Tag: education minister

  • ಭಾಷೆಯಾಗಿ ಕನ್ನಡ ಕಲಿಕೆ-ಯಾವುದೇ ರಾಜಿಗೂ ಅವಕಾಶವಿಲ್ಲ: ಸುರೇಶ್ ಕುಮಾರ್

    ಭಾಷೆಯಾಗಿ ಕನ್ನಡ ಕಲಿಕೆ-ಯಾವುದೇ ರಾಜಿಗೂ ಅವಕಾಶವಿಲ್ಲ: ಸುರೇಶ್ ಕುಮಾರ್

    ಬೆಂಗಳೂರು: ಕನ್ನಡ ನೆಲದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಸಂಬಂಧದ ಕನ್ನಡ ಕಲಿಕಾ ಅಧಿನಿಯಮ-2015ರ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ರಾಜಿಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಹೊರನಾಡು ಕನ್ನಡಿಗರ ಒಂದು ವರ್ಗ ರಾಜ್ಯದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅಧಿನಿಯಮ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬುಧವಾರ ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದ್ದು, ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಪ್ರಕಾರ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದೆ. ಒಂದರಿಂದ ಹತ್ತನೇ ತರಗತಿಯವರಿಗೆ ಹಂತಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕಿದೆ. ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಹೊರ ರಾಜ್ಯದ ಪೋಷಕರ ಒಂದು ವರ್ಗ ವಿರೋಧಿಸಿ ಈ ಕಡ್ಡಾಯ ಕನ್ನಡ ಕಲಿಕೆಯನ್ನು ಕೈಬಿಡಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸುತ್ತಿದ್ದು, ಇದು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಕ್ಕೆ ವಿರುದ್ಧವಾಗಿದೆ. ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ವಿರೋಧಿಸುವಂತಹುದ್ದಾಗಿದೆ. ಈ ಕುರಿತಂತೆ ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳು ಯಾವುದೇ ಆಗ್ರಹಕ್ಕೂ ಮಣಿಯದೇ ಕಟ್ಟುನಿಟ್ಟಾಗಿ ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಕಲಿಸುವುದಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ ಬೇಡ – ಪೋಷಕರಿಂದ ಅಭಿಯಾನ

    ಪೋಷಕರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಸರ್ಕಾರದ ಸದಾಶಯವನ್ನು ಗೌರವಿಸಬೇಕು. ತಮ್ಮ ಮಕ್ಕಳನ್ನು ನೆಲದ ಭಾಷೆ ಕಲಿಯಲು ಪ್ರೇರೇಪಿಸಬೇಕು. ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೂ ಸಹ ಯಾವುದೇ ಆಗ್ರಹಗಳಿಗೆ ಮಣಿಯದೇ ಮತ್ತು ಕನ್ನಡ ಕಲಿಕೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಒಳಗಾಗದೇ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ ಕನ್ನಡವನ್ನು ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ, ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಎಂದಿನಂತೆ ಮುಂದುವರೆಸುವುದು ಮತ್ತು ಈ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡುವ ಕುರಿತು ಕೂಡಲೇ ಸುತ್ತೋಲೆಯೊಂದನ್ನು ಹೊರಡಿಸಬೇಕೆಂದು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಆಯಾ ಮಟ್ಟದ ಇಲಾಖೆಯ ಅಧಿಕಾರಿಗಳು ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಕಾಯ್ದೆಯ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಸಹ ಕೂಡಲೇ ನಿರ್ದೇಶನ ನೀಡಲಾಗಿದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಪಠ್ಯಕ್ರಮದ ಶಾಲೆಗಳ ಪ್ರಾಚಾರ್ಯರು ಮತ್ತು ಮುಖ್ಯಸ್ಥರ ಸಭೆಯನ್ನೂ ನಡೆಸಿ ಈ ಕುರಿತು ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ. ಯಾರೇ ಆಗಲಿ ಯಾವುದೇ ಭಾಷೆಯನ್ನು ಕಲಿಯುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಸಮೃದ್ಧ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂತಾಗುತ್ತದೆ. ಇದನ್ನು ನಮ್ಮ ಪೋಷಕರು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

  • ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಬೆಂಗಳೂರು: ಪರೀಕ್ಷೆ ಬರೆಯಲು ನಾವು ಸಿದ್ದರಿದ್ದೇವೆ ಎಂದು ಎಸ್‍ಎಸ್‍ಎಲ್‍ಸಿ ಮಕ್ಕಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಂವಾದದಲ್ಲಿ ತಿಳಿಸಿದ್ದಾರೆ. ಮಕ್ಕಳ ಅಭಿಪ್ರಾಯ ಸಂಗ್ರಹ ಮಾಡಲು ಇಂದು ವಿದ್ಯಾರ್ಥಿಗಳ ಜೊತೆ ಸುರೇಶ್ ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮಥ್ರ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ,ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

    ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್‍ಗಳನ್ನು ಉತ್ತರಿಸಿದ್ದೇವೆ. ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ, ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು ಶ್ಲಾಘಿಸಿದರು. ಇದನ್ನೂ ಓದಿ: ಸಿಇಟಿ- 2021 ಪರೀಕ್ಷೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವರು ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

    ಪರೀಕ್ಷೆ ಬರೆಯಲು ಸಾಕ್ಷಿ:
    ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ‘ನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮಥ್ರ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

    ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೊನಾ ಬ್ಯಾಚ್ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ – ಸುರೇಶ್ ಕುಮಾರ್

    ಇಳಿಮುಖವಾದ ಕೊರೊನಾ – ಭಯ ಬೇಡ:
    ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೊನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು. ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಶೇ.98ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್:
    ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಕೊರೊನಾ ವ್ಯಾಕ್ಸಿನೇಷನ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:
    ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಚರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್‍ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆಂದು ಸಚಿವರು ತಿಳಿಸಿದರು.ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಶೀಘ್ರವೇ ಕಾರ್ಯಪಡೆ ಕಾರ್ಯಾರಂಭ:
    ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಸಚಿವರು ವಿವರಿಸಿದರು.

    ಜುಲೈ ಕೊನೇ ವಾರದಲ್ಲಿ ಪಿಯುಸಿ ಫಲಿತಾಂಶ:
    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಎಲ್ಲ ಜಿಲ್ಲೆಗಳ ಡಿಡಿಪಿಐಗಳು, ಡಯಟ್ ಪ್ರಾಚಾರ್ಯರು ಭಾಗವಹಿಸಿದ್ದರು.

  • ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

    ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

    ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಈ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇಂದು ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಸಚಿವರು ಪರಿಶೀಲಿಸಿದರು. ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ನೆಲಗದೇರನಹಳ್ಳಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿಗಾಗಿ ಹಲವು ಕಡೆಗಳಿಂದ ಬೇಡಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲಾ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳು ಮತ್ತು ಪೋಷಕರನ್ನು ಮಾತನಾಡಿಸಿದರು. ಇದನ್ನೂ ಓದಿ: ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತು ಶಿಕ್ಷಕರೊಂದಿಗೆ ಸಚಿವರು ಚರ್ಚೆ ನಡೆಸಿದರು. ಮೊದಲೆಲ್ಲಾ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೊಂದಲು ಪ್ರಭಾವ ತರುವುದನ್ನು ಕಾಣುತ್ತಿದ್ದೆವು. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿರುವುದರಿಂದ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಹಲವಾರು ಮಂದಿ ಶಾಸಕರು ಮತ್ತು ಸಚಿವರ ಮೂಲಕ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ರಾಜ್ಯದೆಲ್ಲೆಡೆ ದಾಖಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಚಂದನಾ ದೂರದರ್ಶನ ವಾಹಿನಿಯಲ್ಲಿ ಸಂವೇದ ಪಾಠಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

  • ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿರಿ’ ಎಂದ ಸಚಿವ..!

    ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿರಿ’ ಎಂದ ಸಚಿವ..!

    ಭೋಪಾಲ್: ಗರಿಷ್ಠ ಶುಲ್ಕದ ಬಗ್ಗೆ ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿ’ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ತೀವ್ರ ವಿವಾದಕ್ಕೀಡಾಗಿದ್ದಾರೆ.

    ಹೌದು, ಪೋಷಕರ ಸಂಘವೊಂದು ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ಸಮಾಲೋಚಿಸಲು ಸಚಿವರ ಬಳಿ ತೆರಳಿತ್ತು. ಈ ವೇಳೆ ಪೋಷಕರ ಮನವಿಯನ್ನು ಶಿಕ್ಷಣ ಇಲಾಖೆ ನಿರಾಕರಿಸಿದರೆ ಏನು ಮಾಡಬೇಕು ಎಂದು ಕೇಳಿದಾಗ ಸಚಿವರು ಆಘಾತಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸಚಿವರ ಪ್ರತಿಕ್ರಿಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಸಂಬಂಧ ಪಾಲಕರ ಮಹಾಸಂಘದ ಅಧ್ಯಕ್ಷ ಕಮಲ್ ವಿಶ್ವಕರ್ಮ ಮಾತನಾಡಿ, ಹಲವು ಶಾಲೆಗಳು ಕೈಹೋರ್ಟ್ ಸೂಚನೆಯನ್ನು ಮೀರಿ ಹೆಚ್ಚಿನ ಶುಲ್ಕ ವಿಧಿಸುತ್ತವೆ. ಬೋಧನಾ ಶುಲ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ಮೊತ್ತವನ್ನು ಪೋಷಕರಿಂದ ತೆಗೆದುಕೊಳ್ಳದಂತೆ ಹೈಕೋರ್ಟ್ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದರು ಕೂಡ ಶಾಲೆಗಳು ಹೆಚ್ಚಿನ ಹಣವನ್ನು ಪೋಷಕರಿಂದ ಪೀಕುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಪೋಷಕರು ಅಧಿಕ ಶುಲ್ಕ ವಿಧಿಸುವ ಬಗ್ಗೆ ಸಚಿವರ ಬಳಿ ದೂರು ನೀಡಲು ಮುಂದಾಗಿದ್ದೆವು ಎಂದರು. ಇದನ್ನೂ ಓದಿ: ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

    ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಮಾಡಿದ ಪರಿಣಾಮ ಹಲವು ಮಂದಿ ಪೋಷಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಆದರೆ ಹಲವು ಖಾಸಗಿ ಶಾಲೆಗಳು ಪೋಷಕರ ಕಷ್ಟವನ್ನು ಅರಿತುಕೊಳ್ಳದೆ ಶುಲ್ಕ ಹೆಚ್ಚಳ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

    ಇತ್ತ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಯ ಹಣ ಪೀಕುವ ವಿಚಾರವಾಗಿ ನಾವು ಹಲವಾರು ಬಾರಿ ಶಾಇಕ್ಷಣ ಸಚಿವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಂಗಳವಾರ ಮತ್ತೆ ಈ ಸಂಬಂಧ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರು ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕಮಲ್ ದೂರಿದರು.

    https://twitter.com/AnitaReddyIn/status/1410174195560898570

  • ದ್ವಿತೀಯ ಪಿಯುಸಿ ಪರೀಕ್ಷೆ ರದ್ದು – ಕಾಲೇಜಿನ ಮುಂದೆ ಬೂದುಗುಂಬಳ ಒಡೆದು ವಿದ್ಯಾರ್ಥಿಗಳ ಸಂಭ್ರಮ

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು – ಕಾಲೇಜಿನ ಮುಂದೆ ಬೂದುಗುಂಬಳ ಒಡೆದು ವಿದ್ಯಾರ್ಥಿಗಳ ಸಂಭ್ರಮ

    ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಸಂತೋಷಗೊಂಡಿರುವ ವಿದ್ಯಾರ್ಥಿಗಳ ತಂಡವೊಂದು ಕಾಲೇಜಿನ ಬಳಿ ತೆರಳಿ ಬೂದುಗುಂಬಳ ಕಾಯಿ ಒಡೆದು ಸಂಭ್ರಮಾಚರಣೆ ನಡೆಸಿದ ಘಟನೆ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.

    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 10ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ದ್ವಿತೀಯ ಪಿಯುಸಿಯ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಸರ್ಕಾರದ ನಿರ್ಧಾರ ಪ್ರಕಟವಾದಂದು ಲಾಕ್‍ಡೌನ್ ಇದ್ದ ಕಾರಣ ಯಾರೂ ಹೊರಗೆ ಬರದಂತಾಗಿತ್ತು. ನಿನ್ನೆ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಬಳಿ ಬಂದು ಗೇಟ್ ಮುಂದೆ ಬೂದುಗುಂಬಳ ಕಾಯಿ, ತೆಂಗಿನ ಕಾಯಿಯನ್ನು ಒಡೆದು, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    ಸಂಭ್ರಮಾಚರಣೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಜಯಕಾರವನ್ನು ಹಾಕಿರುವ ವಿದ್ಯಾರ್ಥಿಗಳು ಕಾಲೇಜಿಗೆ ಗುಡ್ ಬಾಯ್ ಹೇಳಿ ನಮಸ್ಕರಿಸಿದ್ದಾರೆ. ಇದೆಲ್ಲವನ್ನು ವೀಡಿಯೋ ಮಾಡಿರುವ ವಿದ್ಯಾರ್ಥಿಗಳು ಅದಕ್ಕೆ ಹಾಡನ್ನು ರಿಮೇಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಸಂಭ್ರಮಾಚರಣೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

  • ಶುಲ್ಕ ಕಟ್ಟಲು ಒತ್ತಡ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ಶುಲ್ಕ ಕಟ್ಟಲು ಒತ್ತಡ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ಬೆಂಗಳೂರು: ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟಲು ಪೋಷಕರಿಗೆ ಒತ್ತಡ ಮತ್ತು ಕೆಲ ಶಾಲೆಗಳಿಂದ ಫೀಸ್ ಕಟ್ಟಲು ಲೋನ್ ಕೊಡಿಸುತ್ತಿರೋ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.

    ಕಳೆದ ಕೆಲದಿನಗಳಿಂದ ಖಾಸಗಿ ಶಾಲೆಗಳು ಮಕ್ಕಳ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಒತ್ತಡ ಹಾಕುತ್ತಿದ್ದಾರೆ. ಮತ್ತು ಫೀಸ್ ಕಟ್ಟಲು ಲೋನ್ ಕೊಡಿಸುವುದಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಈ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ ಸುರೇಶ್ ಕುಮಾರ್ ಅವರು, ಫೀಸ್ ಕಟ್ಟಲು ಮತ್ತು ಇತರ ವಿಷಯವಾಗಿ ಕಿರುಕುಳ ನೀಡುತ್ತಿರುವ ಶಾಲೆಗಳ ಬಗ್ಗೆ ಸ್ಥಳೀಯ ಬಿಇಓಗಳಿಗೆ ಪೋಷಕರು ದೂರು ಕೊಟ್ಟರೆ ಸಾಕು. ಅಂತಹ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಯಾವುದೇ ಶಾಲೆಗಳು ಪೋಷಕರಿಗೆ ಶುಲ್ಕ ಕಟ್ಟಲು ಒತ್ತಡ ಹಾಕಬಾರದು. ಕೊರೊನಾ ಪರಿಸ್ಥಿತಿಯಲ್ಲಿ ಪೋಷಕರಿಗೆ ಶುಲ್ಕಕ್ಕೆ ಪೀಡಿಸೋದು ಸರಿಯಲ್ಲ. ಇಂತಹ ಶಾಲೆಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಶುಲ್ಕ ವಸೂಲಿಗಾಗಿ ಖಾಸಗಿ ಶಾಲೆಯ ‘ಲೋನ್’ ದಂಧೆ

    ಸಚಿವರ ಸೂಚನೆ ಬೆನ್ನಲ್ಲೇ ಶುಲ್ಕ ಕಟ್ಟಲು ಒತ್ತಡ ಹಾಕುತ್ತಿರೋ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಎಲ್ಲಾ ಬಿಇಓಗಳಿಗೆ ಆದೇಶ ಹೊರಡಿಸಿದ್ದಾರೆ. ಯಾವುದೇ ಶಾಲೆ, ಶುಲ್ಕ ಪಡೆಯಲು ಒತ್ತಡ ಹಾಕುತ್ತಿದ್ದರು ಅಂತಹ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳಿ. ಶಾಲೆಗಳ ಮೇಲೆ ಕ್ರಮ ತೆಗೆದುಕೊಂಡ ಬಳಿಕ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಬಿಇಓಗಳಿಗೆ ಆಯುಕ್ತರ ಸೂಚನೆ ನೀಡಿದ್ದಾರೆ.

  • ಎಸ್‍ಎಸ್‍ಎಲ್‍ಸಿ, ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕು – ವಾಟಾಳ್

    ಎಸ್‍ಎಸ್‍ಎಲ್‍ಸಿ, ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕು – ವಾಟಾಳ್

    ಬೆಂಗಳೂರು: ಸಿಬಿಎಸ್‍ಸಿ ಹಾಗೂ ಐಸಿಎಸ್‍ಸಿಯ 12 ನೇ ತರಗತಿಯ ಪರೀಕ್ಷೆಗಳು ರದ್ದುಗೊಳಿಸಿದ ಬೆನ್ನಲೇ, ರಾಜ್ಯ ಸರ್ಕಾರ ಕರ್ನಾಟಕದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

    ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಬೇಕು. ಈಗಾಗಲೇ ಪಿಯುಸಿ ಪರೀಕ್ಷೆ ರದ್ದಾಗಿದೆ. ಇದರೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೂಡ ರದ್ದಾಗಬೇಕು ಎಂದರು. ಇದನ್ನೂ ಓದಿ:ಯಡಿಯೂರಪ್ಪ ಸರ್ಕಾರ ಹುಚ್ಚಾಸ್ಪತ್ರೆ, ಹುಚ್ಚರ ಸಂತೆ: ವಾಟಾಳ್ ನಾಗರಾಜ್

    ಪಿಯುಸಿ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಪರೀಕ್ಷೆ ಇಲ್ಲದೆ ಪಾಸ್ ಮಾಡಿದ್ದೀರಿ. ಹಾಗೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಬೇರೆ ಆರೋಗ್ಯ ಇದೆಯೇ? ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೊಂದು ನೀತಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಒಂದು ನೀತಿ ಮಾಡಿದೆ. ಇದು ಬೇಡ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದು ಶಿಕ್ಷಣ ಸಚಿವರಿಗೆ ವಾಟಾಳ್ ಆಗ್ರಹಿಸಿದರು.

  • ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ 10ನೇ ತರಗತಿ ಪರೀಕ್ಷೆ ನಡೆಸುವುದು ಅರ್ಥಹೀನ-ನಿರಂಜನಾರಾಧ್ಯ ವಿ.ಪಿ

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ 10ನೇ ತರಗತಿ ಪರೀಕ್ಷೆ ನಡೆಸುವುದು ಅರ್ಥಹೀನ-ನಿರಂಜನಾರಾಧ್ಯ ವಿ.ಪಿ

    ಬೆಂಗಳೂರು: ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ ವಿಷಯ. ಇದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನವನ್ನು ಗೌರವಿಸಿದಂತಾಗಿದೆ. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿರುವುದು ಅರ್ಥಹೀನವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

    ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ ನಿರಂಜನಾರಾಧ್ಯ ಅವರು, ಸಾಮಾನ್ಯವಾಗಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ನಾವು ಮಂಡಳಿ ಪರೀಕ್ಷೆಗಳಿಲ್ಲದೆ ತೇರ್ಗಡೆಗೆ ಪರಿಗಣಿಸುವಾಗ ಪ್ರಥಮ ಪಿಯುಸಿಯಲ್ಲಿ ಅವರ ಸಾಧನೆ, ತರಗತಿ ಪರೀಕ್ಷೆಗಳ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಅಂಕ, ಅಂದರೆ ಒಂದು ವರ್ಷದ ಸಾಧನೆಯನ್ನು ಪರಿಗಣಿಸಿ ಎಲ್ಲರನ್ನೂ ತೇರ್ಗಡೆ ಮಾಡುವ ಕ್ರಮ ಅನುಸರಿಸುತ್ತೇವೆ. ಅದರ ಜೊತೆಗೆ ಅಗತ್ಯವಿದ್ದಲ್ಲಿ ಅವರು ಹಿಂದಿನ ಮಂಡಳಿ ಪರೀಕ್ಷೆಯಾದ 10ನೇ ತರಗತಿಯ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಇಲ್ಲಿ ಸಾಧನೆಯನ್ನು ಓರೆಗಲ್ಲಿಗೆ ಹಚ್ಚಲು ಹೆಚ್ಚಿನ ಆಯಾಮಗಳು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ವಿದ್ಯಾರ್ಥಿಗಳು ಹೇಗೆ ಪಾಸ್?

    10ನೇ ತರಗತಿಯಲ್ಲಿರುವ ಮಕ್ಕಳ ಸಂಚಿತ (ಕ್ಯುಮ್ಯುಲೇಟೀವ್) ಸಾಧನೆಯನ್ನು ಪರಿಗಣಿಸಿ ಮಂಡಳಿ ಪರೀಕ್ಷೆಯಿಲ್ಲದೆ ವಸ್ತುನಿಷ್ಠವಾಗಿ ಹಾಗೂ ವೈಜ್ಞಾನಿಕವಾಗಿ ತೇರ್ಗಡೆಗೊಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಮತ್ತು ದೀರ್ಘಕಾಲದ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಸಾಮಾನ್ಯವಾಗಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು 1 ರಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ಅಥವಾ ಕನಿಷ್ಠ ಮೂರು ವರ್ಷಗಳಾದರು ಒಂದು ಶಾಲೆಯಲ್ಲಿ( 8, 9 ಮತ್ತು 10 ನೇ ತರಗತಿ) ಮಕ್ಕಳ 10 ವರ್ಷದ ಸಂಚಿತ ಸಾಧನೆ ಅಥವಾ ಮೂರು ವರ್ಷದ ಸಂಚಿತ ಸಾಧನೆ ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಕಲಿಕೆಯ ಹಲವು ಆಯಾಮಗಳನ್ನು ಪರಿಗಣಿಸಿ ಮಕ್ಕಳನ್ನು ತೇರ್ಗಡೆಗೊಳಿಸುವ ವಿಫುಲ ಅವಕಾಶಗಳಿವೆ ಎಂದರು. ಇದನ್ನೂ ಓದಿ: ಪರಿಸ್ಥಿತಿ ಸುಧಾರಣೆಯಾದ್ರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಎಂ ಬಿಎಸ್‍ವೈ 

    ಪರಿಸ್ಥಿತಿ ಹೀಗಿರುವಾಗ, ಸರ್ಕಾರ 10 ನೇ ತರಗತಿಯನ್ನು ರದ್ದುಗೊಳಿಸದಿರುವುದು ಅವೈಜ್ಞಾನಿಕ ಮಾತ್ರವಲ್ಲ ಶೈಕ್ಷಣಿಕವಾಗಿ ತಪ್ಪು ನಿರ್ಧಾರ. ಜೊತೆಗೆ ಈಗಾಗಲೇ ಉಳಿದ ಎರಡು ಮಂಡಳಿಗಳಾದ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಮಂಡಳಿಗಳು ತಮ್ಮ ಪರೀಕ್ಷೆಗಳನ್ನು ರದ್ದು ಮಾಡಿರುವಾಗ, ರಾಜ್ಯ ಮಂಡಳಿಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿರುವ ಮಕ್ಕಳ ಮೇಲೆ ಪರೀಕ್ಷೆ ಹೇರುವುದು ಅಮಾನವೀಯ, ತಾರತಮ್ಯ ಮತ್ತು ಶೈಕ್ಷಣಿಕವಾಗಿ ಅಪಕ್ವ-ಅಪ್ರಬುದ್ಧ ನಿರ್ಧಾರ. ಈ ಮಕ್ಕಳು ಕಳೆದ 14 ತಿಂಗಳುಗಳಿಂದ ಸಂಕಷ್ಟಕ್ಕೆ ಗುರಿಯಾಗಿದ್ದು, ಸರಿಯಾದ ಕಲಿಕಾ ವ್ಯವಸ್ಥೆಯಿಲ್ಲದೆ ಮಾನಸಿಕವಾಗಿ ಸೊರಗಿರುವ ಈ ಸಂದರ್ಭದಲ್ಲಿ ಸಮಾನಾಂತರ ತರಗತಿಯಲ್ಲಿ ಕಲಿಯುತ್ತಿರುವ ಅವರ ಗೆಳೆಯರು ಮಂಡಳಿ ಪರೀಕ್ಷೆಯಿಲ್ಲದೆ ತೇರ್ಗಡೆ ಹೊಂದಿ ಇವರು ಮಾತ್ರ ರಾಜ್ಯ ಪಠ್ಯಕ್ರಮದಲ್ಲಿ ಓದಿದಕ್ಕಾಗಿ ಪರೀಕ್ಷೆ ಬರೆಯುವುದು ಎಷ್ಟು ಸಮಂಜಸ? ಇದು ತಾರತಮ್ಯವಲ್ಲವೇ? ಇದು ಅತ್ಯಂತ ಅವೈಜ್ಞಾನಿಕ ನಿರ್ಧಾರ ಎಂದು ಟೀಕಿಸಿದ್ದಾರೆ.

    ಸಚಿವರೂ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆದು ಮಕ್ಕಳ ಹಾಗೂ ಪಾಲಕರ ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು 10ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಮಾಡುವಂತೆ ವಿನಂತಿಸುತ್ತೇನೆ. ಜೊತೆಗೆ ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾಗದೆ ಈಗ ಪೂರಕ ಪರೀಕ್ಷೆಗಳಿಗೆ ಸಿದ್ಧವಾಗಿದ್ದ ಪುನರಾವರ್ತಿ ವಿದ್ಯಾರ್ಥಿಗಳನ್ನು ಸಹ ತೇರ್ಗಡೆಗೊಳಿಸಿ ಅವರು ತಮ್ಮ ಮುಂದಿನ ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    10ನೇ ಅಥವಾ 12ನೇ ತರಗತಿಯ ಮಕ್ಕಳಾಗಲಿ ಅಥವಾ ಇತರೆ ಯಾವುದೇ ತರಗತಿಯ ಮಕ್ಕಳ ಕಲಿಕೆ ಕಳೆದ 15 ತಿಂಗಳಿಗಳಿಂದ ಸಮರ್ಪಕವಾಗಿ ನಡೆದಿಲ್ಲವೆಂಬ ಸತ್ಯವನ್ನು ಒಪ್ಪಿ, ಈ ಮಕ್ಕಳು ಮುಂದಿನ ಯಾವುದೇ ತರಗತಿಗಳಿಗೆ ತೇರ್ಗಡೆಯಾಗಿ ಹೋಗುವ ಸಂದರ್ಭದಲ್ಲಿ, 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವರಿಗೆ ಮೂರು ತಿಂಗಳ ವೇಗ ವರ್ಧಿತ ಕಲಿಕಾ ಸೇತು ಬಂಧ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ನಷ್ಟವನ್ನು ತುಂಬಿ ಕೊಡುವುದು ಹಾಗೂ ಬುನಾದಿ ಜ್ಞಾನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಮತ್ತು ಆದ್ಯತೆಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ಸರ್ಕಾರ ಪರೀಕ್ಷೆಗಳ ಸುಳಿಯಿಂದ ಹೊರಬಂದು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಸಿಬಿಎಸ್‍ಇ ಪರೀಕ್ಷೆ ಕುರಿತು ಪ್ರಧಾನಿ ಮೋದಿ ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

    ಸಿಬಿಎಸ್‍ಇ ಪರೀಕ್ಷೆ ಕುರಿತು ಪ್ರಧಾನಿ ಮೋದಿ ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

    ನವದೆಹಲಿ: ದೇಶದಲ್ಲಿ ಮುಂದೆ ನಡೆಯಲಿರುವ ಸಿಬಿಎಸ್‍ಇ ಪರೀಕ್ಷೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಸಚಿವರಾದ ರಮೇಶ್ ಪೋಕ್ರಿಯಲ್ ಮತ್ತು ಶಿಕ್ಷಣ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

    ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದಂತೆ ಮುಂದೆ ನಡೆಯಲಿರುವ 10ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗ ಸಿಬಿಎಸ್‍ಇ ಪರೀಕ್ಷೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.

    ಕೆಲದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಿಬಿಎಸ್‍ಸಿ ಪರೀಕ್ಷೆಗಳನ್ನು ರದ್ದು ಮಾಡಬೇಕಾಗಿ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಕುರಿತು ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

    ಸಿಬಿಎಸ್‍ಇ ಪರೀಕ್ಷೆಗಳು ಮೇ 4 ರಿಂದ ಪ್ರಾರಂಭವಾಗಿ 10ನೇ ತರಗತಿಯವರಿಗೆ ಜೂನ್ 7 ರಂದು ಮತ್ತು 12ನೇ ತರಗತಿಯವರಿಗೆ ಜೂನ್ 12 ರಂದು ಮುಕ್ತಾಯವಾಗುವಂತೆ ಈಗಾಗಲೇ ನಿಗದಿಯಾಗಿದೆ.

    ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಾಗಿ ಈ ಬಾರಿಯ ಪರೀಕ್ಷೆಗಳನ್ನು ಆನ್‍ಲೈನ್ ಮೂಲಕ ನಡೆಸಲು ಸಭೆಯಲ್ಲಿ ಚಿಂತನೆ ಮಾಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

  • ಜನವರಿಯಿಂದಲೇ ಶಾಲಾ ಕಾಲೇಜು ಆರಂಭ ಫಿಕ್ಸ್: ಸುರೇಶ್ ಕುಮಾರ್

    ಜನವರಿಯಿಂದಲೇ ಶಾಲಾ ಕಾಲೇಜು ಆರಂಭ ಫಿಕ್ಸ್: ಸುರೇಶ್ ಕುಮಾರ್

    ಬೆಂಗಳೂರು: ಬ್ರಿಟನ್ ರೂಪಾಂತರಿ ವೈರಸ್ ಕಂಡು ಬಂದಿರುವ ಹಿನ್ನೆಲೆ ರಾಜ್ಯದಲ್ಲಿ ಶಾಲಾ ಕಾಲೇಜುಗಳು ನಿಗದಿತ ಸಮಯಕ್ಕೆ ಆರಂಭವಾಗುತ್ತಾ ಇಲ್ವಾ? ಎಂಬ ಗೊಂದಲಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ ಸುಧಾಕರ್, ರಾಜ್ಯದ ಉನ್ನತ ಶಿಕ್ಷಣ ಸಿಚಿವ ಸಿ.ಅಶ್ವಥ್ ನಾರಾಯಣ್ ಎಲ್ಲರೂ ತಿಳಿಸಿರುವಂತೆ ಜನವರಿ 1 ರಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗುತ್ತದೆ ಜೊತೆಗೆ 6, 7 ಮತ್ತು 8 ತರಗತಿಗಳಿಗೆ ವಿದ್ಯಾಗಮ ಮಾಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ಈ ಮುಂಚೆ ಆರೋಗ್ಯ ಸಚಿವರು ಮತ್ತು ಮತ್ತು ತಾಂತ್ರಿಕ ಸಲಹ ಸಮಿತಿಯವರು ತಿಳಿಸಿದಂತೆ ಬ್ರಿಟನ್ ವೈರಾಣು ಕುರಿತಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್‍ಗೆ ನಾವು ಯಾವ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆವು ಅದೇ ಚಿಕಿತ್ಸೆಯನ್ನೇ ಇದಕ್ಕೂ ಪಡೆದುಕೊಳ್ಳಬಹುದು. ಕೊರೊನಾಗೆ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದೆವೋ ಅದೇ ನಿಯಮವನ್ನು ಬ್ರಿಟನ್ ವೈರಸ್‍ಗೂ ಪಾಲಿಸಿದರೆ ಸಾಕು ಎಂದರು.

    ಶಾಲೆ ಪ್ರಾರಂಭಿಸಲು ಈಗಾಗಲೇ ಶಾಲೆಗಳನ್ನು ಶುಚಿಗೊಳಿಸಿ ಸ್ಯಾನಿಟೈಸ್ ಮಾಡಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆಗೊಳಿಸಲಾಗಿದೆ. ಹಾಗೂ ತರಗತಿಯಲ್ಲಿ ಎಷ್ಟು ಜನ ಮಕ್ಕಳನ್ನು ಕೂರಿಸಬೇಕು ಎಂಬುದರ ಬಗ್ಗೆ ಯೋಚನೆ ಕೂಡ ಮಾಡಿದ್ದೇವೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಶಾಲೆಗಳ ಕುರಿತಂತೆ ಮೇಲ್ವಿಚಾರಣೆ ನಡೆಸಿ ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಹಲವು ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ.

    ಇಂದಿನಿಂದ ಬೆಂಗಳೂರಿನ ಹೊರವಲಯದಲ್ಲಿರುವ ಕೆಲವು ಕಾಲೇಜು ಮತ್ತು ಶಾಲೆಗಳಿಗೆ ಸ್ವತಃ ನಾನೇ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳ ಕುರಿತಂತೆ ಪರಿಶೀಲಿಸುತ್ತೇನೆ ಎಂದು ತಿಳಿಸಿದರು. ಇನ್ನೂ ಸೋಂಕಿನ ಬಗ್ಗೆ ಆರೋಗ್ಯ ಸಚಿವರ ಮೂಖಾಂತರ ತಜ್ಞರ ಜೊತೆ ಮಾತನಾಡಿದ್ದು, ಅವರು ಕೂಡ ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದಾರೆ.

    ಪೋಷಕರು ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಹಿಸಿ ಕೊಡಿ. ನಿಮಗೆ ಏನಾದರೂ ಆತಂಕವಿದ್ದು, ಇಚ್ಛಿಸದಿದ್ದರೆ ಅದಕ್ಕೂ ಕೂಡ ನಿಮಗೆ ಅವಕಾಶವಿದೆ. ನಮ್ಮ ವ್ಯವಸ್ಥೆಯ ಬಗೆಗೆ ಧೈರ್ಯವಿದ್ದು ವಿಶ್ವಾಸವಿದ್ದರೆ, ಮಕ್ಕಳನ್ನು ದಯವಿಟ್ಟು ಶಾಲೆಗೆ ಕಳುಹಿಸಿ. ನಿಮ್ಮ ಮಕ್ಕಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ನೋಡಿಕೊಳ್ಳುವಿರೋ ಅದೇ ರೀತಿ ನಮ್ಮ ಮಕ್ಕಳಂತೆ ಶಾಲೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.