Tag: elderly couple

  • ಮಕ್ಕಳ ನಿರ್ಲಕ್ಷ್ಯ- ಬೇಸತ್ತ ವೃದ್ಧ ತಂದೆ, ತಾಯಿ ಆತ್ಮಹತ್ಯೆ

    ಮಕ್ಕಳ ನಿರ್ಲಕ್ಷ್ಯ- ಬೇಸತ್ತ ವೃದ್ಧ ತಂದೆ, ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮಕ್ಕಳ ನಿರ್ಲಕ್ಷ್ಯ ವರ್ತನೆಯಿಂದ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ನಡೆದಿದೆ.

    ಮಾರೇಗೌಡ (62) ಗಂಗಮ್ಮ ( 55) ಮೃತರಾಗಿದ್ದಾರೆ. ಈ ವೃದ್ಧ ದಂಪತಿ ಕಳೆದ ಭಾನುವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಗ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಬಿಜೆಪಿಯವರ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ: ಬಿ.ಕೆ.ಹರಿಪ್ರಸಾದ್

    ಮೃತ ವೃದ್ದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಹಾದ್ರಿಪುರ ಗ್ರಾಮದಲ್ಲಿ ಬೇರೆ ವಾಸವಾಗಿದ್ದರು. ಮಾರೇಗೌಡರು ವಿಶೇಷಚೇತನರಾಗಿದ್ದು, ಪತ್ನಿ ಗಂಗಮ್ಮ ಆರೈಕೆ ಮಾಡುತ್ತಿದ್ದರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂಬ ನೋವು ಕೊರಗು ಇಬ್ಬರನ್ನು ಕಾಡುತ್ತಿತ್ತಂತೆ. ಇದನ್ನೂ ಓದಿ:  ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

    ಮೊದಲಿಂದಲೂ ಹಾದ್ರಿಪುರ ಗ್ರಾಮದಲ್ಲಿ ಕಿರಿಯ ಮಗನ ಜೊತೆ ಇಬ್ಬರು ವಾಸವಾಗಿದ್ದರು. ಆದರೆ ಇತ್ತೀಚೆಗೆ ಕಿರಿಯ ಮಗ ಸಹ ಅಪ್ಪ ಅಮ್ಮನನ್ನ ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದನಂತೆ. ಈ ವಿಚಾರಕ್ಕೆ ಮನನೊಂದು ವೃದ್ದ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನದಲ್ಲಿ ಗುಂಡಿನ ಸದ್ದು- ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

    ಹಾಸನದಲ್ಲಿ ಗುಂಡಿನ ಸದ್ದು- ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

    – ಆರೋಪಿ ಮೊಣಕಾಲಿಗೆ ಗುಂಡು ಹಾರಿಸಿ ಬಂಧನ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಆಲಗೊಂಡನಹಳ್ಳಿಯಲ್ಲಿ ಇಂದು ಗುಂಡಿನ ಶಬ್ದ ಕೇಳಿಸಿದ್ದು, ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಎಡಗಾಲಿನ ಮಂಡಿ ಭಾಗಕ್ಕೆ ಗುಂಡೇಟು ಹೊಡೆಯಲಾಗಿದೆ. ಆಲಗೊಂಡನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮುರುಳಿಧರ್ (71), ಉಮಾದೇವಿ (67) ಅವರನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗ ಇಬ್ಬರನ್ನು ಬಂಧಿಸಲಾಗಿದೆ.

    ಕೋಳಿ ಫಾರಂನಲ್ಲಿ ಆರೋಪಿಗಳು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ ಶರಣಾಗುವಂತೆ ಮನವಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಗಳು ಇನ್‍ಸ್ಪೆಕ್ಟರ್ ವಿನಯ್ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ.

    ವಿನಯ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ ಆರೋಪಿಗಳು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 80 ಎಕರೆ ಜಮೀನು ಹೊಂದಿದ್ದ ಮುರುಳಿಧರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಆ ಜಮೀನನ್ನು ಮಾರಿ ಮನೆಯಲ್ಲಿ ದುಡ್ಡು ಇಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಈ ವೇಳೆ ವೃದ್ಧ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

    ಈ ವಿಚಾರವಾಗಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎರಡು ದಿನಗಳ ಹಿಂದೆ ಜೋಡಿ ಕೊಲೆಯಾಗಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ನಮ್ಮ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ತೆರಳಿದ ವೇಳೆ ಆರೋಪಿಗೆ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿ ಶರಣಾಗದೇ ಪೊಲೀಸರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಆರೋಪಿ ಮತ್ತು ಸಿಪಿಐ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದೆ. ಸರಣಿ ಕೊಲೆಯಾಗುತ್ತಿರುವ ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮ ಕೈಗೊಂಡು ನಿಗಾ ವಹಿಸಿದ್ದೇವೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

  • ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    – ಸರಣಿ ಕೊಲೆಗಳಿಂದ ಬೆಚ್ಚಿಬಿದ್ದ ಜನ

    ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಸರಣಿ ಕೊಲೆಗಳು ಮುಂದುವರಿದಿದ್ದು, ಇಂದು ಮತ್ತೆ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ನಡೆದಿದೆ.

    ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಮನೆಯನ್ನು ದರೋಡೆ ಮಾಡಲು ಬಂದು, ದಂಪತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 9 ಮರ್ಡರ್ ಆಗಿವೆ.

    ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು. ಮುರುಳಿಧರ್ ದಂಪತಿಗೆ ಮಕ್ಕಳು ಇರಲಿಲ್ಲ. ಜೊತೆಗೆ ಮುರುಳಿಧರ್ ಬಿ.ಎಸ್ಸಿ ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ವಾಸವಿದ್ದರು.

    ಆದರೆ ಇತ್ತೀಚೆಗೆ ಅವರು ತಮ್ಮ ಜಮೀನನ್ನು ಮಾರಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರು ಮನೆಯಲ್ಲಿ ಜಮೀನು ಮಾರಿರುವ ದುಡ್ಡನ್ನು ಇಟ್ಟಿಕೊಂಡಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿದ್ದಾರೆ. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಿ ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನು ಓದಿ: ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

    ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 6 ಕೊಲೆಗಳು ಆಗಿವೆ. ಜೊತೆಗೆ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೊಲೀಸ್, ಕಾನೂನು ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈಗ ಘಟನಾ ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಬೆಂಗಳೂರಿನ ಜಯನಗರದ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಸ್ಥಳೀಯರಿಂದ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧ ದಂಪತಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ದಂಪತಿ ವಾಸವಿದ್ದ ಮನೆಗೆ ಕೆಮಿಕಲ್ ಸ್ಪ್ರೇ ಸಿಂಪಡನೆ ಮಾಡಿಸಲಾಗಿದೆ. ಮನೆಗೆ ಸೋಡಿಯಂ ಹೈಪೋಕ್ಲೋರೈಡ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಿತ ಕೆಮಿಕಲ್ ಸ್ಪ್ರೇ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಬ್ರೆಜಿಲ್ ದೇಶದಿಂದ ಮಾರ್ಚ್ 13ರಂದು ಬೆಂಗಳೂರಿಗೆ ವೃದ್ಧ ದಂಪತಿ ವಾಪಸ್ಸಾಗಿದ್ದರು. ಬಳಿಕ ಜಯನಗರ ಠಾಣಾ ವ್ಯಾಪ್ತಿಯ ತಮ್ಮ ಮನೆಯೊಂದರಲ್ಲಿ ವಾಸವಿದ್ದರು. ಸದ್ಯ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

  • ಸಿಡಿಲು ಬಡಿದು ಮನೆ ಕಳೆದುಕೊಂಡ ವೃದ್ಧ ದಂಪತಿ

    ಸಿಡಿಲು ಬಡಿದು ಮನೆ ಕಳೆದುಕೊಂಡ ವೃದ್ಧ ದಂಪತಿ

    -ಬಿದ್ದೋದ ಮನೆಯಲ್ಲಿ 5 ತಿಂಗಳಿನಿಂದ ವಾಸ

    ದಾವಣಗೆರೆ: ಸಿಡಿಲು ಬಡಿದು ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಡ ಕುಟುಂಬವೊಂದು ಬೀದಿಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಳೆದ ಐದು ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಎನ್ನುವರ ಮನೆಗೆ ಸಿಡಿಲು ಬಡಿದಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು. ಇಡೀ ಕುಟುಂಬವೇ ಬೀದಿಗೆ ಬಿದ್ದಂತಾಯಿತು.

    ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೇವಲ ಐದು ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದ್ದಾರೆ. ಉಟ್ಟಬಟ್ಟೆಯಲ್ಲಿ ಮನೆಯಿಂದ ಬಂದು ಜೀವ ಉಳಿಸಿಕೊಂಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗದೇ ಬೀದಿಗೆ ಬಿದ್ದಿದ್ದಾರೆ. ಮಾಯಕೊಂಡ ಕ್ಷೇತ್ರದ ಶಾಸಕ ಪ್ರೋ. ಲಿಂಗಣ್ಣನವರ ಮನೆ ಬಾಗಿಲು ಕಾದರೂ ಕೂಡ ಶಾಸಕರಿಗೆ ಬಡ ಕುಟುಂಬದ ಮೇಲೆ ಕರುಣೆ ಎನ್ನುವುದೇ ಬಂದಿಲ್ಲ.

    ಕಳೆದ ಐದು ತಿಂಗಳಿಂದ ಯಾವುದೋ ಬಿದ್ದೋದ ಮನೆಯಲ್ಲಿ ವೃದ್ಧ ದಂಪತಿ ಜೀವನ ನಡೆಸುತ್ತಿದ್ದು, ಸರ್ಕಾರ ಮಾತ್ರ ಇವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ವೃದ್ಧ ದಂಪತಿ ನಮಗೆ ವಿಷವಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲದೆ ಸಿಡಿಲು ಬಡಿದ ರಭಸಕ್ಕೆ ಶಿವಪ್ಪನ ಪತ್ನಿ ಕರಿಯಮ್ಮನಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ.

  • ಪತ್ನಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಶರಣಾದ ವೃದ್ಧ

    ಪತ್ನಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಶರಣಾದ ವೃದ್ಧ

    ಬೆಂಗಳೂರು: ವೃದ್ಧನೊಬ್ಬ ಪತ್ನಿಗೆ ವಿಷ ಕುಡಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಿರಿನಗರದಲ್ಲಿ ನಡೆದಿದೆ.

    ಗಿರಿನಗರದ ನಿವಾಸಿ ಕೃಷ್ಣಮೂರ್ತಿ ಹಾಗೂ ಸ್ವರ್ಣ ಮೃತ ದುರ್ದೈವಿಗಳು. ಕೃಷ್ಣಮೂರ್ತಿ ಅವರು ಮೊದಲು ಪತ್ನಿ ಸ್ವರ್ಣ ಅವರಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ. ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸ್ವರ್ಣ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಸಿಗೆ ಹಿಡಿದ ಅವರನ್ನು ಆರೈಕೆ ಮಾಡಬೇಕಾದ ಮಗ ಹಾಗೂ ಸೊಸೆ ನಿಷ್ಕಾಳಜಿ ತೋರುತ್ತಿದ್ದರು. ಅಷ್ಟೇ ಅಲ್ಲದೆ ಸಣ್ಣಪುಟ್ಟ ವಿಚಾರಕ್ಕೂ ವೃದ್ಧ ದಂಪತಿಯ ಜೊತೆಗೆ ಜಳವಾಡುತ್ತಿದ್ದರು. ಇದರಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಕುರಿತು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಗೆ ಪುರಸ್ಕಾರ

    ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಗೆ ಪುರಸ್ಕಾರ

    ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ದರೋಡೆಕೋರರೊಂದಿಗೆ ಹೋರಾಡಿ ಜೀವ ಉಳಿಸಿಕೊಂಡಿದ್ದ ವೃದ್ಧ ದಂಪತಿಗೆ ತಮಿಳುನಾಡು ರಾಜ್ಯ ಸರ್ಕಾರ ಸಹಾಸ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ತಮಿಳುನಾಡಿನ ತಿರುವನ್ವೇಲಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ವೃದ್ಧ ದಂಪತಿಗಳಾದ 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದರು. ಇಬ್ಬರು ದರೋಡೆಕೋರರೊಂದಿಗೆ ಹೋರಾಟ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ದಂಪತಿಯ ಸಹಾಸಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

    ವಿಡಿಯೋದಲ್ಲೇನಿದೆ..?
    ದಂಪತಿ ಭಾನುವಾರ ರಾತ್ರಿ ಊಟ ಮುಗಿಸಿದ್ದ ಕಡಾಯಮ್ ನ ತಮ್ಮ ಮನೆಯ ಹೊರಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಪತ್ನಿ ಎದ್ದು ಮನೆಯೊಳಗೆ ಹೋಗುತ್ತಾರೆ. ಪತಿ ಅಲ್ಲೇ ಕುಳಿತಿದ್ದು, ಅವರ ಹಿಂದಿನಿಂದ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬರುತ್ತಾನೆ. ಅಲ್ಲದೆ ಆತ ತನ್ನ ಕೈಯಲಿದ್ದ ಟವೆಲನ್ನು ಅಜ್ಜನ ಕುತ್ತಿಗೆಗೆ ಸುತ್ತಿ ಅಲ್ಲೇ ಕಂಬಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಅಲ್ಲಿಗೆ ಆಗಮಿಸುತ್ತಾನೆ.

    ಇದರಿಂದ ಗಾಬರಿಗೊಂಡ ಶನ್ಮುಗವೆಲ್ ಜೋರಾಗಿ ಕಿರುಚಿಕೊಂಡಿದ್ದು, ಕೂಡಲೇ ಪತ್ನಿ ಮನೆಯೊಳಗಿಂದ ಓಡಿ ಬಂದಿದ್ದು, ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರೂ ದಾಳಿಕೋರರ ವಿರುದ್ಧ ಹೋರಾಡಿದ್ದರು. ದರೋಡೆಕೋರರಲ್ಲಿ ಕೈಯಲ್ಲಿ ಆಯುಧವಿದ್ದರು ಕೂಡ ದಾಳಿಕೋರರಿಂದ ವೃದ್ಧ ದಂಪತಿ ತಮ್ಮ ಧೈರ್ಯದಿಂದ ಪರಾಗಿದ್ದರು. ಇಬ್ಬರ ಧೈರ್ಯ ಕಂಡ ದರೋಡೆಕೋರರು ಏನೂ ಮಾಡಲಾಗದೆ ಸ್ಥಳದಿಂದ ಎಸ್ಕೇಪ್ ಆಗಿದ್ದರು.

    ಸಿಎಂ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶನ್ಮುಗವೆಲ್ ಅವರು, ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದಿರುವುದು ಹೆಮ್ಮೆ ಎನಿಸಿದೆ. ತಮ್ಮ ದೂರಿನ ಮೇರೆಗೆ ಬಹುಬೇಗ ಸಂಘಟನೆ ಬಗ್ಗೆ ಸ್ಪಂಧಿಸಿದ ಪೊಲೀಸರಿಗೆ ನಾವು ಧನ್ಯವಾದ ಹೇಳುತ್ತೇವೆ. ಇಂದಿನ ಯುವ ಸಮುದಾಯಕ್ಕೆ ನಾವು ಸ್ಫೂರ್ತಿಯಾಗಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.

  • ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಯ ವಿಡಿಯೋ ವೈರಲ್

    ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಯ ವಿಡಿಯೋ ವೈರಲ್

    ಚೆನ್ನೈ: ವೃದ್ಧ ದಂಪತಿ ದರೋಡೆಕೋರರೊಂದಿಗೆ ಹೋರಾಡಿದ ಸಾಹಸಮಯ ಘಟನೆಯೊಂದು ತಮಿಳುನಾಡಿನ ತಿರುವನ್ವೇಲಿಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ರಾತ್ರಿ ನಡೆದಿದೆ. 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದ ವೃದ್ಧ ದಂಪತಿಯಾಗಿದ್ದಾರೆ. ಇವರು ಇಬ್ಬರು ದರೋಡೆಕೋರರೊಂದಿಗೆ ಹೋರಾಟ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ದಂಪತಿಯ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲೇನಿದೆ..?
    ದಂಪತಿ ಭಾನುವಾರ ರಾತ್ರಿ ಊಟ ಮುಗಿಸಿ ಕಡಾಯಮ್ ನ ತಮ್ಮ ಮನೆಯ ಹೊರಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಪತ್ನಿ ಎದ್ದು ಮನೆಯೊಳಗೆ ಹೋಗುತ್ತಾರೆ. ಪತಿ ಅಲ್ಲೇ ಕುಳಿತಿದ್ದು, ಅವರ ಹಿಂದಿನಿಂದ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬರುತ್ತಾನೆ. ಅಲ್ಲದೆ ಆತ ತನ್ನ ಕೈಯಲಿದ್ದ ಟವೆಲನ್ನು ಅಜ್ಜನ ಕುತ್ತಿಗೆಗೆ ಸುತ್ತಿ ಅಲ್ಲೇ ಕಂಬಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಅಲ್ಲಿಗೆ ಆಗಮಿಸುತ್ತಾನೆ.

    ಇದರಿಂದ ಗಾಬರಿಗೊಂಡ ಶನ್ಮುಗವೆಲ್ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಪತ್ನಿ ಮನೆಯೊಳಗಿಂದ ಓಡಿ ಬಂದಿದ್ದು, ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರೂ ದಾಳಿಕೋರರ ವಿರುದ್ಧ ಹೋರಾಡಿದ್ದಾರೆ. ಈ ಮೂಲಕ ಅವರಿಂದ ಅಜ್ಜ ಬಚಾವ್ ಆಗಿದ್ದಾರೆ.

    ದರೋಡೆಕೋರರಲ್ಲಿ ಕೈಯಲ್ಲಿ ಆಯುಧವಿದ್ದು ವೃದ್ಧ ದಂಪತಿಯ ಕೊಲೆಗೆ ಯತ್ನಿಸಿದ್ದಾರೆ. ಆದರೆ ದಂಪತಿ ಅಲ್ಲೇ ಇದ್ದ ಕುರ್ಚಿಗಳಿಂದ ದರೋಡೆಕೋರರ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೂ ಬಿಡದ ಖದೀಮರು ತಮ್ಮ ಕೈಯಲ್ಲಿದ್ದ ಆಯುಧಗಳಿಂದ ಎಲ್ಲೆಂದರಲ್ಲಿ ಕಡಿದಿದ್ದಾರೆ. ಪರಿಣಾಮ ವೃದ್ಧರು ಹೋರಾಡಿದ ಕುರ್ಚಿಯೆಲ್ಲ ಪೀಸ್ ಪೀಸ್ ಆಗಿದೆ.

    ಆ ಪೀಸ್ ನಿಂದಲೇ ದಂಪತಿ ಕೂಡ ಬಿಡದೇ ದರೋಡೆಕೋರರನ್ನು ಹಿಮ್ಮೆಟ್ಟಿಸಿದ್ದಾರೆ. ಬಳಿಕ ಏನೂ ಮಾಡಲು ಸಾಧ್ಯವಾಗದೇ ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ವೃದ್ಧ ದಂಪತಿಯ ಧೈರ್ಯವನ್ನು ಜನ ಕೊಂಡಾಡುತ್ತಿದ್ದಾರೆ.