Tag: Election 2019

  • 56 ಇಂಚಿನ ಎದೆಯುಳ್ಳ ಮೋದಿಜಿ ನಿಮ್ಮಲ್ಲಿ ಧೈರ್ಯವಿದ್ರೆ ಸಾಲಮನ್ನಾ ಮಾಡಿ ತೋರಿಸಿ: ರಾಗಾ ಚಾಲೆಂಜ್

    56 ಇಂಚಿನ ಎದೆಯುಳ್ಳ ಮೋದಿಜಿ ನಿಮ್ಮಲ್ಲಿ ಧೈರ್ಯವಿದ್ರೆ ಸಾಲಮನ್ನಾ ಮಾಡಿ ತೋರಿಸಿ: ರಾಗಾ ಚಾಲೆಂಜ್

    – ಚೌಕಿದಾರ ಅಲ್ಲ, ಎಲ್ಲ ಭ್ರಷ್ಟತೆಯಲ್ಲೂ ಭಾಗೀದಾರ
    – ರಫೆಲ್ ಡೀಲ್ ನಲ್ಲಿ ಕೋಟಿ ಕೋಟಿ ಹಣ ಗುಳಂ

    ಬೀದರ್: ನೀವು ಮಾಡುವ ದೊಡ್ಡ ದೊಡ್ಡ ಭಾಷಣಗಳಲ್ಲಿರುವ ಪ್ರತಿಯೊಂದು ಶಬ್ದವೂ ಸತ್ಯವಾಗಿದ್ದರೆ ನಾನು ನಿಮಗಿಂದು ಚಾಲೆಂಜ್ ಕೊಡುತ್ತಿದ್ದೇನೆ. ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ನಿಮ್ಮವರೇ ತಮ್ಮ ಪ್ರಣಾಳಿಕೆಯಲ್ಲಿ ಸಾಲಮನ್ನಾ ಮಾಡ್ತೀವಿ ಅಂತಾ ಬರೆದುಕೊಂಡಿದ್ದರು. ನಿಮ್ಮಲ್ಲಿ ಧೈರ್ಯ, 56 ಇಂಚಿನ ಎದೆಯುಳ್ಳ ನೀವು ಕರ್ನಾಟಕದ ಸಾಲಮನ್ನಾದ ಅರ್ಧ ಹಣವನ್ನು ಕೊಟ್ಟು ತೋರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಬೀದರ್ ನಲ್ಲಿ ನಡೆದ ಜನಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ರೈತರ ಸಾಲಮನ್ನಾ ಮಾಡಲ್ಲ. ಭಾರತದ ಅತಿ ಶ್ರೀಮಂತ ವ್ಯಕ್ತಿಗಳ 2.5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತೀರಿ. ಕರ್ನಾಟಕದ ರೈತರಿಗಾಗಿ ಒಂದು ರೂಪಾಯಿ ನೀವು ಕೊಡುವುದಿಲ್ಲ ಎಂದು ಮೋದಿ ಅವರನ್ನು ಟೀಕಿಸಿದರು.

    ಹುಸಿ ಭರವಸೆ:
    2014ರ ಲೋಕಸಭಾ ಚುನಾವಣೆ ಮುನ್ನ 2 ಕೋಟಿ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡಿದ್ದರು. ಆದ್ರೆ ಇಂದು ಪಕೋಡಾ ಮಾರಾಟ ಮಾಡಿ ಅಂತಾ ಸಲಹೆ ನೀಡುತ್ತಿದ್ದಾರೆ. ಎಲ್ಲಿಯೇ ಹೋದರು ಏನಾದ್ರೂ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದರು. ಆದ್ರೆ ಇದೂವರೆಗೂ ಯಾವ ವ್ಯಕ್ತಿಗೂ 10 ರೂ. ಸಿಕ್ಕಿಲ್ಲ. ನೆರೆಯ ಚೀನಾ ಸರ್ಕಾರ ಗಂಟೆಗೆ 24 ಸಾವಿರ ನೌಕರರಿಗೆ ಉದ್ಯೋಗ ನೀಡುತ್ತಿದ್ದರೆ ಮೋದಿಯವರು ಗಂಟೆಗೆ 450 ಜನರಿಗೆ ಉದ್ಯೋಗ ಕೊಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಭಾಷಣ ಮಾಡುತ್ತೀರಿ ಅಲ್ಲಿಯ ಆಡಳಿತವನ್ನು ನೋಡಿ ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.

    ನನ್ನನ್ನು ಪ್ರಧಾನಿ ಮಂತ್ರಿ ಮಾಡಬೇಡಿ, ದೇಶದ ಚೌಕಿದಾರರನ್ನಾಗಿ ಮಾಡಿ ಎಂದು ಮೋದಿ ಮೇಲ್ನೋಟಕ್ಕೆ ಹೇಳ್ತಾರೆ. ರಫೆಲ್ ಡೀಲ್‍ನಲ್ಲಿಯೂ ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಕರ್ನಾಟಕದ ಬೆಂಗಳೂರಿನಲ್ಲಿಯೇ ಯುದ್ಧ ವಿಮಾನಗಳನ್ನು ತಯಾರಿಸಬಹುದಿತ್ತು. ಆದರೂ ದೂರದ ಫ್ರಾನ್ಸ್ ದೇಶದಿಂದ ಯುದ್ಧ ವಿಮಾನ ಖರೀದಿಸಿದರು. ಒಂದು ವೇಳೆ ಯುದ್ಧ ವಿಮಾನಗಳ ತಯಾರಿಕೆ ನಮ್ಮ ದೇಶದಲ್ಲಿ ನಡೆದಿದ್ದರೆ, ಏರೋನಾಟಿಕಲ್ ಇಂಜೀನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

    ಎಚ್‍ಎಎಲ್ ನಲ್ಲಿ 524 ಕೋಟಿ ರೂ. ವೆಚ್ಚದಲ್ಲಿ ಒಂದು ಯುದ್ಧ ವಿಮಾನ ತಯಾರಿಸಲಾಗುತ್ತಿತ್ತು. ನರೇಂದ್ರ ಮೋದಿ ಬಂದ ಮೇಲೆ ಒಪ್ಪಂದವನ್ನು ರದ್ದುಗೊಳಿಸಿ, ಪ್ಯಾರಿಸ್ ಗೆ ತೆರಳಿ ಒಪ್ಪಂದ ಮಾಡಿಕೊಂಡು ಬಂದರು. ಪ್ಯಾರಿಸ್ ಒಂದು ಯುದ್ಧ ವಿಮಾನಕ್ಕೆ 16 ಸಾವಿರ ಕೋಟಿ ರೂ.ಗೆ ಭಾರತೀಯ ಚೌಕಿದಾರ ಒಪ್ಪಂದ ಮಾಡಿಕೊಂಡು ಬಂದರು. ರಫೆಲ್ ಒಪ್ಪಂದ ಮಾಡಿಕೊಂಡ ಬಂದ ಬಳಿಕ ಉತ್ಪದನಾ ಕೆಲಸವನ್ನು 10 ದಿನಗಳ ಹಿಂದೆ ಹುಟ್ಟಿದ್ದ ಅಂಬಾನಿ ಕಂಪೆನಿಗೆ ನೀಡಿದ್ರು ಎಂದು ಕಿಡಿಕಾರಿದರು.

    ಮೋದಿಗೆ ಧೈರ್ಯ ಇಲ್ಲ:
    ಸಂಸತ್ತಿನಲ್ಲಿ ನಾನು ಮೋದಿಯವರ ಮುಂದೆಯೇ ರೆಫೆಲ್ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೇನೆ. ಯಾರು ಕಳ್ಳತನ ಮಾಡುತ್ತಾರೊ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲ್ಲ. ನಾನು ಆರೋಪಗಳನ್ನು ಮಾಡುತ್ತಿದ್ದರೆ, ಮೋದಿ ನನ್ನನ್ನು ನೋಡದೇ ಭಯದಿಂದ ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗಡೆ, ಎಡ-ಬಲ ನೋಡುತ್ತಿದ್ದರೆ ವಿನಃ ನನ್ನ ಕಣ್ಣುಗಳನ್ನು ನೋಡಲಿಲ್ಲ. ಕಾರಣ ಇಷ್ಟೇ, ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಎಲ್ಲದರಲ್ಲಿಯೂ ಭಾಗೀದಾರರೂ ಹೌದು. ನಿಮ್ಮೆಲ್ಲರ ಹಣವನ್ನು ಕದ್ದು, ಅನಿಲ್ ಅಂಬಾನಿಗೆ ನೀಡಿದ್ದಾರೆ. ನಿಮ್ಮ ಉದ್ಯೋಗ, ಕನಸು, ಹಣವನ್ನೆಲ್ಲಾ ತೆಗೆದುಕೊಂಡು ಹೋಗಿ ಗೆಳೆಯ ಅಂಬಾನಿಗೆ ನೀಡಿದರು. ರಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ನನ್ನ ಮಧ್ಯೆ ಚರ್ಚೆ ನಡೆಯಲಿ. ನನ್ನ ಮಾತುಗಳಿಗೆ ಉತ್ತರಿಸಲು ಮೋದಿ ಅವರಿಂದ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ನಮ್ಮೆಲ್ಲಾ ಆರೋಪಗಳಿಗೆ ಉತ್ತರಿಸಲು ಮೋದಿ ಸೇರಿದಂತೆ ಹಿಂದೇಟು ಹಾಕುತ್ತಿದ್ದಾರೆ. ಚೌಕಿದಾರರಾಗಿರುವ ಮೋದಿ ಎಲ್ಲದರಲ್ಲಿಯೂ ಭಾಗಿದಾರ ಆಗಿರೋದ್ರಿಂದ ಅವರ ಬಳಿ ನಮ್ಮ ಪ್ರಶ್ನೆಗೆ ಉತ್ತರವಿಲ್ಲ. ಕಾಂಗ್ರೆಸ್ ಸರ್ಕಾರ ನಿಮಗಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಕಲಂ ಜಾರಿಗೆ ತಂದಿದೆ. ಈ ಮೊದಲು ಇದೇ ಬಿಜೆಪಿ ನಾಯಕರು ಈ ಕಲಂ ಅನ್ನು ವಿರೋಧಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಲಕ್ನೋ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎಸ್‍ಪಿ (ಸಮಾಜಾವಾದಿ ಪಕ್ಷ) ಮತ್ತು ಬಿಎಸ್‍ಪಿ (ಬಹುಜನ ಸಮಾಜಾವಾದಿ ಪಕ್ಷ) ಮೂವರು ಒಂದಾದರೂ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮೀರತ್‍ನ ಸುಭಾರತಿ ವಿಶ್ವವಿದ್ಯಾಲಯದಲ್ಲಿ ನಡೆದ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣೆಯಲ್ಲಿನ ವಿರೋಧ ಪಕ್ಷಗಳು ಏನೇ ಕಸರತ್ತು ಮಾಡಿದ್ರೂ ಗೆಲುವು ನಮ್ಮದೇ ಆಗಲಿದೆ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಜನಪರ ಯೋಜನೆಗಳು ಎಲ್ಲ ವರ್ಗದವರಿಗೂ ತಲುಪಿದ್ದು, ಹಾಗಾಗಿ ನಾವೇ ಬಹುಮತ ಪಡೆಯಲಿದ್ದೇವೆ. ವಿರೋಧ ಪಕ್ಷಗಳು ರಚಿಸಿರುವ ಮಹಾಘಟ ಬಂಧನ್ ಬಗ್ಗೆ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.

    ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಾಗಿದೆ ಏನು ಮಾಡೋದು ಎಂದು ಕೆಲವು ಕಾರ್ಯಕರ್ತರು ನನ್ನನ್ನು ಪ್ರಶ್ನಿಸುತ್ತಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಯುವಕರು ಕೈ ಕೈ ಹಿಡಿದುಕೊಂಡು ಚುನಾವಣೆ ಎದುರಿಸಿದರು. ಪರಿಣಾಮ ಬಿಜೆಪಿ 300 ಅಧಿಕ ಕ್ಷೇತ್ರಗಳನ್ನು ಗೆಲುವನ್ನು ಸಾಧಿಸಿದ್ದೇವೆ. ಈ ಬಾರಿ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಮೂವರು ಒಂದಾದ್ರೂ ಚುನಾವಣೆ 74ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಮಿತ್ ಶಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ, ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿಯೂ ಚುನಾವಣೆ ಪ್ರಚಾರ, ಮೋದಿ ಮತ್ತು ಯೋಗಿ ಸರ್ಕಾರದ ಯೋಜನಗೆಗಳ ಕೊನೆಯ ವರ್ಗದ ಜನರಿಗೆ ತಿಳಿ ಹೇಳುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಡೆಡ್‍ಲೈನ್- ಅಮಿತ್ ಶಾ ಖಡಕ್ ಸೂಚನೆ

    ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಡೆಡ್‍ಲೈನ್- ಅಮಿತ್ ಶಾ ಖಡಕ್ ಸೂಚನೆ

    -ನವೆಂಬರ್ ಒಳಗೆ ಉರುಳುತ್ತಾ ದೋಸ್ತಿ ಸರ್ಕಾರ..?

    ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯ ಹಲವು ಬದಲಾಣೆಗಳನ್ನು ಕಂಡಿದೆ. ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದ್ದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಇತ್ತ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಒಳಗಾಗಿ ದೋಸ್ತಿ ಸರ್ಕಾರ ಬೀಳಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿವೆ.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹೆಚ್ಚು ದಿನಗಳಿದ್ದರೆ, ನಮಗೆ ಉಳಿಗಾಲವಿಲ್ಲ. ಲೋಕಸಭೆ ಚುನಾವಣೆ ತನಕ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇರಬಾರದು. ಹಾಗಾಗಿ ಕೈ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನವೆಂಬರ್ ವರೆಗೂ ಮಾಡಿ. ದೋಸ್ತಿ ಸರ್ಕಾರ ಇದ್ದುಕೊಂಡು ಲೋಕಸಭೆ ಚುನಾವಣೆಗೆ ಹೋದರೆ ಕರ್ನಾಟಕದಲ್ಲಿ ನಮಗೆ 11 ರಿಂದ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ನಮ್ಮ ಸರ್ಕಾರ ಬರುವ ರೀತಿ ಆಪರೇಷನ್ ನಡೆಸಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೇವಲ ಲಿಂಗಾಯತ ಶಾಸಕರ ಬಗ್ಗೆ ಮಾತ್ರ ಗಮನ ಕೊಡದೇ ಹಿಂದುಳಿದ ವರ್ಗಗಳ ಶಾಸಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸಿ. ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಶಾಸಕರು ನಿಮ್ಮ ಗುರಿ. ಸಚಿವ ಸಂಪುಟದ ಬಳಿಕ ಉಂಟಾಗುವ ಅಸಮಾಧಾನ ಲಾಭವನ್ನು ನಯವಾಗಿ ನಾವು ಪಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಂದೇಶ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೆಲವು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಈ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಆಪರೇಷನ್ ಕಮಲ ನಡೆಸುವ ಅಗತ್ಯ ನಮಗಿಲ್ಲ. ಆರು ತಿಂಗಳಲ್ಲಿಯೇ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಬಿ.ಎಸ್‍ಯಡಿಯೂರಪ್ಪ ಮಾತನಾಡಿ, ನಾವು ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ವಿರೋಧ ಪಕ್ಷದಲ್ಲಿ ಇದ್ದಕೊಂಡೇ ನಾವು ಕೆಲಸ ಮಾಡುತ್ತೇವೆ ಅಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ನವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿದ್ದು, ಗೆಲುವು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಬಿಜೆಪಿ ದೇಶದಲ್ಲಿಯ ಮಂದಿರ, ಮಠ, ಆಶ್ರಮಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಬಿಜೆಪಿ ಕಚೇರಿಯಲ್ಲಿ ಸಭೆಗಳು ನಡೆಯುತ್ತಿವೆ. ಹಿಂದೂ ವೋಟ್ ಗಳನ್ನು ಕೇಂದ್ರೀಕರಿಸಿರುವ ಬಿಜೆಪಿ ಚುನಾವಣೆ ಸಮಯದಲ್ಲಿ ಮತಗಳ ವಿಭಜನೆಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಕಚೇರಿಯಲ್ಲಿ ಇದೇ ತಿಂಗಳು ಸಭೆ ನಡೆಯಲಿವೆ ಎನ್ನಲಾಗುತ್ತಿದೆ. ಸಭೆಗೂ ಮುನ್ನ ಬಿಜೆಪಿ ನಾಯಕರು ತಮ್ಮ ರಾಜ್ಯದಲ್ಲಿ ಬರುವ ಪ್ರಸಿದ್ಧ ಮಠ, ದೇವಾಲಯ, ಆಶ್ರಮ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಣತಂತ್ರವೇನು?:
    ಎಲ್ಲ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳು ದೊರೆತ ಮೇಲೆ ಸ್ಥಳಕ್ಕನುಗುಣವಾಗಿ ವಿಭಾಗಿಸುವುದು. ಬೂತ್ ಗಳಿಗೆ ಅನುಗುಣವಾಗಿ ಧಾರ್ಮಿಕ ಕೇಂದ್ರಗಳ ವಿಂಗಡನೆ ಬಳಿಕ ಅಲ್ಲಿಯ ಅರ್ಚಕ ಅಥವಾ ಪ್ರಧಾನ ವ್ಯವಸ್ಥಾಪಕ ಅಥವಾ ಆಡಳಿತ ಮಂಡಳಿ ಮುಖಂಡರ ಫೋನ್ ನಂಬರ್ ಕಲೆ ಹಾಕುವುದು. ಎಲ್ಲ ಧಾರ್ಮಿಕ ಕೇಂದ್ರಗಳ ಪ್ರಮುಖರ ಫೋನ್ ನಂಬರ್ ಸಂಗ್ರಹಿಸಿದ ಬಳಿಕ ಎಲ್ಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಬಿಜೆಪಿ ಈಗಾಗಲೇ 29 ಲಕ್ಷ ಕಾರ್ಯಕರ್ತರನ್ನ ನೇಮಿಸಿದೆ. ಈ ಎಲ್ಲ ಕಾರ್ಯಕರ್ತರು ತಮ್ಮ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕೇಂದ್ರಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೇ ಆಗಸ್ಟ್ 16ರಿಂದ 25ರವರೆಗೆ ಹಂತ ಹಂತವಾಗಿ ಎಲ್ಲ ಕಾರ್ಯಕರ್ತರೊಂದಿಗೆ ಬಿಜೆಪಿ ಹಿರಿಯ ನಾಯಕರು ಬೈಟಕ್ (ಸಭೆ) ನಡೆಸಲಿದ್ದಾರೆ ಎಂದು ಹೇಳಲಾಗಿದೆ.

    ಈ ಬೈಟಕ್ ನಲ್ಲಿ ಎಲ್ಲ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಎಲ್ಲ ಕಾರ್ಯಕರ್ತರನ್ನು ಬೂತ್ ಮಟ್ಟ, ತಾಲೂಕು, ಜಿಲ್ಲಾವಾರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡನೆಯಾದ ತಂಡಗಳಿಗೆ ಪಕ್ಷವೇ ವಿವಿಧ ಕೋಡ್‍ಗಳನ್ನು ನೀಡಲಿದೆ. ಕೋಡ್ ಗಳಿಗೆ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

  • 2019ರ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು: ಕಂಗನಾ ರಣಾವತ್

    2019ರ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು: ಕಂಗನಾ ರಣಾವತ್

    ಮುಂಬೈ: 2019ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಗೆಲ್ಲಬೇಕು ಅಂತ ಬಾಲಿವುಡ್ ನಟಿ ಕ್ವೀನ್ ಕಂಗನಾ ರಣಾವತ್ ಹೇಳಿದ್ದಾರೆ.

    ದೇಶದ ಅಭಿವೃದ್ಧಿಗೆ 5 ವರ್ಷ ಸಾಕಾಗಲ್ಲ. ಇನ್ನಷ್ಟು ವರ್ಷಗಳು ಬೇಕು. ಹಾಗಾಗಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತವಾದ ವ್ಯಕ್ತಿ ಅಂತ ಕಂಗನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗಷ್ಟೇ ಕಂಗನಾ ನಾನು ಪ್ರಧಾನಿಯವರ ಬಹುದೊಡ್ಡ ಅಭಿಮಾನಿ ಅವರ ಯಶಸ್ವಿ ಜೀವನ ನಮಗೆ ರೋಲ್ ಮಾಡೆಲ್ ಅಂತಲೂ ಹೇಳಿದ್ದರು.

    ಪ್ರಧಾನಿ ಮೋದಿಯವರ ಬಾಲ್ಯ ಆಧಾರಿತ ‘ಚಲೋ ಜೀತೆ ಹೈಂ’ ಕಿರುಚಿತ್ರ ಪ್ರದರ್ಶನದಲ್ಲಿ ಕಂಗನಾ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಇಂದು ಈ ಸ್ಥಾನಕ್ಕೆ ತಲುಪಿದ್ದು, ತಂದೆ-ತಾಯಿಯ ಹೆಸರಿನಿಂದಲ್ಲ. ತಮ್ಮ ಸತತ ಪರಿಶ್ರಮ, ಹೋರಾಟದಿಂದ ಇಂದು ದೇಶದ ಪ್ರಧಾನಿಗಳಾಗಿದ್ದಾರೆ. ಕಿರುಚಿತ್ರ ಕೇವಲ ಮೋದಿಯವರ ಇಡೀ ಜೀವನದ ಒಂದು ಸಣ್ಣ ತುಣುಕಾಗಿದ್ದು, ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ.

    ಮಂಗೇಶ್ ಹದಿವಾಲಾ ನಿರ್ದೇಶನದಲ್ಲಿ ಕಿರುಚಿತ್ರ ಮೂಡಿಬಂದಿದೆ. ಇದೇ ಕಿರುಚಿತ್ರ ಶೋನಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಹುಲಶನ್ ಗ್ರೋವರ್, ಅಮಿಷಾ ಪಟೇಲ್ ಮತ್ತು ಸಂಜಯ್ ಖಾನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಉದ್ಯಮಿ ಮುಖೇಶ್ ಅಂಬಾನಿ ಸಹ ಭಾಗಿಯಾಗಿ, ಚಿತ್ರ ಜನರಿಗೆ ಪ್ರೇರಣೆ ಆಗಲಿದೆ ಎಂದು ತಿಳಿಸಿದರು.

  • ಸುದೀಪ್‍ರನ್ನು ಭೇಟಿ ಮಾಡಿದ ಶಾಸಕ ಶ್ರೀರಾಮುಲು

    ಸುದೀಪ್‍ರನ್ನು ಭೇಟಿ ಮಾಡಿದ ಶಾಸಕ ಶ್ರೀರಾಮುಲು

    ಬೆಂಗಳೂರು: ಇಂದು ಬಿಜೆಪಿ ಶಾಸಕ ಶ್ರೀರಾಮುಲು, ನಟ ಸದೀಪ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಸರ್ಕಾರದ ನಾಲ್ಕು ವರ್ಷದ ಸಾಧನೆಯುಳ್ಳ ಪುಸ್ತಕವನ್ನು ಸುದೀಪ್ ಅವರಿಗೆ ನೀಡಿದ್ದಾರೆ.

    ಜೆ.ಪಿ.ನಗರದಲ್ಲಿರುವ ಸುದೀಪ್ ನಿವಾಸಕ್ಕೆ ತೆರಳಿರುವ ಶ್ರೀರಾಮುಲು, ರಾಯಚೂರು ಅಥವಾ ಬಳ್ಳಾರಿ ಕ್ಷೇತ್ರದಿಂದ ನಿಲ್ಲುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಮತ್ತು ರಾಜುಗೌಡ ಪರವಾಗಿ ಪ್ರಚಾರ ಮಾಡಿದ್ರು. ಬಳ್ಳಾರಿ, ರಾಯಚೂರು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಹುಡುಕಾಟ ನಡೆಸಿದ್ದು, ಶ್ರೀರಾಮುಲು ಅವರು ಗೆಳೆಯ ಸುದೀಪ್ ಮುಂದೆ ಚುನಾವಣೆಗೆ ನಿಲ್ಲುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದಾರಂತೆ.

    ಸುದೀಪ್ ಬಿಜೆಪಿ ನೀಡಿರುವ ಆಫರ್ ತಿರಸ್ಕರಿಸುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಅವರಿಗೆ ಎಲ್ಲ ಪಕ್ಷಗಳಿಂದಲೂ ಟಿಕೆಟ್ ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಸುದೀಪ್ ರಾಜಕೀಯ ಪ್ರವೇಶಿಸಲು ಹಿಂದೇಟು ಹಾಕಿದ್ದರು.

    ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ನಾಯಕರು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ನಿವಾಸಕ್ಕೆ ತೆರಳಿ ಮೋದಿ ಸರ್ಕಾರದ ಸಾಧನೆಯ ಕಿರು ಹೊತ್ತಿಗೆಯನ್ನು ನೀಡಿ ಬಂದಿದ್ದರು. ಈ ಬಗ್ಗೆ ಲತಾ ಮಂಗೇಶ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು `ಎಲ್ಲ ನಾಯಕರನ್ನು ಭೇಟಿಯಾಗಿದ್ದು ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದರು.

    ಲೋಕಸಭಾ ಚುನಾವಣೆ ಪ್ರಚಾರದ ಕೆಲಸದಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರು ಈಗಾಗಲೇ ತೊಡಗಿಕೊಂಡಿದ್ದು, ನಟಿ, ನಟಿ, ಉದ್ಯಮಿಗಳಿಗೆ ಎನ್‍ಡಿಎ ಸರ್ಕಾರದ ಸಾಧನೆ ತಿಳಿಸುವ ಕಿರು ಹೊತ್ತಿಗೆಯನ್ನು ನೀಡುತ್ತಿದ್ದಾರೆ.

  • ಲೋಕಸಭಾ ಚುನಾವಣೆಗೆ ರಾಜ್ಯ ನಾಯಕರಿಗೆ ಮೋದಿ, ಶಾ ’23’ ಅಂಶಗಳ ಟಾಸ್ಕ್!

    ಲೋಕಸಭಾ ಚುನಾವಣೆಗೆ ರಾಜ್ಯ ನಾಯಕರಿಗೆ ಮೋದಿ, ಶಾ ’23’ ಅಂಶಗಳ ಟಾಸ್ಕ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ರಚಿತವಾಗಿದ್ದರೆ ಇತ್ತ ಬಿಜೆಪಿ ಮಾತ್ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಚುನಾವಣಾ ಪ್ರಚಾರದ ರೂಪುರೇಷಗಳು ಹೇಗಿರಬೇಕು ಎಂಬುದರ ಬಗ್ಗೆ ಹೈಕಮಾಂಡ್ ನಾಯಕರ ರಾಜ್ಯ ಬಿಜೆಪಿ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ.

    ಇದೇ ತಿಂಗಳ ಅಂತ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ಲೋಕಸಭಾ ಚುನಾವಣೆ ಸಿದ್ಧತೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ವಿಧಾನಸಭಾ ಚುನಾವಣೆ ವೇಳೆ ಅಮಿತ್ ಶಾ ರಾಜ್ಯ ನಾಯಕರಿಗೆ 19 ಅಂಶಗಳ ಟಾಸ್ಕ್ (ನಿಯಮ)ಗಳನ್ನು ನೀಡಿ, ಅವುಗಳನ್ನು ಕ್ರಮಬದ್ಧವಾಗಿ ಪಾಲಿಸುವಂತೆ ಅದೇಶಿಸಿದ್ದರು. ಈಗ ಅದೇ 19 ಟಾಸ್ಕ್ ಗಳಿಗೆ ಹೆಚ್ಚುವರಿಯಾಗಿ 4 ಟಾಸ್ಕ್ ಸೇರಿಸಿದ್ದಾರೆ. ಈ ಮೊದಲು 19 ಟಾಸ್ಕ್ ಗಳ ಪ್ರತಿಫಲ, ನಿರಂತರ ಸಭೆ, ಸಮಾವೇಶಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

    2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂಬ ಗುರಿಯನ್ನು ಅಮಿತ್ ಶಾ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ 19 ಟಾಸ್ಕ್ ಗಳ ಜೊತೆಗೆ ಹೆಚ್ಚುವರಿಯಾಗಿ 4 ಟಾಸ್ಕ್ ನೀಡಿ ಒಟ್ಟು 23 ಅಂಶಗಳ ಸೂತ್ರಕ್ಕೆ ಪ್ಲಾನ್ ನಡೆದಿದೆ.

    ಅಮಿತ್ ಶಾ ರ 23 ಸೂತ್ರಗಳು ಏನು?
    1. ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ.
    2. ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ.
    3. ಮಂಡಳದ ವಿಸ್ತೃತ ಸಭೆ ನಡೆಸಲು ಸೂಚನೆ.
    4. ಶಕ್ತಿ ಕೇಂದ್ರದ ಪ್ರಮುಖರು ವಾರದಲ್ಲಿ ಎರಡು ದಿನ ಪ್ರವಾಸ ಕಡ್ಡಾಯ
    5. ಕಳೆದ ಎರಡು ಲೋಕಸಭೆ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳ ಎ, ಬಿ, ಸಿ ಎಂದು ವರ್ಗಿಕರಸಿಬೇಕು.

    6. ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.
    7. ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯದ ಕನಿಷ್ಠ 10 ಮಂದಿಯನ್ನು ಹೊಸ ಸದಸ್ಯತ್ವ ಮಾಡಬೇಕು.
    8. ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.
    9. ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು.
    10. ಪಂಚಾಯಿತಿ ಚುನಾವಣೆ ಸೋತವರ ಪಟ್ಟಿ ಸಿದ್ಧಪಡಿಸಬೇಕು, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು.

    11. ಸ್ಮಾರ್ಟ್ ಫೋನ್ ಇರುವವರ ಪಟ್ಟಿ ತಯಾರಿಸಬೇಕು.
    12. ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.
    13. ಪ್ರತಿಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆಬರಹ 5 ಸ್ಥಳದಲ್ಲಿ ಬರೆಯಬೇಕು.
    14. ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರ ಪ್ರತಿನಿಧಿಸುವ ಕ್ಷೇತ್ರದ ಚಾರ್ಜ್ ಶೀಟ್ ತಯಾರಿಸಬೇಕು.
    15.ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.

    16. ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ.
    17. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು.
    18. ಸಾಮಾಜಿಕ ಜಾಲತಾಣ ಕಾರ್ಯಾಗಾರ ನಡೆಸಬೇಕು.
    19. ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು.
    20. ವಾಟ್ಸಪ್ ಗ್ರುಪ್ ಗಳ ರಚನೆ.

    21. ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.
    22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.
    23. ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.

    https://youtu.be/GnXEHOwe1Rw

  • ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ-ಲೋಕಸಭೆಗೆ ಆಷಾಢದಲ್ಲೇ ಆಪರೇಷನ್ ಶುರು ಮಾಡ್ತಾರಾ ಅಮಿತ್ ಶಾ?

    ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ-ಲೋಕಸಭೆಗೆ ಆಷಾಢದಲ್ಲೇ ಆಪರೇಷನ್ ಶುರು ಮಾಡ್ತಾರಾ ಅಮಿತ್ ಶಾ?

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಅಮಿತ್ ಶಾ ಅವರ ಎಂಟ್ರಿ ಕೊಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

    ಜುಲೈ 28ಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಮೈತ್ರಿ ಸರ್ಕಾರದ ರಾಜಕಾರಣ ಕುರಿತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾರನ್ನು ಜೂನ್ 25 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಬಂದಿದ್ದರು. ಈ ವೇಳೆ ಯಡಿಯೂರಪ್ಪ ರಾಜ್ಯ ರಾಜಕಾರಣದ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಅದೇ ದಿನ ಬೆಂಗಳೂರಿಗೆ ಬಂದು ಹೋಗಿ ಎಂದು ಅಮಿತ್ ಶಾರಿಗೆ ಆಹ್ವಾನವನ್ನು ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಮೈತ್ರಿ ಸರ್ಕಾರದ ರಾಜಕಾರಣದ ಬಗ್ಗೆ ಖುದ್ದು ರಾಜ್ಯ ನಾಯಕರ ಬಳಿ ಅಮಿತ್ ಶಾ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಎಲ್ಲ ವಿದ್ಯಮಾನಗಳ ಮಾಹಿತಿಯನ್ನು ಸಹ ಅಮಿತ್ ಶಾ ಪಡೆಯಲಿದ್ದಾರಂತೆ. ಎಲ್ಲ ಮಾಹಿತಿ ಪಡೆದ ಬಳಿಕ ಅಮಿತ್ ಶಾ ಲೋಕಸಭಾ ಚುನಾವಣೆಗೆ ಸಿದ್ಧತೆ ಹೇಗೆ ನಡೆಸಬೇಕು? ಆಭ್ಯರ್ಥಿಗಳ ಆಯ್ಕೆ? ಎಂಬ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಇತ್ತ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಲೋಕಸಭಾ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದೆಯಂತೆ. ಆದ್ರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ಗೆ ಯಾವ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂಬ ವಿಷಯದಲ್ಲಿ ಗೊಂದಲವಿದೆ ಎಂದು ಹೇಳಲಾಗುತ್ತಿದೆ.

  • ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರಿಗೆ 2019ರ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪುವ ಭೀತಿ ಉಂಟಾಗಿದ್ದು, ತಮ್ಮ ಆತಂಕವನ್ನು ಶುಕ್ರವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಹೊರ ಹಾಕಿದ್ದಾರೆ.

    ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡನಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಅನಂತಕುಮಾರ್ ಹೆಗಡೆ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ನನ್ನ ಯೋಗ್ಯತೆ ನೋಡಿ ಜನರು ವೋಟ್ ಕೊಟ್ಟಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸದ ಮೇಲೆ ಮತ ಕೊಟ್ಟಿದ್ದಿರಿ. ಪಾರ್ಟಿ ಮೇಲಿನ ಬದ್ಧತೆ ಇಲ್ಲಿಯ ತನಕ ತಂದು ನಿಲ್ಲಿಸಿದೆ. 5 ಭಾರೀ ಎಂಪಿ ಮಾಡಿದ್ದಿರಿ ಇದಕ್ಕಿಂತ ಹೆಚ್ಚೆನು ಬೇಕು. 5 ಬಾರಿ ವೋಟಿನ ಗೌರವ ಕಡಿಮೆ ಆಗದಂತೆ ನೋಡಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಲೋಕಾಸಭಾ ಚುನಾವಣೆ – ಬಿಜೆಪಿಯ ಹಾಲಿ 150 ಎಂಪಿಗಳಿಗೆ ಟಿಕೆಟ್ ಇಲ್ಲ!

    ಮುಂದಿನ ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುವುದು ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಬೇಕು. ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ ಎಂದು ಅನಂತಕುಮಾರ್ ಹೆಗಡೆ ತಮಗೆ ಟಿಕೆಟ್ ಸಿಗುತ್ತೋ, ಇಲ್ಲವೋ ಎಂಬ ಆತಂಕವನ್ನು ಹೊರಹಾಕಿದರು.

  • ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಇಂದು ಏನಾಗಿದೆ?: ಡಿವಿಎಸ್ ಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

    ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಇಂದು ಏನಾಗಿದೆ?: ಡಿವಿಎಸ್ ಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

    ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಕೇಂದ್ರ ಸಚಿವ ಸದಾನಂದ ಗೌಡರಿಗೆ ತಿರುಗೇಟು ನೀಡಿದರು.

    ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಲಿವೆ. ದೇಶದಲ್ಲಿ ಬಿಜೆಪಿ ಪ್ರಧಾನಿ ಹೊರತು ಪಡಿಸಿ, ಯಾರಾದ್ರೂ ಪ್ರಧಾನಿಯಾಗಬಹುದು ಅದೇ ನಮ್ಮ ಗುರಿ ಎಂದರು.

    ಬಿಜೆಪಿ ಪ್ರಧಾನಿ ಉಳಿದುಕೊಳ್ಳಬಾರದು ಅನ್ನೋ ದೃಷ್ಟಿಕೋನ ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ಕಾಂಗ್ರೆಸ್ ಗೆ ಏಕಾಂಗಿಯಾಗಿ ಸ್ಪರ್ಧಿಸುವ ಶಕ್ತಿ ಇದೆ. ಆದ್ರೆ ಬದಲಾದ ಪರಿಸ್ಥಿತಿ ಹಾಗೂ ಸನ್ನಿವೇಶದಲ್ಲಿ ಎಲ್ಲರ ಸಹಕಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ ಅಂದ್ರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂಬ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸ್ವಾಮೀಜಿಗಳ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕಾರಣಿಗಳು ಹೇಳಿಕೆ ನೀಡಿದಿದ್ದರೆ, ನಾನು ಪ್ರತಿಕ್ರಿಯಿಸುತ್ತಿದ್ದೆ ಅಂತ ಹೇಳಿ ನುಣುಚಿಕೊಂಡ್ರು.

    ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ನೇಮಕವನ್ನು ನಿರ್ಧರಿಸಲಿದ್ದಾರೆ. ನಿಗಮ ಮಂಡಳಿ ಆಯ್ಕೆಗೆ ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ನೀಡಲಾಗುತ್ತೆ, ಉಳಿದಂತೆ ಏರಿಯಾ ಕಾರ್ಯಕರ್ತರಿಗೆ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

    ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿವಿಎಸ್, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದರು