Tag: education

  • ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಹಾಲು, ಪೇಪರ್ ಹಾಕಿ ಅಜ್ಜಿ-ತಂಗಿಯನ್ನ ಸಾಕ್ತಿರೋ ಆನಂದನಿಗೆ ಬೇಕಿದೆ ಸಹಾಯ

    ಬೆಳಗಾವಿ: ಶಾಲೆ ಕಲಿತು ದೊಡ್ಡ ಅಧಿಕಾರಿಯಾಗುವ ಗುರಿ, ಆದರೆ ಕಿತ್ತು ತಿನ್ನುವ ಬಡತನ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಯನ್ನು ಕಳೆದುಕೊಂಡ ಬಾಲಕ ಶಾಲೆ ಬಿಟ್ಟು ಹಾಲು, ಪೇಪರ್ ಹಂಚಿ ನಂತರ ಪಿವೂನ್ ಕೆಲಸ ಮಾಡುತ್ತ ಕುಟುಂಬವನ್ನ ಸಲಹುತ್ತಿದ್ದಾನೆ.

    ಈತನ ಹೆಸರು ಆನಂದ ನಾಯಿಕ. ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ನಿವಾಸಿ. ಚಿಕ್ಕ ವಯಸ್ಸಿನಲ್ಲಿಯೆ ತಂದೆ-ತಾಯಿಯನ್ನು ಕಳೆದುಕೊಂಡ ಆನಂದನಿಗೆ ಶಾಲೆ ಕಲಿತು ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಗುರಿಯಿದೆ. ಬೆಳಗಾವಿಯ ಚಿಕ್ಕೂಂಬಿ ಮಠದ ಅನಾಥ ಆಶ್ರಮದಲ್ಲಿ ಇದ್ದು ಎಸ್‍ಎಸ್‍ಎಲ್‍ಸಿ ವರಗೆ ವ್ಯಾಸಂಗ ಮಾಡಿ 70% ಅಂಕ ಪಡೆದಿದ್ದಾನೆ.

    ಆದರೆ ಮನೆಯಲ್ಲಿ ಇಳಿವಯಸ್ಸಿನ ಅಜ್ಜಿ ಜೊತೆಗೆ ಚಿಕ್ಕ ವಯಸ್ಸಿನ ತಂಗಿಯ ದಿನ ಹೊಟ್ಟೆ ತುಂಬಿಸುವ ಜವಾಬ್ದಾರಿ ಆನಂದನ ಮೇಲೆದೆ. ಅಜ್ಜಿ ಹಾಗೂ ತಂಗಿಯ ಹೊಟ್ಟೆ ತುಂಬಿಸಲು ಆನಂದ ಹಾಲು, ಪೇಪರ್ ಹಂಚಿ ಸಂಘ- ಸಂಸ್ಥೆಯೊಂದರಲ್ಲಿ ಪಿವೂನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ಪಿಗ್ಮಿ ಕಲೆಕ್ಷನ್ ಮಾಡಿ ಬಂದ ಆದಾಯದಿಂದ ಮನೆ ನಡೆಸುತ್ತಿದ್ದಾನೆ.

    ಆನಂದ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ಹೊತ್ತು ವ್ಯಾಸಂಗವನ್ನು ತ್ಯಜಿಸಿ ದುಡುಮೆ ಮಾಡುತ್ತಿರುವುದು ವಿಶಾದನಿಯ. ಕಲಿಯುವ ವಯಸ್ಸಿನಲ್ಲಿ ದುಡಿಯುವ ಜವಾಬ್ದಾರಿ ಬಂದಿದ್ದು ತಮ್ಮ ಕ್ಲಾಸ್‍ಮೇಟ್ ಸ್ಥಿತಿಯನ್ನು ಕಂಡು ಅಯ್ಯೋ ಅನ್ನಿಸುತ್ತದೆ ಎಂದು ಗೆಳೆಯ ಶಿವರಾಜ ಹೇಳುತ್ತಾರೆ.

    ತೊಂದರೆಯಲ್ಲಿರುವ ಆನಂದ ನಾಯಿಕ್‍ಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಹಾಯ ಬೇಕಾಗಿದೆ. ಸಹೃದಯ ದಾನಿಗಳು ಸಹಾಯ ಮಾಡಿದ್ದಲ್ಲಿ ವ್ಯಾಸಂಗ ಮುಂದುವರೆಸಿ ಗುರಿ ತಲುಪುವ ಹಂಬಲ ಆನಂದನದು.

     

  • ಹಾಸಿಗೆ ಹಿಡಿದ ಮನೆಯ ಯಜಮಾನ- ಮೂವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೇಕಿದೆ ನೆರವು

    ಹಾಸಿಗೆ ಹಿಡಿದ ಮನೆಯ ಯಜಮಾನ- ಮೂವರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೇಕಿದೆ ನೆರವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಸಣ್ಣದೊಂದು ಮನೆಯಲ್ಲಿ ಕರುಣಾಕರ್ ಎಂಬವರು ತನ್ನ ಹೆಂಡತಿ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇವರು ಕೂಲಿ ಕೆಲಸ ಮಾಡಿ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಮೂವರು ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂದು ಕನಸ್ಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. ಆರು ವರ್ಷದ ಹಿಂದೆ ಬಾವಿಯ ಕಸ ತೆಗೆಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 64 ಅಡಿ ಆಳದ ಬಾವಿಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಈಗ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಇದೀಗ ಆರು ವರ್ಷದಿಂದ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗದೆ ಹಾಸಿಗೆಯಲ್ಲೇ ನರಳಾಡುತ್ತಿದ್ದಾರೆ.

    ಮನೆಯ ಆಧಾರ ಸ್ತಂಭವಾಗಿದ್ದ ಕರುಣಾಕರ್ ಅವರಿಗಾದ ಈ ಸ್ಥಿತಿಯಿಂದ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ದಿಕ್ಕು ತೋಚದಂತಾದರು. ಪತ್ನಿ ಪದ್ಮಲತಾ ಬೀಡಿ ಕಟ್ಟಿ ಅದರಿಂದ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಡುವೆ ದೊಡ್ಡ ಮಗಳು ಕಾವ್ಯಶ್ರೀ ಪ್ರಥಮ ಪಿಯುಸಿಯಲ್ಲಿ, ಎರಡನೆಯವಳು ದೀಕ್ಷಾ ಒಂಬತ್ತನೇ ತರಗತಿಯಲ್ಲಿ ಹಾಗೂ ಕೊನೆಯ ಮಗಳು ಹರ್ಷ ಕಲ್ಪನಾ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮೂವರಿಗೂ ಒಳ್ಳೆಯ ಅಂಕಗಳಿದ್ದು ಕಾವ್ಯಶ್ರೀ ಎಸ್‍ಎಸ್‍ಎಲ್‍ಸಿಯಲ್ಲಿ 568 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಳು. ಮೂವರೂ ಮುಂದೆ ಹೆಚ್ಚು ಹೆಚ್ಚು ಕಲಿಯಬೇಕೆಂಬ ಆಸೆಯಲ್ಲಿದ್ದಾರೆ. ಆದರೆ ಶಾಲಾ ಶುಲ್ಕ ಕಟ್ಟಲು ಬೇಕಾದ ಹಣಕ್ಕೂ ಸಮಸ್ಯೆ ಇದೆ. ಹೀಗಾಗಿ ಯಾರಾದರೂ ಸಹಾಯ ಮಾಡಿದರೆ ಮುಂದೆ ಚೆನ್ನಾಗಿ ಓದಿ ಶಿಕ್ಷಕಿ, ಲಾಯರ್ ಆಗಬೇಕೆಂಬ ಆಸೆಯಲ್ಲಿದ್ದಾರೆ ಈ ಮಕ್ಕಳು.

    ಮೂವರೂ ಹೆಣ್ಣು ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ಸಣ್ಣ ಸಣ್ಣ ಮೊತ್ತದ ಹಣವನ್ನು ಶಿಕ್ಷಕರು, ಸ್ಥಳೀಯ ದಾನಿಗಳು ನೀಡಿ ಪ್ರೋತ್ಸಾಹಿಸಿದ್ದಾರೆ. ಆದರೆ ದೊಡ್ಡವಳಾದ ಕಾವ್ಯಶ್ರೀಗೆ ಕಳೆದ ಬಾರಿ ಪ್ರಥಮ ಪಿಯುಸಿಯ ಪ್ರವೇಶ ಶುಲ್ಕ, ಪುಸ್ತಕ ಸೇರಿದಂತೆ ಇತರೆ ಖರ್ಚಿಗೆ ತೊಂದರೆಯಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಕಲಿಯೋದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ಯಜಮಾನ ಹಾಸಿಗೆ ಹಿಡಿದಿದ್ದು, ಅವರ ಆರೈಕೆ ಜೊತೆಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಈ ಕುಟುಂಬದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾದರೂ ಪ್ರೋತ್ಸಾಹ ಸಿಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    https://www.youtube.com/watch?v=QGjwNbKcRLw

  • ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಭಾಗ್ಯ: ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು?

    ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಭಾಗ್ಯ: ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು?

    ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್, ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಉಚಿತ ಲ್ಯಾಪ್‍ಟಾಪ್ ನೀಡುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ಘೋಷಣೆಯಾದ ಅಂಶಗಳನ್ನು ನೀಡಲಾಗಿದೆ.

    ಉನ್ನತ ಶಿಕ್ಷಣ- 4401 ಕೋಟಿ ರೂ.
    – ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ. 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.

    – ಹೈದರಾಬಾದ್ ಕರ್ನಾಟಕ ಯೋಜನೆಯಡಿ ರಾಯಚೂರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ. ಯಾದಗಿರಿ, ರಾಯಚೂರಿನ ಎಲ್ಲ ಕಾಲೇಜುಗಳು ಹೊಸ ವಿವಿ ವ್ಯಾಪ್ತಿಗೆ.

    – 25 ಹೊಸ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆ – ತಲಾ 4 ಕೋಟಿ
    – 23 ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ – ತಲಾ 2 ಕೋಟಿ
    – ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿಗೆ 25 ಕೋಟಿ.
    – ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ಅನುದಾನ

    – ಹಂಪಿ ಕನ್ನಡ ವಿವಿ ಬೆಳ್ಳಿಹಬ್ಬದ ಅಂಗವಾಗಿ 25 ಕೋಟಿ
    – ಕರ್ನಾಟಕ ವಿವಿ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕೆ 7 ಕೋಟಿ
    – ಕರ್ನಾಟಕ ವಿವಿಯಲ್ಲಿ ಸಾಹು ಮಹಾರಾಜರ ಅಧ್ಯಯನ ಪೀಠ ಸ್ಥಾಪನೆ.
    – ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – 18,266 ಕೋಟಿ ರೂ.
    – ಜುಲೈಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ವಿತರಣೆ
    – ಬೇಸಿಗೆ, ರಜಾ ದಿನಗಳಿಗಾಗಿ ವಿಶ್ವಾಸ ಕಿರಣ ಯೋಜನೆ
    – 1 ನೇ ತರಗತಿಯಿಂದ ಆಂಗ್ಲಭಾಷೆ ಪರಿಣಾಮಕಾರಿ ಯೋಜನೆ
    – ಗ್ರಾಮಪಂಚಾಯ್ತಿ ಕೇಂದ್ರಗಳಲ್ಲಿ 12ನೇ ತರಗತಿವರೆಗೆ 176 ಸಂಯೋಜಿತ ಶಾಲೆಗಳು
    – 1 ಸಾವಿರ ಪ್ರೌಢ ಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಲ್ಲಿ ಐಟಿ@ಸ್ಕೂಲ್
    – ಶೂ ಮತ್ತು ಸಾಕ್ಸ್ ವಿತರಣೆ
    – 8 ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ ಸಮವಸ್ತ್ರ ವಿತರಣೆ
    – ಪ್ರಾಥಮಿಕೆ ಶಾಲೆಗಳಿಗೆ 10 ಸಾವಿರ, ಪ್ರೌಢಶಾಲೆಗಳಿಗೆ 1626, ಪಿಯುಗೆ 1191 ಉಪನ್ಯಾಸಕರನ್ನ ಎರಡು ಹಂತದಲ್ಲಿ ನೇಮಕ
    – ಶಿಕ್ಷಣ ಕಿರಣ ಯೋಜನೆಯಡಿ ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಾತಿ.

     

  • ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?

    ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?

    – ಸೋರಿಕೆಯಾಗಿಲ್ಲ ಸಿಬ್ಬಂದಿಯೇ ವಾಟ್ಸಪ್‍ನಲ್ಲಿ ಕಳುಹಿಸಿರಬಹುದು
    – ಪಬ್ಲಿಕ್ ಟಿವಿಗೆ ನಿರ್ದೇಶಕಿ ಶಿಖಾ ಸ್ಪಷ್ಟನೆ

    ರಾಯಚೂರು: ಪಿಯುಸಿ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆಯಾ ಎನ್ನುವ ಶಂಕೆ ಈಗ ಹುಟ್ಟಿಕೊಂಡಿದೆ. ಇಂದು ನಡೆದ ವಾಣಿಜ್ಯ ವಿಭಾಗದ ಅಕೌಂಟಿನ್ಸಿ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಹರಿದಾಡಿರುವುದೇ ಈ ಶಂಕೆ ಮೂಡಲು ಕಾರಣವಾಗಿದೆ.

    ರಾಯಚೂರಿನ ಮಾನ್ವಿಯ ಗಾಂಧಿ ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ವಾಟ್ಸಪ್‍ನಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದೆ. ಪ್ರಶ್ನೆ ಪತ್ರಿಕೆಯನ್ನು ಬೆಳಗ್ಗೆ 10.15ಕ್ಕೆ ನೀಡಿದರೆ, 10.30ಕ್ಕೆ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. ಆದರೆ ಈ ಪ್ರಶ್ನೆಪತ್ರಿಕೆ ಬೆಳಗ್ಗೆ 10.50ಕ್ಕೆ ವಾಟ್ಸಪ್‍ನಲ್ಲಿ ಹರಿದಾಡಿದೆ.

    ಪಿಯು ಪರೀಕ್ಷೆ ಆರಂಭಗೊಂಡ ಬಳಿಕ ವಿದ್ಯಾರ್ಥಿಯೊಬ್ಬ ಮಧ್ಯದಲ್ಲಿ ಪರೀಕ್ಷೆ ಮುಗಿಸಿ ಹೋದರೂ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವಂತಿಲ್ಲ. 1.30ಕ್ಕೆ ನಿಗದಿತ ಅವಧಿ ಮುಗಿದ ಬಳಿಕವೇ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಆದರೆ ಪರೀಕ್ಷೆ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಪ್ರಶ್ನೆ ಪತ್ರಿಕೆ ಹೊರಗಡೆ ಬಂದಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಆದರೆ ಈ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಹೊರ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈ ಕೇಂದ್ರದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಹೀಗಾಗಿ ಯಾರು ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ ಎನ್ನುವುದನ್ನು ತಿಳಿಯುವುದು ಕಷ್ಟ. ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಯಿಂದಲೇ ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿದೆ.

    ಅಕ್ರಮ ನಡೆಯುತ್ತಾ?
    ಒಂದು ವೇಳೆ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಸಿಕ್ಕಿದರೆ ಉತ್ತರವನ್ನು ತಯಾರು ಮಾಡಿ ಚೀಟಿ ಮೂಲಕ ವಿದ್ಯಾರ್ಥಿಗಳಿಗೆ ನೀಡುವ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ. ವಿದ್ಯಾರ್ಥಿಗಳ ಪೋಷಕರ ಜೊತೆ ಸೇರಿ ಶಿಕ್ಷಕರೇ ಕಾಪಿಗೆ ಸಹಕಾರ ನೀಡುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ಭಾನುವಾರ ಪ್ರಸಾರ ಮಾಡಿತ್ತು. ಇದರಲ್ಲಿ ವಾಟರ್ ಬಾಯಿ ವಿದ್ಯಾರ್ಥಿಗಳಿಗೆ ಚೀಟಿ ನೀಡಿ ಹೋಗುತ್ತಿರುವುದು ಸೆರೆಯಾಗಿತ್ತು. ಹೀಗಾಗಿ ಈ ಒಂದು ಪ್ರಶ್ನೆ ಪತ್ರಿಕೆಯ ಫೋಟೋ ರಾಜ್ಯದ ಹಲವು ಭಾಗಗಳಿಗೆ ತಲುಪಿರುವ ಸಾಧ್ಯತೆಯು ಇದೆ. ಈ ಒಂದು ಪ್ರಶ್ನೆ ಪತ್ರಿಕೆ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಹಿಂದಿನ ಪರೀಕ್ಷೆಯ ವೇಳೆಯೂ ಈ ರೀತಿ ನಡೆದಿತ್ತಾ ಎನ್ನುವುದು ತಿಳಿದು ಬಂದಿಲ್ಲ.

    ಸೋರಿಕೆಯಾಗಿಲ್ಲ: ರಾಯಚೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಸಿಬ್ಬಂದಿ ಅಕ್ರಮದಿಂದಾಗಿ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಬಂದಿರಬಹುದು. ಆ ಕೇಂದ್ರದಲ್ಲಿ ಏನಾಗಿದೆ ಎನ್ನುವುದನ್ನು ತನಿಖೆ ನಡೆಸುತ್ತೇವೆ ಎಂದು ಪದವಿ ಪೂರ್ವ ಶಿಕ್ಷಣಾ ಇಲಾಖೆಯ ನಿರ್ದೇಶಕಿ ಶಿಖಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಬೀದರ್‍ನಲ್ಲಿ ಏನಾಗಿತ್ತು?
    ಮಾರ್ಚ್ 9ರಂದು ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಬೀದರ್‍ನ ನೂರ ಕಾಲೇಜಿನಲ್ಲಿ ಪ್ರಾಂಶುಪಾಲರು, ಪರೀಕ್ಷೆ ನಿರ್ವಹಿಸುವ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೋಣೆ ನಂಬರ್ 1, ಸಿಸಿ ಕ್ಯಾಮರಾ 10 ರಲ್ಲಿ ನಕಲಿಗೆ ಸಿಬ್ಬಂದಿಗಳು ಪ್ರೋತ್ಸಾಹ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ವ್ಯಕ್ತಿಯೊಬ್ಬ ರಾಜಾರೋಷವಾಗಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ ನಕಲು ಮಾಡಲು ಸಹಕಾರ ಮಾಡುತ್ತಿದ್ದು ಜೊತೆಗೆ ವಾಟರ್‍ಬಾಯಿ ಕೂಡ ವಿದ್ಯಾರ್ಥಿಗಳಿಗೆ ಚೀಟಿಗಳನ್ನು ನೀಡಿ ಹೋಗುತ್ತಿರುವ ದೃಶ್ಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=uLxQjBR3pXw

  • ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ ಆರಂಭ – ಭಾರೀ ಭದ್ರತೆಯಲ್ಲಿ ಎಕ್ಸಾಂ

    ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ ಆರಂಭ – ಭಾರೀ ಭದ್ರತೆಯಲ್ಲಿ ಎಕ್ಸಾಂ

    ಬೆಂಗಳೂರು: ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆಯಾಗಿರೋ ದ್ವೀತಿಯ ಪಿಯುಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗ್ತಿದೆ. ಮೊದಲ ದಿನವಾದ ಇಂದು ಜೀವಶಾಸ್ತ್ರ ಹಾಗೂ ಇತಿಹಾಸ ವಿಷಯದ ಪರೀಕ್ಷೆಗಳು ನಡೆಯಲಿವೆ.

    ಈ ವರ್ಷ 6 ಲಕ್ಷದ 84 ಸಾವಿರದ 490 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದ್ರಲ್ಲಿ 3 ಲಕ್ಷದ 48 ಸಾವಿರದ 562 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 35 ಸಾವಿರದ 909 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. 19 ಜನ ತೃತೀಯ ಲಿಂಗಿಗಳು ಪರೀಕ್ಷೆ ಬರೆಯುತ್ತಿರೋದು ವಿಶೇಷ. ರಾಜ್ಯಾದ್ಯಂತ 998 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ವರೆಗೆ ಪರೀಕ್ಷೆಗಳು ನಡೆಯಲಿವೆ.

    ಕಳೆದ ವರ್ಷ ಪೇಪರ್ ಲೀಕ್‍ನಿಂದಾದ ಸಮಸ್ಯೆಯಿಂದ ಎಚ್ಚೆತ್ತಿರುವ ಪಿಯುಸಿ ಬೋರ್ಡ್ ಈ ವರ್ಷ ಭಾರೀ ಭದ್ರತೆ ಮಾಡಿಕೊಂಡಿದೆ. ಕರ್ನಾಟಕ ಸೆಕ್ಯೂರ್ ಎಕ್ಸಾಂಮೀನೇಷನ್ ಸಿಸ್ಟಮ್ ಪ್ರೋಗ್ರಾಂ ಅಳವಡಿಸಿಕೊಂಡಿದ್ದು, ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ, ಮ್ಯಾಗ್ನೆಟಿಕ್ ಡೋರ್‍ಗಳು, ಬಯೋ ಮೆಟ್ರಿಕ್ ಪದ್ಧತಿ ಸೇರಿದಂತೆ ಇನ್ನಿತರ ಹೈ ಸೆಕ್ಯುರಿಟಿ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ.

  • ಶಾಕಿಂಗ್: ತರಗತಿ ಕೊಠಡಿಯಲ್ಲೇ ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿ ಕೊಲೆ

    ಶಾಕಿಂಗ್: ತರಗತಿ ಕೊಠಡಿಯಲ್ಲೇ ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿ ಕೊಲೆ

    ಬೆಂಗಳೂರು: ಚಾಕುವಿನಿಂದ ಇರಿದು ವಿದ್ಯಾರ್ಥಿಯೊಬ್ಬನನ್ನು ಸಹಪಾಠಿ ವಿದ್ಯಾರ್ಥಿಗಳೇ ಬರ್ಬರ ಕೊಲೆ ಮಾಡಿರುವ ಶಾಕಿಂಗ್ ಘಟನೆ ಯಲಹಂಕದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಹತ್ತನೇ ತರಗತಿ  ಹರ್ಷ(16) ಕೊಲೆಯಾದ ವಿದ್ಯಾರ್ಥಿ. ಸೋಮವಾರ ಶಾಲೆಯ ವಾರ್ಷಿಕೋತ್ಸವ ನಡೆಯುತ್ತಿದ್ದ ವೇಳೆ ಮಧ್ಯಾಹ್ನ 12 ಗಂಟೆಯ ವೇಳೆ ತರಗತಿ ಕೊಠಡಿಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

    ಶಿಕ್ಷಕರು ಯಾರೂ ಇಲ್ಲದ ವೇಳೆ ವಿದ್ಯಾರ್ಥಿಗಳು ಚೂರಿ ಇರಿದಿದ್ದಾರೆ. ಶಿಕ್ಷಕರಿಗೆ ತಿಳಿದ ಕೂಡಲೇ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ವೇಳೆ ಹರ್ಷ ಮೃತಪಟ್ಟಿದ್ದ.

    ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕ್ಷುಲ್ಲಕ ಕಾರಣಕ್ಕೆ  ಜಗಳ ನಡೆದು ಕೊಲೆ ನಡೆದಿದೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.

  • ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ನವೀಕರಣ ಕಟ್ಟಡ ಉದ್ಘಾಟನೆ

    ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ನವೀಕರಣ ಕಟ್ಟಡ ಉದ್ಘಾಟನೆ

    ಮಂಗಳೂರು: ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನವೀಕರಣಗೊಂಡ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ನವೀಕೃತ ಕಟ್ಟಡವನ್ನು ಕ್ಯಾನ್ ಫಿನ್ ಹೋಮ್ ಲಿಮಿಟೆಡ್‍ನ ಪ್ರಬಂಧಕ ಉಮೇಶ್ ಪೈ ಉದ್ಘಾಟಿಸಿದರು.

    ಕಟ್ಟಡ ಉದ್ಘಾಟಿಸಿ ಮಾತನಾಡಿದ ಉಮೇಶ್ ಪೈ ಅವರು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ದೇಶದ ಏಳಿಗೆಗಾಗಿ ಜೀವನ ನಡೆಸಿರಿ ಎಂದು ಕರೆ ನೀಡಿದರು.

    ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಒದಗಿಸಿದ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಸಹಕಾರಿಯಾಗಬೇಕು. ಕ್ಯಾನ್ ಫಿನ್ ಹೋಮ್ಸ್ ಇವರ ಉದಾರತೆಯ ಸಮಾಜದ ಉಳಿದ ಸಂಘ ಸಂಸ್ಥೆಗಳಲ್ಲಿ ಇದ್ದಲ್ಲಿ ವಿದ್ಯಾ ಸಂಸ್ಥೆಗಳು ಬೆಳೆಯುತ್ತವೆ. ಅದರ ಉಪಯೋಗ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಎಂದು ತಿಳಿಸಿದರು.

    ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್‍ನವರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆದಿದೆ. ಈ ವೇಳೆ ಗುತ್ತಿಗೆದಾರ ಸುಧೀರ್ ರಾಜ್, ಸುಮಂತ್ ರಾವ್, ಫೆಲ್ಸಿ ರೇಗೋ, ರಮಾನಂದ ಭಂಡಾರಿ, ಜಗದೀಶ್, ನಾಗೇಶ್ ನಾಯಕ್ ಮತ್ತಿತರು ಉಪಸ್ಥತಿರಿದ್ರು. ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ್ ನಾಯ್ಕ್ ಎ.ಸಿ ಸ್ವಾಗತಿಸಿದರು. ಸಹ ಶಿಕ್ಷಕ ನಾಗೇಶ್ ನಾಯಕ್ ವಂದನಾರ್ಪಣೆಗೈದರು. ಸುಭಾಷಿಣಿ ಕಾರ್ಯಕ್ರಮವನ್ನು ನಿರೂಪಿಸಿದರು.

     

  • ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ನರ್ಸರಿ ಶಾಲೆಯ ಸಿಬ್ಬಂದಿ  ಒಬ್ಬನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ್ ಅಲಿಯಾಸ್ ಮಂಜ ಬಂಧಿತ ಆರೋಪಿ. ಪ್ರಾಂಶುಪಾಲೆ ನಿರ್ಲಕ್ಷ್ಯ ವಿರುದ್ಧ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈಗ ಶಾಲೆಯ ಪ್ರಾಂಶುಪಾಲೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ನರ್ಸರಿ ಶಾಲೆಯಲ್ಲಿ ಸಿಸಿ ಕ್ಯಾಮರಾ ನಿರ್ವಹಣೆ ಮಾಡುತ್ತಿದ್ದ ಅರೋಪಿ ಮಂಜುನಾಥ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫೆ.17ರಂದು ಸ್ಕೂಲ್ ನಿಂದ ಕಣ್ಣೀರಿಡುತ್ತಾ ಮನೆಗೆ ಬಂದಾಗ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಫೆ. 18ರಂದು ಬಾಲಕಿಯ ಪೋಷಕರು ಬಾಲಕಿಯಿಂದ ಹೇಳಿಕೆ ನೀಡಿ ಮಾರತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಈಗ ಆರೋಪಿಯನ್ನು ಬಂಧಿಸಿದ್ದಾರೆ.

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಇಂದು ಶಾಲೆಯ ಬಳಿ ಹಲವು ಪೋಷಕರು ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಏನಿದು ಪೋಕ್ಸೋ ಕಾಯ್ದೆ?
    ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು(ಪೋಕ್ಸೋ) ಜಾರಿಗೆ ತರಲಾಗಿದೆ. ಪೋಕ್ಸೋ ಪ್ರಕಾರ 18 ವರ್ಷದೊಳಗಿನವರನ್ನು ಮಗು ಎಂದು ಪರಿಗಣಿಸಲಾಗುತ್ತದೆ.  ಅತ್ಯಾಚಾರ, ಗುಪ್ತಾಂಗ ಮುಟ್ಟುವುದು, ಲೈಂಗಿಕತೆಗೆ ಪ್ರಚೋದಿಸುವುದು,ಅಶ್ಲೀಲ ಚಿತ್ರಗಳ ಬಳಕೆ, ಮಗುವಿನ ಅಶ್ಲೀಲ ಚಿತ್ರ ಸಂಗ್ರಹಿಸಿದರೆ ಅದು ಈ ಕಾಯ್ದೆಯ ಪ್ರಕರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

  • ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದಾನೆ 4ನೇ ಕ್ಲಾಸಿನ ವಿದ್ಯಾರ್ಥಿ!

    ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದಾನೆ 4ನೇ ಕ್ಲಾಸಿನ ವಿದ್ಯಾರ್ಥಿ!

    ಬೆಂಗಳೂರು: ನಗರದ ಕುಂಬಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿರುವಾಗ ವಿದ್ಯಾರ್ಥಿ ಉದಯ್ ಮಾತ್ರ ಸೈಲೆಂಟಾಗಿ ಕುಳಿತಿರುತ್ತಾನೆ. ಸದ್ಯ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಈತ ಕಳೆದ ಎರಡು ವರ್ಷದಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾನೆ.

    ಹೌದು. ಉದಯ್‍ನ ಎರಡೂ ಕಿವಿಗಳಲ್ಲಿ ಕಳೆದ ಎರಡು ವರ್ಷದಿಂದ ರಕ್ತ ಮಿಶ್ರಿತ ನೀರು ಬರುತ್ತದೆ. ಈ ಹುಡುಗನಿಗೆ ಏಕೆ ಹೀಗೆ ರಕ್ತ ಬರುತ್ತೆ ಅಂತ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ. ಈ ಹುಡುಗ ಆಟವಾಡಿದ್ರೆ, ಜಾಸ್ತಿ ಓಡಾಡಿದ್ರೆ, ಏಕಾಏಕಿ ಯಾವುದಾದ್ರು ಒಂದು ಕಿವಿಯಿಂದ ರಕ್ತ ಸುರಿಯುತ್ತೆ. ಆಗ ಹುಡುಗನಿಗೆ ತಲೆ ನೋವು ಮತ್ತು ಕಿವಿ ನೋವು ಶುರುವಾಗಿ ಮಂಕಾಗಿ ಬಿಡುತ್ತಾನೆ.

    ಶಾಲೆಯಲ್ಲಿ ಎಲ್ಲ ಮಕ್ಕಳೂಂದಿಗೆ ಆಟವಾಡುವ ಆಸೆ ಉದಯ್‍ದ್ದು. ಅದ್ರೆ ಆಟವಾಡಿದ್ರೆ ಎಲ್ಲಿ ಮತ್ತೆ ರಕ್ತ ಬರುತ್ತೆ ಅಂತ ಈತನನ್ನು ಶಾಲೆಯ ಶಿಕ್ಷಕರು ದೂರ ಇಡುತ್ತಾರೆ. ಮುಂಚೆ ಈತ ಒಂದು ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಆದ್ರೆ ಈ ಸಮಸ್ಯೆಯ ಕಾರಣ ನೀಡಿ ಉದಯ್‍ನನ್ನ ಶಾಲೆಯಿಂದ ಹೊರಹಾಕಿದ್ದಾರೆ.

    ಇನ್ನು ಉದಯ್‍ನ ಈ ಸಮಸ್ಯೆಯನ್ನ ವೈದ್ಯರ ಬಳಿ ತೋರಿಸಿದ್ರೆ ಯಾವ ಸಮಸ್ಯೆನೂ ಕಾಣಿಸ್ತಿಲ್ಲ, ಎಲ್ಲಾ ಸರಿ ಇದೆ ಅಂತ ಹೇಳುತ್ತಾರಂತೆ. ಮಗನ ಈ ಕಾಯಿಲೆಯ ಚಿಕಿತ್ಸೆಗಾಗಿ ಉದಯ್‍ನ ಪೋಷಕರು 60 ಸಾವಿರಕ್ಕೂ ಹೆಚ್ಚು ಹಣ ಖಾರ್ಚು ಮಾಡಿ, ನಾನಾ ಆಸ್ಪತ್ರೆಗೆ ಆಲೆದಿದ್ದಾರೆ, ಅದ್ರೆ ಯಾವುದೇ ಪ್ರಯೋಜನವಾಗಿಲ್ಲ. ಮಗುವಿನ ತಂದೆ ಕಾರು ಚಾಲಕರಾಗಿದ್ದು, ಅಪಘಾತವಾಗಿ ನಡೆದಡುವ ಸ್ಥಿತಿಯಲಿಲ್ಲ. ಒಟ್ಟಿನಲ್ಲಿ ಇದೀಗ ಪಬ್ಲಿಕ್ ಟವಿಯ ಬೆಳಕು ಕಾರ್ಯಕ್ರಮದ ಮೂಲಕ ವಿಭಿನ್ನ ವಿಚಿತ್ರ ಮತ್ತು ವಿಸ್ಮಯ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ಉದಯ್ ಪೋಷಕರು.

    https://www.youtube.com/watch?v=ept8HsXUxIo

  • ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

    ಮಡಿಕೇರಿ: ನಮ್ಮ ಅಕ್ಕಪಕ್ಕದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಜನತೆಗೆ ಪರಿಚಯಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅದರಲ್ಲೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಪಾಲು ದೊಡ್ಡದಾಗಿರಬೇಕು. ಆದರೆ ಜನನಾಯಕರು ಹಾಗೂ ಸರ್ಕಾರಿ ಬಾಬುಗಳೇ ಮರೆತಾಗ ಪ್ರತಿಭೆಗಳನ್ನೇ ಅರಳುವ ಮುನ್ನ ಚಿವುಟಿದಂತಾಗುತ್ತದೆ. ಆದರೆ ಇಂಥ ಪ್ರತಿಭೆಗಳನ್ನು ಗುರುತಿಸಿ ದೇಶದ ಮಟ್ಟದಲ್ಲಿ ಫುಟ್ಬಾಲ್‍ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ಈ ಪಿ ಟಿ ಮೇಷ್ಟ್ರು ಸಜ್ಜಾಗಿದ್ದಾರೆ.

    ದಶಕಗಳಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಂದ ಅವರು ಎಲ್ಲರಿಗಿಂತ ಭಿನ್ನ. ಈ ಶಾಲೆಗೆ ಸೇರುವ ಮಕ್ಕಳಲ್ಲಿ ಆಡಗಿರುವ ಸೂಕ್ತ ಪ್ರತಿಭೆಗಳನ್ನು ಗುರುತಿಸುತ್ತಾ ಅವರಿಗೆ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳನ್ನು ತಿದ್ದಿತೀಡಿ ಅವರ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಕಷ್ಟು ಪ್ರಯತ್ನಿಸಿ ಅವರು ಸಫಲರಾಗಿದ್ದಾರೆ.

    ಆಟವಾಡಲು ಶೂ ಇಲ್ಲದೆ ಬರಿಗಾಲಿನಲ್ಲಿ ಆಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅಷ್ಟು ಸುಲಭದ ಕೆಲಸವಲ್ಲ. ಫುಟ್ಬಾಲ್ ನಲ್ಲಿ ಭಾಗವಹಿಸುವ ಬಾಲಕರಿಗೆ ಬೆಳಿಗ್ಗೆ ಸಾಯಕಾಲ ವಿಶೇಷ ತರಬೇತಿಯನ್ನು ನೀಡಿ ಇವರು ಮಾರ್ಗದರ್ಶನ ನೀಡುತ್ತಾರೆ.

    ಈ ಶಾಲೆಯಲ್ಲಿ ಓದುತ್ತಿರುವ ಪೈಕಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಡ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಠಿಕ ಆಹಾರವನ್ನು ನೀಡಬೇಕಾಗುತ್ತದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ಯಾವುದೇ ಅನುದಾನ ನೀಡುವುದಿಲ್ಲ.

    ಆಟಗಾರರಿಗೆ ಜರ್ಸಿ(ಸಮವಸ್ತ್ರ) ಕಾಲಿಗೆ ಶೂ ಅಗತ್ಯವಿದೆ. ಇದಕ್ಕಾಗಿ ಅಂದಾಜು 60 ಸಾವಿರ ಖರ್ಚಾಗುತ್ತದೆ. ಈ ಹಣಕ್ಕಾಗಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ದಾನಿಗಳ ಬಳಿ ಹೋಗಿ ಬಡ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಂಡು ಬರುತ್ತಾರೆ, ಬಂದ ಹಣದಲ್ಲಿ ಬಡ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಾರೆ.

    ಒಟ್ಟಿನಲ್ಲಿ ತಮಗೆ ಸಂಬಳ, ಸವಲತ್ತು ಹೆಚ್ಚು ಬೇಕು ಎನ್ನುವವರೇ ಮಧ್ಯೆ ಇವರು ವಿಭಿನ್ನವಾಗಿ ಗುರುತಿಸಿಕೊಂಡು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

    https://www.youtube.com/watch?v=inJg34TyDj8