Tag: election campaign

  • ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    – ಬೆಂಬಲಿಗನ ಪ್ರಚಾರಕ್ಕೆ ಜನರು ಶಾಕ್

    ಚೆನ್ನೈ: ಎಐಎಡಿಎಂಕೆ ಅಭ್ಯರ್ಥಿ ಎಸ್.ಪಿ.ವೇಲುಮನಿ ಪರವಾಗಿ ಬೆಂಬಲಿಗನೋರ್ವ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಲಾಯಿಸಿ ಪ್ರಚಾರ ಮಾಡಿದ್ದಾರೆ. ವಿಚಿತ್ರ ಪ್ರಚಾರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಯುಎಂಟಿ ರಾಜಾ ವಿಚಿತ್ರವಾಗಿ ಪ್ರಚಾರ ನಡೆಸಿದ ವೇಲುಮನಿ ಅವರ ಬೆಂಬಲಿಗ. ಕಣ್ಣಿಗೆ ಕಪ್ಪು ಬಣ್ಣದ ಪಟ್ಟಿ ಕಟ್ಟಿಕೊಂಡಿದ್ದರು. ನಂತರ ಮತ್ತೊಂದು ಕಪ್ಪು ಬಟ್ಟೆಯಿಂದ ಇಡೀ ಮುಖವನ್ನ ಮುಚ್ಚಿಕೊಂಡು ಜನಸಂದಣಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿದರು. ಈ ವೇಳೆ ರಾಜಾ ಅವರಿಗೆ ಪಕ್ಷದ ಕೆಲ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಾಥ್ ನೀಡಿದರು. ಈ ರೀತಿ ಸ್ಕೂಟಿ ಚಲಾಯಿಸುವ ಮೂಲಕ ವೇಲುಮನಿ ಅವರ ಕೆಲಸವನ್ನ ಜನರಿಗೆ ತಿಳಿಸಲು ಮುಂದಾಗಿದ್ದರು.

    ಸ್ಕೂಟಿ ಚಾಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಜಾ, ಮೊದಲಿಗೆ ಕಣ್ಣು ಬಿಟ್ಟುಕೊಂಡು ರಸ್ತೆಯಲ್ಲಿ ತಿರುಗಾಡೋದು ಕಷ್ಟವಾಗಿತ್ತು. ಆದ್ರೆ ಇಂದು ಕಣ್ಮುಚ್ಚಿ ಸ್ಕೂಟಿ ಚಲಾಯಿಸಬಹುದಾಗಿದೆ. ವೇಲುಮನಿ ತಮ್ಮ ಅವಧಿಯಲ್ಲಿ ಒಳ್ಳೆಯ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ನೀಡಿದ್ದಾರೆ. ಹಾಗಾಗಿ ಕ್ಷೇತ್ರದ ಪ್ರತಿ ಮತದಾರರು ವೇಲುಮನಿ ಅವರಿಗೆ ವೋಟ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ಅಖಾಡ ರಂಗೇರುತ್ತಿದೆ. ಅಭ್ಯರ್ಥಿಗಳು ಹೊಸ ಹೊಸ ಟೆಕ್ನಿಕ್ ಬಳಸಿ ಮತದಾರರನ್ನು ಸೆಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಹೋಟೆಲ್ ನಲ್ಲಿ ದೋಸೆ ಹಾಕಿದ್ದರು. ಡಿಎಂಕೆ ಅಭ್ಯರ್ಥಿ ಬಟ್ಟೆ ತೊಳೆದಿದ್ದರು. ಮತ್ತೋರ್ವ ಕ್ಯಾಂಡಿಡೇಟ್ ನಡು ರಸ್ತೆಯಲ್ಲಿ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸಿದ್ದರು.

  • ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ಪ್ರಚಾರದ ಅಬ್ಬರ ಕಾವೇರಿದೆ. ಇದರ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ತಿಂಗಳ ಆರಂಭದಲ್ಲಿ ನಡೆದ ದಾಳಿ ವೇಳೆ ಮಮತಾ ಬ್ಯಾನರ್ಜಿ ಎಡ ಕಾಲಿಗೆ ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಎರಡನೇ ಹಂತದಲ್ಲಿ ಮತಚಲಾಯಿಸುವ ನಂದಿಗ್ರಾಮದಲ್ಲಿ ವೀಲ್ ಚೇರ್ ಮೇಲೆ ಕುಳಿತು 8 ಕಿ.ಮೀ ರೋಡ್ ಶೋ ನೆಡೆಸಿದ್ದಾರೆ.

    ಗುರುವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಮಾಜಿ ಸಹಾಯಕ ಸುವೇಂದು ಅಧಿಕಾರಿ ನಡುವೆ ನಡೆದ ಚುನಾವಣಾ ಪ್ರಚಾರದ ಮಹಾಯುದ್ಧವನ್ನು ನೋಡಿದ್ದೇವೆ. ಶೀಘ್ರದಲ್ಲಿಯೇ ಚುನಾವಣೆ ಪ್ರಚಾರ ಮುಕ್ತಾಯಗೊಳ್ಳಲಿದೆ.

    ತೃಣಮೂಲ ಕಾಂಗ್ರೆಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತುಕೊಂಡಿದ್ದರೆ, ಸುತ್ತಲು ಪಕ್ಷದ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ಪಾದಯಾತ್ರೆ ನಡೆಸಿದ್ದಾರೆ.

    ತಿಂಗಳ ಆರಂಭದಲ್ಲಿ, ಮಮತಾ ಬ್ಯಾನರ್ಜಿಯವರು ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ತೆರಳಿದ್ದಾಗ, ಕಾರ್ ಬಾಗಿಲು ತೆರೆದ ತಕ್ಷಣ 4-5 ಮಂದಿ ಬಂದು ಕಾರ್ ಡೋರ್‍ನನ್ನು ತಳ್ಳಿದರು. ಈ ವೇಳೆ ಪೊಲೀಸರ ಭದ್ರತೆ ಕೂಡ ಇರಲಿಲ್ಲ. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದರು.

    ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಜಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಚುನವಣಾ ಆಯೋಗ ಅಮಾನತುಗೊಳಿಸಿತ್ತು. ಮತದಾನ ಸಮಿತಿ ಕೂಡ ದಾಳಿಯನ್ನು ಕಡೆಗಣಿಸಿ ಇದು ಅಪಘಾತ ಎಂದು ಹೇಳಿದ್ದಾರೆ ಎಂದರು.

    ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದ್ದು, ಮೊದಲ ಹಂತದ ಮತದಾನ ಶನಿವಾರ ನಡೆದಿದೆ ಹಾಗೂ ರಾಜ್ಯದಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ಮೇ.2ರಂದು ಇದರ ಫಲಿತಾಂಶ ಹೊರ ಬೀಳಲಿದೆ.

  • ಚುನಾವಣಾ ಪ್ರಚಾರದ ಮಧ್ಯೆಯೂ ಚಹಾ ಎಲೆಗಳನ್ನು ಕಿತ್ತ ಪ್ರಿಯಾಂಕಾ

    ಚುನಾವಣಾ ಪ್ರಚಾರದ ಮಧ್ಯೆಯೂ ಚಹಾ ಎಲೆಗಳನ್ನು ಕಿತ್ತ ಪ್ರಿಯಾಂಕಾ

    ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಟೀ ಎಲೆಗಳನ್ನು ಕಿತ್ತಿದ್ದಾರೆ. ಈ ಫೋಟೋಗಳನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

    ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕಾ ವಾದ್ರಾ ಪ್ರಚಾರದ ಅಂಗವಾಗಿ ಅಲ್ಲಿನ ಆದಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಟೀ ಎಲೆಗಳನ್ನು ಕೊಯ್ದಿದಿದ್ದಾರೆ.

    ಚಹಾ ತೋಟ ಕಾರ್ಮಿಕರ ಜೀವನವು ಸತ್ಯ ಮತ್ತು ಸರಳತೆಯಿಂದ ಕೂಡಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರೊಂದಿಗೆ ಕುಳಿತುಕೊಳ್ಳುವುದು ಅವರ ಕೆಲಸ, ಕುಟುಂಬದ ಯೋಗಕ್ಷೇಮ ಮತ್ತು ಅವರ ಜೀವನದ ಕಷ್ಟಗಳನ್ನು ಅನುಭವ ತಿಳಿದುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿ ಮತ್ತು ಈ ಅನ್ಯೋನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಬರೆದುಕೊಂಡು ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು   ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಚಹಾ ತೋಟದಲ್ಲಿ ಮಹಿಳಾ ಚಹಾ ಕಾರ್ಮಿಕರಿಂದ ಚಹಾ ಎಲೆಗಳನ್ನು ಬಿಡಿಸಿದ್ದಾರೆ ಎಂದು ಬರೆದುಕೊಂಡು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರೀಯಾಂಕಾ ಅವರು ಎಲೆ ಕೀಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಲಿದ್ದು, ಪ್ರಿಯಾಂಕ ಗಾಂಧಿ 2 ದಿನಗಳ ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ವಿಧಾನಸಭಾ ಚುನಾವಣೆ ಮೂರು ಹಂತದಲ್ಲಿ ನಡೆಯಲಿದೆ.

  • ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ಅಹಮದಾಬಾದ್: ಚುನಾವಣೆ ಪ್ರಚಾರದ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗಲೇ ಗುಜರಾತ್ ಸಿಎಂ ವಿಜಯ್ ರೂಪಾನಿ ಕುಸಿದಿದ್ದಾರೆ. ಭಾನುವಾರ ವಡೋದರಾದ ನಿಜಾಮಪುರನಲ್ಲಿ ಮುಖ್ಯಮಂತ್ರಿಗಳು ಎಲೆಕ್ಷನ್ ಕ್ಯಾಂಪನ್ ನಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಸಿಎಂ ಕುಸಿಯುತ್ತಿದ್ದಂತೆ ಅಧಿಕಾರಿಗಳು ಕಾರ್ಯಕ್ರಮವನ್ನ ರದ್ದುಗೊಳಿಸಿ, ವೇದಿಕೆಯಲ್ಲಿಯೇ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳನ್ನ ಅಹಮಾದಾಬಾದ್ ಗೆ ಶಿಫ್ಟ್ ಮಾಡಲಾಗಿದೆ. ಸಿಎಂ ಅವರ ವೈದ್ಯಕೀಯ ವರದಿ ಬಂದಿದ್ದು, ಗಾಬರಿಯಾಗುವಂತಿದಿಲ್ಲ. ಇಸಿಜಿ, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗಿದ್ದು, ಸಿಎಂ ಆರೋಗ್ಯವಾಗಿದ್ದಾರೆ. 24 ಗಂಟೆ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಯು.ಎನ್. ಆಸ್ಪತ್ರೆಯ ಡಾಕ್ಟರ್ ಆರ್.ಕೆ.ಪಟೇಲ್ ಮಾಹಿತಿ ನೀಡಿದ್ದಾರೆ.

    ವಡೋದರಾದ ನಿಜಾಮಪುರನಲ್ಲಿ ಮೂರನೇ ಬಾರಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ವೇದಿಕೆ ಮೇಲೆ ಮತದಾರರನ್ನು ಉದ್ದೇಶಿಸಿ ಮತನಾಡುವಾಗ ಸಿಎಂ ದಿಢೀರ್ ಕುಸಿದರು. ಚುನಾವಣೆ ಹಿನ್ನೆಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಿಎಂ ಕಳೆದ ಎರಡು ದಿನಗಳಿಂದ ಸರಿಯಾಗಿ ವಿಶ್ರಾಂತಿ ಸಹ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆ ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದಿದ್ದಾರೆ ಎಂದು ವರದಿಯಾಗಿದೆ.

    ವಡೋದರ ಸೇರಿದಂತೆ 6 ಮಹಾನಗರ ಪಾಲಿಕೆಗಳಲ್ಲಿ ಫೆಬ್ರವರಿ 21ರಂದು ಚುನಾವಣೆ ನಡೆಯಲಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ ಡಿಸಿಎಂ ನಿತಿನ್ ಪಟೇಲ್ ಹೇಳಿದ್ದಾರೆ.

  • ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಹೈದರಾಬಾದ್: ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದ ತೇಜಸ್ವಿ ಸೂರ್ಯ, ಇದೀಗ ಹೈದಾರಾಬಾದ್‍ನಲ್ಲಿ ಅಸಾದುದ್ದಿನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.

    ಸದಾ ವಿಭಜನೆಯ ಹಾಗೂ ವಿವಾದಾತ್ಮಕ ಹೇಳಿಕೆ ನೀಡುವ ಅಸಾದುದ್ದಿನ್ ಓವೈಸಿ ವಿರುದ್ಧ ಗುಡುಗಿರುವ ತೇಜಸ್ವಿ ಸೂರ್ಯ, ಅವರಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದಿದ್ದಾರೆ. ಅಸಾದುದ್ದಿನ್ ಓವೈಸಿ ಹಾಗೂ ಸಹೋದರ ಅಕ್ಬರುದ್ದಿನ್ ಓವೈಸಿ ವಿಭಜನೆ ಹಾಗೂ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಆಶ್ರಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನೀವು ಇಲ್ಲಿ ಓವೈಸಿಗೆ ಮತ ಹಾಕಿದರೆ ಮುಂದೆ ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಸ್ಲಿಂ ಪ್ರದೇಶಗಳಲ್ಲಿ ಬಲಶಾಲಿಯಾಗುತ್ತಾರೆ. ಓವೈಸಿ ಜಿನ್ನಾನ ಹೊಸ ಅವತಾರ. ಹೀಗಾಗಿ ಅವರನ್ನು ಸೋಲಿಸಲೇಬೇಕು. ನೀವು ಬಿಜೆಪಿಗೆ ಹಾಕುವ ಪ್ರತಿ ಮತ ಭಾರತ, ಹಿಂದುತ್ವಕ್ಕೆ, ಇದರಿಂದ ದೇಶ ಬಲಗೊಳ್ಳಲಿದೆ ಎಂದು ಕರೆ ನೀಡಿದರು.

    ಇದು ನಿಜಾಮರ ಕಾಲಾವಧಿಯಲ್ಲ ಎಂಬುದನ್ನು ನಾನು ಅಸಾದುದ್ದಿನ್ ಹಾಗೂ ಅಕ್ಬರುದ್ದಿನ್ ಅವರಿಗೆ ತಿಳಿಸಲು ಬಯಸುತ್ತೇನೆ. ಇದು ಹಿಂದೂ ಹೃದಯ ಸಾಮ್ರಾಟರಾದ ಪ್ರಧಾನಿ ನರೇಂದ್ರ ಮೋದಿಯವರ ಕಾಲಾವಧಿ. ನೀವಿಲ್ಲಿ ಏನೂ ಅಲ್ಲ ಎಂದು ಕಿಡಿಕಾರಿದರು.

    ಪ್ರಚಾರದುದ್ದಕ್ಕೂ ಹೈದರಾಬಾದ್‍ಗೆ ಭಾಗ್ಯ ನಗರವೆಂದೇ ಸಂಬೋಧಿಸಿದ ತೇಜಸ್ವಿ, ಹೈದರಾಬಾದ್‍ನ್ನು ಭಾಗ್ಯಾನಗರವಾಗಿ ಬದಲಿಸಬೇಕಿದೆ ಎಂದರು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೋರೇಷನ್ ಚುನಾವಣೆ ಡಿಸೆಂಬರ್ 1ರಂದು ನಡೆಯುತ್ತಿದ್ದು, ಇದು ದಕ್ಷಿಣ ಭಾರತದ ಗೇಟ್‍ವೇಯಾಗಿದೆ. ಹೀಗಾಗಿ ಇಂದು ಹೈದರಾಬಾದನ್ನು ಬದಲಿಸೋಣ, ನಾಳೆ ತೆಲಂಗಾಣ, ನಾಡಿದ್ದು ದಕ್ಷಿಣ ಭಾರತವನ್ನು ಬದಲಿಸೋಣ. ಹೈದರಾಬಾದ್ ಚುನಾವಣೆಯನ್ನು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.

  • ಬಿರುಸಿನ ಪ್ರಚಾರದ ನಡುವೆಯೂ ‘ಚಕ್ರವರ್ತಿ’ಯಿಂದ ಮಾಸ್ಕ್ ಜಾಗೃತಿ

    ಬಿರುಸಿನ ಪ್ರಚಾರದ ನಡುವೆಯೂ ‘ಚಕ್ರವರ್ತಿ’ಯಿಂದ ಮಾಸ್ಕ್ ಜಾಗೃತಿ

    ಬೆಂಗಳೂರು: ಆರ್‍ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮತ ಬೇಟೆಗಿಳಿದಿದ್ದಾರೆ. ಮತ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಈ ಮಧ್ಯೆ ನಟ ದರ್ಶನ್ ಜಾಗೃತಿ ಕೂಡ ಮೂಡಿಸಿದ್ದಾರೆ.

    ಹೌದು. ತೆರೆದ ವಾಹನದಲ್ಲಿ ಮತಯಾಚನೆ ಮಾಡುತ್ತಿರುವ ‘ಸಾರಥಿ’ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ನೋಡಲು ಜನ ಕಟ್ಟಡಗಳ ಮೇಲೆ ಕುಳಿತಿದ್ದು, ಅಲ್ಲಿಂದಲೇ ‘ಗಜ’ನಿಗೆ ಜೈಕಾರ ಹಾಕುತ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ‘ದಾಸ’ ಮಾಸ್ಕ್ ಹಾಕಿಕೊಳ್ಳಿ ಎಂದು ಸನ್ನೆಯ ಮೂಲಕವೇ ಕೇಳಿಕೊಂಡಿದ್ದಾರೆ.

    ಇತ್ತ ‘ಭೂಪತಿ’ಗೆ ಯಶವಂತಪುರದ ಬಿ.ಕೆ.ನಗರದಲ್ಲಿ ಸೇಬಿನ ಹಾರ ರೆಡಿಯಾಗಿದೆ. ಜೆಸಿಬಿ ಮೂಲಕ 200 ಕೆಜಿ ತೂಕದ ಸೇಬಿನ ಹಾರವನ್ನು ಅಭಿಮಾನಿಗಳು ದರ್ಶನ್ ಗೆ ಹಾಕಲಿದ್ದಾರೆ. ರೋಡ್ ಶೋ ವೇಳೆ ದರ್ಶನ್ ಹಾಗೂ ಮುನಿರತ್ನ ಅವರಿಗೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಸಾಥ್ ನೀಡಿದ್ದಾರೆ.

    ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಮುನಿರತ್ನ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಅವರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ. ಅವರು ನನ್ನ ಅತ್ಯಂತ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

  • ನನಗೆ 70 ವರ್ಷ ವಯಸ್ಸಾಗಿದೆ- ಗೋವಿಂದ್ ಕಾರಜೋಳ ಕಣ್ಣೀರು

    ನನಗೆ 70 ವರ್ಷ ವಯಸ್ಸಾಗಿದೆ- ಗೋವಿಂದ್ ಕಾರಜೋಳ ಕಣ್ಣೀರು

    – ನಾನು, ನನ್ನ ಕುಟುಂಬ ಕೊರೊನಾದಿಂದ ಬಳಲ್ತಿದ್ದೇವೆ

    ಬೆಂಗಳೂರು: ನನಗೆ 70 ವರ್ಷ ವಯಸ್ಸಾಗಿದೆ. ನಾನು ಹಾಗೂ ನನ್ನ ಕುಟುಂಬದವರು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದೇವೆ. 600, 700 ಕಿ.ಮೀ.ಓಡಾಡಲು ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕಣ್ಣೀರು ಹಾಕಿದ್ದಾರೆ.

    ಚುನಾವಣಾ ಪ್ರಚಾರ ಮಾಡುತ್ತಾರೆ, ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ತಮ್ಮ ಕ್ಷೇತ್ರದ ಜನರ ಬಳಿ ಹೋಗುವುದಿಲ್ಲ ಎಂಬುದರ ಕುರಿತು ಕಾರಜೋಳ ಪ್ರತಿಕ್ರಿಯಿಸಿದ್ದು, ನನಗೆ 70 ವರ್ಷ. ನಾನು ಇಷ್ಟು ವರ್ಷ ಯಾವ ರೀತಿ ಕೆಲಸ ಮಾಡಿದ್ದೇನೆ, ಕೊರೊನಾ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ತಿಳಿದಿದೆ. ನಾನು, ನನ್ನ ಕುಟುಂಬ ನಿರಂತರವಾಗಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ 600-700 ಕಿ.ಮೀ. ಹೋಗಲು ಆಗಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನನ್ನ ಪರಿಸ್ಥಿತಿ ಅರಿತು ಮುಖ್ಯಮಂತ್ರಿಗಳು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ರಾಜ್ಯ ಪ್ರವಾಸಕ್ಕೆ ಕಳುಹಿಸಿದ್ದಾರೆ. ನನ್ನ ಕುಟುಂಬದ ಸದಸ್ಯರು ಕೊರೊನಾದಿಂದ ಬಳಲುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಹೇಳುತಿದ್ದೇನೆ. ದಯಮಾಡಿ ಒಂದು ಘಟನೆಯನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಅಳೆಯಬೇಡಿ ಎಂದು ಕೇಳಿಕೊಂಡಿದ್ದಾರೆ.

    ಶಿರಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ವಿಚಾರದ ಕುರಿತು ಮಾತನಾಡಿದ ಅವರು, ಅಸಹಾಯಕನಾಗಿ ಶಿರಾಗೆ ಹೋಗಿ ಬಂದಿದ್ದೇನೆ. ಬಂದು ಮುಖ ತೋರಿಸಿ ಎಂದು ಅಭ್ಯರ್ಥಿ ಮನವಿ ಮಾಡಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಬಂದೆ. ಅಸಹಾಯಕನಾಗಿ ಹೋಗಿ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇಡೀ ಸಮಸ್ಯೆಯನ್ನು ಕಂದಾಯ ಸಚಿವರು ನೋಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಸಹ ನಿನ್ನೆ ಸಿಎಂ ಜೊತೆಗೆ ಮಾತಾಡಿದ್ದಾರೆ. ಸಿಎಂ ಸಮಸ್ಯೆ ಗಮನಿಸುತ್ತಿದ್ದಾರೆ. ಅಧಿಕಾರಿಗಳು ಸಹ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆಗೆ ಜನರು ಸಹಕಾರ ಮಾಡಬೇಕು. ಸರ್ಕಾರ ಜನರ ಜೊತೆಗೆ ಇದೆ. ಎಲ್ಲ ರೀತಿಯ ಸಹಕಾರ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಪ್ರವಾಹದ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಮನೆ ಕಳೆದುಕೊಂಡವರ ಸಮೀಕ್ಷೆ ಮಾಡಿ, ಮನೆ ಕೊಡಲು ಸೂಚನೆ ಕೊಟ್ಟಿದ್ದೇವೆ. ಮಳೆ ನಿಂತ ಮೇಲೂ ಮನೆ ಬೀಳುವ ಸಾಧ್ಯತೆ ಇದೆ. ಈ ಕುರಿತು ಎಲ್ಲ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಕೊರೊನಾ ಸಂಕಷ್ಟ ಕಾಲದಲ್ಲಿ ಚುನಾವಣಾ ತಾಲೀಮು- ಬದಲಾಯ್ತು ಪ್ರಚಾರ ತಂತ್ರ

    ಕೊರೊನಾ ಸಂಕಷ್ಟ ಕಾಲದಲ್ಲಿ ಚುನಾವಣಾ ತಾಲೀಮು- ಬದಲಾಯ್ತು ಪ್ರಚಾರ ತಂತ್ರ

    ಕೋಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಂಕಷ್ಟದ ನಡುವೆ ಚುನಾವಣಾ ತಾಲೀಮು ಆರಂಭವಾಗಿದ್ದು, ಬೃಹತ್ ವರ್ಚುವಲ್ ಚುನಾವಣಾ ರ‍್ಯಾಲಿಗಳು ನಡೆಸುವ ಬಗ್ಗೆ ಚಿಂತನೆಗಳು ಶುರುವಾಗಿದೆ.

    ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಜುಲೈ 21ರಂದು ಪ್ರತಿವರ್ಷ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದು, ಅಂದು ಬೃಹತ್ ಸಮಾವೇಶ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಂಕಷ್ಟ ಹಿನ್ನೆಲೆ ವರ್ಚುವಲ್ ತಂತ್ರಜ್ಞಾನದ ಮೂಲಕವೇ ಹುತಾತ್ಮರ ದಿನಾಚರಣೆ ಆಚರಿಸಲು ತಿರ್ಮಾನಿಸಿದೆ. ಅದೇ ಕಾರ್ಯಕ್ರಮದಲ್ಲಿ 2021ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಚಾಲನೆ ಸಿಗಲಿದೆ ಎನ್ನಲಾಗಿದೆ.

    ಜುಲೈ 21ರಂದು ಮಧ್ಯಾಹ್ನ ಒಂದು ಗಂಟೆಗೆ ಪ್ರತಿ ಬೂತ್ ಮಟ್ಟದಲ್ಲಿ 30 ಕಾರ್ಯಕರ್ತರು ಸೇರಿ ಧ್ವಜ ಹಾರಿಸುವ ಮೂಲಕ ಹುತಾತ್ಮರ ಗೌರವ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಳಿಕ ಎರಡು ಗಂಟೆಯಿಂದ ಮೂರು ಗಂಟೆವರೆಗೂ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 80 ಸಾವಿರ ಬೂತ್‍ಗಳಿದ್ದು ಸುಮಾರು 2.5 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಬಿಜೆಪಿ ಸಕ್ರಿಯವಾಗಿ ಕ್ಯಾಂಪೇನ್ ಆರಂಭಿಸಿದೆ. ಇತ್ತಿಚೇಗೆ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಜನ ಸಂವಾದ ಹೆಸರಿನಲ್ಲಿ ವರ್ಚುವಲ್ ರ‍್ಯಾಲಿ ನಡೆಸಿದ್ದರು. ಈ ಡಿಜಿಟಲ್ ರ‍್ಯಾಲಿಗಾಗಿ ಪಶ್ಚಿಮ ಬಂಗಾಳದ ಪ್ರಮುಖ ಸ್ಥಳಗಳಲ್ಲಿ 70,000 ಟೆಲಿವಿಷನ್ ಸೆಟ್‍ಗಳನ್ನು ಹಾಕುವ ಮೂಲಕ ಲಕ್ಷಾಂತರ ಜನರು ಭಾಷಣ ಕೇಳಲು ಅನುವು ಮಾಡಿಕೊಡಲಾಗಿತ್ತು.

    ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚುವಲ್ ರ‍್ಯಾಲಿಗಳು ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಪೂರ್ವ ತಯಾರಿ ಆರಂಭಿಸಿವೆ.

  • ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

    ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

    ಬೆಳಗಾವಿ: ಚುನಾವಣಾ ಪ್ರಚಾರದಲ್ಲಿ ಸಂದರ್ಭದಲ್ಲಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪರ ಮತಯಾಚಿಸುವ ಬದಲು ಬಾಯಿ ತಪ್ಪಿ ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಹೇಳಿದ ಪ್ರಸಂಗ ನಡೆಯಿತು.

    ನಾವು ಕಾಂಗ್ರೆಸ್ ಪಕ್ಷ ಬಿಡದೇ ಇದ್ದರೆ ರಾಜಕೀಯವಾಗಿ ನಾವು ನಿರ್ನಾಮವಾಗುತ್ತಿದ್ದೆವು. ಮೊದಲಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು. ಹೀಗಾಗಿ ಪದೇ, ಪದೇ ಕಾಂಗ್ರೆಸ್ ಅಂತ ಬಾಯಿ ತಪ್ಪಿ ಬಂತು. ಕಾಕಾ ನನಗೆ ಬಿಜೆಪಿ ಅಂತ ಹೇಳಿದ್ದು ಒಳ್ಳೆಯದಾಯಿತು. ಆ ಪಕ್ಷಕ್ಕಾಗಿ ನಾನು ಬಹಳ ದುಡಿದಿದ್ದೇನೆ. ಆದರೆ ಆ ಪಕ್ಷದಿಂದ ನನಗೆ ಅನ್ಯಾಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಕಾರ್ಯಕರ್ತರ ಪ್ರಚಾರ ವೈಖರಿ ಕಂಡು ಖುಷಿ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ, ನಾನು ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ ಎಂದು ಮಾತೃ ಪಕ್ಷವನ್ನು ಇದೇ ವೇಳೆ ಸಾಹುಕಾರ್ ನೆನಪಿಸಿಕೊಂಡರು.

    ನಾನು ಕಾಂಗ್ರೆಸ್ ಪಕ್ಷ ಬಿಟ್ಟ ಕಾರಣವನ್ನು ನಾನು ಹೇಳುವುದಕ್ಕಿಂತಲೂ, ಟಿವಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿ ತಿಳಿದುಕೊಂಡಿದ್ದೀರಿ. ನನಗೂ ಸಹ ದುಃಖವಾಗುತ್ತಿದೆ. ಆದರೆ ರಾಜಕೀಯವಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

  • ಸುಧಾಕರ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ – ಚುನಾವಣಾ ಪ್ರಚಾರಕ್ಕೆ ಚಾಲನೆ

    ಸುಧಾಕರ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ – ಚುನಾವಣಾ ಪ್ರಚಾರಕ್ಕೆ ಚಾಲನೆ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

    ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಬಳಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮುಖಂಡರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅನರ್ಹ ಶಾಸಕ ಡಾ ಕೆ ಸುಧಾಕರ್ ವಿರುದ್ಧ ಮಾಜಿ ಸಚಿವರಾದ ಶಿವಶಂಕರರೆಡ್ಡಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು ಉಪಚುನಾವಣಾ ಕಣ ಇಂದಿನಿಂದ ರಂಗೇರಿದೆ.

    ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಕೆ ನಂತರ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಶಿವಶಂಕರರೆಡ್ಡಿ, ಪಕ್ಷ ದ್ರೋಹ ಮಾಡಿದ ಅನರ್ಹ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ದೋಖಾ ಮಾಡಿ ಈಗ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಈ ಚುನಾವಣೆ ಸುಧಾಕರ್ ಹಾಗೂ ಇತರರ ನಡುವಿನ ಚುನಾವಣೆಯಲ್ಲ. ನ್ಯಾಯ, ಅನ್ಯಾಯ, ಧರ್ಮ, ಅಧರ್ಮದ ನಡುವಿನ ಚುನಾವಣೆ ಇದಾಗಿದ್ದು, ಈ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರರಿಗೆ ಮೋಸ ಮಾಡಿದ ಸುಧಾಕರ್ ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ, ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ಐದಾರು ಮಂದಿ ಆಕಾಂಕ್ಷಿಗಳಿದ್ದರೂ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.