Tag: education

  • ಬಾಲಭವನದ ಬಡಪ್ರತಿಭೆಗೆ ಶಿಕ್ಷಣಕ್ಕಾಗಿ ಬೇಕಿದೆ ಸಹಾಯ

    ಬಾಲಭವನದ ಬಡಪ್ರತಿಭೆಗೆ ಶಿಕ್ಷಣಕ್ಕಾಗಿ ಬೇಕಿದೆ ಸಹಾಯ

    ಕಲಬುರಗಿ: ನಗರದ ಬಾಲಕರ ಬಾಲ ಮಂದಿರದಲ್ಲಿದ್ದು ಓರ್ವ ವಿದ್ಯಾರ್ಥಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 82ರಷ್ಟು ಅಂಕ ಪಡೆದಿದ್ದಾನೆ. ಆದ್ರೆ ಆ ಬಡ ವಿದ್ಯಾರ್ಥಿಗೆ ಇದೀಗ ಪಿಯುಸಿ ಕಲಿಯಲು ಯಾರೂ ಆಸರೆ ನೀಡದ ಹಿನ್ನಲೆಯಲ್ಲಿ ನೆರವಿನ ನೀರಿಕ್ಷೆಯಲ್ಲಿದ್ದಾನೆ.

    ಕಲಬುರಗಿಯ ಕಾಕಡೆ ಚೌಕ್‍ನ ಶರಣಮ್ಮ ಮತ್ತು ಸಿದ್ದಬೀರ್ ದಂಪತಿಯ ಮಗ ನಾಗೇಶ್ ಶಿಕ್ಷಣದ ನೆರವು ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾನೆ. ನಾಗೇಶನ ತಂದೆ ಸಿದ್ದಬೀರ್ ಮದ್ಯಪಾನ ಮಾಡಿ ತನ್ನ ಕುಟುಂಬದ ಜವಾಬ್ದಾರಿಯನ್ನೆ ಮರೆತ್ತಿದ್ದಾನೆ. ಇನ್ನು ನಾಗೇಶನ ತಾಯಿ ಕೂಲಿ ಕೆಲಸ ಮಾಡಿ ತನ್ನ ನಾಲ್ಕು ಮಕ್ಕಳನ್ನು ಸಾಕುತ್ತಿದ್ದಾರೆ. ಅದರಲ್ಲಿ ಕೊನೆಯವನಾದ ನಾಗೇಶ್ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದನ್ನು ಶರಣಮ್ಮ ಅರಿತಿದ್ದಾರೆ.

    ತಾಯಿಯ ಆಸೆಯಂತೆ ನಾಗೇಶ್ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇದೀಗ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 82ರಷ್ಟು ಅಂಕ ಪಡೆದಿದ್ದಾನೆ. ಇಷ್ಟು ಅಂಕ ಪಡೆದ್ರೂ ಸಹ ನಾಗೇಶನಿಗೆ ಯಾವ ಖಾಸಗಿ ಶಾಲೆಯವರು ಉಚಿತ ಪ್ರವೇಶ ಕೊಡುವ ಮನಸ್ಸು ಮಾಡಿಲ್ಲ. ಹೀಗಾಗಿ ಮುಂದಿನ ಭವಿಷ್ಯದ ಕುರಿತು ನಾಗೇಶ್ ಮತ್ತು ಅವನ ಕುಟುಂಬಸ್ಥರು ಚಿಂತೆಯಲ್ಲಿದ್ದಾರೆ.

    ಜಾಣನಾಗಿರುವ ನಾಗೇಶನಿಗೆ ಆರ್ಥಿಕ ಸಮಸ್ಯೆಯೇ ಸದ್ಯ ಮಾರಕವಾಗಿದೆ. ಕೂಡಲೇ ಯಾರಾದ್ರು ದಾನಿಗಳು ಮುಂದೆ ಬಂದು ನಾಗೇಶನ ಉಜ್ವಲ ಭವಿಷ್ಯಕ್ಕಾಗಿ ನೆರವು ನೀಡಬೇಕಿದೆ.

  • ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಬೆಳಗಾವಿ: ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ ಇವರು. ಗುರು ರಾಮದೇವ ಬಾಬಾ ಅವರ ಯೋಗಾಸನವನ್ನು ಟಿವಿಯಲ್ಲಿ ನೋಡಿ ಕಲಿತಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗುರಗೊಳದ ಅನಕ್ಷರಸ್ಥ ಯುವಕ ಬುಡನ್ ಇತರರಿಗೆ ಯೋಗಾಭ್ಯಾಸ ಹೇಳಿಕೊಡಲು ಸಹಾಯ ಹಸ್ತ ಚಾಚಿದ್ದಾರೆ.

    ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ ಯೋಗಾಸನ ಮಾಡುವದೆಂದರೆ ಎಲ್ಲಿಲ್ಲದ ಖುಷಿ. ನಿರಂತರ ಯೋಗ ಅಭ್ಯಾಸ ಮಾಡುವುದು, ಮುರ್ನಾಲ್ಕು ದಿನಗಳ ಕಾಲ ಅನ್ನ ನೀರು ಸೇವಿಸದೆ ಇರುವುದು ಬುಡನ್ ಹವ್ಯಾಸ. ದಿನಕ್ಕೆರಡು ಬಾರಿ ಯೋಗಾಸನ ಮಾಡುವ ಕಾರಣ ಅತ್ಯಂತ ಕ್ಲಿಷ್ಟಕರ ಆಸನಗಳೂ ಬುಡನ್ ಗೆ ಒಲಿದಿವೆ.

    ಅನಕ್ಷರಸ್ಥರಾದ ಇವರು ಉತ್ತಮ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವನ್ನು ಜನರಿಗೆ ಹೇಳಿಕೊಡಬೇಕು ಎಂಬ ಇಚ್ಛೆಯಿದೆ. ಆದರೆ ನಾನು ಅನಕ್ಷರಸ್ಥ ಎಂಬ ಆತಂಕ ಮನದಲ್ಲಿ ಭೀತಿ ಹುಟ್ಟಿಸಿದೆ. ಅದಕ್ಕಾಗಿ ಇರಲು ಒಂದು ಸೂರು, ಜೊತೆಗೆ ವ್ಯಕ್ತಿತ್ವ ವಿಕಾಸನದ ತರಬೇತಿ ಬೇಕಾಗಿದೆ ಎಂದು ಬುಡನ್ ಹೇಳುತ್ತಾರೆ.

    ಕಲಿಯುವ, ಕಲಿಸುವ ಹುಮ್ಮಸ್ಸು, ಶ್ರಮ ಜೊತೆಗೆ ಕಠಿಣ ಪರಿಶ್ರಮಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂಬುದು ಇವರ ಜೀವನದ ಗುರಿ. ಆದರೆ ಕಿತ್ತು ತಿನ್ನುವ ಬಡತನ ಗುರಿ ತಲುಪಲು ಬೀಡುತ್ತಿಲ್ಲ. ಸೂಕ್ತ ಮಾರ್ಗದರ್ಶಕರು ಸಿಕ್ಕಲ್ಲಿ ಯೋಗದಲ್ಲಿಯೇ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬುವ ತವಕ ಬುಡನ್ ಹೊಂದಿದ್ದಾರೆ.

     

  • ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಕೊಪ್ಪಳ: ಓದಬೇಕೆನ್ನುವ ಹಂಬಲದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಯುವಕನಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಸೇರಲು ಬಡತನ ಅಡ್ಡಿಯಾಗಿದೆ. ಇದ್ದೊಬ್ಬ ಮಗನಿಗೆ ಬಡತನದಲ್ಲಿಯೂ ತಾಯಿ ಕಷ್ಟಪಟ್ಟು ಓದಿಸ್ತಾಯಿದ್ದಾರೆ. ಆದ್ರೀಗ ಎಂಜಿನಿಯರಿಂಗ್ ಓದೋ ಆಸೆಗೆ ಹಣಕಾಸಿನ ತೊಂದ್ರೆ ಆಗಿದೆ. ಸದ್ಯ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವಿಗೆ ಬಂದಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಮುಷ್ಟೂರ ಗ್ರಾಮದ ಮಲ್ಲಯ್ಯ ಹಾಗೂ ನಾಗಮ್ಮ ದಂಪತಿಯ ಪುತ್ರ ಮಂಜುನಾಥ್ ಬಡತನದಿಂದಾಗಿ ಶಿಕ್ಷಣವನ್ನು ಬಿಡುವ ಹಂತ ತಲುಪಿದ್ದಾರೆ. ಮಂಜುನಾಥ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಸಾವನ್ನಪ್ಪಿದ್ರು. ಇದ್ದೊಬ್ಬ ತಾಯಿಯನ್ನ ಸಾಕೋ ಜವಾಬ್ದಾರಿ ಈತನ ಹೆಗಲಿಗೆ ಬಿದ್ದಿದೆ. ಜೊತೆಗೆ ತಾಯಿಯ ಪ್ರೋತ್ಸಾಹದಿಂದ ತನ್ನ ಓದಿಗೆ ಬ್ರೇಕ್ ಹಾಕದೇ ಕೂಲಿ ನಾಲಿ ಮಾಡಿ ಸಂಸಾರದ ನೊಗ ನೂಕ್ತಾ ತನ್ನ ಓದನ್ನ ಮುಂದುವರೆಸಿದ್ದಾರೆ. ಯಾವುದೇ ಟ್ಯೂಷನ್‍ಗೆ ಹೋಗ್ದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 82.5 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.

     

     

    ನೀಟ್ ಪರೀಕ್ಷೆಯಲ್ಲಿ 40 ಸಾವಿರ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ್ ನೀಟ್ ಪರೀಕ್ಷೆಗಾಗಿ ಯಾವುದೇ ಟ್ಯೂಷಿನ್‍ಗೆ ಹೋಗಿಲ್ಲ ಅನ್ನೋದು ಇನ್ನೊಂದು ವಿಶೇಷ. ಇವರಿಗೆ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿಕೊಳ್ಳೋ ಆಸೆಯಿದೆ. ಆದ್ರೆ ಮುಂದಿನ ಓದಿಗೆ ಇವರ ಬಳಿ ಹಣವಿಲ್ಲ.

    ನಿತ್ಯ ಬೆಳಿಗ್ಗೆ ಕಾಲೇಜು ಮುಗಿಸಿ ಆ ಬಳಿಕ ಕೂಲಿ ಮಾಡಿದ್ದಾರೆ. ಜೊತೆಗೆ ಮಗನಿಗೆ ಸಾಥ್ ನೀಡೋಕೆ ತಾಯಿ ನಾಗಮ್ಮ ಕೂಡಾ ಕೂಲಿ ಮಾಡ್ತಿದ್ದಾರೆ. ಇನ್ನು ಮಂಜುನಾಥ್ ಪ್ರತಿಭಾವಂತ ವಿದ್ಯಾರ್ಥಿ. ಎಸ್‍ಎಸ್‍ಎಲ್‍ಸಿ ಯಲ್ಲಿ ಶೇಕಡಾ 70.40 ರಷ್ಟು ಅಂಕ ಗಳಿಸಿದ್ದಾರೆ. ಗಂಗಾವತಿ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

    ಬಡತನದಲ್ಲೂ ಮಂಜುನಾಥ ಪಿಯುಸಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರೋದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಮುಂದಿನ ಓದಿಗೆ ಸಹಾಯ ಹಸ್ತ ಚಾಚೋಕೆ ದಾನಿಗಳು ಮುಂದೆ ಬರಬೇಕಿದೆ.

  • ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.

     

    ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಾಗಿರೋ ವೀರೇಂದ್ರ ಪಾಟೀಲರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸಂಗೀತದ ಮೂಲಕ ಮಕ್ಕಳಿಗೆ ಬೇಗ ಅರ್ಥವಾಗುತ್ತೆ ಅನ್ನೋದನ್ನ ಮನಗಂಡ ಪಾಟೀಲ್ ಮೇಷ್ಟ್ರು ತಮ್ಮ ವಿಜ್ಞಾನ ಪಠ್ಯವನ್ನ ಹಾಡಿನ ಮೂಲಕ ಪ್ರಸ್ತುತಿ ಪಡಿಸ್ತಿದ್ದಾರೆ.

    ವೈಜ್ಞಾನಿಕ ಪದಗಳನ್ನ ಸುಲಭವಾಗಿ ಅರ್ಥ ಮಾಡಿಸುವುದರ ಜೊತೆಗೆ ಪರಿಸರ ಕಾಳಜಿಯನ್ನೂ ಮೂಡಿಸುತ್ತಿದ್ದಾರೆ. ಸಾಹಿತ್ಯ ರಚಿಸಿ, ನಿರ್ದೇಶನದ ಜೊತೆ ತಾವೇ ಹಾಡಿದ್ದಾರೆ. ಒಟ್ಟು 7 ಹಾಡುಗಳ ಸಿಡಿಯನ್ನ ಬಿಡುಗಡೆ ಮಾಡಿದ್ದು 350ಕ್ಕೂ ಹೆಚ್ಚು ಪ್ರತಿಗಳನ್ನ ಉಚಿತವಾಗಿ ವಿವಿಧ ಶಾಲೆಗೂ ಹಂಚಲಾಗಿದೆ.

    ಈ ರೀತಿಯ ಹಾಡುಗಳಿಂದ ವಿಜ್ಞಾನ ವಿಷಯದಲ್ಲಿ ಪಾಸಾಗೋದು ಸುಲಭವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಪಾಟೀಲ್ ಮೇಷ್ಟ್ರ ಈ ಕಾರ್ಯಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ, ವಾಸವಿ ಸೇವಾ ಸಂಘ ಸೇರಿ ಕೆಲ ಸಂಸ್ಥೆಗಳು ಸಹಕಾರ ನೀಡಿವೆ.

    https://www.youtube.com/watch?v=dC0yCkgiDTc

     

  • ಮೆಡಿಕಲ್, ಡೆಂಟಲ್ ಓದೋ ಮಕ್ಕಳಿಗೆ ದುಬಾರಿ ಶುಲ್ಕ ಭಾಗ್ಯ! ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಮೆಡಿಕಲ್, ಡೆಂಟಲ್ ಓದೋ ಮಕ್ಕಳಿಗೆ ದುಬಾರಿ ಶುಲ್ಕ ಭಾಗ್ಯ! ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬೆಂಗಳೂರು: ಮೆಡಿಕಲ್ ಓದೋ ಕನಸು ಕಾಣ್ತಿರೋ ಮಕ್ಕಳಿಗೆ ಸಿದ್ದರಾಮಯ್ಯ ಸರ್ಕಾರ ದುಬಾರಿ ಶುಲ್ಕದ ಭಾಗ್ಯ ನೀಡಿದೆ. ಮೆಡಿಕಲ್ ಕಾಲೇಜುಗಳ ಲಾಬಿಗೆ ಮತ್ತೊಮ್ಮೆ ಸರ್ಕಾರ ತಲೆ ಬಾಗಿದೆ.ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕವನ್ನ ಶೇಕಡಾ 10 ರಷ್ಟು ಹೆಚ್ಚಳ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿಗೆ ವೈದ್ಯಕೀಯ ಕೋರ್ಸನ್ನ ಗಗನ ಕುಸುಮವಾಗಿಸಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ನಡೆದ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕಳೆದ ವರ್ಷ ಶೇ.20ರಷ್ಟು ಶುಲ್ಕ ಹೆಚ್ಚಳ ಮಾಡಿದ್ದ ಸರ್ಕಾರ ಈ ವರ್ಷ ಮತ್ತೆ ಶೇ.10 ಶುಲ್ಕ ಹೆಚ್ಚಿಸಿದೆ. ಇದ್ರಿಂದ, 7 ಸಾವಿರ ರೂಪಾಯಿ ಶುಲ್ಕ ಹೆಚ್ಚಾಗಿದ್ದು, ಪೋಷಕರು-ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊರೆಯಾಗಲಿದೆ.

    ಯಾವ ವರ್ಷ ಎಷ್ಟು ಶುಲ್ಕ?

     

  • SSLCಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಬೇಕಿದೆ ಸಹಾಯ

    SSLCಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಬೇಕಿದೆ ಸಹಾಯ

    ಕೊಪ್ಪಳ: ಅವರಿಬ್ಬರೂ ಪ್ರತಿಭಾವಂತ ಹೆಣ್ಣು ಮಕ್ಕಳು. ಯಾವುದೇ ಟ್ಯೂಷನ್‍ಗೆ ಹೋಗ್ದೆ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರು. ಆದ್ರೆ ಮುಂದೆ ಓದೋಕೆ ಇವ್ರಿಗೆ ಆರ್ಥಿಕ ತೊಂದರೆ ಎದುರಾಗಿದೆ. ಕಾಲೇಜು ಫೀಸ್ ಕಟ್ಟೋಕಾಗದೆ ಮುಂದಿನ ಭವಿಷ್ಯ ಕಮರಿಹೋಗುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆಗಳು ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ನಿರೀಕ್ಷೆಯಲ್ಲಿದ್ದಾರೆ.

    ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಮರಿಯಪ್ಪ ಅನ್ನೋವ್ರ ಮುದ್ದಾದ ಮಕ್ಕಳು. ಮರಿಯಪ್ಪರಿಗೆ ಕಡು ಬಡತನ, ಇವ್ರಿಗೆ 6 ಜನ ಮಕ್ಕಳು. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಿದ್ರೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ತಮಗೆ ಇರೋ ಅಲ್ಪ ಸ್ವಲ್ಪ ಜಮೀನನಿನಲ್ಲಿ ಕಡು ಕಷ್ಟದ ಜೀವನ ಬಂಡಿಯನ್ನು ನೂಕ್ತಿದ್ದಾರೆ. ದೊಡ್ಡ ಮಗಳು ಪದವಿ ವ್ಯಾಸಂಗ ಮಾಡ್ತಿದ್ದಾಳೆ. ಇನ್ನೂ ಇಬ್ಬರು ಮಕ್ಕಳು ಈ ವರ್ಷ ಬರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಉತ್ತಮ ಅಂಕಗಳಿಸಿದ್ದಾರೆ. ಯಮನಮ್ಮ ಅನ್ನೋ ವಿದ್ಯಾರ್ಥಿನಿ 594 ಅಂಕ ಗಳಿಸಿದ್ರೆ, ಅಕ್ಕದೇವಮ್ಮ 463 ಅಂಕ ಗಳಿಸಿದ್ದಾಳೆ. ಯಾವುದೇ ಟ್ಯುಷನ್‍ಗೆ ಹೋಗದೇ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಬ್ಬರು ಶಾಲೆಯ ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ತಂದೆಯ ಕಷ್ಟಕ್ಕೆ ಸಾಥ್ ನೀಡಿದ್ದಾರೆ. ಇಷ್ಟೊಂದು ಸಾಧನೆ ಮಾಡಿದ್ರೂ ಬಡತನದಿಂದ ಮುಂದಿನ ಓದಿಗೆ ಅಡ್ಡಿಯಾಗಿದೆ ಅಂತಾರೆ ಯಮನಮ್ಮ.

    ಮರಿಯಪ್ಪ ಅಲ್ಪ ಸ್ವಲ್ಪ ಭೂಮಿಯಲ್ಲಿ ವ್ಯವಸಾಯ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭಾಸ ಕಲಿಸುತ್ತಿದ್ದಾರೆ. ಈಗ ದೊಡ್ಡ ಮಗಳು ಪದವಿ ಕಲಿಯುತ್ತಿದ್ದಾರೆ. ಇನ್ನೂ ಈಗ ಎಸ್‍ಎಸ್‍ಎಲ್‍ಸಿಯಲ್ಲಿ ಇಬ್ಬರು ಮಕ್ಕಳು ಉತ್ತಮ ಅಂಕಗಳಿಸಿದ್ದಾರೆ. ಆದ್ರೆ ಮುಂದೆ ಪಿಯುಸಿಗೆ ಸೇರಿಸಲು ಇವರ ಬಳಿ ಹಣವಿಲ್ಲ. ಜೊತೆಗೆ ಜಮೀನಿನಲ್ಲಿ ಸಾಲ ಮಾಡಿ ಕೊಳವೆ ಬಾವಿ ಹಾಕಿಸಿದ್ದಾರೆ. ಇದ್ರಿಂದ ಮರಿಯಪ್ಪ ಈ ಮಕ್ಕಳ ಓದಿಗೆ ಬ್ರೇಕ್ ಹಾಕಲು ಚಿಂತಿಸಿದ್ದಾರೆ. ಆದ್ರೆ ಮಕ್ಕಳು ಮಾತ್ರ ನಾವು ಓದಬೇಕು ಎನ್ನುತ್ತಿದ್ದಾರೆ. ಮತ್ತೆ ಮಕ್ಕಳಿಗೆ ಹೇಗೆ ಓದಿಸ ಬೇಕು ಎಂದು ಕಂಗಾಲಾಗಿದ್ದಾರೆ. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ನೆರವು ಕೇಳುತ್ತಿದ್ದಾರೆ.

    https://www.youtube.com/watch?v=Drx0lVtn_zw

  • ಆಯಾಗಳು ಪಾಠ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ, ಟೀ ಮಾರೋ ವ್ಯಕ್ತಿ ದೇಶದ ಪ್ರಧಾನಿ ಆಗಿಲ್ವೇ ಎಂದು ಉತ್ತರಿಸಿದ ಪ್ರಿನ್ಸಿಪಾಲ್

    ಆಯಾಗಳು ಪಾಠ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ, ಟೀ ಮಾರೋ ವ್ಯಕ್ತಿ ದೇಶದ ಪ್ರಧಾನಿ ಆಗಿಲ್ವೇ ಎಂದು ಉತ್ತರಿಸಿದ ಪ್ರಿನ್ಸಿಪಾಲ್

    – ಬ್ರಿಗೇಡ್ ಮಿಲೇನಿಯಂ ಸ್ಕೂಲ್‍ನಲ್ಲಿ ಪೋಷಕರ ಪ್ರತಿಭಟನೆ
    – ಆರ್‍ಟಿಇ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಆಯಾಗಳು

    ಬೆಂಗಳೂರು: ಗರಬಡಿದವರಂತೆ ಕೂತ ಪುಟಾಣಿ ಮಕ್ಕಳು, ಇನ್ನೊಂದಡೆ ಧಿಕ್ಕಾರದ ಕೂಗು, ಪೋಷಕರ ಆಕ್ರೋಶ. ಆರ್‍ಟಿಇ ಮಕ್ಕಳಿಗೆ ತಾರತಮ್ಯ, ದುಡ್ಡಿನ ಹಮ್ಮಿನಲ್ಲಿ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ. ಇದು ನಗರದ ಖಾಸಗಿ ಶಾಲೆಯ ಕರ್ಮಕಾಂಡದ ಸ್ಟೋರಿ.

    ಜೆಪಿನಗರದಲ್ಲಿರುವ ಬ್ರಿಗೇಡ್ ಮಿಲೇನಿಯಂ ಶಾಲೆಯಲ್ಲಿ ಆರ್‍ಟಿಇ ಮಕ್ಕಳಿಗೆ ಬೇಕಾಬಿಟ್ಟಿ ಚೇರ್ ನೀಡಿದರೆ, ಡೊನೇಶನ್ ನೀಡಿ ಸೇರ್ಪಡೆಯಾದ ಶ್ರೀಮಂತರ ಮಕ್ಕಳಿಗೆ ಹೈ ಫೈ ಚೇರ್ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಮಕ್ಕಳಿಗೆ ಶಾಲೆಯಿಂದ ಬೇಧಭಾವ ಆಗುತ್ತಿರುವ ಬಗ್ಗೆ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಬಿಇಓ ಪರವಾಗಿ ಕ್ಲಸ್ಟರ್ ರೀಸೋರ್ಸ್ ಪರ್ಸನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಮೋದಿ ಪ್ರಧಾನಿ ಆಗಿಲ್ವೇ?: ಆರ್‍ಟಿಇ ಅಡಿ ಮಕ್ಕಳಿಗೆ ಆಯಾಗಳ ಕೈಯಲ್ಲಿ ಪಾಠ ಮಾಡಿಸುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರಾಂಶುಪಾಲೆ ಸ್ಟೆಲ್ಲಾ ಪಾರ್ಥ ಸಾರಥಿ, ಅಯ್ಯೋ ಚಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿಲ್ವೇ? ಹಾಗೆ ಆಯಾ ಕೈಯಿಂದ ಪಾಠ ಮಾಡಿಸಿದ್ರೆ ತಪ್ಪೇನು ಎಂದು ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

    ಗುರುವಾರ ಶಾಲೆಯನ್ನು ಪ್ರವೇಶಿಸಲು ಪೋಷಕರು ಮುಂದಾಗಿದ್ದರು. ಆದರೆ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ಅನುಮತಿ ನೀಡಲು ನಿರಾಕರಿಸಿದ್ದಕ್ಕೆ ಆಡಳಿತ ಮಂಡಳಿಯ ಜೊತೆ ಮಾತಿನ ಚಕಮಕಿ ನಡೆಯಿತು. ಶಾಲೆಯ ಸಿಸಿಟಿವಿ ದೃಶ್ಯವನ್ನು ತೋರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

    ಬುಧವಾರ ಏನಾಗಿತ್ತು?
    ಪಠ್ಯ ಸರಿಯಾಗಿ ಮಾಡದೇ ಇರುವುದು, ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಬೆಂಚ್ ವ್ಯವಸ್ಥೆ ಮಾಡದಿರುವ ಬಗ್ಗೆ ಪೋಷಕರು ಬಿಇಓ ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಪ್ರತಿಭಟನೆಯ ವೇಳೆ ಆಡಳಿತ ಮಂಡಳಿಯವರ ಜೊತೆ ವಾಕ್ಸಮರ ನಡೆದಿತ್ತು. ಸ್ಥಳಕ್ಕೆ ಬಂದ ನೋಡಲ್ ಆಫೀಸರ್ ಕ್ಲಾಸ್ ರೂಂನೊಳಗೆ ಹೋದಾಗ ಬ್ರಿಗೇಡ್ ಮಿಲೇನಿಯಂ ಶಾಲೆಯ ಕರಾಳ ಮುಖ ಬಯಲಾಗಿತ್ತು. ಆರ್‍ಟಿಇ ಅಡಿಯಲ್ಲಿ ದಾಖಲಾದ ಅಷ್ಟು ಮಕ್ಕಳನ್ನು ಒಂದೇ ಕ್ಲಾಸ್ ರೂಂನೊಳಗೆ, ತುಕ್ಕು ಹಿಡಿದ ಬೇಂಚ್ ಕೊಟ್ಟು ಕೂರಿಸಿದ ಶಾಲೆಯ ಅಮಾನವೀಯ ಮುಖ ಬಯಲಾಗಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲೆ ಆರ್‍ಟಿಇ ಅಡಿಯಲ್ಲಿ ದಾಖಲಾದ ಮಕ್ಕಳು ಬುದ್ಧಿವಂತರಲ್ಲ, ಅದಕ್ಕೆ ಅವರಿಗೆ ಪ್ರತ್ಯೇಕ ಕ್ಲಾಸ್ ನಲ್ಲಿ ಇರಿಸಿದ್ದೇವೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ಪೀಠೋಪಕರಣ ಕೊರತೆ ಇದೆ ಎಂದು ಅಹಂಕಾರದ ಉತ್ತರ ನೀಡಿದ್ದರು.

    ಈ ಸಂಬಂರ್ಧದಲ್ಲಿ ಶಿಕ್ಷಕರೊಬ್ಬರು ಪೋಷಕರ ಜೊತೆ ಗಲಾಟೆ ಮಾಡಿದ್ದರು. ಪ್ರಾಂಶುಪಾಲರ ಉತ್ತರದಿಂದ ಸಿಟ್ಟಾಗಿದ್ದ ಪೋಷಕರು ಈ ಮಾತುಗಳನ್ನು ಕೇಳಿ ಅಲ್ಲೇ ಶಿಕ್ಷಕನಿಗೆ ಕಪಾಳಮೋಕ್ಷ ಮಾಡಿದ್ದರು.

    https://www.youtube.com/watch?v=7Lfnd0Hg9-c

  • ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಪಾಟ್ನಾ: ಶಾಲಾ ಯೂನಿಫಾರ್ಮ್ ಶುಲ್ಕ ಪಾವತಿಸದ್ದಕ್ಕೆ ಶಿಕ್ಷಕಿಯೊಬ್ಬರು ಇಬ್ಬರು ಬಾಲಕಿಯರನ್ನ ಅರೆಬೆತ್ತಲೆಯಾಗಿ ಮನೆಗೆ ಕಳುಹಿಸಿದ ಘಟನೆ ಬಿಹಾರದ ಬೆಗುಸರಾಯ್‍ನ ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಒಂದು ಮತ್ತು 2ನೇ ತರಗತಿಯ ಓದುವ ವಿದ್ಯಾರ್ಥಿನಿಯರನ್ನು ಶಿಕ್ಷಕಿ ಎಲ್ಲರ ಮುಂದೆ ಯೂನಿಫಾರ್ಮ್ ಬಟ್ಟೆ ಬಿಚ್ಚಿಸಿ ಮನೆಗೆ ಕಳುಹಿಸಿದ್ದಾಳೆ.

    ನಾವು ಬಡವರಾಗಿದ್ದೇವೆ. ಶುಲ್ಕ ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಬಾಲಕಿಯರ ತಂದೆ ಮನವಿ ಮಾಡಿದ್ದರೂ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಅವಮಾನ ಮಾಡಿದ್ದಾಳೆ.

    ಬಾಲಕಿಯರ ತಂದೆ ದೂರು ನೀಡಿದ್ದು, ಈಗ ಶಾಲೆಯ ಶಿಕ್ಷಕಿಯಾದ ಅಂಜನಾ ಕುಮಾರಿ ಮತ್ತು ಶಾಲಾ ಪ್ರಾಂಶುಪಾಲರಾದ ಎನ್.ಕೆ.ಝಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಂಜಿತ್ ಮಿಶ್ರಾ ತಿಳಿಸಿದ್ದಾರೆ.

    ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆರೋಪಿಗಳು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಅಶೋಕ್ ಚೌಧರಿ ತಿಳಿಸಿದ್ದಾರೆ.

     

  • ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಚಿತ್ರದುರ್ಗ: ಈಕೆಯ ಹೆಸರು ಗೌಸಿಯಾ ಭಾನು. ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ನಿವಾಸಿ. ತಂದೆ ಆಟೋಚಾಲಕ. ಗಳಿಸೋ ಅಷ್ಟೋ ಇಷ್ಟೋ ಹಣವೇ ಮನೆಗೆ ಆಧಾರ. ಅಪ್ಪನ ಕನಸಿನಂತೆ ಮಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಬಾರಿ ಹತ್ತನೇ ತರಗತಿಯಲ್ಲಿ ಶೇ 95 ರಷ್ಟು ಅಂಕಗಳನ್ನ ಪಡೆದುಕೊಂಡಿದ್ದಾಳೆ. ಆದ್ರೆ ಪೋಷಕರ ಬಡತನ ಇದೀಗ ಗೌಸಿಯಾಳ ವೈದ್ಯಳಾಗೋ ಕನಸಿಗೆ ಅಡ್ಡಿಯಾಗಿದೆ.

    ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಎನ್‍ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹಳಾಗಿದ್ದಾಳೆ. ಇದರ ಜೊತೆಗೆ ಈ ಪ್ರತಿಭಾವಂತೆ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಕೂಡ ತನ್ನ ಮುಡಿಗೇರಿಸಿಕೊಂಡಿದ್ದಾಳೆ.

    ಆದ್ರೆ ಮಗಳ ಈ ಸಾಧನೆಯ ಸಂತಸದ ನಡುವೆಯೇ ಮುಂದೆ ಓದಿಸಲು ಆಗ್ತಾ ಇಲ್ಲವಲ್ಲಾ ಅನ್ನೋ ಕೊರಗು ಪೋಷಕರನ್ನ ಕಾಡುತ್ತಿದೆ. ಬಡತನವೇ ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುವಂತೆ ಮಾಡಿದೆ. ಈಕೆಗೆ ಯಾರಾದ್ರೂ ಸಹಾಯ ಮಾಡಿದ್ರೆ ಉತ್ತಮ ಶಿಕ್ಷಣದ ಅವಕಾಶ ಸಿಕ್ಕರೆ ತನ್ನ ಕನಸು ನನಸು ಮಾಡಿಕೊಳ್ಳಲಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಓದಲು ಆಸಕ್ತಿ ಇರುವ ಈಕೆಗೆ ದಾನಿಗಳ ನೆರವಿನ ಹಸ್ತ ಬೇಕಿದೆ.

    https://www.youtube.com/watch?v=ew_jzXoIeD4