Tag: elder brother

  • ಸೈಟ್ ಹಂಚಿಕೆ ವಿಚಾರ- ತಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಅಣ್ಣ

    ಸೈಟ್ ಹಂಚಿಕೆ ವಿಚಾರ- ತಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಅಣ್ಣ

    ಯಾದಗಿರಿ: ಸೈಟ್ ಹಂಚಿಕೆ ವಿಚಾರಕ್ಕೆ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಜಿಲ್ಲೆಯ ಸುರಪುರ ತಾಲೂಕಿನ ದಿವಾಳಗುಡ್ಡದಲ್ಲಿ ಘಟನೆ ನಡೆದಿದೆ. ಶಿವರಾಜ್ (21) ಕೊಲೆಯಾದ ಯುವಕ. ಅಣ್ಣ ರಾಘವೇಂದ್ರ ತನ್ನ ತಮ್ಮನನ್ನೇ ಕೊಂದಿದ್ದಾನೆ. ಕೊಲೆ ಮಾಡಲು ತಾತಪ್ಪ ಮತ್ತು ನರಸಿಂಹರಾಜು ಇಬ್ಬರೂ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿದೆ.

    ಸೈಟ್ ಹಂಚಿಕೆ ವಿಚಾರದಲ್ಲಿ ಶುರುವಾದ ಮೂವರು ಸಹೋದರರ ಜಗಳ ಮಕ್ಕಳ ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮದ ನಿಂಗಪ್ಪ, ಮರೇಪ್ಪ, ತಾತಪ್ಪ ಮೂವರು ಅಣ್ಣ ತಮ್ಮಂದಿರಾಗಿದ್ದು, ತಾತಪ್ಪನ ಹೆಸರಿನಲ್ಲಿ ಸೈಟ್ ಇತ್ತು. ಆದರೆ ತಾತಪ್ಪ ತನ್ನ ಸಹೋದರರಾದ ನಿಂಗಪ್ಪ, ಮರೇಪ್ಪಗೆ ಪಾಲು ನೀಡಿದೆ, ಇಡೀ ಸೈಟ್ ನಲ್ಲಿ ಮನೆಕಟ್ಟಲು ಮುಂದಾಗಿದ್ದ. ಇದರಿಂದಾಗಿ ಕೋಪಗೊಂಡ ನಿಂಗಪ್ಪನ ಮಗ ಶಿವರಾಜ್, ತನ್ನ ದೊಡ್ಡಪ್ಪ ತಾತಪ್ಪನ ಹತ್ತಿರ ಜಗಳವಾಡಲು ಮುಂದಾಗಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾತಪ್ಪನ ಮಗ ರಾಘವೇಂದ್ರ  ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಕೋಪದಲ್ಲಿದ್ದ ರಾಘವೇಂದ್ರಗೆ ತಾತಪ್ಪ ಮತ್ತು ನರಸಿಂಹರಾಜು ಕೊಲೆ ಮಾಡುವಂತೆ ಕುಮ್ಮಕ್ಕು ನೀಡಿರುವ ಆರೋಪ ಸಹ ಕೇಳಿಬಂದಿದೆ. ಆರೋಪಿಗಳು ಸದ್ಯ ತಲೆ ಮರೆಸಿಕೊಂಡಿದ್ದು, ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುರಪುರ ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ ಮತ್ತು ಸಿಪಿಐ ಎಸ್.ಎಂ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ – ದೀಪಾವಳಿ ದಿನವೇ ಹರಿಯಿತು ನೆತ್ತರು!

    ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ – ದೀಪಾವಳಿ ದಿನವೇ ಹರಿಯಿತು ನೆತ್ತರು!

    ಹುಬ್ಬಳ್ಳಿ: ದೀಪಾವಳಿ ಹಬ್ಬದ ದಿನವೇ ನೆತ್ತರು ಹರಿದಿದ್ದು, ತಮ್ಮನಿಂದಲೇ ಅಣ್ಣ ಕೊಲೆಯಾಗಿರುವ ಘಟನೆ ಗೋಕುಲ ಗ್ರಾಮದಲ್ಲಿ ನಡೆದಿದೆ.

    ಭೀಮಶಿ ಬೆಂಗೇರಿ (36) ಕೊಲೆಯಾದ ದುರ್ದೈವಿ. ಇಂದು ಸಂಜೆ ಗೋಕುಲ ಗ್ರಾಮದ ರಂಗಮಂದಿರದ ಬಳಿ ತಮ್ಮ ಬಸು ಬೆಂಗೇರಿ (34) ತನ್ನ ಅಣ್ಣ ಭೀಮಶಿಯನ್ನು ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಆರೋಪಿ ಸಹೋದರ ಪೊಲೀಸರಿಗೆ ಶರಣಾಗಿದ್ದಾನೆ.

    ಸ್ಥಳೀಯರ ಮಾಹಿತಿಗಳ ಪ್ರಕಾರ ಇಬ್ಬರೂ ಇತ್ತೀಚೆಗಷ್ಟೇ ಜಮೀನನ್ನು ಭಾಗ ಮಾಡಿಕೊಂಡಿದ್ದರು. ಆದರೆ ಬಸು ಬೆಂಗೇರಿ ಕೇಳಿದ್ದ ಜಮೀನನ್ನು ಭೀಮಶಿ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಇಬ್ಬರಿಗೂ ಆಗಾಗ ಜಗಳ ನಡೆಯುತ್ತಲೇ ಇತ್ತು. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಮುಖ್ಯಸ್ಥರು ಇವರಿಬ್ಬರ ನಡುವೆ ರಾಜಿ ಪಂಚಾಯಿತಿಯನ್ನು ನಡೆಸಿದ್ದರು. ಆದರೆ ಅದು ಪ್ರಯೋಜನವಾಗಿರಲಿಲ್ಲ. ಜಮೀನನ್ನು ಬಿಟ್ಟುಕೊಡದಿದ್ದರಿಂದ ಸಿಟ್ಟಿಗೆದ್ದ ಬಸು ಇಂದು ತನ್ನ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಮೃತ ಭೀಮಶಿ ಬೆಂಗೇರಿ ಶ್ರೀರಾಮ ಸೇನೆ ಜಿಲ್ಲಾ ಉಪಾಧ್ಯಕ್ಷನಾಗಿದ್ದರೆ, ಕೊಲೆ ಮಾಡಿದ ಬಸು ಬಂಗೇರಿ ಈ ಮೊದಲು ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ.

    ಏನಿದು ಘಟನೆ?:
    ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಸ್ವಲ್ಪ ಹೊತ್ತು ಟಿವಿ ನೋಡಿದ ಅಣ್ಣ ಬಳಿಕ ಓದಲೆಂದು ತನ್ನ ಕೋಣೆಗೆ ತೆರಳಿದ್ದಾನೆ. ತಮ್ಮ ಟಿವಿ ನೋಡುತ್ತಾ ಅಪ್ಪ- ಅಮ್ಮನ ಬರುವಿಕೆಯನ್ನು ಕಾಯುತ್ತಿದ್ದನು.

    ಸಂಜೆ ಸುಮಾರು 5.5ರ ಸುಮಾರಿಗೆ ಬಾಲಕಿಯ ನೆಚ್ಚಿನ ಶೋ ಒಂದನ್ನು ನೋಡಲು ತಮ್ಮನ ಬಳಿ ರಿಮೋಟ್ ಕೇಳಿದ್ದಾಳೆ. ಆದ್ರೆ ಬಾಲಕ ರಿಮೋಟ್ ಕೊಡಲು ನಿರಾಕರಿಸಿದ್ದಾನೆ. ಶೋ 6 ಗಂಟೆಗೆ ಆರಂಭವಾಗುತ್ತದೆ ಎಂದಾಗ ಆಕೆ ಮತ್ತೆ ರಿಮೋಟ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಈ ವೇಳೆಯೂ ಆತ ತಾನು ಕೊಡಲ್ಲ ಅಂತ ಹೇಳಿ ತನ್ನ ಪಾಡಿಗೆ ತಾನು ಟಿವಿ ನೋಡುತ್ತಾ ಕುಳಿತಿದ್ದನು.

    ಇದರಿಂದ ಸಿಟ್ಟುಗೊಂಡ ಬಾಲಕಿ ತಮ್ಮನಿಗೆ ಸರಿಯಾಗಿ ಥಳಿಸಿ ನಂತರ ಬೆಡ್ ರೂಮಿಗೆ ತೆರಳಿ ಗಟ್ಟಿಯಾಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಅಕ್ಕ ತನಗೆ ಹೊಡೆದಿದ್ದನ್ನು ಲೆಕ್ಕಿಸದೆ ಕೂಡಲೇ ತಮ್ಮ ಅಲ್ಲಿಗೆ ತೆರಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾನೆ. ಹೀಗೆ ಸುಮಾರು ಹೊತ್ತು ಡೋರ್ ಓಪನ್ ಮಾಡುವಂತೆ ಕೇಳಿಕೊಂಡರೂ ಆಕೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದರಿಂದ ಗಾಬರಿಗೊಂಡ ತಮ್ಮ ನೇರವಾಗಿ ಅಣ್ಣನ ಬಳಿ ಹೋಗಿ ವಿಷಯ ತಿಳಿಸಿದ್ದಾನೆ.

    ತಕ್ಷಣವೇ ರೂಮಿನ ಬಳಿ ಬಂದ ಅಣ್ಣ ಬಾಗಿಲು ಒಡೆದಿದ್ದಾನೆ. ಈ ವೇಳೆ ತಂಗಿ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಳು. ಇದರಿಂದ ಗಾಬರಿಗೊಂಡ ಅಣ್ಣ ಹಾಗೂ ತಮ್ಮ ಸೇರಿ ಬಾಲಕಿಯನ್ನು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಇತ್ತ ನಡೆದ ಘಟನೆಯನ್ನು ಹೆತ್ತವರಿಗೂ ತಿಳಿಸಿದ್ದಾರೆ.

    ಆದ್ರೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv