Tag: education

  • ಬಡ ದಂಪತಿಯ ಮಕ್ಕಳ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ಬಡ ದಂಪತಿಯ ಮಕ್ಕಳ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ಹಾವೇರಿ: ಮೀನು ಹಿಡಿಯುವ ತಂದೆ, ತಾಯಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸುತ್ತಿದ್ದಾರೆ. ಈ ಬಡದಂಪತಿಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಥಿಕ ಸಹಾಯ ಬೇಕಿದೆ.

    ಹೌದು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಇಬ್ಬರು ಪ್ರತಿಭಾವಂತ ಮಕ್ಕಳಿರುವ ಪುಟ್ಟ ಕುಟುಂಬ. ತಂದೆ ಮಾರುತಿ ಕಿಳ್ಳಿಕ್ಯಾತರ್ ಮೀನು ಹಿಡಿದು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ತಾಯಿ ಪುಷ್ಪಾ ಕಿಳ್ಳಿಕ್ಯಾತರ್ ಅಂಗನಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿ. ಮನೆಯಲ್ಲಿ ಬಡತನವಿದ್ದರೂ ಇಬ್ಬರೂ ಮಕ್ಕಳನ್ನ ಶಾಲೆಗೆ ಕಳುಹಿಸಿ ಈಗ ಎಂಜಿನಿಯರಿಂಗ್ ವರೆಗೂ ಓದಿಸುತ್ತಿದ್ದಾರೆ.

    ಅವಿನಾಶ್ ಮತ್ತು ಆಕಾಶ್ ಇಬ್ಬರೂ ಬೆಂಗಳೂರಿನ ವೈಟ್‍ಪೀಲ್ಡ್ ನಲ್ಲಿರೋ ಜೈರಾಮ್ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಬಿಇ ಓದುತ್ತಿದ್ದಾರೆ. ಅವಿನಾಶ್ 7ನೇ ಸೆಮಿಸ್ಟರ್ ನಲ್ಲಿದ್ದರೆ. ಆಕಾಶ ಮೂರನೇ ಸೆಮಿಸ್ಟರ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಈಗ ಮಕ್ಕಳ ಶಿಕ್ಷಣದ ಖರ್ಚು ಭರಿಸುವುದು ಕಷ್ಟವಾಗಿದೆ. ಸರ್ಕಾರಿ ಶುಲ್ಕವನ್ನ ಕಟ್ಟಲೂ ಆಗುತ್ತಿಲ್ಲ. ಜೊತೆಗೆ ತಾಯಿ ಪುಷ್ಪಾಗೆ ಅನಾರೋಗ್ಯ, ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಬೇಕಿದೆ ಎಂದು ಹೇಳುತ್ತಿದ್ದಾರೆ.

    ಈ ಬಡದಂಪತಿ ಇಬ್ಬರ ಮಕ್ಕಳ ಶಿಕ್ಷಣಕ್ಕಾಗಿ ನಿತ್ಯವೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಮಹತ್ವ ಅರಿತಿರುವ ಈ ಪೋಷಕರಿಗೆ ಆರ್ಥಿಕ ಸಹಾಯದ ಸಾಥ್ ನೀಡುವುದು ನಮ್ಮ ಉದ್ದೇಶ. ಈ ಬಡ ದಂಪತಿಯು ನಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • 40ರ ಪ್ರಿನ್ಸಿಪಾಲ್‍ಗಾಗಿ 20ರ ಯುವಕನ ಆತ್ಮಹತ್ಯೆ ಯತ್ನ: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್

    40ರ ಪ್ರಿನ್ಸಿಪಾಲ್‍ಗಾಗಿ 20ರ ಯುವಕನ ಆತ್ಮಹತ್ಯೆ ಯತ್ನ: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಲವ್

    ಬೆಂಗಳೂರು: ನಗರದ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ತರುಣ್ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಸ್‍ಎಸ್‍ಎಲ್‍ಸಿ ಫೇಲ್ ಆಗಿರುವ ತರುಣ್ ಜೆಪಿ ನಗರದ ಖಾಸಗಿ ಶಾಲೆಯಲ್ಲಿ ರಿಸೆಪ್ಸನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ. ಈ ವೇಳೆ ಅಲ್ಲಿದ್ದ ಪ್ರಿನ್ಸಿಪಾಲ್ ಜೊತೆ ಲವ್ವಿಡವ್ವಿ ಶುರವಾಗಿದೆ.

    ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳಿಂದ ಲಿವಿಂಗ್ ರಿಲೇಷನ್ ಶಿಪ್ ಇಟ್ಕೊಂಡಿದ್ದರು. ಆದರೆ ಒಂದೂವರೆ ತಿಂಗಳಿಂದ ತರುಣನನ್ನ ಪ್ರಿನ್ಸಿಪಾಲ್ ತಿರಸ್ಕರಿಸಿದ್ದಾರೆ. ಪ್ರಿನ್ಸಿಪಾಲ್ ತಿರಸ್ಕರಿಸಿದ್ದಕ್ಕೆ ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕುಯ್ದುಕೊಂಡಿದ್ದ ತರುಣ್ ಗುರುವಾರ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎಂದು ಹೇಳುತ್ತಿರುವ ಯುವಕನ ಪೋಷಕರು ನಿಧನರಾಗಿದ್ದಾರೆ. ಈಗಾಗಲೇ ಪ್ರಿನ್ಸಿಪಾಲ್ ಗೆ ಮದುವೆಯಾಗಿ 20 ವರ್ಷದ ಮಗಳಿದ್ದು, ಪತಿ ಕೇರಳದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • ತಾಯಿ ಇಲ್ಲ, ತಂದೆ ಬಿಟ್ಟು ಹೋದ, ಇರೋ ಅಜ್ಜಿಗೆ ದೃಷ್ಟಿ ಸರಿಯಿಲ್ಲ- ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಬಾಲಕನಿಗೆ ಬೇಕಿದ ಶಿಕ್ಷಣ

    ತಾಯಿ ಇಲ್ಲ, ತಂದೆ ಬಿಟ್ಟು ಹೋದ, ಇರೋ ಅಜ್ಜಿಗೆ ದೃಷ್ಟಿ ಸರಿಯಿಲ್ಲ- ಅಜ್ಜಿಯ ಆರೈಕೆಯಲ್ಲಿ ಬೆಳೆಯುವ ಬಾಲಕನಿಗೆ ಬೇಕಿದ ಶಿಕ್ಷಣ

    ಹುಬ್ಬಳ್ಳಿ: ತಾಯಿ ಸಾವನ್ನಿಪ್ಪಿದ್ದಾರೆ. ತಂದೆ ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ಇರೋದು ಅಜ್ಜಿ ಮಾತ್ರ. ಆದರೆ ಅವರಿಗೆ ಸರಿಯಾಗಿ ದೃಷ್ಟಿ ಕಾಣುವುದಿಲ್ಲ. ಅಜ್ಜಿಗೆ ಆಪರೇಷನ್ ಮಾಡಿಸಿ ಮೈತುಂಬಾ ಸಾಲ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ಕುಟುಂಬ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.

    ಅಜ್ಜಿಯ ಕೈ ತುತ್ತು ತಿಂದು ಬೆಳೆಯುತ್ತಿರುವ ಬಾಲಕನ ಹೆಸರು ಮಂಜುನಾಥ್ ಠಾಕೋಲಿ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. ಕಳೆದ 15 ವರ್ಷಗಳ ಹಿಂದೆ ಈ ಬಾಲಕನ ತಾಯಿ ಸಾವನ್ನಪ್ಪಿದ್ದಾರೆ. ತಾಯಿ ಸಾವಿನ ಬಳಿಕ ತಂದೆ ಕೂಡ ಮಗನನ್ನು ಬಿಟ್ಟು ಹೋದವರು ಮತ್ತೆ ಇಲ್ಲಿವರೆಗೂ ಹಿಂದಿರುಗಿ ಬಂದಿಲ್ಲ.

    ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು, ತಂದೆಗೆ ಬೇಡವಾದ ಮಗನಾಗಿ ಮಂಜುನಾಥ್ ಠಾಕೋಲಿ ಅನಾಥನಾಗಿ ಬಿಟ್ಟಿದ್ದನು. ಆದರೆ ಅಜ್ಜಿ ಸರೋಜಮ್ಮ ಅವರು ಮೊಮ್ಮಗನಿಗೆ ಆಸರೆಯಾದರೂ. ಅವರಿವರ ಮನೆ ಕೆಲಸಗಳನ್ನು ಮಾಡಿಕೊಂಡು ಮೊಮ್ಮಗನಿಗೆ ವಿದ್ಯಾಭ್ಯಾಸ ಕೊಡಿಸಿ ಆತನ ಆರೈಕೆ ಮಾಡಿಕೊಂಡು ತಮ್ಮ ಪ್ರತಿನಿತ್ಯದ ಜೀವನವನ್ನು ಸವೆಸುತ್ತಿದ್ದಾರೆ.

    ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಿರುವ ಮಂಜುನಾಥ್ ಠಾಕೋಲಿ ಕುಂದಗೋಳದ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದಿನಲ್ಲಿ ಸದಾ ಮುಂದಿದ್ದು, ಎಲ್ಲಾ ಶಿಕ್ಷಕರಿಗೂ ನೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಆದರೆ ಅಜ್ಜಿ ಸರೋಜಮ್ಮ ಅವರು ದೃಷ್ಠಿ ದೋಷದಿಂದ ಬಳಲುತ್ತಿದ್ದರು. ಆದ್ದರಿಂದ ಸಾಲ ಮಾಡಿ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಕಣ್ಣಿನ ಚಿಕಿತ್ಸೆಗೆ ಮಾಡಿದ ಸಾಲವನ್ನು ತೀರಿಸಲಾಗದೇ ಈಗ ಹೊಟ್ಟೆಗೆ ಅನ್ನ ನೀರು ಇಲ್ಲದೇ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಅಜ್ಜಿ ತಮ್ಮ ಕೈಯಲ್ಲಿ ಆದಷ್ಟು ಇಲ್ಲಿಯವರೆಗೂ ಮೊಮ್ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದು, ಮುಂದಿನ ಓದಿಗೆ ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ನೊಂದ ಹೃಯದ ನಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಕೇಳಿಕೊಂಡು ಬಂದಿದ್ದಾರೆ.

  • ನಸುಕಿನ ಜಾವ ಎದ್ದು ಪೇಪರ್ ಹಾಕೋ ಅಕ್ಕ-ತಮ್ಮನಿಗೆ ಬೇಕಿದೆ ಸಹಾಯ

    ನಸುಕಿನ ಜಾವ ಎದ್ದು ಪೇಪರ್ ಹಾಕೋ ಅಕ್ಕ-ತಮ್ಮನಿಗೆ ಬೇಕಿದೆ ಸಹಾಯ

    ತುಮಕೂರು: ನಸುಕಿನ ಜಾವ ಕಣ್ಣು ಉಜ್ಜಿಕೊಳ್ಳುತ್ತಾ ಪೇಪರ್ ಹಾಕೋ ಅಕ್ಕ ಮತ್ತು ತಮ್ಮನನ್ನು ನೋಡಿದ್ರೆ ಎಂಥವರ ಕರುಳು ಕೂಡಾ ಚುರ್ರ್ ಅನ್ನಿಸದೆ ಇರದು. ಇವರ ವಯಸ್ಸಿನ ಮಕ್ಕಳು ಇನ್ನೂ ಹಾಸಿಗೆಯಲ್ಲಿ ಮಲಗಿರಬೇಕಾದ್ರೆ ಈ ಮಕ್ಕಳು ಮಾತ್ರ ಕೋಳಿ ಕೂಗುವ ಮುಂಚೆಯೆ ಎದ್ದು ಮನೆ-ಮನೆಗೆ ದಿನಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದಾರೆ.

    ಸಾಮಾನ್ಯವಾಗಿ ಚಿಕ್ಕವಯಸ್ಸಿನ ಗಂಡು ಮಕ್ಕಳು ಪೇಪರ್ ಹಂಚೋದು ನೋಡ್ತಿರಾ. ಆದ್ರೆ ಈ ಬಾಲಕಿ ಕೂಡಾ ನಸುಕಿನ ಜಾವವೇ ಎದ್ದು ಪೇಪರ್ ಹಾಕುತ್ತಾಳೆ. ತಮ್ಮ ವಿದ್ಯಾಭ್ಯಾಸದ ಖರ್ಚಿಗಾಗಿ ಹಾಗೂ ಜೀವನ ನಿರ್ವಹಣೆಗಾಗಿ ಪತ್ರಿಕೆ ಹಂಚುವ ಕೆಲಸ ಮಾಡ್ತಾರೆ. ಈ ಮಕ್ಕಳಿಗೆ ಇಷ್ಟೊಂದು ಕಷ್ಟ ಬರಲು ಕಾರಣ ತಂದೆಯ ಅಕಾಲಿಕ ಮರಣ. ಹಾಗಾಗಿ ಈ ಕುಟುಂಬ ಅಕ್ಷರಶಃ ಅನಾಥವಾಗಿದೆ.

    ಪತಿ ಚಂದ್ರಶೇಖರ್ ಸಾವನ್ನಪ್ಪಿದ್ದಾಗಿನಿಂದ ಕುಟುಂಬ ನಿರ್ವಹಣೆಯ ಜವಾಬ್ದಾರಿ ಪತ್ನಿ ವಸಂತಿ ಮೇಲೆ ಬಂದಿದೆ. ಅವರಿವರ ಮನೆಯಲ್ಲಿ ಮನೆಕೆಲಸ ಮಾಡಿ ಅಷ್ಟೊ ಇಷ್ಟೊ ಸಂಪಾದಿಸಿದ ಹಣ ಮನೆ ಬಾಡಿಗೆಗೆ ಖರ್ಚಾಗುತ್ತಿದೆ. ಉಳಿದಂತೆ ಅನ್ನಭಾಗ್ಯದಿಂದ ಹೊಟ್ಟೆಪಾಡು ನಡೆಯುತ್ತಿದೆ. ಇಬ್ಬರು ಮಕ್ಕಳು, ವೃದ್ಧ ಅತ್ತೆಯ ಪಾಲನೆ ಕೂಡಾ ವಸಂತಿ ಮೇಲಿದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೊಂದಿಸೋದು ಸಾಹಸವಾಗಿದೆ. ಹಾಗಾಗಿ ತಾಯಿಯ ಕಷ್ಟ ನೋಡಲು ಆಗದ ಮಗಳು ಅಶ್ವಿನಿ ಹಾಗೂ ಮಗ ದರ್ಶನ್ ಬೆಳಗಿನ ಜಾವ ಎದ್ದು ಪೇಪರ್ ಹಾಕಿ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸದ ಖರ್ಚು ಭರಿಸೋ ಪ್ರಯತ್ನ ಮಾಡುತ್ತಿದ್ದಾರೆ.

    ಕಷ್ಟಪಟ್ಟು ಛಲದಿಂದ ಓದುತ್ತಿರೋ ಈ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಬೇಕಿದೆ. ಇವರ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲು ಹೃದಯವಂತರು ಮುಂದೆ ಬರಬೇಕಾಗಿದೆ.

     

  • ಎಂಎ ಅರ್ಥಶಾಸ್ತ್ರ ಪರೀಕ್ಷೆ ಪಾಸ್ ಮಾಡಿದ್ರು 98ರ ಹಿರಿಯ ವ್ಯಕ್ತಿ!

    ಎಂಎ ಅರ್ಥಶಾಸ್ತ್ರ ಪರೀಕ್ಷೆ ಪಾಸ್ ಮಾಡಿದ್ರು 98ರ ಹಿರಿಯ ವ್ಯಕ್ತಿ!

    ಪಾಟ್ನಾ: 98 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಮುಕ್ತ ವಿಶ್ವವಿದ್ಯಾಲಯದ ಮೂಲಕ ಅರ್ಥಶಾಸ್ತ್ರ ಸ್ನಾತಕೋತ್ತರ ಪರೀಕ್ಷೆಯನ್ನು ತೇರ್ಗಡೆಯಾಗಿ ಸುದ್ದಿಯಾಗಿದ್ದಾರೆ.

    1938ರಲ್ಲಿ ಪದವಿ ಪಡೆದಿದ್ದ ರಾಜ್ ಕುಮಾರ್ ವೈಶ್ಯ ಈಗ ಪಾಟ್ನಾದ ನಳಂದಾ ಮುಕ್ತ ವಿಯಲ್ಲಿ ಅರ್ಥಶಾಸ್ತ್ರ ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿದ್ದಾರೆ.

    ತನ್ನ ಸಾಧನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ ಅವರು, ಕೊನೆಗೂ ನನ್ನ ಜೀವನದ ದೊಡ್ಡ ಕನಸನ್ನು ನನಸು ಮಾಡಿದ್ದೇನೆ. ಸ್ನಾತಕೋತ್ತರ ಪದವಿ ಪಡೆದಿದ್ದಕ್ಕೆ ಸಂತೋಷ ಆಗುತ್ತಿದೆ. ಯಾರು ಯಾವ ವರ್ಷದಲ್ಲಿ ಬೇಕಾದರೂ ಕನಸು ನನಸು ಮಾಡಬಹುದು ಎನ್ನುವುದಕ್ಕೆ ನಾನು ಉತ್ತಮ ಉದಾಹರಣೆ ಎಂದು ಅವರು ಹೇಳಿದರು.

    ಯಾರು ಅವರ ಸ್ವ ಸಾಮಾರ್ಥ್ಯದ ಬಗ್ಗೆ ನಂಬಿಕೆ ಇಡುತ್ತಾರೋ ಅವರಿಗೆ ಯಾವಾಗಲೂ ಅವಕಾಶಗಳು ತೆರೆದಿರುತ್ತದೆ. ಯಾವತ್ತೂ ನಿರಾಶೆ ಭಾವನೆಯನ್ನು ಇಟ್ಟುಕೊಳ್ಳಬೇಡಿ ಎಂದು ಅವರು ಕಿರಿಯರಿಗೆ ಸಲಹೆ ನೀಡಿದರು.

    ಈ ಪ್ರಾಯದಲ್ಲಿ ಬೆಳಗ್ಗೆ ಬೇಗ ಎದ್ದು ಪರೀಕ್ಷೆಗೆ ತಯಾರಾಗುವುದು ಬಹಳ ಕಷ್ಟದ ಕೆಲಸವಾಗಿತ್ತು . 2015ಕ್ಕೆ ಸ್ನಾತಕೋತ್ತರ ಪದವಿಗೆ ದಾಖಲಾದ ವೈಶ್ಯ ಅವರು ಮುಂದೆ ಪಿಎಚ್‍ಡಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ನಲಂದಾ ಮುಕ್ತ ವಿವಿಯ ಅಧಿಕಾರಿ ಪ್ರತಿಕ್ರಿಯಿಸಿ, ಮೂರು ಗಂಟೆ ಬರೆದು ರಾಜ್ ಕುಮಾರ್ ವೈಶ್ಯ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆದ ಅವರು ಎರಡು ಡಜನ್‍ಗಿಂತ ಹೆಚ್ಚು ಉತ್ತರ ಪತ್ರಿಕೆ ತೆಗೆದುಕೊಂಡು ಉತ್ತರ ಬರೆದಿದ್ದಾರೆ ಎಂದು ತಿಳಿಸಿದರು.

    1920 ಏಪ್ರಿಲ್ 1ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ ಇವರು 1938ರಲ್ಲಿ ಅಗ್ರಾ ವಿವಿಯಿಂದ ಪದವಿ ಪಡೆದ ಬಳಿಕ 1940ರಲ್ಲಿ ಕಾನೂನು ಡಿಗ್ರಿ ಪಡೆದಿದ್ದರು. ಕುಟುಂಬ ಸಮಸ್ಯೆಯಿಂದಾಗಿ ವೈಶ್ಯ ಅವರಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

    ಜಾರ್ಖಂಡ್ ನಲ್ಲಿ 1980ರವರೆಗೆ ಉದ್ಯೋಗದಲ್ಲಿದ್ದ ಇವರು ಜನರ ಮತ್ತು ದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ ಓದಿದ್ದೇನೆ ಎಂದು ಹೇಳಿದ್ದಾರೆ.

    10 ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡ ಇವರು ಮಗನ ಜೊತೆ ವಾಸವಾಗಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ವೈಶ್ಯ ಇದೂವರೆಗೆ ಆಧುನಿಕ ಜಗತ್ತಿನ ತಿಂಡಿಗಳನ್ನು ತಿನ್ನಿಲ್ಲವಂತೆ.

     

  • ಶೀಘ್ರದಲ್ಲೇ ದೇಶದ ಶಿಕ್ಷಣದಲ್ಲಿ ಬಾಲಕರನ್ನು ಹಿಂದಿಕ್ಕಲಿದ್ದಾರೆ ಬಾಲಕಿಯರು!

    ಶೀಘ್ರದಲ್ಲೇ ದೇಶದ ಶಿಕ್ಷಣದಲ್ಲಿ ಬಾಲಕರನ್ನು ಹಿಂದಿಕ್ಕಲಿದ್ದಾರೆ ಬಾಲಕಿಯರು!

    ನವದೆಹಲಿ: ಕರ್ನಾಟಕದಲ್ಲಿ ಪಿಯುಸಿ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂದಾಗ ಬಾಲಕೀಯರು ಮೇಲುಗೈ ಎನ್ನುವ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಬಾಲಕೀಯರು ಶೀಘ್ರದಲ್ಲೇ ದೇಶದ ಶಿಕ್ಷಣದಲ್ಲಿ ಬಾಲಕರನ್ನು ಹಿಂದಿಕ್ಕಲಿದ್ದಾರೆ .

    ಹೌದು. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆಯನ್ನು ಯುವ ಸಮೂಹವೇ ಹೊಂದಿದ್ದು, ಹುಡುಗರನ್ನು ಶಿಕ್ಷಣದಲ್ಲಿ ಹಿಂದಿಕ್ಕಿ ವಿದ್ಯಾರ್ಥಿನಿಯರು ದೊಡ್ಡ ಶಕ್ತಿಯಾಗಿ ದೇಶದ ಪ್ರಗತಿಗೆ ಒಂದು ಭಾಗವಾಗಲು ಸಜ್ಜಾಗಲಿದ್ದಾರೆ ಎಂದು ಶೈಕ್ಷಣಿಕ ವರದಿಯೊಂದು ಹೇಳಿದೆ.

    ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣದ ಅರಿವು ಎಲ್ಲೆಡೆ ಮೂಡಿದ್ದು, ಮಹಿಳೆಯರು ಶಿಕ್ಷಣ ಪಡೆಯಲು ಮುಂದೆ ಬರುತ್ತಿದ್ದಾರೆ. 2015-16 ರಲ್ಲಿ 30 ಕೋಟಿ ವಿದ್ಯಾರ್ಥಿಗಳ ಪೈಕಿ ಶೇ.48 ರಷ್ಟು ಹುಡುಗಿಯರು ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದೆ.

    ಎಷ್ಟಿತ್ತು ಎಷ್ಟು ಏರಿಕೆ ಆಗಿದೆ?
    1950-51 ರಲ್ಲಿ ಶಿಕ್ಷಣ ಪಡೆಯಲು ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ದೇಶದಲ್ಲಿ ಶೇ.25 ರಷ್ಟು ಇತ್ತು. 1990-91 ರಲ್ಲಿ ಶೇ.39 ರಷ್ಟು ಇದ್ದರೆ 2000-01 ರಲ್ಲಿ ಈ ಸಂಖ್ಯೆ ಶೇ.42 ಆಗಿತ್ತು.

    ಯೂರೋಪ್ ರಾಷ್ಟ್ರಗಳಲ್ಲಿ ಶೇ.54 ರಷ್ಟು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದರೆ, ಅಮೆರಿಕದಲ್ಲಿ ಶೇ. 55 ರಷ್ಟು ಮತ್ತು ಚೀನಾದಲ್ಲಿ ಈ ಸಂಖ್ಯೆ ಶೇ.54 ರಷ್ಟು ಹುಡುಗಿಯರು ಶಿಕ್ಷಣ ಪಡೆದು ರಾಷ್ಟ್ರದ ಅಭಿವೃದ್ಧಿಗೆ ಭಾಗವಾಗಿದ್ದಾರೆ. ಅಲ್ಲದೇ ಉದ್ಯೋಗ, ರಾಜಕೀಯ, ಶೈಕ್ಷಣಿಕ, ಆಡಳಿತ ಹಾಗೂ ಆರ್ಥಿಕ ಕ್ಷೇತ್ರದಲ್ಲೂ ಸಹ ಹುಡುಗಿಯರು ಮುಂದೆ ಇದ್ದಾರೆ ಎಂದು ಹೇಳಲಾಗುತ್ತಿದೆ.

    ರಾಜಕೀಯ ಕ್ಷೇತ್ರದಲ್ಲಿ ಭಾರತದ ಸಂಸತ್ತಿನಲ್ಲಿ ಒಟ್ಟು ಶೇ.11 ರಷ್ಟು ಮಹಿಳೆಯರಿಗೆ ಸ್ಥಾನ ಸಿಕ್ಕಿದರೆ ಒಟ್ಟು ರಾಜ್ಯಗಳ ಶಾಸನ ಸಭೆಗಳಲ್ಲಿ ಶೇ.8.8 ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. 500 ದೊಡ್ಡ ಖಾಸಗಿ ಕಂಪನಿಗಳಲ್ಲಿ 17 ಜನ ಮಹಿಳೆಯರೇ ಸಿಇಓ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸರ್ವಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದಾಗಿ ದೇಶದಲ್ಲಿ 1990 ರಿಂದ 2000 ವರೆಗೆ ಮಹಿಳೆಯರ ಶೈಕ್ಷಣಿಕ ಪ್ರಗತಿ ಹೆಚ್ಚಾಗಿದೆ ಎಂದು ಉಲ್ಲೇಖವಾಗಿದೆ. 2000-01 ರ ವೇಳೆಗೆ ಶೇ.35 ರಷ್ಟು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪ್ರವೇಶ ಪಡೆದಿದ್ದರೆ, 2015-16 ರಲ್ಲಿ ಈ ಸಂಖ್ಯೆ ಶೇ.46 ರಕ್ಕೆ ಏರಿಕೆಯಾಗಿತ್ತು.

    ಔದ್ಯೋಗಿಕ ಕೋರ್ಸ್‍ಗಳಲ್ಲಿ ಪೈಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಅನುಪಾತ 3:1 ಇದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಈ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಕಲೆ ಮತ್ತು ಮಾನವಿಕ ಶಿಕ್ಷಣವನ್ನು ಹೆಚ್ಚಾಗಿ ಓದುತ್ತಿದ್ದಾರೆ ಎಂದು ವರದಿ ತಿಳಿಸಿದೆ.

    ಪ್ರಸ್ತುತ ಮದುವೆ ವೇಳೆ ಶಿಕ್ಷಣ ವಿಚಾರವೂ ಚರ್ಚೆಗೆ ಬರುತ್ತಿರುವುದಿಂದ ಪೋಷಕರು ಈಗ ಮಗಳನ್ನು ಓದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮುಂದೆ ಉದ್ಯೋಗ ಪಡೆಯುವ ದೃಷ್ಟಿಯಿಂದ ವಿದ್ಯಾರ್ಥಿನಿಯರ ಶಿಕ್ಷಣದ ಪ್ರಮಾಣ ಹೆಚ್ಚಾಗುತ್ತಿದೆ.

  • 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹೆಡ್‍ಮಾಸ್ಟರ್‍ಗೆ 55 ವರ್ಷ ಜೈಲು ಶಿಕ್ಷೆ

    22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹೆಡ್‍ಮಾಸ್ಟರ್‍ಗೆ 55 ವರ್ಷ ಜೈಲು ಶಿಕ್ಷೆ

    ಚೆನ್ನೈ: ಒಂದೇ ಶಾಲೆಯ 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನಿಗೆ ತಮಿಳುನಾಡು ವಿಶೇಷ ನ್ಯಾಯಾಲಯ 55 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

    ಮಧುರೈ ಜಿಲ್ಲೆ ಪೊದಂಬು ಗ್ರಾಮದ ಪ್ರೌಢ ಶಾಲೆಯ ಹೆಡ್‍ಮಾಸ್ಟರ್ ಆಗಿದ್ದ ಆರೋಗ್ಯಸ್ವಾಮಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 3.4 ಲಕ್ಷ ರೂ. ದಂಡ ಹಾಗೂ 55 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಆರೋಗ್ಯ ಸ್ವಾಮಿ 7 ವರ್ಷದ ಹಿಂದೆ ಪಂಜು ಎಂಬವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ದಲಿತ ದೌರ್ಜನ್ಯದ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ ವೇಳೆ ಈತ 22 ವಿದ್ಯಾರ್ಥಿನಿಯರು ಮತ್ತು ಬಾಲಕರ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವ ವಿಚಾರ ಬಯಲಾಗಿತ್ತು.

    ಈತನ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸಿ ಅಮಲಿ ರೋಸ್, ಷಣ್ಮುಗ ಕುಮಾರಸ್ವಾಮಿ ಮತ್ತು ವಿಕ್ಟರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಅವರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ದಂಡದ ಮೊತ್ತವಾದ 3.4 ಲಕ್ಷ ರೂ. ಹಣವನ್ನು ದೌರ್ಜನ್ಯಕ್ಕೆ ಒಳಗಾದ 22 ವಿದ್ಯಾರ್ಥಿನಿಯರಿಗೆ ಸಮಾನವಾಗಿ ಹಂಚಬೇಕು ಎಂದು ಆದೇಶಿಸಿದೆ.

    ಇದುವರೆಗೂ ಕೋರ್ಟ್ ಇತಿಹಾಸದಲ್ಲೇ ಅಪರಾಧಿಗೆ 50 ವರ್ಷಗೂ ಅಧಿಕ ಜೈಲು ಶಿಕ್ಷೆ ವಿಧಿಸಿದ ಪ್ರಕರಣಗಳಿಲ್ಲ. ಆದರೆ 55 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊದಲು. ಆದರೆ ಈ ಸಂತಸವನ್ನು ಹಂಚಿಕೊಳ್ಳಲು ಪಂಜು ಅವರ ಮಗಳು ಬದುಕಿಲ್ಲ ಎಂದು ಸರ್ಕಾರಿ ವಕೀಲೆ ಪರಿಮಳದೇವಿ ಹೇಳಿದ್ದಾರೆ.

  • ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಶಾಲೆಗೆ ಟಾಪರ್-ನರ್ಸಿಂಗ್ ಕೋರ್ಸ್ ಮಾಡಲು ವಿದ್ಯಾರ್ಥಿನಿಗೆ ಬೇಕಿದೆ ಸಹಾಯ

    ಉಡುಪಿ: ಎಸ್‍ಎಸ್‍ಎಲ್‍ಸಿಯಲ್ಲಿ ಶಾಲೆಗೆ ಟಾಪರ್, ಪಿಯುಸಿಯಲ್ಲಿ 77 ಶೇಕಡಾ ಅಂಕ ಆದರೆ ಮುಂದಿನ ವಿದ್ಯಾಭ್ಯಾಸ ಮಾಡಲು ಹಣವಿಲ್ಲ. ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಹೆಬ್ಬಯಕೆ ಇರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಪೂರ್ಣಿಮಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಸರೋಜಾ ಮತ್ತು ನಟರಾಜ್ ದಂಪತಿಗೆ ಇಬ್ಬರು ಮಕ್ಕಳಲ್ಲಿ ಪೂರ್ಣಿಮಾ ಒಬ್ಬರು. ಕುಸಿದು ಬೀಳುವ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಈ ಕುಟುಂಬ ವಾಸವಾಗಿದೆ. ಮನೆಗೆ ವಿದ್ಯುತ್ ಇಲ್ಲ, ಶೌಚಾಲಯ ಇಲ್ಲವದ ಬಡತನದ ಪರಿಸ್ಥಿತಿಲ್ಲಿ ಪೂರ್ಣಿಮಾ ವಾಸವಾಗಿದ್ದಾರೆ. ಮನೆಯಲ್ಲಿ ತಂದೆ ಮಾತ್ರ ದುಡಿಯೋದು ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿ ಮಾಡುತ್ತಿದೆ.

    ಮೂರು ವರ್ಷದ ನರ್ಸಿಂಗ್ ಕೋರ್ಸ್ ಮಾಡಬೇಕೆಂಬ ಕನಸು ಕಾಣುತ್ತಿರುವ ಪೂರ್ಣಿಮಾಗೆ ಮಾತ್ರ ಆರ್ಥಿಕ ನೆರೆವು ಸಿಗುತ್ತಿಲ್ಲ. ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿಯ ಅವಶ್ಯಕತೆಯಿದೆ. ಕೋಟದ ಆಶ್ರೀತಾ ಕಾಲೇಜು 30 ಸಾವಿರ ರೂಪಾಯಿ ಹೊಂದಿಸಲು ಹೇಳಿ ಸೀಟು ಕಾಯ್ದಿರಿಸಿದ್ದಾರೆ. ಪೂರ್ಣಿಮಾ ಪಬ್ಲಿಕ್ ಟಿವಿಯ ಮೂಲಕ ಜೀವನದ ಬೆಳಕಿಗಾಗಿ ಮನವಿ ಮಾಡಿದ್ದಾರೆ.

    https://youtu.be/kRXrKuE121g

     

  • ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ಆಗ್ರಾ: ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದುಕೊಂಡು 75 ವರ್ಷ ಮೀರದ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್. ನೀವು ಬಯಸಿದ್ದಲ್ಲಿ ಮತ್ತೊಮ್ಮೆ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಬಹುದು.

    ಹೌದು. ಕೇಂದ್ರ ಸರ್ಕಾರ ಈಗಾಗಲೇ ನಿವೃತ್ತರಾಗಿರುವ ಪ್ರಾಧ್ಯಾಪಕರಿಗೆ ಮತ್ತೊಮ್ಮೆ ಬೋಧನೆ ಮಾಡುವ ಅವಕಾಶ ನೀಡಲು ಮುಂದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ತಿಳಿಸಿದ್ದು, 75 ವರ್ಷ ಮೀರದ ಹಾಗೂ ಉತ್ತಮ ಸೇವಾ ದಾಖಲೆಯನ್ನು ಹೊಂದಿರುವ ನಿವೃತ್ತ ಪ್ರಾಧ್ಯಾಪಕರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

    42 ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಪ್ರಾಧ್ಯಾಪಕರನ್ನು ಮರಳಿ ಕರೆತರುವ ಬಗ್ಗೆ ಚರ್ಚೆ ಸಚಿವರು ನಡೆಸಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದೆ. ಹೀಗಾಗಿ ಉತ್ತಮ ಸೇವಾ ದಾಖಲೆ ಹೊಂದಿರುವ ಪ್ರಾಧ್ಯಾಪಕರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

    ವಿವಿಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ವಿದೇಶದಲ್ಲಿರುವ ಪ್ರಸಿದ್ಧ ವಿವಿಗಳಲ್ಲಿರುವ ಸಂಶೋಧಕರಿಗೂ ಅವಕಾಶ ನೀಡಲಾಗುವುದು. ವೈದ್ಯಕೀಯವಾಗಿ ಯಾರು ಆರೋಗ್ಯವಾಗಿರುತ್ತಾರೋ ಅಂತಹವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

    ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.53.28 ಮತ್ತು ನ್ಯಾಷನಲ್ ಇನ್ಸ್ ಟ್ಯೂಟ್ ಟೆಕ್ನಾಲಜಿ(ಎನ್‍ಐಟಿ) ಗಳಲ್ಲಿ ಶೇ.47% ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿದೆ.

    ಮಾನವ ಸಂಪನ್ಮೂಲ ಸಚಿವಾಲಯದ ದಾಖಲೆಗಳ ಪ್ರಕಾರ ಹರ್ಯಾಣ ಕೇಂದ್ರೀಯ ವಿವಿಯಲ್ಲಿ ಏಪ್ರಿಲ್ 1,2017 ರ ಅವಧಿ ವರೆಗೆ ಶೇ.75.11 ಹುದ್ದೆಗಳು ಖಾಲಿ ಇದ್ದರೆ, ದೆಹಲಿಯ ವಿವಿಯಲ್ಲಿ ಶೇ.54.75% ಹುದ್ದೆಗಳು ಖಾಲಿಯಿವೆ.

  • ಇನ್ನು ಮುಂದೆ ಶಾಲಾ ಮಕ್ಕಳು ‘ಯಸ್ ಸಾರ್’ ಬದಲು ಹೇಳಲಿದ್ದಾರೆ `ಜೈ ಹಿಂದ್’!

    ಇನ್ನು ಮುಂದೆ ಶಾಲಾ ಮಕ್ಕಳು ‘ಯಸ್ ಸಾರ್’ ಬದಲು ಹೇಳಲಿದ್ದಾರೆ `ಜೈ ಹಿಂದ್’!

    ಭೋಪಾಲ್: ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ `ಯಸ್ ಸಾರ್’ ಬದಲಿಗೆ `ಜೈ ಹಿಂದ್’ ಎಂದು ಹೇಳಲಿದ್ದಾರೆ.

    ಮಂಗಳವಾರ ಚಿತ್ರಕೂಟದಲ್ಲಿ ಶಿಕ್ಷಕ, ಪ್ರಾಂಶುಪಾಲರ ವಿಭಾಗಿಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಶಿಕ್ಷಣ ಕುನ್ವಾರ್ ವಿಜಯ್ ಶಾ, ಅಕ್ಟೋಬರ್ 1 ರಿಂದ ಸತ್ನಾ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹಾಜರಾತಿ ಹೇಳುವಾಗ ಯಸ್ ಸಾರ್, ಬದಲಿಗೆ `ಜೈ ಹಿಂದ್’ ಎಂದು ಹೇಳಬೇಕು ಎಂದು ಪ್ರಕಟಣೆ ಹೊರಡಿಸಿದ್ದಾರೆ.

    ಪ್ರಾಯೋಗಿಕವಾಗಿ ಈ ಬದಲಾವಣೆ ಸತ್ನಾ ಜಿಲ್ಲೆಯ ಶಾಲೆಗಳಲ್ಲಿ ಮಾತ್ರ ಜಾರಿ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜೈ ಹಿಂದ್ ಹೇಳುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.

    ಮಕ್ಕಳು ದೇಶದ ಭವಿಷ್ಯ. ಅವರಲ್ಲಿ ದೇಶದ ಮೇಲೆ ಪ್ರೀತಿ ಗೌರವ ಹಾಗೂ ಭಕ್ತಿಯನ್ನು ಬೆಳಸಬೇಕು. ಆದ್ದರಿಂದ ಜೈ ಹಿಂದ್ ಹೇಳಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಶಾಲೆಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯ ಮಾಡಿದೆ.

    ಕುನ್ವಾರ್ ವಿಜಯ್ ಶಾ ಈ ಹಿಂದೆ ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲೂ ಸುದ್ದಿಯಾಗಿದ್ದರು. 2015ರಲ್ಲಿ ಖಂಡ್ವಾ ಜಿಲ್ಲೆಯ ಹರ್ಷುದ್ ವಿಧಾನಸಭಾ ಕ್ಷೇತ್ರದ ಜನರು ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೆ 10 ರೂಪಾಯಿ ಶುಲ್ಕ ನೀಡಬೇಕು ಎಂದು ಹೇಳಿದ್ದರು. ಸೆಲ್ಫಿಯಿಂದ ಬಂದ ಹಣವನ್ನು ಬುಡಕಟ್ಟು ಜನರ ವೃದ್ಧಾಶ್ರಮ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದರು. ಹಣ ನೀಡಲು ಸಾಧ್ಯವಿಲ್ಲದವರು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಬಹುದು ಎಂದು ವಿಜಯ್ ಶಾ ಹೇಳಿದ್ದರು.