Tag: education

  • ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ಸರ್ಕಾರಿ ಕೆಲ್ಸ ಇಲ್ಲ: ವಿವಿವರೆಗಿನ ವಿದ್ಯಾರ್ಥಿನಿಯರ ಶಿಕ್ಷಣ ಫುಲ್ ಫ್ರೀ

    ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ಸರ್ಕಾರಿ ಕೆಲ್ಸ ಇಲ್ಲ: ವಿವಿವರೆಗಿನ ವಿದ್ಯಾರ್ಥಿನಿಯರ ಶಿಕ್ಷಣ ಫುಲ್ ಫ್ರೀ

    ದಿಸ್ಪುರ್: ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳಿಗೆ ಇನ್ನು ಮುಂದೆ ಸರ್ಕಾರಿ ಕೆಲಸ ನೀಡದೇ ಇರುವ ನಿರ್ಧಾರವನ್ನು ಅಸ್ಸಾಂ ಸರ್ಕಾರ ಕೈಗೊಂಡಿದೆ.

    ಅಸ್ಸಾಂ ಸರ್ಕಾರ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಈ ಮಸೂದೆಯಲ್ಲಿ ಎರಡಕ್ಕಿತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎನ್ನುವ ಅಂಶವನ್ನು ಸೇರಿಸಿದೆ.

    ಜನಸಂಖ್ಯಾ ನಿಯಂತ್ರಣ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    ಮಸೂದೆಯಲ್ಲಿ ಏನಿದೆ?
    ಸರ್ಕಾರಿ ಕೆಲಸ ಅಲ್ಲದೇ, ಪಂಚಾಯತ್ ಮತ್ತು ನಗರಸಭೆ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಅಷ್ಟೇ ಅಲ್ಲದೇ ಮದುವೆಯಾಗಲಿರುವ ವರನ ವಯಸ್ಸನ್ನು 21ಕ್ಕೇ ಏರಿಸಬೇಕೆಂಬ ಅಂಶವು ಇದರಲ್ಲಿದೆ.

    ವಿಶ್ವವಿದ್ಯಾಲಯ ಶಿಕ್ಷಣದವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವುದಾಗಿ ಸರ್ಕಾರ ಹೇಳಿದೆ. ಶಿಕ್ಷಣ, ಬಸ್ ಪ್ರಯಾಣ, ಪುಸ್ತಕ ಮತ್ತು ಹಾಸ್ಟೇಲ್ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು. ಇದರಿಂದಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಳಿಕೆಯಾಗಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    ಬಾಲ್ಯವಿವಾಹ ಆದವರು ಸರ್ಕಾರಿ ಉದ್ಯೋಗ ಪಡೆಯಲು ಅನರ್ಹರು ಮತ್ತು ಸರ್ಕಾರಿ ಉದ್ಯೋಗ, ಚುನಾವಣೆಯಲ್ಲಿ ಶೇ.50 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲು ಎನ್ನುವ ಅಂಶವು ಕರಡು ಮಸೂದೆಯಲ್ಲಿದೆ.

    ಮಸೂದೆಯಲ್ಲಿ ಪ್ರಸ್ತಾಪಗೊಂಡಿರುವ ಅಂಶಗಳ ಬಗ್ಗೆ ಜುಲೈವರೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಇದಾದ ಬಳಿಕ ವಿಧಾಸಭೆಯಲ್ಲಿ ಚರ್ಚೆ ನಡೆಸಿ ಕಾಯ್ದೆಯನ್ನು ತರಲಾಗುವುದು. ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಈಗ ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗುತ್ತಿದೆ ಎಂದು ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

  • ಮದ್ಯ ವ್ಯಸನದಿಂದ ಪೋಷಕರ ಸಾವು- ಮುದ್ದು ಮಕ್ಕಳಿಗೆ ಬೇಕಿದೆ ಸೂರು, ಶಿಕ್ಷಣದ ಆಸರೆ

    ಮದ್ಯ ವ್ಯಸನದಿಂದ ಪೋಷಕರ ಸಾವು- ಮುದ್ದು ಮಕ್ಕಳಿಗೆ ಬೇಕಿದೆ ಸೂರು, ಶಿಕ್ಷಣದ ಆಸರೆ

    ತುಮಕೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥ ಜೀವನ ನಡೆಸುತ್ತಿರುವ ಈ ಮಕ್ಕಳು ವಿದ್ಯಾಶ್ರೀ ಮತ್ತು ಕುಶಾಲ್. ತುಮಕೂರು ಜಿಲ್ಲೆ ಸಿರಾ ತಾಲೂಕಿನ ಮೊಸರುಕುಂಟೆ ಗ್ರಾಮದವರು. ಮದ್ಯ ವ್ಯಸನಿಗಳಾಗಿದ್ದ ಈ ಮಕ್ಕಳ ತಂದೆ-ತಾಯಿ ವರ್ಷದ ಹಿಂದೆ ಸಾವನ್ನಪ್ಪಿದರು. ಅಂದಿನಿಂದ ಈ ಅನಾಥರಿಗೆ ದಿಕ್ಕು ಅಜ್ಜಿ ಹನುಮಕ್ಕ ಒಬ್ಬರೇ.

    ಬಡತನದಲ್ಲಿದ್ದರೂ ವಿದ್ಯಾಶ್ರೀ ಹೆಸರಿಗೆ ತಕ್ಕಂತೆ ಶಾಲೆಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಓದುತ್ತಿದ್ದಾಳೆ. ಮನೆಯಲ್ಲಿ ತನ್ನ ತಮ್ಮ ಕುಶಾಲ್‍ನ ಹಾರೈಕೆ ಜೊತೆಗೆ ತನ್ನ ಜೀವನವನ್ನು ತಾನೇ ನೋಡಿಕೊಳ್ಳುತ್ತಿದ್ದಾಳೆ. ಮದ್ಯಪಾನದಿಂದ ಮೃತರಾದ ತನ್ನ ತಂದೆ-ತಾಯಿಯ ಸಾವಿನಿಂದ ತನಗಾದ ನೋವು ಯಾರಿಗೂ ಆಗುವುದು ಬೇಡವೆಂದು ಪ್ರಧಾನಿ ಮೋದಿಯವರಿಗೆ ಮದ್ಯಪಾನ ನಿಷೇಧಿಸಿ ಎಂದು ಪತ್ರ ಬರೆಯಲು ವಿದ್ಯಾಶ್ರೀ ಚಿಂತನೆ ನಡೆಸಿದ್ದಾಳೆ.

    ಮೊಸರುಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಶ್ರೀ 6ನೇ ತರಗತಿ ಓದುತ್ತಿದ್ದು, ತಮ್ಮ ಕುಶಾಲ್ 1ನೇ ತರಗತಿ ಓದುತ್ತಿದ್ದಾನೆ. ವಿದ್ಯಾಶ್ರೀಯ ಬಡತನ ಕಂಡ ಶಾಲೆಯ ಶಿಕ್ಷಕರೇ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಟ್ಟೆಯ ಜೊತೆಗೆ ಈ ಮಕ್ಕಳಿಗೆ ಊಟಕ್ಕೂ ತೊಂದರೆಯಿದೆ. ಜೊತೆಗೆ ಹಳೇ ಮನೆಯಲ್ಲಿ ಮಕ್ಕಳಿದ್ದು, ಮಳೆ ಬಂದಾಗ ಸೋರುತ್ತದೆ. ಹೀಗಾಗಿ ವಿದ್ಯಾಶ್ರೀ ಮತ್ತು ಆಕೆಯ ತಮ್ಮನಿಗೆ ಒಂದು ಸೂರಿನ ಅವಶ್ಯಕತೆ ಇದೆ.

    ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ-ಅಮ್ಮನ ಪ್ರೀತಿ ಕಳೆದುಕೊಂಡು, ಸ್ನೇಹಿತರೊಂದಿಗೆ ಆಟವಾಡಬೇಕಾದ ವಯಸ್ಸಿನಲ್ಲಿ ತಮ್ಮನ ಜೊತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಜವಬ್ದಾರಿ ವಿದ್ಯಾಶ್ರೀ ಮೇಲಿದೆ. ಶಾಲೆಯಲ್ಲಿ ಕೊಟ್ಟ ಸಮವಸ್ತ್ರದ ಜೊತೆಗೆ ಅವರಿವರು ಕೊಟ್ಟೆ ಹಳೇ ಬಟ್ಟೆಯುಟ್ಟುಕೊಂಡೇ ವಿದ್ಯಾಶ್ರೀ ಶಾಲೆಗೆ ಹೋಗುತ್ತಾಳೆ. ಈ ಮುದ್ದು ಮಕ್ಕಳಿಗೆ ತಲೆಗೊಂದು ಸೂರು ಮತ್ತು ಕಲಿಯಲು ಶಿಕ್ಷಣದ ಆಸರೆ ಬೇಕಿದೆ.

     

  • ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಬೀದರ್: ರಣ ಬಿಸಿಲಿನಲ್ಲಿ ತಲೆ ಮೇಲೆ ಪುಸ್ತಕ ಹಿಡಿದುಕೊಂಡು ಕಾಲೇಜಿಗೆ ಹೋರಟಿರುವ ವಿದ್ಯಾರ್ಥಿಗಳು. ಮೊತ್ತೊಂದು ಕಡೆ ಶಾಲೆಗೆ ಹೋಗಲು ವಿದ್ಯಾರ್ಥಿನಿಯರು ಮೈಲಿಗಟ್ಟಲೆ ಬ್ಯಾಗ್ ಹಾಕಿಕೊಂಡು ಸುಸ್ತಾಗಿ ನಡೆಯುತ್ತಿರುವ ದೃಶ್ಯ. ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲಾ ಅಂದ್ರೆ ನಂಬುತ್ತಿರಾ? ನಂಬಲೇಬೇಕು ಸ್ವಾಮಿ.

    ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಕಥೆ. 4 ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಬಸ್ಸನ್ನೇ ಕಾಣದೆ ಇರುವುದು ವಿಪರ್ಯಾಸ. ಮಸ್ಕಲ್ ಗ್ರಾಮದಿಂದ ಸಂತಪೂರ್ ಹೋಬಳಿಗೆ ಬರೋಕೆ 5 ಕೀಲೊಮೀಟರ್, ಠಾಣಾಕುಶನೂರ್ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗೋಕೆ ವಿದ್ಯಾರ್ಥಿಗಳು 10 ಕೀಲೋಮೀಟರ್ ನಡೆದುಕೊಂಡೆ ಹೋಗಬೇಕು. 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿದಿನದ ಗೋಳು ಇದು. ಈ ಗ್ರಾಮಕ್ಕೆ ಬಸ್ ಸಂಚಾರವಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನೇ ತೊರೆದಿರುವುದು ಬೇಸರದ ಸಂಗತಿಯಾಗಿದೆ.

    ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿರುವುದು ಒಂದು ಕಡೆಯಾದ್ರೆ ಸಂಜೆಯಾಗುತ್ತಿದಂತ್ತೆ ಗ್ರಾಮಕ್ಕೆ ಮರಳಲು ವಿದ್ಯಾರ್ಥಿನಿಯರು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರಗಳು ವಿದ್ಯಾರ್ಥಿನಿಯರ ಭಯಕ್ಕೆ ಮತ್ತೊಂದು ಕಾರಣವಾಗಿದೆ. ಬಸ್ ಇಲ್ಲದಿದ್ರೂ ಈ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಗ್ರಾಮದಿಂದ ವಾಲಿಬಾಲ್ ಕ್ರೀಡೆಗೆ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇನ್ನು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿರುವುದು ಬೇಸರದ ಸಂಗತಿಯಾಗಿದೆ. ಬೆಳಕು ಕಾರ್ಯಕ್ರಮದಿಂದಾದ್ರೂ ನಮ್ಮ ಗ್ರಾಮದ ಮಕ್ಕಳಿಗೆ ಬೆಳಕು ಸಿಗಲಿ ಅಂತಾ ದೂರದ ಬೀದರ್‍ನಿಂದ ಬಂದಿದ್ದಾರೆ.

     

  • 6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

    6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

    ಬೆಳಗಾವಿ: ಇಂದು ನಮ್ಮ ಪಬ್ಲಿಕ್ ಹೀರೋ ಒಬ್ಬರಲ್ಲ, ಮೂವರು. ಗಡಿನಾಡು ಬೆಳಗಾವಿಯಿಂದ ಬಂದಿರೋ ಹೀರೋಗಳಿವರು. ಕೇವಲ ಮೂವರು ಮಕ್ಕಳಿದ್ದ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಇವತ್ತು ಈ ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಎಲ್ಲರಿಗೂ ಹೈಟೆಕ್ ಶಿಕ್ಷಣ ಸಿಗುತ್ತಿದೆ.

    ರಾಮದುರ್ಗ ಮೂಲದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ರವೀಂದ್ರ ಗುರುವನ್ನವರ ಇವತ್ತಿನ ನಮ್ಮ ಪಬ್ಲಿಕ್ ಹೀರೋಗಳು. ಬೆಳಗಾವಿ ಮಹಾನಗರದ ಶಿವಬಸವ ನಗರದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 6 ವರ್ಷಗಳ ಹಿಂದೆ ಕೇವಲ ಮೂವರೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಮೂರು ಕೊಠಡಿಯ ಶಾಲೆಗೆ ಶಿಕ್ಷಕರು ಬೇಕಾಬಿಟ್ಟಿಯಾಗಿ ಬಂದು ಪಾಠ ಮಾಡಿ ಹೋಗ್ತಿದ್ರು. ರಾತ್ರಿಯಾದ್ರೆ ಶಾಲಾ ಕಟ್ಟಡದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು.

    ಶಾಲೆಯ ಪಕ್ಕದಲ್ಲೇ ಇದ್ದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಹಾಗೂ ಇವರ ಪತ್ನಿ ವಿಜಯಲಕ್ಷ್ಮಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟರು. ಶಾಲೆಯನ್ನು ದತ್ತು ಪಡೆದು ಎರಡು ಹೊಸ ಕೊಠಡಿಗಳ ಜೊತೆಗೆ 4 ಹೈಟೆಕ್ ಶೌಚಾಲಯ ಕಟ್ಟಿಸಿದ್ದಾರೆ. ಸತತ 6 ವರ್ಷಗಳ ಪರಿಶ್ರಮದಿಂದ ಈ ಶಾಲೆ ಈಗ ಹೈಟೆಕ್ ಆಗಿದೆ. ಈ ವೈದ್ಯ ದಂಪತಿ ವಾರಕ್ಕೆ ಮೂರು ದಿನ ಸಂಜೆ ಹೊತ್ತಲ್ಲಿ ಮಕ್ಕಳಿಗೆ ಟ್ಯೂಷನ್ ಕೂಡಾ ಮಾಡ್ತಾರೆ.

    ವೈದ್ಯ ದಂಪತಿ ಜೊತೆಗೆ ರವೀಂದ್ರ ಗುರುವನ್ನವರ ಅನ್ನೋರು ಕೈ ಜೋಡಿಸಿದ್ದಾರೆ. ಐಐಟಿಯಲ್ಲಿ ಪಿಎಚ್‍ಡಿ ಮಾಡಿರೋ ಇವರು ಪ್ರತಿ ಶನಿವಾರ ಹಾಗೂ ಭಾನುವಾರ ಮಕ್ಕಳಿಗೆ ವಿಶೇಷ ಕ್ಲಾಸ್ ತೆಗೆದುಕೊಳ್ತಾರೆ. ಈ ಶಾಲಾ ಮಕ್ಕಳಿಗೆ ಹೊಸ ಯೂನಿಫಾರಂ, ನೋಟ್‍ಬುಕ್, ಪೆನ್, ಪುಸ್ತಕ ಎಲ್ಲವನ್ನೂ ಇವರ ದುಡ್ಡಿನಿಂದಲೇ ಕೊಡಿಸಿದ್ದಾರೆ. ಟೀಚರ್‍ಗಳಿಗೆ ವಿಶೇಷ ಟ್ರೈನಿಂಗ್ ಕೂಡಾ ಕೊಡ್ತಾರೆ. ಮಕ್ಕಳಿಗೆ ಸರ್ಕಾರದ ಅನ್ನಭಾಗ್ಯದ ಜೊತೆ ಇಲ್ಲಿ ಮೊಳಕೆ ಕಟ್ಟಿದ ಕಾಳು ಸೇರಿದಂತೆ ಪೌಷ್ಠಿಕಾಂಶದ ಆಹಾರ ನೀಡಲಾಗುತ್ತೆ. ಶಾಲೆ ನೋಡಿಕೊಳ್ಳಲು ಒಬ್ಬ ಸೆಕ್ಯೂರಿಟಿ ಗಾರ್ಡ್ ಕೂಡಾ ನೇಮಿಸಲಾಗಿದೆ. ಇವರಿಗೆ ಶಾಲಾ ಆವರಣದಲ್ಲೇ ಮನೆ ಕಟ್ಟಿಕೊಟ್ಟಿದ್ದು, ಇವರ ಸಂಬಳವನ್ನೂ ಈ ಪ್ರಾಧ್ಯಾಪಕರೇ ನೀಡುತ್ತಿದ್ದಾರೆ.

    ಗಡಿನಾಡಲ್ಲಿ ಕನ್ನಡ ಹಾಗೂ ಕನ್ನಡ ಶಾಲೆಗಳೇ ಮಾಯವಾಗ್ತಿರೋ ಈ ಕಾಲದಲ್ಲಿ ಈ ಮೂವರ ಕೆಲಸ ನಿಜಕ್ಕೂ ಶ್ಲಾಘನೀಯ.

    https://www.youtube.com/watch?v=jG3GoTOCDuo

     

  • ತಂದೆಯ ನಿಧನದಿಂದ ಎಂಜಿನಿಯರಿಂಗ್ ಕನಸಿಗೆ ಕುತ್ತು:ವಿದ್ಯಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ತಂದೆಯ ನಿಧನದಿಂದ ಎಂಜಿನಿಯರಿಂಗ್ ಕನಸಿಗೆ ಕುತ್ತು:ವಿದ್ಯಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಶಿವಮೊಗ್ಗ: ಸಿಇಟಿಯಲ್ಲಿ 699ನೇ ಶ್ರೇಯಾಂಕ ಗಳಿಸಿದ ಹಿನ್ನೆಲೆಯಲ್ಲಿ ತಂದೆ ಮಗನನ್ನು ಎಂಜಿನಿಯರಿಂಗ್ ಕಳುಹಿಸಿದ್ರು. ಆದ್ರೆ ಈಗ ಮನೆಗೆ ಆಧಾರವಾಗಿದ್ದ ತಂದೆ ಮೃತಪಟ್ಟಿದ್ದು ಈಗ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

    ಲೋಕೋಪಯೋಗಿ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ಪುಟ್ಟ ಮನೆಯಲ್ಲಿ ಶೀಲಾ ದೇವೇಂದ್ರಪ್ಪ ದಂಪತಿ ವಾಸವಾಗಿದ್ದರು. ಆದರೆ ಮೂರು ತಿಂಗಳ ಹಿಂದಷ್ಟೇ ದೇವೇಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೇವೇಂದ್ರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. 31 ವರ್ಷಗಳ ಕಾಲ ಕೆಲಸ ಮಾಡಿದರೂ ದಿನಗೂಲಿಯಾಗಿಯೇ ಉಳಿದರು. ಇವರಿಗೀಗ ಮನೆಯ ಆಧಾರ ಸ್ಥಂಭವೇ ಕುಸಿದು ಹೋದಂತಾಗಿದೆ.

    ಸರ್ಕಾರಿ ನಿಯಮಗಳ ಪ್ರಕಾರ ದಿನಗೂಲಿ ನೌಕರರು ಸೇವೆಯಲ್ಲಿದ್ದು ಮೃತಪಟ್ಟರೆ ಆವರ ಕುಟುಂಬದವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಸದ್ಯಕ್ಕೆ ಇಲಾಖೆಯ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರಲು ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದಿದ್ದಾರೆ. ಇವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ರಾಕೇಶ್ ಸಿಇಟಿನಲ್ಲಿ 699ನೇ ಶ್ರೇಯಾಂಕ ಪಡೆಯುವ ಮೂಲಕ ಮೇರಿಟ್ ಸೀಟು ಪಡೆದು ಮೈಸೂರು ಜೆಎಸ್‍ಎಸ್‍ನಲ್ಲಿ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಓದುತ್ತಿದ್ದರೆ, ಕಿರಿಯ ಮಗ ಗಿರೀಶ್ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ.

    ಅಪ್ಪ ಅಕಾಲಿಕವಾಗಿ ಮೃತಪಟ್ಟ ಕಾರಣದಿಂದ ರಾಕೇಶ್ ಎಂಜಿನಿಯರ್ ಆಗಬೇಕು ಎಂಬ ಕನಸಿಗೆ ಕುತ್ತು ಬಂದಿದೆ. ಅಪ್ಪ ಉದ್ಯೋಗದಲ್ಲಿ ಇದ್ದ ಆಧಾರದಲ್ಲಿ ಬ್ಯಾಂಕ್‍ನಲ್ಲಿ ಒಂದೂವರೆ ಲಕ್ಷ ರೂ. ಶಿಕ್ಷಣ ಲೋನ್ ಮಾಡಿಸಿದ್ದರು. ದೇವೇಂದ್ರ ಅವರ ನಿಧನದಿಂದಾಗಿ ಈ ವರ್ಷ ಲೋನ್ ಸಿಗುವುದಿಲ್ಲ ಎಂದು ಬ್ಯಾಂಕಿನವರು ಹೇಳಿದ್ದಾರೆ. ದೇವೆಂದ್ರ ಅವರ ಪತ್ನಿ ಶೀಲಾ ಕೆಲವು ಬ್ಯಾಂಕುಗಳಲ್ಲಿ ಕಂಪ್ಯೂಟರ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಾ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದೇ ಸಂಪಾದನೆಯಲ್ಲಿ ಇಡೀ ಮನೆ ನಡೆಯಬೇಕಾಗಿದೆ.

    ಈಗ ರಾಕೇಶ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳ್ಳಲು ಇನ್ನೂ 2 ವರ್ಷ ವಾರ್ಷಿಕ 1.20 ಲಕ್ಷ ರೂಪಾಯಿ ನೆರವು ಬೇಕಾಗಿದೆ. ಎರಡನೇ ಮಗನೂ ಎಂಜಿನಿಯರ್ ಆಗಬೇಕು ಎಂಬ ಕನಸಿಟ್ಟುಕೊಂಡು ಶ್ರಮಪಟ್ಟು ಓದುತ್ತಿದ್ದಾನೆ. ಇವರಲ್ಲಿ ಯಾರೊಬ್ಬರಿಗೆ ನೆರವಾದರೂ ಅಷ್ಟೇ ಸಾಕು ಎನ್ನುತ್ತಿದ್ದಾರೆ ಶೀಲಾ.

  • ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆ ಅಂದ್ರೆ ಹೀಗಿರ್ಬೇಕಪ್ಪಾ ಎನ್ನುವಂತಿದೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡದ ಈ ಶಾಲೆಯಲ್ಲಿ ಏನಿಲ್ಲ ಅಂತ ಹುಡುಕಬೇಕು. ಅಷ್ಟರ ಮಟ್ಟಿಗೆ ಈ ಶಾಲೆ ಎಲ್ಲಾ ವಿಧವಾದ ಸೌಲಭ್ಯಗಳನ್ನು ಪಡೆದಿದೆ.

    ಮುಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಸಿಗೆಯಲ್ಲೂ ಹಸಿರ ಹೊದಿಕೆ ಹೊದ್ದಿದೆ. ಇಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಹೈಟೆಕ್ ಶಿಕ್ಷಣ ಕೊಡಲಾಗ್ತಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆಯೂ ಈ ಶಾಲೆಯಲ್ಲಿದೆ.

    ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 112 ವಿವಿಧ ಗಿಡಗಳನ್ನು ಬೆಳಯಲಾಗಿದೆ. ಅಲ್ಲದೆ ಚಿಕ್ಕತೋಟದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಸೊಪ್ಪು ತರಕಾರಿ ಬೆಳೆಯಲಾಗಿದೆ. ಜೊತೆಗೆ ಹೂವನ್ನೂ ಬೆಳೆಯಲಾಗಿದೆ. ಇದ್ರಿಂದ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಆರೋಗ್ಯ ವರ್ಧಿಸೋ ವಾತಾವರಣ ನಿರ್ಮಾಣವಾಗಿದೆ.

    ಇದೆಲ್ಲದಕ್ಕೂ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಕಾರಣ ಅಂತ ವಿದ್ಯಾರ್ಥಿಗಳು ಹೇಳುತ್ತಾರೆ.

    https://www.youtube.com/watch?v=tnaQJ9vMD60

     

     

     

  • ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ನವದೆಹಲಿ: ದೇಶದೆಲ್ಲೆಡೆ ಓದುತ್ತಿರುವ ಮತ್ತು ಮುಂದೆ ಓದಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಈ ಶೈಕ್ಷಣಿಕ ವರ್ಷದಿಂದ ನೀವು ಅರ್ಧದಲ್ಲೇ ಕಾಲೇಜನ್ನು ಬಿಟ್ಟರೂ ಶುಲ್ಕ ಮರುಪಾವತಿಯಾಗಲಿದೆ.

    ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಎಲ್ಲಾ ಕಾಲೇಜುಗಳಿಗೆ ಈ ಶುಲ್ಕವನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದೆ. ಶುಲ್ಕ ಮರುಪಾವತಿಯ ಜೊತೆಗೆ ಕಾಲೇಜುಗಳು ವಿದ್ಯಾರ್ಥಿ ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳನ್ನು 7 ದಿನದ ಒಳಗಡೆ ಹಿಂದಿರುಗಿಸಲು ಸೂಚಿಸಿದೆ.

    ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    2017- 18ರ ಎಐಸಿಟಿಇಯ ಕೈಪಿಡಿ ಪ್ರಕಟವಾಗಿದೆ. ಈ ಕೈಪಿಡಿಯಲ್ಲಿ ಕೋರ್ಸ್ ಆರಂಭವಾಗುವ ಮುನ್ನವೇ ಕಾಲೇಜನ್ನು ಬಿಟ್ಟರೆ ಪ್ರವೇಶಾತಿ ಪ್ರಕ್ರಿಯೆಗಳಿಗೆ 1 ಸಾವಿರ ರೂ. ಶುಲ್ಕಗಳನ್ನು ತೆಗೆದುಕೊಂಡು ಉಳಿದ ಎಲ್ಲ ಶುಲ್ಕಗಳನ್ನು ಮರು ಪಾವತಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

    ಒಂದು ವೇಳೆ ತರಗತಿ ಆರಂಭಗೊಂಡು ಅರ್ಧದಿಂದ ವಿದ್ಯಾರ್ಥಿ ಕೈಬಿಟ್ಟರೆ ಅದುವರೆಗಿನ ಅವಧಿಯ ಶುಲ್ಕವನ್ನು ಮತ್ತು ಹಾಸ್ಟೆಲ್ ಶುಲ್ಕವನ್ನು ತೆಗೆದುಕೊಂಡು ಉಳಿದ ಶುಲ್ಕವನ್ನು ವಾಪಸ್ ಮಾಡಬೇಕೆಂದು ಸೂಚಿಸಿದೆ.

    ಅರ್ಧದಲ್ಲೇ ಕೈ ಬಿಟ್ಟ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜಿನಲ್ಲೇ ಇಟ್ಟುಕೊಳ್ಳುವುದನ್ನು ಎಐಸಿಟಿಇ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    ಒಂದು ವೇಳೆ ಈ ನಿರ್ದೇಶನವನ್ನು ಕಾಲೇಜುಗಳು ಉಲ್ಲಂಘಿಸಿದಲ್ಲಿ ಕಾಲೇಜುಗಳ ಮೇಲೆ ಎಐಸಿಟಿಇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದರೆ ಕೊಡಬೇಕಾಗಿರುವ ಶುಲ್ಕದ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾಲೇಜಿನ ಕೋರ್ಸ್‍ಗಳಿಗೆ ಮಂಜೂರು ಮಾಡಿದ ಅನುಮೋದನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಎಐಸಿಟಿಇ ತನ್ನ ಹ್ಯಾಂಡ್ ಬುಕ್‍ನಲ್ಲಿ ಹೇಳಿದೆ.

    ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾಕಷ್ಟು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ 3 ಸಾವಿರಕ್ಕೂ ಅಧಿಕ ನೊಂದಾಯಿತ ಎಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತಿವರ್ಷ 7 ಲಕ್ಷ ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಯುಜಿಸಿ ಎಲ್ಲ ಕಾಲೇಜುಗಳಿಗೆ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪಡೆದುಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು.

     ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

  • ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಉಡುಪಿ: ಒಬ್ಬ ಒಳ್ಳೆಯ ಶಿಕ್ಷಕ ಒಂದು ಶಾಲೆಯನ್ನು ಮಾತ್ರವಲ್ಲ ಒಂದು ಊರನ್ನೇ ಬದಲಾಯಿಸಬಹುದು ಅನ್ನೋ ಮಾತಿದೆ. ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುರಳಿ ಕಡೆಕಾರು ಮಾಸ್ಟರ್ ಸರ್ಕಾರಕ್ಕೂ ಮುನ್ನವೇ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದವರು.

    ಮುರುಳಿ ಅವರು ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹೆಡ್ ಮಾಸ್ಟರ್. ಗಣಿತ ಬೋಧಿಸುವ ಇವರು ಈ ಶಾಲೆಗೆ ಬಂದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. 2000ನೇ ಇಸವಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಶುರು ಮಾಡಿದ ಹೆಗ್ಗಳಿಕೆ ಇವರದ್ದು. ದಾನಿಗಳಿಂದ ದೇಣಿಗೆ ಪಡೆದು ಮಕ್ಕಳಿಗೆ ಗಂಜಿ ಊಟ ಶುರು ಮಾಡಿದ್ದರು. ಇದಾಗಿ ಒಂದು ವರ್ಷದ ನಂತರ ಕೃಷ್ಣಮಠದಿಂದ ಬಿಸಿಯೂಟ ಸರಬರಾಜು ಶುರುವಾಯ್ತು. ಇದಾಗಿ ಆರು ವರ್ಷದ ನಂತರ ರಾಜ್ಯ ಸರ್ಕಾರ ಮಕ್ಕಳಿಗೆ ಬಿಸಿಯೂಟ ನೀಡಿತು.

    ಇದಲ್ಲದೆ ಈ ಶಾಲೆಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಳಿತಾಯ ಖಾತೆ ತೆರೆಯಲಾಗುತ್ತದೆ. 1 ರೂಪಾಯಿಯಿಂದ ಸೇವಿಂಗ್ ಅಕೌಂಟ್ ಶುರುವಾಗುತ್ತೆ. ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿಹೋಗುವಾಗ ಸುಮಾರು 10 ರಿಂದ 20 ಸಾವಿರ ರೂಪಾಯಿ ಉಳಿಸುತ್ತಾರೆ. ಬರುವ ಬಡ್ಡಿಯಲ್ಲಿ ಅರ್ಧದಷ್ಟು ಖಾತೆ ಹೊಂದಿದ ಮಕ್ಕಳಿಗೆ ನೀಡಿದ್ರೆ, ಮಿಕ್ಕುಳಿದ ಹಣವನ್ನ ಶಾಲೆಯ ಅಭಿವೃದ್ಧಿ, ಬಡ ಮಕ್ಕಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ವಿನಿಯೋಗಿಸಲಾಗುತ್ತದೆ.

    ಶಾಲೆ ಬಿಟ್ಟ ಮೇಲೂ ಮುರಳಿ ಅವರು ಸಂಜೆ 7ರವರೆಗೆ ಕ್ಲಾಸ್ ಮಾಡ್ತಾರೆ. ಯಕ್ಷಗಾನದಲ್ಲೂ ಭಾಗಿಯಾಗ್ತಾರೆ. ಮುರಳಿ ಅವರ ಸೇವ ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಆಶಯ.

     

    https://www.youtube.com/watch?v=gArcpAAgrRA

     

  • ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಬೆಂಗಳೂರು: ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಪಿಯು ಬೋರ್ಡ್ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದೆ.

    2016-17ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಯಿತು. ಇಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು ನಾಲ್ಕು ಜನ ಡಿಬಾರ್ ಆಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ತಿಳಿಸಿದರು.

    ಈ ಬಾರಿ ಏನೇನು ಸುಧಾರಣೆಯಾಗಿತ್ತು?
    ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ `ಅಲರ್ಟ್’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು.

    ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್‍ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.

    ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ದೂರದ ಪರೀಕ್ಷಾ ಕೇಂದ್ರಗಳಿಗೂ ತಲುಪಲು ಸಾಧ್ಯವಾಗುವಂತೆ ಪರೀಕ್ಷಾ ಸಮಯವನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಹಿಂದಿನ ವರ್ಷ ಪರೀಕ್ಷೆಗಳು ಬೆಳಿಗ್ಗೆ 9ರಿಂದ ಆರಂಭವಾಗುತ್ತಿದ್ದರೆ, ಈ ಬಾರಿ ಬೆಳಿಗ್ಗೆ 10.15ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ನಡೆದಿತ್ತು.

    ಕೇರಳದಲ್ಲಿ ಸೋರಿಕೆ: ಕೇರಳದಲ್ಲಿ ಮಾರ್ಚ್ 25ರಂದು ಎಸ್‍ಎಸ್‍ಎಲ್‍ಸಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮಾರ್ಚ್ 31ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು

     

     

  • ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.

    ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.

    ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.

    ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.