Tag: ek patni vrata

  • ಸ್ವಪಕ್ಷೀಯರಿಂದಲೇ ಟೀಕೆ – ವಿಷಾದ ವ್ಯಕ್ತಪಡಿಸಿದ ಸುಧಾಕರ್‌

    ಸ್ವಪಕ್ಷೀಯರಿಂದಲೇ ಟೀಕೆ – ವಿಷಾದ ವ್ಯಕ್ತಪಡಿಸಿದ ಸುಧಾಕರ್‌

    ಬೆಂಗಳೂರು: ಏಕಪತ್ನಿವ್ರತಸ್ಥ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

    ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

    ಸುಧಾಕರ್‌ ಹೇಳಿದ್ದು ಏನು?
    ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ್‌, ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕಪತ್ನಿವ್ರತಸ್ಥರಾ ಎಂದು ಪ್ರಶ್ನೆ ಮಾಡಿದ್ದರು.