ ಅವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಸುಮಲತಾ ಬಗ್ಗೆ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆದ್ರೆ ಆ ರೀತಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಸಲಹೆಯಿತ್ತರು.  ಇದನ್ನೂ ಓದಿ: ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

  • ಪ್ರಚಾರದ ನಡುವೆಯೂ ಮುಖ್ಯ ವ್ಯಕ್ತಿಯನ್ನು ನೆನೆದ ದರ್ಶನ್

    ಪ್ರಚಾರದ ನಡುವೆಯೂ ಮುಖ್ಯ ವ್ಯಕ್ತಿಯನ್ನು ನೆನೆದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಪ್ರಚಾರದ ನಡುವೆಯೂ ಅವರು ವರನಟ ಡಾ. ರಾಜ್‍ಕುಮಾರ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ನೆರವಾದ ಅಣ್ಣಾವ್ರ ಪುಣ್ಯ ತಿಥಿ ಇಂದು. ಸದಾ ನಮ್ಮೊಂದಿಗೆ ಡಾ|| ರಾಜ್” ಎಂದು ರಾಜ್‍ಕುಮಾರ್ ಅವರ ಫೋಟೋ ಹಾಕಿಕೊಂಡಿದ್ದಾರೆ.

    ಶುಕ್ರವಾರ ವರನಟ ಡಾ. ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಡೀ ಕುಟುಂಬ ಅಭಿಮಾನಿಗಳ ಜೊತೆ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿದ್ದರು. ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಏಪ್ರಿಲ್ 24ರಂದು ಉಡುಗೊರೆ ರೂಪದಲ್ಲಿ `ಅಪ್ಪನ ಅಂಗಿ’ ಸಿನಿಮಾ ಸೆಟ್ಟೇರಲಿದೆ.

    ಶುಕ್ರವಾರ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮೂವರು ಸೋದರರು ಕುಟುಂಬ ಸಮೇತರಾಗಿ ತಂದೆ-ತಾಯಿಯ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮನೆಯಲ್ಲಿಯೂ ಅಭಿಮಾನಿಗಳ ಜೊತೆಯಲ್ಲಿ ರಾಜ್‍ಕುಮಾರ್ ಮಕ್ಕಳು ಪೂಜೆ ಸಲ್ಲಿಸಿದ್ದಾರೆ.