ಬೆಂಗಳೂರು: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಸೂಲೆಬೆಲೆ ಆಗಮಿಸಿದ್ದರು. ಈ ವೇಳೆ ಅವರು ವಿದ್ಯಾಪೀಠದಲ್ಲಿ ಮತಯಾಚನೆ ಮಾಡಲು ಬಂದಿದ್ದು, ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದರು.
ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಪರ ಘೋಷಣೆಗಳನ್ನು ಕೂಗುವ ಮೂಲಕ ಸೂಲಿಬೆಲೆಯ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
– ದೇಶದ ಎಲ್ಲ ರೈತರ ಸಾಲ ಮನ್ನಾ
– ದೇಶದ ಚೌಕಿದಾರ ಅಲ್ಲ, ಅಂಬಾನಿ, ಅದಾನಿಯ ಚೌಕಿದಾರ ಮೋದಿ
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ರೈತರ ಖಾತೆಗೆ ದುಡ್ಡು ಹಾಕುವ ಯೋಜನೆ ಜಾರಿಗೆ ತಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಲ್ಲ ಬಡವರ ಖಾತೆಗೆ ದುಡ್ಡು ಹಾಕುವುದಾಗಿ ಘೋಷಿಸಿ ಹೊಸ ಸಂಚಲನ ಮೂಡಿಸಿದ್ದಾರೆ.
ಹಾವೇರಿ ಸಮಾವೇಶದಲ್ಲಿ ಮಾತನಾಡಿದ ಅವರು, 2019ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಬಡ ವರ್ಗದ ಜನರಿಗೆ ಕನಿಷ್ಠ ಆದಾಯವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಬಡಜನರ ಖಾತೆಗೆ ನೇರವಾಗಿ ನಿಮ್ಮ ಹಣ ಬರಲಿದೆ. ನರೇಂದ್ರ ಮೋದಿ ಅವರು ಚೋಕ್ಸಿ, ಅಂಬಾನಿ, ನೀರವ್ ಮೋದಿ ಖಾತೆಗೆ ಸಾವಿರಾರು ಕೋಟಿ ಹಾಕಿದ್ದಾರೆ. ಛತ್ತೀಸ್‍ಗಢದಲ್ಲಿ ನಾವು ರೈತರಿಗೆ ನೇರವಾಗಿ ಖಾತೆಗೆ ಹಣ ನೀಡುತ್ತೇವೆ ಅಂದಾಗ ಮೋದಿ ಸರ್ಕಾರ ತಮ್ಮ ಬಜೆಟ್ ನಲ್ಲಿ ರೈತರಿಗೆ 2 ಸಾವಿರ ರೂ. ನೀಡಿದ್ರು. ಅಂದ್ರೆ ದಿನಕ್ಕೆ ರೈತರಿಗೆ ಮೂರುವರೆ ರೂಪಾಯಿ ನೀಡುತ್ತಿದ್ದಾರೆ. ಅಂಬಾನಿ, ಅದಾನಿಗೆ 30 ಸಾವಿರ ಕೋಟಿ ನೀಡುತ್ತಾರೆ ಇದು ಯಾವುದು ಲೆಕ್ಕ. ನಾವು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಲು ಹೋಗಲ್ಲ. ಕನಿಷ್ಠ ಮಾಸಿಕ ವೇತನವನ್ನು ನೀಡುತ್ತೇವೆ ಎಂದು ಘೋಷಿಸಿದ್ದಾರೆ.
ಈ ಹಿಂದೆ ಕರ್ನಾಟಕದ ಸರ್ಕಾರ ರೈತರಿಗೆ ಲಾಲಿಪಾಪ್ ನೀಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದರು. ಸರ್ಕಾರ ರಚನೆಯಾದ ಮೇಲೆ 11 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ನೋಟ್ ನಿಷೇಧದಿಂದ ನಿಮ್ಮೆಲ್ಲರನ್ನು ಸರದಿಯಲ್ಲಿ ನಿಲ್ಲುವಂತೆ ಮಾಡಿದರು. ಕೇಳಿದ್ರೆ ಕಪ್ಪು ಹಣದ ನಿಯಂತ್ರಣ ಅಂದ್ರು. ಸೂಟ್ ಬೂಟ್ ಧರಿಸಿದ ವ್ಯಕ್ತಿಯನ್ನು ನೋಡಿದ್ದೀರಾ? ರಫೇಲ್ ಹಗರಣದಿಂದ 30 ಸಾವಿರ ಕೋಟಿ ಕದ್ದು ಅಂಬಾನಿಯ ಜೇಬಿಗೆ ಹಾಕಿದರು. ಸಿಬಿಐ ಅಧಿಕಾರಿಯನ್ನು ರಾತ್ರೋ ರಾತ್ರಿ ಹುದ್ದೆಯಿಂದ ಕೆಳಗೆ ಇಳಿಸುತ್ತಾರೆ. ಮೋದಿ ಎಲ್ಲೇ ನೋಡಿದ್ರೆ ಅನಿಲ್ ಅಂಬಾನಿ, ಅದಾನಿ ಹೆಸರು ಕೇಳುತ್ತೇವೆ ಎಂದರು.
ಐದು ವರ್ಷದಿಂದ ಯುವಜನಾಂಗಕ್ಕೆ ಉದ್ಯೋಗ ನೀಡುತ್ತೇವೆ ಎಂದು ಭಾಷಣದಲ್ಲಿ ಹೇಳುತ್ತಾ ಬಂದಿದ್ದೀರಿ. ಮೋದಿ ಕಾಲದಲ್ಲಿಯೇ ಅತ್ಯಂತ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದ್ದು, 45 ವರ್ಷಗಳಲ್ಲಿ ಇದೇ ಮೊದಲು. ಡೊಕ್ಲಾಮ್ ಬಳಿ ಚೀನಾ ಸೇನೆ ಕುಳಿತಿದ್ದರೆ, ಪ್ರಧಾನಿಗಳು ಅಲ್ಲಿನ ಅಧ್ಯಕ್ಷರ ಜೊತೆ ಉಯ್ಯಾಲೆಯಲ್ಲಿ ಕುಳಿತು ಮಾತನಾಡಿದ್ದರು. ಇದೂವರೆಗೆ ಚೀನಾ ನಮ್ಮ ಮೇಲೆ ಹಲವು ಬಾರಿ ದಾಳಿ ನಡೆಸಿದ್ರೂ, ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದರು.
ಮೋದಿಜೀ, ಹಿಂದೂಸ್ತಾನವನ್ನು ಎರಡು ಭಾಗವಾಗಿ ವಿಂಗಡನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲನೇಯ ಹಿಂದೂಸ್ತಾನದಲ್ಲಿ ಅನಿಲ್ ಅಂಬಾನಿ, ವಿಜಯ್ ಮಲ್ಯ, ಚೋಕ್ಸಿ, ನೀರವ್ ಮೋದಿ ಶ್ರೀಮಂತ ವರ್ಗದ ಜನರಿದ್ದಾರೆ. ಇನ್ನೊಂದು ವರ್ಗದಲ್ಲಿ ಬಡವರು, ನಿರುದ್ಯೋಗಿಗಳು, ರೈತರನ್ನು ಒಳಗೊಂಡಿದೆ. ಆದ್ರೆ ಕಾಂಗ್ರೆಸ್ ದೇಶವನ್ನು ಒಡೆಯಲು ಬಿಡಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರತ್ತಿದ್ದಂತೆ ದೇಶ ಬಿಟ್ಟು ಓಡಿ ಹೋಗಿರುವವರನ್ನು ಬಂಧಿಸಲಾಗುವುದು. ಮೋದಿಯವರೇ ಇಂತಹ ಕಳ್ಳರಿಗೆ ಸಹಾಯ ಮಾಡಿ, ನಾವು ಬಡು ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ ನಲ್ಲಿರುವ ಹಣ ಕೇವಲ 15 ಜನರ ಖಾತೆಗೆ ಹೋಗುತ್ತಿದೆ ಎಂದು ಆರೋಪಿಸಿದರು.
मोदी जी आपकी चौकीदारी नहीं करते हैं, अनिल अंबानी की चौकीदारी करते हैं : कांग्रेस अध्यक्ष @RahulGandhi#NammaRahulGandhi
ಪ್ರತಿದಿನ ನಿಮ್ಮ ಹಣವನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ತೆರೆಯಲ್ಲಿ ನಿಮ್ಮ ಜಮೀನು ಕಿತ್ತುಕೊಳ್ಳುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಕರ್ನಾಟಕ, ದೇಶದ ರೈತರ ಪರವಾಗಿ ಮಾಡಿದೆ. ಐದು ವರ್ಷಗಳಿಂದ ದೇಶದ ಯುವ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಪ್ರಧಾನಿಗಳು ಪ್ರಯತ್ನಿಸುತ್ತಿದ್ದಾರೆ. ಮೋದಿಯವರ ಮೂರ್ಖತನದ ನಿರ್ಧಾರಗಳಿಂದ ದೇಶದ ಜನರು ಬೇಸತ್ತಿದ್ದಾರೆ. ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ಯಿಂದ ದೇಶಕ್ಕೆ ಸಾಕಷ್ಟು ನಷ್ಟಕ್ಕೆ ಒಳಗಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಜಿಎಸ್‍ಟಿಯನ್ನು ತೆಗೆದು ಸರಳ ತೆರಿಗೆ ನಿಯಮಗಳ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು.
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಸರ್ಕಾರ ರಚನೆ ಮಾಡಿದ್ದು, ಎರಡು ಪಕ್ಷಗಳು ಜೊತೆಯಾಗಿ ಕೆಲಸ ಮಾಡುತ್ತೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೇಶದ ಏಳಿಗೆಗಾಗಿ ಕೆಲಸ ಮಾಡಬೇಕಿದೆ. ಕರ್ನಾಟಕದಲ್ಲಿಯ ಮೈತ್ರಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿ ರಾಹುಲ್ ಗಾಂಧಿ ಮಾತು ಮುಗಿಸಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಲ್ಲ ಕಾಂಗ್ರೆಸ್ ನಾಯಕರನ್ನು ವೇದಿಕೆ ಮೇಲೆ ಬರಮಾಡಿಕೊಂಡು ಸ್ವಾಗತಿಸಿದರು. ವೇದಿಕೆಯತ್ತ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ, ಗದೆ ನೀಡಿ ಸನ್ಮಾನಿಸಲಾಯಿತು.
ಸಮಾವೇಶ ನಡೆಯೋ ಮೈದಾನದ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ, ಗುಂಡೂರಾವ್ ಸೇರಿದಂತೆ ಆಯ್ದ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಯಾರು ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆಂಬ ಚರ್ಚೆಗಳು ದಳ ಅಂಗಳದಲ್ಲಿ ಆರಂಭವಾಗಿವೆ. ಈಗಾಗಲೇ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಹ ಮಂಡ್ಯ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಧಾನಸಭಾ ಚುನಾವಣೆಯ ಬಳಿಕ ಪ್ರಜ್ವಲ್ ರೇವಣ್ಣ ಹಾಸನದಿಂದ ಮತ್ತು ನಿಖಿಲ್ ಕುಮಾರ್ ಮಂಡ್ಯದಿಂದಲೇ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪೂರಕ ಎಂಬಂತೆ ದೇವೇಗೌಡರು ಸಹ ಹಾಸನದಿಂದ ಪ್ರಜ್ವಲ್ ಸ್ಪರ್ಧೆ ಎಂದು ಘೋಷಣೆ ಮಾಡಿದ್ದರು. ಆದ್ರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮೈತ್ರಿ ಕಾಂಗ್ರೆಸ್ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ತಾವೇ ಸ್ಪರ್ಧೆ ಮಾಡಬೇಕೆಂದು ತೀರ್ಮಾನಿಸಿದ್ದಾರಂತೆ. ಇತ್ತ ರೇವಣ್ಣ ಅವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣರ ಹೆಸರು ಸಹ ಹರಿದಾಡುತ್ತಿದೆ.
ಮಂಡ್ಯ ಟಿಕೆಟ್ ಸಿಗುವ ಭರವಸೆ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಂಡ್ಯದ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕಿದ್ದಾರೆ. ಚುನಾವಣೆಯ ಸ್ಪರ್ಧೆಯ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುಮಲತಾ ಚರ್ಚಿಸಿದ್ದಾರೆ.
ಸುಮಲತಾರ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ದೊಡ್ಡಗೌಡರು ಮೊಮ್ಮಗನಿಗೆ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣರ ಸ್ಪರ್ಧೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ರೆ, ತಾವೇ ಸ್ಪರ್ಧೆ ಮಾಡುವ ಕುರಿತು ದೊಡ್ಡಗೌಡರು ಲೆಕ್ಕ ಹಾಕಿದ್ದಾರಂತೆ. ಹಾಸನದಿಂದ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಪ್ರಜ್ವಲ್ ರೇವಣ್ಣ ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಮಂಡ್ಯದಿಂದ ಟಿಕೆಟ್ ಸಿಗದೇ ಇದ್ರೆ ನಿಖಿಲ್ ಕುಮಾರಸ್ವಾಮಿ ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡೋದು ಒಳಿತಲ್ಲ ಎಂದು ದೇವೇಗೌಡರು ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರಂತೆ.
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಭಿ ಮಾಡಲು ಮುಂದಾಗೋದು ಸಾಮಾನ್ಯ. ಅಂತೆಯೇ ರಾಜ್ಯ ಬಿಜೆಪಿಯಲ್ಲಿಯೂ ಅಸಮಧಾನದ ಹೊಗೆ ಕಾಣಿಸಿಕೊಂದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹೈಕಮಾಂಡ್ ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ನೀವೇ ಅಭ್ಯರ್ಥಿ ಎಂದು ಹೇಳಿ ಮಾಜಿ ಡಿಸಿಎಂ ಆರ್.ಅಶೋಕ್ ಪಕ್ಷಕ್ಕೆ ಕರೆತಂದಿದ್ದರಂತೆ. ಇದೀಗ ಜಯಪ್ರಕಾಶ್ ಹೆಗ್ಡೆ ಟಿಕೆಟ್ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರಂತೆ. ಇತ್ತ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ಟಿಕೆಟ್ ನನಗೆ ಬೇಕು ಎಂದು ಪಕ್ಷದ ಮುಖಂಡರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ:‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ
ಹಾಲಿ ಸಂಸದರಿಗೆ ಟಿಕೆಟ್ ಅಂತಾದ್ರೆ ನನಗೂ ಟಿಕೆಟ್ ಕೊಡಲೇಬೇಕು. ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದೇ ಆರ್.ಅಶೋಕ್ ಮಾತು ಕೊಟ್ಟಿದ್ದು ತಪ್ಪು ಎಂದು ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷರ ಮುಂದೆ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಸಂಸದರಾದ ಬಳಿಕ ಕ್ಷೇತ್ರವನ್ನೇ ಮರೆತಿದ್ದೀರಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ತರೀಕೆರೆಗೆ ರೈಲ್ವೆ ಫ್ಲಾಟ್ ಫಾರಂ ಮೇಲ್ದರ್ಜೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ವಕೀಲರು ಹಾಗೂ ತರೀಕೆರೆ ಸಾರ್ವಜನಿಕರು ಹೆದ್ದಾರಿ ಅಗಲೀಕರಣ ಹಾಗೂ ದುರಸ್ತಿ ಮಾಡುವಂತೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗಾಂಧಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸಂಸದರ ವಿರುದ್ಧ ಕಿಡಿಕಾರಿದ್ರು. ಒಂದು ಗಂಟೆಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
-ಕಿಸಾನ್ ಸಮ್ಮಾನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
-ಚುನಾವಣಾ ನೀತಿ ಸಂಹಿತೆ ಘೋಷಣೆಯೊಳಗೆ ಎರಡು ಕಂತು ಬಿಡುಗಡೆಗೆ ಪ್ಲಾನ್
ನವದೆಹಲಿ: ಕೇಂದ್ರ ಮೋದಿ ಸರ್ಕಾರ ಸಾಲ ಮನ್ನಾ ಮಾಡ್ತಿಲ್ಲ ಇದು ರೈತ ಪರವಲ್ಲ ಕಾರ್ಪೊರೇಟ್ ಸರ್ಕಾರ ಹೀಗಂತ ವಿರೋಧ ಪಕ್ಷಗಳು ಟೀಕೆ ಮಾಡಲು ಶುರುವಿಟ್ಟುಕೊಂಡಿದ್ದವು. ಇದನ್ನು ಚುನಾವಣಾ ಪ್ರಥಮ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದ ವಿಪಕ್ಷಗಳಿಗೆ ಮೋದಿ ಮಧ್ಯಂತರ ಬಜೆಟ್ ನಲ್ಲಿ ಶಾಕ್ ಕೊಟ್ಟಿದ್ರು. ಫೆ 1 ರಂದು ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 1 ಗಂಟೆಗೆ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತವರು ಗೋರಕಪುರ್ ನಲ್ಲಿ ಯೋಜನೆಗೆ ಚಾಲನೆ ಸಿಗಲಿದೆ.
ಬಿಜೆಪಿ ರೈತಾ ಮೋರ್ಚಾ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಎರಡು ಸಾವಿರ ರೂಪಾಯಿ ಚೆಕ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಪ್ರದೇಶ ಸರ್ಕಾರ ವೇಗವಾಗಿ ರೈತರ ಮಾಹಿತಿ ಕಲೆ ಹಾಕುತ್ತಿದ್ದು ಮೊದಲ ಹಂತದಲ್ಲಿ ರೈತರಿಗೆ ಎರಡು ಸಾವಿರ ತಲುಪಿಸುವ ಕೆಲಸಕ್ಕೆ ಮುಂದಾಗಿದೆ. ಎರಡು ಹೆಕ್ಟೇರ್‍ವರೆಗೂ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲೂ ಯೋಜನೆ ಘೋಷಿಸಲಾಗಿದ್ದು ದೇಶದ 12 ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ. ಈ ಯೋಜನೆಯಿಂದ ಕೇಂದ್ರ ಸರ್ಕಾರಕ್ಕೆ 75 ಸಾವಿರ ಕೋಟಿ ಹೆಚ್ಚುವರಿಯಾಗಲಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಲಿದೆ. ಈ ಹಿನ್ನೆಲೆ ಶೀಘ್ರವಾಗಿ ಮೊದಲು ಹಾಗೂ ಎರಡನೇ ಕಂತುಗಳನ್ನು ಬಿಡುಗಡೆ ಮಾಡಬೇಕು ಮಾರ್ಚ್ ಒಳಗೆ ದೇಶದ ಎಲ್ಲ ರೈತರಿಗೂ ಎರಡು ಕಂತು ಬಿಡುಗಡೆ ಮಾಡುವ ಮೂಲಕ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಈ ಹಿನ್ನೆಲೆ ಎಲ್ಲ ರಾಜ್ಯಗಳಿಗೂ ಕೇಂದ್ರ ಕೃಷಿ ಇಲಾಖೆ ಫೆ 1 ರಂದು ಸೂಚನೆ ರವಾನಿಸಿದ್ದು ಶೀಘ್ರವಾಗಿ ಡಾಟಾ ಕಲೆಹಾಕುವಂತೆ ಹೇಳಿತ್ತು.
ಬಿಜೆಪಿ ಆಡಳಿತ ರಾಜ್ಯಗಳಲ್ಲಿ ರೈತರ ಮಾಹಿತಿ ಪಡೆಯುವ ಕೆಲಸ ಆರಂಭವಾಗಿದ್ದು ಸಾಕಷ್ಟು ವೇಗವಾಗಿ ನಡೆಯುತ್ತಿದೆ. ಆದರೆ ಕೇಂದ್ರ ಈ ಪ್ಲಾನ್‍ನ್ನು ಪ್ಲಾಪ್ ಮಾಡಲು ನಿರ್ಧರಿಸಿರುವ ವಿರೋಧ ಪಕ್ಷಗಳು ರೈತರ ಮಾಹಿತಿ ನೀಡುವಲ್ಲಿ ವಿಳಂಬ ನೀತಿ ಪಾಲಿಸುತ್ತಿವೆ. ಚುನಾವಣಾ ನೀತಿ ಸಂಹಿತೆ ಬಳಿಕ ರೈತರ ಪಟ್ಟಿ ತಯಾರಿಸಲು ಬ್ರೇಕ್ ಬೀಳಲಿದ್ದು ಚುನಾವಣಾ ರಾಜಕಾರಣಕ್ಕೆ ವಿಪಕ್ಷಗಳು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ. ಹೀಗಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾದ್ರು ದೇಶದ ಎಲ್ಲ ರೈತರಿಗೂ ಇದರ ಲಾಭ ಸಿಗುತ್ತಾ ಅನ್ನೊ ಅನುಮಾನ ಈಗ ಎದುರಾಗಿದೆ.
ಪುಣೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲ ಬಾರಿಗೆ ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ರಾಜಕೀಯದಿಂದ ದೂರ ಉಳಿದ ದಿನ ನಾನು ನಿವೃತ್ತಿ ಪಡೆಯುತ್ತೇನೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಭಾಗಿಯಾಗಿದ್ದರು. ಮಾಧ್ಯಮಗಳ ಜೊತೆ ಮಾತನಾಡುವ ವೇಳೆ 2019ರಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ನಿಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ದೇಶದ ಬಹುತೇಕ ಜನರಿಗೆ ಪ್ರಧಾನಿ ಮೋದಿ ಅವರು ಬಹಳ ದಿನ ರಾಜಕೀಯದಲ್ಲಿ ಇರಲ್ಲ ಎಂದು ಹೇಳ್ತಿದ್ದಾರೆ. ಮುಂದಿನ ಹಲವು ವರ್ಷಗಳ ಕಾಲ ಮೋದಿ ಅವರು ರಾಜಕೀಯದಲ್ಲಿರ್ತಾರೆ ಎಂಬ ಭರವಸೆ ನೀಡುತ್ತೇನೆ ಎಂದು ಉತ್ತರಿಸಿದರು.
ಸದ್ಯ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಜೊತೆ ಕೆಲಸ ಮಾಡುತ್ತಿದ್ದೇನೆ. ಕಳೆದ 18 ವರ್ಷಗಳಿಂದ ಬೇರೆ ಬೇರೆ ನಾಯಕರೊಂದಿಗೆ ಕೆಲಸ ಮಾಡಿದ್ದೇನೆ. ಇನ್ನು ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾನಿ ಅವರ ಜೊತೆಯಲ್ಲಿ ಕೆಲಸ ಮಾಡಿದ ಹೆಮ್ಮೆ ನನಗಿದೆ ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ ಮಾಡಬೇಕಾ ಅಥವಾ ಬೇಡ್ವಾ? ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಮುಂಚಿತವಾಗಿ ನಾನು ಏನನ್ನೂ ಹೇಳಲಾರೆ. 2014ರಲ್ಲಿ ಅಮೇಥಿ ಕ್ಷೇತ್ರದ ಜನರಿಗೆ ನನ್ನ ಪರಿಚಯವಿರಲಿಲ್ಲ. ಇದೀಗ ಅಮೇಥಿಯ ಜನರು ನನ್ನನ್ನು ಗುರುತಿಸುವುದರ ಜೊತೆಗೆ ಮನೆ ಮಗಳು ಅಂತಾ ಭಾವಿಸುತ್ತಾರೆಂದು ತಿಳಿಸಿದರು.
ನವದೆಹಲಿ: ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಮೋದಿ ಸರ್ಕಾರದ ಕೊನೇ ಬಜೆಟ್ ಇದಾಗಿದ್ದು, ಈ ಬಾರಿ ಭರಪೂರ ಘೋಷಣೆ ಬಜೆಟ್‍ನಲ್ಲಿ ಹೊರಬೀಳುವ ಸಾಧ್ಯತೆ ಇದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಪಿಯೂಶ್ ಗೋಯಲ್ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಪಿಯೂಶ್ ಗೋಯೆಲ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಪಂಚ ಸಮರದಲ್ಲಿ ಸೋತ ಬೆನ್ನಲ್ಲೇ ಲೋಕಸಮರ ಬೇರೆ ಬರ್ತಿರೋದ್ರಿಂದ ಮತದಾರರನ್ನು ಓಲೈಸಲು ಸಹಜವಾಗಿಯೇ ಈ ಬಜೆಟ್ ಜನಪ್ರಿಯತೆಯ ಹಳಿ ಮೇಲೆ ಸಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಮೊದಲೇ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಘೋಷಿಸಿಸದಂತೆ ಈ ಬಜೆಟ್ ರೈತ ಬಜೆಟ್ ಆಗಲಿದೆ ಎನ್ನಲಾಗ್ತಿದೆ. ರೈತರನ್ನು, ಗ್ರಾಮೀಣ ಭಾರತೀಯರನ್ನು, ಮಧ್ಯಮ ವರ್ಗದವರನ್ನು ಓಲೈಸೋ ದೃಷ್ಟಿಯಿಂದ ಹಲವು ಜನಪ್ರಿಯ ಘೋಷಣೆಗಳನ್ನು ಇಂದು ಮಧ್ಯಂತರ ಬಜೆಟ್‍ನಲ್ಲಿ ಮಾಡಲಾಗುತ್ತದೆ ಎನ್ನಲಾಗಿದೆ. ಆರ್ಥಿಕ ಶಿಸ್ತನ್ನು ಕಾಪಾಡುವ ಹೊಣೆಯೂ ಪಿಯೂಶ್ ಅವರ ಮೇಲಿದೆ.
ಪಿಯೂಶ್ ಬಜೆಟ್ ಪ್ರಮುಖವಾಗಿ ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲನೇ ಭಾಗದಲ್ಲಿ ಅಯವ್ಯಯದ ಹೇಳಿಕೆ, ಎರಡನೇ ಭಾಗದಲ್ಲಿ ಏಪ್ರಿಲ್‍ನಿಂದ ಜುಲೈವರೆಗೆ ಮಾಡಬೇಕಾದ ಖರ್ಚಿನ ಬಗ್ಗೆ ವೋಟ್‍ಆನ್ ಅಕೌಂಟ್. ಮೂರನೇ ಭಾಗ ಮೋದಿ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆ ಮತ್ತು ಭವಿಷ್ಯದ ಬಗೆಗೆ ಇರಲಿದೆ ಎನ್ನಲಾಗಿದೆ. ಇನ್ನು ಬಜೆಟ್ ಅವಧಿಯನ್ನು ಕ್ಯಾಲೆಂಡರ್ ವರ್ಷಕ್ಕೆ ಬದಲಿಸುವ ಸಾಧ್ಯತೆಯೂ ಇದೆ.
ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಮತ್ತೊಮ್ಮೆ ದೇಶದ ಜನತೆ ಮೋದಿಯವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಬಜೆಟ್‍ನಲ್ಲಿ ದೇಶದ ರಕ್ಷಣೆ, ರೈತಾಪಿ ವರ್ಗ, ನೌಕರರ ಪರ, ಅಭಿವೃದ್ಧಿಪರ ಯೋಜನೆಗಳು ಘೋಷಣೆಯಾಗಾಲಿವೆ. ಅಲ್ಲದೇ ಹಿಂದಿನ ಬಜೆಟ್‍ನಲ್ಲಿ ರಾಜ್ಯಕ್ಕೆ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಮೋದಿ ಸರ್ಕಾರ ಪೂರ್ಣಗೊಳಿಸಿದೆ. ಕಾವೇರಿ-ಗೋದಾವರಿ ನದಿ ನೀರು ಜೋಡಣೆ ಯೋಜನೆ ನಿರೀಕ್ಷೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮೋದಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಒಂದ್ಕಡೆ ಅಂದ್ಕೊಂಡ ರೀತಿಯಲ್ಲಿ ಜಿಎಸ್‍ಟಿ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಆಗ್ತಿಲ್ಲ. ಇನ್ನೊಂದ್ಕಡೆ ನಿರುದ್ಯೋಗ ಪ್ರಮಾಣ ಹೆಚ್ಚಳ. ಈ ಸಮಸ್ಯೆಗಳ ನಡುವೆ ಲೋಕಸಭೆ ಚುನಾವಣೆ ಬಂದಿರೋದು ಕೇಂದ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲೇ ಬಜೆಟ್ ಮಂಡನೆ ಮಾಡೋದು ಆರ್ಥಿಕ ಸಚಿವರಿಗೆ ಅಗ್ನಿ ಪರೀಕ್ಷೆ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.
– ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿ ‘ನಮ್ಮ ಕಾಂಗ್ರೆಸ್’ ಪಾಕ್ಷಿಕ ಪತ್ರಿಕೆ
ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಕಾಂಗ್ರೆಸ್ ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿ ‘ನಮ್ಮ ಕಾಂಗ್ರೆಸ್’ ಎಂಬ ಪತ್ರಿಕೆ ಹೊರತರಲು ಸಿದ್ಧತೆ ನಡೆಸಿದೆ. ಕೆಲ ಮಾಧ್ಯಮಗಳು ಬಿಜೆಪಿ ಪರ ಒಲವು ತೋರುವುದರಿಂದ, ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎನ್ನುವ ಮಾತು ಪಕ್ಷದ ಒಳಗಡೆ ಕೇಳಿಬಂದಿದೆ. ಹಾಗಾಗಿ, ಫೆ.6ರಂದು ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಂದಿನ ಮೂರು ತಿಂಗಳಲ್ಲಿ ಪ್ರಮುಖವಾಗಿ ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಯ ವೈಫಲ್ಯತೆಗಳನ್ನು ಭಿತ್ತರಿಸುವ ಅಸ್ತ್ರವನ್ನಾಗಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದರೊಂದಿಗೆ ಬಿಜೆಪಿ ನಾಯಕರು ಪ್ರತಿಬಾರಿ ‘ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿಲ್ಲ’ ಎನ್ನುತ್ತಿರುವುದರಿಂದ, ಇದಕ್ಕೆ ಪ್ರತ್ಯುತ್ತರವಾಗಿ ಕಳೆದ ಏಳು ದಶಕದಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ಪ್ರತಿ ಸಂಚಿಕೆಯಲ್ಲಿ ಒದಗಿಸಲು ಸಿದ್ಧತೆ ನಡೆಸಿಕೊಂಡಿದೆ.
ಮುಂದಿನ ದಿನದಲ್ಲಿ ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿಯೇ, ‘ನಮ್ಮ ಕಾಂಗ್ರೆಸ್’ನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನದಲ್ಲಿ ಪ್ರತಿ 15 ದಿನಕ್ಕೊಮ್ಮೆ ಬರುವ ಈ ಪತ್ರಿಕೆಯಲ್ಲಿ ಕಾಂಗ್ರೆಸ್ ನಾಯಕರ ಮಾತು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ ಬಗ್ಗೆ ‘ನಮ್ಮ ಕಾಂಗ್ರೆಸ್’ನಲ್ಲಿ ಬರಲಿದೆ ಎನ್ನಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಆರಂಭಗೊಂಡಿರುವ ‘ನಮ್ಮ ಕಾಂಗ್ರೆಸ್’ ಪಾಕ್ಷಿಕ ಪತ್ರಿಕೆ, ಜ.26ರಂದೇ ಬಿಡುಗಡೆಯಾಗಬೇಕಿತ್ತು. ಆದರೆ 21ರಂದು ತುಮಕೂರಿನ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ, ಆಪರೇಷನ್ ಕಮಲದ ಭೀತಿ ಹಾಗೂ ದೋಸ್ತಿ ಸರ್ಕಾರದಲ್ಲಿ ಮೂಡಿದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿಯೇ ರಾಜ್ಯ ಹಾಗೂ ರಾಷ್ಟ್ರ ನಾಯಕರು ಸಂಪೂರ್ಣ ತೊಡಗಿಸಿಕೊಂಡಿದ್ದರಿಂದ ದಿನಾಂಕ ಮುಂದೂಡಲಾಗಿತ್ತು.
ಈಗಾಗಲೇ ಮೊದಲ ಸಂಚಿಕೆಯ ಪ್ರಿಂಟ್ ಸಹ ಮುಕ್ತಾಯವಾಗಿದ್ದು, ಫೆ.6ರಂದು ಬಿಡುಗಡೆಯಾಗುವುದು ಮಾತ್ರ ಬಾಕಿ ಉಳಿದಿದೆ ಎಂದು ಸಂಪಾದಕೀಯ ಮಂಡಳಿಯಲ್ಲಿರುವ ಸದಸ್ಯರೊಬ್ಬರು ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ‘ನಮ್ಮ ಕಾಂಗ್ರೆಸ್’ ಮೊದಲ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಿಡುಗಡೆಗೊಳಿಸಲಿದ್ದಾರೆ. ಇವರೊಂದಿಗೆ ಕೆಲ ರಾಷ್ಟ್ರೀಯ ನಾಯಕರು ಸೇರಿದಂತೆ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
-ಹಾಸನ ಕ್ಷೇತ್ರ ಬಿಟ್ಟುಕೊಟ್ಟು ಕಂಡೀಷನ್ ಅಪ್ಲೈ ಎಂದ ಕಾಂಗ್ರೆಸ್!
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲ್ಲ ಬಿಡಲ್ಲ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಧರ್ಮ ಸಂಕಟದಲ್ಲಿ ಸಿಲುಕಿಕೊಂಡ್ರಾ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಲೋಕಸಭಾ ಚುನಾವಣೆಗೂ ಮೈತ್ರಿ ಘೋಷಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಅಧಿಕೃತ ಪ್ರಕಟನೆ ಹೊರಬೀಳಬೇಕಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದಾರೆ. ಹಾಸನ ಕ್ಷೇತ್ರವನ್ನು ದಳಕ್ಕೆ ಬಿಟ್ಟುಕೊಡಲು ಕೈ ನಾಯಕರು ಒಪ್ಪಿಗೆ ಸೂಚಿಸಿ ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಏನದು ಷರತ್ತು?
ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆ ಮಾಡಲ್ಲ. ಒಂದು ವೇಳೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿದ್ರೆ ಕಾಂಗ್ರೆಸ್ ಅಭ್ಯರ್ಥಿಯೂ ಕಣಕ್ಕಿಳಿಯಲಿದ್ದಾರೆ ಎಂದು ಕೈ ನಾಯಕರು ಷರತ್ತು ಹಾಕಿದ್ದಾರಂತೆ. ಮೊಮ್ಮಗನ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದ ದೊಡ್ಡಗೌಡರು ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ ಎಂದು ಪಕ್ಷದಲ್ಲಿಯೆ ಚರ್ಚೆಗಳು ನಡೆದಿವೆ.
ಕೆಲವು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ ಮೇಲೆ ದೊಡ್ಡಗೌಡರು ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದು ಹೇಳಿದ್ದರು. ಇದೀಗ ದೊಡ್ಡಗೌಡರೇ ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ.
ಚಿಕ್ಕಮಗಳೂರು: 1979ರಲ್ಲಿ ಚಿಕ್ಕಮಗಳೂರಲ್ಲಿ ಝೇಂಕರಿಸುತ್ತಿದ್ದ ಲಾಯೆಂಗೆ ಹಮ್ ಲಾಯೆಂಗೆ ಇಂದಿರಾಗಾಂಧಿ ಕೋ ಲಾಯೆಂಗೆ, ಆದಾ ರೋಟಿ ಖಾಯೆಂಗೆ. ಎಂಬ ಘೋಷವಾಕ್ಯ ಇದೀಗ ಮತ್ತೊಮ್ಮೆ ಕಾಫಿನಾಡಿನ ಕಾಂಗ್ರೆಸ್ಸಿಗರ ಟ್ಯಾಗ್‍ಲೈನ್ ಆಗಿದೆ. ಆದರೆ ಹೆಸರೊಂದು ಬೇರೆಯಷ್ಟೇ. ಅಂದು ಅಜ್ಜಿಗೆ ಗ್ರೀನ್ ಕಾರ್ಪೇಟ್ ಹಾಸಿದ್ದ ಕಾಫಿನಾಡಿಗರು ಇದೀಗ ಜ್ಯೂನಿಯರ್ ಇಂದಿರಾಗೂ ಲಾಯೆಂಗಮ್ಮ ಲಾಯೆಂಗೆ ಅಂತಿದ್ದಾರೆ. ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಗೊತ್ತಿಲ್ಲ. ಕಾಫಿನಾಡ ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯಂತು ಲಾಯೆಂಗ ಹಮ್ ಎಂಬಂತಿದೆ.
ಚಿಕ್ಕಮಗಳೂರು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹಾಗೂ ನೆಹರೂ ಕುಟುಂಬ ತಮ್ಮ ಜೀವಿತಾವಧಿಯಲ್ಲೇ ಮರೆಯಲಾರದ ಜಿಲ್ಲೆ. ಅಂತಹ ಕಾಫಿನಾಡಿನಿಂದ ಇಂದಿರಾ ಅವರ ಮೊಮ್ಮಗಳು ಪ್ರಿಯಾಂಕ ರಾಜಕೀಯಕ್ಕೆ ಅಖಾಡಕ್ಕಿಳಿಯುತ್ತಾರೆಂಬ ಸುದ್ದಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಂದು ಇಂದಿರಾಗಾಂಧಿಗೆ ಡಿ.ಬಿ.ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟಂತೆ ಇಂದು ಯಾರೂ ಬಿಟ್ಟುಕೊಡುವ ಅಗತ್ಯವಿಲ್ಲ.
ಸದ್ಯಕ್ಕೆ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕಾರ್ಯಕರ್ತರಿಗೆ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್ ಹೆಸರು ಕೇಳಿ ಬರುತ್ತಿದ್ದರೂ ಎರಡೂ ಜಿಲ್ಲೆಯನ್ನೂ ಸರಿದೂಗಿಸುವಂತವರು ಬೇಕೆಂಬುದು ಕಾರ್ಯಕರ್ತರ ವಾದ. ಹಾಗಾಗಿ 20 ವರ್ಷಗಳ ಬಳಿಕ ರಾಜಕೀಯಕ್ಕೆ ಬರುತ್ತಿರುವ ಪ್ರಿಯಾಂಕ ಗಾಂಧಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ರೆ ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಅವರನ್ನ ಗೆಲ್ಲಿಸೋದಕ್ಕೆ ಯುವ ಸಮೂಹ ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸುವುದಕ್ಕೆ ಸಿದ್ಧವಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರೂಬಿನ್ ಮೊಸೆಸ್ ಹೇಳುತ್ತಾರೆ.
ಅಂದು ಇಂದಿರಾಗಾಂಧಿ ಅವರ ವಿರುದ್ಧ ನಟ ಡಾ.ರಾಜ್‍ಕುಮಾರ್ ನಿಲ್ಲಿಸೋದಕ್ಕೆ ತೆರೆಮರೆಯಲ್ಲಿ ಎಲ್ಲಾ ಕಸರತ್ತು ನಡೆದಿತ್ತು. ಆದರೆ ರಾಜಣ್ಣ ರಾಜಕೀಯಕ್ಕೆ ಬರೋದಕ್ಕೆ ಸುತಾರಾಂ ಒಪ್ಪಲಿಲ್ಲವಂತೆ. ಕೊನೆಗೆ 1968 ರಿಂದ 1971ರವರೆಗೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಅಧಿನಾಯಕಿ ವಿರುದ್ಧ ಅಖಾಡಕ್ಕಿಳಿದು ಸೋತಿದ್ದರು. ಇಲ್ಲಿಂದ ಗೆದ್ದ ಇಂದಿರಾ ಗಾಂಧಿ ಮತ್ತೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದೀಗ ಅವರ ಮೊಮ್ಮಗಳು ಪ್ರಿಯಾಂಕ ಫೆಬ್ರವರಿ 4 ರಂದು ಮೌನಿ ಅಮಾವಾಸ್ಯೆಯಂದು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋದ್ರಿಂದ ಅವರ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಲಿ ಅನ್ನೋದು ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ. ಕಾಫಿನಾಡಿಗರು ಪ್ರಿಯಾಂಕ ಗಾಂಧಿಯನ್ನ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಅವರು ಇಲ್ಲಿ ಸ್ಪರ್ಧಿಸಿದ್ರೆ ಗೆಲ್ಲಿಸಿ ಅವರನ್ನ ಇಲ್ಲೇ ಗೆಲ್ಲಿಸಿ ಲೋಕಸಭೆಗೆ ಕಳಿಸೋಕೆ ಕಾಫಿನಾಡಿಗರು ಪಣ ತೊಟ್ಟಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸಿರೋದಂತು ಸತ್ಯ. ಆದರೆ ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಅನ್ನೋದು ಮಾತ್ರ ಗೊಂದಲಮಯವಾಗಿದೆ.
ಕಾಫಿನಾಡ ಕಾಂಗ್ರೆಸ್ ಪ್ರಿಯಾಂಕ ಆಗಮನಕ್ಕಂತೂ ತುದಿಗಾಲಲ್ಲಿ ನಿಂತಿದೆ. 1980ರ ಆಸುಪಾಸಿನ ರಾಜಕೀಯವೇ ಬೇರೆ. 2020ರ ಆಸುಪಾಸಿನ ರಾಜಕೀಯವೇ ಬೇರೆ. ಇಂದು ಪ್ರಿಯಾಂಕ ಬಂದ್ರು ಗೆಲವು ಅಜ್ಜಿಗೆ ಒಲಿದಷ್ಟು ಸುಲಭವಾಗಿ ಸಿಗುವುದಿಲ್ಲ ಅನ್ನೋದಂತು ಸ್ಪಷ್ಟ. ಉಡುಪಿ-ಚಿಕ್ಕಮಗಳೂರಿನ 9 ಎಂಎಲ್‍ಎಗಳಲ್ಲಿ 8 ಜನ ಬಿಜೆಪಿಯವರು. ಸಾಲದಕ್ಕೆ ಸ್ಟ್ರಾಂಗ್ ಹಿಂದು ಅಜೆಂಡಾದ ಮಲೆನಾಡ ಜೊತೆ ಮೋದಿ ಅಲೆ ಇವೆಲ್ಲದರ ನಡುವೆ ಪ್ರಿಯಾಂಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬರುತ್ತಾರ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.