Tag: elder sister

  • ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಶಾ (Rajeshwariben Shah) ಇಂದು ನಿಧನರಾಗಿದ್ದಾರೆ.

    ರಾಜೇಶ್ವರಿಬೆನ್ ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಸಹೋದರಿಯ ನಿಧನದ ಹಿನ್ನೆಲೆಯಲ್ಲಿ ಹೇಗ ಸಚಿವರು ಇಂದು ಗುಜರಾತ್‌ನಲ್ಲಿ (Gujrat) ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕೆಲ ದಿನಗಳಿಂದ ರಾಜೇಶ್ವರಿಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು ಎಂದು ಬಿಜೆಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸಹೋದರಿಯ ರಾಜೇಶ್ವರಿಬೆನ್ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಅಹಮದಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ನಂತರ ಥಾಲ್ತೇಜ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆದಿದೆ. ಇದನ್ನೂ ಓದಿ: 60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ

    ಅಹಮದಾಬಾದ್‌ಗೆ ಬಂದಿದ್ದರು ಗೃಹ ಸಚಿವ: ಅಮಿತ್‌ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲು ಅವರು ಭಾನುವಾರದಿಂದ ಅಹಮದಾಬಾದ್‌ನಲ್ಲಿದ್ದರು. ಇಂದು ಬನಸ್ಕಾಂತ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಬನಸ್ಕಾಂತದ ದೇವದರ್ ಗ್ರಾಮದ ಬನಸ್ ಡೈರಿ ಉದ್ಘಾಟನೆ ಮಾಡಬೇಕಿತ್ತು. ಬಳಿಕ ಮಧ್ಯಾಹ್ನ ಅವರು ಗಾಂಧಿನಗರದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವವರಿದ್ದರು. ಈ ಎರಡೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

    ಉತ್ತರಾಯಣ ಹಬ್ಬದ ನಿಮಿತ್ತ ಗೃಹ ಸಚಿವ ಶಾ ಭಾನುವಾರ ಭಗವಾನ್ ಜಗನ್ನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ವೇಜಲಪುರದಲ್ಲೂ ಗಾಳಿಪಟ ಹಾರಿಸಿದರು. ಸೋಮವಾರ ಅಹಮದಾಬಾದ್ ಮತ್ತು ಗಾಂಧಿನಗರದ ಉತ್ತರಾಯಣ ಆಚರಣೆಯಲ್ಲಿ ಭಾಗವಹಿಸುವ ಯೋಜನೆ ಇತ್ತು.

  • ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    ಬಿಜೆಪಿ ಮುಖಂಡನ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ

    – ಆರೋಪಿ ಅಕ್ಕನ ಬಗ್ಗೆ ಬಳಸಿದ ಪದವೇ ಕೊಲೆಗೆ ಕಾರಣ

    ಮೈಸೂರು: ಮೈಸೂರಿನಲ್ಲಿ ಮಾರ್ಚ್ 6 ರಂದು ಹುಟ್ಟುಹಬ್ಬದ ಪಾರ್ಟಿಯಲ್ಲೇ ನಡೆದಿದ್ದ ಬಿಜೆಪಿ ಮುಖಂಡ ಆನಂದ್ ಬರ್ಬರ ಹತ್ಯೆಗೆ ಅಸಲಿ ಕಾರಣ ಈಗ ಸ್ಪಷ್ಟವಾಗಿದೆ.

    ಆನಂದ್ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ ಬಸವರಾಜ್ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾನೆ. ಆರೋಪಿ ಬಸವರಾಜ್ ನ ಅಕ್ಕನ ಬಗ್ಗೆ ಕೊಲೆಯಾದ ಆನಂದ್ ಕೆಟ್ಟದಾಗಿ ಮಾತನಾಡಿದ್ದೇ ಆತನ ಕೊಲೆಗೆ ಕಾರಣವಾಗಿದೆ. ಆರೋಪಿ ಬಸವರಾಜ್, ರಾ ಎಣ್ಣೆ ಕುಡಿದು ಅದೇ ಬಾಟಲ್‍ನಲ್ಲಿ ಆನಂದ್ ಬುರುಡೆ ಬಿಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಾರ್ಚ್ 5ರ ಸಂಜೆ ಬಸವರಾಜ್‍ಗೆ ಕರೆ ಮಾಡಿ ಆನಂದ್ ಪಾರ್ಟಿಗೆ ಕರೆಸಿಕೊಂಡಿದ್ದ. ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದ್ದರು. ಕುಡಿದಾಗ ಬಾಸ್‍ನಂತೆ ವರ್ತಿಸುತ್ತಿದ್ದ ಬಿಜೆಪಿ ಮುಖಂಡ ಆನಂದ್, ತನ್ನ ಸುತ್ತಮುತ್ತ ಇದ್ದವರನ್ನು ನಿಂದಿಸುತ್ತ ತಾನು ಹೇಳಿದ ಕೆಲಸ ಮಾಡುವಂತೆ ಸೂಚಿಸುತ್ತಿದ್ದ. ಅಲ್ಲದೆ ಈ ಹಿಂದೆಯೂ ಪಾರ್ಟಿ ಕೊಡಿಸಿ ಬಸವರಾಜ್ ಮೇಲೆ ಆನಂದ್ ಹಲ್ಲೆ ಮಾಡಿದ್ದ.

    ಈ ಬಾರಿಯೂ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಮಧ್ಯರಾತ್ರಿ ಬಸವರಾಜ್ ಜೊತೆ ಆನಂದ್ ಕುಚೇಷ್ಠೆ ಮಾಡಿ, ಬಸವರಾಜ್ ತಲೆ ಮೇಲೆ ಹೊಡೆದು ಅವರ ಅಕ್ಕನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆನಂದ್ ಮಾತಿನಿಂದ ಸಿಟ್ಟಿಗೆದ್ದ ಬಸವರಾಜ್ ಅರ್ಧ ಬಾಟೆಲ್ ರಾ ಎಣ್ಣೆಯನ್ನು ಕುಡಿದು, ಅದೇ ಬಾಟಲ್‍ನಿಂದಲೇ ಆನಂದ್ ತಲೆಗೆ ಹೊಡೆದಿದ್ದಾನೆ. ಒಂದೇ ಏಟಿಗೆ ಆನಂದ್ ತಲೆ ಹಾಗೂ ಬಾಟಲ್ ಎರಡು ಓಪನ್ ಆಗಿದೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾನೆ. ಆಗ ಜೇಬಿನಲ್ಲಿದ್ದ ಚಾಕುವಿನಿಂದ ಆನಂದ್‍ಗೆ ಹಿಗ್ಗಾಮುಗ್ಗ ಇರಿದು ಕೊಲೆ ಮಾಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕೊಲೆ ನಂತರ ಅಪಾರ್ಟ್‌ಮೆಂಟ್‌ ನಿಂದ ಮನೆಗೆ ತೆರಳಿ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಮಾರ್ಚ್ 6ರಂದೆ ಬೆಂಗಳೂರಿಗೆ ತೆರಳಿದ್ದಾನೆ. ನಂತರ ಸ್ನೇಹಿತರ ಸಲಹೆಯಂತೆ ತಾನೇ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.