Tag: Ekta Divas

  • ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಅಹಮದಾಬಾದ್: ಸರ್ದಾರ್ ವಲ್ಲಭಭಾಯ್ ಪಟೇಲ್‍ರ 144ನೇ ಜನ್ಮದಿನವನ್ನು ದೇಶಾದ್ಯಂತ ‘ಏಕತಾ ದಿವಸ್’ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ಕೆವಡಿಯಾದಲ್ಲಿರುವ ಏಕತಾ ಪ್ರತಿಮೆಯ ಪಾದಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

    ಇತ್ತ ದೆಹಲಿಯ ಪಟೇಲ್ ಚೌಕ್‍ನಲ್ಲಿ ಸರ್ದಾರ್ ಪ್ರತಿಮೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಪುಷ್ಪನಮನ ಸಲ್ಲಿಸಿದ್ದಾರೆ. ಹಾಗೆಯೇ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ ಬಾಕ್ಸರ್ ಮೇರಿ ಕೋಮ್ ಕೋಡ ಉಪಸ್ಥಿತರಿದ್ದರು. ಇತ್ತ ಬೆಂಗಳೂರಿನಲ್ಲಿ ಕೂಡ ಏಕತಾ ಮ್ಯಾರಥಾನ್ ನಡೆದಿದ್ದು, ವಿಧಾನಸೌಧದಲ್ಲಿ ಮ್ಯಾರಥಾನ್‍ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

    ಸರ್ದಾರ್ ವಲ್ಲಭಭಾಯ್ ಪಟೇಲ್‍ರ ಜಯಂತೋತ್ಸವದಂದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯರೂಪಕ್ಕೆ ಬಂದಿದೆ. ಕೇಂದ್ರ ಸರ್ಕಾರವು 370ರ ವಿಧಿ ರದ್ದು ಮಾಡಿದ ಮೂರು ತಿಂಗಳ ಬಳಿಕ ಕಣಿವೆ ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಜಾರಿಗೆ ಬಂದಿದೆ.

    370ನೇ ವಿಧಿ ಹಾಗೂ 35(ಎ) ವಿಧಿ ಈ ಎರಡು ವಿಧಿಗಳು ಭಾರತದಲ್ಲಿ ಭಯೋತ್ಪಾದನೆಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಪ್ರಧಾನಿಯವರು 370ನೇ ವಿಧಿ ಹಾಗೂ 35 ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದಾರಿಯನ್ನು ಮುಚ್ಚಿದ್ದಾರೆ ಎಂದು ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಅಮಿತ್ ಶಾ ಹೇಳಿದರು.

    2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದ್ದರು. ಹೀಗಾಗಿ 2014ರಿಂದ ಪ್ರತಿ ವರ್ಷ ಅಕ್ಟೋಬರ್ 31ರಂದು ಏಕತಾ ದಿನವನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಬರೀ ಕೇಂದ್ರ ನಾಯಕರು ಮಾತ್ರವಲ್ಲದೆ ರಾಜ್ಯದ ಅನೇಕ ರಾಜಕಾರಣಿಗಳು ಕೂಡ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಸಿದ್ದಾರೆ.