Tag: education minister

  • ಪೋಷಕರು ಅನುಕೂಲಕರವಾಗಿದ್ರೆ ಶುಲ್ಕ ಪಾವತಿಸಿ: ಸುರೇಶ್ ಕುಮಾರ್

    ಪೋಷಕರು ಅನುಕೂಲಕರವಾಗಿದ್ರೆ ಶುಲ್ಕ ಪಾವತಿಸಿ: ಸುರೇಶ್ ಕುಮಾರ್

    – ಖಾಸಗಿ ಶಾಲಾ ಶಿಕ್ಷಕರು ತರಕಾರಿ ಮಾರೋ ದುಸ್ಥಿತಿ ಬಂದಿದೆ
    – ಎಲ್ಲಾ ಸಮಸ್ಯೆಗೂ ಸೂಕ್ತ ಪರಿಹಾರ ಒದಗಿಸ್ತೀನಿ
    – ಝೀರೋ ಬಡ್ಡಿದರದಲ್ಲಿ ಲೋನ್ ಬಗ್ಗೆ ಚರ್ಚೆ

    ಚಾಮರಾಜನಗರ: ಯಾವ ಪೋಷಕರು ಅನುಕೂಲಕರವಾಗಿದ್ದಾರೆ ಅಂತಹವರು ಶುಲ್ಕ ಪಾವತಿಸಿ. ಫೀಸ್ ಪಾವತಿ ಮಾಡಿದ್ರೆ ಶಿಕ್ಷಕರಿಗೆ ವೇತನ ಕೊಡಲೂ ಅನುಕೂಲವಾಗುತ್ತೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಷ್ಟೇ ಮಹತ್ವವನ್ನು ಖಾಸಗಿ ಶಾಲೆಗಳು ವಹಿಸಿವೆ. ಖಾಸಗಿ ಶಾಲೆ ಬೇಕು ಅಂತ ಇಷ್ಟಪಟ್ಟು, ಕಷ್ಟಪಟ್ಟು ಪೋಷಕರು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ, ಪೋಷಕರಿಗೆ ಆರೋಗ್ಯಕರ ಸಂಬಂಧವಿರಬೇಕು. ಖಾಸಗಿ ಶಾಲಾ ಸಂಘಟನೆ ಜೊತೆ ನಾನು ಮಾತುಕತೆ ನಡೆಸ್ತೇನೆ ಎಂದರು.

    ಯಾವ ಪೋಷಕರು ಅನುಕೂಲಕರವಾಗಿದ್ದಾರೆ ಅಂತಹವರು ಫೀಸ್ ಪಾವತಿಸಿ. ಹೀಗೆ ಮಾಡಿದ್ದಲ್ಲಿ ಶಿಕ್ಷಕರಿಗೆ ವೇತನ ಕೊಡಲು ಸಹಾಯವಾಗುತ್ತೆ. ಈಗಾಗಲೇ ಖಾಸಗಿ ಶಾಲಾ ಶಿಕ್ಷಕರು ತರಕಾರಿ ಮಾರುವ ದುಸ್ಥಿತಿ ಬಂದಿದೆ. ಪೋಷಕರು ಹಾಗೂ ಶಾಲೆಯ ನಡುವೆ ಸಂಘರ್ಷ ಉಂಟಾಗಬಾರದು. ಬೆಂಗಳೂರಿಗೆ ಹೋದ ನಂತರ ಸಭೆ ನಡೆಸಿ ಪರಿಹಾರ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.

    ಖಾಸಗಿ ಶಾಲೆಗೆ ಲೋನ್ ಕೊಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋನ್ ಕೊಡಿಸುವ ಪ್ರಸ್ತಾಪ ಬಂದಿತ್ತು. ಕೆಲವು ಖಾಸಗಿ ಶಾಲೆಗಳು ಝೀರೋ ಬಡ್ಡಿದರದಲ್ಲಿ ಲೋನ್ ಕೊಡಿಸಿ ಅಂತ ಕೇಳಿದ್ದವು. ಕೆಲವು ಬ್ಯಾಂಕರ್ಸ್ ಜೊತೆ ಮಾತನಾಡಿದಾಗ ಹಿಂದೇಟು ಹಾಕಿದ್ದಾರೆ. ನಮ್ಮ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ಲೋನ್ ಕೊಡಿಸಬಹುದಾ ಅಂತ ಯೋಚಿಸ್ತೀನಿ ಎಂದು ಹೇಳಿದರು.

    ಕೆಲವು ಶಾಲೆಗಳ ಪ್ರಕಾರ ಲೋನ್ ಸಿಕ್ಕಿದ್ರೆ ಸದ್ಯದ ಪರಿಸ್ಥಿತಿಯಿಂದ ಪಾರಾಗಬಹುದು ಎಂಬ ಅನಿಸಿಕೆಯಿದೆ. ಗೇಟ್ ಆಚೆ ನಿಂತು ಪ್ರತಿಭಟನೆ ಮಾಡೋದು ಒಳ್ಳೆಯ ಬೆಳವಣಿಗೆಯಲ್ಲ. ಪೋಷಕರು, ಟೀಚರ್ಸ್ ಜೊತೆ ಕೂಡ ಮಾತನಾಡ್ತೀನಿ. ಕೋವಿಡ್ ನಿಂದ ಇಂತಹ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.

    ಕಳೆದ 8 ತಿಂಗಳಿಂದ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕರೇತರ ಸಿಬ್ಬಂದಿಗೆ ಸಮಸ್ಯೆಯಾಗಿದೆ. ಅದಕ್ಕೆ ಒಂದು ಕಂತಿನ ಶುಲ್ಕ ಕಟ್ಟಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಕೆಲವೆಡೆ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲ ಶಾಲೆಗಳು ಅರ್ಧ ಸಂಬಳ ನೀಡ್ತಿವೆ. ಇದೆಲ್ಲ ಗಮನಕ್ಕೆ ಬಂದಿದೆ. ಎಲ್ಲಾ ಸಮಸ್ಯೆಗೂ ಸೂಕ್ತ ಪರಿಹಾರ ಒದಗಿಸ್ತೀನಿ. ಲೋನ್ ಕೊಡಿಸುವ ಕುರಿತು ಸಾಧಕ-ಬಾಧಕ ಚರ್ಚಿಸಿ ಕ್ರಮ ಕೈಗೊಳ್ತೀನಿ ಎಂದು ಸಚಿವರು ಭರವಸೆ ನೀಡಿದ್ದಾರೆ.

  • ದಯವಿಟ್ಟು ನನ್ನ ಅಮ್ಮನನ್ನ ಉಳಿಸಿಕೊಡಿ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿನಿ ಪತ್ರ

    ದಯವಿಟ್ಟು ನನ್ನ ಅಮ್ಮನನ್ನ ಉಳಿಸಿಕೊಡಿ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿನಿ ಪತ್ರ

    ಮಂಗಳೂರು: ರಾಜ್ಯದ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯು ಅನೇಕ ಮಕ್ಕಳ ಜೊತೆಗೆ ಶಿಕ್ಷಕರಿಗೂ ಕಂಟಕವಾಗಿದೆ. ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಠ್ಯ ಬೋಧಿಸಿದ ಶಿಕ್ಷಕವರ್ಗದ ಪೈಕಿ ಅನೇಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವೆ ವಿದ್ಯಾಗಮ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸಿ, ಸೋಂಕಿಗೆ ತುತ್ತಾಗಿ ಒದ್ದಾಡುತ್ತಿರುವ ಶಿಕ್ಷಕರ ಪುತ್ರಿಯೊಬ್ಬಳು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾಳೆ.

    ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಶಿರ್ತಾಡಿಯ ಮಕ್ಕಿಯ ಡಿಜೆ ಹೈಯರ್ ಪ್ರೈಮರಿ ಏಡೆಡ್ ಸ್ಕೂಲ್ ಮತ್ತು ಮೂಡಬಿದ್ರೆಯ ಜವಹರಲಾಲ್ ನೆಹರೂ ಅನುದಾನಿತ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಶಶಿಕಾಂತ್ ವೈ ಮತ್ತು ಪದ್ಮಾಕ್ಷಿ ಎನ್ ಕೆಲಸಮಾಡುತ್ತಿದ್ದಾರೆ. ಈ ದಂಪತಿಯ ಪುತ್ರಿ ಐಶ್ವರ್ಯಾ ಜೈನ್ ಇದೀಗ ಪತ್ರವನ್ನು ಬರೆದಿದ್ದಾಳೆ.

    ನನ್ನ ಹೆತ್ತವರಿಬ್ಬರೂ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದೀಗ ತಂದೆ ಮತ್ತು ತಾಯಿ ಇಬ್ಬರೂ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವೆ ತಾಯಿಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29ರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯೂ ಸೋಂಕಿನಿಂದ ಬಳಲುತ್ತಿದ್ದು ಇದೀಗ ಆಸ್ಪತ್ರೆಯ ಬಿಲ್ ಕಟ್ಟಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.

    ನಮಗೊಂದು ಸಹಾಯದ ಹಸ್ತ ಬೇಕಿದೆ. ನನ್ನ ತಾಯಿಯು ಈ ವಿದ್ಯಾಗಮ ಯೋಜನೆಯ ಮುಂಚೆ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ತಮ್ಮ ಯೋಜನೆಯೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ತಮ್ಮಿಂದ ಆರ್ಥಿಕ ಸಹಾಯವನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಸರ್ಕಾರವು ಶಿಕ್ಷಕರನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇವೆ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

  • ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆಗಳನ್ನ ತೆರೆಯದಿರುವುದು ಒಳ್ಳೆಯದು: ಶ್ರೀನಿವಾಸಮೂರ್ತಿ

    ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆಗಳನ್ನ ತೆರೆಯದಿರುವುದು ಒಳ್ಳೆಯದು: ಶ್ರೀನಿವಾಸಮೂರ್ತಿ

    ಬೆಂಗಳೂರು: ಕೊರೊನಾ ನಡುವೆ ರಾಜ್ಯದಲ್ಲಿ ಶಾಲಾ ಕಾಲೇಜು ಓಪನ್ ವಿಚಾರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ ಎಲ್ಲಾ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಇದು ಸ್ವಾಗತಾರ್ಹ ಎಂದು ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಪಬ್ಲಿಕ್ ಟಿವಿ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ಆರಂಭ – ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಸುರೇಶ್‌ ಕುಮಾರ್‌

    ಮಹಾಮಾರಿ ಕೊರೊನಾದಿಂದ ಜನಸಾಮಾನ್ಯರು ಸೇರಿದಂತೆ ನಮ್ಮಲ್ಲಿ ರೈಲ್ವೇ ಮಂತ್ರಿ, ಒಬ್ಬರು ಶಾಸಕರು ಇತ್ತೀಚೆಗೆ ತೀರಿಕೊಂಡಿದ್ದಾರೆ. ನನ್ನ ಅಭಿಪ್ರಾಯದಂತೆ ಈ ಮಹಾಮಾರಿ ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆಗಳನ್ನ ತೆರೆಯದೆ ಇರುವುದೇ ಒಳ್ಳೆಯದು ಎಂದಿದ್ದಾರೆ.

    ಇತ್ತ ಈಗಾಗಲೇ ಶಿಕ್ಷಕರು ಮನೆಮನೆಗೆ ಹೋಗಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅದನ್ನು ಇನ್ನೂ ಎರಡು ತಿಂಗಳು ಮುಂದುವರಿಸುವುದು ಒಳ್ಳೆಯದು. ಕೊರೊನಾಗೆ ಲಸಿಕೆ ಕಂಡು ಹಿಡುಯುವುದು ಒಳ್ಳೆಯದು. ಶಾಲಾ ಮಕ್ಕಳಿಗೆ ಒಬ್ಬರಿಗೆ ಬಂದರೆ ಇಡೀ ಶಾಲೆ ನಾಶ ಆಗಬಿಡುತ್ತೆ. ಈ ಕೊರೊನಾ ಒಂದು ದಾರಿದ್ರ್ಯ ಕಾಯಿಲೆಯಾಗಿದೆ ಎಂದು ಶ್ರೀನಿವಾಸಮೂರ್ತಿ ಹೇಳಿದರು.

    ಸಚಿವರ ಅಭಿಪ್ರಾಯ ಜೊತೆಯಲ್ಲಿ ನಮ್ಮ ತಾಲೂಕಿನ ಶಿಕ್ಷಕರು ಮತ್ತು ಪೋಷಕರ ಜೊತೆ ಮಾತನಾಡುತ್ತೀನಿ. ಶಾಲೆಗಳು ಆರಂಭ ಮಾಡಲೇಬೇಕಾದರೆ ಬೆಳಗ್ಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನದ ನಂತರ 6, 7ನೇ ವಿದ್ಯಾರ್ಥಿಗಳಿಗೆ ತರಗತಿ ಮಾಡಲಿ. ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್ ಮಾಡಿ ತರಗತಿ ಪ್ರಾರಂಭ ಮಾಡಲಿ. ಆದರೂ ಇದು ಕಷ್ಟವಾಗುತ್ತದೆ. ಹೀಗಾಗಿ ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆ ತೆರೆಯುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು.

  • ಖಾಸಗಿ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಖಡಕ್ ಎಚ್ಚರಿಕೆ

    ಖಾಸಗಿ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಖಡಕ್ ಎಚ್ಚರಿಕೆ

    – ಆಗಸ್ಟ್‌ನಲ್ಲಿ SSLC, ಜುಲೈನಲ್ಲಿ PUC ಫಲಿತಾಂಶ
    – ಆನ್‍ಲೈನ್ ಶಿಕ್ಷಣಕ್ಕೆ ಕೇಂದ್ರ ಸರ್ಕಾರದ ಗೈಡ್ ಲೈನ್ಸ್

    ಚಿಕ್ಕಬಳ್ಳಾಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರೋ ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಸುರಕ್ಷತೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ನಾನು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಮಾಡುತ್ತಿದ್ದೇನೆ. ಇದು ಪರೀಕ್ಷಾ ಕೇಂದ್ರ ಆಗಬಾರದು ಮಕ್ಕಳಿಗೆ ಸುರಕ್ಷಾ ಕೇಂದ್ರ ಆಗಿರಬೇಕು ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

    ಅಗಲಗುರ್ಕಿ ಗ್ರಾಮದ ಬಿಜಿಎಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಸುರೇಶ್ ಕುಮಾರ್, ಇಂಗ್ಲೀಷ್ ಹಾಗೂ ಗಣಿತ ಪರೀಕ್ಷೆ ದಿನ ಸರಾಸರಿ ಶೇ.98 ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ಇದು 98.68 ಆಗಿತ್ತು. ಹೀಗಾಗಿ ಇದು ಸಹ ಉತ್ತಮ ನಡೆ. ಶಾಲೆಗೆ ಬಂದು ವ್ಯಾಸಂಗ ಮಾಡಿರೋ ಮಕ್ಕಳು ಗೈರಾಗುತ್ತಿಲ್ಲ. ಕೆಲ ಮಕ್ಕಳ ಗೈರಾಗಿದ್ದಕ್ಕೆ ಸ್ವತಃ ನಮ್ಮ ಅಧಿಕಾರಿಗಳು ಪೋಷಕರನ್ನ ಸಂಪರ್ಕಿಸಿ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಹೀಗಾಗಿ ಅಂತಹ ಮಕ್ಕಳು ಮತ್ತೆ ಬಂದು ಪರೀಕ್ಷೆ ಎದುರಿಸಿದ್ದಾರೆ ಎಂದರು.

    ಖಾಸಗಿ ಶಾಲೆಗಳಿಗೆ ವಾರ್ನಿಂಗ್
    ಈ ವರ್ಷ ಕೊರೊನಾ ಇರುವುದರಿಂದ ಯಾವುದೇ ಖಾಸಗಿ ಶಾಲೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಅಂತ ಸುರೇಶ್ ಕುಮಾರ್ ಹೇಳಿದರು. ಈ ಒಂದು ವರ್ಷ ವಿಶೇಷವಾದ, ವಿಚಿತ್ರವಾದ ವರ್ಷ, ಕೊರೊನಾದಿಂದ ಎಲ್ಲರೂ ಸಮಸ್ಯೆಗಳಿಗೆ ಸಿಲುಕಿದ್ದು, ಮಾನವೀಯತೆ ದೃಷ್ಠಿಯಿಂದಲೂ ಸಹ ಯಾರೂ ಶುಲ್ಕ ಹೆಚ್ಚಳ ಮಾಡಬಾರದು. ಯಾವುದೇ ಶಾಲೆ ಶುಲ್ಕ ಹೆಚ್ಚಳ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀವಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸರಿ ಸುಮಾರು 1150 ಶಾಲೆಗಳ ಬಗ್ಗೆ ನಮಗೆ ದೂರು ಬಂದಿದ್ದು ಅದರಲ್ಲಿ 450 ಶಾಲೆಗಳ ವಿರುದ್ದ ಕ್ರಮ ಕೈಗೊಂಡಿದ್ದು, ಅವರು ಸಹ ಶುಲ್ಕವನ್ನ ಇಳಿಸಿದ್ದಾರೆ. ಉಳಿದ ಶಾಲೆಗಳ ಮೇಲೂ ಕ್ರಮ ಜರುಗುತ್ತಿದೆ ಎಂದರು.

    ಆಗಸ್ಟ್‌ನಲ್ಲಿ SSLC, ಜುಲೈನಲ್ಲಿ PUC ಫಲಿತಾಂಶ:
    ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹಾಗೂ ಜುಲೈ ಕೊನೆ ವಾರದಲ್ಲಿ ಪಿಯುಸಿ ಪರೀಕ್ಷಾ ಫಲಿತಾಂಶ ನೀಡಲು ಬಹುತೇಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. ಬಹುತೇಕ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರಿಗೆ ಮಕ್ಕಳನ್ನ ಶಾಲೆಗಳಿಗೆ ಕಳುಹಿಸುವ ಮನಸ್ಥಿತಿಯಲ್ಲಿ. ಶಾಲೆಗಳನ್ನು ಯಾವಾಗಿನಿಂದ ಪ್ರಾರಂಭ ಮಾಡಬೇಕು ಅನ್ನೋದೆ ಪ್ರಶ್ನೆಯಾಗಿದೆ. ಹಲವರು ಆಗಸ್ಟ್ ಹಾಗೂ ಸೆಪ್ಟೆಂಬರಿನಲ್ಲಿ ಮಾಡಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೀವಿ ಎಂದರು.

    ಆನ್‍ಲೈನ್ ಶಿಕ್ಷಣ.
    ಆನ್‍ಲೈನ್ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಇದ್ದು, ಅದರಲ್ಲೂ ಎಲ್‍ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಮಾಡಬಾರದು ಅಂತ ನಿಯಮವಿದೆ. ಬೇಕಾದರೇ ಮಕ್ಕಳ ಪಾಲಕರ ಜೊತೆ ವಾರಕ್ಕೆ ಎರಡು ಬಾರಿ ಮಾತನಾಡಬಹುದು. ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು ಅಂತ ಶಿಕ್ಷಣ ಕೊಡಬಹುದು. 1 ರಿಂದ 6 ಹಾಗೂ 06 ರಿಂದ 10 ನೇ ತರಗತಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಕೊಡಬಹುದು ಅಂತ ಕೇಂದ್ರದ ಗೈಡ್ ಲೈನ್ ಬಂದಿದೆ. ಅದಕ್ಕೆ ನಾವು ಒಂದಷ್ಟು ಬದಲಾವಣೆ ಮಾಡಿ ತಜ್ಞರ ಸಮಿತಿ ರಚಿಸಿದ್ದೀವಿ. ಅವರ ವರದಿ ಬಂದ ನಂತರ ಅಂತಿಯ ರೂಪು ರೇಷೆ ಸಿದ್ಧ ಮಾಡುತ್ತೀವಿ ಎಂದು ತಿಳಿಸಿದರು.

  • ಜೂನ್‍ನಲ್ಲಿ SSLC ಪರೀಕ್ಷೆಗೆ ಚಿಂತನೆ – ಫೇಸ್‍ಬುಕ್ ಲೈವ್‍ನಲ್ಲಿ ಸುರೇಶ್ ಕುಮಾರ್ ಸ್ಪಷ್ಟನೆ

    ಜೂನ್‍ನಲ್ಲಿ SSLC ಪರೀಕ್ಷೆಗೆ ಚಿಂತನೆ – ಫೇಸ್‍ಬುಕ್ ಲೈವ್‍ನಲ್ಲಿ ಸುರೇಶ್ ಕುಮಾರ್ ಸ್ಪಷ್ಟನೆ

    – ಶಿಕ್ಷಣ ಇಲಾಖೆಯಿಂದ ಈಗಾಗಲೇ ಸಿದ್ಧತೆ ಆರಂಭ
    – ಹಿಂದಿನ ತರಗತಿ ಪುಸ್ತಕಗಳನ್ನ ಉತ್ತಮವಾಗಿಟ್ಟುಕೊಳ್ಳಿ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಬಹುತೇಕ ಸಡಿಲ ಆದ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ಶುರುವಾಗಿದೆ. ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಐಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್‍ಬುಕ್ ಲೈವ್‍ನಲ್ಲಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ನಾನು ವಿದ್ಯಾರ್ಥಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿದ್ದೇನೆ. ಆಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕಾ ಎಂದು ಪ್ರಶ್ನಿಸಿದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವರ್ಷ ಪರೀಕ್ಷೆಗಾಗಿ ಪರಿಶ್ರಮಪಟ್ಟಿದ್ದೇವೆ. ಪರೀಕ್ಷೆ ಬೇಕು ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲು ನಾವು ತಯಾರಿದ್ದೇವೆ ಎಂದು ತಿಳಿಸಿದರು.

    ಸೋಮವಾರ ನಮ್ಮ ರಾಜ್ಯದ ಎಲ್ಲಾ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದೇನೆ. ಸದ್ಯಕ್ಕೆ ದೂರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ರಿವಿಷನ್ ಕ್ಲಾಸ್ ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ತುಂಬಾ ಸಂತೋಷವಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆ ಬೋಧನೆ ಮಾಡಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೂ ಜೂನ್ ತಿಂಗಳಲ್ಲಿ ಬೋಧನೆ ಮಾಡಲು ನಿರ್ಧರಿಸಲಾಗಿದೆ ಎಂದರು.

    ಯಾರೋ ಹೇಳಿದ ದಿನಾಂಕಕ್ಕೆ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳಬೇಡಿ. ಪುನರ್ ಮನನ ತರಗತಿಗಳು ನಡೆದ ಮೇಲೆ ಜೂನ್ ತಿಂಗಳಲ್ಲಿ ಪರೀಕ್ಷೆ ಮಾಡುವ ಯೋಚನೆ ಮಾಡುತ್ತೇವೆ. ಈಗ ಪರೀಕ್ಷೆ ಮಾಡುವುದಾದರೂ ತಕ್ಷಣವೇ ಪರೀಕ್ಷೆ ಮಾಡುವುದಿಲ್ಲ. ಶಿಕ್ಷಣ ಇಲಾಖೆ ಘೋಷಣೆ ಮಾಡುವ ವೇಳಾಪಟ್ಟಿ ನಿಖರವಾಗಿರಲಿದೆ. ಪರೀಕ್ಷೆ ಮಾಡುವಾಗ ಮಕ್ಕಳ ಹಿತ ಮುಖ್ಯ. ಹೀಗಾಗಿ ಮಕ್ಕಳ ಹಿತ ನೋಡಿಕೊಂಡು ಪರೀಕ್ಷೆ ವೇಳಾಪಟ್ಟಿ ಹಾಕುತ್ತೀವಿ. ಪರೀಕ್ಷೆಯ ವೇಳಾಪಟ್ಟಿ ಘೋಷಣೆ ಮಾಡಿದ ಮೇಲೆ ಕನಿಷ್ಠ ನಿಮಗೆ 15 ರಿಂದ 20 ದಿನ ಸಮಯ ಸಿಗುತ್ತವೆ ಎದು ಸುರೇಶ್ ಕುಮಾರ್ ಹೇಳಿದರು.

    ಪರೀಕ್ಷಾ ಕೊಠಡಿಯಲ್ಲಿ ಸಾಮಾನ್ಯವಾಗಿ 24 ಜನ ಕೂರಲಿದ್ದಾರೆ. ಆದರೆ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಲಿದ್ದೇವೆ. ಪರೀಕ್ಷೆ ಬರೆಯುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಪರೀಕ್ಷೆಗೂ ಮುನ್ನ ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯ. ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮರ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತೆ. ಪರೀಕ್ಷೆ ಮುನ್ನ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ಇದಕ್ಕೆ ನಮ್ಮ ಇಲಾಖೆ ಸಿದ್ಧವಾಗುತ್ತಿದೆ. ಹಾಸ್ಟೆಲ್‍ನಲ್ಲಿ ಇದ್ದವರು ಊರಿಗೆ ಹೋಗಿದ್ರೆ ಅಂತಹ ವಿದ್ಯಾರ್ಥಿಗಳಿಗೆ ಅವರ ಊರಿನ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತೆ. ಪರೀಕ್ಷಾ ಕೇಂದ್ರಗಳ ಬದಲಾಗಿ ಊರಿನ ಬಳಿ ಇರೋ ಶಾಲೆಗಳಲ್ಲಿಯೇ ಪರೀಕ್ಷೆ ಬರೆಯಬಹುದಾ ಎಂದು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

    ಜೂನ್ ಎರಡನೇ ವಾರ ಅಥವಾ ಮೂರನೇ ವಾರ ಪರೀಕ್ಷೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಈಗಾಗಲೇ ಸಿದ್ಧತೆ ಆರಂಭ ಮಾಡಿದ್ದೇವೆ. ಕೊರೊನಾ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗಬೇಕು. ಆಗಾಗ ಪರೀಕ್ಷೆ ದಿನಾಂಕದ ಬಗ್ಗೆ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಯಲಿದೆ. ಸೂಕ್ತ ದಿನಾಂಕ ಪ್ರಕಟಿಸಿ ನಾವೇ ಆದೇಶ ಹೊರಡಿಸುತ್ತೇವೆ. ಯಾವುದೇ ವದಂತಿಗೂ ತಲೆಕೆಡಿಸಿಕೊಳ್ಳಬೇಡಿ. ಮುಂದಿನ 15 ದಿನ ಅಥವಾ ತಿಂಗಳಲ್ಲಿ ಮತ್ತೊಮ್ಮೆ ನಿರ್ಧಾರ ತಿಳಿಸುತ್ತೇನೆ. ಮಕ್ಕಳಲ್ಲಿ ಆಂತಕ ಸೃಷ್ಟಿಸದಂತೆ ಪೋಷಕರಿಗೆ ಸಚಿವರು ಕಿವಿಮಾತು ಹೇಳಿದರು.

     

    ಈಗ 9ನೇ ತರಗತಿಗೆ ಬಂದಿರುವ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯ ಪುಸ್ತಕಗಳನ್ನ ಉತ್ತಮವಾಗಿಟ್ಟುಕೊಳ್ಳಿ. ತಮ್ಮ ಪುಸ್ತಕಗಳನ್ನ ಹೊಸದಾಗಿ ಪಾಸ್ ಆಗಿ ಬಂದಿರೋ ಮಕ್ಕಳಿಗೆ ನೀಡಿ. ಹೊಸದಾಗಿ ಪುಸ್ತಕಗಳನ್ನ ಪ್ರಿಂಟ್ ಮಾಡಿ ತರುವುದು ಈಗ ಕಷ್ಟಕರವಾಗಿದೆ. ಹೀಗಾಗಿ ನಿಮ್ಮ ಪುಸ್ತಕಗಳನ್ನು ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ನೀಡಿ. ಸದ್ಯಕ್ಕೆ ದೂರದರ್ಶನದಲ್ಲಿ ಬರುತ್ತಿರೋ ಪುನರ್ ಮನನ ತರಗತಿಯನ್ನ ಕೇಳಿ. ಪ್ರಶ್ನೆ ಪತ್ರಿಕೆಗಳನ್ನ ಸಾಧ್ಯವಾದಷ್ಟು ಬಗೆಹರಿಸೋ ಪ್ರಯತ್ನ ಮಾಡಿ. ಜೂನ್ ತಿಂಗಳಲ್ಲಿ ಒಂದು ನಿರ್ದಿಷ್ಟ ಟೈಮ್ ಟೇಬಲ್ ಸಿದ್ಧಪಡಿಸುತ್ತೇವೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

  • SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದೆ, ಆತಂಕವಿಲ್ಲದೆ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ. ಡಿಸಿಗಳು, ಪೊಲೀಸ್ ಇಲಾಖೆ, ಪಿಯುಸಿ ಬೋರ್ಡ್ ಪರೀಕ್ಷೆಗೆ ಅಗತ್ಯ ಕ್ರಮ ತೆಗೆದುಕೊಂಡು ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಪಿಯುಸಿ ಎಕ್ಸಾಂ ಮುಗಿದ ಕೂಡಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಹೀಗಾಗಿ ಪಿಯುಸಿ ಎಕ್ಸಾಂ ನಷ್ಟೆ ಪಾರದರ್ಶಕವಾಗಿ, ಸುಗಮವಾಗಿ ನಡೆಸಲು ಕೆಲಸ ಮಾಡುವಂತೆ ಎಲ್ಲಾ ಡಿಸಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

    ಯಾವುದೇ ಗೊಂದಲ, ಅಕ್ರಮ ಇಲ್ಲದೆ ಪರೀಕ್ಷೆ ನಸೆಸಲು ಡಿಸಿಗಳ ಸಹಕಾರ ಮುಖ್ಯ ಹೀಗಾಗಿ ಸಚಿವರೇ ಎಲ್ಲಾ ಡಿಸಿಗಳಿಗೂ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪರೀಕ್ಷೆಗಳು ಸುಲಲಿತವಾಗಿ ಹಾಗೂ ಮುಕ್ತ ವಾತಾವರಣದಲ್ಲಿ ನಡೆಯವಂತೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಇದಕ್ಕೆ ಪೊಲೀಸ್ ಇಲಾಖೆ, ಖಜಾನೆ, ಇಂಟಲಿಜೆನ್ಸ್ ಸೇರಿದಂತೆ ಎಲ್ಲ ಇಲಾಖೆಗಳೂ ಸಹಕರಿಸಿದ್ದು, ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಪರೀಕ್ಷೆಗಳು ಸುಸೂತ್ರವಾಗಿ ನಿರ್ವಹಣೆಯಾಗಬೇಕಾದ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಆಶಯಗಳು ಸಾಕಾರಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹಿರಿದಾಗಿದ್ದು, ಈ ಕುರಿತಂತೆ ಪರೀಕ್ಷಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿ/ಸಿಬ್ಬಂದಿ ಅತಿ ಜಾಗರೂಕತೆಯಿಂದ ಮತ್ತು ಹೆಚ್ಚಿನ ಜವಾಬ್ದಾರಿಯಿಂದ ತೊಡಗಿಸಿಕೊಂಡು ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

    ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಇಡುವ ಖಜಾನೆಗೆ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷ ಸಮಯ ನೀಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಾಗೃತ ದಳಗಳ ರಚನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ಯಾಡ್ ಇರಲಿದ್ದಾರೆ. ಪ್ರಶ್ನೆ ಪತ್ರಿಕೆ ರವಾನೆ ಮಾಡೋ ವಾಹನಕ್ಕೆ ಜಿಪಿಎಸ್ ಅಳವಡಿಕೆ ಮಾಡುವ ಕಾರ್ಯ ನಡೆಯುತ್ತಿದೆ.

  • ಪಕ್ಕೆಲುಬು ವಿಡಿಯೋ ಆಯ್ತು – ಈಗ ನಪುಂಸಕ ವಿಡಿಯೋ ವೈರಲ್

    ಪಕ್ಕೆಲುಬು ವಿಡಿಯೋ ಆಯ್ತು – ಈಗ ನಪುಂಸಕ ವಿಡಿಯೋ ವೈರಲ್

    ಬೆಂಗಳೂರು: ಇತ್ತೀಚೆಗಷ್ಟೆ ಪಕ್ಕೆಲುಬು ಎನ್ನುವ ಪದವನ್ನು ವಿದ್ಯಾರ್ಥಿಯಿಂದ ಪದೇ ಪದೇ ಹೇಳಿಸಿ ಅದನ್ನು ವಿಡಿಯೋ ಮಾಡಿ ಶಿಕ್ಷಕನೊಬ್ಬ ವೈರಲ್ ಮಾಡಿದ್ದನು. ಆ ವಿಡಿಯೋ ಗಂಭೀರವಾಗಿ ಪರಿಗಣಿಸಿದ್ದ ಸಚಿವ ಸುರೇಶ್ ಕುಮಾರ್ ಶಿಕ್ಷಕನನ್ನು ಅಮಾನತು ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ವಿಡಿಯೋ ವೈರಲ್ ಆಗಿದೆ.

    ಸರ್ಕಾರಿ ಶಾಲೆಯೊಂದರಲ್ಲಿ ಮಗುವಿನ ಕೈಯಲ್ಲಿ ಶಿಕ್ಷಕ ನಪುಂಸಕ ಲಿಂಗ ಎಂದು ಉಚ್ಛಾರಣೆ ಮಾಡಿಸುವ ವಿಡಿಯೋ ವೈರಲ್ ಆಗಿದೆ. ಸುಮಾರು 2.12 ನಿಮಿಷದ ವಿಡಿಯೋದಲ್ಲಿ, ಲಿಂಗಗಳ ಉಚ್ಛಾರಣೆಯನ್ನು ಪದೇ ಪದೇ ಹೇಳಿಸಿ ಅಪಮಾನ ಮಾಡುವಂತೆ ವಿಡಿಯೋ ಮಾಡಿ ಶಿಕ್ಷಕ ವೈರಲ್ ಮಾಡಿದ್ದಾನೆ. ಇದನ್ನೂ ಓದಿ: ‘ಪಕ್ಕೆಲುಬು’ ವಿಡಿಯೋ ವೈರಲ್ ಮಾಡಿದ್ದ ಶಿಕ್ಷಕ ಅಮಾನತು

    ಸದ್ಯ ಆ ಶಾಲೆ ಯಾವುದು, ಯಾವ ಜಿಲ್ಲೆ, ತಾಲೂಕು ಎಂಬ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಇಂತಹ ವಿಡಿಯೋ ಮಾಡಬಾರದು ಎಂದು ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಹೀಗಿದ್ದರೂ ಈಗ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪಕ್ಕೆಲುಬು ಶಿಕ್ಷಕನ ‘ಪಕ್ಕೆಲುಬು’ ಮುರಿದ ಸಚಿವ ಸುರೇಶ್ ಕುಮಾರ್

  • 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ

    7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ

    ಬೆಂಗಳೂರು: ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವ ನಿರ್ಧಾರದಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಿಂದೆ ಸರಿದ್ದಾರೆ.

    ನಗರದ ಶಿಕ್ಷಕರ ಸದನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡುವುದಕ್ಕೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಪಬ್ಲಿಕ್ ಪರೀಕ್ಷೆ ಅಂತ ಹೆಸರು ಕೇಳಿ ಎಲ್ಲರೂ ಭಯಗೊಂಡಿದ್ದಾರೆ. ಮಕ್ಕಳಿಗೂ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ.

    ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯಲ್ಲಿ ಯಾವುದೇ ಮಗುವನ್ನು ಫೈಲ್, ಪಾಸ್ ಮಾಡಲ್ಲ. ಪರೀಕ್ಷೆ ನಡೆಸಿ ವಿದ್ಯಾರ್ಥಿಯ ಕಲಿಕೆ ಬಗ್ಗೆ ತಿಳಿದು 8ನೇ ತರಗತಿಯಿಂದ ಅಗತ್ಯ ತರಬೇತಿ ಕೊಡುವುದು ಈ ಪರೀಕ್ಷೆ ಉದ್ದೇಶವಾಗಿದೆ ಎಂದರು.

    ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಗೆ ರಾಜ್ಯಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ತಯಾರು ಮಾಡಲಾಗುತ್ತದೆ. ಪರೀಕ್ಷೆಯನ್ನು ಅದೇ ಶಾಲಾ ಶಿಕ್ಷಕರೇ ನಡೆಸುತ್ತಾರೆ. ಮೌಲ್ಯಮಾಪನವನ್ನ ಜಿಲ್ಲಾವಾರು ಶಿಕ್ಷಕರು ಮಾಡುತ್ತಾರೆ. ಯಾವುದೇ ಮಗುವನ್ನು ಫೈಲ್ ಮಾಡಲ್ಲ. ಪರೀಕ್ಷೆ ಫಲಿತಾಂಶ ವಿದ್ಯಾರ್ಥಿವಾರು ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನ ಮಾಡಿ ಮಗು ವೀಕ್ ಇರೋ ವಿಷಯದಲ್ಲಿ 8ನೇ ತರಗತಿಯಿಂದ ಮಗುವಿಗೆ ಅಗತ್ಯ ತರಬೇತಿ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಕ್ಕಳ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಲು ತಯಾರು ಮಾಡೋದು ಈ ಪರೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

  • ಸಾಧಕಿ ರಹಮತ್ತುನ್ನಿಸಾಗೆ ಸಚಿವ ಸುರೇಶ್ ಕುಮಾರ್ ಶಹಬ್ಬಾಸ್ ಗಿರಿ

    ಸಾಧಕಿ ರಹಮತ್ತುನ್ನಿಸಾಗೆ ಸಚಿವ ಸುರೇಶ್ ಕುಮಾರ್ ಶಹಬ್ಬಾಸ್ ಗಿರಿ

    ಬೆಂಗಳೂರು: ಹೈಫೈ ಶಾಲಾ-ಕಾಲೇಜುಗಳಲ್ಲಿ ಓದೋರು ಮಾತ್ರ ಸಾಧನೆ ಮಾಡುತ್ತಾರೆ ಅನ್ನೋದು ಸುಳ್ಳು. ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆಯಲ್ಲೂ ಓದಿ ಟಾಪ್ ಆಗಬಹುದು ಅಂತ ಬೆಂಗಳೂರಿನ ವಿದ್ಯಾರ್ಥಿನಿ ಕು. ರಹಮತ್ತುನ್ನಿಸಾ ಸಾಧಿಸಿ ತೋರಿಸಿದ್ದಾರೆ. ಈ ಸಾಧಕಿಗೆ ಸಚಿವ ಸುರೇಶ್ ಕುಮಾರ್ ಶಹಬ್ಬಾಶ್ ಗಿರಿ ಕೊಟ್ಟು ಗೌರವಿಸಿದ್ದಾರೆ.

    ಬೆಂಗಳೂರಿನ ಕ್ಲೀವ್ ಲ್ಯಾಂಡ್ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಹಮತ್ತುನ್ನಿಸಾ ಈ ವರ್ಷ ಬೆಂಗಳೂರು ವಿಶ್ವವಿದ್ಯಾಲಯದಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಬಿಕಾಂ ಪದವಿಯಲ್ಲಿ ಇಡೀ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಆರ್ಥಿಕವಾಗಿ ರಹಮತ್ತುನ್ನಿಸಾ ಕುಟುಂಬ ದುರ್ಬಲವಾಗಿದೆ. ಹೀಗಿದ್ದರೂ ಬಡತನ ಆಕೆಯ ಸಾಧನೆಗೆ ಅಡ್ಡಿಯಾಗಿಲ್ಲ. ಮನೆ ಪಾಠ- ಟ್ಯೂಷನ್ ಗೆ ಹೋಗದೆ ಸ್ವಂತ ಶ್ರಮದಿಂದ ಸಾಧನೆ ಮಾಡಿದ್ದಾರೆ.

    ಬಿಬಿಎಂಪಿ ಇತಿಹಾದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬರು ಮೊದಲ ರ‍್ಯಾಂಕ್ ಸಾಧನೆ ಮಾಡಿದ್ದಾರೆ. ಹೀಗಾಗಿ ಸಾಧಕಿ ರಹಮತ್ತುನ್ನಿಸಾಗೆ ಖುದ್ದು ಶಿಕ್ಷಣ ಸಚಿವರು ತಮ್ಮ ನಿವಾಸಕ್ಕೆ ಕರೆಸಿ ಸನ್ಮಾನ ಮಾಡಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಶಂಸನಾ ಪತ್ರ ನೀಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರನ್ನು ಗೌರವಿಸಿ ಶುಭ ಹಾರೈಸಿದ್ದಾರೆ. ಬಡತನದಲ್ಲೂ ಸಾಧನೆ ಮಾಡಿದ ರಹಮತ್ತುನ್ನಿಸಾ ಸಾಧನೆ ಹೆಣ್ಣುಮಕ್ಕಳಿಗೂ ಮಾದರಿಯಾಗಲಿ.

  • ಸಮಸ್ಯೆ ಇದ್ರೆ ತಿಳಿಸಿ, ಶಾಲೆಯಲ್ಲಿ ನಿಮಗೆ ಎಲ್ಲ ಸೌಲಭ್ಯ ಒದಗಿಸಿಕೊಡ್ತೇವೆ: ಸುರೇಶ್ ಕುಮಾರ್

    ಸಮಸ್ಯೆ ಇದ್ರೆ ತಿಳಿಸಿ, ಶಾಲೆಯಲ್ಲಿ ನಿಮಗೆ ಎಲ್ಲ ಸೌಲಭ್ಯ ಒದಗಿಸಿಕೊಡ್ತೇವೆ: ಸುರೇಶ್ ಕುಮಾರ್

    ಹಾವೇರಿ: ಜಿಲ್ಲೆಯ ಹಾವೇರಿ ತಾಲೂಕಿನ ನೆಲೋಗಲ್ಲ ಸರ್ಕಾರಿ ಪ್ರೌಢ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದರು.

    ಶಾಲೆಗೆ ನೀಡಿದ ವೇಳೆ 10ನೇ ತರಗತಿ ಕೊಠಡಿಗೆ ಹೋದ ಸುರೇಶ್ ಕುಮಾರ್ ಅವರು, ಮಕ್ಕಳ ಆಸನದಲ್ಲಿ ಕುಳಿತು ಮಕ್ಕಳಿಂದ ಗಣಿತ ಪಾಠ ಆಲಿಸಿದರು. ನಂತರ ಮಕ್ಕಳೊಂದಿಗೆ ಕೆಲ ಹೊತ್ತು ಚರ್ಚೆ, ಸಂವಾದ ನಡೆಸಿದ ಅವರು, ನಿಮ್ಮ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೇಯಾ, ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯ ಕಷ್ಟವಾಗಿದೇಯಾ, ಸಮಸ್ಯೆ ಇದ್ದರೆ ತಿಳಿಸಿ ನಿಮಗೆ ಶಾಲೆಯಲ್ಲಿ ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದರು. ಇದನ್ನೂ ಓದಿ: ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನಿಗೆ ಸುರೇಶ್ ಕುಮಾರ್ ಸನ್ಮಾನ

    ಅಲ್ಲದೆ ಮಕ್ಕಳು ಪರೀಕ್ಷೆಗೆ ಹೆದರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಮಕ್ಕಳ ಶಿಕ್ಷಣದ ಕುರಿತು ಶಿಕ್ಷಕರು ಕೈಗೊಂಡ ಕ್ರಮಗಳ ಕುರಿತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ನೈಜ್ಯ ಕತೆ ಹೇಳುವ ಮೂಲಕ ಮಕ್ಕಳಿಗೆ ಶಿಕ್ಷಣದ ಕುರಿತು ಪ್ರೇರಣೆ, ಉತ್ಸಾಹ, ಆಸಕ್ತಿ ತುಂಬಿದರು. ಇಲ್ಲಿನ ಹುಡಗಿ- ಹುಡಗ ಐಎಎಸ್, ಐಪಿಎಸ್ ಅಧಿಕಾಯಾಗಲಿ ಎಂದರು.