-ಕರ್ನಾಟಕದ ಓರ್ವ ನಾಯಕನಿಗೆ ಸಿಕ್ತು ‘ಮಿಷನ್ 41’ನಲ್ಲಿ ಎಂಟ್ರಿ!
-ಮೂವರ ನಾಯಕತ್ವದಲ್ಲಿ ‘ಮಿಷನ್ 41’ ಕಾರ್ಯಾಚರಣೆ!
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಗೆಲುವಿನ ರೂಪುರೇಷಗಳನ್ನು ಸಿದ್ಧಪಡಿಸುತ್ತಿವೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದು, ಲೋಕಸಭೆ ಚುನಾವಣೆಯತ್ತ ತನ್ನ ಚಿತ್ತವನ್ನು ಹರಿಸಿದೆ. ಆಡಳಿತ ರೂಢ ಬಿಜೆಪಿ ಸಹ ಮತ್ತೊಮ್ಮೆ ಮೋದಿ ಪಿಎಂ ಎಂಬ ಹೇಳಿಕೆ ಮೂಲಕವೇ ಚುನಾವಣೆ ಪ್ರಚಾರಕ್ಕೆ ಹೆಜ್ಜೆ ಇಟ್ಟಿದೆ. ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಮಿಷನ್ 41’ ಎಂಬ ಹೊಸ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.
ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ದೇಶದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ದೇಶದ ರಾಜಧಾನಿಯಲ್ಲಿ ಸಾಲು ಸಾಲು ಸಭೆಗಳನ್ನು ಅಮಿತ್ ಶಾ ಅವರು ನಡೆಸುತ್ತಿದ್ದು, ಎಲ್ಲ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚುನಾವಣಾ ತಯಾರಿ ಸೇರಿದಂತೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರತ್ತ ತಲುಪಿಸಿ ಎಂಬ ಸಂದೇಶವನ್ನು ರವಾನಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ನಾಯಕರು ತಮ್ಮ ಜಿಲ್ಲೆಗಳಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ.

ಏನದು ಮಿಷನ್ 41?
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅಮಿತ್ ಶಾ 41 ಜನರ ವಿಶೇಷ ತಂಡವನ್ನು ರಚನೆ ಮಾಡಿಕೊಂಡಿದ್ದಾರೆ. ಈ ತಂಡ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೂವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷರಾಗಲಿದ್ದಾರೆ. ಮೂರು ತಂಡಗಳಿಗೂ ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿ ತಂಡಗಳನ್ನು ಮುನ್ನಡೆಸಲಿದ್ದಾರೆ.
ಚುನಾವಣಾ ಪ್ರಣಾಳಿಕೆ ಕಮೀಟಿಯ ಅಧ್ಯಕ್ಷರಾಗಿ ರಾಜನಾಥ್ ಸಿಂಗ್, ಚುನಾವಣಾ ಪ್ರಚಾರ ಕಮೀಟಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಸಂಕಲ್ಪ ಪತ್ರ (ವಿವಿಧ ಭಾಗಗಳಲ್ಲಿ ಪ್ರಣಾಳಿಕೆಯ ಪ್ರಚಾರ) ಕಮೀಟಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನೇಮಿಸಲಾಗಿದೆ. ರಾಜನಾಥ್ ಸಿಂಗ್ ಅವರ ಕಮೀಟಿ 20 ಸದಸ್ಯರನ್ನು ಒಳಗೊಂಡಿದ್ರೆ, ಅರುಣ್ ಜೇಟ್ಲಿ ಕಮೀಟಿ 8 ಮತ್ತು ನಿತಿನ್ ಗಡ್ಕರಿ ಕಮೀಟಿ 13 ಸದಸ್ಯರನ್ನು ಒಳಗೊಂಡಿದೆ.

ಚುನಾವಣಾ ಪ್ರಣಾಳಿಕೆ ಕಮೀಟಿ: ರಾಜನಾಥ್ ಸಿಂಗ್ (ಅಧ್ಯಕ್ಷರು), ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ಥಾವರಚಂದ್ ಗೆಹ್ಲೋಟ್, ರವಿಶಂಕರ್ ಪ್ರಸಾದ್, ಪೀಯೂಬ್ ಗೋಯಾಲ್, ಮುಖ್ತರ್ ನಕಯಿ, ಕೆ.ಜಿ.ಅಲಫೊಂಸ್, ಶಿವರಾಜ್ ಸಿಂಗ್ ಚೌಹಾಣ್, ಕಿರಣ್ ರಿಜೂಜು, ಸುಶೀಲ್ ಮೋದಿ, ಕೇಶವ್ ಪ್ರಸಾದ್, ಅರ್ಜುನ್ ಮುಂಡಾ, ರಾಮ್ ಮಾಧವ್, ಭೂಪೇಂದ್ರ ಯಾದವ್, ನಾರಾಯಾಣ ರಾಣೆ, ಮೀನಾಕ್ಷಿ ಲೇಖಿ, ಸಂಜಯ್ ಪಸ್ವಾನ್, ಹರಿ ಬಾಬು ಮತ್ತು ರಾಜೇಂದ್ರ ಮೋಹನ್ ಸಿಂಗ್.
ಚುನಾವಣಾ ಪ್ರಚಾರ ಕಮೀಟಿ: ಅರುಣ್ ಜೇಟ್ಲಿ ಟೀಂ, ಪೀಯೂಬ್ ಗೋಯಾಲ್, ರಾಜವರ್ಧನ್ ರಾಥೋಡ, ಅನಿಲ್ ಜೈನ್, ಮಹೇಶ್ ಶರ್ಮಾ, ಸತೀಶ್ ಉಪಾದ್ಯಯ, ರಾಜೀವ್ ಚಂದ್ರಶೇಖರ್ ಮತ್ತು ಶತ್ರುಘ್ಞಾ ಸಿನ್ಹಾ.

ಸಂಕಲ್ಪ ಪತ್ರ : ನಿತಿನ್ ಗಡ್ಕರಿ, ಕೈಲಾಶ್, ಸದಾನಂದ ಗೌಡ, ಕಲರಾಜ್ ಮಿಶ್ರಾ, ಶಿವ ಪ್ರಸಾದ್ ಶುಕ್ಲಾ, ವಿಜಯ್ ಸಾಪಲಾ, ಎಸ್.ಎಸ್. ಅಹಲುವಾಲಿಯಾ, ಬಂಡಾರ ದತ್ತಾತ್ರೇಯ, ಸರದಾರ್ ಆರ್.ಪಿ. ಸಿಂಗ್ ಮತ್ತು ಭೂಪೇಂದ್ರ ಸಿಂಗ್.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv