Tag: education

  • ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ಕೋಲಾರ: ತನ್ನ ಪಾಡಿಗೆ ತಾನು ಓದುತ್ತಿರುವ ವಿದ್ಯಾರ್ಥಿನಿ ಒಂದೆಡೆಯಾದ್ರೆ, ಆಕೆಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಮೊಮ್ಮಗಳನ್ನ ನೋಡುತ್ತಿರುವ ವಯಸ್ಸಾದ ಜೀವಗಳು ಇನ್ನೊಂದೆಡೆ. ಇದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಗ್ರಾಮದ ಬಡ ವಿದ್ಯಾರ್ಥಿನಿ ಕೀರ್ತಿಯ ದುಸ್ಥಿತಿ.

    ಈಕೆಗೆ ತಂದೆಯಿಲ್ಲ, ಮನೆ ಪೋಷಣೆಗೆ ತಾಯಿ ಕೂಲಿ-ನಾಲಿಯೆ ಜೀವನಾಧಾರ. ಇಂತಹ ಸ್ಥಿತಿಯಲ್ಲಿ ಮಗಳನ್ನ ಓದಿಸುವುದು ಹಗಲುಗನಸಾದ್ರೂ ಇಷ್ಟು ದಿನ ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಎಸ್‍ಎಸ್‍ಎಲ್‍ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಿಶೇಷತೆ ಅಂದ್ರೆ ಗ್ರಾಮೀಣ ಪ್ರತಿಭೆಯಾಗಿರುವ ಈಕೆ ಹತ್ತನೆ ತರಗತಿಯಲ್ಲಿ ಶೇ.91 ಅಂಕ ಗಳಿಸಿದ್ದಾಳೆ. ಆದ್ರೆ ಮುಂದಿನ ವಿದ್ಯಾಭ್ಯಾಸ ಕಷ್ಟಕರವಾಗಿದ್ದು, ಯಾವುದಾರೊಂದು ವಸತಿ ಕಾಲೇಜಿನಲ್ಲಿ ದಾಖಲಾತಿ ಸಿಕ್ಕರೆ ಉತ್ತಮ ವಿದ್ಯಾಭ್ಯಾಸ ಮಾಡಿ ಮನೆಯ ಪೋಷಣೆ ಜೊತೆಗೆ ಸಮಾಜ ಸೇವೆ ಮಾಡುವ ಕನಸು ಹೊಂದಿದ್ದಾಳೆ.

    ತಂದೆ ಸಾವನ್ನಪ್ಪಿದ 8 ದಿನಗಳಿಗೆ ಜನಿಸಿರುವ ಕೀರ್ತಿಗೆ ಲಕ್ಷ್ಮೀ ಕೃಪೆ ಇಲ್ಲದಿದ್ದರೂ ಸರಸ್ವತಿ ಒಲಿದಿದ್ದಾಳೆ. ಬಡತನದ ನಡುವೆ ದಾನಿಗಳ ಆಸರೆಯಲ್ಲೆ ಒಳ್ಳೇ ಅಂಕ ಪಡೆದಿರುವ ವಿದ್ಯಾರ್ಥಿನಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ. ಆದ್ರೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರಕ್ಷಣೆ ಹಾಗೂ ಸುರಕ್ಷತೆ ದೃಷ್ಠಿಯಿಂದ ವಸತಿ ಕಾಲೇಜುಗಳ ಮೊರೆ ಹೋಗುತ್ತಿದ್ದಾಳೆ.

    ಒಟ್ಟಿನಲ್ಲಿ ಎಲ್ಲವೂ ಇದ್ರು ಏನೂ ಸಾಧನೆ ಮಾಡದ ಇವತ್ತಿನ ದಿನಗಳಲ್ಲಿ ಉತ್ತಮ ಅಂಕ ಪಡೆದ ಕೀರ್ತಿ ವಿಭಿನ್ನವಾಗಿ ಕಾಣ್ತಾಳೆ. ಬಡತನದ ಹಿನ್ನೆಲೆ ವಿದ್ಯಾಭ್ಯಾಸಕ್ಕೆ ಯಾರಾದ್ರು ನೆರವಾಗಿ ಈಕೆಯ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=IBNFsqWdu48

  • ದುಬೈ ಕೆಲಸಕ್ಕೆ ಗುಡ್‍ಬೈ- ಬುದ್ಧಿಮಾಂದ್ಯ ಮಕ್ಕಳ ಪಾಲಿನ ತ್ರಿವಿಧ ದಾಸೋಹಿ ಕಾರವಾರದ ಸಿರಿಲ್

    ದುಬೈ ಕೆಲಸಕ್ಕೆ ಗುಡ್‍ಬೈ- ಬುದ್ಧಿಮಾಂದ್ಯ ಮಕ್ಕಳ ಪಾಲಿನ ತ್ರಿವಿಧ ದಾಸೋಹಿ ಕಾರವಾರದ ಸಿರಿಲ್

    ಕಾರವಾರ: ಸಮಾಜ ಸೇವೆಗಾಗಿ ವಿದೇಶದಲ್ಲಿ ಸಿಕ್ಕಿರುವ ಕೆಲಸವನ್ನು ಬಿಟ್ಟು ತಾಯ್ನಾಡಿನಲ್ಲಿ ಬುದ್ಧಿಮಾಂದ್ಯರ ಸೇವೆ ಮಾಡುತ್ತಿರುವ ವ್ಯಕ್ತಿಯೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಅಳ್ವೆಕೋಡಿಯ ನಿವಾಸಿ ಸಿರಿಲ್ ಲೋಪಿಸ್ ನಮ್ಮ ಪಬ್ಲಿಕ್ ಹೀರೋ. ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ದುಬೈನಲ್ಲಿ ಒಳ್ಳೇ ಕೆಲಸದಲ್ಲಿದ್ದರು. ದುಬೈನಲ್ಲಿದ್ದ ಕೆಲಸ ಬಿಟ್ಟು 2010ರಲ್ಲಿ ಕುಮಟಾಕ್ಕೆ ಬಂದು ತಮ್ಮ ದಯಾ ನಿಲಯ ಹೆಸರಿನ ಮನೆಯನ್ನೇ ಬುದ್ಧಿಮಾಂದ್ಯ ಮಕ್ಕಳ ಶಾಲೆಯಾಗಿ ಮಾಡಿದ್ದಾರೆ.

    ನಾಲ್ಕೈದು ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯಲ್ಲೀಗ 32 ಮಕ್ಕಳಿದ್ದಾರೆ. ಊಟ, ವಸತಿ, ಶಿಕ್ಷಣ ಎಲ್ಲವೂ ಇಲ್ಲೇ ನಡೆಯುತ್ತಿದೆ. ಸಿರಿಲ್ ಒಂದು ರೀತಿ ತ್ರಿವಿಧ ದಾಸೋಹಿ ಆಗಿದ್ದಾರೆ. ಈ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು ಬಲು ಕಷ್ಟವಾಗಿತ್ತು. ಹಾಗಾಗಿ ಸಿರಿಲ್ ಈ ಮಕ್ಕಳಿಗೆ ಶಿಕ್ಷಣ ನೀಡೋಕೆ ಅಂತಾನೇ ವಿಶೇಷ ಟ್ರೈನಿಂಗ್ ಪಡೆದಿದ್ದಾರೆ. ಒಮ್ಮೆ ಶಾಲೆ ನಡೆಸುವುದು ಕಷ್ಟವಾದಾಗ ತನ್ನ ಬೈಕ್ ಮಾರಿದ್ದಾರೆ.

    ಈ ದಯಾ ನಿಲಯದಲ್ಲಿ ಸಂಗೀತ, ಕಂಪ್ಯೂಟರ್ ಜೊತೆಗೆ ಸ್ವ-ಉದ್ಯೋಗ ಕಲಿಕೆ ಭಾಗವಾಗಿ ಸಾವಯವ ಗೊಬ್ಬರ ಹಾಗೂ ಪಿನಾಯಿಲ್ ತಯಾರಿಕೆ ಬಗ್ಗೆ ಕಲಿಸಿಕೊಡಲಾಗ್ತಿದೆ. ಈ ಶಾಲೆ ಮಕ್ಕಳು ಟೇಬಲ್ ಟೆನ್ನಿಸ್‍ನಲ್ಲಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಬಂಗಾರದ ಪದಕ ಗೆದ್ದಿದ್ದಾರೆ.

    https://www.youtube.com/watch?v=-Fjf92zIIVQ

     

  • ಉತ್ತರಪ್ರದೇಶದಲ್ಲಿ SSLC ತೇರ್ಗಡೆಯಾದ ಪ್ರತಿ ಬಾಲಕಿಗೆ 10 ಸಾವಿರ ಬಹುಮಾನ

    ಉತ್ತರಪ್ರದೇಶದಲ್ಲಿ SSLC ತೇರ್ಗಡೆಯಾದ ಪ್ರತಿ ಬಾಲಕಿಗೆ 10 ಸಾವಿರ ಬಹುಮಾನ

    ಲಕ್ನೋ: ಬಾಲಕಿಯರ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಹೇಳಿದೆ.

    ಯುಪಿ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿ ವಿದ್ಯಾರ್ಥಿನಿಗೆ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

    ಪಸ್ತುತ ಈಗ ಇರುವ ಕನ್ಯಾ ವಿದ್ಯಾ ಧನ್ ಯೋಜನೆ ಅಡಿಯಲ್ಲಿ ಹೊಸ ಯೋಜನೆ ಬರಲಿದೆ. ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 45ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ದಿನವೇ ಈ ಯೋಜನೆ ಪ್ರಕಟವಾಗಿದೆ.

    ಸಿಬಿಎಸ್‍ಇ ಮತ್ತು ಐಸಿಎಸ್‍ಇ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ ಬೋರ್ಡ್ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಬೇಕಿದೆ.

  • ಮನೆಯಲ್ಲಿ ಬಡತನ, 10ನೇ ತರಗತಿವರೆಗೆ ಆಸರೆಯಾದ ಅಜ್ಜಿ- ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳತ್ತ ಕೈಚಾಚಿದ ದಾವಣೆಗೆರೆ ಯುವತಿ

    ಮನೆಯಲ್ಲಿ ಬಡತನ, 10ನೇ ತರಗತಿವರೆಗೆ ಆಸರೆಯಾದ ಅಜ್ಜಿ- ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳತ್ತ ಕೈಚಾಚಿದ ದಾವಣೆಗೆರೆ ಯುವತಿ

    ದಾವಣಗೆರೆ: ಈಕೆಯ ಮನೆಯಲ್ಲಿ ಬಡತನವಿರಬಹುದು ಆದ್ರೆ ವಿದ್ಯಾಭ್ಯಾಸದಲ್ಲಿ ಮಾತ್ರ ಅಗರ್ಭ ಶ್ರೀಮಂತೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಈಕೆಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಉಂಟಾಗಿದೆ. ದಾನಿಗಳ ನಿರೀಕ್ಷೆಯಲ್ಲಿ ಈ ಯುವತಿ ದಾರಿ ಕಾಯುತ್ತಿದ್ದಾಳೆ.

    ಈಕೆಯ ಹೆಸರು ನಯನ. ದಾವಣಗೆರೆ ತಾಲೂಕಿನ ಹೊಸ ಕುಂದವಾಡ ಗ್ರಾಮದ ಯುವತಿ. ಓದಿನಲ್ಲಿ ಎಲ್ಲರಿಗಿಂತ ಮುಂದೆ ಇರುವ ವಿದ್ಯಾರ್ಥಿನಿ. ಸರ್ಕಾರಿ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡ ಈಕೆ ಚನ್ನಾಗಿ ಓದಿ ಡಾಕ್ಟರ್ ಆಗುವ ಕನಸು ಕಂಡಿದ್ದಾಳೆ. ಆದ್ರೆ ಮನೆಯ ಪರಿಸ್ಥಿತಿ ನೋಡಿದ್ರೆ ತೀರ ಬಡತನದ ಬದುಕನ್ನು ಅನುಭವಿಸುತ್ತಿದ್ದಾಳೆ. ಎಸ್‍ಎಸ್‍ಎಲ್‍ಸಿ ವರೆಗೂ ಅಜ್ಜಿಯ ಮನೆಯಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ಗ್ರಾಮವೇ ಕೊಂಡಾಡುವಂತೆ ಮಾಡಿದ್ದಾಳೆ. ಈಕೆಗೆ ಡಾಕ್ಟರ್ ಆಗುವ ಆಸೆ ಇದ್ದು ಆ ಕನಸು ಎಲ್ಲಿ ಗಾಳಿ ಗೋಪುರವಾಗುತ್ತದೆಯೋ ಎನ್ನುವ ಭಯ ಈ ಯುವತಿಗೆ ಕಾಡುತ್ತಿದೆ.

    ನಯನ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಗಿರಿಯಾಪುರ ಗ್ರಾಮದವಳು. ತಂದೆ ಶಿವಪ್ಪ ಹಾಗೂ ತಾಯಿ ಗೀತಾ ಬಡತನದ ಬದುಕನ್ನು ಅನುಭವಿಸುತ್ತಿದ್ದಾರೆ. ಮೂರುಜನ ಹೆಣ್ಣುಮಕ್ಕಳಿದ್ದು, ಒಂದು ಎಕರೆ ಹೊಲದಲ್ಲಿ ಜೀವನ ನಡೆಸುವಂತಾಗಿದೆ. ಮನೆಯನ್ನು ಸಾಗಿಸಲು ಕಷ್ಟವಾದ ಕಾರಣ ದಂಪತಿ ಇಬ್ಬರು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದಾರೆ. ಮೊದಲನೆ ಮಗಳಾದ ನಯನ ಓದಿನಲ್ಲಿ ಆಸಕ್ತಿ ಹೊಂದಿದ್ದು, ಪೋಷಕರ ಕಷ್ಟ ನೋಡಿ ಓದುವುದನ್ನು ಬಿಟ್ಟಿದ್ದಳು. ಆದ್ರೆ ಅವರ ಅಜ್ಜಿ ಮಾತ್ರ ಅವಳ ಆಸರೆಗೆ ನಿಂತು ಹತ್ತನೇ ತರಗತಿಯವರೆಗೂ ಓದಿಸಿದ್ರು. ಈಗ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ ಪೋಷಕರು.

    ಒಟ್ಟಾರೆಯಾಗಿ ಛಲ ಒಂದು ಇದ್ದರೆ ಸಾಕು ಏನಾದರೂ ಮಾಡಬಹುದು ಎನ್ನುವುದು ಈ ಯುವತಿಯ ಕಣ್ಣಿನಲ್ಲಿ ಕಾಣುತ್ತಿದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕನಸನ್ನು ಕಂಡ ಯುವತಿಗೆ ಸಹಾಯ ಬೇಕಾಗಿದೆ. ಓದಿಗಾಗಿ ದಾನಿಗಳತ್ತ ತನ್ನ ಸಹಾಯಹಸ್ತ ಚಾಚಿದ್ದಾಳೆ.

     

  • SSLCಯಲ್ಲಿ 90% ಅಂಕ ಗಳಿಸಿರುವ ಅನಾಥ ಬಾಲಕನ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

    SSLCಯಲ್ಲಿ 90% ಅಂಕ ಗಳಿಸಿರುವ ಅನಾಥ ಬಾಲಕನ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

    ಬಳ್ಳಾರಿ: ತಂದೆ ತಾಯಿ ಇಲ್ಲದಿದ್ದರೂ ಅನಾಥ ಬಾಲಕನಿಗೆ ಓದಿ ಎನಾದ್ರೂ ಸಾಧಿಸಬೇಕು ಅನ್ನೋ ಛಲ. ಹೀಗಾಗಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 90 ಅಂಕ ಪಡೆದಿರುವ ಬಾಲಕನಿಗೆ ಇದೀಗ ಪಿಯುಸಿ ವಿದ್ಯಾಭ್ಯಾಸ ಮಾಡೋಕೆ ದಾನಿಗಳ ಆಸರೆ ಬೇಕಿದೆ. ಅನಿಲ್ ಬಾಳಲ್ಲಿ ಬೆಳಕು ಮೂಡಿಸಲು ದಾನಿಗಳು ಮುಂದಾಗಬೇಕಿದೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ನಿವಾಸಿಯಾಗಿರೋ ಅನಿಲ್ ಇಂದು ನಮ್ಮ ಬೆಳಕು ಕಾರ್ಯಕ್ರಮ ಬಂದಿದ್ದಾನೆ. 8 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಅನಿಲ್, ಕಳೆದ ವರ್ಷ ತಾಯಿಯನ್ನು ಕೂಡ ಕಳೆದುಕೊಂಡು ಅನಾಥನಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಭಾಗ್ಯ ನಗರದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಅಕಾಲಿಕ ಮರಣದಿಂದ ತಂದೆ ಮಾರೆಣ್ಣ ಮೃತಪಟ್ಟಿದ್ದಾರೆ. ಕಳೆದ ವರ್ಷ ತಾಯಿ ಸರಸ್ವತಿ ಸಹ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ ನಂತರ ಈ ಬಾಲಕನಿಗೆ ಹೆತ್ತವರೆ ಇಲ್ಲದಾಗಿದೆ. ಆದ್ರೂ ಸಂಬಂಧಿಕರಿಂದಾಗಿ ಈ ಬಾಲಕನ ಬಾಳಲ್ಲಿ ಇಲ್ಲಿಯವರೆಗೂ ಅಲ್ಪಸ್ವಲ್ಪ ಆಸರೆ ದೊರೆತಿದೆ.

    ಇನ್ನು ಮುಂದಿನ ಶಿಕ್ಷಣಕ್ಕಾಗಿ ದಾನಿಗಳ ಸಹಾಯ ಬೇಕಿದೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನಿಲ್ ಶೇ.90ರಷ್ಟು ಅಂಕ ಗಳಿಸಿದ್ದಾನೆ. ಮೂರು ವರ್ಷಗಳ ಹಿಂದೆ ಕಂಪ್ಲಿ ಬಳಿಯ ರಾಮಸಾಗರ ಮೊರಾರ್ಜಿ ವಸತಿ ಶಾಲೆಗೆ ಸೇರಿದ ಅನಿಲ್ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮವಾಗಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾನೆ. ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕಗಳನ್ನು ಪಡೆಯುವ ಮೂಲಕ ಒಟ್ಟು 625 ಅಂಕಗಳಿಗೆ 561 ಅಂಕಗಳನ್ನು ಪಡೆದಿರುವ ಈ ಬಾಲಕನಿಗೆ ಮುಂದೆ ಓದಿ ವಿಜ್ಞಾನಿಯಾಗಬೇಕು ಅನ್ನೋ ಆಸೆಯಿದೆ.

    ಹೆತ್ತವರನ್ನು ಕಳೆದುಕೊಂಡ ನೋವಿದ್ದರೂ, ನೋವಿನಲ್ಲೆ ಓದಿಕೊಂಡು ಉತ್ತಮ ಅಂಕಗಳನ್ನು ಪಡೆದಿರುವ ಅನಿಲ್ ಮುಂದಿನ ವಿದ್ಯಾಬ್ಯಾಸಕ್ಕೆ ಯಾರಾದ್ರೂ ಸಹಾಯ ಮಾಡಿದ್ರೆ ಈ ಬಾಲಕನ ಬಾಳಲ್ಲಿ ಬೆಳಕು ಮೂಡಲಿದೆ. ಆ ನಿಟ್ಟಿನಲ್ಲಿ ವಿದ್ಯಾದಾನಕ್ಕೆ ಯಾರಾದ್ರೂ ಸಹಾಯ ಮಾಡಲಿ ಅನ್ನೋದೆ ನಮ್ಮ ಆಶಯವಾಗಿದೆ.

     

  • ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆಗಳು ಪರಿಹಾರ: ವಿಟಿಯು ಕುಲಪತಿ

    ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆಗಳು ಪರಿಹಾರ: ವಿಟಿಯು ಕುಲಪತಿ

    ಬೆಂಗಳೂರು/ಕೊಪ್ಪಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪರೀಕ್ಷಾ ವಿಧಾನದಲ್ಲಿ ಹೊಸ ಪದ್ದತಿ ಅಳವಡಿಕೆಯಿಂದ ಫಲಿತಾಂಶ ತಡವಾಗಿದೆ. ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗ ಬಹುತೇಕ ಎಲ್ಲ ಫಲಿತಾಂಶ ಪ್ರಕಟವಾಗಿದೆ. ಮುಂದಿನ ಸೆಮಿಸ್ಟರ್ ನಿಂದ ಸಮಸ್ಯೆ ಪರಿಹಾರವಾಗಲಿದೆ. ರಿ ವಾಲ್ಯುವೇಷನ್ ಶುಲ್ಕ ಮತ್ತು ಎಕ್ಸಾಂ ಶುಲ್ಕವನ್ನು ಒಟ್ಟಿಗೆ ಕಟ್ಟಿಸಿಕೊಳ್ಳುತ್ತಿದ್ದೇವೆ. ರಿ ವಾಲ್ಯುವೇಷನಲ್ಲಿ ಪಾಸ್ ಆಗಿದ್ದರೆ ಹಣವನ್ನು ವಾಪಸ್ ಮಾಡುತ್ತೇವೆ ಎಂದು ತಿಳಿಸಿದರು.

    ವಿಟಿಯುನಲ್ಲಿ ಭ್ರಷ್ಟಚಾರ ನಡೆಯುತ್ತಿಲ್ಲ. ಅಷ್ಟೇ ಅಲ್ಲದೇ ವಿವಿಯನ್ನು ವಿಟಿಯು ಮುಚ್ಚೋ ಪರಿಸ್ಥಿತಿ ಬಂದಿಲ್ಲ. ವಿಟಿಯು ನಡೆಸಲು ಸದ್ಯ ಯಾವುದೇ ಹಣದ ಸಮಸ್ಯೆ ಇಲ್ಲ. ವಿಯನ್ನು ಮುಚ್ಚೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಉನ್ನತ ಶಿಕ್ಷಣ ಸಚಿವರು ಅದ್ಯಾಕೇ ಹಾಗೇ ಹೇಳಿದರೋ ಅವರನ್ನೇ ಕೇಳಿ ಎಂದು ಉತ್ತರಿಸಿದರು.

    ಹಣ ಬಿಡುಗಡೆ ಮಾಡಿ: ವಿಟಿಯು ಅಕೌಂಟ್ ಬ್ಯಾಲೆನ್ಸ್ ನಲ್ಲಿ ಕೇವಲ 30 ಕೋಟಿ ರೂ. ಇದೆ. ವಿಟಿಯು ಸಿಬ್ಬಂದಿ ಸಂಬಳ ಎಲ್ಲ ಸೇರಿ ವರ್ಷಕ್ಕೆ 72 ಕೋಟಿ ರೂ. ಬೇಕಿದೆ. ಈಗ 42 ಕೋಟಿ ಖೋತಾ ಬಜೆಟ್ ನಲ್ಲಿ ವಿವಿ ನಡೆಯುತ್ತಿದೆ. ಕಾಲೇಜುಗಳ ಅಫಿಲೇಷನ್ ಶುಲ್ಕಇತ್ಯಾದಿಗಳಿಂದ ವರ್ಷಕ್ಕೆ 110 ಕೋಟಿ ರೂ. ಬರುತ್ತದೆ. ಹೀಗಾಗಿ  30 ಕೋಟಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವಂತೆ ವಿಟಿಯು ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.

    ಪರೀಕ್ಷೆ ಮುಂದೂಡಿಕೆ: ವಿದ್ಯಾರ್ಥಿಗಳ ವಿರೋಧದಿಂದಾಗಿ ವಿಟಿಯು ಈಗ ಪರೀಕ್ಷಾ ದಿನಾಂಕ ಮುಂದೂಡಿದೆ. ಜೂನ್ 5 ರಿಂದ ಪ್ರಾರಂಭವಾಗಬೇಕಿದ್ದ ಬಿಇ ಕೊನೆಯ ವರ್ಷದ ಪರೀಕ್ಷೆ ಜೂನ್ 12 ರಿಂದ ಪ್ರಾರಂಭವಾಗಲಿದೆ. ಜೂನ್ 16 ರಿಂದ ಪ್ರಾರಂಭವಾಗಬೇಕಿದ್ದ ಪದವಿ, ಸ್ನಾತಕೋತ್ತರ ಪದವಿ, ಪ್ರಾಜೆಕ್ಟ್, ಥಿಯರಿ, ಪರೀಕ್ಷೆಗಳು ಜೂನ್ 23 ರಿಂದ ಪ್ರಾರಂಭವಾಗಲಿದೆ. ಹೊಸ ವೇಳಾಪಟ್ಟಿ ಜೂನ್ 3 ರಂದು ಪ್ರಕಟವಾಗಲಿದೆ.

    ಮುಚ್ಚುವ ಹಂತಕ್ಕೆ ಬಂದಿದೆ: ಕೇಂದ್ರ ಆದಾಯ ತೆರಿಗೆ ಇಲಾಖೆ ತಪ್ಪಿನಿಂದ ಬೆಳಗಾವಿ ವಿಟಿಯು ಮುಚ್ಚುವ ಹಂತಕ್ಕೆ ಬಂದಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಎಲ್ಲ ಡೀಮ್ಡ್ ವಿವಿಗಳಿಗೂ ತೆರಿಗೆ ವಿನಾಯಿತಿ ನೀಡಿದೆ. ಆದ್ರೆ, ಕೇಂದ್ರ ಆದಾಯ ತೆರಿಗೆ ಇಲಾಖೆ ವಿಟಿಯು 12ಎ ಪ್ರಮಾಣಪತ್ರ ಹೊಂದಿಲ್ಲವೆಂದು ಅಂತ ಹೇಳಿ ವಿವಿಯ ಆದಾಯ 441 ಕೋಟಿ ಹಣ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಉನ್ನತ ಶಿಕ್ಷಣ ಸಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

    ಸರ್ಕಾರಿ ವಿವಿ ಆದಾಯ ತೆರಿಗೆ ಕಟ್ಟಬೇಕು ಅಂತ ಆದಾಯ ತೆರಿಗೆ ಹೇಳಿರುವ ದೇಶದ ಮೊದಲ ಪ್ರಕರಣವಿದು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ. ಅವರು ಅಧಿಕಾರಿಗಳ ಮಾತು ಕೇಳುತ್ತಿದ್ದಾರೆ. ಹಾಗಾಗಿ ವಿವಿಗೆ ಹಣ ವಾಪಾಸ್ ನೀಡಲು ಸಹಕರಿಸುತ್ತಿಲ್ಲ. 127 ಕೋಟಿ ದಂಡ ಕಟ್ಟ ಬೇಕು ಎಂದು ಹೇಳಿ ತೆರಿಗೆ ಇಲಾಖೆ ತಡೆಹಿಡಿದಿದೆ. ಈಗ ಕೇಂದ್ರ ಆದಾಯ ತೆರಿಗೆ ಇಲಾಖೆ ವಿರುದ್ಧ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿಸಿದರು.

    ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ನಮಗೆ ಯಾವ ಅಧಿಕಾರ ಇಲ್ಲ. ವಿವಿ ಕಾಯ್ದೆಯಲ್ಲಿ ರಾಜ್ಯ ಸರಕಾರ ಕ್ಕೆ ಯಾವುದೇ ಅಧಿಕಾರ ವಿಲ್ಲ. ವಿವಿ ಕಾಯ್ದೆಗೆ ಬದಲಾವಣೆ ತರುವ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

    ಇದನ್ನೂ ಓದಿ: ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

  • ದ್ವಿತೀಯ ಪಿಯುಸಿ ಮುಗಿಸಲು ಹಣದ ಸಮಸ್ಯೆ: 1 ವರ್ಷದಿಂದ ಶಿಕ್ಷಣವಿಲ್ದೆ ಮನೆಯಲ್ಲಿರೋ ಬೀದರ್‍ನ ಈ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ದ್ವಿತೀಯ ಪಿಯುಸಿ ಮುಗಿಸಲು ಹಣದ ಸಮಸ್ಯೆ: 1 ವರ್ಷದಿಂದ ಶಿಕ್ಷಣವಿಲ್ದೆ ಮನೆಯಲ್ಲಿರೋ ಬೀದರ್‍ನ ಈ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೀದರ್: ಇಲ್ಲಿನ ಗ್ರಾಮೀಣ ಪ್ರತಿಭೆ ಆರ್ಥಿಕ ಸಮಸ್ಯೆಯಿಂದ ಕಾಲೇಜು ಬಿಡುವ ಹಂತದಲ್ಲಿದ್ದಾನೆ. ಮೊದಲನೆ ವರ್ಷದ ವಿಜ್ಞಾನ ಪಿಯುಸಿ ಮುಗಿಸಿದ್ದು, ಎರಡನೇ ವರ್ಷದ ಪಿಯುಸಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಕಡು ಬಡತನದಲ್ಲಿ ಹುಟ್ಟಿದ ಈ ಗ್ರಾಮೀಣ ಪ್ರತಿಭೆಗೆ ವಿದ್ಯಾಭ್ಯಾಸ ಮಾಡಲು ಹಣವಿಲ್ಲದೆ ಒಂದು ವರ್ಷ ಮನೆಯಲ್ಲಿ ಕುಳಿತುಕೊಂಡಿದ್ದಾನೆ. ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರು ಯಾರಾದ್ರೂ ದಾನಿಗಳು ಸಹಾಯ ಮಾಡುವ ಮೂಲಕ ನನ್ನ ಜೀವನಕ್ಕೆ ಬೆಳಕು ನೀಡುತ್ತಾರೆ ಎಂಬ ಭರವಸೆಯಲ್ಲಿದ್ದಾನೆ.

    ಬೀದರ್ ನಗರದ ಅಬ್ದುಲ್ ಫೈಜಾ ದರ್ಗಾ ಕಾಲೋನಿಯ ನಿವಾಸಿಯಾಗಿರುವ ಮಹ್ಮದ್ ಇಲಿಯಾಜ್ ಇದೀಗ ಶಿಕ್ಷಣದಿಂದ ವಂಚಿತನಾಗುತ್ತಿರುವ ಗ್ರಾಮೀಣ ಪ್ರತಿಭೆ. ಎಸ್‍ಎಸ್‍ಎಲ್‍ಸಿ ಯಲ್ಲಿ 55% ಹಾಗೂ ಪ್ರಥಮ ಪಿಯುಸಿಯಲ್ಲಿ 53% ಅಂಕ ತೆಗೆದುಕೊಂಡು ದಾನಿಗಳ ಸಹಾಯದಿಂದ ಓದು ಮುಗಿಸಿದ್ದಾನೆ. ಆದ್ರೆ ಎರಡನೆಯ ವರ್ಷದ ಪಿಯುಸಿ ಮುಗಿಸಲು 12 ಸಾವಿರ ರೂ. ಬೇಕಾಗಿದೆ. ಆದ್ರೆ ಅಷ್ಟೊಂದು ಹಣ ಕೊಡಲು ಅಸಾಧ್ಯವಾಗಿರುವುದರಿಂದ ಮುಂದಿನ ಶಿಕ್ಷಣವನ್ನೇ ಕೈ ಬಿಡುವ ಹಂತದಲ್ಲಿದ್ದಾನೆ.

    ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಒಂದು ವರ್ಷ ಮನೆಯಲ್ಲೆ ಕಳೆದಿದ್ದು, ಈಗಲಾದ್ರು ಯಾರಾದ್ರು ದಾನಿಗಳು ಸಹಾಯ ಮಾಡಿದ್ರೆ ಓದಿ ಡಾಕ್ಟರೋ, ಇಂಜಿನಿಯರೋ ಆಗ್ತೀನಿ ಅನ್ನೋ ಕನಸು ಕಾಣುತ್ತಿದ್ದಾನೆ. ಕುಟುಂಬ ಒಂದು ಹೊತ್ತಿನ ಊಟಕ್ಕೆ ಪ್ರತಿದಿನ ನರಕಯಾತನೆ ಪಡುತ್ತಿದ್ದು, ಇರಲು ಒಂದು ಸರಿಯಾದ ನಿವೇಶನ ಇಲ್ಲದೆ ಬಾಡಿಗೆ ನೀಡಿ ಮುರುಕಲು ಮನೆಯಲ್ಲಿ ವಾಸವಾಗಿದ್ದಾರೆ. ಇದಕ್ಕೆ ಪ್ರತಿ ತಿಂಗಳು 1500 ರೂ. ಹಣ ನೀಡುತ್ತಿದ್ದು, ಇನ್ನು ಶಿಕ್ಷಣದ ಮಾತೆಲ್ಲಿ! ನನಗೆ ಓದುವ ಮನಸ್ಸಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ಖಂಡಿತ ಓದಿ ಮುಂದೆ ಜೀವನ ರೂಪಿಸಿಕೊಳ್ಳುತ್ತೇನೆ ಅಂತಾ ನೊಂದ ವಿದ್ಯಾರ್ಥಿ ಹೇಳುತ್ತಿದ್ದಾನೆ.

    ಮಹ್ಮದ್ ಗೌಸ್ ಮತ್ತು ಅಮೀರಾ ಬಿ ದಂಪತಿಗಳಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಶಿಕ್ಷಣ ಪಡೆಯದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಮಹ್ಮದ್ ಗೌಸ್ ಕೂಡಾ ಕುಟುಂಬ ನಿರ್ವಹಣೆ ಮಾಡಲು 14 ಗಂಟೆಗಳ ಕಾಲ ಆಟೋ ಓಡಿಸಿ 200 ರಿಂದ 300 ರೂ. ವರೆಗೆ ಸಂಪಾದನೆ ಮಾಡುತ್ತಾರೆ. ಆದ್ರೆ ಇದು ಜೀವನ ನಿರ್ವಹಣೆಗೆ ಸರಿಯಾಗುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಾಮಥ್ರ್ಯ ಪೋಷಕರಿಗಿಲ್ಲ. ಹೀಗಾಗಿ ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ನನ್ನ ಮಗ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಬೇಡಿಕೊಳ್ಳುತ್ತಿದ್ದಾರೆ.

    ವಿದ್ಯಾರ್ಥಿ ಕೂಡಾ ಒಂದು ವರ್ಷ ಶಿಕ್ಷಣದಿಂದ ದೂರ ಉಳಿದು ಸಮಯ ವ್ಯರ್ಥ ಮಾಡಿದ್ದು, ಈಗಾಲಾದ್ರೂ ಯಾರಾದ್ರೂ ನೆರವಿಗೆ ಬಂದ್ರೆ ಓದುವ ಅಭಿಲಾಷೆ ಇಟ್ಟುಕೊಂಡಿದ್ದಾನೆ. ತಂದೆ ಕೂಡ ಮಗನಿಗೆ ಶಿಕ್ಷಣ ನೀಡಬೇಕು ಎಂದು ಹರಸಾಹಸ ಪಡುತ್ತಿದ್ದು ಸಹಾಯಕ್ಕಾಗಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

    ಹಣವಿದ್ರೂ ಓದಲು ಆಸಕ್ತಿ ಇಲ್ಲದ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಈ ಗ್ರಾಮೀಣ ಪ್ರತಿಭೆಗೆ ಹಣವಿಲ್ಲದೆ ಶಿಕ್ಷಣ ತೊರೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಕಡುಬಡತನದಲ್ಲಿ ನೊಂದು ಬೆಂದಿರುವ ಈ ಕುಡುಂಬಕ್ಕೆ ಮಗನಿಗೆ ಶಿಕ್ಷಣ ನೀಡುವುದು ಅಸಾಧ್ಯವಾದ ಮಾತಾಗಿದೆ. ಒಟ್ಟಿನಲ್ಲಿ ಈ ಗ್ರಾಮೀಣ ಪ್ರತಿಭೆಯ ಸ್ಟೋರಿ ನೋಡಿದ ಯಾರಾದ್ರು ದಾನಿಗಳು ಸಹಾಯ ಮಾಡಿ ಆತನ ವಿದ್ಯಾರ್ಥಿ ಜೀವನಕ್ಕೆ ಬೆಳಕು ನೀಡುವಂತಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=QvZFNVubjfs

  • ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.05% ಗಳಿಸಿದ ಅಂಕಿತ್ ಶಿಕ್ಷಣಕ್ಕೆ ಬೇಕಿದೆ ಸಹಾಯ

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.05% ಗಳಿಸಿದ ಅಂಕಿತ್ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಬೆಂಗಳೂರು: ವಿದ್ಯೆಗೆ ಬಡತನ ಅಡ್ಡಿಯಲ್ಲ ಅನ್ನೋದಕ್ಕೆ ಈ ಬಾಲಕನೇ ಸಾಕ್ಷಿ. ಬಡತನದಲ್ಲಿದ್ದ ಈತನಿಗೆ ವಿದ್ಯಾಭ್ಯಾಸಕ್ಕೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಸಹಾಯ ಮಾಡಿತ್ತು. ಅದರ ಸದುಪಯೋಗ ಪಡೆದಕೊಂಡ ಈತ ಇಂದು ಪಿಯುಸಿಯಲ್ಲಿ ಟಾಪರ್ ಆಗಿದ್ದಾನೆ.

    ಮೂಲತಃ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿರೋ ಅಂಕಿತ್ ತಂದೆ ಗ್ರಾನೈಟ್ ವ್ಯಾಪಾರ ಮಾಡಿಕೊಂಡಿದ್ರು. ಎಸ್‍ಎಸ್‍ಎಲ್‍ಸಿ ಯಲ್ಲಿ 99.05 % ತೆಗೆದುಕೊಂಡ ಈತನ ಮುಂದಿನ ವಿದ್ಯಾಭ್ಯಾಸ ಮಾಡಲು ಹಣಕಾಸಿನ ತೊಂದರೆ ಇತ್ತು. ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿಗೆ ಸೇರಲು ಪಬ್ಲಿಕ್ ಬೆಳಕು ಕಾರ್ಯಕ್ರಮ ಶಾಲೆ ದಾಖಲಾತಿ ಫೀಸ್ ಕಟ್ಟಿ ಮಲ್ಲೇಶ್ವರಂನ ವಿದ್ಯಾಮಂದಿರ ಕಾಲೇಜಿಗೆ ಸೇರಿಸಲಾಗಿತ್ತು.

    ಬೆಳಕು ಕಾರ್ಯಕ್ರಮದಿಂದ ಶಿಕ್ಷಣಕ್ಕೆ ನೆರವು ಪಡೆದ ಈತ ಶ್ರದ್ಧೆಯಿಂದ ಓದಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 97.05 ಅಂಕ ಪಡೆದುಕೊಂಡು ಟಾಪರ್ ಆಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ 575 ಅಂಕ ಪಡೆದ ಅಂಕಿತ್ ಮುಂದೆ ಎಂಜಿನಿಯರಿಂಗ್ ವ್ಯಾಸ್ಯಾಂಗ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದಾನೆ. ಆದ್ರೆ ಅಷ್ಟೊಂದು ದುಡ್ಡು ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಸಲು ಪೋಷಕರಲ್ಲಿ ಶಕ್ತಿಯಲ್ಲಿ. ಅದ್ದರಿಂದ ಪೋಷಕರು ಮತ್ತು ಅಂಕಿತ್ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳ್ತಿದ್ದಾರೆ.

    https://www.youtube.com/watch?v=21ykQWR91CE

  • ತಂದೆಗೆ ಕ್ಯಾನ್ಸರ್, ತಾಯಿ ಜೊತೆಗೂಡಿ ರೊಟ್ಟಿ ಮಾರಿ ಓದಿನಲ್ಲೂ ಮುಂದಿರೋ ಈ ಸಹೋದರಿಯರ ಶಿಕ್ಷಣಕ್ಕೆ ಬೇಕಿದೆ ನೆರವು

    ತಂದೆಗೆ ಕ್ಯಾನ್ಸರ್, ತಾಯಿ ಜೊತೆಗೂಡಿ ರೊಟ್ಟಿ ಮಾರಿ ಓದಿನಲ್ಲೂ ಮುಂದಿರೋ ಈ ಸಹೋದರಿಯರ ಶಿಕ್ಷಣಕ್ಕೆ ಬೇಕಿದೆ ನೆರವು

    ದಾವಣಗೆರೆ: ಇವರು ಓದಿ, ಓಳ್ಳೆಯ ಕೆಲಸಕ್ಕೆ ಸೇರಿಕೊಂಡು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸನ್ನು ಇಟ್ಟುಕೊಂಡಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಚೆನ್ನಾಗಿ ಓದುವ ವಯಸ್ಸಿನಲ್ಲಿ ರೊಟ್ಟಿ ಸುಟ್ಟು ಅದನ್ನು ಮಾರಿ ಜೀವನ ಸಾಗಿಸಬೇಕಾಯಿತು. ಆದರೂ ತಮ್ಮ ಕನಸನ್ನು ಬಿಡದ ಸಹೋದರಿಯರು ಕೆಲಸ ಮಾಡುತ್ತಲೇ ಶಾಲೆಯ ಮೆಟ್ಟಿಲನ್ನು ಏರಿದ್ದಾರೆ.

    ಹೌದು. ಇಂಥದೊಂದು ಮನಕಲುಕುವ ಸನ್ನಿವೇಶ ಕಂಡು ಬಂದಿದ್ದು ದಾವಣಗೆರೆಯ ಎಸ್‍ಒಜಿ ಕಾಲೋನಿಯಲ್ಲಿ. ಕಳೆದ ಹಲವು ವರ್ಷಗಳಿಂದ ಇದೇ ಕಾಲೋನಿಯಲ್ಲಿ ವಾಸವಾಗಿದ್ದ ಅಂಜಿನಪ್ಪ ಹಾಗೂ ಮಂಜುಳ ದಂಪತಿ ತಳ್ಳುವ ಗಾಡಿಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳಾದ ರಂಜಿತ ಹಾಗೂ ರಕ್ಷಿತಾ ನಗರದ ಪ್ರತಿಷ್ಠಿತ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರು.

    ಮಕ್ಕಳು ಓದಿ ಒಳ್ಳೆಯ ಮಟ್ಟಕ್ಕೆ ಬೆಳೆದ್ರೆ ಅದಕ್ಕಿಂತ ಸಂಪತ್ತು ಯಾವುದಿದೆ ಎನ್ನುವ ದೃಷ್ಟಿಯಿಂದ ಅಂಜಿನಪ್ಪ ಹಾಗೂ ಮಂಜುಳ ಕಷ್ಟಪಟ್ಟು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಮನೆಯ ಆಧಾರ ಸ್ತಂಭವಾಗಿದ್ದ ಅಂಜಿನಪ್ಪನಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿಯಿಂದ ಮೂಲೆ ಸೇರುವಂತಾಯಿತು.

    ಇತ್ತ ಕುಟುಂಬ ನಿರ್ವಹಣೆಗೆ ಮಕ್ಕಳು ತಾಯಿಯ ಜೊತೆ ಸೇರಿ ರೊಟ್ಟಿ ಮಾಡಿ ಹೋಟೆಲ್ ಗಳಿಗೆ ಕೊಟ್ಟು ಅದರಿಂದ ಬಂದಂತಹ ಹಣದಿಂದ ಜೀವನ ನಡೆಸುತ್ತಿದ್ದಾರೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಓದುವ ಛಲ ಮಾತ್ರ ಇಬ್ಬರು ಅಕ್ಕ ತಂಗಿಯರು ಬಿಟ್ಟಿಲ್ಲ. ಎಲ್ಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಓದಬೇಕು ಎನ್ನುವ ಛಲದಿಂದ ಮುನ್ನುಗ್ಗುತ್ತಿದ್ದಾರೆ. ಆದ್ರೆ ಮನೆಯ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

    ಬಾಲಕಿಯರಿಬ್ಬರು ಬೆಳಿಗ್ಗೆ ಬೇಗ ಎದ್ದು ರೊಟ್ಟಿ ಮಾಡಿ, ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಶಾಲೆಗೆ ಹೋಗುವುದೇ ಪ್ರತಿನಿತ್ಯದ ಕೆಲಸವಾಗಿದೆ. ಮನೆಯ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ತಾಯಿಗೆ ಆಸರೆಯಾಗಿ ನಂತರ ಶಾಲೆಗೆ ಹೋಗುತ್ತಿದ್ದಾರೆ. ಓದಿನಲ್ಲಿ ಎಲ್ಲರಿಗಿಂತ ಮುಂದಿರುವ ಈ ಸಹೋದರಿಯರು ಭವಿಷ್ಯದಲ್ಲೂ ಒಳ್ಳೆಯ ಕೆಲಸ ಮಾಡಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಇವರ ಕನಸಾಗಿದೆ.

    ಒಟ್ಟಾರೆಯಾಗಿ ಛಲದಿಂದ ಓದಿನ ಕಡೆ ಆಸಕ್ತಿ ತೋರುತ್ತಿರುವ ಈ ಸಹೋದರಿಯರಿಗೆ ಆಸರೆಯ ಕೈಗಳು ಬೇಕಾಗಿವೆ. ಓದಿ ಒಳ್ಳೆಯ ಉದ್ಯೋಗ ಪಡೆದು ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎನುಯಿವರ ಕನಸು ನನಸಾಗಲಿ ಎನ್ನುವುದು ನಮ್ಮ ಅಶಯವಾಗಿದೆ

    https://www.youtube.com/watch?v=7VG6PmJIUyM

     

  • ಗೋಬಿ ಅಂಗಡಿಯಲ್ಲಿ ಕೆಲಸ ಮಾಡ್ಕೊಂಡು ಅಜ್ಜಿಯನ್ನು ಸಾಕ್ತಿರೋ ಬಾಲಕನ ಶಿಕ್ಷಣಕ್ಕೆ ಬೇಕಿದೆ ನೆರವು

    ಗೋಬಿ ಅಂಗಡಿಯಲ್ಲಿ ಕೆಲಸ ಮಾಡ್ಕೊಂಡು ಅಜ್ಜಿಯನ್ನು ಸಾಕ್ತಿರೋ ಬಾಲಕನ ಶಿಕ್ಷಣಕ್ಕೆ ಬೇಕಿದೆ ನೆರವು

    ಮೈಸೂರು: ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಓದಿಗೂ ಹಣ ಸಂಪಾದಿಸಿಕೊಂಡು ತನ್ನನ್ನು ನಂಬಿರುವ ಅಜ್ಜಿಯನ್ನು ಸಾಕುತ್ತಿರುವ ಬಾಲಕನ ಸ್ಟೋರಿ ಇದು. ಓದಿನಲ್ಲಿ ತುಂಬಾ ಮುಂದಿರುವ ಬಾಲಕ ಈಗ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ. ಈ ಹಂತದಲ್ಲಿ ಆತನಿಗೆ ಓದಿಗಾಗಿ ಸಹಾಯ ಹಸ್ತ ಬೇಕಿದೆ.

    ಮೈಸೂರಿನ ಹೆಬ್ಬಾಳ ಒಂದನೇ ಹಂತದಲ್ಲಿನ ಭೈರವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಗ ಹತ್ತನೇ ತರಗತಿ ಓದುತ್ತಿರುವ ಮನೋಜ್‍ಗೆ ತಂದೆ, ತಾಯಿ ಇಲ್ಲ. ಬದುಕಿನ ಮುಸ್ಸಂಜೆಯಲ್ಲಿರುವ ಅಜ್ಜಿ ಮಾತ್ರ ಇದ್ದಾರೆ.

    ಓದಿನಲ್ಲಿ ತುಂಬಾ ಪ್ರತಿಭಾವಂತನಾಗಿರೋ ಮನೋಜ್ ಕುಮಾರ್, ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದು ಇಲ್ಲಿಯವರೆಗೆ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಆದರೆ ಮನೆಯಲ್ಲಿನ ಬಡತನದ ಜೊತೆ ಓದುವುದು ಕಷ್ಟವಾಗಿದೆ. ಇಷ್ಟು ವರ್ಷ, ಬೆಳಗ್ಗೆ ಶಾಲೆ ಮುಗಿಸಿ ಸಂಜೆ ಗೋಬಿ ಅಂಗಡಿಯಲ್ಲಿ ಕೆಲಸ ಮಾಡಿ, ಮನೆ ನೋಡಿಕೊಂಡು ಓದಿಗೂ ಅನುಕೂಲ ಮಾಡಿಕೊಂಡಿದ್ದ. ಆದರೆ ಈ ವರ್ಷ ಓದುವುದು ಹೆಚ್ಚಾಗಿರುತ್ತೆ ಟ್ಯೂಷನ್ ಶುಲ್ಕ, ಪುಸ್ತಕ ಖರೀದಿಗೆ ಹೆಚ್ಚು ಹಣ ಬೇಕಿದೆ. ಆದರೆ ಆತನ ದುಡಿಮೆಯಲ್ಲಿ ಅದನ್ನೆಲ್ಲಾ ನಿಭಾಯಿಸಲಾಗದೆ ಕೈ ಚೆಲ್ಲಿ ಕುಳಿತಿದ್ದಾನೆ.

    ಅಡ್ಮಿಷನ್ ಶುಲ್ಕ, ಟ್ಯೂಷನ್ ಶುಲ್ಕ, ಪಠ್ಯಪುಸ್ತಕ ಶುಲ್ಕ ಎಲ್ಲಾ ಸೇರಿ ಈ ವರ್ಷಕ್ಕೆ 20 ಸಾವಿರ ಅಗತ್ಯವಿದೆ. ಇಷ್ಟು ಹಣ ಸಿಕ್ಕರೆ ನೆಮ್ಮದಿಯಿಂದ ಈ ವರ್ಷ ಓದಿ ಉತ್ತಮ ಅಂಕ ಪಡೆಯುತ್ತೇನೆ ಅನ್ನೋದು ಮನೋಜ್ ಮನವಿ.

    https://www.youtube.com/watch?v=FtXkz158qsE